ಅಂಜದೆ ಬೆಳೆಯಿರಿ ಅಂಜೂರ

Team Udayavani, Apr 29, 2019, 6:20 AM IST

ಅಂಜೂರ ಬೆಳೆಯವುದು ಸುಲಭ. ಕಡಿಮೆ ನೀರಿರುವ ಪ್ರದೇಶದಲ್ಲಿಯೂ ಇದನ್ನು ಬೆಳೆಯಬಹುದು. ಸ್ವಲ್ಪ ಹೆಚ್ಚಿನ ನಿಗಾವಹಿಸಬೇಕಷ್ಟೇ. ಅಂಜೂರಕ್ಕೆ ಒಳ್ಳೆಯ ಮಾರುಕಟ್ಟೆ ದರ ಇರುವುದರಿಂದ, ಇದನ್ನು ಬೆಳೆದರೆ ಲಾಭ ಗ್ಯಾರಂಟಿ.

ಕಡಿಮೆ ಖರ್ಚಿನಲ್ಲಿ, ಏನೂ ಕಿರಿಕಿರಿ ಇಲ್ಲದೇ ಬೆಳೆಯಬಹುದಾದ ತೋಟಗಾರಿಕಾ ಬೆಳೆಗಳಲ್ಲಿ ಅಂಜೂರ ಕೂಡ ಒಂದು. ನಾಟಿ ಮಾಡುವಾಗ ಬೇಕಾಗುವ ಕೊಟ್ಟಿಗೆ ಗೊಬ್ಬರ ಹಾಗೂ ಒಮ್ಮೆ ಅಂಜೂರದ ಗೂಟಿ ಖರೀದಿಸಿ ನಾಟಿ ಮಾಡಿದಿರೆಂದರೆ ಮುಗಿಯಿತು, ಬೇರೇನೂ ದೊಡ್ಡ ಖರ್ಚು ಇಲ್ಲ.

ಶೇಕಡಾ 45 ರಿಂದ 65ರಷ್ಟು ಸಕ್ಕರೆ ಅಂಶ ಹೊಂದಿ­ರುವ, ಕ್ಯಾಲ್ಸಿಯಂ, ಕಬ್ಬಿಣ, ಎ ವಿಟಾಮಿನ್‌ ಒಳಗೊಂಡಿರುವ ಅಂಜೂರ ಹಣ್ಣು, ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಹಣ್ಣುಗಳಷ್ಟೇ ಅಲ್ಲದೇ, ಒಣಗಿದ ರೂಪದಲ್ಲೂ ಅಂಜೂರ ಬಳಕೆಯಲ್ಲಿದೆ. ನೀರು ಬಸಿದು ಹೋಗುವಂಥ ಯಾವುದೇ ಮಣ್ಣಿನಲ್ಲೂ ಇದು ಬೆಳೆಯುತ್ತದೆ, ಭೂಮಿಯಲ್ಲಿ ಕ್ಲೋರೈಡ್‌ ಮತ್ತು ಸಲ್ಫೇಟ್ ಉಪ್ಪಿನಾಂಶ ಇದ್ದರೆ ಅದನ್ನೂ ಸಹಿಸಿಕೊಂಡು ಬೆಳೆಯಬಲ್ಲದು.

ನಾಟಿ
ಜಮೀನನ್ನು ಸಮತಟ್ಟಾಗಿ ಉಳುಮೆ ಮಾಡಿದ ಮೇಲೆ ಗಿಡದಿಂದ ಗಿಡಕ್ಕೆ ಹತ್ತು ಅಡಿ, ಸಾಲಿನಿಂದ ಸಾಲಿಗೆ ಹನ್ನೆರಡು ಅಡಿ ಅಂತರ ಕೊಟ್ಟು ಗುರುತು ಮಾಡಿಕೊಳ್ಳಬೇಕು. ಆ ಜಾಗದಲ್ಲಿ ಎರಡು ಅಡಿ ಅಗಲ, ಎರಡು ಅಡಿ ಉದ್ದ, ಎರಡು ಅಡಿ ಆಳದ ಗುಣಿ ತೆಗೆಸಬೇಕು. ಮಣ್ಣು ಕೊಟ್ಟಿಗೆ ಗೊಬ್ಬರ ಹಾಗೂ ಮಣ್ಣನ್ನು ಸಮಪ್ರಮಾಣದಲ್ಲಿ ಬೆರೆಸಿ ಅದರಿಂದ ಈ ಗುಣಿಯನ್ನು ತುಂಬಬೇಕು.

ನಂತರ ಹನಿ ನೀರಾವರಿ ಅಳವಡಿಸಿ ಗೂಟಿ ನಾಟಿ ಮಾಡಬೇಕು. ಕಾಂಡ ಹಾಗೂ ಗೂಟಿ ಎರಡರಿಂದಲೂ ಸಸ್ಯಾಭಿವೃದ್ಧಿ ಸಾಧ್ಯವಿದೆ. ಹೆಚ್ಚು ರೈತರು ಗೂಟಿಯನ್ನೇ ನಾಟಿ ಮಾಡುವರು. ಅಂದಾಜು ಇಪ್ಪತ್ತು ರುಪಾಯಿಗೆ ಒಂದು ಸಿಗುತ್ತದೆ. ಜೂನ್‌ – ಜುಲೈ ನಾಟಿ ಮಾಡಲು ಪ್ರಶಸ್ತ ಸಮಯ.

ನಿರ್ವಹಣೆ
ಅಂಜೂರ, ಬರಗಾಲವನ್ನು ತಡೆದುಕೊಳ್ಳುವಂಥ ಗಿಡವಾದರೂ ಬೇಸಿಗೆ ಸಮಯದಲ್ಲಿ ಇದಕ್ಕೆ ವಾರಕ್ಕೆ ಒಮ್ಮೆಯಾದರೂ ಸ್ವಲ್ಪ ನೀರು ಕೊಡಬೇಕು. ಸಾವಯವ ಕೃಷಿಯಾಗಿದ್ದರೆ ತಿಂಗಳಿಗೊಮ್ಮೆ ಜೀವಾಮೃತ ಸಿಂಪರಿಸುವುದನ್ನು ತಪ್ಪಿಸಬಾರದು. ಹಾಗೆಯೇ, ಗಿಡದ ಬುಡಕ್ಕೂ ಜೀವಾಮೃತ ಉಣಿಸಬೇಕು. ಜಾಸ್ತಿ ಕಸ ಬೆಳೆಯದಂತೆ ನಿಯಂತ್ರಿಸುತ್ತಾ ಕನಿಷ್ಠ ನಾಲ್ಕು ತಿಂಗಳಿಗೊಮ್ಮೆ ಪಾತಿ ಮಾಡಿ ಮೂರ್ನಾಲ್ಕು ಕೆ.ಜಿ ಯಷ್ಟು ಎರೆಹುಳು ಗೊಬ್ಬರ ಕೊಡುತ್ತಿರಿ.

ರಾಸಾಯನಿಕ ಕೃಷಿ ಮಾಡುವುದಾದರೆ, ಮೊದಲ ಎರಡು ವರ್ಷ ಒಂದು ಗಿಡಕ್ಕೆ ವರ್ಷಕ್ಕೊಮ್ಮೆ 75 ಗ್ರಾಂ. ಯೂರಿಯಾ, 50 ಗ್ರಾಂ. ಡಿ.ಎ.ಪಿ, 50 ಗ್ರಾಂ. ಪೊಟ್ಯಾಷ್‌ ಕೊಡಿ. ನಂತರದ ವರ್ಷಗಳಲ್ಲಿ ಈ ಪ್ರಮಾಣವನ್ನು ಡಬಲ್ ಮಾಡಿ. ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಹೀಗೆ ಎರಡು ಸಲ ಬೆಡ್‌ ಮಾಡಿ, ಅಂದರೆ ಬುಡಗಳಿಗೆ ಕಾಂಪೋಸ್ಟ್‌ ಗೊಬ್ಬರ ಹಾಕಿ ಮಣ್ಣು ಎತ್ತರಿಸಿ, ಆರನೇ ತಿಂಗಳಲ್ಲಿ ಬೆಡ್‌ ಮಾಡುವಾಗ ಟ್ರ್ಯಾಕ್ಟರ್‌ ಮೂಲಕ ಮಾಡಿ, ಅದೇ ಕೊನೆ, ಮತ್ತೆ ಜಮೀನಿನಲ್ಲಿ ಟ್ರ್ಯಾಕ್ಟರ್‌ ಹಾಯಿಸಲು ಬರುವುದಿಲ್ಲ.

ಸವರುವಿಕೆ
ಅಂಜೂರದಲ್ಲಿ ಸವರುವಿಕೆ ಅತ್ಯಂತ ಪ್ರಮುಖ­ವಾದುದು. ಹಾಗೇ ಬಿಟ್ಟರೆ ಅಂಜೂರ ಗಿಡ ತೆಳ್ಳಗೆ ಉದ್ದನಾಗಿ ಬೆಳೆದುಬಿಡುತ್ತೆ, ಹೀಗಾದರೆ ಹಣ್ಣಿನ ಇಳುವರಿ ಅರ್ಧಕ್ಕರ್ಧ ಕುಂಠಿತವಾಗುವುದರ ಜೊತೆಗೆ ಹಣ್ಣು ಕೀಳಲು ಸಹ ಆಗುವುದಿಲ್ಲ. ಈ ಕಾರಣಕ್ಕೆ ವರ್ಷಕ್ಕೊಮ್ಮೆ ಗಿಡಗಳನ್ನು ಸವರಿ ಒಂದು ಗಿಡಕ್ಕೆ 5-6 ಪ್ರಮುಖ ರೆಂಬೆಗಳಿರುವಂತೆ ನೋಡಿಕೊಳ್ಳಿ. ಜೊತೆಗೆ ಹಣ್ಣಾದ, ನಿರ್ಜೀವ ಎಲೆ ಹಾಗೂ ರೆಂಬೆಗಳನ್ನು ಆಗಾಗ ತಗೆದು ಸ್ವಚ್ಛಗೊಳಿಸಿ. ಇಲ್ಲವೆಂದರೆ, ಈ ಎಲೆಗಳ ಮೇಲೆ ದೂಳು ಹಾಗೂ ಫ‌ಂಗಸ್‌ ಬೆಳೆದು ರೋಗಗಳಿಗೆ ಎಡೆಮಾಡಿಕೊಡುತ್ತದೆ.

ಇಳುವರಿ
ನೀಟಾಗಿ ನಿರ್ವಹಣೆ ಮಾಡಿದರೆ ಒಂದು ಎಕರೆಗೆ ಒಂದು ವರ್ಷಕ್ಕೆ ಎಂಟು ಟನ್‌ ಹಣ್ಣಿನ ಇಳುವರಿ ಖಚಿತ. ಕೆಲಸ ಕಡಿಮೆಯಾದ್ದರಿಂದ ಆದಷ್ಟು ಮನೆಯವರೇ ನಿರ್ವಹಣೆ ಮಾಡುವುದು ಒಳ್ಳೆಯದು. ದರದ ವಿಷಯಕ್ಕೆ ಬಂದರೆ ಅಂಜೂರ ಪ್ರತಿ ಕ್ವಿಂಟಲ್ ಗೆ ತೀರ ಕಡಿಮೆ ಅಂದರೂ 700 ರಿಂದ ಹಿಡಿದು 4000 ರೂ. ವರೆಗೆ ಮಾರಾಟ ಆಗುವುದು. ಸಾಧ್ಯವಾದಷ್ಟು ಸ್ಪರ್ಧೆ ಇರುವ ಕಡೆ ಮಾರುವುದನ್ನು ಬಿಟ್ಟು, ದೂರದ ಊರಿನ ವ್ಯಾಪಾರಸ್ಥರನ್ನು ಸಂಪರ್ಕಿಸಿ ಮಾರಾಟ ಮಾಡಬೇಕು. ಕ್ವಿಂಟಾಲ್‌ಗೆ ಸರಾಸರಿ 2000 ರುಪಾಯಿ ಬೆಲೆ ದೊರೆತರೆ ಒಳ್ಳೆ ಲಾಭ ಕಾಣಬಹುದು.

ರೋಗ / ಪರಿಹಾರ
– ಅಂಜೂರಕ್ಕೆ ಕಾಂಡ ಕೊರೆಯುವ ಹುಳು, ಎಲೆ ತಿನ್ನುವ ಹುಳು, ಜೇಡ ನುಶಿ, ನೊಣಗಳ ಹಾವಳಿ ಇರುತ್ತದೆ. ಕಾಂಡ ಕೊರೆದ ಜಾಗಕ್ಕೆ ಕಾರ್ಬನ್‌ ಡೈಸಲ್ಪೇಡ್‌ನ‌ ಕೆಲವು ಹನಿ ಹಾಕಿ ಅಥವಾ ಮಣ್ಣಿನಿಂದ ಮುಚ್ಚಿದರೂ ನಡೆಯುತ್ತದೆ.

– ಎಲೆ ತಿನ್ನುವ ಹುಳದ ನಿಯಂತ್ರಣಕ್ಕಾಗಿ ಒಂದು ಲೀಟರ್‌ ನೀರಿಗೆ ನಾಲ್ಕು ಗ್ರಾಂ. ಕಾರ್ಬಾರಿಲ್ ಬೆರೆಸಿ ಸಿಂಪಡಿಸಿ.

– ಜೇಡ ನುಶಿ ನಾಶಮಾಡಲು ಒಂದು ಲೀಟರ್‌ ನೀರಿಗೆ 2.5 ಎಮ್. ಎಲ್. ಡೈಕೊಫಾಲ್ ಸಿಂಪಡಿಸಬೇಕು.

– ನೊಣದ ಉಪಟಳ ನಿವಾರಿಸಲು ಒಂದು ಲೀಟರ್‌ ನೀರಿಗೆ 2 ಎಮ್. ಎಲ್. ಮೆಲಾಥಿ­ಯಾನ್‌ ಸೇರಿಸಿ ಸಿಂಪಡಿಸಿ. ರೋಗಗಳಲ್ಲಿ ಎಲೆಚುಕ್ಕೆ ರೋಗ, ತುಕ್ಕು ರೋಗ, ಜಂತುರೋಗ, ಬೂದಿರೋಗ ಕಾಡುತ್ತವೆ.

– ತುಕ್ಕುರೋಗ ಹಾಗೂ ಎಲೆಚುಕ್ಕೆ ರೋಗಕ್ಕೆ ಎರಡು ಗ್ರಾಂ. ಮ್ಯಾಂಕೊಜೆಬ್ ಒಂದು ಲೀಟರ್‌ ನೀರಿಗೆ ಹಾಕಿ ಸಿಂಪರಿಸಿ.

– ಬೂದಿ ರೋಗಕ್ಕೆ ಲೀಟರ್‌ ನೀರಿಗೆ ಒಂದು ಗ್ರಾಂ. ಕಾರ್ಬಂಡೈಜಿಂ ಬೆರೆಸಿ ಸ್ಪ್ರೇ ಮಾಡಿ.
ಜಂತುರೋಗದ ಹತೋಟಿಗೆ ಕಾಲ ಕಾಲಕ್ಕೆ ಎರೆಹುಳು ಗೊಬ್ಬರದ ಜೊತೆ ಬೇವಿನ ಹಿಂಡಿ ಹಾಕಿದರೆ ಸಾಕು.

– ಸಾವಯವದಲ್ಲಿ ಬೆಳೆದಾಗ ಮೇಲೆ ಹೇಳಿದ ಬಹುತೇಕ ರೋಗಗಳ ಬರುವಿಕೆ ಇಲ್ಲವಾಗುವುದು ಅಥವಾ ಬಂದರೂ ಅದನ್ನು ಮೆಟ್ಟಿ ಬೆಳೆಯುವ ಶಕ್ತಿ ಗಿಡಗಳಿಗೆ ಇರುತ್ತದೆ. ಹಾಗೆಯೇ, ನಿಯಮಿತವಾಗಿ ಬೇವಿನ ಬೀಜದ ಕಷಾಯ ಸಿಂಪಡಿಸುತ್ತಾ ಇದ್ದರೆ ಕೀಟಗಳ ಹಾವಳಿಯೂ ಇರಲ್ಲ.

— ಎಸ್‌.ಕೆ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು

  • ಮೊದಲ ಅವಧಿಯಲ್ಲಿ ಚಿನ್ನದ ವಹಿವಾಟಲ್ಲಿ ಚೇತರಿಕೆ ಕಂಡಿರುವುದರಿಂದ ಮುಂಬರುವ ಹಬ್ಬ ಹರಿದಿನ, ಮದುವೆ- ಮುಂಜಿಗಳು ಚಿನ್ನದ ಮಾರುಕಟ್ಟೆಯಲ್ಲಿ ಮನ್ವಂತರ ಸೃಷ್ಟಿಸಬಹುದು...

  • ಈ ಡಾಬಾದಲ್ಲಿ ಸಿಗುವ ಶಾವಿಗೆ ಖೀರು ತಿನ್ನುವುದಕ್ಕೆ ಲಾರಿ ಡ್ರೈವರ್‌ಗಳು ಮಾತ್ರವಲ್ಲ, ಲಾರಿಯ ಮಾಲೀಕರು ಕೂಡ ಬರುವುದುಂಟು. ಇನ್ನು, ಇಲ್ಲಿ ಸಿಗುವ ಚಿಕನ್‌, ಮಟನ್‌,...

  • ಜಿಯೋ ನೆಟ್‌ವರ್ಕ್‌ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್‌ ಕಂಪನಿ ಮಾಡಿದ ಸಾಧನೆ ಎಲ್ಲರಿಗೂ ಗೊತ್ತು. ಇದೀಗ, ಕಿರಾಣಿ ಅಂಗಡಿಯ ವ್ಯವಹಾರದಲ್ಲೂ ಅಧಿಪತ್ಯ...

  • ಇಪ್ಪತ್ತು ವರ್ಷ ಅವಧಿಯ ಜೀವ ವಿಮಾ ಪಾಲಿಸಿಯೊಂದಕ್ಕೆ ಕಂತು ಕಟ್ಟಲು ಆರಂಭಿಸುತ್ತೀರಿ. ಆದರೆ, ನಾಲ್ಕು ವರ್ಷ ಮುಗಿಯುವುದರೊಳಗೆ, ಹಣ ಕಟ್ಟಲು ಸಾಧ್ಯವಿಲ್ಲ ಅನಿಸುತ್ತದೆ....

  • ಒನ್‌ ಪ್ಲಸ್‌ ಕಂಪೆನಿಯ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಒನ್‌ ಪ್ಲಸ್‌ 7 ಮತ್ತು 7 ಪ್ರೊ ಫೋನ್‌ಗಳ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು....

ಹೊಸ ಸೇರ್ಪಡೆ