ಯೋಗಿಯಂತೆ ಬೊಮ್ಮಾಯಿ ಮೈ ಕೊಡವಿ ನಿಲ್ಲಲಿ : ಪ್ರಮೋದ್ ಮುತಾಲಿಕ್
Team Udayavani, Apr 18, 2022, 9:00 PM IST
ಚಿಕ್ಕಮಗಳೂರು/ಬಾಳೆಹೊನ್ನೂರು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರಂತೆ ರಾಜ್ಯದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈ ಕೊಡವಿ ನಿಲ್ಲಬೇಕೆಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಬಾಳೆಹೊನ್ನೂರು ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ದಾಂಧಲೆ ನಡೆಸಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅವರ್ಯಾರೂ ಅಮಾಯಕರಲ್ಲ. ಇದು ಪೂರ್ವ ನಿಯೋಜಿತ ಕೃತ್ಯ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಾಂಗ್ರೆಸ್, ಜೆಡಿಎಸ್‌ನವರು ಯಾವಾಗಲೂ ಮುಸ್ಲಿಮರನ್ನು ಅಮಾಯಕರೆಂದು ಹೇಳುತ್ತಾರೆ. ಅಮಾಯಕರು ಎನ್ನುವುದು ಒಂದು ಸ್ಟ್ಯಾಂಡ್. ಪೊಲೀಸ್ ಠಾಣೆ, ದೇವಸ್ಥಾನದ ಮೇಲೆ ಕಲ್ಲು ತೂರುವವರು ಅಮಾಯಕರೇ? ಹಾಗೆನ್ನುವವರಿಗೆ ನಾಚಿಕೆಯಾಗಬೇಕು. ಮುಂದಿನ ದಿನಗಳಲ್ಲಿ ನೀವು ಇಂತಹ ನಿಲುವನ್ನು ಅನುಸರಿಸಿದರೆ ಜೆಡಿಎಸ್ ಕೂಡ ರಾಜ್ಯದಲ್ಲಿ ನೆಲ ಕಚ್ಚಲಿದೆ.
ಹುಬ್ಬಳ್ಳಿ ಘಟನೆ ಹೊಣೆಯನ್ನು ಅಲ್ಲಿನ ಶಾಸಕ ಪ್ರಸಾದ ಅಬ್ಬಯ್ಯ ಹೊರಬೇಕು. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರು ಹತಾಶರಾಗಿದ್ದಾರೆ. ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ಆಕ್ರೋಶ, ಗಲಾಟೆಗೆ ಕಾರಣವಾಗುತ್ತಿದೆ. ಮೌಲ್ವಿಗಳು ಇಂತಹವರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಬುದ್ಧಿಜೀವಿಗಳು ಬಾಯಿ ಮುಚ್ಚಿಕೊಂಡಿದ್ದಾರೆ ಎಂದರು.