ವಿನಯ-ವಿದ್ವತ್ತೆಗಳ ತವನಿಧಿ ಎಚ್‌. ವಿ. ನಾಗರಾಜರಾವ್‌


Team Udayavani, Jan 12, 2020, 4:58 AM IST

6

ಎಚ್‌.ವಿ. ನಾಗರಾಜ ರಾಯರು ಸಲ್ಲಿಸಿದ ಸಾರಸ್ವತ ಸೇವೆಯನ್ನು ಕೃತಜ್ಞತೆಯಿಂದ ಕಾಣಲು ಅರ್ಥಪೂರ್ಣವಾದ ಒಂದು ಸಮ್ಮಾನವನ್ನು ಭಾಷಾಪ್ರೇಮಿಗಳೆಲ್ಲ ಅವರ ಹುಟ್ಟೂರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಸೋಮೇನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದರು. ಅವರ ಪಾಂಡಿತ್ಯ ಗಳಿಕೆ, ಜ್ಞಾನ ಗ್ರಹಿಕೆಯ ಹಾದಿ ಇಂದಿನ ಎಲ್ಲರಿಗೂ ಮಾದರಿ.

ಮೂವತ್ತು ವರ್ಷಗಳಿಗೂ ಹಿಂದಿನ ಮಾತು. ಮೈಸೂರಿನಲ್ಲಿ ನನ್ನ ಅಷ್ಟಾವಧಾನ ಆಯೋಜಿತವಾಗಿತ್ತು. ಅವಧಾನ ಕಲೆ ಆಗ ಜನರಿಗೆ ಹೊಸತು; ನನಗೂ ಅಷ್ಟೆ. ಅಂದಿನ ಪೃತ್ಛಕ ವರ್ಗದಲ್ಲಿ ಮೈಸೂರಿನ ಪ್ರಸಿದ್ಧರಾದ ಅನೇಕ ವಿದ್ವಾಂಸರಿದ್ದರು. ಇವರ ಪೈಕಿ ಅಪ್ರಸ್ತುತ ಪ್ರಸಂಗಕ್ಕೆ ನಿಯುಕ್ತರಾಗಿದ್ದ ಒಬ್ಬರನ್ನು ನನಗೆ ಆಯೋಜಕರು ಪರಿಚಯಿಸಿದರು. ಅವರು ನೋಡಲು ನನ್ನಷ್ಟೇ ಚಿಕ್ಕ ವಯಸ್ಸಿನವರಾಗಿ ತೋರಿದ್ದರು. ಅದಕ್ಕಿಂತ ಮಿಗಿಲಾಗಿ ಅವರ ನಯ-ವಿನಯಗಳ ಸೌಮ್ಯ ವರ್ತನೆ ಎದ್ದು ಕಂಡಿತ್ತು. ಅವಧಾನಕ್ಕೆ ಅಪ್ರಸ್ತುತ ಪ್ರಸಂಗವೇ ಜೀವಾಳ. ಅದನ್ನು ನಿರ್ವಹಿಸುವಾತ ಪ್ರಗಲ್ಮನಾದಷ್ಟೂ ಉತ್ತಮ. ಆದರೆ, ಇವರು ನೋಡಿದರೆ ತುಂಬ ಮೃದು ಸ್ವಭಾವದವರಂತೆ ಕಾಣುತ್ತಿದ್ದಾರೆ, ತಾವಾಗಿ ಮುನ್ನುಗ್ಗಿ ವಿದ್ವತ್ತೆ-ವಿನೋದಗಳ ಮಾತಿನ ಚಕಮಕಿಯನ್ನು ಹುಟ್ಟಿಸಬಲ್ಲರೇ? ಎಂದು ನನಗೆ ಸಂದೇಹವುಂಟಾಯಿತು. ಆದರೆ, ಅಂದಿನ ಅವಧಾನದಲ್ಲಿ ಅವರು ವಿನಯವನ್ನು ಬಿಡದೆ, ವಿನೋದವನ್ನು ಬಲಿಗೊಡದೆ, ವಿದ್ವತ್ತೆಯನ್ನು ಮೆರೆಸದೆ ಹಾಗೆಂದು ವಿದ್ಯಾವಿಲಾಸಕ್ಕೆ ಕೊರತೆ ಆಗದಂತೆ ತಮ್ಮ ಪಾತ್ರವನ್ನು ನಿರ್ವಹಿಸಿದ ಪರಿಯನ್ನು ಕಂಡಾಗ ನನಗೆ ಅವರಲ್ಲಿ ಮಿಗಿಲಾದ ಗೌರವ-ಆದರಗಳು ಜನಿಸಿದವು. ಆಗ ತಿಳಿಯಿತು ಅವರು ನನಗಿಂತ ಇಪ್ಪತ್ತೂಂದು ವರ್ಷದಷ್ಟು ಹಿರಿಯರು, ವಿದ್ವತ್ತೆಯಿಂದ ಮತ್ತೆಷ್ಟೋ ಪಟ್ಟು ದೊಡ್ಡವರು; ಇಂತಿದ್ದರೂ ಹೆಮ್ಮೆಯ ಸೋಂಕೂ ಇಲ್ಲದೆ ಸ್ನೇಹದಿಂದ ಇರಬಲ್ಲ ಸಹೃದಯರು ಎಂದು. ಅವರೇ ನಮ್ಮದೇಶ ಹೆಮ್ಮೆ ಪಡುವಂಥ ವಿದ್ವಾಂಸರಲ್ಲೊಬ್ಬರಾದ ಡಾ. ಎಚ್‌.ವಿ. ನಾಗರಾಜರಾವ್‌.

ಕೋಲಾರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಯಲ್ಲಿ ಹುಟ್ಟಿದ ರಾಯರು (10.9.1942) ಎರಡೂವರೆ ವರ್ಷದ ಬಾಲಕರಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ಮೂರು ತಿಂಗಳ ವಯಸ್ಸಿನ ತಮ್ಮ ಮತ್ತು ತಾಯಿಯೊಡನೆ ಅಜ್ಜನ ಮನೆಯಲ್ಲಿ ಬೆಳೆದರು. ಬಡತನ ಮತ್ತು ಕಷ್ಟ-ನಷ್ಟಗಳು ಅವರ ಬಾಲ್ಯ-ಕೈಶೋರಗಳನ್ನು ತುಂಬ ಕಾಡಿದವು. ಹೀಗಿದ್ದರೂ ಅವರು ಕಹಿಯಾಗದೆ ವಿದ್ಯೆಯನ್ನೊಂದು ವ್ಯಸನದಂತೆ ಹಚ್ಚಿಕೊಂಡರು. ಆದರೆ, ಹೊಟ್ಟೆಯಪಾಡಿನ ಒತ್ತಡಕ್ಕೆ ಓಗೊಟ್ಟು ಪ್ರೌಢಶಾಲೆಯ ವ್ಯಾಸಂಗದ ಬಳಿಕ ಬಟ್ಟೆಯ ಅಂಗಡಿಯೊಂದರಲ್ಲಿ ದುಡಿಯಲು ನಿಲ್ಲಬೇಕಾಯಿತು. ಆಗ ಅವರಿಗೆ ಆಸರೆಯಾದವರು ಸ್ವರ್ಗೀಯ ವಿದ್ವಾನ್‌ಎನ್‌.ವಿ. ಅನಂತರಾಮಯ್ಯನವರು. ಇವರು ನಾಗರಾಜರಾಯರ ವಿದ್ಯಾಗುರು ಗಳೂ ಹೌದು; ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನುರಿತ ವಿದ್ಯಾರ್ಥಿ ವತ್ಸಲರೂ ಹೌದು. ಇವರ ಆಸ್ಥೆಯ ಫ‌ಲವಾಗಿ ನಾಗರಾಜರಾಯರು ಮೈಸೂರಿಗೆ ಬಂದು ಅಲ್ಲಿಯ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ನಿಶ್ಕುಲ್ಕವಾದ ಅಶನ-ವಸನಗಳ

ವ್ಯವಸ್ಥೆಯ ಆಸರೆಯಿಂದ ಅಲಂಕಾರ-ವ್ಯಾಕರಣ ಶಾಸ್ತ್ರಗಳನ್ನು ಹಲವಾರು ವರ್ಷ ಓದಿ ಈ ವಿದ್ಯೆಗಳಲ್ಲಿ ಉದ್ದಂಡ ವಿದ್ವಾಂಸರಾದರು.

ರಾಯರು ಸಹಜವಾಗಿ ಬುದ್ಧಿವಂತರು. ಜೊತೆಗೆ ಒಳ್ಳೆಯ ಮಾತುಗಾರರು ಕೂಡ. ಅವರ ಜ್ಞಾಪಕ ಶಕ್ತಿಯೂ ಅದ್ಭುತ. ಹೀಗಾಗಿ, ಎಲ್ಲ ಪರೀಕ್ಷೆಗಳಲ್ಲಿಯೂ ಪ್ರಥಮರಲ್ಲಿ ಪ್ರಥಮರಾದುದಲ್ಲದೆ ರಾಷ್ಟ್ರಸ್ತರದ ಶಾಸ್ತ್ರ-ಸಾಹಿತ್ಯಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗಳಿಸಿದರು. ಪ್ರತಿಮಾಲಾ ಎಂದು ಪ್ರಾಚೀನ ಭಾರತದಲ್ಲಿ ಪ್ರಸಿದ್ಧವಾದ ಅಂತ್ಯಾಕ್ಷರೀ ಕ್ರೀಡೆಯಲ್ಲಿ ರಾಯರು ನಿಸ್ಸೀಮರು. ಅವರ ನೆನಪಿನಲ್ಲಿ ಇಂದಿಗೂ ಅಕ್ಷರಶಃ ಹತ್ತಾರು ಸಾವಿರ ಶ್ಲೋಕಗಳು ನಿಕ್ಷಿಪ್ತವಾಗಿವೆ. ಇನ್ನು ವಾಗ್ಮಿತೆಯಲ್ಲಂತೂ ಅವರು ಅಸಮಾನರು. ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಈ ಮೂರು ಭಾಷೆಗಳಲ್ಲಿ ಅವರದು ಗಂಗಾ ಪ್ರವಾಹದಂಥ ವಾಗೊœàರಣೆ. ಚಿಕ್ಕ ವಯಸ್ಸಿಗೇ ಈ ಭಾಷೆಗಳಲ್ಲಿ ಒಳ್ಳೆಯ ಬರಹವನ್ನು ಮಾಡಬಲ್ಲವರಾಗಿದ್ದರು. ವಿಶೇಷತಃ ಸಂಸ್ಕೃತದಲ್ಲಿ ಸೊಗಸಾದ ಗದ್ಯ-ಪದ್ಯಗಳನ್ನು ರಚಿಸಬಲ್ಲ ಪ್ರೌಢಿಮೆ ಅವರದು. ಈ ಎಲ್ಲ ಕಾರಣಗಳಿಂದ ಅವರು ಗುರುವರ್ಗದ ಅಭಿಮಾನಕ್ಕೆ ಪಾತ್ರರಾಗಿದ್ದರು. ಅದೊಮ್ಮೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಕೆ. ಎಂ. ಪಣಿಕ್ಕರ್‌ ಅವರು ಪಾಠಶಾಲೆಯಲ್ಲಿ ಮಾಡಿದ ಇಂಗ್ಲಿಷ್‌ ಭಾಷಣವನ್ನು ಅಲ್ಲಿದ್ದ ವಿದ್ವಾಂಸರಿಗೆ ತಿಳಿಯುವಂತೆ ಆಶುವಾಗಿ ಸಂಸ್ಕೃತದಲ್ಲಿ ಇವರು ಅನುವಾದಿಸಿದಾಗ ಅಧ್ಯಾಪಕರೆಲ್ಲ ಮೆಚ್ಚಿ ಅಭಿನಂದಿಸಿದ್ದರಂತೆ.

ನಾಗರಾಜರಾಯರ ವೈದುಷ್ಯವೆಂಥದ್ದೆಂದರೆ ಒಮ್ಮೆ ಮಹಾವಿದ್ವಾಂಸರಾದ ಮಹಾಮಹೋಪಾಧ್ಯಾಯ ಎನ್‌. ರಂಗನಾಥಶರ್ಮರು ನನಗೆ ಹೇಳಿದ್ದ ಘಟನೆ ನೆನಪಾಗುತ್ತದೆ. ವಿದ್ವತ್ಪರೀಕ್ಷೆಯ ಕೊನೆಯ ಹಂತವಾಗಿ ಮೌಖೀಕ ಪರೀಕ್ಷೆ ಇರುತ್ತದೆ. ರಾಯರಿಗೆ ಇದರಲ್ಲಿ ಪರೀಕ್ಷಕರಾಗಿ ಬಂದವರು ಶರ್ಮರು. ಸಾಮಾನ್ಯವಾಗಿ ವ್ಯಾಕರಣವೆಂದರೆ ಕಷ್ಟ. ಅದರಲ್ಲಿಯೂ ಶರ್ಮರಂಥ ಉದ್ದಂಡ ಪಂಡಿತರು ಎದುರಾದರೆ ಮತ್ತೂ ಕಷ್ಟ. ಇಂತಿದ್ದರೂ ನಾಗರಾಜರಾಯರು ಅವರಲ್ಲಿ ಧೈರ್ಯದಿಂದ ನಿವೇದಿಸಿದರಂತೆ: “”ನೀವು ದಯವಿಟ್ಟು ಅತ್ಯಂತ ಕಠಿಣವಾದ ಪ್ರಶ್ನೆಗಳನ್ನೇ ಕೇಳಿರಿ” ಎಂದು! ಇದನ್ನು ಆಲಿಸಿದೊಡನೆ ಶರ್ಮರಿಗೆ ವಿಸ್ಮಯಾನಂದಗಳು ಉಂಟಾದವಂತೆ. ಇಂಥ ವಿದ್ಯಾರ್ಥಿಗಳೂ ಇರುವ ರೆಂದುಅವರು ಊಹಿಸಿಯೇ ಇರಲಿಲ್ಲ. ಬಳಿಕ ಕೇಳಿದ ದುಷ್ಕರ ಪ್ರಶ್ನೆಗಳಿಗೆಲ್ಲ ತಕ್ಕ ಉತ್ತರಗಳೂ ಬಂದುವು. ಶರ್ಮರ ಮೆಚ್ಚುಗೆ ಮಹಾಪೂರವಾಗಿ ಹರಿಯಿತು. ಇದನ್ನು ರಂಗನಾಥಶರ್ಮರು ತಮ್ಮ ಕೊನೆಗಾಲದವರೆಗೂ ಆಗೀಗ ನೆನೆದುಕೊಳ್ಳುತ್ತಲೇ ಇದ್ದರು.

ರಾಯರ ಇಂಥ ಕೌಶಲವನ್ನು ಕಂಡೇ ಅವರ ವ್ಯಾಕರಣ ಗುರುಗಳಾದ ವಿದ್ವಾನ್‌ ಸೋ. ರಾಮಸ್ವಾಮಿ ಅಯ್ಯಂಗಾರ್‌ ಅವರು ತಮ್ಮಲ್ಲಿ ಕಲಿಯಲು ಬಂದಿದ್ದ ಎಡ್ವಿನ್‌ ಎಂ. ಜೆರೋ ಎಂಬ ವಾಷಿಂಗ್‌ಟನ್ನಿನ ವಿದ್ವಾಂಸರಿಗೆ ವ್ಯಾಕರಣಾಭ್ಯಾಸದಲ್ಲಿ ನೆರವಾಗಲು ಸೂಚಿಸಿದರು. ಹೀಗೆ ವಿದ್ಯಾರ್ಥಿಯಾಗಿದ್ದಾಗಲೇ ವಿದೇಶದ ಹಿರಿಯ ಪಂಡಿತರಿಗೂ ಅಧ್ಯಾಪಕರಾದವರು ನಾಗರಾಜರಾಯರು. ಜೆರೋ ಅವರು ರಾಯರ ವೈದುಷ್ಯಕ್ಕೆ ಅದೆಷ್ಟು ಮಾರು ಹೋದರೆಂದರೆ ಅವರನ್ನು ತಮ್ಮೊಡನೆ ವಿಮಾನದಲ್ಲಿ ನಮ್ಮ ದೇಶವನ್ನೆಲ್ಲ ಸುತ್ತಿಸಿದ್ದಲ್ಲದೆ, ಅಮೆರಿಕೆಗೆ ಕರೆದೊಯ್ದು ಮನೆಯಲ್ಲಿಟ್ಟುಕೊಂಡು ಅವರಿಂದ ಪಾಠ ಕಲಿತದ್ದಲ್ಲದೆ, ತಮ್ಮ ವಿಶ್ವವಿದ್ಯಾಲಯದಲ್ಲಿ ಅವರು ಎಂ. ಎ. ಪದವಿ ಯನ್ನು ಪಡೆಯುವಂತೆಯೂ ಮಾಡಿದರು. ಹೀಗೆ ವಿದೇಶದ ಸಂಪರ್ಕ ರಾಯರಿಗೆ ಮೊದಲಾದದ್ದು ಮುಂದೆ ಹಲವಾರು ಬಾರಿ ಅಮೆರಿಕ, ಜೆರೂಸಲೇಂ, ಇಂಡೋನೆಷಿಯಾ ಮುಂತಾದ ದೇಶಗಳಿಗೆ ಹೋಗಿ ಅಲ್ಲಿ ಸಂಸ್ಕೃತ ಭಾಷಾ-ಸಾಹಿತ್ಯಗಳನ್ನು ಬೋಧಿಸುವಂತೆ ಮಾಡಿದೆ. ಲಬ್ಧ ಪ್ರತಿಷ್ಠರಾದ ಶೆಲ್ಡನ್‌ ಪೊಲ್ಲಾಕ್‌, ಡೇವಿಡ್‌ ಶುಲ್‌ವುನ್‌, ಯಿಗಾಲ್‌ ಬ್ರಾನರ್‌ ಮುಂತಾದವರಿಗೆ ಇವರು ಗುರುಸ್ಥಾನದಲ್ಲಿ ಇದ್ದಾರೆಂಬುದು ನಮಗೆಲ್ಲ ಹೆಮ್ಮೆಯ ಮಾತು.

ರಾಯರು ವಿದೇಶದಲ್ಲಿ ಮಾನ್ಯರಾಗಿ ಸ್ವದೇಶದಲ್ಲಿಯೂ ಧನ್ಯರಾಗಿದ್ದಾರೆ. ಆದರೆ ಇವರ ವೃತ್ತಿ ಜೀವನದಲ್ಲಿ ನಮ್ಮದೇಶವು ಅನುದಾರವಾಗಿ ನಡೆದುಕೊಂಡಿತೆಂಬುದು ಎಂಥ ವಿದ್ಯಾ ಪಕ್ಷಪಾತಿಗೂ ರೋಷ-ವಿಷಾದಗಳನ್ನು ತರುತ್ತದೆ. ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಎಂ. ಎ. ಪರೀಕ್ಷೆಯಲ್ಲಿ ಹಲವು ಚಿನ್ನದ ಪದಕಗಳೊಡನೆ ಪ್ರಥಮ ಸ್ಥಾನವನ್ನು ಗಳಿಸಿದರೂ ಅವರಿಗೆ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನಾವಕಾಶ ಸಿಗಲಿಲ್ಲ. ಬೋಧನ-ಶೊಧನಗಳಿಗೇ ಹುಟ್ಟಿದವರೆಂಬಂತಿದ್ದ ಈ ಮಹಾಮನೀಷಿಗೆ ಮಾಡಿದ ಅನ್ಯಾಯ ಸರಸ್ವತಿಗೇ ಆದ ವಂಚನೆ.

ವಿಧಿ ವೈಕಟ್ಯವೇನೆಂದರೆ, ಆಗಿನ ವಿಶ್ವವಿದ್ಯಾಲಯದ ಪ್ರಾಚಾರ್ಯರು, ಓರಿಯೆಂಟಲ್‌ ಲೈಬ್ರರಿಯ ನಿರ್ದೇಶಕರು ಹೆಜ್ಜೆಹೆಜ್ಜೆಗೂ ಅವಲಂಬಿಸುತ್ತಿದ್ದುದು ಆ ಸಂಸ್ಥೆಯ ಸಂಶೋಧಕ ಸಹಾಯಕರ ಸ್ಥಾನದಲ್ಲಿದ್ದ ರಾಯರನ್ನು, ಅವರ ತ್ರಿಭಾಷಾ ಪಾಂಡಿತ್ಯವನ್ನು! ಆದರೆ ಇದಾವುದಕ್ಕೂ ಬೇಸರಿಸದೆ ತಮ್ಮ ಬಳಿ ಬಂದಎಲ್ಲರಿಗೂ ನಿರ್ವಂಚನೆಯಿಂದ, ಪ್ರೀತಿ – ಗೌರವಗಳೊಡನೆ ನೆರವಿತ್ತವರು, ಮಾರ್ಗದರ್ಶನ ಮಾಡಿದವರು ನಾಗರಾಜರಾಯರು.

ಹಸ್ತಪ್ರತಿಗಳಲ್ಲಿದ್ದ ಹಲವಾರು ಸಂಸ್ಕೃತಗ್ರಂಥಗಳನ್ನು ಸಂಪಾದಿಸಿಕೊಟ್ಟದ್ದಲ್ಲದೆ (ಹೃದಯಾಮೃತ, ಕಾಮವಿಲಾಸಭಾಣ, ಶಿವನಾಮಕಲ್ಪಲತಾಲವಾಲ, ನ್ಯಾಯಶತಕ, ಜಗನ್ನಾಥವಿಜಯಇತ್ಯಾದಿ) ಮತ್ತೆಷ್ಟೋ ಗ್ರಂಥಗಳ ಸಂಪಾದನೆ – ಅನುವಾದಗಳಲ್ಲಿ (ಶ್ರೀತತ್ವನಿಧಿಯ ನಾಲ್ಕು ಭಾಗಗಳು)ಇವರು ದುಡಿದಿದ್ದಾರೆ. ಹಲವಾರು ಸಂಶೋಧನ ಪ್ರಕಲ್ಪಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ ಕೂಡ ಇವರ ದುಡಿಮೆ ಗಮನಾರ್ಹ. ಪಾಠ್ಯ ಪುಸ್ತಕಗಳ ರಚನೆಯಲ್ಲಿಯೂ ಇವರ ಯೋಗದಾನವಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಜೆ. ಎಸ್‌. ಎಸ್‌. ಸಂಸ್ಕೃತ ಸಂಶೋಧನ ಕೇಂದ್ರ, ಪೂರ್ಣಪ್ರಜ್ಞ ಸಂಶೋಧನ ಮಂದಿರ ಮುಂತಾದ ಅನೇಕ ಸಂಸ್ಥೆಗಳ ಪ್ರಕಲ್ಪಗಳಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಸಂಸ್ಕೃತದ ಏಕೈಕ ದಿನಪತ್ರಿಕೆ ಸುಧರ್ಮಾಕ್ಕೆಅವರು ಸಂಪಾದಕ ಮಂಡಲಿಯಲ್ಲಿದ್ದು ಹಲವು ದಶಕಗಳಿಂದ ಸಲ್ಲಿಸುತ್ತಿರುವ ಸೇವೆ ನಿರುಪಮ.

ಇದಕ್ಕಾಗಿ ಅವರು ನೂರಾರು ಲೇಖನಗಳನ್ನು ಬರೆದಿದ್ದಾರೆ, ಅನುದಿನ ಸುದ್ದಿಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ, ಧಾರಾವಾಹಿಯ ರೂಪದಲ್ಲಿ ಅನೇಕ ವ್ಯಾಖ್ಯಾನಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಬರೆದೂ ಕೊಟ್ಟಿದ್ದಾರೆ (ಅನ್ಯಾಪದೇಶ ಶತಕ, ಆನಂದ ಸಾಗರಸ್ತವ, ಸುಭಾಷಿತ ಕೌಸ್ತುಭ, ಭಲ್ಲಟ ಶತಕ, ಲಕ್ಷ್ಮೀಲಹರಿ ಇತ್ಯಾದಿ).

ಸಂಶೋಧನ ಲೇಖನಗಳು, ವ್ಯಾಖ್ಯಾನಗಳು ಮುಂತಾದ ಸಂಸ್ಕೃತ ಕೃತಿಗಳನ್ನಲ್ಲದೆ ಕನ್ನಡದಿಂದ ಸಂಸ್ಕೃತಕ್ಕೆ ಹಲವು ಕಥೆ – ಕಾದಂಬರಿಗಳನ್ನೂ ಭಾಷಾಂತರಿಸಿ ಕೊಟ್ಟಿದ್ದಾರೆ (ಅಸ್ಮಾಕಂಗೃಹಸ್ಯ ದೀಪಃ, ಚಾರುವಾಸಂತೀಯಮ್‌, ಸಾರ್ಥಃ ಮುಂತಾದುವು). ಪ್ರೇಮಚಂದ್ರರ ಹಿಂದಿಯ ಸಣ್ಣ ಕತೆಗಳನ್ನು ವಿಪಂಚಿಕಾ ಎಂಬ ಹೆಸರಿನಲ್ಲಿ ಸಂಸ್ಕೃತೀಕರಿಸಿದ್ದಾರೆ. ಅಂತೆಯೇ ಶಿವಶರಣರ ಆಯ್ದ ಐದು ಸಾವಿರ ವಚನಗಳ ಸಂಸ್ಕೃತಾನುವಾದಕ್ಕೆ ಸಂಪಾದಕರಾಗಿ ದುಡಿದಿರುವುದಲ್ಲದೆ ಸಾವಿರಾರು ವಚನಗಳನ್ನು ಭಾಷಾಂತರಿಸಿಯೂ ಇದ್ದಾರೆ.

ಡಾ|| ಎಸ್‌. ಎಲ್‌. ಭೈರಪ್ಪನವರ ಸಾರ್ಥ ಕಾದಂಬರಿಯ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯಅಕಾಡೆಮಿಯ ಪ್ರಶಸ್ತಿ ಕೂಡ ಇವರನ್ನು ಅರಸಿ ಬಂದಿದೆ. ಸ್ವತಂತ್ರವಾಗಿ ಕಥಾ ಲಹರಿ ಮತ್ತು ಕಥಾಮಂಜರಿಗಳೆಂಬ ಕಥಾಸಂಕಲನಗಳನ್ನೂ ಮಾಲವಿಕಾ ಮತ್ತು ಋಣ ವಿಮುಕ್ತಿಃ ಎಂಬ ಕಾದಂಬರಿಗಳನ್ನೂ ದಾಂಪತ್ಯ ಕಲಹ‌ಮ್‌, ಸಮುದ್ಯತಾ, ರೂಪಕ ಚತುಷ್ಟಯೀ (ಸಂಕಲನ) ಮತ್ತು ವಿದುಲಾಪುತ್ರೀಯಮ್‌ ಎಂಬ ರೂಪಕಗಳನ್ನೂ ಸಂಸ್ಕೃತದಲ್ಲಿ ಹೊರ ತಂದಿದ್ದಾರೆ. ಶಾರದಾ ದರ್ಶನಮ್‌ ಎಂಬ ಪ್ರವಾಸ ಕಥನವೂ ಇವರದಾಗಿದೆ. ಇವಲ್ಲದೆ, ಮಮ ವಿದೇಶ ಯಾತ್ರಾ ಎಂಬ ಹೆಸರಿನಲ್ಲಿ ಹತ್ತಾರು ಲೇಖನಗಳು ಕೂಡ ಪ್ರವಾಸ ಕಥನದ ರೂಪದಲ್ಲಿ ಬಂದಿವೆ.

ಪದ್ಯ ರೂಪದಲ್ಲಿ ಕೂಡ ನಾಗರಾಜರಾಯರು ಸಾಕಷ್ಟು ಬರೆವಣಿಗೆ ಮಾಡಿದ್ದಾರೆ. ಇವುಗಳ ಪೈಕಿ ಸೂಕ್ತಿ ದ್ವಿಶತೀ, ನಾಗರಾಜ ಶತಕಮ್‌, ದುರ್ಜನ ಶತಕಮ್‌, ಸಜ್ಜನ ಶತಕಮ್‌, ಕಲಿ ವಿಮರ್ಶನ ಶತಕಮ್‌, ರಾಮಚಂದ್ರ ಶತಕಮ್‌ ಮೊದಲಾದುವು ಗಮನಾರ್ಹ. ಇವುಗಳಲ್ಲಿ ಕೆಲವಕ್ಕೆ ತಾವೇ ಇಂಗ್ಲಿಷ್‌-ಕನ್ನಡ ಅನುವಾದಗಳನ್ನೂ ನೀಡಿದ್ದಾರೆ.

ಶ್ರೀ ತತ್ವ ನಿಧಿ ಮತ್ತು ರಾಮಾಯಣದ ಮಹೇಶ್ವರ ತೀರ್ಥೀಯ ವ್ಯಾಖ್ಯಾನಗಳಂಥ ಸಂಸ್ಕೃತ ಗ್ರಂಥಗಳನ್ನು ಇಂಗ್ಲಿಷಿನಲ್ಲಿ ಅನುವಾದಿಸಿ ಕೊಟ್ಟ ರಾಯರು ಭಲ್ಲಟ ಶತಕ, ಅನ್ಯಾಪದೇಶ ಶತಕ ಮತ್ತು ಆನಂದ ಸಾಗರಸ್ತವಗಳನ್ನೂ ಇಂಗ್ಲಿಷಿಗೆ ತಂದಿದ್ದಾರೆ. ಇಷ್ಟೆಲ್ಲ ಸಂಸ್ಕೃತ – ಇಂಗ್ಲಿಷ್‌ ಭಾಷೆಗಳಲ್ಲಿ ಕೆಲಸ ಮಾಡಿದರೂ ಅವರ ಕನ್ನಡದ ಒಲವು ಇವೆಲ್ಲಕ್ಕಿಂತ ಮಿಗಿಲೆನ್ನಬೇಕು.

ನೂರಾರು ಜನಪ್ರಿಯವೂ ವಿದ್ವಜ್ಜನ ಪ್ರಿಯವೂ ಆದ ಲೇಖನಗಳನ್ನು ಬರೆದು ಕಾಲಕಾಲಕ್ಕೆ ಪ್ರಕಟಿಸಿರುವುದಲ್ಲದೆ ವಿವಿಧ ಗ್ರಂಥಗಳ ಪರಿಚಯ-ವಿಮರ್ಶೆಗಳನ್ನೂ ಮಾಡಿಕೊಟ್ಟು ಜಿಜ್ಞಾಸುಗಳಿಗೆ ಉಪಕರಿಸಿದ್ದಾರೆ. ಕಾವ್ಯ-ಶಾಸ್ತ್ರಗಳಿಗೆ ಸಂಬಂಧಿಸಿದ ಅನೇಕ ಕೃತಿಗಳನ್ನು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ವರದರಾಜಸ್ತವ, ನೀತಿದ್ವಿಷಷ್ಟಿಕಾ, ಕಥಾಸರಿತ್ಸಾಗರ (ಮೂರು ಲಂಬಕಗಳು), ಬಸವಾನಂದಲಹರೀ, ಅಲಂಕಾರಸರ್ವಸ್ವ, ವ್ಯಕ್ತಿವಿವೇಕ ಮೊದಲಾದುವು ಗಣನೀಯ. ಇಂಗ್ಲಿಷಿನಿಂದ ಕೂಡ ಕನ್ನಡಕ್ಕೆಹಲವು ಪುಸ್ತಕಗಳನ್ನು ತಂದಿದ್ದಾರೆ.

ಭಾರತ: ಧರ್ಮಗಳ ಮೈತ್ರಿಯ ನಾಡು, ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ, ಭಾರತದ ಮೂಲಭೂತ ಏಕತೆ ಇತ್ಯಾದಿಗಳು ಉಲ್ಲೇಖಾರ್ಹ. ಭಾರತೀಯ ವಿದ್ಯಾಭವನ ಪ್ರಕಟಿಸಿರುವ ಇಪ್ಪತ್ತೈದು ಸಂಪುಟಗಳ ಭಾರತದ ಇತಿಹಾಸವನ್ನು ಕುರಿತ ಗ್ರಂಥಮಾಲೆಗೆ ಎಷ್ಟೋ ಅಧ್ಯಾಯಗಳನ್ನು ಕನ್ನಡಿಸಿದ್ದಾರೆ. ಇಂದಿಗೂ ನಿರಂತರವಾಗಿ ಭಾಷಣ ಮತ್ತು ಲೇಖನಗಳ ಕಾಯಕದಲ್ಲಿ ರಾಯರು ತೊಡಗಿದ್ದಾರೆ.

ಇಷ್ಟೆಲ್ಲ ಸಾಹಿತ್ಯ ಸೇವೆಗೆ ಸಮಾಜ ಸ್ಪಂದಿಸಿರುವುದು ಮುದಾವಹ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಲ್ಲದೆ ರಾಷ್ಟ್ರಪತಿ ಪುರಸ್ಕಾರವೂ ಇವರಿಗೆ ಸಂದಿದೆ. ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಸಂದರ್ಶನ ಪ್ರಾಧ್ಯಾಪಕತ್ವದ ಗೌರವವೂ ಸಂದಿದೆಯಲ್ಲದೆ ಇದೇ ವಿಶ್ವವಿದ್ಯಾಲಯದ ಗ್ರಂಥಪುರಸ್ಕಾರವೂ ದಕ್ಕಿದೆ. ವ್ಯಾಸ ಮಹರ್ಷಿ ಪ್ರಶಸ್ತಿ, ಕಾವ್ಯಶಾಸ್ತ್ರ ವಿಚಕ್ಷಣ ಪುರಸ್ಕಾರ, ಶಾಸ್ತ್ರ ವಿದ್ಯಾನಿಧಿ ಪ್ರಶಸ್ತಿ ಮುಂತಾದುವು ಇವರನ್ನು ಅಲಂಕರಿಸಿವೆ.

ಸಾಂಪ್ರದಾಯಿಕ ವಿದ್ವತ್ತೆಯ ಹಿನ್ನೆಲೆಯಿಂದ ಬಂದಿದ್ದರೂ ನಾಗರಾಜ ರಾಯರದು ಆಧುನಿಕವಾದ ಮನಸ್ಸು. ಅವರ ಅಂತರಂಗ ಆಗ್ರಹಮುಕ್ತವಾದದ್ದು. ಮಾತು-ಕತೆಗಳಲ್ಲಿ ಅಕೃತಕವಾದ ಸ್ನೇಹ-ಸೌಜನ್ಯಗಳು ತುಂಬಿರುತ್ತವೆ. ಅವರ ಹಾಸ್ಯಪ್ರಜ್ಞೆಯೂ ಸ್ಮರಣೀಯ. ಸಂಸ್ಕೃತ ಶ್ಲೋಕಗಳನ್ನು ಶ್ರಾವ್ಯವಾಗಿ ಪಠಿಸುತ್ತಜನ ರಂಜಕವಾಗುವಂತೆ ಉಪನ್ಯಾಸಗಳನ್ನು ಮಾಡುವುದರಲ್ಲಿ ಅವರು ಸಿದ್ಧಹಸ್ತರು.

ಈ ಕಾರಣದಿಂದಲೇ ಆಕಾಶವಾಣಿ, ದೂರದರ್ಶನ, ವಿಚಾರಗೋಷ್ಠಿ, ವಾಕ್ಯಾರ್ಥಮಂಡಲಿ ಮುಂತಾದ ಅಸಂಖ್ಯ ವೇದಿಕೆಗಳಲ್ಲಿ ಇವರಿಗೆ ಮುಕ್ತ ಸ್ವಾಗತವುಂಟು. ಕೇವಲ ಸಾಹಿತ್ಯ ಮತ್ತು ವ್ಯಾಕರಣ ಶಾಸ್ತ್ರಗಳನ್ನಷ್ಟೇ ಅಲ್ಲದೆ ವೇದಾಂತವೂ ಸೇರಿದಂತೆ ಇನ್ನೆಷ್ಟೂ ಶಾಸ್ತ್ರಗಳ ಸ್ವಾರಸ್ಯಗಳನ್ನೂ ಅರಿತವರಾಗಿ ಅವುಗಳನ್ನೆಲ್ಲ ಸಮಾಜಕ್ಕೆ ಪರಿಚಯಿಸುವಲ್ಲಿಅವಿರತೋತ್ಸಾಹವನ್ನುತೋರುತ್ತಿದ್ದಾರೆ. ಒಟ್ಟಿನಲ್ಲಿ ನಾಗರಾಜರಾಯರನ್ನು ನೆನದಾಗಲೆಲ್ಲ ಸುಸಂಸ್ಕೃತನಾದ ಒಬ್ಬ ಪಂಡಿತ ಪ್ರವರ ನಮ್ಮೆದುರು ನಿಲ್ಲುತ್ತಾನೆ.

ಸುಮಾರು ಆರು ದಶಕಗಳಿಂದ ಸಾಗಿ ಬಂದಿರುವ ಅವರ ಸಾರಸ್ವತ ಸೇವೆಯನ್ನು ಕೃತಜ್ಞತೆಯಿಂದ ಕಾಣಲು ಅರ್ಥಪೂರ್ಣವಾದ ಒಂದು ಸಮ್ಮಾನವನ್ನು ಭಾಷಾ ಪ್ರೇಮಿಗಳೆಲ್ಲ ಅವರ ಹುಟ್ಟೂರಿನಲ್ಲಿ ಹಮ್ಮಿಕೊಂಡಿದ್ದರು. ಇದರ ವಿಸ್ತರಣವನ್ನು ಬೆಂಗಳುರಿನಲ್ಲಿ ಕೂಡ ನಡಸಲಿದ್ದಾರೆ. ಇದಕ್ಕೆ ರಾಯರಿಗಿಂತ ಅರ್ಹರು ಮತ್ತಾರು?

— ಶತಾವಧಾನಿ ಆರ್‌. ಗಣೇಶ್‌

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.