ಪ್ರಬಂಧ: ಹೊಟೇಲ್‌

Team Udayavani, Sep 22, 2019, 5:00 AM IST

ರಸ್ತೆ ಬದಿಯಲ್ಲಿ ಮಾತನಾಡುತ್ತ ನಿಂತ ಮಿತ್ರರಿಬ್ಬರಲ್ಲಿ ಒಬ್ಟಾತ ಸೂಚಿಸಿದ. “”ಇಲ್ಲಿ ರಸ್ತೆ ಬದಿ ನಿಂತು ಮಾತನಾಡುವ ಬದಲು ಪಕ್ಕದಲ್ಲಿ ಇರೋ ಹೊಟೇಲಿನಲ್ಲಿ ಕೂತು, ಒಂದು ಗ್ಲಾಸ್‌ ಕಾಫಿ ಹೀರುತ್ತಾ ಮಾತನಾಡೋಣ” ಎಂದು. ಹಾಗೇ ಇಬ್ಬರೂ ಹೊಟೇಲ್‌ಗೆ ಹೋದರು. ಕಾಫಿ ಕುಡಿದರು. ತುಂಬಾ ತುಂಬಾ ಮಾತನಾಡಿ ಹಗುರಾದರು. ಪಾಪ ಅವರು ಪರಸ್ಪರ ಭೇಟಿಯಾಗದೆ ಎಷ್ಟು ಸಮಯವಾಗಿತ್ತೋ ಏನೋ! ಇದು ಹಿಂದಿನ ಕಾಲದ ಕಥೆ. ಆಗ ಹೊಟೇಲ್‌ ಬರೀ ಕಾಫಿ ತಿಂಡಿ ತಿನ್ನುವ ಒಂದು ಜಾಗವಾಗಿರದೆ ಪರಸ್ಪರ ಭೇಟಿಯಾಗುವ, ಬೆರೆಯುವ ಜಾಗವಾಗಿತ್ತು.

ಆದರೆ ಇಂದು ನಾವು ಹೊಟೇಲ್‌ಗೆ ಹೋದರೆ ಅಲ್ಲಿನ ಚಿತ್ರಣವೇ ಬೇರೆಯಾಗಿರುತ್ತದೆ. ಹರಟೆ ಹೊಡೆಯುತ್ತ ಕಾಲಕಳೆಯಲು, ಕಾಫಿ ಹೀರಲು ನಮಗೆ ಅಲ್ಲಿ ಸಾಕಷ್ಟು ಸಮಯ ಸಿಗೋದಿಲ್ಲ. ಆರಾಮದಲ್ಲಿ ತಿಂಡಿ ತಿನ್ನುವ ಎಂದರೂ ಅದಕ್ಕೆ ಅವಕಾಶವಿಲ್ಲ. ಪಕ್ಕದಲ್ಲೇ ನಾಲ್ಕೈದು ಜನ ಸೀಟಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಯಾವಾಗ ನಾವು ಎದ್ದು ಹೋಗುತ್ತೇವೆ? ಯಾವಾಗ ಅವರು ಈ ಸೀಟಿನಲ್ಲಿ ಕೂತು ಕೊಳ್ಳುವುದು ಎಂದು. ಹಾಗಾಗಿ, ಈಗ ಹೋಟೇಲ್‌ಗೆ ಹೋದರೆ ಶಾಂತಿ, ಸಮಾಧಾನಗಳ ಬದಲು ಬರೀ ಕಿರಿಕಿರಿ ಉಂಟಾಗುತ್ತವೆ. ನಾವು ನೆಮ್ಮದಿಯಿಂದ ತಿನ್ನಲು ಇತರ ಗ್ರಾಹಕರು ಬಿಡೋದಿಲ್ಲ. “ಆಯ್ತಾ,? ಆಯ್ತಾ?’ ಎಂದು ನಮ್ಮ ಶಾಂತಿ ಕದಡುತ್ತಾರೆ. ನಾವೇನು ಆ ಹೊಟೇಲ್‌ನಲ್ಲಿ ಶಾಶ್ವತವಾಗಿ ಇರಲು ಬಂದವರಾ!

ಮೊದಲು ಕಾಫಿ-ತಿಂಡಿ ತಂದುಕೊಡುವ ಮಾಣಿಗಳಲ್ಲಿ ಎಷ್ಟೊಂದು ನಯ-ವಿನಯ ಇರುತ್ತಿತ್ತು. ಈಗ ಅವೆಲ್ಲ ಇಲ್ಲ . ತಿಂಡಿ ಏನಿದೆ ಅಂತ ಕೇಳಿದರೆ ಅವರು ನಮಗೆ ನಾಲ್ಕೈದು ತಣಿದು ಹೋದ ತಿಂಡಿಗಳ ಹೆಸರುಗಳನ್ನು ಹೇಳಿ, ಅವುಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡುವಂತೆ ಪರೋಕ್ಷವಾಗಿ ನಮ್ಮ ಮೇಲೆ ಒತ್ತಡ ತರುತ್ತಾರೆ. ಅಂಬಡೆ ಬಿಸಿ ಇದೆಯಾ ಅಂತ ಕೇಳಿದರೆ “ಮಾಡುವಾಗ ಬಿಸಿ ಇತ್ತು’ ಎಂಬ ಉತ್ತರ ಬರುತ್ತದೆ.

ಕುಡಿಯಲು ಬಿಸಿ ನೀರು ಕೊಡಿ ಎಂದರೆ ಕಂಡಾಬಟ್ಟೆ ಬಿಸಿ ಇರೋ ನೀರು ತಂದು ಕೊಡುತ್ತಾರೆ. ನಾವೇ ಅವರಿಗೆ ಮತ್ತೆ ಜ್ಞಾಪಿಸಬೇಕಾಗುತ್ತದೆ. “ನಾನು ಕೇಳಿದ್ದು… ಬಿಸಿ ನೀರು ಕುಡಿಯಲು, ಸ್ನಾನ ಮಾಡಲು ಅಲ್ಲ’ ಎಂದು. ಅನೇಕ ಬಾರಿ ಅವರು ಬೆರಳಿಗೆ ಯಾವುದೋ ಗಾಯಮಾಡಿಸಿಕೊಂಡು ಅದಕ್ಕೆ ಪ್ಲಾಸ್ಟರ್‌ ಸುತ್ತಿರುತ್ತಾರೆ. ಅನೇಕ ಬಾರಿ ನೀರಿನ ಲೋಟಗಳನ್ನು ತರುವಾಗ… ಹೇಗೆ ಹೇಳಲಿ, ಬಿಟ್ಟು ಬಿಡಿ !

ಅನೇಕ ಬಾರಿ ಅವರು ಬಿಲ್ಲನ್ನು ನಾವು ಇರುವಲ್ಲಿಗೇ ತಂದು ಕೊಡುತ್ತಾರೆ. ಅವರೇನೋ ಘನ ಕಾರ್ಯ ಮಾಡಿದ್ದಾರೆಂದು ತಿಳಿದು ನಾವು ಬಿಲ್ಲಿನ ದುಡ್ಡನ್ನು ಅವರಲ್ಲೇ ಕೊಡುತ್ತೇವೆ. ಅವರು ಮತ್ತು ಅವರೊಡನೆ ಸೇರಿಕೊಂಡಿರುವ ಕ್ಯಾಷಿಯರ್‌ ಬಾಕಿ ಕೊಡುವಾಗ ಕೆಲವು 10 ರೂಪಾಯಿಯ ಇಲ್ಲವೇ 20 ರೂಪಾಯಿಯ ನೋಟುಗಳನ್ನು ಉದ್ದೇಶ ಪೂರ್ವಕ ನೀಡುತ್ತಾರೆ-ಸಪ್ಲಾಯರ್‌ಗೆ ಟಿಪ್ಸ್ ಕೊಡಲು ಅನುಕೂಲವಾಗಲಿ ಎಂದು.

ನಾರ್ತ್‌ ಇಂಡಿಯನ್‌ ಫ‌ುಡ್‌ ಆರ್ಡರ್‌ ಮಾಡಿದಾಗ ನಾವು ಕೇಳದೆ ಇದ್ದರೂ ಸ್ವಲ್ಪ ನೀರುಳ್ಳಿ , ಮುಳ್ಳುಸೌತೆ ತುಂಡುಗಳು ಬಂದು ನಮ್ಮೆದುರಿನ ಪ್ಲೇಟ್‌ಗಳಲ್ಲಿ ವಿಜೃಂಭಿಸುತ್ತವೆ. ಈ ಸಪ್ಲಾಯರ್‌ ಎಷ್ಟು ಒಳ್ಳೆಯವನು, ಈ ಹೊಟೇಲ್‌ನವರು ಎಷ್ಟು ಒಳ್ಳೆಯವರು ಎಂದು ನಾವು ಮನಸ್ಸಿನಲ್ಲೇ ಅವರನ್ನು ಹೊಗಳುತ್ತೇವೆ. ಆದರೆ, ಬಿಲ್ಲು ಬಂದಾಗ ನಮ್ಮ ಮುಖದಲ್ಲಿನ ಸಂತೋಷ ಮಾಯವಾಗುತ್ತದೆ. ನೀರುಳ್ಳಿ, ಮುಳ್ಳುಸೌತೆ ತುಂಡುಗಳ ಛಾರ್ಜು ಬಿಲ್ಲಲ್ಲಿ ಪ್ರತ್ಯಕ್ಷವಾಗಿರುತ್ತವೆ!

ಮಾಣಿಗೆ ವೆಯ್ಟರ್‌ ಅಂತ ಕೂಡ ಕರೆಯುತ್ತಿದ್ದರು. ಈಗ ಆ ಹೆಸರಿನಿಂದ ಕರಿಯುವುದು ಭಾರೀ ಕಡಿಮೆ. ಯಾಕೆಂದರೆ, ಈಗ ಆರ್ಡರ್‌ ಕೊಟ್ಟು ಸುಮಾರು ಅರ್ಧ ಗಂಟೆ ಕಾಯಬೇಕಾಗುವುದು ನಾವು. ಹೀಗಿರುವಾಗ ಮಾಣಿ ವೆಯ್ಟರ್‌ ಆಗಲು ಹೇಗೆ ಸಾಧ್ಯ?

ಅನೇಕ ಬಾರಿ ಮಾಣಿಗೆ ಹೊಟೇಲಿನಲ್ಲಿ ಮಾಡುವ ತಿಂಡಿ, ಪದಾರ್ಥಗಳ ಬಗ್ಗೆ ಸಾಮಾನ್ಯ ಜ್ಞಾನವೂ ಇರೋದಿಲ್ಲ. ಮೆನುಕಾರ್ಡ್‌ ನೋಡಿ ಹೀಗೆಂದರೆ ಏನು? ಅದು ಸ್ವೀಟಾ? ಖಾರವಾ? ಎಂದರೆ ಅವನು “ಮೀಡಿಯಂ’ ಎಂದು ರೆಡಿಮೇಡ್‌ ಉತ್ತರ ನೀಡುತ್ತಾನೆ. ಇದರಲ್ಲಿ ಅವನ ತಪ್ಪು ಇಲ್ಲ ಬಿಡಿ. ಅವನಿಗೆ ತಿನ್ನಲು ಕೊಟ್ಟರೆ ತಾನೆ ಅವನಿಗೆ ಅದರ ರುಚಿ ಏನು ಎಂದು ತಿಳಿಯುವುದು?

ಒಮ್ಮೆ ನಾನು, “”ಏನಯ್ಯ, ಹೊಟೇಲಲ್ಲಿ ಇದ್ದೂ ನಿನಗೆ ಅದು ಸ್ವೀಟೋ, ಖಾರವೋ ಎಂದು ಗೊತ್ತಿಲ್ಲವಲ್ಲ?” ಎಂದಾಗ ಆತ, “”ಸಾರ್‌, ನೀವು ಕನ್ನಡ ಮೇಷ್ಟ್ರು… ಹೋಗಿ ಲೆಕ್ಕ ಪಾಠ ಮಾಡಿ ಅಂದ್ರೆ ನೀವು ಏನು ಮಾಡ್ತೀರಿ? ನಮಗೆ ಇಲ್ಲಿ ತಿಂಡಿ ಬಗ್ಗೆ ತರಬೇತಿ ಏನೂ ಇಲ್ಲ. ಹೇಳಿದ ಕೆಲಸ ಮಾಡೋದು ಅಷ್ಟೇ” ಎಂದಾಗ ನನಗೂ ಹೌದಲ್ಲ ಅನಿಸಿತು.

ಅಶೋಕ್‌ ಕುಮಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೇಘಾಲಯ ರಾಜ್ಯವು ಹಿಮಾಲಯದ ವಿಶೇಷ ಅನುಗ್ರಹಕ್ಕೊಳಗಾದ ಸುಮಸುಂದರ ತರುಲತೆಗಳ ನಾಡು. ಈ ರಾಜ್ಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯೇ...

  • ಪಾಶ್ಚಾತ್ಯ ವಾದ್ಯಕ್ಕೆ ಭಾರತೀಯ ಸಂಸ್ಕಾರ ಕೊಟ್ಟವರು ಕದ್ರಿ ಗೋಪಾಲನಾಥರು ವಿದ್ಯಾ ಭೂಷಣ ನಮ್ಮ ಊರಿನವರು. ಅಂದರೆ, ದಕ್ಷಿಣಕನ್ನಡ ಜಿಲ್ಲೆಯವರು ಎಂದು ಹೇಳುವುದಕ್ಕೆ...

  • ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ...

  • ಆ ಮುದಿಬ್ರಾಹ್ಮಣ ತನ್ನ ಕೈಗಳಲ್ಲಿ ಕರ್ಣನಿಂದ ದಾನವಾಗಿ ಪಡೆದ ಕರ್ಣಕುಂಡಲವನ್ನು ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ಹೋಗುತ್ತಿದ್ದ. ಅವನ ಹಣ್ಣು...

  • ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು...

ಹೊಸ ಸೇರ್ಪಡೆ