ಮೊದಲ ಪೂರ್ಣ ಎಲೆಕ್ಟ್ರಿಕ್ ವಿಮಾನ ಯಶಸ್ವಿ ಹಾರಾಟ
Team Udayavani, Sep 30, 2022, 7:00 AM IST
ವಾಷಿಂಗ್ಟನ್: ವಿಶ್ವದ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ವಿಮಾನ “ಅಲೈಸ್’, ತನ್ನ ಮೊಟ್ಟಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ವಿಮಾನವನ್ನು ಏವಿ ಯೇಶನ್ ಏರ್‌ಕ್ರಾಫ್ಟ್ ಸಂಸ್ಥೆ ತಯಾರಿಸಿದೆ. ಅಮೆರಿಕದ ವಾಯುವ್ಯಕ್ಕಿರುವ ಗ್ರಾಂಟ್ ಕೌಂಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರು ವಾರ ಸ್ಥಳೀಯ ಸಮಯ ಬೆಳಗ್ಗೆ 7.10ಕ್ಕೆ ಟೇಕ್ ಆಫ್ ಆದ ವಿಮಾನ, ಎಂಟು ನಿಮಿಷಗಳ ಕಾಲ ಹಾರಾಟ ನಡೆಸಿತು. 3,500 ಅಡಿ ಎತ್ತರದಲ್ಲಿ ಹಾರಾಟ ನಡೆಸಿತು.
“ಅಲೈಸ್’ ಸಂಪೂರ್ಣ ಎಲೆಕ್ಟ್ರಿಕ್ ವಿಮಾನ ಆಗಿರುವುದರಿಂದ ಹೊಗೆ ಮುಕ್ತ ವಾಗಿದೆ. ಅಲ್ಲದೇ ಲಘು ವಿಮಾನಗಳಿಗೆ ಹೋಲಿಸಿದರೆ ಪ್ರಯಾಣ ವೆಚ್ಚವೂ ಕಡಿಮೆಯಿದೆ. ಗರಿಷ್ಠ 260 ನಾಟ್ಸ್‌ಗಳ ವೇಗದಲ್ಲಿ ಸಂಚರಿಸಲಿದೆ. ನೂತನ ಅಲೈಸ್ ವಿಮಾನ 9 ಸೀಟರ್‌ಗಳು ಮತ್ತು 6 ಸೀಟರ್ ಎಕ್ಸಿಕುಟಿವ್ ಮತ್ತು ಇ-ಕಾರ್ಗೊದಲ್ಲಿ ಲಭ್ಯವಿದೆ. ಪ್ರಯಾಣಿಕ ವಿಮಾನವು 1,134 ಕೆಜಿ ಹಾಗೂ ಇ-ಕಾರ್ಗೊ ವಿಮಾನವು 1,179 ಕೆಜಿ ತೂಕವಿದೆ. ಪ್ರತಿ ವಿಮಾನದಲ್ಲಿ ಇಬ್ಬರು ವಿಮಾನ ಸಿಬಂದಿ ಇರಲಿದ್ದಾರೆ ಎಂದು ಏವಿಯೇಶನ್ ಏರ್‌ಕ್ರಾಪ್ಟ್ ಸಂಸ್ಥೆ ತಿಳಿಸಿದೆ.