ಕೆಪಿಎಸ್‌ಸಿಯಲ್ಲೂ ನಡೆದಿದೆ ಅಕ್ರಮ : ಅಭ್ಯರ್ಥಿಗಳಿಂದಲೇ ಪೊಲೀಸ್ ಆಯುಕ್ತರಿಗೆ ದೂರು
Team Udayavani, May 15, 2022, 11:20 PM IST
ಬೆಂಗಳೂರು : ಪಿಎಸ್‌ಐ, ಲೋಕೋಪಯೋಗಿ ಇಲಾಖೆ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಯಲ್ಲಿ ಮಾತ್ರವಲ್ಲದೆ, ಕರ್ನಾಟಕ ಲೋಕ ಸೇವಾ ಆಯೋಗದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರ ಹುದ್ದೆಯಲ್ಲಿ ಲಕ್ಷದಿಂದ ಕೋಟಿಗಟ್ಟಲೇ ಡೀಲ್ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.
ಈ ಹುದ್ದೆಗೆ 2020ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಿದ್ದು, ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಎಪ್ರಿಲ್ 2022ರಲ್ಲಿ ಸಂದರ್ಶನಕ್ಕೆ ಕರೆಯಲಾಗಿತ್ತು. ಮೇ 5ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ, ಮುಖ್ಯ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ. ಅಭ್ಯರ್ಥಿಗಳಿಗೆ ಕರೆ ಮಾಡಿ, ಲಕ್ಷದಿಂದ ಕೋಟಿಯವರೆಗೆ ಹಣಕ್ಕೆ ಬೇಡಿಕೆ ಇಟ್ಟು ಡೀಲ್ ನಡೆಸಲಾಗುತ್ತಿದೆ ಎನ್ನುವ ಗಂಭೀರ ಆರೋಪವಿದೆ. ಈ ಕುರಿತು ಕೆಲ ಅಭ್ಯರ್ಥಿಗಳು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸದಸ್ಯರ ಹೆಸರಿನಲ್ಲಿ ಡೀಲ್
ಎಪ್ರಿಲ್ 11ರಂದು ಸಂಜೆ 6.53ಕ್ಕೆ ವಿನಯ್ ಎನ್ನುವಾತ ಅಭ್ಯರ್ಥಿಯೊಬ್ಬರಿಗೆ ಕರೆ ಮಾಡಿ, ಕೆಪಿಎಸ್‌ಸಿ ಸದಸ್ಯರ ಕಡೆಯಿಂದ ಕರೆ ಮಾಡುತ್ತಿದ್ದು, ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಡೀಲ್ ನಡೆಯುತ್ತಿದ್ದು, ಎಷ್ಟು ಹಣ ಕೊಡಲು ಸಿದ್ದರಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಂದರ್ಶನದಲ್ಲಿ 90 ಅಂಕ ನೀಡುವುದಾಗಿ ಭರವಸೆ ನೀಡಿದ್ದಾರೆ. ಮತ್ತೂಬ್ಬ ಅಭ್ಯರ್ಥಿಗೆ ಕರೆ ಮಾಡಿ, 60-80 ಲಕ್ಷ ರೂ. ನೀಡಿದರೆ, ಕೆಪಿಎಸ್‌ಸಿ ಸದಸ್ಯರನ್ನೇ ಭೇಟಿ ಮಾಡಿಸುತ್ತೇನೆ ಎಂದಿದ್ದಾರೆ ಎಂದು ದೂರಲಾಗಿದೆ.
ಮೊದಲ ಸ್ಥಾನ-ಅನುಮಾನ
ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 1ನೇ ಸ್ಥಾನ ಪಡೆದ ಎಚ್.ಮಾರುತಿ 1,800ಕ್ಕೆ 1029.50 ಅಂಕ ಪಡೆದಿದ್ದಾರೆ. ಆದರೆ, ಈ ಅಭ್ಯರ್ಥಿ ಬಿಇ ಪದವಿ ಪಡೆದು ಕಾಮರ್ಸ್ ಪದವಿ ವಿಷಯಗಳಲ್ಲಿ ಇಷ್ಟೊಂದು ಅಂಕ ಹೇಗೆ ಪಡೆದುಕೊಂಡಿದ್ದಾರೆ. ಮತ್ತೂಂದೆಡೆ ಈ ಅಭ್ಯರ್ಥಿ ಸೇರಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ 15 ಮಂದಿ ತರಬೇತಿ ಪಡೆದ ಕ್ರೆಡೆನ್ಸ್ ಐಎಎಸ್ ಎನ್ನುವ ಸಂಸ್ಥೆ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆಯ್ಕೆ ಪಟ್ಟಿಯಲ್ಲಿರುವ 31ನೇ ಅಭ್ಯರ್ಥಿ ಎಸ್.ಎಂ. ಯಶೋಧ ಮಾಲ್ ಪ್ರಾಕ್ಟೀಸ್ ನಡೆಸಿದ್ದಾರೆ ಎಂದು ಆಯೋಗ ಹೇಳಿದೆ. ಹೀಗಾಗಿ ಅವರು ಹೇಗೆ ಮಾಲ್ ಪ್ರಾಕ್ಟೀಸ್ ಮಾಡಿದ್ದಾರೆ ಎಂದು ವಿಚಾರಣೆ ನಡೆಸಬೇಕು. ಹೀಗೆ ಶಿವರಾಜು, ಈ. ಅಭಿಷೇಕ್, ಮಾಲಾಗೌಡ್, ಮಧು, ಮಾಣಿಕ್ಯ, ಮುರಳೀಧರಸ್ವಾಮಿ, ಜಿ. ಅಭಿಷೇಕ್, ಎಚ್.ಡಿ. ನಂದೀಶ್, ಸಿ. ರಾಗಿಣಿ, ಎಚ್.ಎಸ್. ನಂದೀಶ್ ಕೂಡ ಆಯ್ಕೆ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಅಕ್ರಮ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಎಲ್ಲ 54 ಮಂದಿ ಅಭ್ಯರ್ಥಿಗಳ ಪೇಪರ್, ಕಾಲ್ ರೆಕಾರ್ಡ್, ಅಭ್ಯರ್ಥಿಗಳ ಬ್ಯಾಂಕಿನ ವ್ಯವಹಾರ ಹಾಗೂ ಇತರ ಮಾಹಿತಿಗಳನ್ನು ಪಡೆದು ತನಿಖೆ ನಡೆಸಬೇಕು ಎಂದು ಅಭ್ಯರ್ಥಿಗಳು ದೂರಿನಲ್ಲಿ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾಗರ : 6 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣ : ಹಾಲಪ್ಪ
ಅನಧಿಕೃತ ಸಮಿತಿಯಿಂದ ಮಾರಿಕಾಂಬಾ ದೇವಸ್ಥಾನ ನಿರ್ವಹಣೆ ; ಎಂ.ನಾಗರಾಜ್ ಆರೋಪ
ಆಲೂರು: ಪೊಲೀಸರ ದಾಳಿ; ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳ ರಕ್ಷಣೆ
ರಾಷ್ಟ್ರಪತಿ ಚುನಾವಣೆ; ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ
ಸ್ನೇಹಿತನನ್ನು ಬೀಳ್ಕೊಡಲು ಏರ್ಪೋರ್ಟ್ ಗೆ ಹೋಗುತ್ತಿದ್ದಾಗ ಅಪಘಾತ: ಬೈಕ್ ಸವಾರ ಸಾವು