ವಿಶ್ವದ ಶುಷ್ಕ ಪ್ರದೇಶದಲ್ಲಿ ಜಲಪಾತ ಸೃಷ್ಟಿ!
ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಲ್ಲಿ ಭಾರೀ ಮಳೆ
Team Udayavani, Sep 14, 2022, 6:40 AM IST
ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ನೆವಡಾ ಗಡಿಯಲ್ಲಿರುವ ವಿಶ್ವದ ಅತ್ಯಂತ ಶುಷ್ಕ ಮತ್ತು ಉಷ್ಣ ಪ್ರದೇಶಗಳಲ್ಲಿ ಒಂದಾಗಿರುವ ಡೆತ್ ವ್ಯಾಲಿ ನ್ಯಾಷನಲ್ ಪಾರ್ಕ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಸಣ್ಣ ಜಲಪಾತವೂ ಸೃಷ್ಟಿಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೆ ಮಾಡಿದೆ..
“ಚಂಡಮಾರುತ, ಬಿರುಗಾಳಿಯಿಂದ ಡೆತ್ ವ್ಯಾಲಿ ನ್ಯಾಷನಲ್ ಪಾರ್ಕ್‌ನಲ್ಲಿ ಭಾರಿ ಹಾನಿಯಾಗಿದೆ,’ ಎಂದು ಪಾರ್ಕ್‌ನ ಅಧಿಕಾರಿಗಳು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಬ್ಯಾಡ್‌ವಾಟರ್ ಬೇಸಿನ್ ಮೂಲಕ ಪರ್ವತದಿಂದ ಹರಿಯುತ್ತಿರುವ ಮಣ್ಣು ಮಿಶ್ರಿತ ಜಲಪಾತದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
56.6 ಡಿ.ಸೆ. ತಾಪಮಾನ:
“ಡೆತ್ ವ್ಯಾಲಿ’ಯನ್ನು ಭೂಮಿ ಮೇಲಿನ ಅತ್ಯಂತ ಉಷ್ಣ ಪ್ರದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಗರಿಷ್ಠ ತಾಪಮಾನ 56.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಈವರೆಗೂ ವಿಶ್ವದಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನವಾಗಿದೆ.
ಈ ಪ್ರದೇಶದಲ್ಲಿ ಅತ್ಯಂತ ಕಡಿಮೆ ಮಳೆ-ವಾರ್ಷಿಕ 2.2 ಇಂಚು ಮಳೆ ಬೀಳುತ್ತದೆ. ಆದರೆ ಚಂಡಮಾರುತದ ಕಾರಣ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಭಾರಿ ಮಳೆ ಸುರಿದಿದೆ.
ಭಾರಿ ಮಳೆಯಿಂದಾಗಿ ಹೆದ್ದಾರಿ, ಮುಖ್ಯ ರಸ್ತೆ, ಕಣಿವೆ ಒಳಗೆ ಮತ್ತು ಹೊರಗೆ, ಪಾದಚಾರಿ ಮಾರ್ಗಕ್ಕೆ ನೀರು ನುಗಿದೆ. ಕೆಲವು ಮಾರ್ಗಗಳು ಬಂದ್ ಆಗಿವೆ. ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಚಿತವಾಗಿಯೇ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.