ಬಿಜೆಪಿ ನೂತನ ಅಧ್ಯಕ್ಷರಿಗೆ ರಾಜ್ಯ ನಾಯಕರಿಂದ ಅಭಿನಂದನೆ
Team Udayavani, Jan 21, 2020, 3:06 AM IST
ಬೆಂಗಳೂರು: ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಆಯ್ಕೆಯಾಗಿದ್ದು, ರಾಜ್ಯ ಬಿಜೆಪಿ ನಾಯಕರು ಶುಭ ಕೋರಿದ್ದಾರೆ.
ದೆಹಲಿಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿ.ವಿ.ಸದಾನಂದಗೌಡ, ಸುರೇಶ್ ಅಂಗಡಿ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಅರುಣ್ ಕುಮಾರ್ (ಸಂಘಟನೆ), ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇತರರು ಪಾಲ್ಗೊಂಡಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರು ಆಯ್ಕೆಯಾದ ಬಳಿಕ ನಳಿನ್ ಕುಮಾರ್ ಕಟೀಲ್ ಅವರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಪಕ್ಷದ ಹಲವು ಉನ್ನತ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿರುವ ಜೆ.ಪಿ.ನಡ್ಡಾ ಅವರು ಕೇಂದ್ರ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಕ್ಷಕ್ಕಾಗಿ ದಶಕಗಳ ಕಾಲ ಶ್ರಮಿಸಿರುವ ಅವರ ನಾಯಕತ್ವದಲ್ಲಿ ಪಕ್ಷ ಸಂಘಟನೆಗೆ ನಾವೆಲ್ಲರೂ ಶ್ರಮಿಸಲಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ನಾವೆಲ್ಲಾ ಅವರೊಂದಿಗೆ ಸಾಗಲಿದ್ದೇವೆ ಎಂದು ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರು ಆಯ್ಕೆಯಾಗಿರುವುದು ಸಂತಸ ತಂದಿದೆ. ಅವರ ನೇತೃತ್ವದಲ್ಲಿ ಪಕ್ಷವು ಮತ್ತಷ್ಟು ಬಲಿಷ್ಠವಾಗಿ ಬೆಳೆದು ಜನಸೇವೆಯಲ್ಲಿ ಸಾರ್ಥಕತೆ ಕಾಣುವಂತಾಗಲಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶುಭ ಹಾರೈಸಿದ್ದಾರೆ. ಸಚಿವ ಆರ್.ಅಶೋಕ್ ಕೂಡ ಜೆ.ಪಿ.ನಡ್ಡಾ ಅವರನ್ನು ಅಭಿನಂದಿಸಿದ್ದಾರೆ.