ಅಚ್ಯುತ್ ಪ್ರೇಮ ಪುರಾಣ: “ಪೋರ್ ವಾಲ್ಸ್’ ನಡುವೆ ಸಿನಿಟಾಕ್
Team Udayavani, Feb 11, 2022, 10:01 AM IST
“ಮೊದಲು ಈ ಸಿನಿಮಾದ ಟೈಟಲ್ ಕೇಳಿದಾಗ “ಥೂ ಯಾವುದು ಗುರು ಇದು ಬಿ ಗ್ರೇಡ್ ಪಿಕ್ಚರ್ ಥರ ಇದೆ’ ಅಂದುಕೊಂಡೆ. ಆದ್ರೆ, ಕಥೆ ಕೇಳಿದ ನಂತರ ನನಗೆ ತುಂಬ ಇಷ್ಟವಾಯ್ತು. ಒಂದು ಕುಟುಂಬದ ಒಳಗೆ ನಡೆಯುವ ಕಥೆ. ತಂದೆ ತನ್ನ ಮಕ್ಕಳ ಸುತ್ತ ಹೇಗೆ ತನ್ನ ಬದುಕನ್ನು ಕಟ್ಟುತ್ತಾನೆ ಎಂಬ ಅಂಶಕ್ಕೆ ಇಲ್ಲಿ ಪ್ರಾಮುಖ್ಯತೆ ಇದೆ. ಈ ಸಿನಿಮಾದಲ್ಲಿ ಬೇರೆ ಬೇರೆ ಪರಿಸ್ಥಿತಿಗಳು, ವಿಭಿನ್ನ ಮನಸ್ಥಿತಿಗಳು, ಅವುಗಳ ನಡುವಿನ ಸವಾಲುಗಳಿವೆ. ಹಾಗಂತ ಇದು ಗೋಳಿನ ಕಥೆಯ ಸಿನಿಮಾವಲ್ಲ. ಕಾಡುವಂಥ ವಿಷಯವನ್ನು ಅಷ್ಟೇ ಲವಲವಿಕೆಯಿಂದ ತೆರೆಮೇಲೆ ಹೇಳಲಾಗಿದೆ’ ಇದು ನಟ ಅಚ್ಯುತ ಕುಮಾರ್ ಮಾತು. ಅಂದಹಾಗೆ, ಅಚ್ಯುತ ಕುಮಾರ್ ಇಂಥದ್ದೊಂದು ವಿಶ್ವಾಸದ ಮಾತುಗಳನ್ನು ಆಡಿರುವುದು ಇಂದು ಬಿಡುಗಡೆಯಾಗುತ್ತಿರುವ ಅವರ “ಫೋರ್ ವಾಲ್ಸ್’ ಸಿನಿಮಾದ ಬಗ್ಗೆ.
ಹೌದು, ಕನ್ನಡ ಚಿತ್ರರಂಗದಲ್ಲಿ ಸಹನಟನಾಗಿ, ಪೋಷಕ ನಟನಾಗಿ, ಖಳನಟನಾಗಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅಚ್ಯುತ ಕುಮಾರ್, ಮೊದಲ ಬಾರಿಗೆ ಮುಖ್ಯ ಭೂಮಿಕೆಯಲ್ಲಿ “ಫೋರ್ ವಾಲ್ಸ್’ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಮೊದಲ ಬಾರಿಗೆ ಇಂಥದ್ದೊಂದು ಸಿನಿಮಾದಲ್ಲಿ ಪಾತ್ರವಾಗಿರುವುದಕ್ಕೆ ಅಚ್ಯುತ್ ಕುಮಾರ್ ಅವರಿಗೆ ಸಾಕಷ್ಟು ಖುಷಿಯಿದೆ. “ಈ ಸಿನಿಮಾದಲ್ಲಿ ನನ್ನ ಪಾತ್ರವನ್ನು ಹೀರೋ ಪಾತ್ರ ಅನ್ನೋದಕ್ಕಿಂತ, ಮುಖ್ಯ ಭೂಮಿಕೆಯಲ್ಲಿರುವ ಪಾತ್ರ ಅಂಥ ಹೇಳಬಹುದು. ಸಿನಿಮಾದಲ್ಲಿ 80ರ ದಶಕದ ಕಥೆಯನ್ನು ಕಾಣಬಹುದು. ಸಿನಿಮಾದಲ್ಲಿ ನನ್ನ ಪಾತ್ರಕ್ಕೂ ಮೂರ್ ಶೇಡ್ ಇದೆ. ಪಾತ್ರದಲ್ಲಿ ಒಂದಷ್ಟು ವೈವಿಧ್ಯತೆ ಇದೆ. ಅದು ಹೇಗಿದೆ ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು. ಒಟ್ಟಾರೆ ಮನರಂಜನೆಗೆ ಎಲ್ಲೂ ಕೊರತೆ ಇರದಂಥ ಒಂದೊಳ್ಳೆ ಸಿನಿಮಾ ಇದು’ ಎನ್ನುವುದು ಅಚ್ಯುತ್ ಕುಮಾರ್ ಮಾತು.
“ಇದೊಂದು ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸಿನಿಮಾವಾಗಿದ್ದು, ತಂದೆ-ಮಗನ ನಡುವಿನ ಬಾಂಧವ್ಯದ ಕಥೆ ಎಲ್ಲರಿಗೂ ಇಷ್ಟವಾಗಲಿದೆ’ ಎನ್ನುವುದು ಚಿತ್ರತಂಡ ನೀಡುವ ಭರವಸೆ. “ಎಸ್.ವಿ ಪಿಕ್ಚರ್’ ಬ್ಯಾನರ್‌ನಲ್ಲಿ ಟಿ. ವಿಶ್ವನಾಥ್ ನಾಯಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಡಾ. ಪವಿತ್ರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾ. ಜಾನ್ಹವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರು “ಪೋರ್ ವಾಲ್ಸ್’ ಚಿತ್ರದ ತಾರಾ ಬಳಗದಲ್ಲಿದ್ದಾರೆ. ವಿಡಿಆರ್ ಛಾಯಾಗ್ರಹಣ ಚಿತ್ರಕ್ಕಿದೆ.