ಜೆಲ್ಲಿ ಮೀನು ಹುಷಾರ್!
Team Udayavani, Feb 20, 2020, 4:55 AM IST
ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ ಗ್ರಹಿಸುತ್ತದೆ. ಅದರ ಮೂಲಕವೇ ಶತ್ರುಗಳಿಗೆ ಕುಟುಕುತ್ತದೆ. ಈ ರೀತಿ ಕುಟುಕಿದರೆ ಕೆಲವೊಮ್ಮೆ ಸಾವು ಬರುವುದೂ ಉಂಟು!
ಸಮುದ್ರವು ಅಗಾಧ ವಿಸ್ಮಯಗಳ ಒಡಲು. ಇಲ್ಲಿ ಹಲವು ಜೀವವೈವಿಧ್ಯಗಳಿವೆ. ವೈವಿಧ್ಯಮಯ ಆಮೆಗಳು, ಮೀನುಗಳು ಮತ್ತು ಜಲಚರಗಳಿದ್ದು, ಇವುಗಳ ಜೊತೆಯಲ್ಲೇ ಸೃಷ್ಟಿಯ ವೈಚಿತ್ರ್ಯವಾದ ಜೆಲ್ಲಿಮೀನೂ ಇದೆ .ಈ ಮೀನು ಇವು ಛತ್ರಿಯ ಅಥವಾ ಘಂಟೆಯ ಆಕಾರದಿಂದ ಕೂಡಿದೆ. ಕೆಳಭಾಗದಲ್ಲಿ ಉದ್ದನೆಯ ಕಾಲುಗಳ ಮೂಲಕವೇ ಎಲ್ಲವನ್ನು ಗ್ರಹಿಸುವುದು. ಕೆಲವು ಜೆಲ್ಲಿ ಮೀನುಗಳು ಈ ಗ್ರಹಣಾಂಗಗಳನ್ನು ಸಮುದ್ರದಾಳದಲ್ಲಿ ಬಂಡೆಗಳಿಗೆ ಲಂಗರು ಹಾಕಿಕೊಂಡು ಬದುಕುತ್ತವೆ. ಇದು, ಕುಟುಕುವ ಕೋಶಗಳಿಂದ ವಿಷಕಾರಿಯಾಗಿರುತ್ತದೆ. ಈ ಅಂಗಗಳನ್ನು ಇವು ಬೇಟೆಯಾಡಲು ಮತ್ತು ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಬಳಸಿಕೊಳ್ಳುತ್ತವೆ.
ಜೆಲ್ಲಿ ಮೀನುಗಳು ಆಸ್ಟ್ರೇಲಿಯಾದ ಆಳ ಸಮುದ್ರಗಳಲ್ಲಿ ಹೇರಳವಾಗಿವೆ. ಇವುಗಳ ಗಾತ್ರ ಹೆಚ್ಚೆಂದರೆ ಐದು ಮಿ.ಮೀ ಇರುತ್ತದೆ. ಇವುಗಳು ನೋಡಲು ವಿಚಿತ್ರವಾಗಿರುವುದರೊಂದಿಗೆ ಅತ್ಯಂತ ಅಪಾಯಕಾರಿ ಕೂಡ. ಅಪಾಯದ ವಾಸನೆ ಬಡಿಯುತ್ತಿದ್ದಂತೆ ಈ ಮೀನು, ತನ್ನ ಕಾಲುಗಳನ್ನು ಹೊರಚಾಚಿ ವಿಷವನ್ನು ಹೊರಹಾಕುತ್ತದೆ. ಕ್ರಿಮಿಕೀಟಗಳೇನಾದರೂ ಇವುಗಳ ಬಾಯಿಗೆ ಸಿಕ್ಕರೆ ಅವುಗಳಿಗೆ ಬಿಡಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಜೆಲ್ಲಿ ಮೀನುಗಳು ಗುಂಪಾಗಿಯೂ ಸಮುದ್ರದಲ್ಲಿ ಕಾಣಿಸಿಕೊಳ್ಳುವುದರಿಂದ ಈ ಗುಂಪನ್ನು ಸ್ಮ್ಯಾಕ್ ಎಂದು ಕರೆಯಲಾಗುತ್ತದೆ. ಏಕಕಾಲಕ್ಕೆ ಅನೇಕ ಜೆಲ್ಲಿ ಮೀನುಗಳು ಒಟ್ಟುಗೂಡುವುದನ್ನು ಬ್ಲೂಮ್ (ಹೂವಿನಂತ ರಚನೆ) ಎಂದು ಕರೆಯಲಾಗುತ್ತದೆ.
ಜೀವನ ಚಕ್ರ
ಜೆಲ್ಲಿಮೀನುಗಳು ಲೈಂಗಿಕ ಸಂಪರ್ಕ ಮತ್ತು ಲೈಂಗಿಕ ಸಂಪರ್ಕವಿಲ್ಲದೇ ಎರಡೂ ವಿಧಾನದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಇವುಗಳ ಮೊಟ್ಟೆಯನ್ನು ಮೆಡುಸಾ ಎಂದು ಕರೆಯುತ್ತಾರೆ. ವಿಶೇಷ ಎಂದರೆ, ಜೆಲ್ಲಿ ಮೀನು ಪ್ರತಿದಿನ ಮೊಟ್ಟೆಯಿಡುತ್ತವೆ. ಹೆಚ್ಚಿನ ಪ್ರಭೇದಗಳಲ್ಲಿ, ಮೊಟ್ಟೆಯಿಡುವ ಪ್ರಕ್ರಿಯೆಯು ಬೆಳಕಿನಿಂದ ನಿಯಂತ್ರಿಸಲ್ಪಡುವುದರಿಂದ, ಇವುಗಳು ಮುಸ್ಸಂಜೆ ಅಥವಾ ಮುಂಜಾನೆ ಮೊಟ್ಟೆಯಿಡುವುದು ರೂಢಿ.
ಜೆಲ್ಲಿ ಮೀನುಗಳು ತಮ್ಮ ಗ್ರಹಣಾಂಗಗಳನ್ನು ಬಳಸಿ ಪ್ಲ್ಯಾಂಕ್ಟನ್ ಮತ್ತು ಸಣ್ಣ ಮೀನುಗಳನ್ನು ಹಿಡಿದು ತಿನ್ನುತ್ತವೆ. ಇವುಗಳು ಪಾಚಿಗಳೊಂದಿಗೆ ಸಹಜೀವನ ಮಾಡುವುದರಿಂದ ಪಾಚಿಗಳ ದ್ಯುತಿಸಂಶ್ಲೇಷಣೆಯಲ್ಲಿ ಉತ್ಪತ್ತಿಯಾಗುವ ಪೋಷಕಾಂಶಗಳನ್ನು ಬಳಸಿಕೊಂಡು ಬದುಕುತ್ತವೆ. ಜೆಲ್ಲಿ ಮೀನುಗಳಲ್ಲಿ ನಾಲ್ಕು ವಿಧಗಳಿದ್ದು, ಸ್ಕೆçಫೋಜೋವಾ (ನೈಜ ಜೆಲ್ಲಿ ಮೀನು), ಕ್ಯೂಬೋಜೋವಾ (ಬಾಕ್ಸ್ ಜೆಲ್ಲಿ ಮೀನು), ಸ್ಟೌರೊಜೋವಾ (ಕಾಂಡದ ಜೆಲ್ಲಿ ಮೀನು), ಹೈಡ್ರೋಜೋವಾ (ಹೈಡ್ರಾಯ್ಡಗಳು) ಪ್ರಮುಖವಾದವುಗಳು.
ಅತಿದೊಡ್ಡ ಗಾತ್ರದ ಜೆಲ್ಲಿ ಮೀನನ್ನು ಲಯನ್ಸ್ ಮೇನ್ ಎಂದು ಕರೆಯಲಾಗುತ್ತದೆ. ಇದರ ದೇಹವು 3 ಅಡಿಗಿಂತಲೂ ಹೆಚ್ಚು ಉದ್ದವಿರುತ್ತದೆ. ಕತ್ತಲಿನಲ್ಲಿ ಹೊಳೆಯುವ ಮೀನುಗಳೂ ಇದ್ದು, ಇವುಗಳನ್ನು ಫಾಸೊರೆಸೆನ್ಸ್ ಎಂದು ಕರೆಯಲಾಗುತ್ತದೆ. ಅತ್ಯಂತ ಅಪಾಯಕಾರಿ ಜೆಲ್ಲಿ ಮೀನುಗಳಲ್ಲಿ ಬಾಕ್ಸ್ ಜೆಲ್ಲಿ (ಜೀನಸ್ ಚಿರೋನೆಕ್ಸ್, ಚಿರೋಪ್ಸಲ್ಮಸ್ ಮತ್ತು ಕ್ಯಾರಿಬಿxಯಾ) ಮತ್ತು ಎರಡು ಸೆಂ.ಮೀ ಉದ್ದದ ಸಣ್ಣ ಇರುಕಂಡಿj (ಕರುಕಿಯಾ ಬಾರ್ನೆಸಿ) ಜೆಲ್ಲಿ ಮೀನುಗಳಿವೆ. ಈ ಜೆಲ್ಲಿ ಮೀನುಗಳ ವಿಷಪೂರಿತ ಕಾಲುಗಳು ಮನುಷ್ಯ ಅಥವಾ ಪ್ರಾಣಿಗಳನ್ನು ಕುಟುಕಿದರೆ ಸಾಯುವುದು ಗ್ಯಾರಂಟಿ.
ಚಿರಯವ್ವನ
ಈ ಮೀನಿಗೆ ಕನ್ನಡದಲ್ಲಿ ಅಂಬಲಿ ಮೀನು, ಲೋಳೆ ಮೀನು ಎಂದೆಲ್ಲಾ ಕರೆಯುತ್ತಾರೆ. ಇವುಗಳು ನಿರ್ದಿಷ್ಟ ವಯಸ್ಸಿಗೆ ಬರುತ್ತಿದ್ದಂತೆ ತಮ್ಮ ವಯಸ್ಸಾದ ಜೀವಕೋಶಗಳನ್ನು ನವೀಕರಿಸಿಕೊಂಡು ಮತ್ತೆ ಹೊಸತಾದ ಜೀವಿಗಳಾಗಿ ಬದಲಾಗುತ್ತವೆ. ಇವುಗಳ ದೇಹಸ್ಥಿತಿ ಎಷ್ಟೇ ವಿಷಮ ಸ್ಥಿತಿಯಲ್ಲಿದ್ದರೂ ನಿರ್ದಿಷ್ಟವಾದ ವಯಸ್ಸಿನ ನಂತರ ಇವುಗಳು ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮತ್ತೆ ಬಾಲ್ಯವನ್ನು ಪಡೆಯುತ್ತವೆ.
ಸಮುದ್ರ ಆಮೆಗಳು ಮತ್ತು ದೊಡ್ಡ ಮೀನುಗಳು ಜೆಲ್ಲಿ ಮೀನುಗಳನ್ನು ತಿನ್ನುತ್ತವೆ. ಇತ್ತೀಚೆಗೆ ಇಂಗ್ಲೆಂಡ್‌ನ ಕಾರ್ನ್ವಾಲ್ ಪಾಲ್ ಮೌತ್ ಕರಾವಳಿಯಲ್ಲಿ ಅಪರೂಪದ ಹಾಗೂ ಬೃಹತ್ ಗಾತ್ರದ ಜೆಲ್ಲಿ ಫಿಶ್ ಸಮುದ್ರ ಸಂಶೋಧಕಿ ಲಿಝೀ ಡ್ಯಾಲಿ ಮತ್ತು ಡಾನ್ ಅಬೋಟ್ ಸಂಶೋಧನೆಯಲ್ಲಿ ತೊಡಗಿದ್ದಾಗ ಇವರ ಕಣ್ಣಿಗೆ ಬಿದ್ದಿದೆ. ಈ ಮೀನು ಸುಮಾರು 1.5 ಮೀಟರ್ ಉದ್ದವಿತ್ತು. ಇಷ್ಟು ಬೃಹತ್ ಗಾತ್ರದ ಜೆಲ್ಲಿ ಮೀನು ಸಾಗರದಲ್ಲಿ ಇದುವರೆಗೆ ಎಲ್ಲೂ ಕಂಡುಬಂದಿಲ್ಲವೆಂದು ಸಾಗರ ಸಂಶೋಧಕರು ಹೇಳಿದ್ದಾರೆ.
ಸಂತೋಷ್ ರಾವ್ ಪೆರ್ಮುಡ