ಯುಕೆ ಸೂಪರ್ಮಾರ್ಕೆಟ್ಗಳಲ್ಲಿ ಟೊಮ್ಯಾಟೋ ಸಿಗುತ್ತಿಲ್ಲ!
ದಕ್ಷಿಣ ಯುರೋಪ್, ಉ.ಆಫ್ರಿಕಾದಲ್ಲಿ ಇಳುವರಿ ಕುಸಿತ
Team Udayavani, Feb 22, 2023, 7:30 AM IST
ಲಂಡನ್: ಯುನೈಟೆಡ್ ಕಿಂಗ್ಡಂ(ಯುಕೆ)ನಲ್ಲಿ ಟೊಮ್ಯಾಟೋ ಅಭಾವ ತಲೆದೋರಿದೆ. ದಕ್ಷಿಣ ಯುರೋಪ್ ಮತ್ತು ಉತ್ತರ ಆಫ್ರಿಕಾದಲ್ಲಿ ಇಳುವರಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣವಂತೆ!
ಇತ್ತೀಚೆಗಷ್ಟೇ ತೀವ್ರ ಚಳಿಯಿಂದ ನಡುಗುತ್ತಿದ್ದ ದಕ್ಷಿಣ ಯುರೋಪ್ ಮತ್ತು ಉತ್ತರ ಆಫ್ರಿಕಾದ ದೇಶಗಳಲ್ಲಿ ಏಕಾಏಕಿ ತಾಪಮಾನ ಏರಿಕೆಯಾದ ಕಾರಣ, ಟೊಮ್ಯಾಟೋ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಅತಿಯಾದ ಚಳಿ, ಭಾರೀ ಮಳೆ ಹಾಗೂ ಪ್ರವಾಹ ಕೂಡ ಇಳುವರಿ ಕುಸಿಯುವಂತೆ ಮಾಡಿದೆ.
ಇನ್ನು, ಯುಕೆ ಟೊಮ್ಯಾಟೋಗಾಗಿ ಮೊರೊಕ್ಕೊ ಮತ್ತು ಸ್ಪೇನ್ ದೇಶಗಳನ್ನು ಅವಲಂಬಿಸಿದೆ. ಇತ್ತೀಚೆಗಿ ಸುರಿದ ಭಾರೀ ಮಳೆಯಿಂದಾಗಿ ಟೊಮ್ಯಾಟೋ ಸೇರಿದಂತೆ ತರಕಾರಿಗಳ ಸಾಗಣೆಯೂ ಸಾಧ್ಯವಾಗದ ಕಾರಣ, ಯುಕೆ ಸೂಪರ್ಮಾರ್ಕೆಟ್ಗಳ ಶೆಲ್ಫ್ ಗಳಲ್ಲಿ ಟೊಮ್ಯಾಟೋಗಳೇ ಕಾಣಸಿಗುತ್ತಿಲ್ಲ. ಇಲ್ಲೆಲ್ಲ “ಸ್ಪೇನ್ ಮತ್ತು ಮೊರೊಕ್ಕೋಗಳಲ್ಲಿನ ಪ್ರತಿಕೂಲ ಪರಿಣಾಮದಿಂದಾಗಿ ಟೊಮ್ಯಾಟೋ ಲಭ್ಯವಾಗುತ್ತಿಲ್ಲ’ ಎಂದು ಫಲಕಗಳನ್ನೂ ಹಾಕಲಾಗಿದೆ.