Udayavni Special

ಗೊರೂರಿನ ರಸಿಕ ಗೊತ್ತುಂಟೋ!?

ಹೇಮಾವತಿ ತೀರದ ಅಳಿಸಿದ ಚಿತ್ರಗಳು

Team Udayavani, Jul 27, 2019, 5:00 AM IST

v-11

ಆಧುನಿಕ ಕನ್ನಡ ಸಾಹಿತ್ಯದ ಗದ್ಯ ಶಿಲ್ಪಿಗಳಲ್ಲೊಬ್ಬರೆನಿಸಿದ ಗೊರೂರು ರಾಮಸ್ವಾಮಿ ಅಯ್ಯಂಗಾರರಿಂದಲೇ ಅವರ ಹುಟ್ಟೂರಾದ ಹಾಸನ ಜಿಲ್ಲೆಯ “ಗೊರೂರು’ ಕನ್ನಡ ಸಾರಸ್ವತ ಲೋಕದಲ್ಲಿ ಚಿರಸ್ಥಾನ ಪಡೆಯಿತು. ಗೊರೂರಿನ ಹೇಮಾವತಿ ಡ್ಯಾಂ ನಿರ್ಮಾಣಕ್ಕಿಂತಲೂ ಮುನ್ನಿನ ಚಿತ್ರಣವನ್ನು ಗೊರೂರರು ತಮ್ಮ “ಹಳ್ಳಿಯ ಚಿತ್ರಗಳು’, “ನಮ್ಮ ಊರಿನ ರಸಿಕರು’ ಮುಂತಾದ ಕೃತಿಗಳಲ್ಲಿ ದಾಖಲಿಸಿದ್ದಾರೆ. ಅವರ ಕಾಲದ “ಹಳ್ಳಿ’, ಪಟ್ಟಣವಾಗಿ ಬೆಳೆದು, ನವನಾಗರೀಕತೆಯ ಪರ್ವ ಅಪಸವ್ಯಗಳಲ್ಲಿ ಕಣ್ಮರೆಯಾಗಿದೆ…

ಕೆಲವು ದಿನಗಳ ಹಿಂದೆ, ಗೊರೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸ ನೀಡಲೆಂದು ಹೋದವನು, ಗೊರೂರು ರಾಮಸ್ವಾಮಿ ಅಯ್ಯಂಗಾರರು ಹುಟ್ಟಿ ಬೆಳೆದ ಮನೆ, ಓಡಾಡಿದ ಬೀದಿ, ಅವರ ಬರಹಗಳಲ್ಲಿ ಕಾಣಿಸಿರುವ ನರಸಿಂಗನ ದೇವಾಲಯ, ಈಜಾಡಿದ ಹೇಮಾವತಿಯ ಮಡು, ಪಕ್ಕದಲ್ಲೇ ನೀರವತೆಯನ್ನು ಅಲ್ಪಸ್ವಲ್ಪ ಉಳಿಸಿಕೊಂಡ ಪುಟ್ಟ ಬನ- ಮುಂತಾದವನ್ನು ಹುಡುಕಿ, ನೋಡಿ ಬಂದೆ. ಗೊರೂರರ ಹೆಸರಿನ ಟ್ರಸ್ಟಿನ ಬೋರ್ಡೊಂದು ಧೂಳು ತಿನ್ನುತ್ತಾ ಕೂತಿತ್ತು. “ಇದರ ಬೀಗ ಯಾವಾಗ ತೆಗೀತಾರೆ?’ ಎಂದು ಪಕ್ಕದ ಮನೆಯವರನ್ನು ಕೇಳಿದರೆ, “ಗೊತ್ತಿಲ್ಲ… ದೇವಸ್ಥಾನದ ಪೂಜಾರರನ್ನು ಕೇಳಿ’ ಎಂದು ನಿರಾಸಕ್ತಿಯ ಉತ್ತರ ನೀಡಿದರು. “ನಮ್ಮ ಊರಿನ ರಸಿಕರು’ ಯಾರೂ ಅಲ್ಲಿ ಕಣ್ಣಿಗೆ ಬೀಳಲೇ ಇಲ್ಲ. ಕಾಲ ಎಷ್ಟೊಂದು ನಿರ್ದಯಿ ಎನ್ನಿಸಿಬಿಟ್ಟಿತು.

ನನ್ನ ಭಾವಲೋಕದೊಳಗಿನ್ನೂ ಅವತ್ತಿನ ಗೊರೂರಿನ ರಸಿಕರೇ ಇದ್ದರು. ಕನ್ನಡ ಮೌಲ್ವಿ, ಹುಸೇನ್‌ ಕೃಷ್ಣ, ಬಸ್‌ ಡ್ರೈವರ್‌, ಬ್ರಾಹ್ಮಣ ಮುದುಕ- ಮುದುಕಿಯರು, ಒಕ್ಕಲಿಗರು, ಅವರ ಮಣ್ಣಿನ ಗಡಿಗೆಗಳು- ಇವೇ ತುಂಬಿದ್ದವು. “ನಮ್ಮ ಊರಿನವರೆಲ್ಲಾ ಬಹಳ ರಸಿಕರು. ಅಲ್ಲಿ ವಿನೋದಪ್ರಿಯರಲ್ಲದವರು ಯಾರೂ ಸಿಕ್ಕುವುದಿಲ್ಲ. ಕೋಪಿಷ್ಠರಾಗಲೀ, ಮುಖವನ್ನು ಗಂಟು ಹಾಕಿಕೊಳ್ಳುವವರಾಗಲಿ, ಅಲ್ಲಿಗೆ ಬಂದರೆ ಕೂಡಲೇ ಮಾಯವಾಗಿಬಿಡುತ್ತಾರೆ. ಅಥವಾ ಮುಂಗೋಪವನ್ನು ಬಿಟ್ಟು ಎಲ್ಲರಂತೆ ತಾವೂ ನಗಲು ಪ್ರಾರಂಭಿಸುತ್ತಾರೆ’ ಎಂಬುದಾಗಿ ಗೊರೂರರು ಬರೆದಿದ್ದ ಮಾತುಗಳಿಗೆ ಹೋಲಿಕೆಯನ್ನು ದುರ್ಬೀನು ಹಾಕಿ ಹುಡುಕುವಂತಾಯ್ತು.

ಗೊರೂರರು ವಿಶೇಷವಾಗಿ ಗುರುತಿಸಿದ್ದ ತಮ್ಮೂರಿನ ಸಾಮರಸ್ಯದ ಬದುಕು, ಸಾಮಾನ್ಯ ಜನಜೀವನದೊಳಗಣ ನೆಮ್ಮದಿ- ಸಹಾನುಭೂತಿ, ಮುಂತಾದವು “ರಸಿಕತೆ’ಯ ಕಡಲನ್ನೇ ಉಕ್ಕಿಹರಿಸಿದಂಥವು. ಇದನ್ನು ವರ್ಣಿಸುವಾಗ ವರ್ಣನೆಯ ರೀತಿಯಲ್ಲಿ ಸ್ವತ್ಛವೂ, ಲಲಿತವೂ ಆದ ಸ್ವಾಭಾವಿಕತೆಯನ್ನು ಕಾಯ್ದುಕೊಂಡಿದ್ದ ಗೊರೂರರು ಹಾಸ್ಯ- ವಿನೋದಾವಕಾಶಗಳಲ್ಲಿ ಮರ್ಯಾದೆ ಮರೆಯದ ಕುತೂಹಲವನ್ನು ತೋರಿ, ತಮ್ಮ ಈ ಗುಣದಿಂದಲೇ ತಮ್ಮ ಬರವಣಿಗೆ ಕನ್ನಡ ಸಾಹಿತ್ಯದಲ್ಲಿ ಮೇಲ್ತರಗತಿಯವೆನಿಸುವಂತೆ ಮಾಡಿದ್ದರು. ಇವರ ಬಹುತೇಕ ರಚನೆಗಳಿಗೆ ಸ್ಫೂರ್ತಿಯೊದಗಿಸಿದ್ದ ನೆಲವಿದು. ಗೊರೂರು ಹಳ್ಳಿ ಮತ್ತು ಹೇಮಾವತಿ ನದಿ- ಈ ಎರಡರೊಡನೆ ಗೊರೂರರಿಗಿದ್ದ ಅದ್ಭುತವಾದ ಪ್ರಾದೇಶಿಕ ಸಂವೇದನೆ ಈಗಿನವರಲ್ಲಿ ತೀರಾ ವಿರಳ. ಹಳ್ಳಿಯ ಜಾನಪದ ಪ್ರಜ್ಞೆಯೊಂದೇ ಭಾರತವನ್ನು ಆಧುನಿಕ ನಾಗರೀಕತೆಯ ಸರ್ವನಾಶದಿಂದ ತಪ್ಪಿಸಬಲ್ಲವೆಂಬುದೂ ಅವರ ನಿಲುವಾಗಿತ್ತು.

ಹಳ್ಳಿಯ ಭಾಗವಾಗಿ ಬೆರೆತು ಹೋಗಿದ್ದರಿಂದಲೇ ಗೊರೂರರಿಗೆ ತಾವು ಕಂಡುಂಡ ಹಳ್ಳಿಯ ಸಮಗ್ರ ಬದುಕನ್ನು ಫೋಟೋಗ್ರಫಿ ಮಾದರಿಯಲ್ಲಿ ದಾಖಲಿಸಲು ಸಾಧ್ಯವಾದಂತಿದೆ. ಎಲ್ಲ ಜಾತಿ, ಎಲ್ಲ ವರ್ಗದವರೊಂದಿಗೂ ಸಮಾನ ಪ್ರೀತಿ- ಶ್ರದ್ಧೆಗಳನ್ನು ತೋರಿದ ಗೊರೂರರ ಮಾನವೀಯ ಸಂವೇದನೆಯು ಜಾತಿ- ಮತ- ಧರ್ಮ ಭೇದಗಳನ್ನು ಮೀರಿ, ಎಲ್ಲರನ್ನೂ ಒಗ್ಗೂಡಿಸುವ ಸೂತ್ರಪ್ರಾಯದಂತಿದೆ.

ಇವರ “ಬೈಲಹಳ್ಳಿಯ ಸರ್ವೇ’ಯನ್ನು ಮನದಲ್ಲಿಟ್ಟುಕೊಂಡೇ ನಾನೂ ಗೊರೂರಿನ ಸರ್ವೇ ಮಾಡಿದೆನೇನೋ! ಹೇಮಾವತಿ ಒಣಗಿ ಹೋಗಿತ್ತು. ಗೊರೂರರು, ಹಲ್ಲುಜ್ಜಿಕೊಂಡು ಬರಲೂ ನದಿಗೆ ಹೋಗುತ್ತಿದ್ದೆವೆಂದು ಬರೆದ ಮಾತು ನೆನಪಿಗೆ ಬಂತು. “ಹೇಮಾವತಿಗೆ ಸಮನಾದ ನದಿಯು ಪ್ರಪಂಚದಲ್ಲೇ ಇಲ್ಲ’ ಎಂಬುದೂ ಅವರದೇ ಅಭಿಮಾನದ ಮಾತು. ನದಿಯ ಪಕ್ಕದಲ್ಲೇ ಒಕ್ಕಲುತನ ಮುಗಿಸಿ, ಕೈಕಾಲು ತೊಳೆಯುತ್ತಿದ್ದವರೊಬ್ಬರನ್ನು ನೋಡಿದೆ. ಮಾತಾಡಿಸುವ ಹಂಬಲವಾದರೂ ಅವರ ಮುಖದ ಗಾಂಭೀರ್ಯ ಕಂಡು ತೆಪ್ಪಗಾದೆ. ಇದೇ ಥರದ ಬೋರೇಗೌಡರಲ್ಲವೇ “ನಮ್ಮ ಊರಿನ ರಸಿಕರು’ ಕೃತಿಯಲ್ಲಿ ಬ್ರಾಹ್ಮಣರನ್ನು ಟೀಕಿಸಿದ್ದೆಂದು ನೆನಪಿಗೆ ಬಂತು. ಬೀದಿ ಗುಡಿಸುವವರನ್ನು ನೇಮಿಸಿಕೊಳ್ಳಲು ಪಂಚಾಯ್ತಿಯಿಂದ ಹಣ ವಸೂಲಿಗೆ ಬಂದಾಗ, ಆ ಬೋರೆಗೌಡ “ಬೀದಿ ಗುಡಿಸೋ ಆಳು ನಿಮ್ಮ ಬ್ರಾಂಬರಿಗೆ ಬೇಕು. ನಿತ್ಯ ಮನೆ ಮುಂದೆ ಎಂಟØತ್ತು ಎಂಜಲೆಲೆ ಹಾಕ್ತೀರಿ. ಗಾಳಿ ಬಂದರೆ ಪಟ ಹಾರಾಡಿದ ಹಂಗೆ ಊರಲ್ಲೆಲ್ಲಾ ಹಾರಾಡ್ತವೆ. ನಾವು ಗಂಗಳದಲ್ಲಿ ಉಂಡು ತೊಳೆದಿºಡ್ತೀವಿ. ನಮಗೆ ಬೇಡ ಬೀದಿ ಗುಡಿಸೋ ಆಳು. ಬ್ರಾಂಬರಿಗೆ ಕಂದಾಯ ಹಾಕಿಬಿಡಿ. ಅವರೇ ಕೊಟ್ಕೊಂಡು, ಆಳಿಟ್ಟುಕೊಂಡು ಬೀದಿ ಗುಡಿಸಿಕೊಳಿ’ ಎನ್ನುತ್ತಾನೆ. ಬೊರೇಗೌಡನ ಮೂಲಕ ತಮ್ಮ ಬ್ರಾಹ್ಮಣ ಸಮಾಜದ ಲೋಪದೋಷಗಳನ್ನು ಟೀಕೆಗೊಳಪಡಿಸುವ ಗೊರೂರರ ಪ್ರಗತಿಪರ ಧೋರಣೆಗೆ ಇದೊಂದು ಉಜ್ವಲ ನಿದರ್ಶನ.

ಹೀಗೆ ಬರಹದಲ್ಲಿ ಗೋಚರಿಸಿರುವ ಗೊರೂರಿನ ಚಿತ್ರವೂ ಕಣ್ಣಮುಂದಿರುವ ವರ್ತಮಾನದ ಚಿತ್ರವೂ ಎಡೆಬಿಡದೆ ತುಲನಾತ್ಮಕವಾಗಿ ಮನದಲ್ಲಿ ಹಾಯ್ದು ಬರುತ್ತಿದ್ದವು. ಸರ್ಕಾರದ ನೆರವಿನ ಕೈಕಾಯದೆ, ತಮ್ಮೂರನ್ನು, ಊರಿನವರ ಬದುಕನ್ನು ಅತ್ಯಂತ ಸ್ವಾರಸ್ಯಪೂರ್ಣವಾಗಿ ಸಾಹಿತ್ಯದಲ್ಲಿ ದಾಖಲಿಸಿ ಹೋದ ಆ ಪುಣ್ಯಾತ್ಮನ ನೆನಪಿಗೆ ಊರವರಾದರೂ ಏನಾದರೂ ಮಾಡಬೇಡವೆ ಎಂಬ ಪ್ರಶ್ನೆ ಮನದಲ್ಲಿ ಉಳಿದಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರರ ಹಾಸ್ಯ ಮನೋಧರ್ಮದ ಸಮಾಜಶಾಸ್ತ್ರೀಯ ಟಿಪ್ಪಣಿಗೆ ಈಗಿನವರು ಬೆಲೆಕೊಟ್ಟು, ಮುಂದಿನವರಿಗೂ ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆಯಲ್ಲವೇ? “ಸಾಯುವವರಿಗೆ ನಮ್ಮೂರು ಸುಖ’ ಎಂಬ ಮಾರ್ಮಿಕ ಉಕ್ತಿಯನ್ನು ನಗುನಗುತ್ತಲೇ ನುಡಿದ ಗೊರೂರರಿಗೆ, “ಬದುಕಿದ್ದಾಗ ಕಾಣದ ಸುಖ ಸತ್ತ ಮೇಲೆ’ (ಇದು ಅವರದೇ ನುಡಿ) ಎಂಬಂತಾಗಿದೆ- ಅಂದಿನ ಮತ್ತು ಇಂದಿನ ಗೊರೂರಿನ ಸಾಕ್ಷ್ಯಚಿತ್ರ!

– ಡಾ. ಎಚ್‌.ಎಸ್‌. ಸತ್ಯನಾರಾಯಣ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹತ್ರಾಸ್ ರೇಪ್ ಕೇಸ್ ಬೇರೆಡೆಗೆ ವರ್ಗಾವಣೆ ಇಲ್ಲ, ಹೈಕೋರ್ಟ್ ವಿಚಾರಣೆ ನಡೆಸಲಿದೆ: ಸುಪ್ರೀಂ

ಹತ್ರಾಸ್ ರೇಪ್ ಕೇಸ್ ಬೇರೆಡೆಗೆ ವರ್ಗಾವಣೆ ಇಲ್ಲ, ಹೈಕೋರ್ಟ್ ವಿಚಾರಣೆ ನಡೆಸಲಿದೆ: ಸುಪ್ರೀಂ

ಭಕ್ತಕೋಡಿ ಸ್ವಿಫ್ಟ್- ಓಮ್ನಿ ಅಪಘಾತ: ಗಾಯಗೊಂಡಿದ್ದ ಓಮ್ನಿ ಚಾಲಕ ಸಾವು

ಭಕ್ತಕೋಡಿ ಸ್ವಿಫ್ಟ್- ಓಮ್ನಿ ಅಪಘಾತ: ಗಾಯಗೊಂಡಿದ್ದ ಓಮ್ನಿ ಚಾಲಕ ಸಾವು

2021ರ ಆರಂಭದಲ್ಲೇ ರಾಜ್ಯದ ಜನರಿಗೆ ಸಿಗಲಿದೆ ಕೋವಿಡ್ ಲಸಿಕೆ: ಸಚಿವ ಸುಧಾಕರ್

2021ರ ಆರಂಭದಲ್ಲೇ ರಾಜ್ಯದ ಜನರಿಗೆ ಸಿಗಲಿದೆ ಕೋವಿಡ್ ಲಸಿಕೆ: ಸಚಿವ ಸುಧಾಕರ್

ಅಮಾಯಕರ ಮೇಲೆ ಪಿ.ಎಸ್.ಐ ದರ್ಪ ಆರೋಪ: ಆಲ್ದೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ

ಅಮಾಯಕರ ಮೇಲೆ ಪಿ.ಎಸ್.ಐ ದರ್ಪ ಆರೋಪ: ಆಲ್ದೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ

“ಮತ್ತೆ ಕಡೆಗಣನೆ..” ಭಾರತೀಯ ತಂಡ ಸೇರಲು ಈತ ಇನ್ನೆಷ್ಟು ಉತ್ತಮ ಪ್ರದರ್ಶನ ತೋರಬೇಕು?

“ಮತ್ತೆ ಕಡೆಗಣನೆ..” ಭಾರತೀಯ ತಂಡ ಸೇರಲು ಈತ ಇನ್ನೆಷ್ಟು ಉತ್ತಮ ಪ್ರದರ್ಶನ ತೋರಬೇಕು?

ಬಿಹಾರ ಚುನಾವಣೆ: ನಿತೀಶ್ ರಿಂದ ದೂರಸರಿಯುತ್ತಿದೆ ಎನ್ ಡಿಎ: ಏನಿದು ಬಿಜೆಪಿ ಲೆಕ್ಕಾಚಾರ

ಬಿಹಾರ ಚುನಾವಣೆ: ನಿತೀಶ್ ರಿಂದ ದೂರಸರಿಯುತ್ತಿದೆ ಎನ್ ಡಿಎ: ಏನಿದು ಬಿಜೆಪಿ ಲೆಕ್ಕಾಚಾರ?

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಮಸ್ಟರಿಂಗ್ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಮಸ್ಟರಿಂಗ್ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cycle-yatri

ಸೈಕಲ್‌ ಯಾತ್ರಿಕನ ಕನಸು

bili-saheb

ಬಿಳಿ ಸಾಹೇಬನ ಬೇಂದ್ರೆ

sagarotttara

ಸಾಗರೋತ್ತರ ದೇಶಗಳಲ್ಲಿ ರಾಮಾಯಣ

ondu-kote

ಒಂದು ಕೋಟೆ ಯಾನ

koodali

ಕೂಡಲಿ ಊಟದ ಸೊಗಸು

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಬೇಲೂರಿಗೆ ಪ್ರವಾಸಿಗರ ದಂಡು

ಬೇಲೂರಿಗೆ ಪ್ರವಾಸಿಗರ ದಂಡು

hasan-tdy-1

ವಿಜಯ ದಶಮಿಯೊಂದಿಗೆ ಗೊಂಬೆಗಳ ದರ್ಬಾರ್‌ಗೆ ತೆv

ಗ್ರಾಹಕರ ಮನೆ ಬಾಗಿಲಿಗೆ ಡಿಸಿಸಿ ಬ್ಯಾಂಕ್‌ ಸೇವೆ

ಗ್ರಾಹಕರ ಮನೆ ಬಾಗಿಲಿಗೆ ಡಿಸಿಸಿ ಬ್ಯಾಂಕ್‌ ಸೇವೆ

ಇನ್ನೂ ವಿತರಣೆ ಆಗದ ಬಿಸಿಯೂಟ ಪಡಿತರ

ಇನ್ನೂ ವಿತರಣೆ ಆಗದ ಬಿಸಿಯೂಟ ಪಡಿತರ

ಹತ್ರಾಸ್ ರೇಪ್ ಕೇಸ್ ಬೇರೆಡೆಗೆ ವರ್ಗಾವಣೆ ಇಲ್ಲ, ಹೈಕೋರ್ಟ್ ವಿಚಾರಣೆ ನಡೆಸಲಿದೆ: ಸುಪ್ರೀಂ

ಹತ್ರಾಸ್ ರೇಪ್ ಕೇಸ್ ಬೇರೆಡೆಗೆ ವರ್ಗಾವಣೆ ಇಲ್ಲ, ಹೈಕೋರ್ಟ್ ವಿಚಾರಣೆ ನಡೆಸಲಿದೆ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.