ರಷ್ಯಾದಿಂದ 242 ಯುದ್ಧಾಪರಾಧ; ಉಕ್ರೇನ್ ಸರ್ಕಾರದ ಆರೋಪ
Team Udayavani, Apr 24, 2022, 7:20 AM IST
ಕೀವ್/ಮಾಸ್ಕೋ: ಉಕ್ರೇನ್ ಮೇಲೆ ಸತತ ದಾಳಿ ನಡೆಸುತ್ತಿರುವ ರಷ್ಯಾವು, ಉಕ್ರೇನ್‌ನ ಸಾಂಸ್ಕೃತಿಕ ಪರಂಪರೆಯ ವಿರುದ್ಧ 242 ಯುದ್ಧಾಪರಾಧಗಳನ್ನು ಎಸಗಿದೆ ಎಂದು ಉಕ್ರೇನ್ ದೂರಿದೆ. ಈ ಬಗ್ಗೆ ಅಲ್ಲಿನ ಸಂಸ್ಕೃತಿ ಮತ್ತು ಮಾಹಿತಿ ನೀತಿ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, “ಇನ್ನೂ ಹಲವು ಪ್ರದೇಶಗಳಲ್ಲಿ ರಷ್ಯಾ ಮಾಡುತ್ತಿರುವ ಯುದ್ಧಾಪರಾಧಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ’ ಎಂದು ಹೇಳಿದೆ.
ಇದೇ ವೇಳೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಬೇರೆ ರಾಷ್ಟ್ರಗಳಿಗೂ ರಷ್ಯಾ ಬಗ್ಗೆ ಎಚ್ಚರಿಕೆಯ ಕರೆ ನೀಡಿದ್ದಾರೆ. “ನಾವು ರಷ್ಯಾಕ್ಕೆ ಮೊದಲ ಟಾರ್ಗೆಟ್. ನಮ್ಮ ನಂತರ ನೀವುಗಳೂ ಅವರಿಗೆ ಶತ್ರುಗಳೇ. ನಿಮ್ಮ ಮೇಲೂ ಅವರು ದಾಳಿ ನಡೆಸುತ್ತಾರೆ. ಹಾಗಾಗಿ ಈಗ ಹೋರಾಟದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ’ ಎಂದು ನೆರೆ ರಾಷ್ಟ್ರಗಳಿಗೆ ಹೇಳಿದ್ದಾರೆ.
ಉಕ್ರೇನ್‌ನ ದಕ್ಷಿಣ ಭಾಗವನ್ನು ಶಾಶ್ವತವಾಗಿ ವಶಪಡಿಸಿಕೊಳ್ಳುವುದರಿಂದ ಮೊಲ್ಡೊವಾದ ರಷ್ಯಾ ಪರವಾದ ಭಾಗವಾದ “ಟ್ರಾನ್ಸ್‌ನಿಸ್ಟ್ರಿಯಾ’ಕ್ಕೆ ನೇರ ಸಂಪರ್ಕ ಸಿಗಲಿದೆ ಎಂದು ರಷ್ಯಾ ಹೇಳಿದ್ದು, ಮಲ್ಡೋವಾ ಕೂಡ ರಷ್ಯಾ ಬಗ್ಗೆ ಆಕ್ರೋಶ ಹೊರಹಾಕುವಂತಾಗಿದೆ.
ಉಕ್ರೇನ್ ಪೂರ್ವ ಭಾಗದಲ್ಲಿ ರಷ್ಯಾ 42 ನಗರಗಳನ್ನು ವಶಪಡಿಸಿಕೊಂಡಿದೆ ಎಂದು ಉಕ್ರೇನ್ ತಿಳಿಸಿದೆ.
ಇದನ್ನೂ ಓದಿ:ಇನ್‌ಸ್ಟಾಗ್ರಾಮ್ ಲವ್ : ಮದುವೆಯಾಗಿ ಗರ್ಭಿಣಿಯಾದ ಬಳಿಕ ಕೈಕೊಟ್ಟ ಪತಿ
ವಿಶ್ವಸಂಸ್ಥೆ ಅಧ್ಯಕ್ಷ ಮಧ್ಯಸ್ಥಿಕೆ:
ವಿಶ್ವಸಂಸ್ಥೆಯ ಮುಖ್ಯಸ್ಥರಾಗಿರುವ ಆಂಟೋನಿಯೋ ಗುಟೆರಸ್ ಅವರು ಮುಂದಿನ ವಾರ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಲಿದ್ದು, ಯುದ್ಧವನ್ನು ಅಂತ್ಯಗೊಳಿಸುವ ಬಗ್ಗೆ ಮಾತನಾಡಲಿದ್ದಾರೆ. ಹಾಗೆಯೇ ಅವರು ಝೆಲೆನ್‌ಸ್ಕಿ ಅವರನ್ನೂ ಭೇಟಿ ಮಾಡಿ ಮಾತನಾಡುವ ಸಾಧ್ಯತೆಯಿದೆ. ಅದರ ಜತೆ ಜರ್ಮನಿಯಲ್ಲಿ ಕೀವ್‌ನ ದೀರ್ಘಾವಧಿ ರಕ್ಷಣೆಯ ಬಗ್ಗೆ ಚರ್ಚೆ ನಡೆಸಲಿದ್ದು, ಅದರಲ್ಲಿ 20 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಪೆಂಟಗಾನ್ ತಿಳಿಸಿದೆ.
ರಷ್ಯಾದಿಂದ ತೈಲ ಆಮದು:
ರಷ್ಯಾ ಉಕ್ರೇನ್‌ನ ಮೇಲೆ ದಾಳಿ ನಡೆಸಿದ ನಂತರದ ದಿನಗಳಲ್ಲಿ ರಿಲಯನ್ಸ್ ಇಂಡಸ್ಟೀಸ್ ಸಂಸ್ಥೆಯು ರಷ್ಯಾದಿಂದ 15 ಮಿಲಿಯನ್ ಬ್ಯಾರೆಲ್ ತೈಲ ಆಮದು ಮಾಡಿಕೊಳ್ಳುವುದಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.