
ಗೋಹತ್ಯೆ ನಿಷೇಧ ಕಾಯ್ದೆ ಚರ್ಚೆಗೆ ಬಂದಿಲ್ಲ: ಸಚಿವ ತಂಗಡಗಿ
Team Udayavani, Jun 5, 2023, 6:36 PM IST

ಕೊಪ್ಪಳ: ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸರ್ಕಾರದಲ್ಲಿ ಇನ್ನೂ ಚರ್ಚೆಯೇ ಆಗಿಲ್ಲ. ಈಗಲೇ ಏಕೆ ಮುನ್ನೆಲೆಗೆ ಬಂತು ಎನ್ನುವುದು ಗೊತ್ತಾಗುತ್ತಿಲ್ಲ. ಪಶು ಸಂಗೋಪನಾ ಸಚಿವರು ತಮ್ಮ ದೃಷ್ಟಿಯಲ್ಲಿ ಕಾಯ್ದೆ ಹಿಂಪಡೆಯುವ ಬಗ್ಗೆ ಹೇಳಿರಬಹುದು. ಈ ಬಗ್ಗೆ ಸಿಎಂ, ಡಿಸಿಎಂ ಅವರು ಈ ಬಗ್ಗೆ ನಿರ್ಧರಿಸುತ್ತಾರೆ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದು ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಅಧಿವೇಶನ ಆರಂಭಕ್ಕೂ ಮುನ್ನ ಯಾವ ಬಿಲ್ ತರಬೇಕು. ಯಾವ ಬಿಲ್ ಬೇಡ ಎನ್ನುವ ಕುರಿತು ಚರ್ಚೆ ನಡೆಯುತ್ತವೆ. ಆಗ ನಿಖರವಾಗಿ ಗೊತ್ತಾಗಲಿದೆ. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಏನು ನಿರ್ಧಾರ ಕೈಗೊಳ್ಳುತ್ತೋ ಅದೇ ನನ್ನ ನಿರ್ಧಾರ ಎಂದರು.
ಬಿಜೆಪಿಯ ಎಲ್ಲ ಹಗರಣಗಳನ್ನು ತನಿಖೆಯನ್ನು ಮಾಡಲೇ ಬೇಕಿದೆ. ಬಿಜೆಪಿ ಈ ರಾಜ್ಯವನ್ನು ಹರಾಜು ಮಾಡಿದೆ. ೪೦ ಪರ್ಸೆಂಟ್ ಸರ್ಕಾರ ಎಂದು ಹೆಸರು ಮಾಡಿದ್ದಾರೆ. ಸರ್ಕಾರದ ಮಾನ ಮರ್ಯಾದೆ ತೆಗೆದಿದ್ದಾರೆ. ಪಿಎಸ್‌ಐ ಹಗರಣ ರಾಜ್ಯದಲ್ಲಿ ಸುದ್ದಿಯಾಯಿತು. ಓರ್ವ ಐಪಿಎಸ್ ಅಧಿಕಾರಿ ಬಂಧನ ಆಗಿದೆ. ಅದು ಬಿಟ್ಟು ಏನೂ ಆಗಿಲ್ಲ. ಇದರಲ್ಲಿ ಯಾವ ಮಂತ್ರಿ, ಶಾಸಕ ಇದ್ದಾರೆ ಎನ್ನುವ ತನಿಖೆ ಮಾಡಿಸಿಲ್ಲ. ನಾವು ಈ ಪ್ರಕರಣ ಹೀಗೆ ಬಿಟ್ಟರೆ ರಾಜ್ಯದ ಜನತೆಗೆ ಅನ್ಯಾಯ ಮಾಡಿದಂತಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಆಗ ಈ ಹಗರಣದ ವಿರುದ್ದ ಮಾತನಾಡಿದ್ದರು. ಈಗ ಅವರು ಸುಮ್ನೆ ಬಿಡುತ್ತಾರಾ ? ನಾನೂ ಹಗರಣದ ವಿರುದ್ದ ಹೋರಾಟ ಮಾಡಿದ್ದೇನೆ. ನಾವು ಸುಮ್ಮನೆ ಇರಲ್ಲ. ’ಈ ಹಗರಣದಲ್ಲಿ ಭಾಗಿಯಾದ ವ್ಯಕ್ತಿಗಳೇ ನಾನೇ ದುಡ್ಡು ಕೊಟ್ಟಿರುವೆ. ನನ್ನದೇ ಆ ಧ್ವನಿ ಎಂದು ಹೇಳಿದ್ದಾರೆ.’ ಇಷ್ಟೆಲ್ಲಾ ಆದರೂ ನಾವು ಸುಮ್ಮನಿರಲು ಆಗುತ್ತಾ ಎಂದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ಪ್ರೀತಿ, ವಿಶ್ವಾಸದ ರಾಜಕಾರಣ ಮಾಡಿದ್ದೇವೆ. ಎಲ್ಲ ಜಾತಿಗಳನ್ನು ಸಮನಾಗಿ ತೆಗೆದುಕೊಂಡು ಬಂದಿದ್ದೇವೆ. ನಮ್ಮ ಅಧಿಕಾರವಧಿಯಲ್ಲಿ ಹಿಂದೂ ಮುಸ್ಲಿಂ, ಸಿಖ್ ಎಂದು ಒಂದಾಗಿದ್ದೇವೆ. ಆದರೆ ಬಿಜೆಪಿ ತಮ್ಮ ಮೇಲಿನ ಆಪಾದನೆ ನಮ್ಮ ಮೇಲೆ ಹಾಕುತ್ತಿದೆ ಎಂದರು.
ಪಠ್ಯ ಪುಸ್ತಕದ ಪರಿಷ್ಕರಣೆ ವಿಚಾರದಲ್ಲಿ, ಮಕ್ಕಳಿಗೆ ಒಳ್ಳೆಯದನ್ನು ಬೋಧನೆ ಮಾಡಬೇಕು. ಅಲ್ಲಿಯೇ ಜಾತಿ ಬಿತ್ತುವ ಕೆಲಸ ಆಗಬಾರದು. ಇತಿಹಾಸ ಇರುವ ಸತ್ಯವನ್ನು ಹೇಳಬೇಕು. ಇತಿಹಾಸ ತಿರುಚಿ ಹೇಳುವ ಕೆಲಸ ಆಗಬಾರದು. ಬಿಜೆಪಿ ತಿರುಚಿ ಹೇಳುವ ಕೆಲಸ ಮಾಡಿದೆ. ಇತಿಹಾಸ ಎಲ್ಲರಿಗೂ ಒಂದೇ. ಸತ್ಯಾಸತ್ಯತೆಯನ್ನ ಮಕ್ಕಳಿಗೆ ತಿಳಿಸಬೇಕು. ಸತ್ಯವನ್ನು ಸಮಾಜಕ್ಕೆ ತಿಳಿಸದೇ ಹೋದರೆ ನಾವು ಮೋಸ ಮಾಡಿದಂತೆ ಎಂದರು.
ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ ಇದ್ದರು.
ಟಾಪ್ ನ್ಯೂಸ್
