ಗೂಡು ಕಟ್ಟುವ ಆಸೆ, ಹೃದಯದಲ್ಲಿ ಜಾಗ ಕೊಡ್ತೀಯ?

Team Udayavani, May 14, 2019, 6:00 AM IST

ಸದಾ ನಿನ್ನ ಕಣ್ಣಲ್ಲಿ ನನ್ನ ಬಿಂಬ ಕಾಣಲು,
ತುದಿಗಾಲಲ್ಲಿ ತಯಾರಾದೆ ನಾನು…
ಈ ಹಾಡನ್ನ ನನಗಾಗಿಯೇ ಬರೆದ ಹಾಗಿದೆ. ನಿನ್ನ ಕಣ್ಣಿನಲ್ಲಿ ನನ್ನ ಬಿಂಬ ನೋಡೋಕೆ ನಾನು ತುದಿಗಾಲಿನಲ್ಲೇ ನಿಂತುಕೊಳ್ಳಬೇಕಲ್ಲ! ಯಾಕಂದ್ರೆ, ನೀನು ನೋಡಿದ್ರೆ ತೆಂಗಿನಮರ, ನಾನು ತುಂಬೆ ಗಿಡ. ನೀನು ಜಿರಾಫೆ ಥರ ಬೆಳೆದಿದ್ದಕ್ಕೆ ನಾನೇನು ಮಾಡೋಕಾಗುತ್ತೆ ಹೇಳು?

ಆದ್ರೂ ನಿನ್ನ ಕಣ್ಣಲ್ಲಿದೆ ಏನೋ ಒಂಥರಾ ಆಕರ್ಷಣೆ. ನೀನು ನನ್ನತ್ತ ನೋಡಿದರೆ, “ಹೃದಯದಲಿ ಇದೇನಿದು ನದಿಯೊಂದು ಓಡಿದೆ…’ ಅನ್ನೋ ಥರ ಆಗುತ್ತೆ. ಅಯಸ್ಕಾಂತದಂಥ ನಿನ್ನ ಕಣ್ಣೋಟಕ್ಕೆ, ಯಾವ ಕಬ್ಬಿಣದ ಹೃದಯ ಕರಗದೇ ಇದ್ದೀತು!

ನೀನು ಕೊರಳಲ್ಲಿ ಧರಿಸಿದ್ದೀಯಲ್ಲ ರುದ್ರಾಕ್ಷಿ ಮಾಲೆ; ಅದಂದ್ರೆ ನಂಗೆ ತುಂಬಾ ಇಷ್ಟ. ಆ ಸರ ನಿಂಗೆ, ಮಹಾಶಿವನ ಗಾಂಭೀರ್ಯ ಕೊಡುತ್ತೆ. ಅದನ್ನು ನೋಡ್ತಾ, ನೀನೇ ಶಿವ, ನಾನೇ ಪಾರ್ವತಿ ಅಂತ ಕಲ್ಪಿಸಿಕೊಂಡು ಖುಷಿ ಪಡ್ತೀನಿ.

ಎಂಥಾ ಹುಚ್ಚು ಹುಡುಗಿ ನಾನು! ದಿನವಿಡೀ ನಿನ್ನದೇ ಕನಸು, ಕನವರಿಕೆಯಲ್ಲಿರೋ ನಾನು, ನಿನಗೆ ನನ್ನ ಬಗ್ಗೆ ಇರುವ ಭಾವನೆಗಳ ಬಗ್ಗೆ ಕೇಳೇ ಇಲ್ಲ ನೋಡು. ಆದ್ರೂ, ನಾನಂದ್ರೆ ನಿನಗೂ ಇಷ್ಟ ಅಂತ ನಂಗೊತ್ತು. ನನ್ನ ಪ್ರೀತಿಯನ್ನು ನೀನು ಒಪ್ಪಿಕೊಳ್ಳಲೇಬೇಕು. ಯಾಕಂದ್ರೆ, “ಎಲ್ಲೇ ಇರು, ಹೇಗೆ ಇರು, ಎಂದೆಂದಿಗೂ ನೀ ಸುಖವಾಗಿರು’ ಅಂತ, ಕೈಗೆಟುಕದ ಪ್ರೀತಿಯ ಬಗ್ಗೆ ಕನವರಿಸೋವಷ್ಟು ಒಳ್ಳೆ ಹುಡುಗಿ ನಾನಲ್ಲ. ನಿನ್ನನ್ನು ಕನಸಿನಲ್ಲಿಯೂ ಬೇರೆ ಯಾರಿಗೂ ಬಿಟ್ಟು ಕೊಡುವುದಿಲ್ಲ ನಾನು. ನನ್ನ ನಿನ್ನ ಸಂಬಂಧ ಅದು ಏಳೇಳು ಜನ್ಮದ ಸಂಬಂಧ. ನಾನು ನಿನ್ನನ್ನೇ ಸೇರಬೇಕು ಎಂದು ಆ ಬ್ರಹ್ಮ ಮೊದಲೇ ಬರೆದು ಕಳುಸಿದ್ದಾನೆ. ನಿನ್ನ ಹೃದಯದಲ್ಲಿ ಜಾಗ ಕೊಟ್ಟರೆ ಅಲ್ಲೊಂದು ಪುಟ್ಟ ಗೂಡು ಕಟ್ಟಿ, ಗುಬ್ಬಚ್ಚಿಯಂತೆ ಜೊತೆಗಿರಿನಿ. ಏನಂತೀಯಾ ಇದಕ್ಕೆ?

-ಜ್ಯೋತಿ ಪುರದ, ಹಾವೇರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ