ಕಿರಾಣಿ ಘರಾನ

ಕಿರಾಣಿ ಅಂಗಡಿಯಲ್ಲೂ ರಿಲಯನ್ಸ್‌

Team Udayavani, May 20, 2019, 6:00 AM IST

ಜಿಯೋ ನೆಟ್‌ವರ್ಕ್‌ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್‌ ಕಂಪನಿ ಮಾಡಿದ ಸಾಧನೆ ಎಲ್ಲರಿಗೂ ಗೊತ್ತು. ಇದೀಗ, ಕಿರಾಣಿ ಅಂಗಡಿಯ ವ್ಯವಹಾರದಲ್ಲೂ ಅಧಿಪತ್ಯ ಸ್ಥಾಪಿಸಲು ರಿಲಯನ್ಸ್‌ ಮುಂದಾಗಿದೆ. ಮೊಬೈಲ್‌ ಪಾಯಿಂಟ್‌ ಆಫ್ ಸೇಲ್‌ ಎಂಬ ಮಂತ್ರದೊಂದಿಗೇ ಅಖಾಡಕ್ಕೆ ಇಳಿದಿರುವ ರಿಲಯನ್ಸ್‌, ಹೇಗೆಲ್ಲಾ ಆಟವಾಡಬಹುದು ಎಂಬುದರ ಸಮಗ್ರ ವಿವರಣೆ ಇಲ್ಲಿದೆ…

ಮನೆಗೆ ನೆಂಟರು ಬಂದಿದ್ದಾರೆ. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು. ಉಪ್ಪಿನ ಪಾತ್ರ ತಳ ಕಾಣುತ್ತಿದೆ. ಎಲ್ಲರಿಗೂ ಉಪ್ಪು ಸಾಲುವಷ್ಟಿಲ್ಲ. ತಕ್ಷಣ ಮಕ್ಕಳ ಬಳಿ ಬೀದಿಯ ಮೂಲೆಯಲ್ಲಿರುವ ಸಣ್ಣ ಕಿರಾಣಿ ಅಂಗಡಿಯಿಂದ ಉಪ್ಪು ತನ್ನಿ ಎಂದು ಕಳುಹಿಸಿದರೆ, ಅವರು ಗೊಣಗುತ್ತಲೇ ಅಮೇಜಾನ್‌, ಫ್ಲಿಪ್‌ಕಾರ್ಟ್‌ನಂಥ ಎಷ್ಟೇ ಇ-ಕಾಮರ್ಸ್‌ ಸೈಟ್‌ಗಳು ಬಂದರೂ ಇವರಿಗೆ ಈ ಗೂಡಂಗಡಿಯೇ ಬೇಕು ಎನ್ನುತ್ತ ಹೊರಟಿದ್ದರು….

ಇದು ಇ-ಕಾಮರ್ಸ್‌ ಮತ್ತು ಕಿರಾಣಿ ಅಂಗಡಿಗಳ ಮಧ್ಯದಲ್ಲಿನ ವ್ಯತ್ಯಾಸ. ಗೂಡಂಗಡಿಯಲ್ಲಿರುವ ಅನುಕೂಲ ಫ್ಲಿಪ್‌ಕಾರ್ಟ್‌, ಅಮೇಜಾನ್‌ನಲ್ಲಿಲ್ಲ ಎಂಬುದು ನಮಗೆ ಯಾವಾಗಲೋ ಮನವರಿಕೆಯಾಗಿದೆ. ಹೀಗಾಗಿಯೇ ಇಂದಿಗೂ ಫ್ಲಿಪ್‌ಕಾರ್ಟ್‌ಗೆ ಈ ಗೂಡಂಗಡಿಗಳನ್ನು, ಕಿರಾಣಿ ಅಂಗಡಿಗಳನ್ನು ಮೀರಿಸಲು ಸಾಧ್ಯವಾಗಿಲ್ಲ. ಇಂದಿಗೂ, ಟಿವಿ ಆನ್‌ ಮಾಡಿದರೆ ಅಥವಾ ಸ್ಮಾರ್ಟ್‌ಫೋನ್‌ ಕೈಗೆತ್ತಿಕೊಂಡರೆ ಕಣ್ಣಿಗೆ ಕುಕ್ಕುವಂತೆ ಇ-ಕಾಮರ್ಸ್‌ ಸೈಟ್‌ಗಳು ಜಾಹೀರಾತು ಕೊಡುತ್ತಿದ್ದರೂ, ದೇಶಾದ್ಯಂತ ಕಿರಾಣಿ ಅಂಗಡಿಗಳ 45 ಲಕ್ಷ ಕೋಟಿ ರೂ. ವಹಿವಾಟಿನ ಪೈಕಿ ಶೇ. 10 ರಷ್ಟು ವಹಿವಾಟನ್ನೂ ಮಾಡಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂಬುದು ವಾಸ್ತವ.

ಇದರ ಮಿತಿಯ ಅರಿವಾಗುತ್ತದ್ದಂತೆಯೇ ರಿಲಯನ್ಸ್‌ ಹೊಸದೊಂದು ಯೋಜನೆಯೊಂದಿಗೆ ಹಿಡಿದು ಮಾರುಕಟ್ಟೆಗೆ ಇಳಿಯಲು ಚಿಂತನೆ ನಡೆಸಿದೆ. ಮುಖೇಶ್‌ ಅಂಬಾನಿ ಯಾವುದಾದರೂ ಹೊಸ ಕ್ಷೇತ್ರಕ್ಕೆ ಕಾಲಿಡುತ್ತಾರೆ ಎಂದರೆ ಆ ಕ್ಷೇತ್ರಕ್ಕೆ ನಡುಕ ಉಂಟಾಗುವುದಂತೂ ಸಹಜವೇ. ಯಾಕೆಂದರೆ, ಟೆಲಿಕಾಂ ಕ್ಷೇತ್ರದಲ್ಲಿ ಮೊನ್ನೆ ಮೊನ್ನೆಯಷ್ಟೇ ರಿಲಯನ್ಸ್‌ ಜಿಯೋ ನಡೆಸಿದ ಎರಡನೇ ಕಂಪನದಿಂದ ಚೇತರಿಸಿಕೊಳ್ಳಲು ಇತರ ಟೆಲಿಕಾಂ ಕಂಪನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ರಿಲಯನ್ಸ್‌ ಈ ವರ್ಷಾಂತ್ಯದಿಂದ ಕಿರಾಣಿ ಅಂಗಡಿಗಳನ್ನೂ ಆನ್‌ಲೈನ್‌ಗೆ ಕನೆಕ್ಟ್ ಮಾಡುವ ಹೊಸ ಯೋಜನೆಯನ್ನು ಜಾರಿಗೊಳಿಸಲಿದೆ. ಇದು ರಿಲಯನ್ಸ್‌ನ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ಈಗಾಗಲೇ ಸೂಪರ್‌ ಮಾರ್ಕೆಟ್‌ ರೀತಿಯ ರಿಲಯನ್ಸ್‌ ಮಾರ್ಟ್‌ಗಳನ್ನು ಹೊಂದಿರುವ ಕಂಪನಿ, ಇದೀಗ ಸಣ್ಣ ಸಣ್ಣ ಕಿರಾಣಿ ಅಂಗಡಿಗಳ ಮೇಲೆ ಕಣ್ಣು ನೆಟ್ಟಿದೆ.

ಹೇಗೆ ಕೆಲಸ ಮಾಡುತ್ತದೆ ರಿಲಯನ್ಸ್‌ನ ಕಿರಾಣಾ?
ರಿಲಯನ್ಸ್‌ ಇಂಡಸ್ಟ್ರೀಸ್‌ ಈ ಕಿರಾಣಿ ಅಂಗಡಿಗಳಿಗೆ ಮೊದಲು ಎಂಪಿಒಎಸ್‌ ಎಂಬ ಯಂತ್ರವೊಂದನ್ನು ಕೊಡುತ್ತದೆ. ಎಂಪಿಒಎಸ್‌ ಅಂದರೆ Mobile point of sale. ನಾವು ಮಾಲ್‌ಗ‌ಳಿಗೆ ಹೋದಾಗ ನೋಡುವ ಬಿಲ್ಲಿಂಗ್‌ ವ್ಯವಸ್ಥೆ ಇದು. ನಾವು ತೆಗೆದುಕೊಂಡ ಐಟಂನ ಕೋಡ್‌ ನಮೂದಿಸಿ ಅಥವಾ ಐಟಂ ಮೇಲೆ ಇರುವ ಕೋಡ್‌ ಸ್ಕ್ಯಾನ್‌ ಮಾಡಿದಾಗ ಈ ಎಂಪಿಒಎಸ್‌ನಲ್ಲಿ ತನ್ನಿಂತಾನೇ ಉತ್ಪನ್ನದ ಮೊತ್ತ ಮೂಡುತ್ತದೆ. ಅಲ್ಲಿಂದಲೇ ಬಿಲ್‌ ಕೂಡ ಪ್ರಿಂಟ್‌ ಹಾಕಬಹುದು. ಈ ಸಾಧನಕ್ಕೆ ಕೇವಲ 3 ಸಾವಿರ ರೂ. ಅನ್ನು ಕಂಪನಿ ವಿಧಿಸಿದೆ. ಒಮ್ಮೆ ಮೂರು ಸಾವಿರ ರೂ. ಕೊಟ್ಟು ಎಂಪಿಒಎಸ್‌ ಖರೀದಿಸಿದರೆ ಸಾಕು.

ಈ ಎಂಪಿಒಎಸ್‌ಗೂ ರಿಲಾಯನ್ಸ್‌ ಈಗಾಗಲೇ ಬಿಡುಗಡೆ ಮಾಡಿರುವ ಜಿಯೋ ಮನಿ ವಾಲೆಟ್‌ಗೂ ಲಿಂಕ್‌ ಮಾಡಲಾಗುತ್ತದೆ. ಅಂದರೆ ಅಂಗಡಿಯಿಂದ ಸಾಮಗ್ರಿ ಖರೀದಿಸಿದವರು ಜಿಯೋ ಮನಿ ವಾಲೆಟ್‌ ಮೂಲಕ ಹಣ ಪಾವತಿಸಬಹುದು. ಈ ಹಣ, ಅಂಗಡಿಯವನ ಬ್ಯಾಂಕ್‌ ಖಾತೆಗೆ ನೇರವಾಗಿ ಹೋಗುತ್ತದೆ. ಇದೆಲ್ಲಕ್ಕಿಂತ ಮುಖ್ಯ ಸಂಗತಿಯೆಂದರೆ ಜನರನ್ನು ಈ ಕಿರಾಣಿ ಅಂಗಡಿಗೆ ಆಕರ್ಷಿಸುವುದಕ್ಕಾಗಿ ರಿಲಯನ್ಸ್‌ ದೊಡ್ಡ ದೊಡ್ಡ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಉದಾಹರಣೆಗೆ, ಬ್ರಿಟಾನಿಯಾ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡು, ಅದು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಿಸ್ಕಿಟ್‌ ಪ್ಯಾಕ್‌ಗಳ ಮೇಲೆ ರಿಯಾಯಿತಿ ಘೋಷಿಸುತ್ತದೆ. ಒಂದು ಬಿಸ್ಕಿಟ್‌ ಪ್ಯಾಕ್‌ ಖರೀದಿಸಿ ಅದಕ್ಕೆ ಜಿಯೋ ಮನಿ ಮೂಲಕ ಹಣ ಪಾವತಿ ಮಾಡಿದರೆ ಗ್ರಾಹಕರಿಗೆ ಕಂಪನಿ 5 ರೂ. ಕ್ಯಾಶ್‌ಬ್ಯಾಕ್‌ ಕೊಡಬಹುದು. ಇದು ಗ್ರಾಹಕರಿಗೆ ಅನುಕೂಲ. ಅಷ್ಟೇ ಅಲ್ಲ, ಕಂಪನಿ ಜಾಹೀರಾತಿಗೆ ವೆಚ್ಚ ಮಾಡುವ ಹಣವನ್ನು ಕಡಿಮೆ ಮಾಡಿ ಇಂಥ ಕ್ಯಾಶ್‌ಬ್ಯಾಕ್‌ಗಳ ಮೂಲಕ ತನ್ನ ಉತ್ಪನ್ನಗಳನ್ನು ಜನರಿಗೆ ತಲುಪಿಸಬಹುದು.

ಡೇಟಾ ಯಜಮಾನ!
ಈ ಎಂಪಿಒಎಸ್‌ ಅಳವಡಿಸುವ ರಿಲಯನ್ಸ್‌ನ ಮೂಲ ಉದ್ದೇಶವೇ ಎಂಪಿಒಎಸ್‌ನಲ್ಲಿ ಸಂಗ್ರಹವಾಗುವ ಡೇಟಾ ಬಳಕೆಯದ್ದು! ತನ್ನ ಅಂಗಡಿಗೆ ಎಂಪಿಒಎಸ್‌ ಬಂದ ಕೂಡಲೇ ಅಂಗಡಿ ಮಾಲೀಕ ತನ್ನ ಅಂಗಡಿಯಲ್ಲಿರುವ ಎಲ್ಲ ಸಾಮಗ್ರಿಗಳನ್ನೂ ಈ ಯಂತ್ರದಲ್ಲಿ ಅಳವಡಿಸಬೇಕು. ಎಷ್ಟು ಸಾಮಗ್ರಿ ಇದೆ, ಅದರ ಬೆಲೆ ಎಷ್ಟು ಎಂಬ ಎಲ್ಲ ವಿವರವನ್ನೂ ಅದರಲ್ಲಿ ನಮೂದಿಸಬೇಕು. ಆಗ ಗ್ರಾಹಕರು ಅಂಗಡಿಗೆ ಬಿಸ್ಕಿಟ್‌ ಪ್ಯಾಕ್‌ ಕೊಡಿ ಎಂದಾಗ ಅದನ್ನು ತೆಗೆದು ಸ್ಕ್ಯಾನ್‌ ಮಾಡುತ್ತಿದ್ದಂತೆಯೇ ಎಲ್ಲ ವಿವರಗಳೂ ಎಂಪಿಒಎಸ್‌ ಬಿಲ್ಲಿಂಗ್‌ ಸ್ಕ್ರೀನ್‌ ಮೇಲೆ ಕಾಣಿಸುತ್ತದೆ. ಒಂದು ಕೀ ಒತ್ತಿದರೆ ಬಿಲ್‌ ಪ್ರಿಂಟ್‌ ಆಗಿ ಹೊರಬರುತ್ತದೆ. ಆಗ ಆತನ ಸಂಗ್ರಹದಲ್ಲಿ ಒಂದು ಬಿಸ್ಕಿಟ್‌ ಪ್ಯಾಕ್‌ ಖಾಲಿಯಾಗಿದ್ದನ್ನು ತೋರಿಸುತ್ತದೆ. ಹೀಗೆ ಒಂದು ತಿಂಗಳಲ್ಲಿ ಯಾವ ಬ್ರಾಂಡ್‌ನ‌ ಯಾವ ಬಿಸ್ಕಿಟ್‌ ಹಾಗೂ ಉತ್ಪನ್ನಗಳನ್ನು ತಾನು ಮಾರಿದ್ದೇನೆ ಎಂಬುದು ಅಂಗಡಿಯವನಿಗೆ ಗೊತ್ತಾಗುತ್ತದೆ. ಯಾವುದನ್ನು ಹೆಚ್ಚು ಜನರು ಇಷ್ಟಪಟ್ಟು ತೆಗೆದುಕೊಂಡು ಹೋಗಿದ್ದಾರೆ ಎಂಬುದೂ ಅಂಗಡಿ ಮಾಲೀಕನಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಾಗಿ ಆತ ಆರ್ಡರ್‌ ಮಾಡಲೂ ಸಹಾಯವಾಗುತ್ತದೆ.

ಅಂದಹಾಗೆ, ಈ ಎಲ್ಲ ಮಾಹಿತಿಯೂ ರಿಲಯನ್ಸ್‌ಗೂ ಗೊತ್ತಾಗುತ್ತದೆ! ಈ ಮಾಹಿತಿಯೇನೂ ಸಣ್ಣದಲ್ಲ. ಜನರಿಗೆ ಏನು ಬೇಕು ಎಂದು ಕಂಡುಕೊಳ್ಳಲು ಪ್ರತಿಯೊಂದು ಕಂಪನಿಗಳೂ ಹಾತೊರೆಯುತ್ತಿರುತ್ತವೆ. ಈ ಡೇಟಾ ಬಳಸಿಕೊಂಡು ರಿಲಯನ್ಸ್‌ ಇಡೀ ಮಾರುಕಟ್ಟೆಯನ್ನು ತನ್ನ ತಾಳಕ್ಕೆ ಕುಣಿಸಿಬಿಡಬಹುದು.

ಒಡೆಯಿತು ಇ-ಕಾಮರ್ಸ್‌ ಎಂಬ ಬಲೂನು!
ಇಷ್ಟೂ ದಿನ ಎಲ್ಲ ಕಂಪನಿಗಳು ಇ-ಕಾಮರ್ಸ್‌ನ ಹಿಂದೆ ಬಿದ್ದು, ಅದೊಂದು ಹೊಸ ಉದ್ಯಮದ ಹರಿಕಾರ ಎಂಬಂತೆ ಕುಣಿಯುತ್ತಿದ್ದವು. ಆದರೆ ವರ್ಷದಿಂದೀಚೆಗೆ ಇ ಕಾಮರ್ಸ್‌ನ ಮಿತಿ ಜನರಿಗೂ, ಉದ್ಯಮಕ್ಕೂ ಅರ್ಥವಾತೊಡಗಿದೆ. ಇ-ಕಾಮರ್ಸ್‌ ಎಂಬುದು ಕೆಲವು ವಿಭಾಗದ ಸಾಮಗ್ರಿಗಳಿಗೆ ಹಾಗೂ ನಗರ ಪ್ರದೇಶಗಳಿಗೆ ಸೂಕ್ತ. ಇನ್ನು ಕಿರಾಣಿ ಅಂಗಡಿಗಳು ತಮ್ಮದೇ ವ್ಯಾಪ್ತಿಯಲ್ಲಿ ಜನರಿಗೆ ನಿತ್ಯ ಬಳಕೆಗೆ ಬೇಕಾದ ಸಾಮಗ್ರಿಗಳನ್ನು ಮಾರಲು ಸೂಕ್ತ. ಹಾಗಂತ ಕಿರಾಣಿ ಅಂಗಡಿಗಳನ್ನು ಆನ್‌ಲೈನ್‌ ಮಾಡಲಾಗದು ಅಥವಾ ಅವು ಆನ್‌ಲೈನ್‌ ಮಾರುಕಟ್ಟೆಗೆ ಪೈಪೋಟಿಯನ್ನೂ ನೀಡಲಾರವು.

ಎರಡೂ ಉದ್ಯಮದ ಇತಿಮಿತಿಗಳನ್ನು ತಿಳಿದ ನಂತರವೇ ರಿಯಲನ್ಸ್‌ ಇಂಡಸ್ಟ್ರೀಸ್‌ ತನ್ನ ಹೊಸ ಯೋಜನೆಯೊಂದನ್ನು ಅನಾವರಣಗೊಳಿಸಿದೆ. ಈ ಯೋಜನೆ ಇ-ಕಾಮರ್ಸ್‌ ಉದ್ಯಮವನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ. ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲ ಕಿರಾಣಿ ಅಂಗಡಿಗಳನ್ನೂ ಆನ್‌ಲೈನ್‌ ಮಾಡುವುದು ರಿಲಾಯನ್ಸ್‌ನ ಈ ಯೋಜನೆಯ ಉದ್ದೇಶ. ಇದು ಕೆಲಸ ಮಾಡುವ ರೀತಿಯಂತೂ ಅತ್ಯಂತ ವಿನೂತನ ಹಾಗೂ ಇನ್ನೂ ಈ ದೇಶದಲ್ಲಿ ಯಾರೂ ಯೋಚಿಸದ ಮತ್ತು ಯೋಜಿಸದ ರೀತಿ.

ಸದ್ಯ ಕೋಟ್ಯಂತರ ಕಿರಾಣಿ ಅಂಗಡಿಗಳು ಭಾರತದಲ್ಲಿವೆ. ಇಲ್ಲಿನ ವ್ಯವಸ್ಥೆ ಸಂಪೂರ್ಣ ಆಫ್ಲೈನ್‌. ಅಂದರೆ ಕಿರಾಣಿ ಅಂಗಡಿ ಮಾಲೀಕನ ತಲೆಯಲ್ಲೇ ತನ್ನ ಅಂಗಡಿಯಲ್ಲಿ ಯಾವ ಸಾಮಗ್ರಿ ಇದೆ ಎಂಬ ಪಟ್ಟಿ ಇರುತ್ತದೆ. ಯಾವ ಸಾಮಗ್ರಿ ಹೆಚ್ಚು ಮಾರಾಟವಾಗುತ್ತದೆ ಎಂಬುದೂ ಆತನಿಗೆ ತಿಳಿದಿರುತ್ತದೆ. ಅಂಥ ಸಾಮಗ್ರಿಗಳನ್ನೇ ಆತ ತರಿಸಿಕೊಂಡಿರುತ್ತಾನೆ. ಇವುಗಳನ್ನು ಗ್ರಾಹಕ ಕೇಳಲು ಬಂದಾಗ ಥಟ್ಟನೆ ಅದಕ್ಕೆ ರೇಟು ಹೇಳಿ ತೂಕ ಮಾಡಿ ಕೊಟ್ಟು ಕ್ಯಾಶ್‌ ಎಣಿಸಿಕೊಳ್ಳುತ್ತಾನೆ. ಇಲ್ಲೆಲ್ಲೂ ಟೆಕ್ನಾಲಜಿ ಬೇಕಾಗಿರುವುದಿಲ್ಲ. ಹೆಚ್ಚೆಂದರೆ ಕ್ಯಾಲಕ್ಯುಲೇಟರ್‌ ಅನ್ನು ಆತ ಬಳಸಬಹುದು. ಆದರೆ ಇದಕ್ಕೆ ಟೆಕ್ನಾಲಜಿಯ ಸ್ಪರ್ಶ ಕೊಡುವುದೇ ರಿಲಾಯನ್ಸ್‌ನ ಈ ಯೋಜನೆಯ ಉದ್ದೇಶ.

50 ಲಕ್ಷ ಗುರಿ
ಸದ್ಯ ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಈ ಕಿರಾಣಾ ಯೋಜನೆ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿದೆ. ಸುಮಾರು 15 ಸಾವಿರ ಅಂಗಡಿಗಳಿಗೆ ಈ ಎಂಪಿಒಎಸ್‌ ಸಾಧನಗಳನ್ನು ಅಳವಡಿಸಲಾಗಿದೆ. 2023 ರ ವೇಳೆಗೆ ಅಂದರೆ ಇನ್ನು ಮೂರ್‍ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ ಇದನ್ನು ವಿಸ್ತರಿಸಿ 50 ಲಕ್ಷ ಕಿರಾಣಿ ಅಂಗಡಿಗಳನ್ನು ತನ್ನ ತೆಕ್ಕೆಯಲ್ಲಿ ತರಲು ಯೋಜನೆ ರೂಪಿಸಿದೆ.

ಹೆಸರಿನ ಮಹಿಮೆ
ಸಾಮಾನ್ಯವಾಗಿ ನಾವು ಫ್ಲಿಪ್‌ಕಾರ್ಟ್‌ ಅಥವಾ ಅಮೇಜಾನ್‌ನಿಂದ ಒಂದು ಸಾಮಗ್ರಿ ಖರೀದಿಸಿದಾಗ ಅದನ್ನು ನಮಗೆ ಆ ಕಂಪನಿಯೇ ತಯಾರಿಸಿ ತಂದುಕೊಟ್ಟಿದೆ ಎಂದು ಭಾವಿಸುತ್ತೇವೆ. ಆದರೆ ವಾಸ್ತವ ಹಾಗಲ್ಲ. ಅಲ್ಲಿ ಯಾವುದೋ ಒಬ್ಬ ಸಾಮಾನ್ಯ ವ್ಯಾಪಾರಿ ಅದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಿಸ್ಟ್‌ ಮಾಡಿರುತ್ತಾನೆ. ನಾವು ಆತನಿಂದ ಖರೀದಿಸಿರುತ್ತೇವೆ. ಅಲ್ಲಿ ಫ್ಲಿಪ್‌ಕಾರ್ಟ್‌ ಮಧ್ಯವರ್ತಿ ಮಾತ್ರ. ಆದರೆ ಫ್ಲಿಪ್‌ಕಾರ್ಟ್‌ ಸೃಷ್ಟಿಸಿರುವ ತನ್ನ ಇಮೇಜ್‌ನಿಂದ ನಾವು ಆ ವಸ್ತುವಿನ ಮೇಲೆ ವಿಶ್ವಾಸ ಇಡುತ್ತೇವೆ. ಇದೇ ತಂತ್ರ ರಿಲಾಯನ್ಸ್‌ ಕಿರಾಣಾದಲ್ಲೂ ಕೆಲಸ ಮಾಡುತ್ತದೆ. ಕಿರಾಣಾ ಎಂಬ ಬ್ರಾಂಡ್‌ಗೆ ನಾವು ಮರುಳಾಗುತ್ತೇವೆ. ನಮ್ಮ ಕಿರಾಣಿ ಅಂಗಡಿಯ ಮಾಲೀಕನಿಗೆ ಆಗ ಎರಡನೇ ಸ್ಥಾನ. ಕಿರಾಣಾದಲ್ಲಿ ಕೊಡುವ ಡಿಸ್ಕೌಂಟಿಗೋ ಅಥವಾ ಇನ್ಯಾವುದೋ ಕಾರಣಕ್ಕೆ ನಾವು ಅಂಗಡಿಗೆ ಹೋಗಿ ಸಾಮಗ್ರಿ ತರುತ್ತೇವೆ.

ಪ್ರತಿಸ್ಪರ್ಧಿಗಳೂ ಇದ್ದಾರೆ!
ಕಿರಾಣಿ ಅಂಗಡಿಗಳಿಗೆ ಡಿಜಿಟಲ್‌ ರೂಪ ಕೊಡಲು ಈಗಾಗಲೇ ಸ್ಟಾರ್ಟಪ್‌ಗ್ಳು ಪ್ರಯತ್ನ ನಡೆಸಿವೆ. ಆದರೆ ಇದರಲ್ಲಿ ಪ್ರಮುಖ ಅಡ್ಡಿಯೇ ಪಿಒಎಸ್‌ ಸಾಧನದ್ದು. ಇದರ ವೆಚ್ಚವೇ ಸದ್ಯ 50 ಸಾವಿರ ರೂ. ಆಗುತ್ತದೆ. ಸ್ನ್ಯಾಪ್‌ಬಿಝ್, ನುಕ್ಕಡ್‌ ಶಾಪ್ಸ್‌, ಗೋಫ್ರುಗಲ್‌ ಸೇರಿದಂತೆ ಹಲವು ಸಣ್ಣ ಸ್ಟಾರ್ಟಪ್‌ಗ್ಳು ಈ ಕ್ಷೇತ್ರಕ್ಕೆ ಕಾಲಿಟ್ಟಿವೆ. ಆದರೆ ರಿಲಯನ್ಸ್‌ ಇದನ್ನು 3 ಸಾವಿರಕ್ಕೆ ಇಳಿಸುವ ಮೂಲಕ ಇಡೀ ಕ್ಷೇತ್ರದ ಬುಡವನ್ನೇ ಅಲುಗಾಡಿಸಲಿದೆ.

ಕೃಷ್ಣ ಭಟ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಸವಣೂರು: ಶಾಲೆಯಂಗಳದಲ್ಲಿ ಹಣ್ಣಿನ ಗಿಡ, ತರಕಾರಿ ಗಿಡ ಬೆಳೆಯಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಅನೇಕರಿಗೆ ಇದೊಂದು ಸಿಲ್ಲಿ ವಿಷಯ, ಆಗದ ಕೆಲಸ ಅಂತ ಅನಿಸಿಬಿಡುತ್ತದೆ....

  • ನವದೆಹಲಿ: ಇನ್ನು ಮುಂದೆ ವಿದೇಶಿ ದೇಣಿಗೆ ಪಡೆಯುವಂಥ ಎನ್‌ಜಿಒಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಪ್ರಮುಖ ಸಿಬ್ಬಂದಿ, ತಾವು ಯಾವುದೇ ಧಾರ್ಮಿಕ ಮತಾಂತರ ಪ್ರಕರಣಗಳ...

  • ಮುಂಬೈ: ಸೌದಿ ಅರೇಬಿಯಾದಲ್ಲಿನ ಬೆಳವಣಿಗೆಯಿಂದ ತೈಲ ದರ ಏರಿಕೆ ಭೀತಿ ಷೇರುಪೇಟೆ ಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಸಿದೆ. ಆರ್ಥಿಕ ಬಿಕ್ಕಟ್ಟಿನ ಆತಂಕದಲ್ಲಿದ್ದ...

  • "ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ "ಅವರು' ಅನಬಾರದು, "ಇವರು'...

  • ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. "ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ...