
ಪಕ್ಷಾಂತರಿಗೆಗಳಿಗೆ ಮಣೆ; ಕೈ ನಿಷ್ಠರಿಗೆ ಕೋಪ
ಟಿಕೆಟ್ ಹಂಚಿಕೆ ಮಾಡುತ್ತಿರುವ ಕಾಂಗ್ರೆಸ್‌ಗೆ ಹೊಸ ಸಂಕಟ
Team Udayavani, Apr 2, 2023, 7:00 AM IST

ಚುನಾವಣೆ ದಿನ ಘೋಷಣೆಯಾದ ಬೆನ್ನಲ್ಲೇ ಹಲವು ಪಕ್ಷಗಳಲ್ಲಿ ಟಿಕೆಟ್ ಫೈಟ್ ಕಾವು ಜೋರಾಗತೊಡಗಿದೆ. ಮೂರೂ ರಾಜಕೀಯ ಪಕ್ಷಗಳು ಅಭ್ಯìರ್ಥಿಗಳನ್ನು ಅಂತಿಮಗೊಳಿಸಲು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಹಲವು ಕ್ಷೇತ್ರಗಳಲ್ಲಿ ಅಸಮಾಧಾನ, ಆಕ್ರೋಶ ಭುಗಿಲೆದ್ದರೆ, ಇನ್ನು ಕೆಲವು ಕ್ಷೇತ್ರಗಳು ಗೊಂದಲದ ಗೂಡಾಗಿಯೇ ಉಳಿದಿವೆ. ಇನ್ನು ಒಂದು ವಾರದೊಳಗೆ ಮೂರೂ ಪಕ್ಷಗಳ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಬೆಂಗಳೂರು: ಈ ಸಲ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್, ಗೆಲ್ಲುವ ಮಾನದಂಡವೆಂದು ಹೇಳಿಕೊಂಡು ಟಿಕೆಟ್ ಹಂಚಿಕೆಯಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕುತ್ತಿರುವುದು ಪಕ್ಷ ನಿಷ್ಠರಲ್ಲಿ ವ್ಯಾಪಕ ಅಸಮಾಧಾನ ಹಾಗೂ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಟಿಕೆಟ್‌ಗಾಗಿ ವಲಸಿಗ-ಮೂಲ ಕಾಂಗ್ರೆಸ್ಸಿಗರ ನಡುವೆ ತೀವ್ರ ಪೈಪೋಟಿ-ಜಿದ್ದಾಜಿದ್ದಿ ನಡೆದಿದ್ದು, ಇದು ಯಾವುದೇ ಕ್ಷಣದಲ್ಲಿ ಸ್ಫೋಟಿಸುವ ಸಾಧ್ಯತೆಗಳಿವೆ. ಹೀಗಾಗಿ ಕಾಂಗ್ರೆಸ್ ಪರಿಸ್ಥಿತಿ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿದೆ.
ಒಂದೆಡೆ ಪಕ್ಷ ತೊರೆದವರನ್ನು “ಮರಳಿ ಮನೆಗೆ ಬನ್ನಿ’ ಎಂದು ಪಕ್ಷಕ್ಕೆ ಬರ ಮಾಡಿಕೊಳ್ಳುತ್ತಿದ್ದರೆ, ಮತ್ತೂಂದೆಡೆ ಹಲವು ವರ್ಷಗಳ ಕಾಲ ಕ್ಷೇತ್ರ ಮಟ್ಟದಲ್ಲಿ ತಮ್ಮ ವಿರುದ್ಧ ಹೋರಾಡಿದ್ದ ಎದುರಾಳಿಗಳಿಗೆ ವೀಳ್ಯದೆಲೆ ಕೊಟ್ಟು ಆಹ್ವಾನಿಸುತ್ತಿರುವುದು ಈಗ ನಿಷ್ಠಾವಂತ ಕಾಂಗ್ರೆಸ್ಸಿಗರ ಸಿಟ್ಟಿಗೆ ಕಾರಣವಾಗಿದೆ. ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಕೈಕುಲುಕಿ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತಿದ್ದರೂ ಕ್ಷೇತ್ರ ಮಟ್ಟದಲ್ಲಿ ಒಬ್ಬರ ಮುಖ ಇನ್ನೊಬ್ಬರು ನೋಡುವಂತಹ ಸ್ಥಿತಿ ಇಲ್ಲದ ಕಾರಣ ವಲಸಿಗರ ಕ್ಷೇತ್ರದಲ್ಲಿ ಮೂಲ-ವಲಸಿಗರ ಮಧ್ಯೆ ಶೀತಲ ಸಮರ ಆರಂಭವಾಗಿದೆ.
ವಲಸಿಗರ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಅದರಲ್ಲೂ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಸಮಾನ ಮನಸ್ಕರ ರೀತಿಯಲ್ಲಿ ಒಂದೆಡೆ ಸೇರಿ ಒಗ್ಗಟ್ಟು ಪ್ರದರ್ಶಿಸಿ ತಮ್ಮಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಸಂತೋಷ, ಆದರೆ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಟಿಕೆಟ್ ನೀಡಬಾರದೆಂಬ ಒಗ್ಗಟ್ಟಿನ ಸಂದೇಶ ಕಳುಹಿಸುವ ಮೂಲಕ ವಲಸಿಗರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಮೂಲ ಟಿಕೆಟ್ ಆಕಾಂಕ್ಷಿಗಳು ಬಂಡಾಯವಾಗಿ ಇಲ್ಲವೇ ಪಕ್ಷಾಂತರಗೊಂಡರೆ ಫಲಿತಾಂಶ ಕೈಕೊಡಬಹುದೆಂಬ ಲೆಕ್ಕಾಚಾರವೂ ನಡೆದಿದೆ. ಈ ಬೆಳವಣಿಗೆಗಳು ಖಂಡಿತವಾಗಿಯೂ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವುದು ನಿಶ್ವಿತ ಎಂಬ ಆತಂಕ ಕೂಡ ವರಿಷ್ಠರನ್ನು ಕಾಡುತ್ತಿದೆ. ಆದರೂ ರಾಜ್ಯ ಮಟ್ಟದ ನಾಯಕರು ವಲಸಿಗರಿಗೆ ಮಣೆ ಹಾಕುವುದನ್ನು ನಿಲ್ಲಿಸದ ಕಾರಣ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆಕ್ರೋಶದ ಕಟ್ಟೆ ನಿಧಾನವಾಗಿ ಸಿಡಿಯಲಾರಂಭಿಸಿದೆ.
ಎಲ್ಲೆಡೆಯೂ ಅಪಸ್ವರ
ಇದಕ್ಕೆ ತಾಜಾ ನಿದರ್ಶನವೆಂದರೆ ಚಿಕ್ಕಮಗಳೂರಿನಲ್ಲಿ ಶನಿವಾರ ನಡೆದ ಮೂಲ ಕಾಂಗ್ರೆಸ್ಸಿಗರ ಸಭೆಯ ರಾದ್ಧಾಂತವೇ ಸಾಕ್ಷಿ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ತಮ್ಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಸಿಡಿದೆದ್ದಿದ್ದಾರೆ. ಅದೇ ರೀತಿ ಗುಬ್ಬಿಯಲ್ಲಿ ಶ್ರೀನಿವಾಸ್, ಮೊಳಕಾಲ್ಮೂರಿನಲ್ಲಿ ಎನ್.ವೈ. ಗೋಪಾಲಕೃಷ್ಣ, ಚಿಕ್ಕನಾಯಕನಹಳ್ಳಿಯಲ್ಲಿ ಕಿರಣ್‌ಕುಮಾರ್, ತುಮಕೂರು ಗ್ರಾಮಾಂತರದಲ್ಲಿ ನಿಂಗಪ್ಪ, ತುರುವೇಕೆರೆಯಲ್ಲಿ ಕಾಂತರಾಜು, ಗುರುಮಿಠಕಲ್‌ನಲ್ಲಿ ಬಾಬುರಾವ್ ಚಿಂಚನಸೂರು, ರಾಜಾಜಿನಗರದಲ್ಲಿ ಪುಟ್ಟಣ್ಣ, ಕಡೂರಿನಲ್ಲಿ ವೈ.ಎಸ್.ವಿ. ದತ್ತಗೆ ಟಿಕೆಟ್ ಕೊಡುವುದಕ್ಕೆ ಅಪಸ್ವರಗಳು ಕೇಳಿಬಂದಿವೆ. ಇನ್ನು ಪಕ್ಷಕ್ಕೆ ಸೇರಲಿದ್ಧಾರೆಂದು ಹೇಳಲಾಗುತ್ತಿರುವ ಆಯನೂರು ಮಂಜುನಾಥ್, ಅರಸೀಕೆರೆಯ ಶಿವಲಿಂಗೇಗೌಡರ ನಡೆಗೂ ಮೂಲ ಕಾಂಗ್ರೆಸ್ಸಿಗರಿಂದ ವಿರೋಧ ವ್ಯಕ್ತವಾಗುತ್ತಿದೆ.
ಮತ್ತೆ ಜಿಗಿಯುವುದಿಲ್ಲವೇ?
ಕೆಲವರು ಹಣ, ಅಧಿಕಾರದ ಆಸೆಗಾಗಿ ಪಕ್ಷ ತೊರೆದು ಹೋದರು, ಮತ್ತೆ ಅವರೇ ಅಲ್ಲಿ ಅಧಿಕಾರ ಅನುಭವಿಸಿ ಇಲ್ಲವೇ ಅಲ್ಲಿ ಅಧಿಕಾರ ಸಿಗಲಿಲ್ಲವೆಂಬ ಕಾರಣಕ್ಕೆ ಬರುತ್ತಿದ್ದಾರೆ. ಇವರಿಗೆ ಪಕ್ಷ ನಿಷ್ಠೆ ಇರುವುದಿಲ್ಲ, ಸ್ವಾರ್ಥವೇ ಪ್ರಮುಖವಾಗಿರುತ್ತದೆ. ಅಂತಹವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳುವುದರಿಂದ ಪಕ್ಷ ನಿಷ್ಠರಿಗೆ ದ್ರೋಹ ಮಾಡಿದಂತೆ ಅಲ್ಲವೇ? ಮತ್ತೆ ವಲಸಿಗರು ಪಕ್ಷದಲ್ಲೇ ಶಾಶ್ವತವಾಗಿ ಉಳಿಯುತ್ತಾರೆ ಎಂಬುದಕ್ಕೆ ಯಾವ ಖಾತರಿ. ಜೆಡಿಎಸ್, ಬಿಜೆಪಿಯಿಂದ ತಿರಸ್ಕೃತಗೊಂಡವರಿಗೆ ಟಿಕೆಟ್ ಕೊಡುವ ಪ್ರಯತ್ನ ಸರಿಯಲ್ಲ, ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಅವರು ಮತ್ತೆ ಜಿಗಿಯುವುದಿಲ್ಲ ಎಂಬುದಕ್ಕೆ ಯಾವ ಗ್ಯಾರೆಂಟಿ ಎಂಬುದು ಮೂಲ ಕಾಂಗ್ರೆಸ್ಸಿಗರ ಪ್ರಶ್ನೆ.
“ತ್ರಿಬಲ್ ಸಿ’ ಗೆ ಮನ್ನಣೆ
ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ “ಕ್ಯಾಷ್, ಕಾಸ್ಟ್ ಹಾಗೂ ಕ್ಯಾಂಡಿಡೇಟ್’ ಗೆ ಮನ್ನಣೆ ಕೊಡಲಾಗಿದೆ. ಹಣ ಬಲ, ತೋಳ್ಪಲ ಹಾಗೂ ಜಾತಿಬಲದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂಬ ಗುಂಗಿನಲ್ಲಿರುವುದು ಸರಿಯಲ್ಲ, ಪಕ್ಷದ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿ ಹಾಗೂ ಸಿದ್ಧಾಂತಕ್ಕೆ ಬದ್ಧತೆ ಇಲ್ಲದವರಿಗೆ ಅವಕಾಶ ಕಲ್ಪಿಸಿದರೆ ಅದು ನಾಯಕರ ವೈಫಲ್ಯವೇ ಹೊರತು ಕಾರ್ಯಕರ್ತರ ವೈಫಲ್ಯವಲ್ಲ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.
-ಎಂ.ಎನ್.ಗುರುಮೂರ್ತಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
