ಇದು ಆರ್ಟ್‌ ಸಿನಿಮಾ ಅಂತೂ ಅಲ್ಲ…

Team Udayavani, May 10, 2019, 6:00 AM IST

ಸೂಜಿದಾರ ಚಿತ್ರದ ನಾಯಕಿ ಹರಿಪ್ರಿಯಾ

ಸಾಮಾನ್ಯವಾಗಿ ಒಂದು ಚಿತ್ರದ ನಿರೂಪಣೆಗೆ ಅದರದ್ದೇ ಆದ ಶೈಲಿ ಇರುತ್ತದೆ. ಅದರ ಆಧಾರದ ಮೇಲೆ ಆ ಚಿತ್ರ ಯಾವ ಜಾನರ್‌ಗೆ ಸೇರಿದ್ದು ಎಂದು ಹೇಳಲಾಗುತ್ತದೆ. ಹಾಗಾದ್ರೆ ‘ಸೂಜಿದಾರ’ ಚಿತ್ರ ಯಾವ ಜಾನರ್‌ಗೆ ಸೇರಿದ್ದು ಎಂದರೆ, ‘ಇದು ಯಾವ ಜಾನರ್‌ಗೂ ಸಿಗದ ಸಿನಿಮಾ’ ಎನ್ನುತ್ತಾರೆ ಅದರ ನಿರ್ದೇಶಕ ಮೌನೇಶ್‌ ಬಡಿಗೇರ್‌. ಮೌನೇಶ್‌ ಅವರ ಈ ಮಾತಿಗೆ ಕಾರಣ ‘ಸೂಜಿದಾರ’ ಚಿತ್ರದ ಕಥಾಹಂದರ ಮತ್ತದರ ನಿರೂಪಣೆಯಂತೆ. ‘ಒಂದು ಸಿನಿಮಾ ಆರಂಭದಿಂದ ಅಂತ್ಯದವರೆಗೆ ಒಂದೇ ಥರನಾಗಿ ಸಾಗಿದರೆ, ಅದು ಯಾವ ಜಾನರ್‌ನ ಸಿನಿಮಾ ಅಂಥ ಸುಲಭವಾಗಿ ಹೇಳಬಹುದು ಆದ್ರೆ, ಫ‌ಸ್ಟ್‌ ಹಾಫ್ ಒಂಥರ, ಸೆಕೆಂಡ್‌ ಹಾಫ್ ಮತ್ತೂಂದು ಥರ ಇದ್ದರೆ, ಅದನ್ನು ಯಾವ ಜಾನರ್‌ ಅಂಥ ಹೇಳ್ಳೋದು ಕಷ್ಟ. ಇಲ್ಲಿ ರೊಮ್ಯಾನ್ಸ್‌, ಸಸ್ಪೆನ್ಸ್‌, ಕಾಮಿಡಿ ಎಲ್ಲವೂ ಸಮನಾಗಿ ಮೇಳೈಸಿರುವುದರಿಂದ, ಇದು ಯಾವುದೋ ಒಂದು ಜಾನರ್‌ಗೆ ಸೇರಿಸೋದು ಕಷ್ಟ. ಚಿತ್ರದ ಕಥೆ ಮತ್ತು ನಿರೂಪಣೆಯೇ ಹಾಗಿದೆ ಎನ್ನುತ್ತಾರೆ’ ಮೌನೇಶ್‌ ಬಡಿಗೇರ್‌. ‘ಸೂಜಿದಾರ’ ಚಿತ್ರದ ಟೈಟಲ್ ಕೇಳಿದವರು, ಟ್ರೇಲರ್‌ ನೋಡಿದ ಕೆಲವರು ಇದು ಆರ್ಟ್‌ ಸಿನಿಮಾ ಇರಬಹುದಾ? ಅಂದುಕೊಂಡಿದ್ದು ಇದೆಯಂತೆ. ಆದರೆ ಈ ಬಗ್ಗೆ ಮಾತನಾಡುವ ಮೌನೇಶ್‌ ಬಡಿಗೇರ್‌, ‘ಇದು ಖಂಡಿತಾ ಆರ್ಟ್‌ ಸಿನಿಮಾ ಅಲ್ಲ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನೇನು ಇರಬೇಕೋ, ಆ ಎಲ್ಲಾ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್‌ ಈ ಸಿನಿಮಾದಲ್ಲಿದೆ. ಜೊತೆಗೆ ಆರ್ಟ್‌ ಸಿನಿಮಾದಲ್ಲಿ ಇರಬಹುದಾದಂಥ ಕಥೆ, ಕಂಟೆಂಟ್ ಇದೆ. ನನ್ನ ಪ್ರಕಾರ, ಇದೊಂದು ಬ್ರಿಡ್ಜ್ ಸಿನಿಮಾ ಎನ್ನಬಹುದು.

ಇದರಲ್ಲಿ ಟ್ವಿಸ್ಟ್ಸ್ ಆ್ಯಂಡ್‌ ಟರ್ನ್ಸ್ ಇದೆ. ಫ‌ಸ್ಟ್‌ ಹಾಫ್ ನೋಡುಗರನ್ನ ಒಂದು ಮೂಡ್‌ನ‌ಲ್ಲಿ ಕರೆದುಕೊಂಡು ಹೋದರೆ, ಸೆಕೆಂಡ್‌ ಹಾಫ್ ಮತ್ತೂಂದು ಮೂಡ್‌ಗೆ ಕರೆದುಕೊಂಡು ಹೋಗುತ್ತದೆ. ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ, ಯಾವುದೇ ಮುಜುಗರವಿಲ್ಲದೆ, ಇಡೀ ಫ್ಯಾಮಿಲಿ ಕೂತು ನೋಡಿ, ಆಸ್ವಾಧಿಸಬಹುದಾದ ಚಿತ್ರ ಇದು’ ಎನ್ನುವುದು ಮೌನೇಶ್‌ ಮಾತು. ಇನ್ನು ‘ಸೂಜಿದಾರ’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ಮೌನೇಶ್‌ ಬಡಿಗೇರ್‌, ‘ಚಿತ್ರದ ಕಥೆ ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥದ್ದು. ಒಬ್ಬ ವ್ಯಕ್ತಿ ತಾನು ಮಾಡದಿರುವ ತಪ್ಪಿಗೆ ಊರು ಬಿಟ್ಟು ಅಲೆಮಾರಿ ಥರ ಬದುಕಬೇಕಾಗುತ್ತದೆ. ಅವನ ಆ ಜರ್ನಿಯಲ್ಲಿ ಏನೇನು ತಿರುವುಗಳು ಎದುರಾಗುತ್ತವೆ ಅನ್ನೋದೆ ಈ ಚಿತ್ರದ ಕಥೆಯ ಒಂದು ಎಳೆ. ‘ಸೂಜಿದಾರ’ ಮನುಷ್ಯನ ಅಸ್ತಿತ್ವದ ಬಗ್ಗೆ ಹಲವು ಆಲೋಚನೆಗಳನ್ನು ಹಚ್ಚುತ್ತದೆ. ನಮ್ಮ ಅಸ್ತಿತ್ವವನ್ನು ನಿರ್ಧರಿಸುವ ಸಮಾಜದ ಬಗ್ಗೆ, ನಮ್ಮ ಬದುಕಿನ ಬಗ್ಗೆ ಅನೇಕ ಪ್ರಶ್ನೆಗಳನ್ನು ಮೂಡಿಸುತ್ತದೆ. ಎರಡೂ ಕಾಲು ಗಂಟೆ ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿ ನಮ್ಮ ಅಸ್ವಿತ್ವವನ್ನೇ ಪ್ರಶ್ನಿಸುವ ಚಿತ್ರ’ ಎನ್ನುತ್ತಾರೆ.

ಅಂದಹಾಗೆ, ‘ಸೂಜಿದಾರ’ ಚಿತ್ರದ ಸ್ಕ್ರಿಪ್ಟ್ ಶುರುವಾಗಿದ್ದು 2017ರಲ್ಲಿ. ಆರಂಭದಲ್ಲಿ ಈ ಚಿತ್ರವನ್ನು ಗುರುದೇಶಪಾಂಡೆ ಅವರೊಂದಿಗೆ ಮಾಡುವ ಯೋಜನೆ ನಿರ್ದೇಶಕ ಮೌನೇಶ್‌ ಬಡಿಗೇರ್‌ ಮತ್ತು ತಂಡಕ್ಕಿತ್ತು. ಆದರೆ ಅದು ತಡವಾದ ಕಾರಣ, ಮೌನೇಶ್‌ ಬೇರೊಂದು ಬ್ಯಾನರ್‌ನಲ್ಲಿ ಚಿತ್ರವನ್ನು ಶುರು ಮಾಡಿದರು. ‘ಆರಂಭದಲ್ಲಿ ಒಂದಷ್ಟು ಪ್ರೀ-ಪ್ರೊಡಕ್ಷನ್‌ ಕೆಲಸಗಳು ಬಳಿಕ ಬೆಂಗಳೂರು, ಉಡುಪಿ, ಮಂಗಳೂರು, ಚಿತ್ರದುರ್ಗ, ತುಮಕೂರು ಸುತ್ತಮುತ್ತ ಸುಮಾರು 38 ದಿನಗಳ ಶೂಟಿಂಗ್‌. ಅದಾದ ಬಳಿಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು, ಆ ನಂತರ ಸಿನಿಮಾದ ಪ್ರಮೋಷನ್‌, ಈಗ ಬಿಡುಗಡೆ. ಹೀಗೆ ಸೂಜಿದಾರ ಎಂಬ ಸದಭಿರುಚಿ ಚಿತ್ರವನ್ನು ಪೋಣಿಸಿ ತೆರೆಮೇಲೆ ತರಲು ಸುಮಾರು ಎರಡು ವರ್ಷ ಸಮಯ ಹಿಡಿಯಿತು’ ಎನ್ನುತ್ತಾರೆ ಮೌನೇಶ್‌.

‘ಸೂಜಿದಾರ’ ಚಿತ್ರದ ಪಾತ್ರಗಳು ವಿಭಿನ್ನವಾಗಿದ್ದ­ರಿಂದ, ಅದನ್ನು ತೋರಿಸುವ ಲೊಕೇಶನ್‌ಗಳೂ ಕೂಡ ವಿಭಿನ್ನವಾಗಿಯೇ ಇರಬೇಕಾಗಿತ್ತು. ಹಾಗಾಗಿ ಸಾಕಷ್ಟು ಸ್ಥಳಗಳನ್ನು ಜಾಲಾಡಿದ ನಂತರ ಚಿತ್ರತಂಡ ತಮಗೆ ಬೇಕಾದ ಒಂದಷ್ಟು ಲೊಕೇಷನ್‌ಗಳಲ್ಲಿ ಶೂಟಿಂಗ್‌ ಮಾಡಲು ಮುಂದಾಯಿತು. ಚಿತ್ರದ ಶೂಟಿಂಗ್‌ಗೆ ಎದುರಾದ ಸವಾಲುಗಳ ಬಗ್ಗೆ ಮಾತನಾಡುವ ಮೌನೇಶ್‌, ‘ನನಗೆ ಸಿನಿಮಾ ತೀರಾ ಹೊಸ ಮಾಧ್ಯಮ­ವೇನಲ್ಲ. ರಂಗಭೂಮಿ ಮತ್ತು ಹೊರಗೆ ನಾನು ಅಭಿನಯ, ಸಿನಿಮಾ ಪಾಠ ಮಾಡುತ್ತಿದ್ದರಿಂದ ಸಿನಿಮಾದ ಜೊತೆ ಮೊದಲಿನಿಂದಲೂ ನನಗೆ ನಂಟಿತ್ತು. ನನ್ನ ಪ್ರಕಾರ ಲೈವ್‌ ಪರ್ಫಾರ್ಮೆನ್ಸ್‌ ಅಥವಾ ಕ್ಯಾಮರಾ ಪರ್ಫಾರ್ಮೆನ್ಸ್‌ಗೆ ಅಂಥ ವ್ಯತ್ಯಾಸವೇನಿಲ್ಲ. ಆದರೆ ಸಿನಿಮಾದ ಮೇಕಿಂಗ್‌ನಲ್ಲಿ ತುಂಬಾ ಚಾಲೆಂಜಿಂಗ್‌ ಆಗಿತ್ತು. ಚಿತ್ರದಲ್ಲಿ ಬರುವ ದೃಶ್ಯಕ್ಕೆ ಹಳೆಯ ವಠಾರದ ಮನೆ ಬೇಕಿತ್ತು. ಎಲ್ಲಿ ಹುಡುಕಿದರೂ, ನಮಗೆ ಬೇಕಾದಂಥ ಮನೆ ಸಿಗಲಿಲ್ಲ. ಕೊನೆಗೆ ಅದು ತುಮಕೂರಿನಲ್ಲಿ ಸಿಕ್ಕಿತು. ಕೊನೆಗೆ ಆ ವಠಾರವನ್ನು ತುಮಕೂರಿನಲ್ಲಿ, ವಠಾರದ ಮನೆಯ ಒಳಾಂಗಣ ದೃಶ್ಯಗಳನ್ನ ಬೆಂಗಳೂರಿನಲ್ಲಿ, ವಠಾರದ ಹೊರಭಾಗವನ್ನು ಚಿತ್ರದುರ್ಗದಲ್ಲಿ ಚಿತ್ರೀಕರಿಸಬೇಕಾಯಿತು. ಚಿತ್ರದ ಒಂದು ದೃಶ್ಯಕ್ಕಾಗಿ ಇಂಥ ಶ್ರಮಪಡಬೇಕಾಯಿತು. ಚಿತ್ರ ನೋಡುವಾಗ ಅದ್ಯಾವುದೂ ಗೊತ್ತಾಗುವುದಿಲ್ಲ. ಚಿತ್ರದ ಮೇಕಿಂಗ್‌ನಲ್ಲಿ ಇಂಥ ಸಾಕಷ್ಟು ಚಾಲೆಂಜಿಂಗ್‌ ಎನಿಸುವಂಥ ಉದಾಹರಣೆಗಳು ಸಿಗುತ್ತದೆ’ ಎನ್ನುತ್ತಾರೆ ಮೌನೇಶ್‌.

‘ಬೇರೆ ಭಾಷೆಗಳಲ್ಲಿ ಅಲ್ಲಿನ ಸ್ಟಾರ್‌ ಕಲಾವಿದರು ಬೇರೆ ಬೇರೆ ಥರದ ಚಿತ್ರಗಳಿಗೆ ಪಾತ್ರಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಪರಭಾಷೆಗಳಲ್ಲಿ ಈಗಾಗಲೇ ಈ ಥರದ ಅನೇಕ ಪ್ರಯೋಗಗಳು ಆಗುತ್ತಿದೆ. ಅಲ್ಲಿನ ಸ್ಟಾರ್‌ ನಟರ ಫ್ಯಾನ್ಸ್‌ ಅಭಿರುಚಿಯನ್ನು ವಿಸ್ತರಿಸುವಂಥ ಕೆಲಸ ಆಗ್ತಿದೆ. ಹಾಗಾಗಿ ಅಲ್ಲಿನ ಫ್ಯಾನ್ಸ್‌ ಕೂಡ ನಿಧಾನವಾಗಿ ಹೊಸಥರದ ಚಿತ್ರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಫ್ಯಾನ್ಸ್‌ನ ಅಭಿರುಚಿ ವಿಸ್ತರಿಸುವ ಕೆಲಸ ಆಗ್ತಿಲ್ಲ’ ಎನ್ನುತ್ತಾರೆ ಮೌನೇಶ್‌. ‘ಹೀಗಾಗಿ ಅಂಥದ್ದೇ ಒಂದು ಪ್ರಯೋಗದ ಭಾಗವಾಗಿ ಕನ್ನಡದಲ್ಲಿ ತನ್ನದೇಯಾದ ಫ್ಯಾನ್ಸ್‌ ಹೊಂದಿರುವ, ಪಾತ್ರಕ್ಕೆ ಜೀವತುಂಬಬಲ್ಲ ಹರಿಪ್ರಿಯಾ ಅವರನ್ನ ಚಿತ್ರಕ್ಕೆ ಅಪ್ರೋಚ್ ಮಾಡಿದೆವು. ಅವರು ಕೂಡ ಖುಷಿಯಿಂದ ಚಿತ್ರವನ್ನು ಒಪ್ಪಿಕೊಂಡರು. ಈ ಹಿಂದೆ ಎಂದೂ ಕಂಡಿರದ ರೀತಿಯಲ್ಲಿ ಇಲ್ಲಿ ಹರಿಪ್ರಿಯಾ ಅವರನ್ನು ನೋಡಬಹುದು ಎನ್ನುತ್ತಾರೆ’ ಮೌನೇಶ್‌ ಬಡಿಗೇರ್‌.

‘ಸೂಜಿದಾರ’ ಬಹುತೇಕ ರಂಗಭೂಮಿ ಮತ್ತು ಚಿತ್ರರಂಗದ ಪರಿಣಿತರ ಕೈಯಲ್ಲಿ ಮೂಡಿಬಂದ ಚಿತ್ರ. ಚಿತ್ರದ ಪ್ರಮುಖ ಪಾತ್ರದಲ್ಲಿ ನಾಯಕಿ ಹರಿಪ್ರಿಯಾ ಅವರಿಗೆ ಜೋಡಿಯಾಗಿ ರಂಗ ಪ್ರತಿಭೆ ಯಶವಂತ್‌ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಅಚ್ಯುತಕುಮಾರ್‌, ಬಿರಾದಾರ್‌, ಚೈತ್ರಾ ಕೋಟೂರ್‌, ಶ್ರೇಯಾ ಅಂಚನ್‌ ಹೀಗೆ ಅನೇಕ ಕಲಾವಿದರು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಶೋಕ್‌. ವಿ ರಾಮನ್‌ ಚಿತ್ರದ ಛಾಯಾಗ್ರಹಣ, ಮೋಹನ್‌. ಎಲ್ ಸಂಕಲನ, ಭಿನ್ನ ಶಡ್ಜ ಸಂಗೀತ, ಎಸ್‌. ಪ್ರದೀಪ್‌ ವರ್ಮ ಹಿನ್ನೆಲೆ ಸಂಗೀತವಿದೆ. ಸುಮಾರು 15 ವರ್ಷಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೌನೇಶ್‌ ಬಡಿಗೇರ್‌ ‘ಸೂಜಿದಾರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಜಿ.ಎಸ್‌.ಕಾರ್ತಿಕ ಸುಧನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಈಗಾಗಲೇ ಸಾಫ್ಟ್ವೇರ್‌ ಕ್ಷೇತ್ರದಿಂದ ಸಾಕಷ್ಟು ಮಂದಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಆ ಸಾಲಿಗೆ "ಧೀರನ್‌' ಚಿತ್ರದ ನಿರ್ದೇಶಕ ಕಮ್‌ ನಾಯಕ ಕೂಡ ಹೊಸದಾಗಿ...

  • ಸಾಮಾನ್ಯವಾಗಿ ಸ್ಟಾರ್‌ ನಟರ ಚಿತ್ರಗಳು ಅಂದಾಕ್ಷಣ, ಅಲ್ಲಿ ಸ್ಟಾರ್‌ ನಟಿಯರು ಕಾಣಿಸಿ­ಕೊಳ್ಳುವುದು ಸಹಜ. ಕನ್ನಡ ಮಾತ್ರವಲ್ಲ, ಪರಭಾಷೆ ಚಿತ್ರರಂಗದಲ್ಲೂ ಇದು...

  • ಟ್ರೇಲರ್‌, ಹಾಡು, ಸ್ಟಿಲ್‌ಗ‌ಳಿಂದ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ "ಪೈಲ್ವಾನ್‌' ಚಿತ್ರ ಸೆ.12ರಂದು ತೆರೆಕಂಡಿದೆ. "ಹೆಬ್ಬುಲಿ' ಚಿತ್ರದ ನಂತರ ಕೃಷ್ಣ...

  • "ಗಿರಿಗಿಟ್‌' ಎಂಬ ತುಳು ಸಿನಿಮಾವೊಂದು ಬಿಡುಗಡೆಯಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಆಗಸ್ಟ್‌ 23 ರಂದು ತೆರೆಕಂಡಿದ್ದ ಈ ಚಿತ್ರ ಈಗ ಚಿತ್ರತಂಡ ಮೊಗದಲ್ಲಿ...

  • "ಇದು ನನ್ನ ಆಕಸ್ಮಿಕ ಎಂಟ್ರಿ. ಈ ಅವಕಾಶ, ಎನರ್ಜಿ ಎಲ್ಲವೂ ನನ್ನ ಅಣ್ಣನಿಂದಲೇ ಬಂದಿದೆ. ಈ ಎಲ್ಲಾ ಕ್ರೆಡಿಟ್‌ ನನ್ನ ಅಣ್ಣನಿಗೇ ಸಲ್ಲಬೇಕು ...' - ಹೀಗೆ ಹೇಳಿದ್ದು ಯುವ...

ಹೊಸ ಸೇರ್ಪಡೆ