ಮಕ್ಕಳ ಉತ್ತಮ ಪೋಷಣೆ; ಜಂಕ್‌ ಫ‌ುಡ್‌ ದೂರವಿರಿಸುವುದು ಹೇಗೆ?

Team Udayavani, Sep 8, 2019, 5:15 AM IST

ನಿಜ, ಜಂಕ್‌ ಫ‌ುಡ್‌ ನಮ್ಮ ಮಕ್ಕಳಿಗೆ ಆರೋಗ್ಯಕರವಾದ ಆಹಾರವಲ್ಲ. ಹೆತ್ತವರಾಗಿ ನಮ್ಮ ಮಕ್ಕಳನ್ನು ಆರೋಗ್ಯಯುತವಾಗಿ ಇರಿಸುವುದು, ಆರೋಗ್ಯಪೂರ್ಣವಾದ ಆಹಾರ ಶೈಲಿಯನ್ನು ಅನುಸರಿಸಲು ಅವರಿಗೆ ಕಲಿಸಿಕೊಡುವುದು ನಮ್ಮ ಕರ್ತವ್ಯ. ಆರೋಗ್ಯಕರವಾದ ಆಹಾರಾಭ್ಯಾಸ, ಯಾವಾಗ – ಎಷ್ಟು ತಿನ್ನಬೇಕು ಎನ್ನುವ ನಿಯಂತ್ರಣ ಇತ್ಯಾದಿಗಳು ಹಾಗೂ ಆಹಾರಕ್ಕೆ ಸಂಬಂಧಿಸಿ ತಾವೇ ಉತ್ತಮ ಆಯ್ಕೆಗಳನ್ನು ಮಾಡಿಕೊಳ್ಳುವುದನ್ನು ನಮ್ಮ ಮಕ್ಕಳಿಗೆ ನಾವು ತಿಳಿಸಿಕೊಡಬೇಕಿದೆ.

ಎಳೆಯ ವಯಸ್ಸಿನಲ್ಲಿ ನಮ್ಮ ಮಕ್ಕಳು ಸೇವಿಸುವ ಜಂಕ್‌ ಫ‌ುಡ್‌ ಪ್ರಮಾಣವನ್ನು ಖಂಡಿತವಾಗಿಯೂ ನಾವೇ ಕಡಿಮೆ ಮಾಡಬೇಕಿದೆ. ಆ ವಯಸ್ಸಿನಲ್ಲಿ ಅವರಿಗೆ ಆಹಾರದಲ್ಲಿ ಆಯ್ಕೆಗಳನ್ನು ಮಾಡಿಕೊಳ್ಳಲು ಗೊತ್ತಿರುವುದಿಲ್ಲ. ಅಲ್ಲದೆ, ಯಾವೆಲ್ಲ ಬಗೆಯ ಆಹಾರಗಳಿವೆ, ಅವುಗಳಲ್ಲಿ ಯಾವುದು ಆರೋಗ್ಯಕರ ಎಂಬುದು ಕೂಡ ಮಕ್ಕಳಿಗೆ ತಿಳಿದಿರುವುದಿಲ್ಲ. ನಾವು ಏನನ್ನು ಕೊಡುತ್ತೇವೆಯೋ ಅದನ್ನು ಅವರು ಸೇವಿಸುತ್ತಾರೆ. ಸಣ್ಣ ಮಕ್ಕಳಿರುವಾಗ ಅವರಿಗೆ ನಾವು ಜಂಕ್‌ ಫ‌ುಡ್‌ ಕೊಡದೇ ಇದ್ದರೆ ಮುಂದೆ ಅವರು ದೊಡ್ಡವರಾಗುತ್ತ ಬರುವಾಗ ಜಂಕ್‌ ಫ‌ುಡ್‌ ಸೇವಿಸುವುದಕ್ಕಾಗಿ ವಿವಿಧ ಮೂಲಗಳಿಂದ ಆಮಿಷ, ಆಸೆ ಉಂಟಾದರೂ ಅದನ್ನು ಸುಲಭವಾಗಿ ನಿಯಂತ್ರಿಸಬಹುದು.

ಆದರೂ ಮಕ್ಕಳು ದೊಡ್ಡವರಾಗುತ್ತ ಬಂದ ಹಾಗೆ ಜಂಕ್‌ ಫ‌ುಡ್‌ನ‌ ರುಚಿ ಅವರಿಗೆ ಸಿಕ್ಕಿಯೇ ಸಿಗುತ್ತದೆ ಮತ್ತು ಅವರಲ್ಲಿ ಅದನ್ನು ತಿನ್ನುವ ಆಗ್ರಹವೇರ್ಪಡುತ್ತದೆ. ಹೆತ್ತವರು ಇಂತಹ ಸಂದರ್ಭಗಳಲ್ಲಿ ತೊಂದರೆಗೆ ಸಿಕ್ಕಿಬೀಳುತ್ತಾರೆ. ಮಗು ಒಮ್ಮೆ ಇಂತಹ ಜಂಕ್‌ ಫ‌ುಡ್‌ ರುಚಿ ನೋಡಿ ಅದನ್ನು ಹೆಚ್ಚು ತಿನ್ನಲಾರಂಭಿಸಿದಂತೆ ಆರೋಗ್ಯಯುತ ಆಹಾರ ಸೇವನೆ ಕಡಿಮೆಯಾಗುತ್ತ ಬರುತ್ತದೆ. ನಿಮ್ಮ ಮಕ್ಕಳ ಆರೋಗ್ಯಕ್ಕೆ ಜಂಕ್‌ ಫ‌ುಡ್‌ ಅಪಾಯಕಾರಿಯಾಗಿ ಪರಿಣಮಿಸುವುದು ಇಂತಹ ಸಂದರ್ಭ ಒದಗಿದಾಗಲೇ.

ಉಪಾಹಾರ, ತಿನಿಸುಗಳಾಗಿ ಆರೋಗ್ಯಕರ ಆಹಾರ ವಸ್ತುಗಳನ್ನೇ ನೀಡುವುದು, ಎಲ್ಲ ಮೂರು ಪ್ರಧಾನ ಊಟ – ಉಪಾಹಾರ ಸಂದರ್ಭಗಳಲ್ಲಿಯೂ ಇಂತಹ ಆಹಾರವಸ್ತುಗಳನ್ನೇ ನೀಡುವುದು, ಆಗಾಗ ಜಂಕ್‌ ಫ‌ುಡ್‌ಗಳನ್ನು ನೀಡದೆ ವಿಶೇಷ ಸಂದರ್ಭಗಳು, ಪಾರ್ಟಿಯಂತಹ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಜಂಕ್‌ ಆಹಾರಗಳನ್ನು ನೀಡುವ ಮೂಲಕ ನಾವು ನಮ್ಮ ಮಕ್ಕಳಲ್ಲಿ ಆರೋಗ್ಯಕರ ಆಹಾರ ಶೈಲಿಯನ್ನು ಬೆಳೆಸಬಹುದು. ಮಕ್ಕಳು ಸಣ್ಣವರಿರುವಾಗ ಅವರ ಆಹಾರ ಶೈಲಿಯಿಂದ ಹಿಡಿದು ಎಲ್ಲವನ್ನೂ ನಿಯಂತ್ರಿಸಲು ಬಹು ಸುಲಭ. ಮಕ್ಕಳು ದೊಡ್ಡವರಾದ ಬಳಿಕ ಜಂಕ್‌ ಆಹಾರವನ್ನು ದೂರ ಸರಿಸಲು ಹೇಳಿಕೊಡುವುದಕ್ಕಿಂತ ಆರೋಗ್ಯಕರ ಆಹಾರ ಶೈಲಿಯನ್ನು ಯಾಕೆ ರೂಢಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡಲು ಜಂಕ್‌ ಆಹಾರವನ್ನು ಒಂದು ಕಲಿಕೋಪಕರಣವಾಗಿ ಉಪಯೋಗಿಸಬೇಕು.

ವಿವಿಧ ಬಗೆಯ ಆಹಾರಗಳು ಮತ್ತು ಅವುಗಳ ಪೌಷ್ಟಿಕಾಂಶ ಮಹತ್ವ ಮತ್ತು ಮೌಲ್ಯದ ಬಗ್ಗೆ ನಾವು ತಿಳಿಸಿಹೇಳಬಹುದು. ಉದಾಹರಣೆಗೆ, ನಿಮ್ಮ ಮಗಳಿಗೆ ಉದ್ದವಾದ ಕೂದಲು ಬೆಳೆಸಿಕೊಳ್ಳಲು ಅತ್ಯಾಸಕ್ತಿ ಇದೆ ಎಂದುಕೊಳ್ಳಿ. ಆಗ, ಆಕೆಯ ಗೆಳತಿಯಂತೆ ಉದ್ದನೆಯ, ಸುಂದರವಾದ ಕೇಶರಾಶಿ ಬೆಳೆಯುವುದಕ್ಕೆ ಯಾವುದನ್ನೆಲ್ಲ ತಿನ್ನಬೇಕು ಎಂಬುದನ್ನು ಮನವರಿಕೆ ಮಾಡಿಕೊಡಬಹುದು. ಹುಡುಗರಾದರೆ, ಉತ್ತಮ ಕ್ರಿಕೆಟಿಗನಾಗಲು ಬೇಕಾದ ದೇಹದಾಡ್ಯì ಪಡೆಯಲು, ಗಟ್ಟಿಮುಟ್ಟಾದ ಸ್ನಾಯುಗಳನ್ನು ಗಳಿಸಲು ಆರೋಗ್ಯಯುತ ಆಹಾರ ಸೇವಿಸಿದರೆ ಮಾತ್ರ ಸಾಧ್ಯ ಎಂಬುದಾಗಿ ತಿಳಿಹೇಳಬಹುದು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಉತ್ತಮ, ಸಮತೋಲಿತ, ಪೌಷ್ಟಿಕಾಂಶ ಸಮೃದ್ಧವಾದ ಆರೋಗ್ಯಪೂರ್ಣ ಆಹಾರ ಸೇವನೆಯ ಮಹತ್ವವನ್ನು ಮನದಟ್ಟು ಮಾಡಿಕೊಡುವುದು ಬಹಳ ಮುಖ್ಯವಾಗಿದೆ. ಕೆಲವು ಆಹಾರಗಳನ್ನು ಸ್ವಲ್ಪವೇ, ಇನ್ನು ಕೆಲವು ಆಹಾರಗಳನ್ನು ಹೆಚ್ಚು ಹೆಚ್ಚು ಯಾಕಾಗಿ ಸೇವಿಸಬೇಕು; ನಮ್ಮ ದೇಹ ಆರೋಗ್ಯಪೂರ್ಣವಾಗಿ ಬೆಳೆಯಲು ಯಾವೆಲ್ಲ ಆಹಾರಗಳು ನಮ್ಮ ಹೊಟ್ಟೆ ಸೇರಬೇಕು; ಅನಾರೋಗ್ಯಕರ ಆಹಾರಗಳು ಯಾಕಾಗಿ ಆರೋಗ್ಯಕ್ಕೆ ಪೂರಕವಲ್ಲ, ಅವುಗಳು ನಮ್ಮ ದೇಹದಲ್ಲಿ ಯಾವೆಲ್ಲ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ ಇತ್ಯಾದಿಗಳನೆಲ್ಲ ಎಳೆಯ ವಯಸ್ಸಿನಲ್ಲಿಯೇ ನಮ್ಮ ಮಕ್ಕಳಿಗೆ ಮನವರಿಕೆ ಆಗಬೇಕು. ಅಪರೂಪಕ್ಕೆ ಒಮ್ಮೆ ಜಂಕ್‌ ಫ‌ುಡ್‌ ತಿಂದು ಖುಷಿ ಪಡುವುದು ಅಪರಾಧವೇನಲ್ಲ; ಆದರೆ ದಿನವೂ ಮೂರು ಹೊತ್ತೂ ಅದನ್ನೇ ತಿಂದರೆ ಅಪಾಯ ಖಚಿತ; ಅವುಗಳಲ್ಲಿ ಸ್ವಲ್ಪವೂ ಪೌಷ್ಟಿಕಾಂಶಗಳಿಲ್ಲ ಎಂಬುದನ್ನು ನಾವು ಮಕ್ಕಳಿಗೆ ಹೇಳಿಕೊಡಬೇಕು.

ನಮ್ಮ ಮನೆಯಲ್ಲಿ ಜಂಕ್‌ ಆಹಾರವನ್ನು ಸಂಪೂರ್ಣ ನಿಷೇಧಿಸಿದೆವು, ಎಳೆಯದರಲ್ಲಿ ಅವುಗಳ ಪರಿಚಯವೇ ಮಕ್ಕಳಿಗೆ ಇರಲಿಲ್ಲ ಎಂದಿಟ್ಟುಕೊಳ್ಳಿ. ಮಕ್ಕಳು ಬೆಳೆದು ಆಹಾರದ ವಿಚಾರದಲ್ಲಿ ಅವರು ಹೆಚ್ಚು ಸ್ವಾವಲಂಬಿಗಳಾದಾಗ ಅದು ತನಕ ನಿಷೇಧಿಸಿದ್ದನ್ನು ಹೆಚ್ಚು ಪ್ರಯತ್ನಿಸುವ ಆಸಕ್ತಿ ಅವರಲ್ಲಿ ಉಂಟಾಗುತ್ತದೆ. ಆಗ ಇಂತಹ ಆಹಾರಗಳನ್ನು ಏಕೆ ತಿನ್ನಬಾರದು ಎಂಬುದು ಅವರಿಗೆ ಅರ್ಥವಾಗುವುದಕ್ಕಿಂತ ಅವುಗಳ ರುಚಿಯ ಆಕರ್ಷಣೆಯೇ ಹಚ್ಚಿರುತ್ತದೆ.

ನಾವು ನಮ್ಮ ಮಕ್ಕಳಿಗೆ ಜಂಕ್‌ ಆಹಾರವನ್ನು “ವರ್ಜಿಸುವುದನ್ನು’ ಕಲಿಸಬೇಕಾಗಿಲ್ಲ; ಅವುಗಳು ಏಕೆ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಮನದಟ್ಟು ಮಾಡಿಕೊಟ್ಟು ಅವುಗಳನ್ನು ಮಿತವಾಗಿ ತಿನ್ನುವುದನ್ನು ಹೇಳಿಕೊಡಬೇಕು. ಇದನ್ನು ಹೇಳಿಕೊಟ್ಟರೆ ಮುಂದೆ ಅವರು ತಾವೇ ಜವಾಬ್ದಾರಿಯುತ ಆಹಾರ ಆಯ್ಕೆಗಳನ್ನು ಮಾಡಿಕೊಳ್ಳುವಷ್ಟು ಸಮರ್ಥರಾಗಿ ಬೆಳೆಯುತ್ತಾರೆ. ನಾವು ನಮ್ಮ ಮಕ್ಕಳ ಆಯ್ಕೆಗಳನ್ನು ಸದಾ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ; ಆದರೆ ಅವರ ಭವಿಷ್ಯದ ಬದುಕಿನಲ್ಲಿ ಜವಾಬ್ದಾರಿಯುತ ಆಯ್ಕೆಗಳನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು ತಕ್ಕ ಮಾಹಿತಿಗಳ ಮೂಲಕ ರೂಪಿಸಬಹುದು.

ಮಕ್ಕಳು ಉತ್ತಮ ಆಹಾರಾಭ್ಯಾಸ
ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸಿ
ನೀವು ಅವರಿಗೆ ಹೇಳಿಕೊಟ್ಟಂತೆ ನೀವೂ ನಡೆದುಕೊಳ್ಳಿ: ನೀವು ಮಾಡಬಹುದಾದ ಅತ್ಯುತ್ತಮ ಕೆಲಸ ಎಂದರೆ ಮಕ್ಕಳಿಗೆ ಆದರ್ಶ ರೋಲ್‌ ಮಾಡೆಲ್‌ ಆಗುವುದು. ಅಂದರೆ, ಮಕ್ಕಳಿಗೆ ಏನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದನ್ನು ನಿಮ್ಮ ಮೂಲಕ ಅವರು ತಿಳಿದು, ರೂಢಿಸಿಕೊಳ್ಳುವಂತಿರಬೇಕು. ಎಲ್ಲ ಆಹಾರ ಗುಂಪುಗಳಿಂದ ವೈವಿಧ್ಯವಾದ ಆಹಾರಗಳನ್ನು ದಿನನಿತ್ಯದ ಆಹಾರಾಭ್ಯಾಸದಲ್ಲಿ ಸೇರಿಸಿಕೊಳ್ಳಿ. ಎಲ್ಲವನ್ನೂ ಮಿತವಾಗಿ ಸೇವಿಸಿ ಮತ್ತು ವ್ಯಾಯಾಮವನ್ನು ದಿನಚರಿಯಲ್ಲಿ ಸೇರಿಸಿಕೊಳ್ಳಿ.
ಆಹಾರಗಳನ್ನು ನಿಷೇಧಿಸಬೇಡಿ: ಮಕ್ಕಳಿಗೆ ಪಾರ್ಟಿ, ಸಮಾರಂಭ ಇತ್ಯಾದಿಗಳಲ್ಲಿ ಕೇಕ್‌, ಚಾಕಲೇಟ್‌, ಐಸ್‌ಕ್ರೀಂ, ಪಿಜಾl ಇತ್ಯಾದಿಗಳು ಕಣ್ಮನ ಸೆಳೆದೇ ಸೆಳೆಯುತ್ತವೆ. ತಿನ್ನಲೇಬಾರದು ಎನ್ನಬೇಡಿ, ತಿನ್ನಲು ಬಿಡಿ; ಆದರೆ ಅವರ ದೇಹಕ್ಕೆ ಅಗತ್ಯವಾದದ್ದು ಯಾವುದು, ಯಾಕೆ ಜಂಕ್‌ ಆಹಾರಗಳನ್ನು ಮಿತವಾಗಿ ಸೇವಿಸಬೇಕು ಎನ್ನುವುದನ್ನು ತಿಳಿಹೇಳಿ. ಪ್ರತಿದಿನವೂ ಪ್ರತಿ ಹೊತ್ತು ಕೂಡ ಸಂಪೂರ್ಣ ಸಮತೋಲಿತವಾದ ಆಹಾರವನ್ನು ಉಣ್ಣುವುದು ಕಷ್ಟಸಾಧ್ಯ. ವೈವಿಧ್ಯಮಯವಾದ ಆರೋಗ್ಯಪೂರ್ಣ ಆಹಾರವಸ್ತುಗಳನ್ನು ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಸೇವಿಸುವುದು ನಮ್ಮ ಉದ್ದೇಶವಾಗಿರಬೇಕು.

ಮಕ್ಕಳನ್ನು ಅಡುಗೆ ಕೋಣೆಗೆ ಕರೆದೊಯ್ಯಿರಿ: ಅಡುಗೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಡುವುದು, ತರಕಾರಿಗಳ ಸಿಪ್ಪೆ ತೆಗೆಯುವುದು, ಬಟಾಣಿ ಬಿಡಿಸಿಕೊಡುವುದು, ಪದಾರ್ಥಗಳನ್ನು ಕಲಸುವುದು, ಬ್ರೆಡ್‌ ಸ್ಲೆ„ಸ್‌ಗಳನ್ನು ಕಾಯಿಸುವುದು ಇತ್ಯಾದಿ ಅಡುಗೆ ಕೆಲಸಗಳಲ್ಲಿ ಸಣ್ಣ ವಯಸ್ಸಿನಿಂದಲೇ ಮಕ್ಕಳನ್ನು ಸೇರಿಸಿಕೊಳ್ಳಿ. ಅಡುಗೆ ಮಾಡುವುದರಲ್ಲಿ ತಾನೂ ಭಾಗಿಯಾಗಿದ್ದೇನೆ ಎನ್ನುವುದು ಆಯಾ ಖಾದ್ಯವನ್ನು ಸೇವಿಸುವ ಉತ್ಸಾಹವನ್ನು ಹೆಚ್ಚಿಸುತ್ತದೆ.

ಹೊಸ ಖಾದ್ಯಗಳನ್ನು ಪ್ರಯತ್ನಿಸಿ: ಮಕ್ಕಳ ಇಷ್ಟದ ಆಹಾರಗಳನ್ನು ಹೊಸ ಹೊಸ ಸಾಮಗ್ರಿಗಳ ಜತೆಗೆ ಸೇರ್ಪಡೆಗೊಳಿಸಿ ಹೊಸ ಹೊಸ ಖಾದ್ಯಗಳನ್ನು ತಯಾರಿಸಿಕೊಡಿ. ಹಾಲು ಕುಡಿಯುವುದನ್ನು ಇಷ್ಟ ಪಡದ ಮಕ್ಕಳಿಗೆ ಅಡುಗೆಗಳಲ್ಲಿ ಕ್ರೀಮ್‌ ಹಾಕಿಕೊಡುವ ಮೂಲಕ ಹೊಸ ರುಚಿಯನ್ನು ಒದಗಿಸಬಹುದು. ಹಾಗೆಯೇ ಹಸಿರು ಸೊಪ್ಪು ತರಕಾರಿಗಳನ್ನು ಬೇಯಿಸಿ, ಸೋಸಿ ಪ್ಯೂರಿಯಾಗಿ ಮಾಡಿ ಪದಾರ್ಥಗಳಿಗೆ ಸೇರಿಸಬಹುದು.

ಮಕ್ಕಳು ಖಾದ್ಯಗಳ ಬಗ್ಗೆ ವಿಸ್ಮಯಗೊಳ್ಳುವಂತೆ ಮಾಡಿ: ಮಕ್ಕಳಿಗೆ ಹೊಸ ಹೊಸ ಆರೋಗ್ಯಕರ ಖಾದ್ಯಗಳನ್ನು ಉಣ್ಣಲು – ತಿನ್ನಲು ಕೊಡಿ; ಅವುಗಳ ರುಚಿಯ ಬಗ್ಗೆ ಕೇಳಿ. ಆಹಾರ ಸೇವನೆ ಒಂದು ಸಂತೋಷ – ಉಲ್ಲಾಸದ ಸಂಗತಿಯಾಗಿರುವಂತೆ ನೋಡಿಕೊಳ್ಳಿ.

-ಅರುಣಾ ಮಲ್ಯ ,
ಪಥ್ಯಾಹಾರ ತಜ್ಞೆ
ಕೆಎಂಸಿ ಆಸ್ಪತ್ರೆ, ಮಂಗಳೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ