ಚಾಲುಕ್ಯರ ಸಮಾಧಿಯ ಸುತ್ತಮುತ್ತ

ಇಮ್ಮಡಿ ಪುಲಿಕೇಶಿ ಇಲ್ಲಿಯೇ ಮಲಗಿರುವನೇ?

Team Udayavani, Oct 26, 2019, 4:10 AM IST

ಹುಲಿಗೆಮ್ಮನ ಕೊಳ್ಳದಲ್ಲಿ ಇರುವ ಚಿಕ್ಕ ಚಿಕ್ಕ ಗುಡಿಗಳು, ಸಮಾಧಿ ರೂಪದ ದೇಗುಲಗಳಂತೆ ತೋರುತ್ತವೆ. ಪ್ರತಿ ಗುಡಿಯಲ್ಲೂ ಲಿಂಗಗಳಿವೆ. ಸ್ಥಳೀಯರು ಇವನ್ನು 12 ಜ್ಯೋತಿರ್ಲಿಂಗಗಳು ಅಂತ ಅರ್ಥೈಸಿಕೊಂಡು, ಪೂಜಿಸುವುದೂ ಈ ತಾಣದ ವಿಶೇಷ. ಆದರೆ, ಆ ಪೂಜೆ ಸಲ್ಲಿಕೆಯಾಗುತ್ತಿರುವುದು, ಚಾಲುಕ್ಯರ ಸಮಾಧಿಗಳಿಗಾ? ಎನ್ನುವ ಪ್ರಶ್ನೆ, ಈಗ ಶಾಸನಗಳ ಅಧ್ಯಯನದಿಂದ ಹೊರಹೊಮ್ಮಿದೆ…

ಕರ್ನಾಟಕವನ್ನು ಆಳಿದ ಅರಸು ಮನೆತನಗಳಲ್ಲಿ ಬಾದಾಮಿ ಚಾಲುಕ್ಯರು ಪ್ರಮುಖರು. ಎರಡು ಶತಮಾನಗಳ ಕಾಲ ಸಮರ್ಥವಾಗಿ ಆಳ್ವಿಕೆ ನಡೆಸಿದ, ರಾಜಮನೆತನ. ಬಾದಾಮಿಯ ಗುಹಾಂತರ ದೇಗುಲಗಳಲ್ಲಿ, ಇಂದಿಗೂ ಅವರ ಕಾಲದ ನೆನಪುಗಳು ಹಚ್ಚ ಹಸಿರು. ಅರೆಭಟ್ಟನ ಶಾಸನಗಳಲ್ಲಿ, ಅದರಲ್ಲಿ ಕೆತ್ತಿದ ತ್ರಿಪದಿಗಳಲ್ಲಿ, ವಿಷ್ಣು- ಶಿವನ ಭವ್ಯ ಕೆತ್ತನೆಗಳಲ್ಲಿ, ಚಾಲುಕ್ಯರ ಕಲಾಕೈಂಕರ್ಯ ಕಾಣಿಸುತ್ತದೆ. ಆದರೆ, ಚಾಲುಕ್ಯ ಅರಸರ ಕೊನೆ ಹೇಗಾಯಿತು? ಅವರ ಸಮಾಧಿಗಳೆಲ್ಲಿ?- ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ, ಬರೀ ನಿಗೂಢತೆಯ ಗೋಡೆಗಳೇ ಎದ್ದು ತೋರುತ್ತವೆ. ಕಲೆಯನ್ನು ಬಯಲಿಗಿಟ್ಟು, ಆಡಂಬರದ ಸಮಾಧಿ ಕಟ್ಟಿಸಿಕೊಳ್ಳದೆ, ತಮ್ಮ ಸಾವನ್ನು ಅತ್ಯಂತ ರಹಸ್ಯಮಯವಾಗಿಸಿ, ಇತಿಹಾಸದಲ್ಲಿ ಮರೆಯಾದ, ಆ ಅರಸರ ಕೊನೆಯ ದಿನಗಳ ಪುಟಗಳು ಇದೀಗ ತೆರೆದುಕೊಳ್ಳುತ್ತಿವೆ.

ಬಾದಾಮಿ ಚಾಲುಕ್ಯರಲ್ಲಿ ಪ್ರಮುಖ ಅರಸನಾಗಿದ್ದ ಇಮ್ಮಡಿ ವಿಕ್ರಮಾದಿತ್ಯನ ಸಮಾಧಿ, ಬಾದಾಮಿ ತಾಲೂಕಿನ ಬಿ.ಎನ್‌. ಜಾಲಿಹಾಳ (ಭದ್ರನಾಯಕ ಜಾಲಿಹಾಳ) ಹತ್ತಿರದಲ್ಲಿರುವ ಹುಲಿಗೆಮ್ಮನ ಕೊಳ್ಳದಲ್ಲಿ ಇರುವ ಬಗ್ಗೆ ಸ್ಪಷ್ಟತೆ ಇದೆ. ಅಲ್ಲಿನ ಶಾಸನವೂ, ಇದನ್ನು ಪುಷ್ಟೀಕರಿಸುತ್ತದೆ. “ಉಳಿದ ಅರಸರ ಸಮಾಧಿಗಳೂ ಅಲ್ಲಿಯೇ ಇರಬಹುದು. ಉತ್ಖನನದಿಂದ ಮಾತ್ರವೇ ಇದನ್ನು ತಿಳಿದುಕೊಳ್ಳಬಹುದು’ ಎನ್ನುವ ಚರ್ಚೆಗಳು, ಇತಿಹಾಸಕಾರರ ನಡುವೆ ಓಡಾಡುತ್ತಿದೆ. ಹುಲಿಗೆಮ್ಮನ ಕೊಳ್ಳದಲ್ಲಿ ಇರುವ ಚಿಕ್ಕ ಚಿಕ್ಕ ಗುಡಿಗಳು, ಸಮಾಧಿ ರೂಪದ ದೇಗುಲಗಳಂತೆ ತೋರುತ್ತವೆ. ಪ್ರತಿ ಗುಡಿಯಲ್ಲೂ ಲಿಂಗಗಳಿವೆ. ಸ್ಥಳೀಯರು ಇದನ್ನು 12 ಜ್ಯೋತಿರ್ಲಿಂಗಗಳು ಅಂತ ಅರ್ಥೈಸಿಕೊಂಡು, ಪೂಜಿಸುವುದೂ ಈ ತಾಣದ ವಿಶೇಷ.

ಆದರೆ, ಆ ಪೂಜೆ ಸಲ್ಲಿಕೆಯಾಗುತ್ತಿರುವುದು, ಚಾಲುಕ್ಯರ ಸಮಾಧಿಗಳಿಗಾ? ಎನ್ನುವ ಪ್ರಶ್ನೆ, ಈಗ ಶಾಸನಗಳ ಅಧ್ಯಯನದಿಂದ ಹೊರಹೊಮ್ಮಿದೆ. ಈ ಗುಡ್ಡದಲ್ಲಿ 2ನೇ ಪುಲಿಕೇಶಿ ಕೆಲಕಾಲ ವಾಸಿಸಿದ್ದ ಎನ್ನುವ ಕುರಿತು ಉಲ್ಲೇಖಗಳಿವೆ. ಇಲ್ಲಿರುವ 11 ಚಿಕ್ಕ ಚಿಕ್ಕ ದೇವಾಲಯಗಳು 11 ರಾಜರ ಸಮಾಧಿಗಳೇ?- ಎನ್ನುವುದು, ಈಗ ಸಂಶೋಧನೆಗೆ ತೆರೆದುಕೊಂಡ ಸಂಗತಿ. ಹಿಂದೂ ಧರ್ಮದ ಪ್ರಕಾರ, ಒಂದೇ ವಂಶಸ್ಥರ ಅಂತ್ಯಕ್ರಿಯೆಗಳನ್ನು ಒಂದೆಡೆ ಮಾಡುವುದು ಪರಂಪರಾಗತ ರೂಢಿ. ಅಲ್ಲದೆ, ಚಾಲುಕ್ಯ ರಾಜರುಗಳ ಅಸ್ತಿಗಳ ಅಂತ್ಯಕ್ರಿಯೆಗಳನ್ನು ಹುಲಿಗೆಮ್ಮನ ಕೊಳ್ಳದ ಬೆಟ್ಟದಲ್ಲಿ ಮಾಡಿ ಅದರ ಮೇಲೆ ಲಿಂಗಗಳನ್ನು ಸ್ಥಾಪಿಸಿ, ಚಿಕ್ಕ ಚಿಕ್ಕ ದೇವಸ್ಥಾನ ನಿರ್ಮಿಸಿರಬಹುದು ಎಂದೂ ಊಹಿಸಲಾಗುತ್ತಿದೆ. ಜಯಸಿಂಹನಿಂದ ಆರಂಭಗೊಂಡ ಇವರ ಆಳ್ವಿಕೆ, ಇಮ್ಮಡಿ ಕೀರ್ತಿವರ್ಮನ ಆಡಳಿತದೊಂದಿಗೆ ಅಂತ್ಯಗೊಂಡಿದ್ದು, ಯಾರ ಸಾವಿನ ಕುರಿತೂ ದಟ್ಟ ವಿವರಗಳ ಲಭ್ಯತೆಯಿಲ್ಲ.

“ಚಾಲುಕ್ಯ ರಾಜವಂಶಸ್ಥರ ರುದ್ರಭೂಮಿ, ಹುಲಿಗೆಮ್ಮನ ಕೊಳ್ಳದ ಸಮೀಪವಿರುವ ಬಗ್ಗೆ ಐತಿಹ್ಯ ಸಂಗತಿಗಳು ಹೇಳುತ್ತವೆ. ಇಲ್ಲೊಂದು ಶಿಖರವಲ್ಲದ ದೇಗುಲ ಮಂಟಪವಿದ್ದು, ಅದರಲ್ಲಿ 2ನೇ ವಿಕ್ರಮಾದಿತ್ಯನ ಅಸ್ತಿಗಳನ್ನು ಸಮಾಧಿ ಮಾಡಿರುವ ಬಗ್ಗೆ ಚಾಲುಕ್ಯರ ಕಾಲದ ಶಾಸನಗಳು ಹೇಳುತ್ತವೆ’ ಎನ್ನುವುದು ಡಾ. ಜಾರ್ಜ್‌ ಮಿಶೆಲ್‌ರ ಸಂಶೋಧನಾ ವಾದ. ಇಂಗ್ಲೆಂಡಿನ ಈ ಸಂಶೋಧಕ ಸತತ 30 ವರುಷ, ಚಾಲುಕ್ಯರ ದೊರೆಗಳ ಜಾಡು ಹಿಡಿದು, ಅಪರೂಪದ ಸಂಗತಿಗಳನ್ನು ಬೆಳಕಿಗೆ ತಂದವರು. 16 ರಾಜವಂಶಸ್ಥ ಪೀಳಿಗೆಯಲ್ಲಿ 7 ಪ್ರಮುಖರನ್ನು ಉಲ್ಲೇಖೀಸಿದ ಹಿರಿಮೆ ಇವರದ್ದು.

ಚಾಲುಕ್ಯ ಅರಸರ ಸಾವು ರಹಸ್ಯಮಯ: ಈ ಬೆಟ್ಟದಲ್ಲಿ ಸಂಶೋಧನೆಗಳು ನಿರಂತರ. ಬಾಗಲಕೋಟೆಯ ಸಂಶೋಧಕ ಮತ್ತು ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ಈ ಭಾಗದಲ್ಲಿ 2005ರಿಂದ ನಿರಂತರ ಸಂಶೋಧನೆ ಕೈಗೊಂಡವರು. ಅವರ ಮಾತುಗಳು ಹೀಗಿವೆ, “ಬಾದಾಮಿ ಚಾಲುಕ್ಯ ಅರಸರ ಜೀವನ ವೃತ್ತಾಂತವೇ ಅತಿ ರೋಚಕ ಹಾಗೂ ರಹಸ್ಯಮಯ. ಶಿವನನ್ನು, ವಿಷ್ಣುವನ್ನು ಆರಾಧಿಸುತ್ತಿದ್ದ ಈ ರಾಜರು ತಮ್ಮ ಸಾವನ್ನೂ ರಹಸ್ಯಮಯಗೊಳಿಸಿರುವುದೇ ಒಂದು ಆಶ್ಚರ್ಯ’. “ಹುಲಿಗೆಮ್ಮನ ಕೊಳ್ಳದಲ್ಲಿ ಇಮ್ಮಡಿ ವಿಕ್ರಮಾದಿತ್ಯನ ಸಮಾಧಿ ಇದೆ. ಅದರ ಅಕ್ಕಪಕ್ಕದಲ್ಲಿ 11 ಚಿಕ್ಕ ಚಿಕ್ಕ ಗುಡಿಗಳು, ಇತರ ಅರಸರ ಸಮಾಧಿಗಳು ಆಗಿರಬಹುದು. ಉತ್ಖನನ ಮಾಡಿದರೆ, ಪೂರ್ಣ ಸತ್ಯ ಗೊತ್ತಾಗಲಿದೆ’ ಎನ್ನುತ್ತಾರೆ, ಸುಳ್ಳೊಳ್ಳಿ. “ಚಾಲುಕ್ಯರ ನಾಡಿನ ಪುನರ್‌ ಶೋಧನೆ’ ವಿಚಾರವಾಗಿ ಅವರು ಕೃತಿಯನ್ನೂ ಬರೆದಿದ್ದು, ಅದು ಈ ಡಿಸೆಂಬರ್‌ನಲ್ಲಿ, ದೆಹಲಿಯಲ್ಲಿ ಬಿಡುಗಡೆಗೊಳ್ಳಲಿದೆ.

* ಶ್ರೀಶೈಲ ಕೆ. ಬಿರಾದಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಮ ಸದ್ಗುಣಗಳ ಆಗರ. ಅವನಂಥ ಮಗ ಹುಟ್ಟಬೇಕು ಎನ್ನುವುದು ಈಗಿನವರ ಕನಸು. ರಾಮನಂಥ ಒಬ್ಬ ಮಗು ಒಂದು ಊರಲ್ಲಿದ್ದರೆ ವಿಶ್ವದ ಅಸಂಖ್ಯ ಸಂಖ್ಯೆಯ ವೃದ್ಧಾಶ್ರಮಗಳಲ್ಲಿ...

  • ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ತಂಬೂರಿಯನ್ನು ತೊಂಬತ್ತು ವರುಷಗಳಿಂದ, ನಿರಂತರವಾಗಿ- ಸುಶ್ರಾವ್ಯವಾಗಿ ನುಡಿಸುತ್ತಲೇ ಇದ್ದಾರೆ. ಒಂದು ದಿನವೂ ಆ ತಂಬೂರಿಯನ್ನು...

  • ತುಂಗಾರತಿ ನೆರವೇರುವ ಈ ದೃಶ್ಯ ಕಣ್ಣಿಗೊಂದು ಹಬ್ಬ. ಇನ್ನೇನು ಕರ್ಪೂರಕ್ಕೆ ದೀಪ ಸ್ಪರ್ಶಿಸಿ, ಆರತಿ ಬೆಳಗಿತು ಎನ್ನುವ ಹೊತ್ತಿಗೆ ತುಂಗೆಯಲ್ಲಿರುವ ಮೀನುಗಳು,...

  • "ಕೋಟೆನಾಡಿನ ಊಟಿ' ಖ್ಯಾತಿಯ ಜೋಗಿಮಟ್ಟಿ ಗಿರಿಧಾಮದ ಸೌಂದರ್ಯ ಮಲೆನಾಡನ್ನು ಹೋಲುವಂಥದ್ದು. ಬೆಂಕಿಯಂಥ ಚಳಿ, ಹಿಮ್ಮೆಟ್ಟುವ ಬಿರುಗಾಳಿ, ಪ್ರೇಮ ಕಾಶ್ಮೀರವನ್ನು...

  • ಉಡವು ಸರಿಸೃಪ ಜಾತಿಗೆ ಸೇರಿದೆ. ಇದು ಸಕಲ ವಿದ್ಯೆಗಳನ್ನು ಬಲ್ಲ ಸಸ್ತನಿ. ನೀರಿನಲ್ಲಿ ಸರಾಗವಾಗಿ ಈಜಬಲ್ಲುದು. ತನ್ನ ಕಾಲಿನ ಮೇಲೆ ನಿಂತುಕೊಂಡು ಸುತ್ತಲ ಪರಿಸರ...

ಹೊಸ ಸೇರ್ಪಡೆ