ಹಳೇ ಬ್ಯಾಟು ಹಳೇ ಚೆಂಡು
Team Udayavani, Sep 28, 2019, 3:01 AM IST
ಮೊದಲ ಮುತ್ತಿನ ನೆಪದಲ್ಲಿ
ಎದುರಾಳಿ ಆಟಗಾರರಿಂದಲೂ ಕಿಂಗ್ ಎಂದು ಕರೆಸಿಕೊಂಡವನು ವಿವಿಯನ್ ರಿಚರ್ಡ್ಸ್. ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ರಾಜಮರ್ಯಾದೆ ತಂದುಕೊಟ್ಟದ್ದು ರಿಚರ್ಡ್ಸ್ನ ಹೆಚ್ಚುಗಾರಿಕೆ. ಅವನನ್ನು ಸರಿಗಟ್ಟುವಂಥ ಮತ್ತೂಬ್ಬ ನಾಯಕ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಸಿಗಲಿಲ್ಲ ಎಂದರೆ ಉತ್ಪ್ರೇಕ್ಷೆಯೆನಿಸಲಾರದು. ತಾನು ಆಡಿದಷ್ಟೂ ಕಾಲ ಮೈದಾನದಲ್ಲಿ ರಾಜನಂತೆಯೇ ಇದ್ದರು. ನಿವೃತ್ತಿಯಾಗಿ ಕೆಲವು ದಶಕಗಳೇ ಕಳೆದಿದ್ದರೂ, ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಹೆಸರು ಲೆಕ್ಕಾಚಾರ ಮಾಡುವಾಗ ರಿಚರ್ಡ್ಸ್ ಹೆಸರು ಮೇಲಿನ ಸಾಲಿನಲ್ಲಿ ಕಾಣಿಸುತ್ತದೆ!
ರಿಚರ್ಡ್ಸ್ನನ್ನು ಕಿಂಗ್ ಎಂದು ಕರೆಯುವುದೇಕೆ ಎಂಬ ಹಲವರ ಪ್ರಶ್ನೆಗೆ ಇದಿಷ್ಟೇ ಉತ್ತರ. ರಿಚರ್ಡ್ಸ್ ಸದಾ ಕುರುಚಲು ಗಡ್ಡದ ಗೆಟಪ್‌ನಲ್ಲಿಯೇ ಇರುತ್ತಿದ್ದ. ಒಮ್ಮೆ ಕೂಡಾ ನೀಟಾಗಿ ಶೇವ್ ಮಾಡಿಕೊಂಡು ಆತ ಆಟದ ಅಂಗಳದಲ್ಲಿ ಕಾಣಿಸಿಕೊಳ್ಳಲಿಲ್ಲ. ರಿಚರ್ಡ್‍ಸ್ನ ಈ ವರ್ತನೆಯ ಹಿಂದೆ ಏನೋ ಕಾರಣ ಇರಬಹುದೆಂಬ ಅನುಮಾನ ಒಬ್ಬ ಕ್ರೀಡಾ ಪತ್ರಕರ್ತನಿಗೆ ಬಂತು. ಆತ ಸಂದರ್ಭ ನೋಡಿಕೊಂಡು, ಈ ಪ್ರಶ್ನೆಯನ್ನು ರಿಚರ್ಡ್ಸ್ನ ಮುಂದಿಟ್ಟ. ಆಗ ರಿಚರ್ಡ್ಸ್ ನೀಡಿದ ಉತ್ತರ ಹೀಗಿತ್ತು- ಯೌವನದ ಆರಂಭದ ದಿನಗಳಲ್ಲಿ ನಾನು ಒಬ್ಬಳನ್ನು ತುಂಬಾ ಇಷ್ಟಪಟ್ಟಿದ್ದೆ.
ಆಕೆಗೂ ನನ್ನ ಮೇಲೆ ಒಲವಿತ್ತು. ಆ ಹುಡುಗಿ ನನ್ನ ಕೆನ್ನೆಗೆ ಮುತ್ತಿಟ್ಟಳು. ಅದು, ಪ್ರೀತಿಸಿದ ಜೀವದಿಂದ ನನಗೆ ದೊರೆತ ಮೊದಲ ಮತ್ತು. ಆ ಮುತ್ತಿನಲ್ಲಿ ಪ್ರೀತಿ, ಕಾಳಜಿ, ಮೋಹ, ಸಡಗರ, ಅವಸರ,ಉದ್ವೇಗ, ಉನ್ಮಾದ…ಹೀಗೆ ಏನೇನೆಲ್ಲಾ ಇತ್ತು. ಒಂದು ವೇಳೆ ಶೇವಿಂಗ್ ಮಾಡಿದರೆ, ಆ ನವಿರುಭಾವವೆಲ್ಲಾ ಹೋಗಿಬಿಡ್ತದೆ ಅನಿಸಿಬಿಡ್ತು. ಹಾಗೆ ಆಗಬಾರದು, ಗೆಳತಿಯ ಸಿಹಿಮುತ್ತಿನ ನೆನಪು ನನ್ನೊಂದಿಗೇ ಉಳಿಯಬೇಕು ಅನಿಸಿತು. ಆ ಕಾರಣದಿಂದಲೇ ನಾನು ಶೇವಿಂಗ್ ಮಾಡಲು ಪ್ರಯತ್ನವನ್ನೇ ಮಾಡಲಿಲ್ಲ….
ಗಾವಸ್ಕರ್ 9 ಬೌಂಡರಿ ಹೊಡೆದ ಕಥೆ!
1980-90ರ ದಶಕದ ಕ್ರಿಕೆಟ್ ಅಂದಾಕ್ಷಣ, ಕ್ರಿಕೆಟ್ ಪ್ರೇಮಿಗಳಿಗೆ ನೆನಪಾಗುವ ಹೆಸರುಗಳು ಸುನೀಲ್ ಗಾವಸ್ಕರ್, ಕಪಿಲ್ ದೇವ್ ಅವರದ್ದೇ. ಸುನೀಲ್ ಗಾವಸ್ಕರ್‌ಗೆ ಸೆಂಚುರಿ ಸ್ಟಾರ್ ಎಂಬ ಹೆಸರಿತ್ತು. ಕಾರಣ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲಿಗೆ 10,000 ರನ್ ಪೂರೈಸಿದ ಹಾಗೂ ಅತಿಹೆಚ್ಚು ಶತಕ ಬಾರಿಸಿದ (34) ಹೆಗ್ಗಳಿಕೆ ಅವನದಾಗಿತ್ತು. ಗಾವಸ್ಕರ್ ಕುಳ್ಳ ಆಗಿದ್ದರಿಂದ, ಆತನಿಗೆ ಲಿಟ್ಸ್‌ಮಾಸ್ಟರ್ ಎಂಬ ಹೆಸರೂ ಇತ್ತು.
ಈ ಗಾವಸ್ಕರ್, ಪತ್ರಿಕೆಗಳಲ್ಲಿ ತನ್ನ ಆಟದ ಕುರಿತು ಸಣ್ಣದೊಂದು ಟೀಕೆ ಬಂದರೂ ಸಹಿಸುತ್ತಿರಲಿಲ್ಲ. ಹಾಗಂತ, ಅವನೇನು ಮತ್ತೂಂದು ಪತ್ರಿಕಾಗೋಷ್ಠಿ ಕರೆದು ಪತ್ರಕರ್ತರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರಲಿಲ್ಲ. ಬದಲಿಗೆ, ಯಾವ ವಿಷಯವಾಗಿ ಟೀಕಿಸಿದ್ದಾರೆ ಎಂದು ಗಮನಿಸಿ, ಮುಂದಿನ ಪಂದ್ಯದಲ್ಲಿ ಆ ತಪ್ಪೇ ಕಾಣಿಸದಂತೆ ಆಟವಾಡುತ್ತಿದ್ದ! ಪರಿಣಾಮ, ಐದಾರು ದಿನಗಳ ಹಿಂದಷ್ಟೇ ಅವನ ಆಟವನ್ನು ಟೀಕಿಸಿ ಬರೆದ ಪತ್ರಕರ್ತರೇ, ಅನಿವಾರ್ಯವಾಗಿ ಅವನನ್ನು ಹೊಗಳಬೇಕಾಗುತ್ತಿತ್ತು.
ಅಂಥದೇ ಒಂದು ಸಂದರ್ಭ. ಇದು 1987ರ ಮಾತು. ರಿಲಯನ್ಸ್ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಒಂದು ಪಂದ್ಯದಲ್ಲಿ ಈ ಗಾವಸ್ಕರ್, ಬಹಳ ನಿಧಾನದ ಆಟವಾಡಿದ. 56 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ಬೌಂಡರಿಯನ್ನೂ ಹೊಡೆಯಲಿಲ್ಲ. ಮರುದಿನದ ಪತ್ರಿಕೆಯಲ್ಲಿ ಕ್ರೀಡಾಪತ್ರಕರ್ತರು ಗಾವಸ್ಕರ್‌ನ ಆಟವನ್ನು ಟೀಕಿಸಿದ್ದರು. ಒನ್ ಡೇ ಮ್ಯಾಚನ್ನು ಟೆಸ್ಟ್ ರೀತಿಯಲ್ಲಿ ಆಡಿದ ಗಾವಸ್ಕರ್, ಫೋರ್ ಹೊಡೆಯಲು ಬರದ ಗಾವಸ್ಕರ್ ಎಂದೆಲ್ಲಾ ಬರೆದುಬಿಟ್ಟರು.
ಮೂರು ದಿನಗಳ ನಂತರ, ನ್ಯೂಜಿಲೆಂಡ್ ವಿರುದ್ಧ ಪಂದ್ಯ. ಅವತ್ತು ಗಾವಸ್ಕರ್‌ಗೆ ವಿಪರೀತ ಜ್ವರ. ಆತ ಆಡುವುದೇ ಅನುಮಾನ ಎನ್ನಲಾಗಿತ್ತು. ಆದರೆ, ತಾನಿವತ್ತು ಆಡಿಯೇ ತೀರುವುದಾಗಿ ಪಟ್ಟು ಹಿಡಿದು ಆತ ಫೀಲ್ಡ…ಗೆ ಇಳಿದೇಬಿಟ್ಟ. ಗಾವಸ್ಕರ್‌ಗೆ ಹುಷಾರಿಲ್ಲ ಎಂಬುದನ್ನು ಆತನ ಮುಖಲಕ್ಷಣವೇ ಹೇಳುತ್ತಿತ್ತು. ಹೀಗಿದ್ದರೂ ಆತ ವೇಗವಾಗಿ ರನ್ ಹೊಡೆದ. 28 ಎಸೆತಗಳನ್ನು ಎದುರಿಸಿ, 36 ರನ್ ಹೊಡೆದ. ವಿಶೇಷ ಇರುವುದೇ ಇಲ್ಲಿ. ಏನೆಂದರೆ, ಅವನ ಆಟದಲ್ಲಿ 9 ಬೌಂಡರಿಗಳಿದ್ದವು. ಅಂದರೆ ಆತ ಕೇವಲ ಬೌಂಡರಿ ಗಳಿಂದಲೇ 36 ರನ್ ಗಳಿಸಿದ್ದ! ಮೂರು ದಿನಗಳ ಹಿಂದೆ ತನ್ನ ಆಟವನ್ನು ಟೀಕಿಸಿದ್ದವರಿಗೆ ಆತ ಹೀಗೆ ಉತ್ತರ ನೀಡಿದ್ದ…
* ಎ.ಆರ್.ಮಣಿಕಾಂತ್