ತಾಲೂಕು ಭಾಗ್ಯ ಬೇಕಿರುವುದೇನು? ವೈದ್ಯಕೀಯ ವಲಯದಲ್ಲಿ ಅಭಿವೃದ್ಧಿ ಅಗತ್ಯ
Team Udayavani, Mar 17, 2017, 11:29 PM IST
ಕಡಬ: ತಾಲೂಕು ಕೇಂದ್ರವಾದ ಇಲ್ಲಿ ವೈದ್ಯಕೀಯ ಸೇವೆ ವ್ಯವಸ್ಥೆ ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲ. ಸುಮಾರು 8 ವರ್ಷಗಳ ಹಿಂದೆ 6 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರ 30 ಹಾಸಿಗೆಗಳ ಸಮುದಾಯ ಆಸ್ಪತ್ರೆಯಾಯಿತು. ಇತ್ತೀಚೆಗೆ ಇದಕ್ಕೆ 4.85 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಹಾಗೆಂದು ಖಾಸಗಿ ವೈದ್ಯ ಸೇವೆಗಳೂ ಚಿಕಿತ್ಸಾಲಯದ ಮಟ್ಟದಿಂದ ಮೇಲೇರಿಲ್ಲ.
30 ಹಾಸಿಗೆಗಳ ಆಸ್ಪತ್ರೆ
ಆರು ಹಾಸಿಗೆಗಳ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿತು. ದಿನಂಪ್ರತಿ ಸುಮಾರು 300ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಉಳಿದಂತೆ ಹೆಚ್ಚಿನ ಚಿಕಿತ್ಸೆಗೆ ಜನರು ಪುತ್ತೂರು ಮತ್ತು ಮಂಗಳೂರಿಗೆ ತೆರಳಬೇಕು. 2007ರಲ್ಲಿ ಸರಕಾರವು ದ.ಕ. ಜಿಲ್ಲೆಯ ಕಡಬ, ಧರ್ಮಸ್ಥಳ ಹಾಗೂ ಉಪ್ಪಿನಂಗಡಿ ಸೇರಿದಂತೆ ರಾಜ್ಯದ ಒಟ್ಟು 24 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಗತ್ಯ ಹೆಚ್ಚುವರಿ ಹುದ್ದೆಗಳ ಸಮೇತ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿತ್ತು.
ಅದರಂತೆ ಕಡಬ ಆಸ್ಪತ್ರೆಗೆ ಪ್ರಸೂತಿ ತಜ್ಞರು, ಶಿಶು ತಜ್ಞರು ಸೇರಿದಂತೆ 4 ಮಂದಿ ವೈದ್ಯಾಧಿಕಾರಿಗಳು, ಓರ್ವ ದಂತ ವೈದ್ಯರು- ಒಟ್ಟು 34 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ ಹಾಲಿ ಲಭ್ಯವಿರುವ ಹುದ್ದೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಕೇಂದ್ರದ ಕಟ್ಟಡ ಕಾಮಗಾರಿ ಶೇ. 60ರಷ್ಟು ಪೂರ್ಣಗೊಂಡ ಬಳಿಕ ಭರ್ತಿ ಮಾಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಕಟ್ಟಡ ಕಾಮಗಾರಿ ಶೀಘ್ರವೇ ಮುಗಿದು, ತಜ್ಞ ವೈದ್ಯರು ಹಾಗೂ ಅಗತ್ಯ ಸವಲತ್ತು ಸಿಕ್ಕರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ದೊಡ್ಡಮಟ್ಟದ ಆಸ್ಪತ್ರೆಗಳಿಲ್ಲ
ಸಣ್ಣ ಪುಟ್ಟ ಚಿಕಿತ್ಸಾಲಯಗಳನ್ನು ಬಿಟ್ಟರೆ ಇಲ್ಲಿ ದೊಡ್ಡಮಟ್ಟದ ಖಾಸಗಿ ಆಸ್ಪತ್ರೆಗಳೂ ಇಲ್ಲ. ಮರ್ದಾಳದಲ್ಲಿ ಖಾಸಗಿ ಟ್ರಸ್ಟ್ ವತಿಯಿಂದ 400 ಹಾಸಿಗೆಗಳ ಆಸ್ಪತ್ರೆಗೆ ಶಂಕುಸ್ಥಾಪನೆ ಕಳೆದ ತಿಂಗಳು ನೆರವೇರಿದೆ. ಹಾಗೆಯೇ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್‌ನ ಬಳಿ ಬೆಂಗಳೂರು ಮೂಲದ ಕೆಥೋಲಿಕ್ ಕ್ರೈಸ್ತ ಧರ್ಮಭಗಿನಿಯರ ನೇತೃತ್ವದ ಆಸ್ಪತ್ರೆ ಆರಂಭಿಸುವ ವಿಚಾರ ಪ್ರಾಥಮಿಕ ಹಂತದಲ್ಲಿದೆ. ಕಡಬ ತಾಲೂಕು ಕೇಂದ್ರವಾಗಿ ಅಭಿವೃದ್ಧಿಯಾದರೆ ವೈದ್ಯಕೀಯ ಸೇವೆಗಳೂ ಬೆಳೆಯಬಹುದು. ಪ್ರಸ್ತುತ ಇಲ್ಲಿ ತಜ್ಞ ದಂತ ವೈದ್ಯರನ್ನು ಹೊರ ತುಪಡಿಸಿದರೆ ಇನ್ನಿತರ ಯಾವುದೇ ವೈದ್ಯ ಕೀಯ ವಿಭಾಗದಲ್ಲಿ ಪರಿಣಿತ ವೈದ್ಯರು ಲಭ್ಯರಿಲ್ಲ ಎಂಬುದು ವಾಸ್ತವ.
8 ಗ್ರಾಮಗಳ ವ್ಯಾಪ್ತಿ
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ – 8 ಗ್ರಾಮಗಳ ವ್ಯಾಪ್ತಿ ಈ ಆಸ್ಪತ್ರೆಯದ್ದು. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಪಂಜ, ಯೇನೆಕಲ್, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶ ದವರೂ ಇಲ್ಲಿಗೇ ಚಿಕಿತ್ಸೆಗೆ ಬರುತ್ತಿರುವುದರಿಂದ ವ್ಯಾಪ್ತಿ ಹೆಚ್ಚಾಗಿದೆ.
ಸವಲತ್ತು ನೀಡುವುದಕ್ಕೆ ಆದ್ಯತೆ
ಕಡಬದಲ್ಲಿ ಸಮುದಾಯ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಹಾಗೂ ಅಗತ್ಯ ಸವಲತ್ತುಗಳನ್ನು ನೀಡುವುದು ನಮ್ಮ ಮೊದಲ ಗುರಿ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಇಲ್ಲಿ ಆರಂಭಗೊಳ್ಳಲಿವೆ. ಅದೇ ರೀತಿ ಆರೋಗ್ಯ ಇಲಾಖೆಯ ತಾಲೂಕುಮಟ್ಟದ ಸೌಲಭ್ಯಗಳು ಕೂಡ ಲಭಿಸಿಲು ಕಾಲಾವಕಾಶ ಅಗತ್ಯವಿದೆ. ಹಂತ ಹಂತವಾಗಿ ಕಡಬಕ್ಕೂ ಕೂಡ ತಾಲೂಕು ಆಸ್ಪತ್ರೆಯ ಮಾನ್ಯತೆ ಹಾಗೂ ಸವಲತ್ತುಗಳು ಸಿಗಲಿವೆ.
-ಡಾ| ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ
– ನಾಗರಾಜ್ ಎನ್.ಕೆ. ಕಡಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ :ಅದೃಷ್ಟ ಚೆನ್ನಾಗಿತ್ತು ನೋಡಿ…
ಡಿಕೆಶಿ ಶೀಘ್ರ ಜೈಲಿಗೆ ಹೋಗುತ್ತಾರೆ : ಎಂ.ಜಿ. ಮಹೇಶ್
ಮಂಗಳೂರು : ಚೆಕ್ ಬೌನ್ಸ್ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ
ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್ ಖರ್ಗೆ
ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ