ತೇಲಿ ಬರುತಿವೆ ಕೊರಗಿನ ಕತೆಗಳು

Team Udayavani, Aug 22, 2018, 6:00 AM IST

ಧಾರಾಕಾರ ಮಳೆ, ಮೈದುಂಬಿ ಪ್ರವಾಹ ಮಟ್ಟದಲ್ಲಿ ಹರಿದು ನಡುಕ ಹುಟ್ಟಿಸಿದ ನದಿಗಳು, ಬೆಚ್ಚಿಬೀಳಿಸುವ ಭೂಕುಸಿತ ದಂಥ ಘಟನೆಗಳಿಂದ ತತ್ತರಿಸಿದ ಮಡಿಕೇರಿ ಸುತ್ತಲಿನ ಪ್ರದೇಶಗಳಲ್ಲಿ ಈಗ ನೀರವ ಮೌನ ಆವರಿಸಿದೆ. ಆಶ್ರಯವಾಗಿದ್ದ ಮನೆ, ಬೆವರು ಚೆಲ್ಲಿದ ಜಾಗವನ್ನು ಕಣ್ಣೀರಿಡುತ್ತಲೇ ಹುಡುಕಾಡುತ್ತಿದ್ದರೆ, ಮನೆ ಮಕ್ಕಳಂತೆ ವಾತ್ಸಲ್ಯದಿಂದ ಇದ್ದ ಮೂಕ ಪ್ರಾಣಿಗಳು ದಿಕ್ಕು ಕಾಣದಾಗಿವೆ. “ಉದಯವಾಣಿ’ ವರದಿಗಾರ ರಾಜು ಖಾರ್ವಿ ಕೊಡೇರಿ ಈ ಎಲ್ಲಾ ದೃಶ್ಯಗಳ ವರದಿ ಮಾಡಿದ್ದಾರೆ.

ಮನೆಇಲ್ಲ; ಸಾಲ ಇದೆ
ಮಡಿಕೇರಿ ಚಾಮುಂಡೇಶ್ವರಿ ನಗರದ ಲಲಿತಾ ಹೊಸ ಮನೆ ಪ್ರವೇಶ ಮಾಡಿ ಮೂರು ತಿಂಗಳು ಕಳೆದಿಲ್ಲ. ಈಗ ಕಣ್ಣೆ ದುರು ಮನೆ ಇಲ್ಲ. ಹಗಲಿರುಳು ಕಣ್ಣಿಗೆ ಕಾಣಿಸುತ್ತಿರುವುದು ಮನೆಗಾಗಿ ಮಾಡಿದ 6 ಲಕ್ಷ ಸಾಲ ಮಾತ್ರ. ಗುಡ್ಡ ಕುಸಿದು ಮನೆಯೂ ಇಲ್ಲ; ಸಾಲ ತೀರಿಸಲಿಕ್ಕೆ ಕಾಸೂ ಇಲ್ಲ. 
“”ಪತಿಯೊಬ್ಬರೇ ದುಡಿಯಬೇಕು, ಮಗ ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ಇನ್ನೇನು ಕುಟುಂಬ ಚೇತರಿಸಿಕೊಳ್ಳುತ್ತದೇ ಎನ್ನುವಷ್ಟರಲ್ಲಿ ಹೀಗಾಗಿದೆ. ಪತಿಗೆ ನಿರಾಶ್ರಿತರ ಶಿಬಿರದಲ್ಲಿ ಇರಲೂ ಆಗುತ್ತಿಲ್ಲ. ಪದೇ ಪದೆ ಚಾಮುಂಡೇಶ್ವರಿ ನಗರದ ಕಡೆ ಹೋಗಿ ಬರುತ್ತಿರುತ್ತಾರೆ. ಆದರೆ, ಮನೆ ಇರುವ ಜಾಗಕ್ಕೂ ಹೋಗಲು ಬಿಡುತ್ತಿಲ್ಲ ಎಂದು ಲಲಿತಾ ಅಳಲು ತೋಡಿ ಕೊಳ್ಳುತ್ತಾರೆ.

ಆಧಾರವೊಂದೇ ಆಧಾರ
ತಂತಿಪಾಲದ ರಾಟಿಮನೆ ಕಾಲೋನಿ ತಿಮ್ಮಪ್ಪ ಅವರ ಮನೆ ಇರುವುದು ನದಿ ಸಮೀಪ. ನಿತ್ಯ ಶಾಂತವಾಗಿ ಹರಿಯುತ್ತಿದ್ದ ನದಿ ಮೊನ್ನೆ ರೊಚ್ಚಿಗೆದ್ದು ಬಿಟ್ಟಿತು. ಭಯದಿಂದ ಮನೆ ಬಿಟ್ಟು ಬಂದವರಿಗೆ ನಿತ್ಯ ಮನೆಯದ್ದೇ ಧ್ಯಾನ. ಸುತ್ತಲೂ ಗುಡ್ಡ, ಎದುರಿಗೆ ನದಿ… ಹೋಗುವುದು ಹೇಗೆ? ನಾಳೆ ಮನೆ, ತೋಟ ಇತ್ತೆಂದು ಎಂದು ಹೇಳಲು ದಾಖಲೆಗಳು ಬೇಕಲ್ಲವೇ? ಹೀಗಾಗಿ ನಾಲ್ಕೈದು ಯುವಕರು ರಾತ್ರೋರಾತ್ರಿ ವಾಪಸ್‌ ನಮ್ಮ ಮನೆಗೆ ಹೋಗಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಪಹಣಿ ಪತ್ರ, ಮಕ್ಕಳ ಶಾಲೆಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನು ತೆಗೆದುಕೊಂಡು ಬಂದು ಕಣ್ಣೀರಿಟ್ಟರು.

ಅವರೇ ಜೀವ ಉಳಿಸಿದರು
ಮಕ್ಕಂದೂರಿನ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿರುವ ಕವಿತಾ ಕತೆ ಚಿಂತಾಜನಕ. ಅವರು ವಿವರಿಸೋದು ಹೀಗೆ. “”ರಾತ್ರಿ ಮಾಲೀಕರ ಮನೆ ಎದುರಿನ ಜಾಗ ಕುಸಿದು ಹೋಗಿತ್ತು. ಎದ್ದು ನೋಡುವಷ್ಟರಲ್ಲಿ ನಾವಿದ್ದ ಗುಡಿಸಲು ಕೂಡ ಸಂಪೂರ್ಣ ನೆಲಸಮವಾಗುವ ಸ್ಥಿತಿಯಲ್ಲಿತ್ತು. ತಕ್ಷಣ ಮಾಲೀಕರು
ನಮ್ಮನ್ನು ಮಡಿಕೇರಿಗೆ ಕರೆದು ಕೊಂಡು ಬಂದು ಜೀವ ಉಳಿಸಿದವರು. ನಾವೆಲ್ಲ ಒಂದೇ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡು ತ್ತಿದ್ದೇವು. ಲೋಕೇಶ್‌, ಪುನಿತ್‌, ಹರ್ಷಿತಾ ಮತ್ತು ಭೂಮಿಕಾ 4 ಮಕ್ಕಳನ್ನು ಸಾಕುವುದೇ ಚಿಂತೆಯಾ ಗಿದೆ. ಮುಂದೆ ನಮ್ಮ ಗತಿ ದೇವರೇ ಬಲ್ಲ ಎಂದು ಕಣ್ಣೀರಿಟ್ಟರು.

ಬದುಕೇ ಕುಸಿದಿದೆ!
ತಂತಿಪಾಲದಲ್ಲಿ ಯಾವ ದಯೆಯೂ ಇಲ್ಲದೆ ಉಕ್ಕೇರಿದ ನದಿ 25ಕ್ಕೂ ಹೆಚ್ಚು ಮನೆಯನ್ನು ನೆಲಸಮ ಮಾಡಿದೆ! ಮನೆ ಇದ್ದ ಕುರುಹುಗಳೇ ಇಲ್ಲ. ನಿರಾಶ್ರಿತರ ಶಿಬಿರದಲ್ಲಿರುವ ಮೋಹನ್‌ ಮತ್ತಿತರರಿಗೆ ಮತ್ತೆ ಅಲ್ಲಿಗೆ ಹೋಗಿ ಮೊದಲಿನಂತೆ ಜೀವನ ಮಾಡುತ್ತೇವೆ ಎಂಬ ಯಾವ ಆಸೆ, ಆಕಾಂಕ್ಷೆಯೂ ಉಳಿದಿಲ್ಲ. “”ನಾವೆಲ್ಲರೂ ಕೂಲಿ ಕೆಲಸ ಮಾಡಿಕೊಂಡು ಇರುವವರು. ನಮ್ಮ ಮಾಲೀಕರ ಕಾಫಿ ತೋಟವೇ ಸರ್ವನಾಶವಾಗಿದೆ. ಇನ್ನು ನಮಗೆ ಕೆಲಸ ಕೊಡುವವರು ಯಾರು? ಆ ದಿನ ರಾತ್ರಿ ಮನೆಯ ಎದುರೇ ಗುಡ್ಡ ಕುಸಿಯುತ್ತಿದ್ದದ್ದು ಎಲ್ಲರೂ ನೋಡಿದ್ದೇವೆ. ಈಗ ಸಂಪೂರ್ಣ ಬದುಕೇ ಕುಸಿದು ಬಿಟ್ಟಿದೆ!

ಭೂಕಂಪದ ಅನುಭವ ವಾಗಿತ್ತು: ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ ರಾಜಾ ಸೀಟಿನ ಹಿಂಭಾಗದಲ್ಲಿದೆ ಇಂದಿರಾನಗರ. ಅವತ್ತು ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಹಿಂಭಾಗದಲ್ಲಿ ದೊಡ್ಡದಾದ ಶಬ್ದ ಕೇಳಿತು. ಎದ್ದು ನೋಡಿದಾಗ ಅರ್ಧ ಗುಡ್ಡವೇ ಕುಸಿದು ಬಿದ್ದಿತ್ತು ಅಷ್ಟು ಮಾತ್ರವಲ್ಲ, ಕುಸಿದ ಜಾಗದಲ್ಲಿ ನೀರಿನ ಜ್ವಾಲೆಗಳು ಮೇಲಿಂದ ಮೇಲೆ ಉಕ್ಕುಕ್ಕಿ ಬರುತ್ತಿದ್ದವು. “”ಈ ಘಟನೆ ನಡೆಯುವ 15 ದಿನಕ್ಕೂ ಮೊದಲೇ ಮನೆಯ ಸುತ್ತಲಿನ ಭಾಗದಲ್ಲಿ ಭೂ ಕಂಪನದ ಅನುಭವ ಆಗಿತ್ತು. ಆದರೆ, ಇದನ್ನು ನಾವ್ಯಾರು ಗಂಭೀರವಾಗಿ ತೆಗೆದುಕೊಂಡಿಲ್ಲ. ಕಳೆದ ಗುರುವಾರ ರಾತ್ರಿಯ ಕೇಳಿಸಿದ ಶಬ್ಧ ಇನ್ನೂ ಕಿವಿಯಲ್ಲಿ ಮಾರ್ಧನಿಸುತ್ತಿದೆ. ಕೂಡಲೇ ಮನೆಯಿಂದ ಹೊರಬಂದೆವು. ಅಷ್ಟರೊಳಗೆ ಸುತ್ತಮುತ್ತಲು ಇರುವ ಬಹುತೇಕ ಗುಡ್ಡ ಕುಸಿದುಬಿಟ್ಟಿತ್ತು. ಅದೃಷ್ಟ ವಶಾತ್‌ ನಾವೆಲ್ಲರೂ ಜೀವಾಪಾಯದಿಂದ ಪಾರಾದೆವು. ಇಂಥಹ ಘಟನೆ ಯಾರ ಜೀವನ ದಲ್ಲೂ ಬಾರದಿರಲಿ ಎಂದು ಕೃಷ್ಣ ಅವರು ಹೇಳುವಾಗ ಅವರ ಕಣ್ಣಂಚು ತೇವವಾಗಿತ್ತು.  ನಮ್ಮದು ಟಿಂಬರ್‌ ಕೆಲಸ, ಮನೆಯ ಜಾಗ ಬಿಟ್ಟು ಬೇರೇನೂ ಇಲ್ಲ. ಈಗ ಎಲ್ಲವೂ ಗುಡ್ಡ ಮುಚ್ಚಿಕೊಂಡಿದೆ. ಮನೆ ಹೇಗಿದೆ ಎಂದು ನೋಡಬೇಕಿಸುತ್ತಿದೆ. ಆದರೆ, ಹೋಗಲು ಆಗುತ್ತಿಲ್ಲ. ಇಬ್ಬರು ಮಕ್ಕಳು ಹಾಗೂ ಪತ್ನಿ ಸಹಿತವಾಗಿ ಓಂಕಾರ್‌ ಸದನದ ನಿರಾಶ್ರಿತರ ಕೇಂದ್ರದಲ್ಲಿ ಇದ್ದೇವೆ ಎಂದು ವಿವರಿಸಿದರು. 

ಚಿತ್ರಗಳು: ಎಚ್‌. ಫ‌ಕ್ರುದ್ದೀನ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ