ಇಥಿಯೋಪಿಯಾದ ಕತೆ: ಸೇಬು ಹಣ್ಣಿನ ಉಡುಗೊರೆ

Team Udayavani, Jun 9, 2019, 6:00 AM IST

ಯೋನಾಸ್‌ ಎಂಬ ರೈತನಿದ್ದ. ಅವನು ಬಹು ಬಗೆಯ ಹಣ್ಣುಗಳ ಮರಗಳನ್ನು ಬೆಳೆದಿದ್ದ. ಒಂದು ಸಲ ಅವನ ತೋಟದಲ್ಲಿರುವ ಸೇಬು ಮರದಲ್ಲಿ ಮನೋಹರವಾದ ಒಂದೇ ಒಂದು ಹಣ್ಣು ಬೆಳೆಯಿತು. ಅದರ ಆಕರ್ಷಕವಾದ ಕಾಂತಿಯಿಂದಾಗಿ ಕತ್ತಲಿನಲ್ಲಿದ್ದರೆ ಉರಿಯುವ ದೀಪದ ಹಾಗೆ ಬೆಳಕು ಕೊಡುತ್ತದೆಂದು ಅನಿಸಿತು. ರೈತ ಹಣ್ಣನ್ನು ಮರದಿಂದ ಕೊಯಿದ. ಇದನ್ನು ತಾನೇ ತಿನ್ನಬಾರದು, ತನಗೆ ಅತ್ಯಂತ ಪ್ರೀತಿಪಾತ್ರರಾದ ಯಾರಿಗಾದರೂ ಉಡುಗೊರೆಯಾಗಿ ಕೊಡಬೇಕು ಎಂದು ಯೋಚಿಸಿದ. ಆಗ ಅವನಿಗೆ ತಮ್ಮನ್ನು ಆಳುವ ಅರಸನ ನೆನಪಾಯಿತು. ಪ್ರಜೆಗಳ ಕ್ಷೇಮಕ್ಕಾಗಿ ಹಗಲಿರುಳೂ ಚಿಂತಿಸುವ ಅರಸನನ್ನು ಬಿಟ್ಟರೆ ತನಗೆ ಬೇರೆ ಯಾರಲ್ಲಿಯೂ ಪ್ರೀತಿ ಇಲ್ಲ. ಹೀಗಿರುವಾಗ ಇದನ್ನು ಅವನಿಗೇ ಒಪ್ಪಿಸುವುದು ಸರಿ ಎಂದು ನಿರ್ಧರಿಸಿದ. ಒಂದು ಬಟ್ಟೆಯಲ್ಲಿ ಹಣ್ಣನ್ನು ಗಂಟು ಕಟ್ಟಿಕೊಂಡು ಅರಸನ ಸಭೆಗೆ ಹೋದ.

ತನ್ನ ಮುಂದೆ ನಿಂತ ರೈತನನ್ನು ಅರಸ ಪ್ರೀತಿಯಿಂದ ಮಾತನಾಡಿಸಿದ. ಬಟ್ಟೆಯಲ್ಲಿ ಕಟ್ಟಿಕೊಂಡ ಸೇಬನ್ನು ಯೋನಾಸ್‌ ಅವನ ಮುಂದಿರಿಸಿದ. ಅರಸನು, “”ಇದೇನಿದು, ಈ ಹಣ್ಣಿನಲ್ಲಿ ಅಂತಹ ವಿಶೇಷ ಏನಿದೆ?” ಎಂದು ಕೇಳಿದ. “”ದೊರೆಯೇ, ಇದು ಬಹು ವಿಶೇಷವಾಗಿದೆ. ದೇವತೆಗಳ ಕೃಪೆಯಿಂದ ಈ ಏಕೈಕ ಹಣ್ಣು ನನ್ನ ತೋಟದ ಮರದಲ್ಲಿ ಬೆಳೆದಿದೆ ಎಂದು ಭಾವಿಸಿದ್ದೇನೆ. ಅದನ್ನು ಕತ್ತಲಿನ ಕೋಣೆಯಲ್ಲಿ ಇಟ್ಟು ನೋಡಿ. ದೀಪಗಳನ್ನುರಿಸುವ ಅಗತ್ಯವಿಲ್ಲದೆ ಬೆಳಕು ಕೊಡುತ್ತದೆ. ಅಮೂಲ್ಯವಾದ ಹಣ್ಣನ್ನು ನನಗೆ ಪ್ರೀತಿಪಾತ್ರರಾದವರಿಗಷ್ಟೇ ಕೊಡಬೇಕು ಎಂದು ನಿರ್ಧರಿಸಿದ್ದೇನೆ. ಪ್ರಜೆಗಳ ಪಾಲಿಗೆ ಹಿತ ನೀಡುವ ಅರಸರನ್ನು ಬಿಟ್ಟರೆ ಬೇರೆ ಯಾರ ಮೇಲೆಯೂ ಪ್ರೀತಿಯಿರಲು ಸಾಧ್ಯವಿಲ್ಲ. ಹೀಗಾಗಿ ತಮಗೆ ಉಡುಗೊರೆಯಾಗಿ ನೀಡಬೇಕೆಂದು ತಂದಿದ್ದೇನೆ, ಸ್ವೀಕರಿಸಬೇಕು” ಎಂದು ಯೋನಾಸ್‌ ನಿವೇದಿಸಿದ.

ಅರಸನು ಸೇಬನ್ನು ಕೈಯಲ್ಲಿ ಹಿಡಿದು ನೋಡಿದ. ಅದರಲ್ಲಿ ಅಂತಹ ವಿಶೇಷವಿದೆ ಎಂದು ಅವನಿಗನಿಸಲಿಲ್ಲ. ಆದರೆ ಮುಗ್ಧನಾದ ರೈತನ ಪ್ರೀತಿಯನ್ನು ಶಂಕಿಸಬಾರದು ಎಂಬ ಕಾರಣಕ್ಕೆ ತುಂಬ ಸಂತೋಷ ವ್ಯಕ್ತಪಡಿಸಿದ. “”ನಿಜವಾಗಿ ಅತ್ಯಮೂಲ್ಯವಾದ ಕೊಡುಗೆಯನ್ನೇ ತಂದಿರುವೆ. ನನಗೆ ತಾಳಲಾಗದ ಹರ್ಷವುಂಟಾಗಿದೆ. ಇದಕ್ಕಾಗಿ ನನ್ನಿಂದ ನಿನಗೆ ಏನು ಪ್ರತಿಫ‌ಲ ಬೇಕು, ನಿಸ್ಸಂಕೋಚವಾಗಿ ಕೋರಿಕೋ. ಕೊಡುತ್ತೇನೆ” ಎಂದು ಉದಾರವಾಗಿ ಹೇಳಿದ.

ಯೋನಾಸ್‌ ಪ್ರತಿಫ‌ಲಕ್ಕೆ ಕೈಯೊಡ್ಡಲಿಲ್ಲ. “”ಎಲ್ಲಾದರೂ ಉಂಟೆ? ಪ್ರಕೃತಿಯು ಅಪೂರ್ವ ಹಣ್ಣನ್ನು ಉಡುಗೊರೆಯಾಗಿ ನೀಡಿದೆ. ಅದನ್ನು ತಮಗೆ ಒಪ್ಪಿಸಿದೆ ಅಷ್ಟೆ. ಇದರಲ್ಲಿ ನನ್ನ ಶ್ರಮವೇನೂ ಇಲ್ಲ. ಪ್ರೀತಿಯ ಕೊಡುಗೆಗೆ ಪ್ರತಿಫ‌ಲ ಸ್ವೀಕರಿಸುವುದು ಉಚಿತವಾಗುವುದಿಲ್ಲ” ಎಂದು ನಿರಾಕರಿಸಿದ.

ಆದರೆ ಬರಿಗೈಯಲ್ಲಿ ರೈತನನ್ನು ಕಳುಹಿಸಲು ಅರಸನ ಮನವೊಪ್ಪಲಿಲ್ಲ. “”ಅರಸನು ಯಾರಿಂದಲೂ ಉಚಿತವಾಗಿ ಕೊಡುಗೆಗಳನ್ನು ಸ್ವೀಕರಿಸುವ ಸಂಪ್ರದಾಯವಿಲ್ಲ. ಪ್ರೀತಿಯಿಂದ ನೀನು ನೀಡಿದ ಉಡುಗೊರೆಗೆ ಪ್ರತಿಯಾಗಿ ಏನನ್ನಾದರೂ ಪಡೆಯದೆ ಇಲ್ಲಿಂದ ಹೋಗಬಾರದು” ಎಂದು ಬಲವಂತ ಮಾಡಿದ. ಮಂತ್ರಿಗಳೊಂದಿಗೆ ಸಮಾಲೋಚಿಸಿದ. ರೈತನ ಕೊಡುಗೆಗೆ ಪ್ರತಿಯಾಗಿ ಏನು ಕೊಡಬಹುದು? ಎಂದು ವಿಚಾರಿಸಿದ. ಮಂತ್ರಿಗಳು, “”ತನ್ನ ದೃಷ್ಟಿಯಲ್ಲಿ ಅಮೂಲ್ಯ ಎನಿಸಿದ ವಸ್ತುವನ್ನು ತಾನಿರಿಸಿಕೊಳ್ಳದೆ ಅರಸರ ಸನ್ನಿಧಿಗೆ ತಂದೊಪ್ಪಿಸಿದ ಅವನ ಒಳ್ಳೆಯ ಗುಣಕ್ಕೆ ಉತ್ತಮ ಪುರಸ್ಕಾರವನ್ನೇ ನೀಡಬೇಕು. ಪಾಪ, ಕಾಲಿಗೆ ಹಾಕಲು ಒಳ್ಳೆಯ ಪಾದರಕ್ಷೆಗಳು ಕೂಡ ಇಲ್ಲದೆ ಕಷ್ಟಪಟ್ಟು ನಡೆದು ಇಲ್ಲಿಗೆ ಬಂದಿದ್ದಾನೆ. ಅವನಿಗೆ ಸವಾರಿಗೆ ಯೋಗ್ಯವಾದ ಒಳ್ಳೆಯ ಒಂದು ಕುದುರೆ ಕೊಡಬೇಕು. ಕುದುರೆಯ ಮೇಲೆ ಅದಕ್ಕೆ ಹೊರಲು ಸಾಧ್ಯವಿರುವಷ್ಟು ಚಿನ್ನದ ನಾಣ್ಯಗಳ ಮೂಟೆಯನ್ನಿರಿಸಿದರೆ ರೈತನ ಕಷ್ಟದ ದಿನಗಳು ಕೊನೆಯಾಗಿ ಸುಖದಿಂದ ಬದುಕಲು ನೆರವಾಗುತ್ತದೆ” ಎಂದು ಹೇಳಿದರು.

ಮಂತ್ರಿಗಳ ಸಲಹೆ ಸರಿಯೆಂದು ಅರಸನಿಗೆ ತೋರಿತು. ಅವರು ಹೇಳಿದ ಹಾಗೆಯೇ ಒಳ್ಳೆಯ ಕುದುರೆಯ ಮೇಲೆ ನಾಣ್ಯಗಳ ಮೂಟೆ ಹೇರಿ ಯೋನಾಸ್‌ನಿಗೆ ಕೊಡುಗೆಯಾಗಿ ನೀಡಿ ಕಳುಹಿಸಿದ. ತನಗೆ ಅಪೇಕ್ಷಿಸದೆ ಸಿಕ್ಕಿದ ಪ್ರತಿಫ‌ಲ ಕಂಡು ಯೋನಾಸ್‌ ತುಂಬ ಸಂತೋಷಪಟ್ಟ. ಕುದುರೆಯ ಮೇಲೆ ಕುಳಿತುಕೊಂಡು ಮನೆಯ ದಾರಿ ಹಿಡಿದ.

ಯೋನಾಸ್‌ ಮನೆಯ ಪಕ್ಕದಲ್ಲಿ ಡಲ್ಲಾಸ್‌ ಎಂಬ ಶ್ರೀಮಂತನಾದ ರೈತನಿದ್ದ. ಅವನು ಯಾರಿಗೂ ಕೊಳೆತ ಹಣ್ಣು ಕೂಡ ಉಚಿತವಾಗಿ ಕೊಡುವವನಲ್ಲ. ಲಾಭ ಬರುವಾಗ ಬಿಟ್ಟು ಕೊಡುವ ಸ್ವಭಾವ ಅವನದಲ್ಲ. ಅವನು ಒಳ್ಳೆ ಜಾತಿಯ ಕುದುರೆಯನ್ನೇರಿಕೊಂಡು ಬರುತ್ತಿರುವ ಯೋನಾಸ್‌ನನ್ನು ಕಂಡು ಬೆರಗಾದ. ತಾನು ಕಾಣುತ್ತಿರುವುದು ಕನಸಲ್ಲವಷ್ಟೇ ಎಂದು ಕಣ್ಣುಗಳನ್ನು ಹೊಸಕಿಕೊಂಡ. ಕನಸಲ್ಲ ಎನಿಸಿದ ಮೇಲೆ ಯೋನಾಸ್‌ ಬಳಿಗೆ ಓಡಿಹೋಗಿ ತಡೆದು ನಿಲ್ಲಿಸಿದ. “”ಏನಿದು ಪರಮಾಶ್ಚರ್ಯ! ನಿನ್ನೆ ತನಕ ಹೊಲ ಉಳಲು ಮುದಿ ಎತ್ತನ್ನು ಕೊಳ್ಳಲು ನಿನ್ನ ಬಳಿ ಶಕ್ತಿಯಿರಲಿಲ್ಲ. ಆದರೆ ಇಂದು ಲಕ್ಷ ಲಕ್ಷ ಬೆಲೆಬಾಳುವ ಕುದುರೆಯ ಮೇಲೆ ಕುಳಿತುಕೊಂಡು ಬರುತ್ತಾ ಇದ್ದೀ ಅಂದರೆ ಏನು ಸಮಾಚಾರ? ಯಾರ ಲಾಯದಿಂದ ಕದ್ದುಕೊಂಡು ಬಂದೆ?” ಎಂದು ಕೇಳಿದ.

ಜೋರಾಗಿ ನಕ್ಕುಬಿಟ್ಟ ಯೋನಾಸ್‌. “”ಅಯ್ಯೋ ಅಣ್ಣ, ನನಗೇಕೆ ಬರಬೇಕು ಅಂತಹ ಕೇಡುಗಾಲದ ಬುದ್ಧಿ? ಇದು ಪ್ರಾಮಾಣಿಕವಾಗಿಯೇ ದೊರಕಿದೆ. ನನ್ನ ತೋಟದಲ್ಲಿ ಕೆಂಪು ಕೆಂಪಗಾದ ರಕ್ತದ ಬಣ್ಣದ ದೊಡ್ಡ ಸೇಬು ಆಗಿತ್ತಲ್ಲ? ಅದು ಬಹಳ ಅಪೂರ್ವವಾದುದೆಂದು ನನಗೆ ಗೊತ್ತಾಯಿತು. ತೆಗೆದುಕೊಂಡು ಹೋಗಿ ಆಳುವ ಅರಸರಿಗೆ ಉಡುಗೊರೆಯಾಗಿ ಕೊಟ್ಟುಬಿಟ್ಟೆ. ನನಗೆ ಪ್ರತಿಫ‌ಲದ ಆಶೆಯಿರಲಿಲ್ಲ ಬಿಡು. ಆದರೂ ಅರಸರು ಕೇಳಬೇಕಲ್ಲ, ಇಷ್ಟು ಒಳ್ಳೆಯ ಉಡುಗೊರೆ ನೀಡಿದವನನ್ನು ಹಾಗೆಯೇ ಕಳುಹಿಸುವ ಪರಿಪಾಠ ಇಲ್ಲ ಅಂತ ಹೇಳಿ ಸಂಚಾರಕ್ಕೆ ಈ ಕುದುರೆ ಕೊಟ್ಟರು. ಅಷ್ಟು ಮಾತ್ರವಲ್ಲ, ಸಣ್ಣ ಕೊಡುಗೆ ಅಂತ ಹೇಳಿ ಕುದುರೆಗೆ ಹೊರಲು ಸಾಧ್ಯವಾಗದಷ್ಟು ಬಂಗಾರದ ನಾಣ್ಯಗಳ ಮೂಟೆಯನ್ನು ಹೊರಿಸಿ ಕಳುಹಿಸಿದರು” ಎಂದು ನಿಜ ವಿಷಯವನ್ನೇ ಹೇಳಿದ.

ಇದರಿಂದ ಡಲ್ಲಾಸ್‌ಗೆ ಬಾಯಿ ನೀರೂರಿತು. ಒಂದು ಸಾಧಾರಣ ಸೇಬನ್ನು ಇವನು ತೆಗೆದುಕೊಂಡು ಹೋಗಿ ಕೊಡುವಾಗ ಅರಸನು ಅವನ ಮಾತನ್ನು ನಂಬಿ, ಇಷ್ಟು ದೊಡ್ಡ ಉಡುಗೊರೆ ನೀಡಿದನೆಂಬ ಕತೆ ಕೇಳಿ ಅವನಿಗೆ ಹೊಟ್ಟೆ ಉರಿದುಹೋಯಿತು. ತನ್ನ ತೋಟದಲ್ಲಿ ಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾಗಿರುವ ಸೇಬುಹಣ್ಣುಗಳು ಬೇಕಾದಷ್ಟು ಇವೆ. ಒಂದು ಹಣ್ಣಿಗೆ ಒಂದು ಕುದುರೆ, ಒಂದು ಮೂಟೆ ಚಿನ್ನ ಸಿಗುವುದಾದರೆ ತನ್ನ ಮನೆಯನ್ನು ಅದರಿಂದಲೇ ತುಂಬಿಸಬಹುದು ಎಂದು ಅವನು ಲೆಕ್ಕ ಹಾಕಿದ. ಕೆಲಸದವರನ್ನು ಬರಮಾಡಿಸಿ ಚಂದಚಂದದ ಸೇಬುಹಣ್ಣುಗಳನ್ನು ಕೊಯ್ಯಿಸಿ ಗಾಡಿ ತುಂಬ ಹೇರಿದ. ಅರಸನ ಸನ್ನಿಧಿಗೆ ತೆಗೆದುಕೊಂಡು ಹೋದ. “”ನಾನು ಬಡರೈತ ಡಲ್ಲಾಸ್‌. ನನ್ನ ತೋಟದಲ್ಲಿ ಅತ್ಯಮೂಲ್ಯವಾದ ಸೇಬುಹಣ್ಣುಗಳು ರಾಶಿರಾಶಿಯಾಗಿ ಬೆಳೆದಿವೆ. ಇದು ಯೋಗ್ಯರಾದವರ ಬಳಿಗೆ ಸೇರಬೇಕು ಎಂಬ ಆಶಯ ನನ್ನದು. ಹೀಗಾಗಿ ಎಲ್ಲವನ್ನೂ ಕೊಯ್ಯಿಸಿ ತಮಗೆ ಸಮರ್ಪಿಸಲು ತಂದಿದ್ದೇನೆ” ಎಂದು ಪ್ರಾರ್ಥಿಸಿದ.

ಅರಸನು ಕಣ್ಣರಳಿಸಿ ಹಣ್ಣುಗಳನ್ನು ನೋಡಿದ. “”ತುಂಬ ಸಂತೋಷವಾಯಿತು. ಈ ಹಣ್ಣುಗಳಿಗಾಗಿ ನೀನು ಯಾವ ಪ್ರತಿಫ‌ಲ ಬೇಕು ಎಂದು ಬಯಸಿದರೂ ಅದನ್ನು ಕೊಡುವ ವ್ಯವಸ್ಥೆ ಮಾಡುತ್ತೇನೆ” ಎಂದು ಉದಾರವಾಗಿ ಹೇಳಿದ. ತಾನು ಏನನ್ನಾದರೂ ಅಪೇಕ್ಷಿಸಿದರೆ ಅದು ಸಣ್ಣದಾಗಬಹುದು, ಅರಸನೇ ಯೋಚಿಸಿ ಕೊಟ್ಟರೆ ದೊಡ್ಡ ಕೊಡುಗೆ ಸಿಗಬಹುದು ಎಂದು ಡಲ್ಲಾಸ್‌ ಮನಸ್ಸಿನೊಳಗೆ ಲೆಕ್ಕ ಹಾಕಿದ. “”ಛೇ, ನಾನು ಕೊಡುಗೆಯಾಗಿ ಇದನ್ನು ತಂದುದು ಪ್ರತಿಫ‌ಲದ ಬಯಕೆಯಿಂದ ಅಲ್ಲವೇ ಅಲ್ಲ. ನನಗೆ ಏನೂ ಬೇಡ” ಎಂದು ಹೇಳಿದ. ಅರಸನು, “”ಹಾಗೆಂದರೆ ಹೇಗೆ? ಪ್ರಜೆಗಳಿಂದ ನಾನು ಯಾವ ವಸ್ತುವನ್ನೂ ಉಚಿತವಾಗಿ ಸ್ವೀಕರಿಸುವ ಪದ್ಧತಿಯಿಲ್ಲ. ಅದಕ್ಕೆ ಪ್ರತಿಫ‌ಲ ಕೊಡಲೇಬೇಕಾಗುತ್ತದೆ. ಏನು ಬೇಕಿದ್ದರೂ ಕೋರಿಕೋ, ಕೊಡುತ್ತೇನೆ” ಎಂದು ಹೇಳಿದ.

ತನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಿತೆಂದು ಡಲ್ಲಾಸ್‌ ಮನಸ್ಸಿನಲ್ಲಿ ಸಂತೋಷಪಟ್ಟ. “”ಅರಸರು ಬಲವಂತ ಮಾಡುವುದಾದರೆ ನಾನು ಪ್ರತಿಫ‌ಲ ಸ್ವೀಕರಿಸುತ್ತೇನೆ. ತಮಗೆ ಪ್ರೀತಿಯಿಂದ ಏನು ಪ್ರತಿಫ‌ಲ ಕೊಡಬೇಕು ಎಂದು ಅನಿಸುತ್ತದೋ ಅದನ್ನು ಕೃತಜ್ಞತೆಯಿಂದ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ. ಒಂದು ಗಾಡಿ ತುಂಬ ಹಣ್ಣು ತಂದಿರುವ ಇವನು ಬಡವನಲ್ಲ ಎಂದು ಅರಸ ನಿರ್ಧರಿಸಿದ. ಅವನ ಬೆರಳುಗಳಲ್ಲಿ ಉಂಗುರಗಳನ್ನು ಧರಿಸಿರುವ ಗುರುತನ್ನು ಕಂಡು ದುಡಿಯುವವನೂ ಅಲ್ಲ ಅನಿಸಿತು. ರೈತ ಯೋನಾಸ್‌ ತಂದುಕೊಟ್ಟ ಸೇಬು ಹಣ್ಣನ್ನು ಒಳಗಿನಿಂದ ತರಿಸಿ ಅವನ ಕೈಯಲ್ಲಿಟ್ಟ. “”ಇದು ನನಗೆ ತುಂಬ ಪ್ರೀತಿಯ ಹಣ್ಣು, ಬಡರೈತನೊಬ್ಬನ ಶ್ರಮದ ಫ‌ಲ. ಇದರ ಬೆಲೆ ಕಟ್ಟಲಾಗದು. ಇದನ್ನು ತೆಗೆದುಕೊಂಡು ಹೋಗು” ಎಂದು ಹೇಳಿದ.

ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೇಘಾಲಯ ರಾಜ್ಯವು ಹಿಮಾಲಯದ ವಿಶೇಷ ಅನುಗ್ರಹಕ್ಕೊಳಗಾದ ಸುಮಸುಂದರ ತರುಲತೆಗಳ ನಾಡು. ಈ ರಾಜ್ಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯೇ...

  • ಪಾಶ್ಚಾತ್ಯ ವಾದ್ಯಕ್ಕೆ ಭಾರತೀಯ ಸಂಸ್ಕಾರ ಕೊಟ್ಟವರು ಕದ್ರಿ ಗೋಪಾಲನಾಥರು ವಿದ್ಯಾ ಭೂಷಣ ನಮ್ಮ ಊರಿನವರು. ಅಂದರೆ, ದಕ್ಷಿಣಕನ್ನಡ ಜಿಲ್ಲೆಯವರು ಎಂದು ಹೇಳುವುದಕ್ಕೆ...

  • ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ...

  • ಆ ಮುದಿಬ್ರಾಹ್ಮಣ ತನ್ನ ಕೈಗಳಲ್ಲಿ ಕರ್ಣನಿಂದ ದಾನವಾಗಿ ಪಡೆದ ಕರ್ಣಕುಂಡಲವನ್ನು ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ಹೋಗುತ್ತಿದ್ದ. ಅವನ ಹಣ್ಣು...

  • ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು...

ಹೊಸ ಸೇರ್ಪಡೆ

  • ಕೇಂದ್ರೀಯ ಪ್ರತ್ಯಕ್ಷ ತೆರಿಗೆ ಮಂಡಳಿ ವಾರ್ಷಿಕ ತೆರಿಗೆ ಸಂಗ್ರಹದ ಅಂಕಿಅಂಶವನ್ನು ಇಂದು ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರ, ದಿಲ್ಲಿ ಮತ್ತು ಕರ್ನಾಟಕ ಈ ಮೂರು...

  • ಉಡುಪಿ: ಮಣಿಪಾಲ ಕೆಎಂಸಿಯ ಫಾರ್ಮಕಾಲಜಿ ವಿಭಾಗ ಮತ್ತು ಎಂಐಟಿಯ ಮಾಹಿತಿ ಮತ್ತು ಸಂವಹನ ವಿಭಾಗಗಳು ರೋಗಿಗಳ ಸುರಕ್ಷೆಗಾಗಿ ಔಷಧಗಳ ಪ್ರತಿಕೂಲ ಪರಿಣಾಮಗಳನ್ನು ವರದಿ...

  • ಜಲಮುನಿಗಳು ಅನ್ನುವ ಒಬ್ಬ ಗುರುಗಳಿದ್ದರು. ಅವರು ನೀರಿನ ಮೇಲೆ ನಡೆದಾಡುವ, ಓಡುವ, ಕುಳಿತುಕೊಳ್ಳುವ, ನಿದ್ದೆ ಮಾಡುವ ಸಿದ್ದಿಯನ್ನು ಗಳಿಸಿಕೊಂಡಿದ್ದರು. ಅದನ್ನು...

  • ಮಂಗಳೂರು: ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರು ಚೆನ್ನೈಯ ಗೇರುಗಂಬಕ್ಕಂನಲ್ಲಿ ನಿರ್ಮಿಸುತ್ತಿರುವ ಬೃಹತ್‌ ಹನುಮಾನ್‌ ದೇವಸ್ಥಾನಕ್ಕೆ ಅಗತ್ಯವಾಗಿರುವ ಮರದ...

  • ಬಂಟ್ವಾಳ/ ಮಂಗಳೂರು: ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಅ. 24ರಂದು ದ.ಕ. ಜಿಲ್ಲಾ ಪ್ರವಾಸ ನಡೆಸಲಿದ್ದು, ಬೆಳಗ್ಗೆ 8.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ...