
ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ; ಜಿಲ್ಲೆಗಳಲ್ಲೂ ನಡೆದ ಕೋರ್ ಕಮಿಟಿ ಸಭೆ
ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಎಲ್ಲ
Team Udayavani, Apr 1, 2023, 6:25 AM IST

ಬೆಂಗಳೂರು: ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಕಾರ್ಯಕರ್ತರಿಂದ ಅಭಿಪ್ರಾಯ ಪಡೆಯುವ ವಿನೂತನ ಪ್ರಯತ್ನವನ್ನು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಜಾರಿಗೆ ತಂದಿದ್ದು, ಎಲ್ಲ ಜಿಲ್ಲೆಗಳಲ್ಲೂ ಶುಕ್ರವಾರ ಈ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸಲಾಗಿದೆ.
ರಾಜ್ಯದ 224 ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ಬಿಜೆಪಿ ಈ ಪ್ರಕ್ರಿಯೆ ನಡೆಸಿದ್ದು ಪ್ರತಿ ಕ್ಷೇತ್ರದಿಂದ ಸುಮಾರು 200 ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದರ ಆಧಾರದ ಮೇಲೆ ಟಿಕೆಟ್ ಹಂಚಿಕೆ ಪ್ರಕ್ರಿಯೆಯನ್ನು ದಿಲ್ಲಿಯಲ್ಲಿ ನಡೆಯುವ ಸಂಸದೀಯ ಮಂಡಳಿ ಸಭೆಯಲ್ಲಿ ನಡೆಸಲಿದ್ದು, ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ ದೊರೆಯುವುದೇ ಎಂಬ ಪ್ರಶ್ನೆಗೆ ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ವರಿಷ್ಠರು ಉತ್ತರ ನೀಡಲಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸದಸ್ಯರು, ಸಂಸದರು ಹಾಗೂ ಪಕ್ಷದಿಂದ ನಿಯೋಜನೆಗೊಂಡ ಒಬ್ಬ ಸದಸ್ಯರ ಸಮ್ಮುಖದಲ್ಲಿ ಈ ಸಭೆ ನಡೆದಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವುದು ಕೇಸರಿ ಪಡೆಯ ತಳಹಂತದ ಮುಖಂಡರಲ್ಲಿ ಉತ್ಸಾಹ ಮೂಡಿಸಿದೆ.
ಹೇಗೆ ಸಂಗ್ರಹಣೆ ?
ಬೂತ್ ಸದಸ್ಯರು, ಶಕ್ತಿ ಕೇಂದ್ರ ಪ್ರಮುಖರು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಕೋರ್ ಕಮಿಟಿ ಸದಸ್ಯರು, ಮಂಡಲ ಪದಾಧಿಕಾರಿಗಳು, ಮಂಡಲ ಮೋರ್ಚಾ ಅಧ್ಯಕ್ಷರು, ಪುರಸಭೆ, ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಕ್ಷೇತ್ರವಾರು ಪಕ್ಷದ ಜವಾಬ್ದಾರಿ ಹೊಂದಿರುವ 200 ಜನರಿಂದ ಪ್ರತಿ ಕ್ಷೇತ್ರದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಈ ಅಭಿಪ್ರಾಯ ಸಂಗ್ರಹಣೆ ನಡೆಸಿರುವುದರಿಂದ ಒಟ್ಟಾರೆ ಪ್ರಕ್ರಿಯೆಗೆ ಹೆಚ್ಚಿನ ಬಲ ಬಂದಂತಾಗಿದೆ. ಈಗಾಗಲೇ ಹಲವು ಹಂತದಲ್ಲಿ ಅಭ್ಯರ್ಥಿ ಯಾರಾಗಬೇಕೆಂಬ ಸರ್ವೇಯನ್ನು ವರಿಷ್ಠರು ನಡೆಸಿದ್ದು, ಕಾರ್ಯಕರ್ತರ ಅಭಿಪ್ರಾಯವನ್ನೂ ಇದರ ಜತೆಗೆ ಸಮೀಕರಿಸಲಾಗುತ್ತದೆ. ಸರ್ವೇ ಹಾಗೂ ಕ್ಷೇತ್ರವಾರು ಕಾರ್ಯಕರ್ತರಿಂದ ಸಂಗ್ರಹವಾದ ಅಭಿಪ್ರಾಯಕ್ಕೆ ಸಾಮ್ಯತೆ ಕಂಡು ಬಂದರೆ ಅಂಥ ವ್ಯಕ್ತಿಯ ಆಯ್ಕೆ ಸರಳವಾಗುತ್ತದೆ ಎನ್ನಲಾಗಿದೆ. ಹೀಗಾಗಿ ಜಿಲ್ಲಾ ಕೋರ್ ಕಮಿಟಿ ಸಭೆಯ ಮೂಲಕ ಸಂಗ್ರಹಿಸಿದ ಅಭಿಪ್ರಾಯಕ್ಕೆ ವಿಶೇಷ ಮಹತ್ವ ಇದೆ ಎಂದು ಬಿಜೆಪಿ ಮುಖಂಡರೊಬ್ಬರು ಉದಯವಾಣಿ’ಗೆ ತಿಳಿಸಿದ್ದಾರೆ.
ಎ. 6, 7ಕ್ಕೆ ಮೊದಲ ಪಟ್ಟಿ
ಎ. 4ಕ್ಕೆ ದಿಲ್ಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಎ. 6 ಅಥವಾ 7ಕ್ಕೆ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಎ.10ರೊಳಗೆ ಎಲ್ಲ ಕ್ಷೇತ್ರದ ಹುರಿಯಾಳುಗಳ ಹೆಸರನ್ನು ಬಿಜೆಪಿ ವರಿಷ್ಠರು ಅಂತಿಮಗೊಳಿಸಲಿದ್ದಾರೆ.
ಬಿಜೆಪಿಗೆ ಸ್ಪಷ್ಟ ಬಹುಮತದ ವಿಶ್ವಾಸ: ಬೊಮ್ಮಾಯಿ
ದೊಡ್ಡಬಳ್ಳಾಪುರ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕ್ಷೇತ್ರ ಮಟ್ಟದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಚುನಾವಣ ಸಮೀಕ್ಷೆಗಳು ಸಾಕಷ್ಟು ಹಿಂದೆ ನಡೆದಿದ್ದು, ಎಲ್ಲದರಲ್ಲಿಯೂ ಪೈಪೋಟಿಯನ್ನೇ ತೋರಿಸುತ್ತಿವೆ. ಇನ್ನೂ ಒಂದೂವರೆ ತಿಂಗಳಿದ್ದು, ಬಹಳಷ್ಟು ಬದಲಾವಣೆಗಳು ಕಾಣುತ್ತಿವೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವ ವಿಶ್ವಾಸವಿದೆ ಎಂದರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ವಾರದೊಳಗೆ ಅಂತಿಮಗೊಳ್ಳಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ತಂಡಗಳನ್ನು ಕಳುಹಿಸಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಆ ಬಳಿಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
-ನಳಿನ್ ಕುಮಾರ್ ಕಟೀಲು,
ಬಿಜೆಪಿ ರಾಜ್ಯಾಧ್ಯಕ್ಷ
ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದ್ದು, ಅವರ ಅಭಿಪ್ರಾಯದಂತೆಯೇ ಟಿಕೆಟ್ ಅಂತಿಮಗೊಳಿಸಲಾಗುತ್ತದೆ. ಅಭಿವೃದ್ಧಿ ಕೆಲಸ ಮಾಡದೇ, ಕಾರ್ಯಕರ್ತರನ್ನು ಎದುರಿಸುವ ಧೈರ್ಯವಿಲ್ಲದವರು ಪಕ್ಷದಿಂದ ಪಲಾಯನ ಮಾಡುತ್ತಾರೆ.
-ಡಿ.ವಿ. ಸದಾನಂದ ಗೌಡ,
ಮಾಜಿ ಸಿಎಂ
ಶಿಸ್ತು-ವ್ಯವಸ್ಥೆಯಡಿ ಪಟ್ಟಿ ಅಂತಿಮ: ಶೆಟ್ಟರ್
ಬಾಗಲಕೋಟೆ: ಬಿಜೆಪಿಯಲ್ಲಿ ಒಂದು ಶಿಸ್ತು ಮತ್ತು ವ್ಯವಸ್ಥೆ ಇದೆ. ಆ ಪ್ರಕಾರವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಪತ್ರಕರ್ತರ ಜತೆ ಅವರು ಮಾತನಾಡಿ, ಎಲ್ಲ ಜಿಲ್ಲೆಗಳ ಅಭಿಪ್ರಾಯ ಸಂಗ್ರಹ ನಡೆದಿದೆ. ನಾಳೆ, ನಾಡಿದ್ದು ಕೋರ್ ಕಮಿಟಿ ಸಭೆ ಇದೆ. ಯಾರು ಅಭ್ಯರ್ಥಿಗಳೆಂಬುದು ಸ್ವಲ್ಪ ತಿಳಿಯಬಹುದು. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕೆಲವರು ಸ್ವಯಂ ಪ್ರೇರಿತರಾಗಿ ಟಿಕೆಟ್ ಬೇಡ ಎನ್ನುತ್ತಾರೆ, ಇನ್ನು ಕೆಲವರದ್ದು ಆರೋಗ್ಯ, ವಯಸ್ಸು, ವಿರೋಧಿ ಅಲೆ ಇರುತ್ತದೆ. ಇವೆಲ್ಲವನ್ನೂ ಪರಿಗಣಿಸಿ ಪಕ್ಷ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದರು.
140 ಸ್ಥಾನ ಗೆಲ್ಲುತ್ತೇವೆ: ಶ್ರೀರಾಮುಲು
ಹಾವೇರಿ: ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನಿದ್ದೆಗೆಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಏನೇ ಸರ್ಕಸ್ ಮಾಡಿದರೂ ಅಧಿ ಕಾರಕ್ಕೆ ಬರೋದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. 140 ಸ್ಥಾನ ಪಡೆದು ಮತ್ತೆ ಅ ಧಿಕಾರಕ್ಕೆ ಬರುತ್ತೇವೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಕರ್ತರೊಂದಿಗೆ ಅವರು ಮಾತನಾಡಿ, ವಿಪಕ್ಷ ಕಾಂಗ್ರೆಸ್ ದೇಶದಲ್ಲಿ ದಿವಾಳಿಯಾಗಿದೆ. ಮುಂದಿನ ದಿನಗಳಲ್ಲಿ ಅದು ಹರಾಜಿಗೆ ಬರಬೇಕಿದೆ. ಕಾಂಗ್ರೆಸ್ ಬಹಳ ವರ್ಷಗಳಿಂದ ಜನರಿಗೆ ಟೋಪಿ ಹಾಕೋದು, ಕಿವಿಯಲ್ಲಿ ಹೂ ಇಡುವುದನ್ನು ಮಾಡುತ್ತಿದೆ ಅವರಿಗೆ ಸೋಲಿನ ಭಯ ಶುರುವಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಅವರ ಮಾತಿಗೆ ನಮ್ಮ ಶಾಸಕರು ಮರುಳಾಗುತ್ತಾರೆ ಅಂತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಯಾರೂ ಅವರ ಮಾತಿಗೆ ಮರುಳಾಗುವುದಿಲ್ಲ. ಒಂದು ವೇಳೆ ಮಾತು ಕೇಳಿ ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

Shocking ಮೃತ ಉರಗತಜ್ಞ ನರೇಶ್ ಮನೆಯಲ್ಲಿ ವಿಷಕಾರಿ ಹಾವುಗಳ ರಾಶಿ!

ಕೊಟ್ಟಿಗೆಹಾರ: ಮನೆಯ ಬಳಿಯೇ ಅವಿತು ಕುಳಿತ್ತಿತ್ತು ಭಾರಿ ಗಾತ್ರದ ಕಾಳಿಂಗ ಸರ್ಪ

ಕರ್ನಾಟಕದಲ್ಲಿ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

Guarantee; ಮಂತ್ರಿ ಪರಿಷತ್ ಸಭೆ: ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ