ಸಹಜಕಾವ್ಯದ ಅದಮ್ಯ ಚಿಲುಮೆ ಚಂದ್ರಶೇಖರ ಕಂಬಾರ

ನುಡಿಯೋಣು ಬಾರಾ

Team Udayavani, Apr 28, 2019, 6:00 AM IST

6

ಕನ್ನಡದ ಬಹುದೊಡ್ಡ ಪರ್ಫಾರ್ಮರ್‌ ಕವಿ ಎಂದರೆ ಅದು ಕಂಬಾರರೇ. ಅವರ ಕವಿತೆಯ ಬಣ್ಣ-ಬೆಳಕು ಇಡಿ ಇಡಿಯಾಗಿ ನಮಗೆ ದಕ್ಕಬೇಕೆಂದರೆ ಅವರ ಕವಿತೆಯನ್ನು ಅವರೇ ಹಾಡಬೇಕು. ನಾನು ಅರವತ್ತಾರರ ಸುಮಾರಿಗೇ, ಮಲ್ಲಾಡಿಹಳ್ಳಿಯಲ್ಲಿ ಇರುವಾಗಲೇ, ಅವರ ತಕರಾರಿನವರು ಓದಿದ್ದೆ. ಅವರ ಗದ್ಯಾತ್ಮಕ ಕವಿತೆಗಳು ನನ್ನಲ್ಲಿ ಬೆರಗು ಹುಟ್ಟಿಸಿದ್ದವು ನಿಜ; ಆದರೆ, ಮನಸ್ಸನ್ನು ಪೂರ್ಣವಾಗಿ ಸೂರೆಗೊಂಡಿರಲಿಲ್ಲ. ಗದ್ಯದ ಮುರಿವುಗಳಲ್ಲಿ ಅತಿಕ್ರಮ ಪ್ರವೇಶ ಮಾಡುತ್ತಿದ್ದ ಪರಭಾಷಾ ಪ್ರವೃತ್ತಿಗಳು ಹುರುಳಿಯೊಳಗಿನ ಕಲ್ಲಿನಂತೆ ಅಟಕಾಯಿಸುತ್ತಿದ್ದವು. ಹುರುಳಿ ಬೆಂದಂತೆ ಕಲ್ಲು ಬೇಯಲಾರವಲ್ಲ ಅನ್ನಿಸುತ್ತಿತ್ತು. 1971ರಲ್ಲಿ ನಾನು ಬೆಂಗಳೂರಿಗೆ ಬಂದದ್ದು ಸೆಂಟ್ರಲ್‌ ಕಾಲೇಜಿನಲ್ಲಿ ಎಂ. ಎ. ಓದಲು. ಆಗ ಅದೇ ಕಾಲೇಜಿನಲ್ಲಿ ಚಂದ್ರಶೇಖರ ಕಂಬಾರರು ಪ್ರಾಧ್ಯಾಪಕರು. ನಾನು ಭಾಷಾ ವಿಜ್ಞಾನದ ವಿದ್ಯಾರ್ಥಿಯಾದುದರಿಂದ ಅವರ ಕ್ಲಾಸುಗಳಲ್ಲಿ ಕುಳಿತು ಪಾಠಪ್ರವಚನ ಕೇಳುವ ಅವಕಾಶದಿಂದ ವಂಚಿತನಾದೆ. ಆದರೆ, ನಿತ್ಯವೂ ಅವರನ್ನು ನೋಡುವ, ಮಾತಾಡುವ ಅವಕಾಶವಿತ್ತು.

ಕಂಬಾರರ ಕಾವ್ಯದ ಮೂಲ ಶಕ್ತಿ ನನ್ನ ಅನುಭವಕ್ಕೆ ಬಂದ ಒಂದು ಸಂಜೆ ಈಗ ನೆನಪಾಗುತ್ತಿದೆ. ನಮ್ಮ ಕನ್ನಡ ವಿಭಾಗದ ಒಂದು ಸಭೆ. ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಕಂಬಾರರು ತಮ್ಮ ಒಂದು ಕವಿತೆಯನ್ನು ಹಾಡಬೇಕಾಯಿತು. ನಾನು ಕುತೂಹಲದಿಂದ ಹಾಡಲು ನಿಂತ ಕಂಬಾರರನ್ನೇ ನೋಡುತ್ತಿದ್ದೆ. ಹಾಡಲು ನಿಂತ ಕಂಬಾರರ ನಿಲುವು ಕಣ್ಣೆದುರೇ ಬದಲಾಯಿತು. ಅವರೀಗ ಆಕಾಶಕ್ಕೆ ಮುಖವೆತ್ತಿದರು. ಅವರು ನಿಂತಿರುವಲ್ಲೇ ಅವರೊಳಗಿಂದ ಒಬ್ಬ ಹಳ್ಳಿಗ ಹೊರಗೆ ಬಂದ. ಹೆಳತೇನ ಕೇಳ ಎಂಬ ಲಾವಣಿಯ ಕೆಲವು ಪದ್ಯಗಳನ್ನು ಕಂಬಾರ ಆವತ್ತು ಹಾಡಿದರು. ಹಾಡಿನ ಅನುರಣನ ನನ್ನ ಎದೆ ಕಂಪಿಸುವಂತೆ ಮಾಡಿತು. “ಇದಪ್ಪಾ ಕವಿತೆ ಎಂದರೆ’ ಎಂದು ಉದ್ಗಾರ ತೆಗೆದೆ.

ಹೇಳತೇನ ಕೇಳಾ ಕವಿತೆಯ ಕೆಲವು ಆಯ್ದ ಭಾಗ ಆ ಮೊದಲೇ ಲಂಕೇಶರ ಅಕ್ಷರ ಹೊಸಕಾವ್ಯದಲ್ಲಿ ನೋಡಿದ್ದೇನಾದರೂ ಕಂಬಾರರ ಬಾಯಿಂದ ಹೊರಹೊಮ್ಮಿದ ಹಾಡು ಮಾಡಿದ ಪವಾಡವೇ ಬೇರೆ. ಅವರದ್ದು ಮಂದ್ರ ಸ್ಥಾಯಿಯ ಗಡಸು ದನಿ. ಹೊಸೆದ ಬಳ್ಳಿಯುದ್ದಕ್ಕೂ ಮಿಡುಕುವ ಕುಡಿಗಳನ್ನು ಸಹಜವಾಗಿ ಕೆರಳಿಸಿ ಹೊರಳಿಸುವ ಧ್ವನಿ. ಒಣಗು ದನಿಯಲ್ಲ; ಚಿಗುರು ಚಿಮ್ಮಿಸುವ ವಿಕಂಪಿತ ಧ್ವನಿ. ಅವರ ಭಂಗಿ, ಜುಮುಗುಡುವ ಸ್ವರಕಂಪ, ನಾಗರೀಕ ಜಗತ್ತನ್ನು ಕಾಲಡಿಯ ಕಸದಂತೆ ಕಡೆಗಣಿಸಿ ಜಾನಪದದಲ್ಲಿ ಉಜ್ಜೀವಿಸುವ ಜೀವಶಕ್ತಿ… ನನ್ನನ್ನು ಮರುಳುಗೊಳಿಸಿದವು.

ಆ ವಾರದಲ್ಲಿಯೇ ಒಮ್ಮೆ ಲಕ್ಷ್ಮೀನಾರಾಯಣ ಭಟ್ಟರ ಮನೆಗೆ ಹೋಗಿ ಅವರಿಂದ ಹೇಳತೇನ ಕೇಳ ಕವಿತೆಯ ಪುಸ್ತಕವನ್ನು ಎರವಲಾಗಿ ಪಡೆದೆ. ಅದೊಂದು ನಿಗೂಢ ಮಾಯಾಪ್ರಪಂಚ. ಶಿವಾಪುರದ ಗೌಡ, ಗೌಡತಿ, ಅವರ ಮಗ ರಾಮಗೊಂಡ, ಆ ಹಳ್ಳಿಯ ಮುಸುಗುಟ್ಟುವ ಹರೆಯುಕ್ಕಿನ ಹೆಣ್ಣುಗಳ ತಿಮಿರು ಕಣ್ಣಿಗೆ ಕಟ್ಟಿತು. ಹುಡುಗೇರ ಹುಸಿ ಸಿಟ್ಟಿನಂತೆ ಓಣಿಯ ತಿರುವು ಎಂಬ ತೀರ ಹೊಸಬಗೆಯ ಕಲ್ಪನೆ ಬೆರಗುಂಟುಮಾಡಿತು. ಆ ದಿನಗಳಲ್ಲಿ ಮತ್ತೆ ಮತ್ತೆ ಹೇಳತೇನ ಕೇಳ ಓದಿದೆ. ಪರಕೀಯ ಶಕ್ತಿಯೊಂದು ಹಳ್ಳಿಯನ್ನು ಪ್ರವೇಶಿಸಿ ನಿಜವಾದ ಗೌಡನನ್ನು ಕೊಂದು, ತಾನೇ ಗೌಡನಾಗಿ ಗೃಹಪ್ರವೇಶಮಾಡಿದ ಭಾಮಾತ್ಮಕ ಚಮತ್ಕಾರದ ಧ್ವನಿಶಕ್ತಿ ನನ್ನನ್ನು ಬೆಚ್ಚಿಬೀಳಿಸಿತು. ಗೌಡತಿ ಮಾರುವೇಷದ ಗೌಡನಿಗೆ ಮತ್ತೆ ಬಸಿರಾದದ್ದು, ಅವಳ ಅನೈತಿಕ ಬಯಕೆಗಳು, ರಾಮಗೊಂಡನ ಜೀವಶಕ್ತಿಯ ನಾಶ ಒಂದು ದುರಂತ ನಾಟಕವನ್ನೇ ಕಣ್ಣೆದುರು ತೆರೆದವು. ಆಹಾ! ಈ ಶಿವಾಪುರ ಎನ್ನುವುದು ಭಾರತದ ಮಿನಿಯೇಚರು ರೂಪ, ವಸಾಹತೋತ್ತರ ಭಾರತದ ದುರಂತವನ್ನೇ ಈ ಕಥೆ ರೂಪಕ ಭಾಷೆಯಲ್ಲಿ ನುಡಿಯುತ್ತ ಇದೆ ಅನ್ನಿಸಿತು. ಗ್ರಾಮದ ಕೇಂದ್ರವಾಗಿದ್ದ ಆಲದ ಮರವನ್ನು ಮಾಯಾವಿ ಗೌಡ ಕಡಿಸಿ ಶಾಲೆ ಪ್ರಾರಂಭಿಸಿದ್ದು ಆತ್ಮನಾಶ ಮತ್ತು ತನ್ನ ಅಗತ್ಯವನ್ನು ಬಿತ್ತಿಬೆಳೆಯುವ ಹುನ್ನಾರದ ಪ್ರತೀಕವೆನ್ನಿಸಿದವು. ಕತೆಗಾರ ವ್ಯಥೆಗಳನ್ನು ಕಳೆಯುತ್ತಾ ಇಲ್ಲ; ವ್ಯಥೆಗಳನ್ನು ಕಡೆಯುತ್ತಾ ಇದ್ದಾನೆ ಅನ್ನಿಸಿತು. ಹೌದು. ಹೇಳತೇನ ಕೇಳದ ಮಹತ್ವ ಕೇವಲ ಅದರ ಕಥನದ ಆಕರ್ಷಣೆಯಲ್ಲಿ ಇಲ್ಲ; ಲಯದ ಪ್ರತೀತಿಯಲ್ಲೂ ಇಲ್ಲ. ಕಂಬಾರರರ ಹಾಡಿನ ಕಂಪನದಲ್ಲೂ ಇಲ್ಲ. ಈ ಎಲ್ಲವನ್ನೂ ಬಳಸಿಕೊಂಡು ಕವಿತೆ ಕುರುಡಾದ ಅನುಭವದಿಂದ ಒಂದು ಜ್ಞಾನದ ಕಣ್ಣು ಅರಳಿಸಲು ಯತ್ನಿಸುತ್ತಿದೆ ಅನ್ನಿಸಿತು. ಆಗಿನಿಂದ ಕಂಬಾರರು ನನ್ನ ಮೆಚ್ಚಿನ ಕವಿಯಾದರು. ಮುಂದಿನ ದಿನಗಳಲ್ಲಿ ಕಂಬಾರ ಅನೇಕ ಕಟ್ಟುಮಸ್ತಾದ ನಾಟಕ, ಕಾದಂಬರಿ, ದೀರ್ಘ‌ ಕಾವ್ಯವನ್ನು ಬರೆದರಾದರೂ ಅವರ ಹೇಳತೇನ ನನ್ನ ಮನಸ್ಸು ಹೊಕ್ಕ ತನ್ಮಯ ಕ್ಷಣ ನನ್ನ ಅಂತರಂಗದಲ್ಲಿನ್ನೂ ಜತನವಾಗಿ ಉಳಿದುಕೊಂಡಿದೆ !

ಹೇಳತೇನ ಕೇಳಕ್ಕೆ ಮರುಳಾದ ದಿನಗಳಲ್ಲೇ ನಾನು ಕಂಬಾರರ ಋಷ್ಯಶೃಂಗ ನಾಟಕವನ್ನು ಓದಿದ್ದು. ಸಿನಿಮಾ ನೋಡಿದ್ದು. ಹಳ್ಳಿಯ ಗೌಡತಿಯ ಎರಡನೆಯ ಮಗ ಬಾಳಗೊಂಡನ ದುರಂತವನ್ನು ಋಷ್ಯಶೃಂಗ ನಿರೂಪಿಸುತ್ತಿದೆ. ಕಾಲೂರಿದ ಕಡೆ ಮಳೆ ತರಿಸಬೇಕಾದ ಋಷ್ಯಶೃಂಗನ ಮಿಥಿಕಲ್‌ ಮಹಿಮೆ ಈ ಆಧುನಿಕ ಋಷ್ಯಶೃಂಗನ ಕಥೆಯಲ್ಲಿ ಮುಕ್ಕಾಗಿಹೋಗಿದೆ. ಹಾಗಾದರೆ ತಾನು ನಿಜವಾಗಿ ಈ ನೆಲದ ಮಗ ಹೌದೋ ಅಲ್ಲವೋ ಎಂಬ ಮೂಲಶೋಧದ ಪ್ರಶ್ನೆ ಅವನನ್ನು ಕಾಡುತ್ತದೆ. ಕನ್ನಡ ವಿಮರ್ಶೆ ಗುರುತಿಸಿರುವಂತೆ ಇದು ಐಡೆಂಟೆಟಿಯ ಹುಡುಕಾಟದ ಸಮಸ್ಯೆಯೂ ಹೌದು. ರಾಮಗೊಂಡ, ಬಾಳಗೊಂಡ ತಮ್ಮ ಸೃಜನ ಶಕ್ತಿಯನ್ನು ಕಳೆದುಕೊಂಡದ್ದಕ್ಕೆ ಗೌಡನಾಗಿ ಬಂದ ರಾಕ್ಷಸನ ಅನೈತಿಕ ಕಾಮವೇ ಕಾರಣವೇ? ಪೂರ್ವ ದಿಕ್ಕಿಗೆ ಮುಖಮಾಡಿ ನಿಂತಿರುವ ರಾಮಗೊಂಡ ಕಾಯುತ್ತಿರುವುದು ಯಾವ ಸಿದ್ಧನ ಆಗಮನವನ್ನು? ಅನೈತಿಕತೆಯಿಂದ ಕಾಮವು ತನ್ನ ನಿಯೋಗ ಶಕ್ತಿಯನ್ನು ಕಳೆದುಕೊಂಡ ದುಸ್ಥಿತಿಯಲ್ಲಿ ಶಿವಾಪುರ ನರಳುತ್ತ ಇದೆಯೇ? ಕಂಬಾರ ಈ ಚಿತ್ರದ ಮೂಲಕ ತಮ್ಮ ದ್ರಾವಿಡ ಪ್ರಜ್ಞೆಯ ಮೂಲ ಪಾತಳಿಯ ದರ್ಶನ ಮಾಡಿಸುತ್ತಿರುವರೇ?

ಕಂಬಾರರು ಬೇಂದ್ರೆ ಮತ್ತು ಅಡಿಗರಂಥ ಪ್ರಭಾವಿ ಕವಿಗಳ ಜೊತೆಗೆ ಸೆಣಸುತ್ತಲೇ ಬೆಳೆದವರು. ಬೇಂದ್ರೆಯವರ ಗಂಗಾವತರಣವನ್ನು ಕಂಬಾರರ ಗಂಗಾಮಾಯಿ, ಅಡಿಗರ ಬತ್ತಲಾರದ ಗಂಗೆ ಕವಿತೆಗಳೊಡನೆ ಓದುವುದು ಕುತೂಹಲಕಾರಿ ಅಭ್ಯಾಸವಾಗಬಹುದು. ಯಾಕೆ ಆಕಾಶಗಂಗೆ? ಪಾತಾಳ ಗಂಗೆಯನ್ನು ನೋಡಿರಿ-ಎನ್ನುತ್ತಾರೆ ಕಂಬಾರ. ಆಧುನಿಕವಾದ ಎಲ್ಲ ಅನಾರೋಗ್ಯಕ್ಕೂ ದೇಸೀಮದ್ದು ಅರೆಯುವ ಹುನ್ನಾರದಲ್ಲಿ ಕಂಬಾರರು ತೊಡಗಿರುವರೇ? ಅದರ ಸಾಫ‌ಲ್ಯದಲ್ಲಿ ಅವರಿಗೆ ನಂಬಿಕೆಯುಂಟೋ ಅಥವಾ ಸಂದೇಹವೋ? ಕೆಣಕುವ ತೀವ್ರ ಪ್ರಶ್ನೆಗಳನ್ನು ಎದುರು ಹಾಕಿಕೊಂಡು ಕೂತ ಕವಿ ಕಂಬಾರರು.

ತೀವ್ರವೂ ಪ್ರಾಕೃತಿಕವೂ ಆದ ಕಾಮಶಕ್ತಿಯನ್ನು ಕಂಬಾರರು ಆರಾಧಿಸುತ್ತಾರೆ. ಆಧುನಿಕ ಸಾಮಾಜಿಕ ಪರಿಸ್ಥಿತಿಯನ್ನು ಆ ಮೂಲಕವೇ ಶೋಧಿಸಲು ನೋಡುತ್ತಾರೆ. ಅನೈತಿಕ ಕಾಮ, ಬಾಳಗೊಂಡನಂಥ ಹೊಸ ಸಾಧ್ಯತೆಯನ್ನು ಸೃಷ್ಟಿಸಬಲ್ಲುದೆ? ಒಂದು ಕಡೆ ರಾಮಗೊಂಡ; ಇನ್ನೊಂದು ಕಡೆ ಬಾಳಗೊಂಡ. ಈ ಜೋಡಿ ಕಂಬಾರರ ಎಲ್ಲ ಮುಖ್ಯ ಕೃತಿಗಳಲ್ಲೂ ಬೇರೆಬೇರೆ ನಾಮ-ವೇಷದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ ಅಲ್ಲವೆ? ಶಿವಾಪುರವನ್ನು ಮತ್ತೆ ಕಟ್ಟುವ ಗಾಢವಾದ ಪ್ರಜ್ಞೆಯು ಅವರ ಬರವಣಿಗೆಯ ಮೂಲ ಅಸ್ತಿವಾರವಾಗಿದೆ ಅನ್ನಿಸುತ್ತಿದೆ.

ಅಹಲ್ಯೆಯನ್ನು ಬರೆದ, ಗೋಕುಲ ನಿರ್ಗಮನ ಬರೆದ ಪುತಿನರಸಿಂಹಾಚಾರ್‌, ಕಂಬಾರರಿಗೆ ಒಂದು ಮೇಜರ್‌ ಧ್ವನಿ ಅನ್ನಿಸಿದ್ದಾರೆ. ಕಾಮದ ನೈತಿಕತೆ ಮತ್ತು ಅನೈತಿಕತೆಯನ್ನು ಮುಕ್ತ ಸಂವೇದನೆಗೆ ಒಳಪಡಿಸಿದ ಕವಿ ಪುತಿನ. ಹಾಗಾಗಿ, ಅವರು ಕಂಬಾರರಿಗೆ ಪ್ರಿಯವಾಗುವುದು ಸಹಜವೇ ಆಗಿದೆ. ಅಹಲ್ಯೆ ಮತ್ತು ಹೇಳತೇನ ಕೇಳದಲ್ಲಿ ಇರುವ ಭಿನ್ನತೆಯನ್ನು ಲೆಕ್ಕದಲ್ಲಿಟ್ಟೂ ಅವುಗಳ ನಡುವೆ ಕಾಣುವ ಮೂಲ ಎಳೆಗಳ ಸಮಾನತೆ ಬೆರಗು ತರಿಸುವಂತಿದೆ. ಅದನ್ನು ಈವರೆಗೆ ಕನ್ನಡ ವಿಮರ್ಶೆಗುರುತಿಸಿದಂತಿಲ್ಲ. ಅನೂಚೀನವಾದ ಒಂದು ಬಾಳ್ವಿಕೆಯ ನೆಲೆಗೇಡಿನ ದುರಂತವನ್ನು ಎರಡೂ ಕೃತಿಗಳು ಪರಾಂಬರಿಸುತ್ತಿವೆ. ಎಸ್‌. ಎಲ್‌. ಭೈರಪ್ಪ ಅವರ ಗೃಹಭಂಗದ ಕಲ್ಪನೆ ಎರಡಕ್ಕೂ ಸಮಾನವಾದುದು. (ಬೇರಿನ ಹುಡುಕಾಟ ಮತ್ತು ಅಸ್ಮಿತೆಯ ಸಮಸ್ಯೆಯನ್ನು ಶೋಧಿಸುವ ಗೃಹಭಂಗದ ಭೈರಪ್ಪ , ಕಂಬಾರರಿಗೆ ಪ್ರಿಯರಾದ ಲೇಖಕರೆಂಬುದನ್ನು ಇಲ್ಲಿ ಪ್ರಾಸಂಗಿಕವಾಗಿ ನೆನೆಯಬಹುದು). ಅಹಲ್ಯೆ ಮತ್ತು ಹೇಳತೇನಕೇಳದಲ್ಲಿ ಗೃಹಭಂಗ ಸಂಭವಿಸುವ ಕ್ರಮವೂ ಸಮಾನವಾದುದು. ಅಹಲ್ಯೆಯಲ್ಲಿ, ಇಂದ್ರ ಗೌತಮನ ಆಶ್ರಮವನ್ನು (ಗೃಹಸ್ಥಾಶ್ರಮ?)ಹೊರಗಿನಿಂದ ಬಂದು ಆಕ್ರಮಿಸುವ ದುರ್ದಮ್ಯಪರಕೀಯತೆ. ಹೇಳತೇನ ಕೇಳಾದ ಮಾಯಾವಿ ರಾಕ್ಷಸ ಸಹ ಹೊರಗಿನಿಂದ ಶಿವಾಪುರವನ್ನು ಅತಿಕ್ರಮಿಸುವ ಶಕ್ತಿ. ಇಂದ್ರನು ಹೇಗೆ ಗೌತಮನ ವೇಷದಲ್ಲಿ ಅಹಲ್ಯೆಯನ್ನು ಭೇದಿಸುವನೋ ಹಾಗೇ ಹೇಳತೇನ ಕೇಳದ ರಾಕ್ಷಸ ಗೌಡನ ವೇಷದಲ್ಲಿ ಗೌಡತಿಯನ್ನು ಆಕ್ರಮಿಸುವನು. ಈ ವಿಷಮಸಂಯೋಗದ ಫ‌ಲ ಅಹಲ್ಯೆ ಮತ್ತು ಗೌಡತಿಯ ಗೃಹಭಂಗದ ದಾರುಣ ಕೇಡು. ನಿರ್ವೀರ್ಯತೆ. ಆತ್ಮನಾಶ. ನೆಲೆಗೇಡಿನ ದುರಂತ. ಸಮಾಜದ ಮೂಲಭೂತ ಘಟಕವಾದ ದಾಂಪತ್ಯದ ಪುರಾತನ ಚೌಕಟ್ಟು ಕಂಪಿಸುವ, ಹಾಳ್ಗೆಡುವ ಪರಿಣಾಮ ಎರಡೂ ಕೃತಿಗಳಲ್ಲೂ ಕಂಡುಬಂದಿದೆ. ಒಂದರಲ್ಲಿ ಶಿಷ್ಟ ಭಾಷಾ ಸಂವಿಧಾನದ ಕ್ರಮದಲ್ಲಿ. ಇನ್ನೊಂದರಲ್ಲಿ ದೇಸೀ ಭಾಷಾ ಸಂವಿಧಾನದ ನೆಲೆಯಲ್ಲಿ. ವಸಾಹತೋತ್ತರದ ಜಟಿಲ ಅನುಭವವನ್ನು ಎರಡೂ ಕಡೆಯೂ ಕಥಿಸಲಾಗಿದೆ. ಗೋಕುಲ ನಿರ್ಗಮನದಲ್ಲಂತೂ ಹೊರನಾಡಿನ ಕರೆ- ಕೇಡಿನ ಕರೆ ಎಂದು ಪುತಿನ ಸ್ಪಷ್ಟವಾಗಿಯೇ ಬರೆದಿದ್ದಾರೆ.

ಕುವೆಂಪು, ಬೇಂದ್ರೆ, ಪುತಿನರಂತೆ ಕಂಬಾರ ಕೂಡ ಕವಿ ನಾಟಕಕಾರ ಪರಂಪರೆಗೆ ಸೇರಿದವರು. ಕನ್ನಡ ನಾಟಕದ ಪ್ರಮುಖವಾದ ಈ ಧಾರೆಯನ್ನು ಎಚ್ಚರದಿಂದಲೇ ನಾವು ಗಮನಿಸಬೇಕಾಗಿದೆ. ಕನ್ನಡದ ಈ ಮುಖ್ಯ ಧಾರೆಯಲ್ಲಿ ಕಾಣುವ ಆಶಯಗಳ ಸಮಾನತೆಯನ್ನು ಕೂಡ ನಾವು ಗಮನಿಸಬೇಕಾಗಿದೆ. ವಿಷಮದಾಂಪತ್ಯದ ದುರಂತವನ್ನು ಅಹಲ್ಯೆ, ಮತ್ತು ಹೇಳತೇನ ಕೇಳ ಕೃತಿಗಳಲ್ಲಿ ಅಭಿವ್ಯಕ್ತಿಸಲು ಬಳಸುವ ಕ್ರಮಗಳನ್ನು ವಿಶ್ಲೇಷಿಸುವುದು ಕೂಡ ಕುತೂಹಲಕಾರಿ ಅಭ್ಯಾಸವಾಗಬಲ್ಲುದು. ಆಶ್ಚರ್ಯ

ವೆಂದರೆ ನಮ್ಮ ಕಾಲದ ಮಹತ್ವದ ಕವಿಗಳಾದ ಅಡಿಗರ ಭೂಮಿಗೀತ ಕವಿತೆಯಲ್ಲೂ ವಿಷಮಕಾಮದ ಚಿತ್ರಗಳು ಗಡದ್ದಾಗಿ ಬಂದಿವೆ. ಕಂಬಾರರ ಗದ್ಯಾತ್ಮಕ ಕವಿತೆಗಳಿಗಿಂತ ಅವರ ಗೀತಾತ್ಮಕ ಕವಿತೆಗಳೇ ನನಗೆ ಹೆಚ್ಚು ಪ್ರಿಯ. ಆ ಗೀತೆಗಳನ್ನು ಕಂಬಾರರು ಹಾಡಿದಾಗ ಸ್ಫೋಟಗೊಳ್ಳುವ ಶಕ್ತಿ ವಿಶೇಷವಾದದ್ದು ಎಂಬುದನ್ನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಒಂದು ಕವಿಗೋಷ್ಠಿ ಏರ್ಪಟ್ಟಿತ್ತು. ಕನ್ನಡದ ಅನೇಕ ಚಾಲ್ತಿಯಲ್ಲಿದ್ದ ಕವಿಗಳು ಆ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಗೋಷ್ಠಿಯ ಅಧ್ಯಕ್ಷರು ಗೋಪಾಲಕೃಷ್ಣ ಅಡಿಗರು. ಕವಿತೆಯನ್ನು ಹಾಡುವುದರ ಬಗ್ಗೆ

ಅವರಿಗಿದ್ದ ಅಸಮ್ಮತಿ ಎಲ್ಲರಿಗೂ ತಿಳಿದದ್ದೇ. ಕಂಬಾರರು ತಮ್ಮ ಸರತಿ ಬಂದಾಗ ಮರೆತೇನೆಂದರೆ ಮರೆಯಲಿ ಹ್ಯಾಂಗ ಎಂಬ ತಮ್ಮ ಜನಪ್ರಿಯ ಕವಿತೆಯನ್ನು ಹಾಡಿದರು. ಅದು ಸಹಜವಾಗಿಯೇ ಸಭಿಕರಿಗೆ ಪ್ರಿಯವಾಯಿತು. ವಿಶೇಷವೆಂದರೆ ಅಡಿಗರು ಆವತ್ತು ತಮ್ಮ ಕವಿತೆಯನ್ನು ಓದದೆ ಕೆಲವೇ ಮಾತುಗಳಲ್ಲಿ ತಮ್ಮ ಅಧ್ಯಕ್ಷ ಭಾಷಣ ಮುಗಿಸಿದರು. ಕವಿತೆಯನ್ನು ಹಾಡುವಂತೆ ಬರೆಯುವ ಮತ್ತು ಕವಿತೆಯನ್ನು ಹಾಡುವ ವಿಷಯದ ಬಗ್ಗೆ ತಮ್ಮ ಅಸಮ್ಮತಿಯನ್ನು ಸ್ಪಷ್ಟವಾದ ಮಾತುಗಳಲ್ಲಿ ಖಂಡಿಸಿದರು ಕೂಡ!

ತಮಗಿಂತ ಕಿರಿಯರಾದ ಕವಿಗಳ ಬಗ್ಗೆ ಕಂಬಾರರಿಗೆ ನಿರ್ಮತ್ಸರ ಅಭಿಮಾನ. ನನ್ನ ಕಾವ್ಯದ ಬಗ್ಗೆ ಮೊದಲಿಂದಲೂ ಒಳ್ಳೆಯ ಮಾತುಗಳಾಡುತ್ತ ಬಂದವರು ಅವರು. ನನ್ನ ಉತ್ತರಾಯಣ ಕವಿತೆಯ ಬಗ್ಗೆ ಕಂಬಾರರು ಬರೆದ ಕೆಲವು ಸಾಲುಗಳು ನನಗೆ ನೆನಪಾಗುತ್ತಿವೆ: ನಮ್ಮ ಉತ್ತಮ ಕವಿಗಳಲ್ಲಿ ಒಬ್ಬರಾದ ಎಚ್ಚೆಸ್ವಿಯವರ ಹಾಗೆ ಮನುಷ್ಯನ ಅಂತಃಕರಣ ಮತ್ತು ಭಾಷೆಯ ಒಳ ಮಿಡಿತಗಳನ್ನು ಅರಿತವರು ವಿರಳ. ಆಧುನಿಕ ಭಾವನೆಗಳನ್ನು ಪುರಾಣಗಳ ಅನುಭವದಲ್ಲಿ ಕರಗಿಸಿ ಅಭಿವ್ಯಕ್ತಿಸುವಲ್ಲಿ ಅವರ ಸಾಧನೆ ಅಸಾಧಾರಣವಾದುದು. ನರಸಿಂಹಸ್ವಾಮಿಗಳನ್ನು ಬಿಟ್ಟರೆ ಬೆಂಗಳೂರಿನ ಆಡುನುಡಿಯನ್ನು ಮೂರ್ತಿಯವರ ಹಾಗೆ ಧ್ವನಿಪೂರ್ಣವಾಗಿ ಬಳಸಿಕೊಂಡವರು ಇನ್ನೊಬ್ಬರಿಲ್ಲ.

ನನ್ನ ಕಾವ್ಯಕ್ಕೆ ದಕ್ಕಿದ ಬಹುದೊಡ್ಡ ಪ್ರಶಸ್ತಿ ಕಂಬಾರರ ಈ ಮೆಚ್ಚುಗೆ. ಸಂಬಂಧಪಟ್ಟ ಕವಿಯನ್ನು ಮಾತ್ರವಲ್ಲ ಒಟ್ಟಾರೆ ಕಾವ್ಯ ಸಂದರ್ಭವನ್ನು ಕೂಡಾ ಇಂಥ ನಿವ್ಯಾìಜ ಕಾವ್ಯಪ್ರೀತಿ ಜೀವಂತವಾಗಿ ಇಡಬಲ್ಲುದು.

ಎಚ್ ಎಸ್ ವೆಂಕಟೇಶಮೂರ್ತಿ

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.