ಸೋಲಲೆಂದೇ ಯಾರೂ ಸಿನಿಮಾ ಮಾಡಲ್ಲ

ಅದೃಷ್ಟದ ಆಟದ ಬಗ್ಗೆ ವಿಜಯ್‌ ರಾಘವೇಂದ್ರ ಮಾತು-ಕತೆ

Team Udayavani, May 10, 2019, 6:00 AM IST

ಯಾವುದೇ ಪಾತ್ರ ಸಿಕ್ಕರೂ ಅದಕ್ಕೆ ನ್ಯಾಯ ಸಲ್ಲಿಸುತ್ತಾ, ಹೊಸತನದ ತುಡಿತದಲ್ಲಿರುವ ನಟ ವಿಜಯರಾಘವೇಂದ್ರ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ಬಿಝಿಯಾಗಿರುವ ವಿಜಯ ರಾಘವೇಂದ್ರ, ಕೊಟ್ಟ ಪಾತ್ರವನ್ನು ಶ್ರದ್ಧೆಯಿಂದ ಮಾಡುವ ಜೊತೆಗೆ ನಿರ್ಮಾಪಕ, ನಿರ್ದೇಶಕ ಸ್ನೇಹಿ ನಟ ಎನಿಸಿಕೊಂಡಿದ್ದಾರೆ. ಆದರೆ, ಕೆಲವು ಸಿನಿಮಾಗಳು ವಿಜಯ ರಾಘವೇಂದ್ರ ಅವರ ನಿರೀಕ್ಷೆ ಮಟ್ಟ ತಲುಪದ ಕಾರಣ, ಸಹಜವಾಗಿಯೇ ಕೊಂಚ ಬೇಸರಗೊಂಡಿದ್ದಾರೆ. ಹಾಗಂತ ಅವರು ಆ ಬೇಸರವನ್ನು ಯಾರ ಮೇಲೂ ಹಾಕಿಲ್ಲ. ಬದಲಾಗಿ ಮತ್ತಷ್ಟು ಹೊಸತನಕ್ಕೆ ತೆರೆದುಕೊಳ್ಳಲು ಮುಂದಾಗಿದ್ದಾರೆ. ತಮ್ಮ ಸಿನಿಮಾ ಆಯ್ಕೆ, ಸೋಲು-ಗೆಲುವು, ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ …

‘ಯಾರೋ ಬಂದು ನನ್ನನ್ನು ಸೋಲಿಸಬೇಕು ಅಥವಾ ನನ್ನ ಚಿತ್ರವನ್ನು ಫ್ಲಾಪ್‌ ಮಾಡಿಬಿಡಬೇಕು ಅಂತ ಬರೋದಿಲ್ಲ. ಇಲ್ಲಿ ಎಲ್ಲರೂ ಗೆಲ್ಲಲೇಬೇಕು, ಒಳ್ಳೆಯ ಸಿನಿಮಾ ಮಾಡಬೇಕು ಅಂತಾನೇ ಬರುತ್ತಾರೆ. ಆದರೆ, ಏನು ಮಾಡೋದು, ಒಂದೊಂದು ಸಲ ನಾವು ಅಂದುಕೊಂಡಂತೆ ಯಾವುದೂ ನಡೆಯಲ್ಲ…’

– ಹೀಗೆ ಹೇಳುವ ಮೂಲಕ ತಮಗೆ ಸಿಗದ ಗೆಲುವು, ಹುಡುಕಿ ಬಾರದ ಅದೃಷ್ಟ ಕುರಿತು ಹೇಳುತ್ತಾ ಹೋದರು ನಟ ವಿಜಯರಾಘವೇಂದ್ರ. ಅವರೀಗ ಮೊದಲಿನಂತಿಲ್ಲ. ತುಂಬಾ ಎಚ್ಚರದಿಂದಲೇ ಕಥೆ ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಧಾರ ಮಾಡಿದ್ದಾರೆ. ವರ್ಷಕ್ಕೊಂದೇ ಚಿತ್ರ ಮಾಡಿದರೂ ಅದು ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿಯಬೇಕು. ಅಂತಹ ಚಿತ್ರ ಕೊಡಬೇಕೆಂಬ ಯೋಚನೆಯ­ಲ್ಲಿದ್ದಾರೆ. ಅವರ ಈ ನಿರ್ಧಾರ, ಯೋಚನೆಗಳಿ­ಗೆಲ್ಲಾ ಕಾರಣ, ಅವರ ಸಾಲು ಸಾಲು ಚಿತ್ರಗಳ ಸೋಲು. ಇದನ್ನು ಒಪ್ಪಿಕೊಳ್ಳುವ ವಿಜಯ­ರಾಘವೇಂದ್ರ, ಹೇಳುವುದಿಷ್ಟು.

‘ಬಹುಶಃ ನನ್ನ ಕೆಲ ನಿರ್ಧಾರಗ­ಳಿಂದಲೂ ಆ ರೀತಿಯಾಗಿರ­ಬಹುದು. ಆರಂಭದಲ್ಲಿ ಕಥೆ ಆಯ್ಕೆಯಲ್ಲಿ ಯಾವುದೇ ಗೊಂದಲ ಇರುತ್ತಿರಲಿಲ್ಲ. ಆದರೆ, ಒಂದೊಂದು ಸಲ ಹಾಗೆ ಆಗಿಬಿಡುತ್ತದೆ. ಆ ಬಗ್ಗೆ ಬಹಳಷ್ಟು ಸಲ ನಾನು ಯೋಚಿಸಿದ್ದೇನೆ. ನನಗೇ ಯಾಕೆ ಹೀಗೆಲ್ಲಾ ಆಗುತ್ತೆ ಅಂತ. ಯಾವುದೋ ಒತ್ತಡ, ಇನ್ಯಾವುದೋ ಇಕ್ಕಟ್ಟಿನ ಪರಿಸ್ಥಿತಿ, ಮತ್ತೆಲ್ಲೋ ಆತ್ಮೀಯತೆ ಮತ್ತು ಗೆಳೆತನಕ್ಕಾಗಿ ಏನೋ ಸಿನಿಮಾ ಒಪ್ಪಿಕೊಂಡು ಮಾಡಿರುತ್ತೇನೆ. ಹಾಗಂತ, ನಾನು ಇಲ್ಲಿ ಯಾರನ್ನೂ ತೆಗಳುವುದಿಲ್ಲ. ಇಂಥವರಿಂದ ಹೀಗಾಯ್ತು ಅಂತ ಬೊಟ್ಟು ಮಾಡಿ ತೋರಿಸುವುದೂ ಇಲ್ಲ. ಅದು ನನ್ನಿಂದ ಆದಂತಹ ತಪ್ಪೇ ಎಂದು ಭಾವಿಸುತ್ತೇನೆ. ಹಾಗಂದುಕೊಳ್ಳುವುದೇ ವಾಸಿ. ಬೇರೆಯವರನ್ನು ದೂರಿದರೆ ಅದಕ್ಕೆ ಏನರ್ಥ ಇದೆ ಹೇಳಿ?’ ಎನ್ನುತ್ತಾರೆ ವಿಜಯರಾಘವೇಂದ್ರ.

ಎಲ್ಲಾ ಸರಿ, ವಿಜಯರಾಘವೇಂದ್ರ ಎಲ್ಲರನ್ನೂ ಪ್ರೀತಿಯಿಂದ ಕರೆದು, ಮಾತನಾಡಿಸಿ, ಅವರು ಹೇಳಿದ ಕಥೆಗಳನ್ನು ಅಷ್ಟೇ ವಿನಯದಿಂದ ಕೇಳಿದ್ದು ತಪ್ಪಾಯಿತಾ ಅಥವಾ ಕೆಲ ನಿರ್ದೇಶಕರು ಕಥೆ ಹೇಳಿದ್ದೊಂದು, ಸಿನಿಮಾದಲ್ಲಿ ತೋರಿಸಿದ್ದೊಂದು ಮಾಡಿದ್ದುಂಟಾ? ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ…

‘ಆ ರೀತಿ ಸಾಕಷ್ಟು ಆಗಿರಬಹುದು ಅಂತನಿಸುತ್ತದೆ. ಹಾಗಂತ, ಇಲ್ಲಿ ಯಾವೊಬ್ಬ ನಿರ್ದೇಶಕರೂ ಉದ್ದೇಶಪೂರ್ವಕವಾಗಿ ಮಾಡಿಲ್ಲ. ಯಾರೋ ಬಂದು ವಿಜಯರಾಘವೇಂದ್ರ ಅವರನ್ನು ಸೋಲಿಸಬೇಕು ಅಥವಾ ಅವರ ಚಿತ್ರವನ್ನು ಫ್ಲಾಪ್‌ ಮಾಡಬೇಕು ಅಂತ ಯೋಚಿಸಿ ಇಲ್ಲಿಗೆ ಬರಲ್ಲ. ಎಲ್ಲರೂ ಗೆಲ್ಲಬೇಕು ಅಂತ ಬರ್ತಾರೆ. ಒಂದೊಂದು ಸಲ ಎಲ್ಲವೂ ಅಂದುಕೊಂಡಂತೆ ನಡೆಯಲ್ಲ. ಇಷ್ಟು ದಿನ ತಪ್ಪು, ಸರಿ ಎಲ್ಲವೂ ನಡೆದು ಹೋಗಿದೆ. ಆದರೆ, ಮುಂದಿನ ದಿನಗಳಲ್ಲಿ ನಾನು ಈಗ ಆಗಿರುವಂತಹ ತಪ್ಪುಗಳನ್ನು ಪುನಃ ಮಾಡುವುದಿಲ್ಲ. ತುಂಬಾ ಎಚ್ಚರಿಕೆಯಿಂದಲೇ ಕಥೆ ಆಯ್ಕೆ ಮಾಡಿಕೊಂಡು ಕೆಲಸ ಮಾಡ್ತೀನಿ. ನಟರಾದ ನಾವುಗಳು ಎಷ್ಟೇ ಎಚ್ಚರವಹಿಸಿ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದರೂ ಅಂತಿಮವಾಗಿ ಪ್ರೇಕ್ಷಕರು ಒಪ್ಪಬೇಕು. ಅವರು ಒಪ್ಪಿದರೂ, ಮುಖ್ಯವಾಗಿ ಇಲ್ಲಿ ಅದೃಷ್ಟ ಎಂಬುದು ಇರಲೇಬೇಕು. ಆ ನಸೀಬು ನಮ್ಮ ಕೈ ಹಿಡಿದರೆ ಮಾತ್ರ ಎಲ್ಲವೂ ಸಾಧ್ಯ. ಇಲ್ಲವಾದರೆ ಏನೂ ಇಲ್ಲ’ ಎಂಬುದು ಅವರ ಮಾತು.

ವಿಜಯರಾಘವೇಂದ್ರ ‘ಕಿಸ್ಮತ್‌’ ಮೂಲಕ ನಿರ್ದೇಶಕ ಎನಿಸಿಕೊಂಡರು. ಆದರೆ ಆ ಚಿತ್ರ ಅವರ ನಿರೀಕ್ಷೆ ತಲುಪಲೂ ಇಲ್ಲ. ಅವರ ಬದುಕಲ್ಲೊಂದು ಹೊಸ ಕಿಸ್ಮತ್‌ ಬರುತ್ತೆ ಅಂದುಕೊಂಡರೆ, ಹತ್ತಿರವೂ ಸುಳಿಯಲಿಲ್ಲ. ಹಾಗಂತ, ಅವರಿಗೆ ಬೇಸರವೂ ಇಲ್ಲ. ಆ ಕುರಿತು ಹೇಳುವ ಅವರು, ‘ನನಗೆ ನಿರ್ದೇಶನ ಮಾಡಬೇಕೆಂಬ ಆಸೆ ಇತ್ತು. ನಿರ್ದೇಶನ ಮಾಡಿದ್ದು ಖುಷಿ ಕೊಟ್ಟಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಅದು ಕಮರ್ಷಿಯಲ್ ಆಗಿ ಸಕ್ಸಸ್‌ ಆಯ್ತೋ ಇಲ್ಲವೋ ಗೊತ್ತಿಲ್ಲ. ನನ್ನ ಮಟ್ಟಿಗೆ ದೊಡ್ಡ ಮಟ್ಟದ ಸಮಾಧಾನ ತಂದಿದ್ದಂತೂ ಸುಳ್ಳಲ್ಲ. ‘ಕಿಸ್ಮತ್‌’ ನನ್ನ ಪ್ರಕಾರ ಒಳ್ಳೆಯ ಚಿತ್ರ. ನಿರ್ದೇಶಿಸಿದ್ದಕ್ಕೆ ತೃಪ್ತಿ ಇದೆ. ಮುಂದೆ ಇನ್ನೂ ಒಳ್ಳೆಯ ಚಿತ್ರ ಕೊಡ್ತೀನಿ ಎಂಬ ನಂಬಿಕೆ ನನಗಿದೆ. ಅದಕ್ಕೆ ಈಗಾಗಲೇ ತಯಾರಿಯೂ ನಡೆಯುತ್ತಿದೆ. 2020 ರಲ್ಲಿ ಒಂದೊಳ್ಳೆಯ ಚಿತ್ರ ಮಾಡ್ತೀನಿ. ಸಮಯ ಬಂದಾಗ ನಾನೇ ಆ ಬಗ್ಗೆ ಅನೌನ್ಸ್‌ ಮಾಡ್ತೀನಿ. ಪಕ್ಕಾ ನಮ್ಮತನದ ಚಿತ್ರ ಅದಾಗಿರುತ್ತೆ. ಅದು ಇಲ್ಲೇ ನಡೆದಂತಹ ಒಂದು ನೈಜ ಘಟನೆ ಸುತ್ತ ನಡೆದ ಕಥೆ’ ಎನ್ನುತ್ತಾರೆ ವಿಜಯ್‌.

ಸದ್ಯಕ್ಕೆ ಅವರು ‘ಮಾಲ್ಗುಡಿ ಡೇಸ್‌’ ಚಿತ್ರ ಬಿಟ್ಟು ಬೇರೆ ಬಗ್ಗೆ ಗಮನಹರಿಸಿಲ್ಲ. ಕಾರಣ, ಈಗಾಗಲೇ ಒಂದರ ಮೇಲೊಂದು ಸಿನಿಮಾ ಒಪ್ಪಿಕೊಂಡು ಸಾಕಷ್ಟು ‘ಅನುಭವ’ ಆಗಿದೆಯಂತೆ. ಹಾಗಾಗಿ, ‘ಮಾಲ್ಗುಡಿ ಡೇಸ್‌’ ಚಿತ್ರಕ್ಕೆ ಫ‌ುಲ್ ಟೈಮ್‌ ಮೀಸಲಿಟ್ಟಿದ್ದಾರಂತೆ. ‘ಮಾಲ್ಗುಡಿ ಡೇಸ್‌’ ಅಂದಾಕ್ಷಣ, ಶಂಕರ್‌ನಾಗ್‌ ನೆನಪಾಗುತ್ತಾರೆ. ಅವರು ‘ಮಾಲ್ಗುಡಿ ಡೇಸ್‌’ ಎಂಬ ಅದ್ಭುತ ಧಾರಾವಾಹಿ ಕಟ್ಟಿಕೊಟ್ಟವರು. ಹಾಗಂತ, ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಶೀರ್ಷಿಕೆಯೊಂದೇ ಬಳಕೆ ಮಾಡಲಾಗಿದೆ. ಈ ಸಿನಿಮಾ ಬಳಿಕ ಮತ್ತೂಂದು ಸಿನಿಮಾ ಕಡೆ ಗಮನಹರಿಸುತ್ತೇನೆ’ ಎನ್ನುತ್ತಲೇ ಮಾತು ಮುಗಿಸುತ್ತಾರೆ.


ಈ ವಿಭಾಗದಿಂದ ಇನ್ನಷ್ಟು

  • "ನಾನು ಏನು ಅಂದುಕೊಂಡಿದ್ದೆನೋ ಹಾಗೇ ಆಗಿದೆ...' - ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು ನಿರ್ಮಾಪಕ ಶ್ರೀನಿವಾಸ್‌. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ...

  • "ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕ ಮುನಿರತ್ನ' - ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ಮಾಪಕ ಮುನಿರತ್ನ ಅವರತ್ತ ನೋಡಿದರು ನಿರ್ದೇಶಕ ನಾಗಣ್ಣ. ಅವರು ಹೀಗೆ...

  • ಈಗಾಗಲೇ ಶೀರ್ಷಿಕೆ, ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ "ಕಮರೊಟ್ಟು ಚೆಕ್‌ಪೋಸ್ಟ್‌' ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ...

  • ಮುಹೂರ್ತದ ಬಳಿಕ ಎಲ್ಲಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರದ "ಅಮರ್‌' ಚಿತ್ರತಂಡ, ಚಿತ್ರದ ಬಿಡುಗಡೆಗೂ ಮುನ್ನ ಪತ್ರಿಕಾಗೋಷ್ಟಿಯನ್ನು ನಡೆಸಿ "ಅಮರ್‌' ಸಿನಿ...

  • ಶಾದಿ ಕೆ ಆಫ್ಟರ್‌ ಎಫೆಕ್ಟ್...! - ಇದು ಬಾಲಿವುಡ್‌ನ‌ಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ,...

ಹೊಸ ಸೇರ್ಪಡೆ