
ಮುಸ್ಲಿಂ ಸಿಎಂ, ದಲಿತ ಡಿಸಿಎಂ ಜೆಡಿಎಸ್ ಅಸ್ತ್ರ
ಕಾಂಗ್ರೆಸ್‌ನಲ್ಲಿ ಮತಬ್ಯಾಂಕ್ ವಿಭಜನೆ ಆತಂಕ; ಸವಾಲು ಎದುರಿಸಲು ಕಾರ್ಯತಂತ್ರ
Team Udayavani, Nov 24, 2022, 7:00 AM IST

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮುಖ್ಯಮಂತ್ರಿ, ದಲಿತ ಉಪ ಮುಖ್ಯಮಂತ್ರಿ ಮಾಡಲಾಗುವುದು ಎಂಬ ಜೆಡಿಎಸ್ “ಅಸ್ತ್ರ’ಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ ಟೀಂ ಎಂಬ ಆರೋಪ ಹಿನ್ನೆಲೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಹೊಡೆತ ತಿಂದಿದ್ದ ಜೆಡಿಎಸ್ ಈ ಬಾರಿ ಆ ವರ್ಗದ ಬೆಂಬಲ ಪಡೆಯುವ ನಿಟ್ಟಿನಲ್ಲಿ “ಮುಸ್ಲಿಂ ಸಿಎಂ’ ಅಸ್ತ್ರ ಪ್ರಯೋಗಿಸಿದೆ.
ಜತೆಗೆ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಬಳಿಕ ದಲಿತ ಮತಗಳ ಕ್ರೋಡೀ ಕರಣದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ನಾವೂ ದಲಿತ ಸಿಎಂ ಮಾಡುತ್ತೇವೆ ಎಂದು ಹೇಳುವ ಮೂಲಕ ಎಚ್.ಡಿ. ಕುಮಾರಸ್ವಾಮಿ ದುಪ್ಪಟ್ಟು ಆಘಾತ ನೀಡಿದ್ದಾರೆ.
ಮುಸ್ಲಿಂ ಹಾಗೂ ದಲಿತ ವರ್ಗದ ಮತ ಸೆಳೆ ಯುವ ನಿಟ್ಟಿನಲ್ಲಿ ಜೆಡಿಎಸ್‌ನ ಕಾರ್ಯತಂತ್ರದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ತಲೆಬಿಸಿ ಉಂಟಾಗಿದ್ದು, ಇದನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷ ನೆಚ್ಚಿಕೊಂಡಿರುವುದೇ ಅಹಿಂದ ಮತಬ್ಯಾಂಕನ್ನು. ಅದರಲ್ಲೂ ಮುಸ್ಲಿಮರು ಈ ಬಾರಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂಬ ಆತಿಯಾದ ಆತ್ಮವಿಶ್ವಾಸವೂ ಆ ಪಕ್ಷದ ನಾಯಕರಲ್ಲಿದೆ. ಆದರೆ ಈಗ ಎಚ್.ಡಿ.ಕುಮಾರಸ್ವಾಮಿಯವರ ವರಸೆಗೆ ಬೆಚ್ಚಿ ಬೀಳುವಂತಾಗಿದೆ.
ಈಗ ಮುಸ್ಲಿಂ ಹಾಗೂ ದಲಿತ ಸಮುದಾಯ ಮತ ಕೈ ತಪ್ಪಿ ಹೋಗದಂತೆ ಬದಲಿ ಕಾರ್ಯತಂತ್ರದತ್ತ ಗಮನ ಹರಿಸುವ ಅನಿವಾರ್ಯ ಎದುರಾಗಿದೆ. ಜೆಡಿಎಸ್‌ನ ಈ ನಡೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಮ್ಮ ಆಪ್ತರ ಜತೆ ಸಮಾಲೋಚಿಸಿದ್ದು, ಯಾವ ರೀತಿಯ ತಂತ್ರಗಾರಿಕೆ ಕೈಗೊಳ್ಳಬಹುದು ಎಂಬ ಬಗ್ಗೆ ಪ್ರಸ್ತಾವಿಸಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್ ಮರ್ಮ
ಎಚ್.ಡಿ. ಕುಮಾರಸ್ವಾಮಿ ಪಂಚರತ್ನ ಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಒಂದು ದಿನ ದಲಿತ ಡಿಸಿಎಂ ಎಂದು ಹೇಳಿ ಮರುದಿನವೇ ಮುಸ್ಲಿಂ ಸಿಎಂ ಎಂದು ಹೇಳಿರುವ ಹಿಂದಿನ ಮರ್ಮ ಏನು ಎಂಬುದರ ಬಗ್ಗೆ ಕಾಂಗ್ರೆಸ್ ನಾಯಕರು ತಲೆಕೆಡಿಸಿಕೊಂಡಿದ್ದಾರೆ.
ಮುಸ್ಲಿಂ ಹಾಗೂ ದಲಿತ ಸಮುದಾಯದ ಮತ ದಾರರ ಸಂಖ್ಯೆ ಹೆಚ್ಚಾಗಿರುವ ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಲು ಪರಿಗಣನೆಯ ಪಟ್ಟಿಯಲ್ಲಿರುವ ಕೋಲಾರದಲ್ಲೇ ಕುಮಾರಸ್ವಾಮಿ ಈ ಘೋಷಣೆ ಮಾಡಿದ್ದು, ಅದರ ಹಿಂದೆ ಬೇರೆಯದೇ ತಂತ್ರ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಿದ್ದರಾಮಯ್ಯ ಸ್ಪರ್ಧೆಯಿಂದ ಉಂಟಾಗಬಹು ದಾದ ಪರಿಣಾಮಗಳ ಬಗ್ಗೆ ಎರಡೂ ಜಿಲ್ಲೆಯ ನಾಯಕರ ಜತೆ ಕುಮಾರಸ್ವಾಮಿ ಸಮಾಲೋಚಿಸಿದ ಬಳಿಕವೇ ಈ ಅಸ್ತ್ರದ ಮೂಲಕ ಕಾಂಗ್ರೆಸ್ ನಾಯಕರಿಗೆ ಆಘಾತ ನೀಡಿದ್ದಾರೆ ಎನ್ನಲಾಗುತ್ತಿದೆ.
ಜನಸ್ಪಂದನ-ಪಂಚರತ್ನ ತಲೆನೋವು
ಜೆಡಿಎಸ್‌ನ ಪಂಚರತ್ನ ಯಾತ್ರೆಗೆ ಸಿಗುತ್ತಿ ರುವ ಸ್ಪಂದನೆ ಬಗ್ಗೆಯೂ ಕಾಂಗ್ರೆಸ್‌ನಲ್ಲಿ ತಲೆ ನೋವು ಶುರುವಾಗಿದೆ. ಸಿದ್ದರಾಮಯ್ಯ ಹುಟ್ಟುಹಬ್ಬದ ದಾವಣಗೆರೆ ಸಮಾವೇಶ, ತಿರಂಗಾ ನಡಿಗೆ, ಭಾರತ್‌ಜೋಡೋ ಯಾತ್ರೆಯ ಉತ್ಸಾಹದಲ್ಲಿದ್ದ ಕಾಂಗ್ರೆಸ್‌ಗೆ ಒಂದು ಕಡೆ ಯಡಿಯೂರಪ್ಪ – ಬಸವರಾಜ ಬೊಮ್ಮಾಯಿ ಜತೆಗೂಡಿ ನಡೆಸುತ್ತಿರುವ ಬಿಜೆಪಿಯ ಜನಸ್ಪಂದನ ಯಾತ್ರೆ, ಮತ್ತೂಂದೆಡೆ ಜೆಡಿಎಸ್‌ನ ಪಂಚರತ್ನ ಯಾತ್ರೆ ಬಗ್ಗೆ ಸ್ವಲ್ಪ ಮಟ್ಟಿನ ಭಯ ಮೂಡಿಸಿದೆ. ಆದಷ್ಟು ಬೇಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಸ್ ಯಾತ್ರೆ ಆರಂಭಿಸುವಂತೆ ಒತ್ತಡ ಕೇಳಿ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
-ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
