ಸತ್ಯದ ಸತ್ವ ಸಾರಿದ ಸತ್ಯಹರಿಶ್ಚಂದ್ರ

ಯಕ್ಷ ಮಿತ್ರ ಬಳಗದ ಪ್ರಸ್ತುತಿ

Team Udayavani, Nov 8, 2019, 4:09 AM IST

ಸತ್ಯರೂಢನಾದ ಭೂಪಾಲನಾರು ಎನ್ನುವ ಇಂದ್ರನ ಪ್ರಶ್ನೆಯೊಂದಿಗೆ ಕಥೆ ಆರಂಭ.ವಸಿಷ್ಠರು ಹರಿಶ್ಚಂದ್ರನ ಹೆಸರು ಸೂಚಿಸಿದಾಗ ಕೋಪಗೊಂಡು ವಿರೋಧಿಸಿದ ವಿಶ್ವಾಮಿತ್ರರು ಶಪಥಗೈದು ಸತ್ಯಾನ್ವೇಷಣೆಗೆ ಮುಂದಾಗುತ್ತಾರೆ.ಸಾಲದೆ ಪರೀಕ್ಷಿಸಿ ಕೈಸೋತು ಮುಂದೆ ಹರಿಶ್ಚಂದ್ರನ ಬದುಕಿನಲ್ಲಿ ಕಷ್ಟದ ಸಂದರ್ಭಗಳನ್ನು ಸೃಷ್ಟಿಸುತ್ತಾರೆ.

ಆಲೂರು- ಹಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದ ಪ್ರಯುಕ್ತ “ಯಕ್ಷ ಮಿತ್ರ ಬಳಗ’ದ ಜನ್ಸಾಲೆ ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕರುಣಾರಸ ಪ್ರಧಾನವಾದ ಜಾನಕೈ ತಿಮ್ಮಪ್ಪ ವೆಂಕಪ್ಪ ಹೆಗಡೆ ವಿರಚಿತ “ಸತ್ಯ ಹರಿಶ್ಚಂದ್ರ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

ಸತ್ಯರೂಢನಾದ ಭೂಪಾಲನಾರು ಎನ್ನುವ ಇಂದ್ರನ ಪ್ರಶ್ನೆಯೊಂದಿಗೆ ಕಥೆ ಆರಂಭ.ವಸಿಷ್ಠರು ಹರಿಶ್ಚಂದ್ರನ ಹೆಸರು ಸೂಚಿಸಿದಾಗ ಕೋಪಗೊಂಡು ವಿರೋಧಿಸಿದ ವಿಶ್ವಾಮಿತ್ರರು ಶಪಥಗೈದು ಸತ್ಯಾನ್ವೇಷಣೆಗೆ ಮುಂದಾಗುತ್ತಾರೆ.ಸಾಲದೆ ಪರೀಕ್ಷಿಸಿ ಕೈಸೋತು ಮುಂದೆ ಹರಿಶ್ಚಂದ್ರನ ಬದುಕಿನಲ್ಲಿ ಕಷ್ಟದ ಸಂದರ್ಭ ಗಳನ್ನು ಸೃಷ್ಟಿಸುತ್ತಾರೆ.ವಿಶ್ವಾಮಿತ್ರರೇ ಸೃಷ್ಟಿಸಿದ ಮಾತಾಂಗ ಕನ್ಯೆಯರ ನಾಟ್ಯಕ್ಕೆ ಮನಸೋತ ಹರಿಶ್ಚಂದ್ರನನ್ನೆ ಮದುವೆಯಾಗುವಂತೆ ಪೀಡಿಸಿ, ತಿರಸ್ಕರಿಸಿದಾಗ ಕುಪಿತರಾದ ವಿಶ್ವಾಮಿತ್ರರು ಬದಲಿಯಾಗಿ ರಾಜ್ಯವನ್ನೆ ಕೇಳುತ್ತಾರೆ.ಹಿಂದೆ ಪಡೆದ ದಾನವನ್ನು ಕೊಡುವಂತೆ ಕಾಡಲು ಶಿಷ್ಯನಾದ ನಕ್ಷತ್ರಿಕನನ್ನು ಹರಿಶ್ಚಂದ್ರ,ಚಂದ್ರಮತಿ ಮತ್ತು ಲೋಹಿತಾಶ್ವರೊಂದಿಗೆ ಕಳುಹಿಸುತ್ತಾರೆ.ಮಾರ್ಗಮಧ್ಯದಲ್ಲಿ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿ ಕಾಶಿ ಪಟ್ಟಣ ಸೇರಿ ಓರ್ವ ಬ್ರಾಹ್ಮಣನಿಗೆ ಚಂದ್ರಮತಿ ಮತ್ತು ಲೋಹಿತಾಶ್ವರನ್ನು ಮಾರಿ ನಕ್ಷತ್ರಿಕನ ಋಣಸಂದಾಯ ಹಾಗೂ ತನ್ನನ್ನೆ ಮಾರಿಕೊಂಡು ವೀರಬಾಹುನಿಂದ ವಿಶ್ವಾಮಿತ್ರರ ಋಣತೀರಿಸಿ ಹರಿಶ್ಚಂದ್ರ ಸ್ಮಶಾನದಲ್ಲಿ ಚಾಂಡಾಳನಾಗುತ್ತಾನೆ.ಬ್ರಾಹ್ಮಣರ ಮನೆಯಲ್ಲಿದ್ದ ಲೋಹಿತಾಶ್ವ ಕಟ್ಟಿಗೆ ತರಲು ಕಾಡಿಗೆ ಹೋದಾಗ ವಿಷಸರ್ಪ ಕಡಿದು ಮಡಿದ ಸುದ್ದಿ ತಿಳಿದ ಚಂದ್ರಮತಿ ನೆಲ ತೆರಿಗೆ ನೀಡದೆ ಸ್ಮಶಾನದಲ್ಲಿ ಶವ ಸುಡಲು ಮುಂದಾದಾಗ ಹರಿಶ್ಚಂದ್ರ ತಡೆದು ನೆಲ ತೆರಿಗೆ ನೀಡುವಂತೆ ಹೇಳುತ್ತಾನೆ.ಮಡಿದವನು ತನ್ನ ಪುತ್ರನೇ,ತಂದವಳು ಮಡದಿ ಚಂದ್ರಮತಿಯೇ ಎಂದು ತಿಳಿದು ಶೋಕಿಸುತ್ತಾನೆ.ತಿರುಗಿ ನೆಲ ತೆರಿಗೆ ತರಲು ಹೊರಟ ಚಂದ್ರಮತಿ,ವಿಶ್ವಾಮಿತ್ರರ ಜಾಲದಲ್ಲಿ ಸಿಲುಕಿ ಕಾಶಿ ರಾಜಪುತ್ರನನ್ನು ಕೊಂದ ಅಪರಾಧಿಯಾಗಿ ಹರಿಶ್ಚಂದ್ರನ ಕೈಯಿಂದಲೇ ಕೊಲ್ಲುವ ಶಿಕ್ಷೆಗೆ ಒಳಪಡುತ್ತಾಳೆ.ಮಡದಿ ಎಂದು ತಿಳಿದರೂ ರಾಜಾಜ್ಞೆ ಪಾಲಿಸಲು ಮುಂದುವರಿದಾಗ ಸಾಕ್ಷಾತ್‌ ಪರಶಿವ,ವಿಶ್ವಾಮಿತ್ರರು ಪ್ರತ್ಯಕ್ಷರಾಗಿ ಹರಿಶ್ಚಂದ್ರನ ಸತ್ಯವನ್ನು ಮೆಚ್ಚಿ ಲೋಕಮುಖಕ್ಕೆ ಸಾರುತ್ತಾರೆ.ಈ ಕಥಾಹಂದರಕ್ಕೆ ನ್ಯಾಯ ಒದಗಿಸಿ ರಂಗದಲ್ಲಿ ಕಟ್ಟಿಕೊಟ್ಟಿದ್ದು ಅಭಿನಂದಾರ್ಹ.

ಇಂದ್ರನ ಸಭೆಯ ಪ್ರಶ್ನೆಗೆ ಸಾತ್ವಿಕ ನೆಲೆಯಲ್ಲಿ ಉತ್ತರಿಸಿ ಪ್ರಬುದ್ಧತೆ ಮರೆದ ವಸಿಷ್ಠರಾಗಿ ಕಾಣಿಕೊಂಡದ್ದು ಈಶ್ವರ್‌ ನಾಯ್ಕ ಮಂಕಿ. ಕಡುಕೋಪಿ ವಿಶ್ವಾಮಿತ್ರರಾಗಿ ಜೀವ ತುಂಬಿದವರು ಜಲವಳ್ಳಿ ವಿದ್ಯಾಧರ ರಾವ್‌.ಹರಿಶ್ಚಂದ್ರನಾಗಿ ಮೆರುಗು ತಂದವರು ಕೃಷ್ಣ ಯಾಜಿ ಬಳ್ಕೂರು.ವನ ಪಾಲಕ ಹಾಗೂ ಬ್ರಾಹ್ಮಣರಾಗಿ ಹಾಸ್ಯದ ಹೊನಲನ್ನು ಹರಿಸಿದವರು ಶ್ರೀಧರ್‌ ಭಟ್‌ ಕಾಸರಗೋಡು. ಮಾತಾಂಗ ಕನ್ಯೆಯರಾಗಿ ನೃತ್ಯ ವೈಭವವನ್ನು ಉಣಬಡಿಸಿದವರು ನಾಗರಾಜ ದೇವಲ್ಕುಂದ ಹಾಗೂ ನಾಗರಾಜ ಕುಂಕಿಪಾಲ. ಚಂಡೆ- ಮದ್ದಳೆಯಲ್ಲಿ ಸಹಕರಿಸಿದವರು ಸುಜನ್‌ ಹಾಲಾಡಿ ಹಾಗೂ ಸುನಿಲ್‌ ಭಂಡಾರಿ ಕಡತೋಕ.

ನಕ್ಷತ್ರಿಕನಾಗಿ ಕಾಡಿದವರು ಹಳ್ಳಾಡಿ ಜಯರಾಮ ಶೆಟ್ಟಿ. ಚಂದ್ರಮತಿಯ ಪಾತ್ರಕ್ಕೆ ಜೀವ ನೀಡಿದವರು ಶಶಿಕಾಂತ್‌ ಶೆಟ್ಟಿ ಕಾರ್ಕಳ.ಲೋಹಿತಾಶ್ವನಾಗಿ ಸನ್ಮಯ್‌ ಭಟ್‌, ಮನೆಯೊಡತಿಯಾಗಿ ನಾಗರಾಜ ದೇವಲ್ಕುಂದ, ವೀರಬಾಹುವಾಗಿ ನರಸಿಂಹ ಗಾಂವ್ಕರ್‌ ಹಾಗೂ ಈಶ್ವರ ಮತ್ತು ಇಂದ್ರನಾಗಿ ಪ್ರಣವ್‌ ಭಟ್‌ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದರು.ಇಡೀ ಪ್ರಸಂಗಕ್ಕೆ ಕರುಣಾ ರಸದ ಕಳೆಕೊಟ್ಟು ಪ್ರೇಕ್ಷಕರನ್ನು ರಂಜಿಸಿದವರು ಗಾನ ಸಾರಥಿ ರಾಘವೇಂದ್ರ ಆಚಾರ್ಯ ಗಾಯನ ಇಂಪು ನೀಡಿತು.

ರಾಘವೇಂದ್ರ. ಡಿ.ಆಲೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ