
Dental Care: ದಂತ ವೈದ್ಯಕೀಯ ಆರೈಕೆ ತ್ರೈಮಾಸಿಕ ತಪಾಸಣೆ ಯಾಕೆ ಮುಖ್ಯ
Team Udayavani, Oct 1, 2023, 8:58 AM IST

ದಂತ ವೈದ್ಯಕೀಯವು ದುಬಾರಿಯಲ್ಲ; ಆದರೆ ದಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದು ದುಬಾರಿಯಾಗಿ ಪರಿಣಮಿಸಬಲ್ಲುದು!
ಜನರಿಗೆ ದಂತ ವೈದ್ಯರ ಬಳಿ ಇರುವ ದಂತವೈದ್ಯಕೀಯ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಎಂದರೆ ಏನೋ ಒಂದು ಬಗೆಯ ಹಿಂಜರಿಕೆ. ಇದರಿಂದಾಗಿ ದಂತಗಳ ಆರೈಕೆಗಾಗಿ ದಂತ ವೈದ್ಯರ ಭೇಟಿಯನ್ನು ಮುಂದೂಡುತ್ತಾರೆ ಅಥವಾ ವಿಳಂಬಿಸುತ್ತಾರೆ. ಆದರೆ ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಂಡರೆ ನೋವು ತಿನ್ನುವುದು ಕಡಿಮೆಯಾಗುತ್ತದೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ದಂತ ಆರೋಗ್ಯ ನಿಮ್ಮದಾಗುತ್ತದೆ.
ದಂತ ವೈದ್ಯಕೀಯವು ದುಬಾರಿಯಲ್ಲ; ಆದರೆ ದಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದು ದುಬಾರಿಯಾಗಿ ಪರಿಣಮಿಸಬಲ್ಲುದು! ಪ್ರತೀ ಮೂರು ತಿಂಗಳುಗಳಿಗೆ ಒಮ್ಮೆ ದಂತ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳುವುದು ನಿಮ್ಮ ಸದ್ಯದ ಒಟ್ಟು ಆರೋಗ್ಯದ ಮೇಲೆ ಮಾತ್ರವಲ್ಲ ಭವಿಷ್ಯದ ಆರೋಗ್ಯಕ್ಕಾಗಿಯೂ ಉತ್ತಮ ಬಂಡವಾಳ ಹೂಡಿಕೆಯಾಗಿದೆ. ಪ್ರತೀ ಮೂರು ತಿಂಗಳುಗಳಿಗೆ ಒಮ್ಮೆ ದಂತವೈದ್ಯರ ಭೇಟಿಯನ್ನು ಕಡ್ಡಾಯವಾಗಿ ಏಕೆ ನಡೆಸಬೇಕು ಎನ್ನುವುದಕ್ಕೆ ಇಲ್ಲಿ ಐದು ಕಾರಣಗಳಿವೆ.
ಹಲ್ಲು ಕೆಡುವುದು
ಹಲ್ಲುಗಳ ಹೊರಮೈ ಅಥವಾ ಎನಾಮಲ್ ನಶಿಸಲು ಆರಂಭವಾದಾಗ ಹಲ್ಲು ಕೆಡಲು ಪ್ರಾರಂಭವಾಗುತ್ತದೆ. ಬ್ಯಾಕ್ಟೀರಿಯಾಗಳು ಮತ್ತು ಆಹಾರ, ಪಾನೀಯಗಳು ಉಳಿಕೆಗಳು ಜತೆಗೂಡಿ ಉಂಟಾಗುವ ಆಮ್ಲಿಯ ಪ್ರಕ್ರಿಯೆಯಿಂದ ಇದು ಉಂಟಾಗುತ್ತದೆ. ದಂತ ವೈದ್ಯಕೀಯ ತಪಾಸಣೆಯಿಂದ ಹಲ್ಲು ಕೆಡುತ್ತಿರುವುದರ ಆರಂಭಿಕ ಲಕ್ಷಣಗಳನ್ನು ಪತ್ತೆ ಹಚ್ಚಿ, ದುರ್ಬಲಗೊಂಡಿರುವ ಎನಾಮಲ್‌ನ್ನು ಸಶಕ್ತಗೊಳಿಸುವ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ.
ಪ್ಲೇಕ್. ಮಡ್ಡಿ, ದಂತಕುಳಿಗಳು
ಅತ್ಯಂತ ಕಾಳಜಿಯುಕ್ತವಾಗಿ ಬ್ರಶ್ ಮಾಡುವುದು ಮತ್ತು ಫ್ಲಾಸಿಂಗ್ ಮಾಡುವುದರ ಹೊರತಾಗಿಯೂ ಬಾಯಿಯಲ್ಲಿ ಇವುಗಳು ಮುಟ್ಟದ ಸ್ಥಳಗಳಿರುತ್ತವೆ. ಇಲ್ಲಿ ಪ್ಲೇಕ್ ಸಂಗ್ರಹವಾದಾಗ ಅದನ್ನು ನಿರ್ಮೂಲಗೊಳಿಸುವುದು ಕಷ್ಟವಾಗುತ್ತದೆ. ಇದರಿಂದ ಪ್ಲೇಕ್ ಇನ್ನಷ್ಟು ಸಂಗ್ರಹವಾಗಿ ಮಡ್ಡಿಯಾಗುತ್ತದೆ, ಇದನ್ನು ದಂತವೈದ್ಯಕೀಯ ವೃತ್ತಿಪರರ ಸಹಾಯವಿಲ್ಲದೆ ಶುಚಿಗೊಳಿಸುವುದು ಕಷ್ಟವಾಗುತ್ತದೆ.
ಅಂತರ್ಗತ ಸಮಸ್ಯೆಗಳು
ದಂತವೈದ್ಯರು ಸಾಮಾನ್ಯವಾಗಿ ವರ್ಷಕ್ಕೊಂದು ಬಾರಿ ಹೊಸದಾಗಿ ಹಲ್ಲುಗಳ ಎಕ್ಸ್-ರೇ ಮಾಡಿಸಲು ಹೇಳುತ್ತಾರೆ. ಬಾಯಿಯ ತಪಾಸಣೆಯ ಜತೆಗೆ ಇದು ಯಾವುದಾದರೂ ಅಂತರ್ಗತ ಸಮಸ್ಯೆಗಳು, ಅನಾರೋಗ್ಯಗಳು ಇವೆಯೇ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಇಲ್ಲವಾದರೆ ದವಡೆ, ತೊಂದರೆಗೊಳಗಾದ ಹಲ್ಲು ಮತ್ತಿತರ ತೊಂದರೆಗಳು ಗಮನಕ್ಕೆ ಬಾರದೆ ಉಳಿದುಕೊಳ್ಳುತ್ತವೆ. ಇದಲ್ಲದೆ, ಜನರು ಮನೆಯಲ್ಲಿಯೇ ಸ್ವತಃ ಪತ್ತೆಹಚ್ಚಲಾಗದ, ದಂತವೈದ್ಯರು ಮಾತ್ರ ತಪಾಸಣೆಯಿಂದ ಪತ್ತೆಹಚ್ಚಬಹುದಾದ ಎಷ್ಟೋ ದಂತವೈದ್ಯಕೀಯ ಸಮಸ್ಯೆಗಳು ಇರುತ್ತವೆ. ಉದಾಹರಣೆಗೆ, ವಸಡಿನ ಆಳದಲ್ಲಿ ಪಾಕೆಟ್‌ಗಳು ಉಂಟಾಗುವುದು ಪರಿದಂತೀಯ ಕಾಯಿಲೆಯ ಗಂಭೀರ ಚಿಹ್ನೆಯಾಗಿರುತ್ತದೆ. ಇದನ್ನು ಮನೆಯಲ್ಲಿಯೇ ರೋಗಿ ಸ್ವತಃ ಪರೀಕ್ಷೆಯಿಂದ ಪತ್ತೆ ಹಚ್ಚುವುದು ಅಸಾಧ್ಯ.
ಬಾಯಿಯ ಆರೋಗ್ಯ
ನೀವು ಹಲ್ಲುಗಳ ನಿಯಮಿತ ತಪಾಸಣೆಗೆ ತೆರಳಿದ ವೇಳೆ ನಿಮ್ಮ ದಂತವೈದ್ಯರು ನಿಮ್ಮ ಬಾಯಿಯ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸುತ್ತಾರೆ. ಧೂಮಪಾನದಂತಹ ಕೆಟ್ಟ ಹವ್ಯಾಸಗಳು, ಹಲ್ಲು ಕಡಿಯುವುದು, ಹಲ್ಲುಗಳನ್ನು ಬಿರುಸಾಗಿ ಉಜ್ಜುವುದು ಮತ್ತು ಆಹಾರ ಶೈಲಿಯಂತಹವುಗಳಿಂದ ಹಲ್ಲು ಅಥವಾ ಬಾಯಿಗೆ ತೊಂದರಯಾಗಿದ್ದರೆ ಅದು ದಂತವೈದ್ಯರ ತಪಾಸಣೆಯ ವೇಳೆ ಗಮನಕ್ಕೆ ಬರುತ್ತದೆ. ಬಳಿಕ ನಿಮ್ಮ ದಂತವೈದ್ಯರು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಬಾಯಿಯ ಜತೆಗೆ ದೇಹಾರೋಗ್ಯವನ್ನೂ ಉತ್ತಮಪಡಿಸಿಕೊಳ್ಳಲು ಸಹಾಯವಾಗುವ ಸಲಹೆಗಳನ್ನು ನೀಡುತ್ತಾರೆ.
ಹಲ್ಲು, ಬಾಯಿಯ ವೃತ್ತಿಪರ ಶುಚಿಗೊಳಿಸುವಿಕೆ
ನೀವು ದಿನಂಪ್ರತಿ ನಡೆಸುವ ಹಲ್ಲುಜ್ಜುವಿಕೆ ಮತ್ತು ಫ್ಲಾಸಿಂಗ್‌ನಿಂದ ನಿವಾರಿಸಲಾಗದ ಪ್ಲೇಕ್ ಮತ್ತು ಮಡ್ಡಿಗಳನ್ನು ನಿಮ್ಮ ನಿಯಮಿತ ದಂತವೈದ್ಯಕೀಯ ತಪಾಸಣೆಗೆ ವೇಳೆ ನಿಮ್ಮ ದಂತ ವೈದ್ಯರು ವೃತ್ತಿಪರವಾಗಿ ನಿರ್ಮೂಲಗೊಳಿಸಬಲ್ಲರು. ಪ್ಲೇಕ್ ಮತ್ತು ಮಡ್ಡಿ ಹೆಚ್ಚು ಸಂಗ್ರಹವಾದರೆ ಅದರಿಂದ ಹಲ್ಲು ಹುಳುಕಾಗುತ್ತದೆ, ಕೆಡುತ್ತದೆ, ವಸಡುಗಳು ಸೋಂಕಿಗೀಡಾಗಬಹುದು, ವಸಡುಗಳ ಉರಿಯೂತ ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಲ್ಲುಗಳು ಹಾಳಾದ ಬಳಿಕ μಲಿಂಗ್, ಕ್ರೌನ್ ಅಥವಾ ಇತರ ಹಲ್ಲು ಪುನರ್‌ಸ್ಥಾಪನೆಯ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬೇಕಾದ ಸ್ಥಿತಿ ಒದಗುವುದಕ್ಕಿಂತ ಮುಂಚಿತವಾಗಿ ನಿಯಮಿತವಾಗಿ ಹಲ್ಲು, ಬಾಯಿಯ ಶುಚಿಗೊಳಿಸುವ ಪ್ರಕ್ರಿಯೆಯನ್ನು ಮಾಡಿಸಿಕೊಳ್ಳುವುದು ಎಷ್ಟೋ ಮೇಲು.
ಆದ್ದರಿಂದ ನಿಯಮಿತವಾಗಿ ದಂತ ವೈದ್ಯರನ್ನು ಭೇಟಿ ಮಾಡುವುದು ಅತ್ಯಗತ್ಯವಾಗಿರುತ್ತದೆ.
-ಡಾ| ಆನಂದದೀಪ್ ಶುಕ್ಲಾ
ಓರಲ್ ಸರ್ಜರಿ ವಿಭಾಗ
ಎಂಸಿಒಡಿಎಸ್, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್ ಸರ್ಜರಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
