ಮತಾಂತರ ನಿಷೇಧ ಕಾನೂನು ಜಾರಿಗೆ ತಂದೇ ತರುತ್ತೇವೆ: ಸಚಿವ ಸುಧಾಕರ್
Team Udayavani, Nov 7, 2020, 3:08 PM IST
ಚಿಕ್ಕಮಗಳೂರು: ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು, ತಂದೇ ತರುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಯು.ಟಿ ಖಾದರ್ ಬಳಿ ಹೇಳಿಸಿಕೊಂಡು ಕಾನೂನು ಜಾರಿಗೆ ತರುವ ಅವಶ್ಯಕತೆಯಿಲ್ಲ. ಕಾನೂನು ಜಾರಿಗೊಳಿಸುವ ಬಗ್ಗೆ ಈಗಾಗಲೇ ಎಲ್ಲಾ ಹಂತದಲ್ಲಿ ಚರ್ಚೆಯಾಗಿದೆ. ಮುಂದಿನ ಅಧಿವೇಶನದಲ್ಲಿ ಜಾರಿಗೊಳಿಸುತ್ತೇವೆ ಎಂದರು.
ಅವರದ್ದೆ ಸರ್ಕಾರ ಇದೆ, ಮಂತಾತರ ಕಾನೂನು ಜಾರಿಗೆ ತರಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಶುಕ್ರವಾರ ಹೇಳಿದ್ದರು.
ವಿದ್ಯುತ್ ದರ ಹೆಚ್ಚಳದ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಸರ್ಕಾರ ಎಂದಾಕ್ಷಣ ಅಕ್ಷಯ ಪಾತ್ರೆ ಅಲ್ಲ. ಸರ್ಕಾರಕ್ಕೂ ಆರ್ಥಿಕ ಇತಿಮಿತಿ ಇದೆ. ವಿದ್ಯುತ್ ದರ ಹೆಚ್ಚಳಕ್ಕೆ ಜನ ಸಹಕರಿಸಬೇಕು ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಲವ್ ಜಿಹಾದ್ ಕೊನೆಗಾಣಿಸಲು ಕಠಿಣ ಕ್ರಮ: ಮಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ
ಸರ್ಕಾರಕ್ಕೆ ಬಹಳಷ್ಟು ಕಠಿಣ ಸವಾಲುಗಳಿವೆ. ಕೋವಿಡ್ ನಿಂದ ಆರ್ಥಿಕ ದುಸ್ಥಿತಿ ಬಂದಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ಅತಿವೃಷ್ಠಿಯಾಗಿ ಸಾವಿರಾರು ಕೋಟಿ ನಷ್ಟವಾಗಿದೆ. 8 ತಿಂಗಳಿಂದ 6 ಕೋಟಿ ಜನರಿಗೆ ವಿವಿಧ ಬಗೆಯಲ್ಲಿ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದೆ. ಸಿಬ್ಬಂದಿಗಳಿಗೆ ವೇತನ ಕಡಿತಗೊಳಿಸದೆ, ಅಭಿವೃದ್ದಿ ಮಾಡಲಾಗಿದೆ. ಆರ್ಥಿಕ ಚಟುವಟಿಕೆ ಕಡಿಮೆಯಾಗಿದ್ದು ಹಣ ಕ್ರೋಡೀಕರಣಕ್ಕೆ ಕಷ್ಟಸಾಧ್ಯವಾಗಿದೆ. ವಿದ್ಯುತ್ ಬೆಲೆ ಜಾಸ್ತಿಯನ್ನು ಸರ್ಕಾರ ಸಂತೋಷದಿಂದ ಮಾಡಿಲ್ಲ, ಅನಿವಾರ್ಯದಿಂದ ಮಾಡಿದೆ ಎಂದು ಸಮರ್ಥಿಸಿಕೊಂಡಿದೆ.