ಅಫ್ಘಾನಿಸ್ತಾನದಲ್ಲಿ ವಿಪರೀತ ಚಳಿಗೆ 160 ಕ್ಕೂ ಹೆಚ್ಚಿನ ಮಂದಿ ಮೃತ್ಯು
Team Udayavani, Jan 27, 2023, 9:56 AM IST
ಕಾಬೂಲ್: ವಿಪರೀತ ಚಳಿಗೆ ಅಫ್ಘಾನಿಸ್ತಾನದಲ್ಲಿ 160 ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ವಿಪತ್ತು ನಿರ್ವಹಣೆ ಸಚಿವರ ವಕ್ತಾರರಾದ ಶಫಿವುಲ್ಲಾ ರಹೀಮಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಜ.10 ರಿಂದ ಇದುವರೆಗೆ 162 ಮಂದಿ ಚಳಿಯಿಂದ ಮೃತಪಟ್ಟಿದ್ದಾರೆ. ಕಳೆದ ವಾರ 84 ಸಾವುಗಳು ಸಂಭವಿಸಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಕಳೆದ 15 ವರ್ಷಗಳಲ್ಲೇ ಅತ್ಯಂತ ಶೀತಲವಾಗಿರುವ ಚಳಿಗಾಲ ಇದಾಗಿದ್ದು, ತಾಪಮಾನವು -34 ಡಿಗ್ರಿ ಸೆಲ್ಸಿಯಸ್ (-29.2 ಡಿಗ್ರಿ ಫ್ಯಾರನ್‌ಹೀಟ್) ಗಿಂತ ಕಡಿಮೆಯಾಗಿದೆ. ಇದರಿಂದ ಜನ ಮನೆಯ ಹೊರಬರಲು ಕಷ್ಟವಾಗುತ್ತಿದೆ. ಮನೆಯ ಹೊರಬಂದು ಇಂಧನ ತೆಗೆದುಕೊಂಡು ಹೋಗಲು ಕೂಡ ಅಲ್ಲಿನ ಮಂದಿಗೆ ಸಾಧ್ಯವಾಗುತ್ತಿಲ್ಲ. ಇದು ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯದಲ್ಲಿರುವ ಅಫ್ಘಾನಿಸ್ತಾನಕ್ಕೆ ಇನ್ನಷ್ಟು ಹೊಡೆತ ನೀಡಿದೆ.
ಕಷ್ಟದಲ್ಲಿದ್ದ ಜನರಿಗೆ ನೆರವಾಗುವ ಎನ್ ಜಿಒಗಳು ತಾಲಿಬಾನ್ ಆಡಳಿತದಿಂದ ಮುಂದೆ ಬಂದು ಸಹಾಯ ಮಾಡಲು ಆಗುತ್ತಿಲ್ಲ. ಮಹಿಳಾ ಎನ್ ಜಿಒ ಕಾರ್ಯಕರ್ತರು ಕೆಲಸ ಮಾಡುವಂತಿಲ್ಲ. ಜನ ಬಿಸಿಯ ತಾಪಮಾನಕ್ಕಾಗಿ ಇಂಧನ ಬಳಸಿ ಮೈ ಬಿಸಿ ಮಾಡಿಕೊಳ್ಳಬೇಕಿದೆ. ಮನೆಯ ಒಳಗೆ ಮಕ್ಕಳು ಚಳಿಯಲ್ಲಿ ನಡಗುತ್ತಿದ್ದಾರೆ. ಮಕ್ಕಳು ಚಳಿಯಿಂದ ರಾತ್ರಿ ಮಲಗುವುದೇ ಇಲ್ಲ. ಇಡೀ ದಿನ ಆಳುತ್ತಲೇ ಇರುತ್ತವೆ. ನಮಗೆ ಸಹಾಯ ಮಾಡಲು ಯಾರೂ ಬಂದಿಲ್ಲ. ಸರಿಯಾಗಿ ತಿನ್ನಲು ಆಹಾರವೂ ಇಲ್ಲ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.