ದಸರಾ ಮಾತೇ ಎಲ್ಲಾ…;ಕುದ್ರೋಳಿ ದಸರಾ ವೈಭವ


Team Udayavani, Sep 28, 2019, 3:07 AM IST

dasara-maate

ದಸರಾ! ಈ ನಾಡಹಬ್ಬದ ಅಂದಚೆಂದ, ಅದ್ಧೂರಿಗಳನ್ನು ವರ್ಣಿಸುವಾಗಲೆಲ್ಲ ಕಣ್ಣೆದುರು ಮೆರವಣಿಗೆ ಹೊರಡುವುದು ಮೈಸೂರಿನ ಚಿತ್ರಗಳು. ಅಲ್ಲಿನ ಮಹಾರಾಜರ ಖಾಸಗಿ ದರ್ಬಾರ್‌, ದಸರಾ ಆಚರಣೆಯ ವೈವಿಧ್ಯ ಸೌಂದರ್ಯಗಳು… ಹೀಗೆ. ಈ ಸಾಂಪ್ರದಾಯಿಕ ಚೆಲುವಿನಾಚೆಗೂ, ಕರುನಾಡಿನ ಉದ್ದಗಲ ದಸರಾ ಸೌಂದರ್ಯದ ಪಾರಂಪರಿಕ ದಿಗ್ದರ್ಶನವಾಗುತ್ತದೆ. ಚಾರಿತ್ರಿಕ ಮಹತ್ವದೊಡನೆ, ಅವು ತಮ್ಮದೇ ವೈಶಿಷ್ಟದೊಂದಿಗೆ, ಗಮನ ಸೆಳೆಯುತ್ತವೆ…

ಮಂಗಳಾ ಧ್ಯಾನ
ಮಂಗಳೂರಿಗೆ ದಸರಾದ ಚೆಲುವು ಪಸರಿಸಿದ ದೇವಿ, ಬೋಳಾರಿನಲ್ಲಿರುವ ಮಂಗಳಾದೇವಿ. ಎರಡು ಸಾವಿರ ವರ್ಷಗಳ ಇತಿಹಾಸವಿರುವ ಈ ದೇಗುಲ, ಅಶ್ವಿ‌ಜ ಮಾಸದಲ್ಲಿ ನಡೆಯುವ ನವರಾತ್ರಿ ಉತ್ಸವದಿಂದ ವಿಶೇಷವಾಗಿ ಕಳೆಗಟ್ಟುತ್ತದೆ. ಇಲ್ಲಿನ ನವರಾತ್ರಿ ಉತ್ಸವಕ್ಕೆ ಸುಮಾರು 400 ವರ್ಷಗಳ ಇತಿಹಾಸವೇ ಇದೆ. ಒಂಬತ್ತು ದಿನಗಳಲ್ಲೂ ನವವಿಧದಲ್ಲಿ ದೇವಿಯನ್ನು ಅಲಂಕರಿಸಲಾಗುತ್ತದೆ. ಮೊದಲನೇ ದಿನ ಶೈಲಪುತ್ರಿಯಾಗಿ, ಎರಡನೇ ದಿನ ಬ್ರಹ್ಮಚಾರಿಣಿಯಾಗಿ, ಮೂರನೇ ದಿನ ಚಂದ್ರಘಂಟಿಯಾಗಿ, ನಾಲ್ಕನೇ ದಿನ ಕೋಶ್ಮಾಂಡವಾಗಿ, 5ನೇ ದಿನ ಸ್ಕಂದ ಮಾತಾಳಾಗಿ, 6ನೇ ದಿನ ಕಾತ್ಯಾಯಿನಿಯಾಗಿ, 7ನೇ ದಿನ ಚಂಡಿಕೆಯಾಗಿ, 8ನೇ ದಿನ ಮಹಾಸರಸ್ವತಿಯಾಗಿ ಪೂಜಿಸಲ್ಪಡುತ್ತಾಳೆ. 9ನೇ ದಿನವಾದ ಮಹಾನವಮಿಯಂದು ದೇವಿಯನ್ನು ವಾಗ್ದೇವಿಯಾಗಿ ಪೂಜಿಸಲಾಗುತ್ತದೆ. ಅಲ್ಲದೆ, ಅಂದು ಆಯುಧ ಪೂಜೆಯನ್ನೂ ನೆರವೇರಿಸಲಾಗುತ್ತಿದ್ದು, ದೇವಿಯ ಎಲ್ಲ ಆಯುಧಗಳಿಗೂ ಪೂಜೆ ಇರುತ್ತದೆ. ತೆನೆಹಬ್ಬ, ದೊಡ್ಡರಂಗಪೂಜೆ ಜೊತೆಗೆ ಚಂಡಿಕಾಯಾಗ, ಇಲ್ಲಿ ನವರಾತ್ರಿಯಂದು ನಡೆಯುವ ವಿಶೇಷ ಪೂಜೆಗಳು. ಇದೇ ವೇಳೆ, ಮಕ್ಕಳಿಗೆ ಅಕ್ಷರಾಭ್ಯಾಸವೂ ನೆರವೇರುತ್ತದೆ.

* ಧನ್ಯಾ ಬಾಳೆಕಜೆ

***

ಯಲ್ಲಮ್ಮನ ಮುಂದೆ ಬೆಳಗುವ ದೀಪ
ಪೌರಾಣಿಕ ಹಾಗೂ ಮೂರು ಸಾವಿರ ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯ ಏಳುಕೊಳ್ಳದ ಶ್ರೀ ಯಲ್ಲಮ್ಮ ದೇವಸ್ಥಾನ ಈಗ ನವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ.ಶಕ್ತಿಪೀಠಗಳಲ್ಲಿ ಯಲ್ಲಮ್ಮ ದೇವಿಯೂ ಒಂದಾಗಿದ್ದು, ಅನಾದಿ ಕಾಲದಿಂದಲೂ ಇಲ್ಲಿ ನವರಾತ್ರಿ ಅತ್ಯಂತ ವಿಜೃಂಭಣೆ. ಮಹಾನವಮಿಯ ಅಮಾವಾಸ್ಯೆಯಿಂದ ವಿಜಯದಶಮಿ ವರೆಗೂ ಇಲ್ಲಿ ಜಾತ್ರೆಯ ಸಂಭ್ರಮ ಏರ್ಪಡುತ್ತದೆ. ಈ ವೇಳೆ ಲಕ್ಷಾಂತರ ಭಕ್ತರು ಆಗಮಿಸಿ, ಯಲ್ಲಮ್ಮ ದೇವಿಯ ಗರ್ಭಗುಡಿ ಎದುರು ದೀಪಕ್ಕೆ ಎಣ್ಣೆ ಎರೆಯುತ್ತಾರೆ. “ಇಲ್ಲಿ ದೀಪಕ್ಕೆ ಎಣ್ಣೆ ಹಾಕಿದರೆ, ನಮ್ಮ ಜೀವನವೂ ದೀಪದಂತೆ ಬೆಳಗುತ್ತದೆ’ ಎಂಬುದು ಭಕ್ತರೊಳಗೆ ಬೇರೂರಿರುವ ನಂಬಿಕೆ.”ಜಮದಗ್ನಿ ಮುನಿಯ ಪತ್ನಿ, ಪರಶುರಾಮನ ತಾಯಿ ರೇಣುಕಾ ದೇವಿಯಾಗಿ ಈ ಯಲ್ಲಮ್ಮನನ್ನು ಆರಾಧಿಸಲಾಗುತ್ತದೆ. 9ನೇ ಶತಮಾನದಿಂದ ಇಲ್ಲಿ ನವರಾತ್ರಿ ಉತ್ಸವ ಜರುಗುತ್ತಿದ್ದ ಬಗ್ಗೆ ಉಲ್ಲೇಖಗಳಿವೆ’ ಎನ್ನುತ್ತಾರೆ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ.

* ಭೈರೋಬಾ ಕಾಂಬಳೆ

***

ರಂಭಾಪುರಿ ದಸರಾ ದರ್ಬಾರ್‌
ನಾಡಹಬ್ಬ ನವರಾತ್ರಿಯಲ್ಲಿ ಧರ್ಮ ಸಂವರ್ಧನೆ, ಸಂಸ್ಕೃತಿಯ ಬೆಳವಣಿಗೆ­ಗಾಗಿ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಪೀಠವು ಪೂರ್ವಕಾಲದಿಂದಲೂ ತನ್ನನ್ನು ತೊಡಗಿಸಿಕೊಂಡಿದೆ. 1934ರಲ್ಲಿ ಶ್ರೀ ಶಿವಾನಂದ ಜಗದ್ಗುರುಗಳು, ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಮನವಿ ಮೇರೆಗೆ ಅರಮನೆಗೆ ಆಗಮಿಸಿ, ದಸರಾ ಮಹೋತ್ಸವಕ್ಕೆ ಚಾಲನೆ ಕೊಟ್ಟಿದ್ದರು. ಶ್ರೀ ವೀರಗಂಗಾಧರ ಜಗದ್ಗುರುಗಳು ನಾಡಿನೆಲ್ಲೆಡೆ ಶರನ್ನವರಾತ್ರಿ ಆಚರಿಸಿ, ನಾಡಹಬ್ಬದ ಹಿರಿಮೆ ಹೆಚ್ಚಿಸಿದರು. 1983ರಿಂದ ಶ್ರೀ ವೀರರುದ್ರಮುನಿ ಜಗದ್ಗುರುಗಳು ನಾಡಹಬ್ಬದ ಜೊತೆಗೆ ಧರ್ಮ ದರ್ಶನಗಳ ಸಮಾರಂಭಗಳನ್ನು ಸಂಯೋಜಿಸಿದರು. 1992ರಲ್ಲಿ 121ನೇ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದ ಈಗಿನ ಶ್ರೀ ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ದಸರಾ ವೈಭಕ್ಕೆ ಇನ್ನಷ್ಟು ಶಕ್ತಿ ತುಂಬಿದರು. ದಸರಾ ದರ್ಬಾರ್‌ನಲ್ಲಿ ಜಗದ್ಗುರುಗಳು ಪ್ರತಿ ನಿತ್ಯ ಧರಿಸುವ ಪೋಷಾಕೇ ಒಂದು ಆಕರ್ಷಣೆ. ಹತ್ತು ಹಲವು ವೈಶಿಷ್ಟéಗಳ ಈ ಗುರುಪೀಠ ಪರಂಪರೆಯ ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ 28ನೇ ವರ್ಷದ ಶರನ್ನವರಾತ್ರಿಯ ದಸರಾ ರಜತ ಮಹೋತ್ಸವವು ದಾವಣಗೆರೆಯಲ್ಲಿ ನಡೆಯುತ್ತಿದೆ.

* ನಟರಾಜ್‌

***

ಮಡಿಕೇರಿಯ ಭಾವೈಕ್ಯ ಚೆಲುವು
ನಾಡಿನ ಸುಂದರ ದಸರಾಗಳಲ್ಲಿ ಮಡಿಕೇರಿಯದ್ದೂ ಒಂದು. ಇಲ್ಲಿನ ದಸರಾಗೆ ಭಾವೈಕ್ಯತೆಯ ಶೋಭೆಯಿದೆ. 1781ರಿಂದ 1809ರ ವರೆಗೆ ಕೊಡಗು ನಾಡನ್ನು ಆಳಿದ ದೊಡ್ಡವೀರ ರಾಜೇಂದ್ರ ಒಡೆಯರ್‌ರ ದಸರಾ ದರ್ಬಾರ್‌ ಬಹಳ ಜೋರಾಗಿತ್ತು. ಮೈಸೂರು ರಾಜಮನೆತನದ ದರ್ಬಾರ್‌ನ ವಿಜೃಂಭಣೆಯನ್ನು ಹೋಲುವಂತೆಯೇ ಏರ್ಪಾಡಾಗುತ್ತಿತ್ತು. ರಾಜರ ದರ್ಬಾರ್‌, ಕತ್ತಿವರಸೆ, ಕುದುರೆ- ಜಂಬೂ ಸವಾರಿ ಅಲ್ಲದೇ, ಕೊಡವರ ಸಾಹಸಕ್ರೀಡೆಗಳಿಗೂ ಇದು ವೇದಿಕೆಯಾಗಿತ್ತು. ದೇವರ ವಿಗ್ರಹ ಹೊತ್ತ ಅಂಬಾರಿ ಆನೆ, ಮಹಾರಾಜರನ್ನು ಕೂರಿಸಿಕೊಂಡ ಆನೆ, ಮಡಿಕೇರಿಯ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದವು. ಗಜದಳ, ಅಶ್ವದಳ, ಸೈನ್ಯದಳದೊಂದಿಗೆ, ಸಾಂಪ್ರದಾಯಿಕ ಉಡುಗೆ ತೊಟ್ಟ ಕೊಡವರೂ, ಇದರೊಂದಿಗೆ ಸಾಗುತ್ತಿದ್ದರು. ಆದರೆ, ಯಾವಾಗ ಚಿಕ್ಕವೀರರಾಜ (1834) ಬ್ರಿಟಿಷರಿಗೆ ಶರಣಾಗತಿಯಾದರೋ, ಅಲ್ಲಿಂದ ಸಾರ್ವಜನಿಕ ಉತ್ಸವವಾಗಿ ಮಾರ್ಪಾಡಾಯಿತು. ನವರಾತ್ರಿಯಲ್ಲಿ ಶ್ರೀ ಕೋಟೆ ಮಾರಿಯಮ್ಮ, ಶ್ರೀ ಚೌಡೇಶ್ವರಿ, ಶ್ರೀ ಕಂಚಿ ಕಾಮಾಕ್ಷಮ್ಮ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ- ಹೀಗೆ ಶಕ್ತಿದೇವತೆಗಳ ಆರಾಧನೆ ಇಲ್ಲಿ ನಡೆಯುತ್ತದೆ. ಮೈಸೂರಿನ ದಸರಾ ಕಣ್ತುಂಬಿಕೊಂಡ ಎಷ್ಟೋ ಮಂದಿ, ಇಲ್ಲಿಗೂ ಬರುವುದುಂಟು. ರಸ್ತೆಯುದ್ದಗಲ ವಿದ್ಯುದ್ದೀಪಾಲಂಕಾರ, ಸ್ತಬ್ಧಚಿತ್ರಗಳ ಮೆರವಣಿಗೆ, ಕೊಡವ ಸಂಸ್ಕೃತಿಯ ಅನಾವರಣ… ಇವೆಲ್ಲವನ್ನೂ ಅತ್ಯಂತ ಶಿಸ್ತಿನಿಂದ, ವೈಭವದಿಂದ ಇಲ್ಲಿನ ದಸರಾ ಸಮಿತಿ ಆಯೋಜಿಸುತ್ತದೆ.

* ಸಾತ್ವಿಕ್‌ ವಿರಾಜಪೇಟೆ

***

ಸ್ವರ್ಣ ಸುಂದರ ಶರನ್ನವರಾತ್ರಿ
ಇಲ್ಲಿ ದಸರಾಕ್ಕಿಂತ ಶರನ್ನವರಾತ್ರಿ ಉತ್ಸವ ಅನ್ನೋದೇ ಜನಪ್ರಿಯ. ಒಂಬತ್ತು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕವಾಗಿ ದೇವಿ ಆರಾಧನೆ ಮಾಡುವುದು ಇಲ್ಲಿನ ಕ್ರಮ. ಶಾರದಾ ವಿಸರ್ಜನೆ, ದಶಮಿ ದಿನದಂದು ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನಾಡಿಗೆ ಒಳಿತಾಗುವಂತೆ ಶ್ರೀದೇವಿಯಲ್ಲಿ ಪ್ರಾರ್ಥಿಸುವುದೂ ಭಕ್ತಿ ಭಾವದ ಪರಾಕಾಷ್ಠೆಯ ಘಳಿಗೆ. ಉತ್ತರ ಕನ್ನಡದ ಶಿರಸಿ ಸ್ವರ್ಣವಲ್ಲೀ ಮಠದ 1200 ವರ್ಷಗಳ ಪರಂಪರೆಯಲ್ಲಿ ಶರನ್ನವರಾತ್ರಿ ಉತ್ಸವ ನಡೆದುಕೊಂಡು ಬಂದಿದ್ದೂ ವಿಶೇಷ. ಇಲ್ಲಿನ ಆರಾಧನಾ ದೇವಿ ಶ್ರೀ ರಾಜರಾಜೇಶ್ವರಿ. ಶ್ರೀಚಕ್ರ ಪೂಜೆ ಮಠದ ವಿಶೇಷ. ನವರಾತ್ರಿಯಲ್ಲಿ ಇಪ್ಪತ್ತಕ್ಕೂ ಅಧಿಕ ವೈದಿಕರಿಂದ ಯಜುರ್ವೇದ, ಸಾಮವೇದ, ಋಗ್ವೇದ, ದೇವಿ ಭಾಗವತ ಸೇರಿದಂತೆ ವಿವಿಧ ಪಾರಾಯಣಗಳು ತಪ್ಪುವುದಿಲ್ಲ. ಶ್ರೀದೇವಿಗೆ ಕಾಯಿ ಕಡಬು, ಸುಳಿ ಕಡುಬು, ಮೋದಕ, ಪುರಿ, ವಡೆ, ಪಾಯಸ, ಕೇಸರಿಗಳ ನೈವೇದ್ಯಕ್ಕೆ ನಿತ್ಯವೂ ಸಿದ್ಧ. ವಿವಿಧ ಬಣ್ಣದ ಸೀರೆಗಳನ್ನು ತೊಟ್ಟು ಅಲಂಕಾರಗೊಂಡ ದೇವಿ ಅಭಯದಾತೆ.

* ರಾಘವ ಬಿ.ಕೆ.

***

ಹೇಮಗುಡ್ಡದ ಜಂಬೂ ಸವಾರಿ
ಗಂಗಾವತಿ ಸಮೀಪದ ಹೇಮಗುಡ್ಡ­ದಲ್ಲಿ (ಎಮ್ಮಿ ಗುಡ್ಡ) ನಡೆಯುವ ಜಂಬೂ ಸವಾರಿಗೆ ಐತಿಹಾಸಿಕ ಶೋಭೆಯಿದೆ. ಎಚ್‌.ಜಿ. ರಾಮುಲು ಅವರ ಕುಟುಂಬ 3 ದಶಕಗಳಿಂದ ಉತ್ಸವವನ್ನು ನಿರ್ವಹಿಸುತ್ತಿದ್ದರೂ, 14ನೇ ಶತಮಾನದಿಂದ ಇಲ್ಲಿ ನವರಾತ್ರಿ ಆಚರಿಸುತ್ತಿದ್ದ ಬಗ್ಗೆ ಉಲ್ಲೇಖಗಳಿವೆ. 14ನೇ ಶತಮಾನದಲ್ಲಿ ಕಮ್ಮಟದುರ್ಗದ ದೊರೆಯು ಈ ದೇಗುಲ ನಿರ್ಮಿಸಿದ ಎನ್ನುತ್ತದೆ, ಇತಿಹಾಸ. ತರುವಾಯ ಹಂಪಿ, ಕನಕಗಿರಿಯ ನಾಯಕ ವಂಶಸ್ಥರು ಯುದ್ಧಕ್ಕೆ ತೆರಳುವಂಥ ಸಂದರ್ಭದಲ್ಲಿ ಹೇಮಗುಡ್ಡಕ್ಕೆ ಬಂದು ದೇವಿ ಆರಾಧನೆ ಮಾಡುತ್ತಿದ್ದರಂತೆ. ಗುಡ್ಡ, ಬೆಟ್ಟಗಳ ನೈಸರ್ಗಿಕ ಸೊಬಗಿನಿಂದ ಕೂಡಿದ ಈ ದೇಗುಲ, ಗುಪ್ತ ಕೋಟೆಯಂತಿದ್ದು, ವೈರಿಗಳು ಇಲ್ಲಿಗೆ ನುಸುಳುವುದು ಅಸಾಧ್ಯವಾಗಿತ್ತು. ಕನಕಗಿರಿ ನಾಯಕ ದೊರೆಗಳಿಗೆ ಈ ದೇಗುಲ, ರಕ್ಷಣಾ ಕವಚವೇ ಆಗಿತ್ತು. ಖುದ್ದಾಗಿ ಅರಸರೇ, ಇಲ್ಲಿನ ನವರಾತ್ರಿ ಉತ್ಸವಕ್ಕೆ ಆಸ್ಥೆ ವಹಿಸುತ್ತಿದ್ದರು. ಕಾಲಾನು­ಕ್ರಮೇಣ ಪರಕೀಯರ ದಾಳಿಯಿಂದ ಇಲ್ಲಿ ಉತ್ಸವ ನಿಂತು ಹೋಗಿತ್ತು. ಈ ಇತಿಹಾಸದ ನೆನಪಿಗಾಗಿ ಮಾಜಿ ಸಂಸದ ಎಚ್‌.ಜಿ. ರಾಮುಲು ಕುಟುಂಬವು, ಪುನಃ ದೇವಸ್ಥಾನ ಜೀರ್ಣೋದ್ಧಾರಗೊಳಿಸಿ, 30 ವರ್ಷಗಳಿಂದ ದಸರಾ ಉತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದೆ. ದೇವಿಗೆ 9 ದಿನಗಳ ಕಾಲ ಪುಷ್ಪ, ವಸ್ತ್ರಾಲಂಕಾರ ಮಾಡಲಾಗುತ್ತದೆ. ಕೊನೆಯ ದಿನದಂದು ದೇವಿಯ ಮೂರ್ತಿಯನ್ನು ಆನೆ ಮೇಲೆ ಮೆರವಣಿಗೆ ಮಾಡಲಾಗುತ್ತದೆ.

* ದತ್ತು ಕಮ್ಮಾರ್‌

***

ಕುದ್ರೋಳಿಯ ದಸರಾ ಖದರ್‌…
ಮಂಗಳೂರಿನಲ್ಲಿ ದಸರಾ ಎಂದರೆ, ನೆನಪಾಗೋದೇ ಕುದ್ರೋಳಿ ದಸರಾ. ಇಲ್ಲಿನ ಶ್ರೀ ಗೋಕರ್ಣನಾಥೇಶ್ವರ ದೇಗುಲದಲ್ಲಿ ನವರಾತ್ರಿ ಮಹೋತ್ಸವ 1960ರಿಂದಲೂ ವಿಜೃಂಭಣೆಯಿಂದ ನಡೆಯುತ್ತಿದೆ. ದೇವಸ್ಥಾನ ನವೀಕರಣ­ಗೊಂಡ ಬಳಿಕ ಮಂಗಳೂರು ದಸರಾವನ್ನೂ ಆರಂಭಿಸಿ, ವೈಭವದಿಂದ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಶಾರದಾ ಮಾತೆ, ಆದಿಶಕ್ತಿ, ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿಯನ್ನು ವಿಗ್ರಹರೂಪದಲ್ಲಿ ಒಂಬತ್ತು ದಿನಗಳ ಕಾಲವೂ ಆರಾಧಿಸಲಾಗುತ್ತದೆ. ನವದುರ್ಗೆಯರೊಂದಿಗೆ ಮಹಾಗಣಪತಿ ಮೂರ್ತಿಯನ್ನೂ ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತದೆ. ಈ ಮೂರ್ತಿಗಳ ರಚನಾ ಕಾರ್ಯದಲ್ಲಿ ಪಶ್ಚಿಮ ಬಂಗಾಳ ಸಹಿತ ನಾನಾ ರಾಜ್ಯಗಳ 20ಕ್ಕೂ ಅಧಿಕ ಕಲಾವಿದರು ತೊಡಗಿಸಿಕೊಳ್ಳುತ್ತಾರೆ. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಮಂಗಳೂರು ದಸರಾವೆಂದರೆ, ಕರಾವಳಿ ನಗರಿಗೆ ಏನೋ ಒಂದು ಸಡಗರ. ವಿದ್ಯುದ್ದೀಪಗಳ ಅಲಂಕಾರದಿಂದ ಇಡೀ ನಗರ ಝಗಮಗಿಸುತ್ತದೆ. ಧಾರ್ಮಿಕತೆಯ ಜೊತೆಗೆ ಸಾಂಸ್ಕೃತಿಕ ರಂಗಿನ ಚಿತ್ತಾರ. ಕೊನೆಯ ದಿನದಂದು ನಡೆಯುವ ಶೋಭಾಯಾತ್ರೆಯೂ ಅತ್ಯಂತ ವೈಭವ. 75ಕ್ಕೂ ಹೆಚ್ಚು ಟ್ಯಾಬ್ಲೋಗಳು, ಕುಣಿತ, ವಿವಿಧ ಕಲಾ ಕಸರತ್ತುಗಳೊಂದಿಗೆ ನಗರದ ಬೀದಿಗಳಲ್ಲಿ ವೈಭವದ ಶೋಭಾಯಾತ್ರೆ ಸಂಚರಿಸುವುದನ್ನು ಕಣ್ತುಂಬಿಕೊಳ್ಳುವುದೇ ಸಡಗರ. ಅಂದು ನಗರದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಜನಜಂಗುಳಿಯನ್ನು ನೋಡುವ ಚೆಂದಕ್ಕೆ ಮನ ಸೋಲಲೇಬೇಕು.

***

ಹಂಪಿಯ ಸಾಂಕೇತಿಕ ದಸರಾ…
ಇಂದು ದಸರಾ ಅಂದ್ರೆ ಮೈಸೂರು ಅಂತ ಹೇಗೆ ಹೇಳ್ತೀವೋ, ಮೂರ್ನಾಲ್ಕು ಶತಮಾನಗಳ ಹಿಂದೆ ಹಂಪಿಯದ್ದೇ ವೈಭವಯುತ ದಸರಾ. ಮೈಸೂರಿನ ದಸರಾಕ್ಕೂ ಹಂಪಿಯೇ ಪ್ರೇರಣೆ. ಹಿಂದಿನ ವಿಜೃಂಭಣೆ ಈಗ ಇಲ್ಲವಾದರೂ, ಆ ಪರಂಪರೆಗೆ ಈಗಲೂ ಒಂದು ಚೆಲುವಿದೆ. ವಿಜಯನಗರ ಅರಸರ ಕಾಲದಲ್ಲಿ ದಸರಾ ಹಬ್ಬವನ್ನು ಅತ್ಯಂತ ವೈಭವೋಪೇತವಾಗಿ ಆಚರಿಸಲಾಗುತ್ತಿತ್ತು. ಮೈಸೂರು ದಸರಾದಂತೆ ಹಂಪಿಯಲ್ಲೂ ದಸರಾ ದರ್ಬಾರ್‌ ನಡೆಯುತ್ತಿತ್ತು. ಮಹಾನವಮಿ ದಿಬ್ಬ ನಿರ್ಮಾಣಗೊಂಡಿದ್ದು ಕೂಡ ಇದೇ ಹಿನ್ನೆಲೆಯಲ್ಲಿ. ದಸರಾದಂದು ಮಹಾನವಮಿ ದಿಬ್ಬದಿಂದ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಬೃಹತ್‌ ಮೆರವಣಿಗೆ ನಡೆಯುತ್ತಿತ್ತು. “ಸುಮಾರು 2-3 ಶತಮಾನಗಳ ಪರಂಪರೆಯನ್ನು ಇಂದಿಗೂ ಮುನ್ನಡೆಸಿಕೊಂಡು ಬರಲಾಗುತ್ತಿದೆ’ ಎನ್ನುತ್ತಾರೆ, ದೇಗುಲದ ಆಡಳಿತಾಧಿಕಾರಿ ಪ್ರಕಾಶ್‌ ರಾವ್‌. ದಸರಾದಂದು ಇಲ್ಲಿನ ಪಂಪಾಂಬಿಕೆ, ಭುವನೇಶ್ವರಿ ದೇವಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ವಿಜಯದಶಮಿಯಂದು ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕೆ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ.

* ವೆಂಕೋಬಿ ಸಂಗನಕಲ್ಲು

***

ಮೂಲ ದಸರಾ ಮರೆತರುಂಟೇ?
ವಿಜಯನಗರ ಸಾಮ್ರಾಜ್ಯದ ಪತನ ನಂತರ ದಸರಾದ ಕಂಪು ಹರಡಿದ್ದು, ಶ್ರೀರಂಗಪಟ್ಟಣಕ್ಕೆ. ಮೈಸೂರು ಸಂಸ್ಥಾನದ ಕುರಿತು ಮೂಲ ದಸರಾದ ನೆನಪುಗಳು ಇಲ್ಲಿನ್ನೂ ಅಚ್ಚಳಿಯದಂತೆ ಇವೆ. ರಾಜ ಒಡೆಯರ್‌ ಅವರ ಆಳ್ವಿಕೆಯ ಕಾಲದಲ್ಲಿ, 1610ರ ಸೆ.8ರಿಂದ 17ರ ವರೆಗೆ ಇಲ್ಲಿ ಮೊದಲ ಮಹಾನವಮಿ ಆಚರಣೆ ಆಯಿತೆನ್ನುತ್ತದೆ, ಇತಿಹಾಸ. ಅಚ್ಚರಿಯೆಂದರೆ, 1610ರ ಸೆ.6ರಂದು ರಾಜ ಒಡೆಯರ್‌ ಅವರ ಹಿರಿಯ ಮಗ ನರಸರಾಜ ಒಡೆಯರ್‌ ದೈವಾಧೀನವಾಗಿರುತ್ತಾರೆ. ಆದರೂ, ಇಲ್ಲಿನ ದಸರಾ ಆಚರಣೆ ನಿಲ್ಲುವುದಿಲ್ಲ. 1799ರವರೆಗೂ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯುತ್ತಿತ್ತು. ನಂತರವಷ್ಟೇ ಆ ಸಂಭ್ರಮ ಮೈಸೂರಿಗೆ ವರ್ಗಾವಣೆ ಆಯಿತು. ದಸರಾ ನಡೆದು ಬಂದ ಮೂಲ ಸ್ಥಳ ಶ್ರೀರಂಗಪಟ್ಟಣದ ಬಗ್ಗೆ ಯಾರೂ ಅಷ್ಟಾಗಿ ಆಸಕ್ತಿ ವಹಿಸಿರಲಿಲ್ಲ. ಸ್ಥಳೀಯ ಇತಿಹಾಸಕಾರರು ಕನ್ನಡಪರ ಹೋರಾಟ­ಗಾರರ ಒತ್ತಾಯದಿಂದ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಆಸಕ್ತಿ ವಹಿಸಿ, ಶ್ರೀರಂಗಪಟ್ಟಣದಲ್ಲಿ ಕಳೆದ 11 ವರ್ಷಗಳಿಂದ ಸರಳವಾಗಿ ದಸರಾ ಆಚರಿಸಲಾಗುತ್ತಿದೆ.

* ಗಂಜಾಂ ಮಂಜು

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಮಂಗಳೂರಿನಲ್ಲಿ ಇಂದು “ಕುಡ್ಲದ ಪಿಲಿ ಪರ್ಬ’ ಸಂಭ್ರಮ

ಮಂಗಳೂರಿನಲ್ಲಿ ಇಂದು “ಕುಡ್ಲದ ಪಿಲಿ ಪರ್ಬ’ ಸಂಭ್ರಮ

7

ಶ್ರೀ ಮಂಗಳಾದೇವಿಗೆ ಸ್ವರ್ಣ ಪ್ರಭಾವಳಿ, ಪಾದುಕೆ ಸಮರ್ಪಣೆ

5

ಕುದ್ರೋಳಿ: ಮಂಗಳೂರು ದಸರಾಕ್ಕೆ ಚಾಲನೆ

10

ನವರಾತ್ರಿಯ ವೈಭವೋತ್ಸವ…. ಮಾತೃ – ಪ್ರಕೃತಿ – ಶಕ್ತಿ ಉಪಾಸನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.