ನಾದ ಹರಿಸಿದ ಅರಿವಿನ ಹಾಡು ಅಸರಾ

Team Udayavani, Aug 9, 2019, 5:00 AM IST

ನಾದ ಮಣಿನಾಲ್ಕೂರು ಅವರ ಜ್ಞಾನ ಯಜ್ಞದಂಗವಾಗಿ ನಡೆದ ಬದುಕಿನ ಪಾಠ

ನಮ್ಮ ಎಲುಬಿನ ಹಂದರದೊಳೊಂದು ಮಂದಿರವಿದೆ…ಅಲ್ಲಿ ಯಾರಿಲ್ಲ ಹೇಳಿ, ರಾಮನಿದ್ದಾನೆ, ಸೀತೆ ಇದ್ದಾಳೆ, ಏಸು ಇದ್ದಾನೆ, ಅಲ್ಲಾಹ್‌ ಇದ್ದಾನೆ…ಕೊರಗಜ್ಜ, ಕೋಟಿ ಚೆನ್ನಯ್ಯ…ಹೀಗೆ ನಮ್ಮ ಬದುಕಿನ ನಿತ್ಯದ ಆಗುಹೋಗುಗಳ ಪ್ರತಿಯೊಂದು ಮಂದಿರವೂ, ಇದೆ…ನಾವು ನಮ್ಮನ್ನು ಹೊರಗೆಲ್ಲೋ ಹುಡುಕುತ್ತೇವೆ…ಆದರೆ ನಮ್ಮೊಳಗಿನ ನಮ್ಮನ್ನೇ ನೋಡಿಕೊಳ್ಳುವುದಿಲ್ಲ…!

ಕರ್ನಾಟಕದಾದ್ಯಂತ ತಮ್ಮ ಕತ್ತಲ ಹಾಡು, ಅರಿವಿನ ಹಾಡುಗಳ ಮೂಲಕ ಸಂಚರಿಸುತ್ತಾ, ಇಂದಿನ ಸಮಾಜದ ದುರವಸ್ಥೆಯ ಕಾರಣಗಳನ್ನು ತಮ್ಮದೇ ಶೈಲಿಯಲ್ಲಿ ನಮ್ಮೊಳಗನ್ನು ವಿಶ್ಲೇಷಿಸುವಂತೆ ಮಾಡುತ್ತಿರುವ ನಾದ ಮಣಿನಾಲ್ಕೂರು ಅವರಿಂದ ಬೈಂದೂರಿನ ಅರೆಹೊಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಅರಿವಿನ ಹಾಡು ಕಾರ್ಯಕ್ರಮ ನಡೆಯಿತು. ಅರೆಹೊಳೆ ಪ್ರತಿಷ್ಠಾನ ತನ್ನ ಬೆಳಕು ಸರಣಿ ಕಾರ್ಯಕ್ರಮದ ಮುಂದುವರಿಕೆಯ ಜ್ಞಾನ ಯಜ್ಞ ಸರಣಿಯ ಭಾಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಸುಮಾರು 125 ಮಕ್ಕಳು ಹಾಗೂ ಪೋಷಕರ ನಡುವೆ ಹೊಸದೊಂದು ಸಂಚಲನಕ್ಕೆ ಕಾರಣವಾಯಿತು.

ಮಾತು ಮತ್ತು ಹಾಡುಗಳನ್ನು ಸಾಂದರ್ಭಿಕವಾಗಿ ಸಂಕಲಿಸಿಕೊಂಡು ಬದುಕಿನ ಎದುರಿಗೇ ಇದ್ದೂ ಕಣ್ಣಿಗೆ ಕಾಣದ ಅದೆಷ್ಟೋ ಸಂಗತಿಗಳನ್ನು ನಾದ ವಿಶ್ಲೇಷಿಸುತ್ತಾರೆ. ವೇದಿಕೆಯ ಎದುರಿಗೆ ಎಂಟು ಮಕ್ಕಳನ್ನು ಕರೆಯುತ್ತಾರೆ, ಒಂದು ನಿಮಿಷದಲ್ಲಿ ತಾವು ಎಷ್ಟು ಸಲ ಜಂಪ್‌ ಮಾಡಬಹುದು ಎಂದು ಕೇಳುತ್ತಾರೆ. ಪ್ರತೀ ಮಕ್ಕಳೂ 10,15,25 ಎನ್ನುತ್ತಾರೆ. ಅವರ ಪೋಷಕರಿಗೂ ಇದೇ ಪ್ರಶ್ನೆ ಕೇಳಿದಾಗ ಹೆಚ್ಚೆಂದರೆ 35 ಎನ್ನುತ್ತಾರೆ. ಸರಿ, ಸಮಯ ಎಣಿಸುತ್ತಾ ಮಕ್ಕಳು ತಾವು ಮಾಡಿದ ಜಂಪ್‌ ಲೆಕ್ಕ ಹಾಕಿದಾಗ ಅದು ನೂರನ್ನೂ ದಾಟಿರುತ್ತದೆ. ಈ ಮೂಲಕ ನಾವು ನಮ್ಮೊಳಗಿನ ಅಥವಾ ನಮ್ಮ ಮಕ್ಕಳೊಳಗಿನ ಸಾಮರ್ಥ್ಯವನ್ನೇ ಅರಿಯದೇ, ಅವರನ್ನು ಇಂದು ನಮಗಿಷ್ಟದ ಬದುಕು ಕಟ್ಟಿಕೊಳ್ಳುವ ಯಂತ್ರಗಳನ್ನಾಗಿಸಿಕೊಳ್ಳುತ್ತಿದ್ದೇವೆ ಎಂಬ ದುರಂತದ ಅನಾವರಣ ಮಾಡುತ್ತಾ, ಅದಾಗದಿರಲಿ ಎಂಬ ಸಂದೇಶ ನೀಡುತ್ತಾರೆ.

ಕಲಿಸುವ ಗುರುವೇ ಕಲಿಸು ಎಂಬ ಅಬ್ರಹಾಂ ಲಿಂಕನ್‌ ಅವರು ಮಗನನ್ನು ಶಾಲೆಗೆ ಸೇರಿಸುವಾಗ ಅಲ್ಲಿನ ಶಿಕ್ಷಕರಿಗೆ ಬರೆದ ಪತ್ರದ ಸಾರವನ್ನು ಕನ್ನಡದ ಹಾಡಿನ ಮೂಲಕ ಬಿಚ್ಚಿಟ್ಟಾಗ ಸಭಾಂಗಣದಲ್ಲಿ ತನ್ಮಯತೆಯ ನಿಶ್ಶಬ್ಧ ವಾತಾವರಣ. ನಮ್ಮ ಮಕ್ಕಳನ್ನು ಹೀಗೇ ಬದುಕುವಂತೆ ಮಾಡುವುದಕ್ಕಿಂತ ಅವರನ್ನು ಅವರ ಬದುಕು ಬದುಕುವಂತೆ ಮಾಡಿ, ಅವರಿಗೂ ನಮ್ಮ ವಾತಾವರಣದ ಸೆಖೆ, ಚಳಿ, ಗಾಳಿ, ಮಳೆ, ಬಿಸಿಲಿನ ಪರಿಚಯ ಮಾಡಿಸಿ, ನಮ್ಮ ಹೆಣ್ಣುಮಕ್ಕಳನ್ನು ಮಾತ್ರ ತಿದ್ದುವ ಭ್ರಮೆಯಿಂದ ಹೊರಬಂದು ಗಂಡುಮಕ್ಕಳಿಗೆ ಜೀವಿಸಲು ಹೇಳಿಕೊಡಿ…ಹೀಗೆ ಸಾಗಿತ್ತು ಅರಿವಿನ ಹಾಡು. ಕೊನೆ¿ಲ್ಲಿ ನೆರೆದಿದ್ದ ಮಕ್ಕಳಿಗೆ ಅವರೆಸೆದ ಒಂದು ಪ್ರಶ್ನೆ ಕೊಕೊ ಕೋಲಾದಂತ ಪಾನೀಯಗಳನ್ನು ಕುಡಿಯುವವರೆಷ್ಟು ಎಂದಾಗ ಸುಮಾರು 90ಶೇಕಡಾ ಮಕ್ಕಳು ಕೈ ಎತ್ತುತ್ತಾರೆ. ಅದರ ದುಷ್ಪರಿಣಾಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಕೊನೆಯಲ್ಲಿ ಅದಕ್ಕೇ ಸಂಬಂಧಿಸಿದ ಹಾಡೊಂದನ್ನು ಮಕ್ಕಳ ಬಳಿಯೇ ಹೇಳಿಸಿ, ಕೊನೆಯಲ್ಲಿ ಈಗ ಎಷ್ಟು ಜನ ಅದನ್ನು ಕುಡಿಯ ಬಯಸುತ್ತೀರಿ ಎಂದಾಗ…ಇಡೀ ಸಭಾಂಗಣದಲ್ಲಿ ಒಂದೂ ಕೈ ಮೇಲೇಳದ್ದು, ಮಕ್ಕಳನ್ನು ತಿದ್ದಲು ಒಳ್ಳೊಳ್ಳೆಯ ಮಾತುಗಳೇ ಸಾಕು, ದಂಡ ಆಯುಧಗಳಲ್ಲ ಎಂಬುದು ವೇದ್ಯವಾಯಿತು.

ಇದು ಹೆಸರೇ ಹೇಳುವಂತೆ ಅರಿವಿನ ಹಾಡು. ಬಹುಶಃ ನಮ್ಮ ಪ್ರತೀ ಮಕ್ಕಳಿಗೂ ಇದರ ಅವಶ್ಯಕತೆ ಇಂದು ಎಂದಿಗಿಂತ ಹೆಚ್ಚಿದೆ. ನಾದ ಅಲ್ಲಿ ಹರಿಸಿದ ಅರಿವಿನ ಹಾಡುಗಳ ನಿರಂತರ ಹರಿವು ನಮ್ಮ ಮಕ್ಕಳಲ್ಲಿ ಮುಂದುವರಿಯುವಂತೆ ಮಾಡುವ ಕಾಯಕ, ತಮ್ಮೊಳಗೂ ಅದನ್ನು ಅನುಸರಿಸುವ ಜವಾಬ್ದಾರಿ ಹೆತ್ತವರದ್ದು.

ನಾದ ಮಣಿನಾಲ್ಕೂರು ಅವರ ಜೀವನ ಸಂದೇಶ ಮತ್ತು ಬದುಕಲು ಕಲಿಸುವ ಮಾತು-ಹಾಡುಗಳಿಗೆ ಡೋಲಕ್‌ ಮೂಲಕ ಸಾಥ್‌ ನೀಡಿದವರು ಸುದರ್ಶನ್‌.

ಅರೆಹೊಳೆ ಸದಾಶಿವ ರಾವ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಡಗುತಿಟ್ಟಿನ ಯಕ್ಷ ರಂಗದಲ್ಲಿ ಬಹುತೇಕ ಪ್ರಸಿದ್ಧ ಸ್ತ್ರೀವೇಷ ಕಲಾವಿದರು ನೇಪಥ್ಯಕ್ಕೆ ಸಂದ ಕಾಲದಲ್ಲಿ ಯಕ್ಷ ರಂಗಕ್ಕೆ ಬಂದವರು ಸ್ತ್ರೀ ವೇಷಧಾರಿ ನೀಲಕೋಡು...

  • ನೂರಾರು ವರ್ಷಗಳ ಹಿಂದೆ ನಾಟ್ಯಲೋಕದ ಅನಭಿಷಕ್ತ ಸಾಮ್ರಾಜ್ಞಯರಾಗಿ ಇತಿಹಾಸದಲ್ಲಿ ಹೆಸರನ್ನು ದಾಖಲಿಸಿ ಕಾಲಚಕ್ರದಲ್ಲಿ ಲೀನರಾದರೂ ತಮ್ಮ ಕಲಾಸಾಧನೆಯಿಂದಾಗಿ...

  • ಯಕ್ಷಬಳಗ ಹೊಸಂಗಡಿ ಸಂಘದ ವತಿಯಿಂದ ಈ ಬಾರಿಯ ವಾರ್ಷಿಕ ಸಮ್ಮಾನ ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಪೂಜಾರಿ ಬೆಜ್ಜಂಗಳ ಅವರಿಗೆ ಸಲ್ಲಲಿದೆ. ನಾರಾಯಾಣ ಪೂಜಾರಿ ಬೆಜ್ಜಂಗಳ...

  • ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಆಗಸ್ಟ್‌ ತಿಂಗಳ ತಾಳಮದ್ದಳೆಗೆ ಡಾ| ಕೋಳ್ಯೂರು ರಾಮಚಂದ್ರ ವಿಶೇಷ ಆಮಂತ್ರಿತರು. ಪ್ರಧಾನವಾಗಿ ಅವರು ಸ್ತ್ರೀ ಪಾತ್ರ...

  • ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಯೋಗದೊಂದಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ವೀರ ಬರ್ಭರೀಕ ಎನ್ನುವ...

ಹೊಸ ಸೇರ್ಪಡೆ