ಮೈಸೂರ ಹಿರಿಮೆ ಶೃಂಗೇರಿ ಮಹಿಮೆ

Team Udayavani, Sep 28, 2019, 3:09 AM IST

ಮೈಸೂರಿನ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಚಾಲುಗೊಳ್ಳುವುದೇ ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ. ಅಷ್ಟಕ್ಕೂ, ಮಲೆನಾಡಿನ ತುಂಗಾ ತೀರದ ಮಠಕ್ಕೂ, ಅರಮನೆ ನಗರಿಯ ರಾಜಮನೆತನಕ್ಕೂ ಇದ್ದ ನಂಟೇನು?

ಮೈಸೂರು ರಾಜಮನೆತನಕ್ಕೆ ಶೃಂಗೇರಿ ಮಠದ ಮೇಲೆ ಮೊದಲಿನಿಂದಲೂ ಅತೀವ ಭಕ್ತಿ. ಒಂದು ಕಾಲದಲ್ಲಿ ವಿಜಯನಗರ ಅರಸರು ಶ್ರೀಮಠದ ಮೇಲೆ ತೋರಿದ ಭಕ್ತಿ- ಆದರಗಳನ್ನೇ, ಮೈಸೂರು ಅರಸರು ಮುಂದುವರಿಸಿದರು ಅಂತಲೇ ವ್ಯಾಖ್ಯಾನಿಸಬಹುದು. ಮಿಗಿಲಾಗಿ, ಮೈಸೂರಿನ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಚಾಲುಗೊಳ್ಳುವುದೇ, ಶೃಂಗೇರಿಯ ಜಗದ್ಗುರುಗಳ ಆಶೀರ್ವಾದ­ದೊಂದಿಗೆ.

ಇಮ್ಮಡಿ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಶೃಂಗೇರಿಯೊಂದಿಗೆ ಮೈಸೂರಿನ ಸಂಬಂಧ ನಿರೂಪಿಸುವ ದಾಖಲೆಗಳನ್ನು ಜಗದ್ಗುರು ಶೃಂಗೇರಿ ಶ್ರೀಮಠೀಯ ಪ್ರಾಕ್ತಾನ ಲೇಖಮಾಲ ಸಂಗ್ರಹ ಮತ್ತು ಆ್ಯನುವಲ್‌ ರಿಪೋರ್ಟ್‌ ಆಫ್ ದಿ ಮೈಸೂರ್‌ ಆಕೀìಯಲಾಜಿಕಲ್‌ ಡಿಪಾರ್ಟ್‌ ಮೆಂಟ್‌ ಹಾಗೂ ಮೈಸೂರು ಅರಮನೆಯ ಪತ್ರಾಗಾರದಲ್ಲಿ ನಿರೂಪಿಸಲಾಗಿದೆ.

ಈ ನಂಟು ಮೊದಲು ಬೆಸೆದಿದ್ದು, ದ್ವಿತೀಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ (ಕ್ರಿ.ಶ. 1705-1741) ಕಾಲದಲ್ಲಿ. ಇಮ್ಮಡಿ ಕೃಷ್ಣರಾಜ ಒಡೆಯರ್‌, ಆಗ ಮೈಸೂರಿನ ದೊರೆಗಳು. ಜಗದ್ಗುರುಗಳ ಪದಾರ್ಪಣೆಯಿಂದ ರಾಜ್ಯಕ್ಕೆ ಅಗತ್ಯವಾದ ಮಳೆ ಬಂದು ಸರ್ವ ಸಮೃದ್ಧಿಯಾಗುವುದೆಂದು ಮಹಾರಾಜರು, ಗುರುಗಳನ್ನು ಮೈಸೂರಿಗೆ ಆಮಂತ್ರಿಸಿ ವೈಭವದ ಸ್ವಾಗತ ನೀಡಿದ್ದರು. ಮಹಾರಾಜರು ಆ ಸಂದರ್ಭದಲ್ಲಿ 1200 ವರಹ ಮತ್ತು ಅದಕ್ಕೆ ಸಂಬಂಧಿಸಿದ ಕೊಪ್ಪಲುಗಳನ್ನು ಗುರುಗಳಿಗೆ ದಾನವಾಗಿ ಕೊಟ್ಟಿದ್ದರು ಎಂಬ ಉಲ್ಲೇಖವಿದೆ.

ಶೃಂಗೇರಿ ಜಗದ್ಗುರುಗಳು ಆದಿಶಂಕರಾಚಾರ್ಯರ ನೇರ ಪ್ರತಿನಿಧಿಗಳು. ಅವರನ್ನು ಕೇವಲ ದಕ್ಷಿಣ ಭಾರತವಲ್ಲದೇ, ಉತ್ತರದ ಮರಾಠ ರಾಜಮನೆತನದವರಾದ ಹೊಳ್ಕರ ಮತ್ತು ಪೇಶ್ವೆಗಳು ಇವರನ್ನು ಅತ್ಯುಚ್ಚ ಧರ್ಮ ಗುರುಗಳೆಂದು ಪರಿಗಣಿಸಿದ್ದರು. ನಿಜಾಮ, ಪೇಶ್ವೆ, ಮೈಸೂರು ರಾಜರು ಮತ್ತಿತರರು ಕೊಟ್ಟ ಹಲವಾರು ಪ್ರಾಚೀನ ಸನದುಗಳನ್ನು ಅವರು ಇರಿಸಿಕೊಂಡಿದ್ದಾರೆ. ಅದರಲ್ಲೂ ಮೈಸೂರು ಮಹಾರಾಜರ ಪತ್ರಗಳು, ಸಿಂಹಾಸನ, ಪೂಜಾಸಾಮಗ್ರಿ, ಪಲ್ಲಕ್ಕಿಗಳು ಇಂದಿಗೂ ಶ್ರೀಮಠದಲ್ಲಿವೆ.

ಲಾರ್ಡ್‌ ರಿಪ್ಪನ್ನರು ಭಾರತದ ವೈಸರಾಯ್‌ ಆಗಿದ್ದಾಗ, (ಕ್ರಿ.ಶ. 1880-84) ಮೈಸೂರಿನಲ್ಲಿ ಕಮೀಷನರ್‌ ಆಡಳಿತವು ಕ್ರಿ.ಶ.1881ರಲ್ಲಿ ಕೊನೆಗೊಂಡಿತು. ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ದತ್ತಕ ಪುತ್ರ ಚಾಮರಾಜ ಒಡೆಯರ್‌ ಪಟ್ಟವೇರಿದರು. ಕಮೀಷನರ್‌ ಆಡಳಿತ ಕಾಲದಿಂದಲೂ ಮುಮ್ಮಡಿ ಕೃಷ್ಣರಾಜ ಒಡೆಯರ್‌, ಶೃಂಗೇರಿಯೊಂದಿಗೆ ಆಪ್ತ ಬಂಧ ಇರಿಸಿಕೊಂಡಿದ್ದರು.

1931ರಲ್ಲಿ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ಸನ್ಯಾಸ ಪಡೆದಂದಿನಿಂದ ಶೃಂಗೇರಿ ಮಠದೊಂದಿಗೆ, ಮೈಸೂರಿನ ಅರಸರ ಸಂಬಂಧವು ಅತ್ಯಂತ ಹತ್ತಿರವಾಯಿತು. ಜಯಚಾಮರಾಜ ಒಡೆಯರು ತಮ್ಮ ಆಯುಷ್ಯದ ಕೊನೆಯವರೆಗೂ ಶ್ರೀ ಅಭಿನವ ವಿದ್ಯಾತೀರ್ಥರ ಪಾದ ಸೇವಕರಾ ಗಿದ್ದರು. ಜಯಚಾಮರಾಜ ಒಡೆಯರವರು ತಮ್ಮ ಮರಣಕ್ಕೆ (ಸೆ.23, 1974) ಕೆಲವೇ ದಿನಗಳ ಮುಂಚೆ ಶೃಂಗೇರಿಗೆ ಬಂದು ಶ್ರೀ ಶಾರದಾಂಬೆ ಹಾಗೂ ಜಗದ್ಗುರುಗಳ ದರ್ಶನ ಪಡೆದಿದ್ದರು.

ಈಗಲೂ ಮಹಾರಾಜ ಯದುವೀರ, ರಾಜಮಾತೆ ಪ್ರಮೋದಾದೇವಿ ಅವರು ಶೃಂಗೇರಿ ಮಠಕ್ಕೆ ಭೇಟಿಕೊಡುತ್ತಲೇ ಇರುತ್ತಾರೆ. ಮೈಸೂರು ಅರಮನೆಯಲ್ಲಿ ಶೃಂಗೇರಿ ಕಿರೀಟವಿದ್ದು, ದಸರಾ ದರ್ಬಾರ್‌ ವೇಳೆ ಇದಕ್ಕೆ ಪೂಜೆಯೂ ಸಲ್ಲಿಕೆಯಾಗುತ್ತದೆ. ಶೃಂಗೇರಿಯ ದಸರಾ ಈಗಲೂ ಮಲೆನಾಡಿಗರ ಪಾಲಿಗೆ ಮೈಸೂರು ದಸರಾವಿದ್ದಂತೆ. ಶಾರದಾ ಮಾತೆಗೆ, ನಿತ್ಯವೂ ವಿವಿಧ ಅಲಂಕಾರದೊಂದಿಗೆ ಪೂಜೆ, ಮಹಾರಥೋತ್ಸವ, ಜಗದ್ಗುರುಗಳ ಕಿರೀಟಾಧಾರಣೆ ಇವೆಲ್ಲವೂ ಪರಮ ಶಾಸ್ತ್ರೋಕ್ತ, ವೈಭವಯುತವಾಗಿ ನಡೆಯುತ್ತದೆ.

* ರಮೇಶ್‌ ಕುರುವಾನೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ ಮೊದಲ ಭಾರತೀಯ ನಾರಿ ಚೆನ್ನಮ್ಮ. ಈ ಸಂಗತಿ, ಕರುನಾಡಿನ ರೋಮಾಂಚಕ ಪುಳಕ ಕೂಡ. ಆ ಹೆಮ್ಮೆಯಲ್ಲೇ ಬದುಕುತ್ತಿರುವ ಆಕೆಯ ವಂಶಸ್ಥರ...

  • ಯಾವುದೇ ಕಛೇರಿ ಇರಲಿ... ಅದರ ಆರಂಭಕ್ಕೂ ಮುನ್ನ, ಕಣ್ಮುಚ್ಚಿಕೊಂಡು ಶಾರದೆಯನ್ನು ಧ್ಯಾನಿಸಿಯೇ, ಕದ್ರಿಯವರು ಸ್ಯಾಕ್ಸೋ ಮೂತಿಗೆ ತುಟಿಯೊಡ್ಡುತ್ತಿದ್ದರು. ಕದ್ರಿಯವರ...

  • ಇತ್ತೀಚೆಗೆ ಭಾರತ ಮತ್ತು ಚೀನಾದ ಅನೌಪಚಾರಿಕ ಶೃಂಗಸಭೆಗೆ ಸಾಕ್ಷಿಯಾದ, ಮಹಾಬಲಿಪುರಂ ದೇಗುಲವು ಶಿಲ್ಪಶಾಸ್ತ್ರದ ಮಹಾಪಾಠಶಾಲೆ. ಪಲ್ಲವರ ಕಾಲದ ಕಲಾಸೃಷ್ಟಿ ಇದು....

  • ಇದು ಒಬ್ಬ ಅಪರೂಪದ ಪೊಲೀಸಪ್ಪನ ಕತೆ. ಮಡಿದ ಮೇಲೆ ಕಣ್ಣುಗಳು, ಮಣ್ಣುಪಾಲಾಗದೇ ಇರಲಿಯೆಂಬ ಕಳಕಳಿ ಇಟ್ಟುಕೊಂಡ ಮನುಷ್ಯ. ಈ ಕಾರಣ, ಹೋದಲ್ಲೆಲ್ಲ ನೇತ್ರದಾನದ ಕುರಿತು...

  • ಇಂಡೋನೇಷ್ಯಾದಲ್ಲಿ ನಡೆಯುವ ಈ ಜಾನುವಾರುಗಳ ಓಟ ಸ್ಪರ್ಧೆ, ನಮ್ಮ ದಕ್ಷಿಣ ಕನ್ನಡದ ಕಂಬಳವನ್ನೇ ಹೋಲುತ್ತದೆ. ಸುಮಾತ್ರ ದ್ವೀಪದ "ದಾನಹ್‌ ದಾತರ್‌' ಎಂಬ ಹಳ್ಳಿಯಲ್ಲಿ...

ಹೊಸ ಸೇರ್ಪಡೆ