ಮಹಾನಗರದ ಪುಟ್ಟ ಗಲ್ಲಿಯಲ್ಲಿ ಸಾಂಸ್ಕೃತಿಕ ಅನುಸಂಧಾನ

Team Udayavani, Feb 3, 2019, 12:30 AM IST

ಜಯಂತ ಕಾಯ್ಕಿಣಿಯವರ ನೋ ಪ್ರಸೆಂಟ್ಸ್‌ ಪ್ಲೀಸ್‌ ಕಥಾಸಂಕಲನ ದಕ್ಷಿಣ ಏಷ್ಯಾ ಸಾಹಿತ್ಯ ವಲಯಕ್ಕೆ ಮೀಸಲಾದ ಅಂತಾರಾಷ್ಟ್ರೀಯ ಪ್ರತಿಷ್ಠೆಯ ಡಿಎಸ್‌ಸಿ ಪ್ರಶಸ್ತಿಗೆ ಭಾಜನವಾಗಿದೆ. ಅದನ್ನು ಅನುವಾದಿಸಿದ ತೇಜಸ್ವಿನಿ ನಿರಂಜನ ಅವರ ಹಿನ್ನುಡಿಯ ಆಯ್ದ ಭಾಗ ಇಲ್ಲಿದೆ…

ಈ ಕಥೆಗಳ ಅನುವಾದಕ್ಕೆ ಕೈಯಿಕ್ಕು ವುದೆಂದರೆ ತೀರ ಸಾಮಾನ್ಯನೊಬ್ಬನ ಬದುಕಿನಲ್ಲಿ ಇರಬಹುದಾದ ದೈನಂದಿನದ ಸಂಭ್ರಮದೊಂದಿಗೆ ನಾವೂ ಒಂದಾಗುವುದು. ಜಯಂತ್‌ ಇದರಲ್ಲಿ ಎತ್ತಿದ ಕೈ. ಇರಬಹುದಾದ ದೈನಂದಿನದ ಸಂಭ್ರಮ ಎಂದೆ, ಆದರೆ ನಾನದನ್ನು ಬೇರಾವುದೇ ಅರ್ಥದಲ್ಲಿ ಕಾಣುತ್ತಿಲ್ಲ. ಅದೊಂದು ನಿರೂಪಣೆಯ ತಂತ್ರಗಾರಿಕೆ ಎಂದಷ್ಟೇ ನೋಡುತ್ತೇನೆ. ಇಲ್ಲಿನ ಯಾವತ್ತೂ ಕತೆಗಳಿಗೆ ಈ ಮಾತು ಸಲ್ಲುತ್ತದೆ. ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯನಾದ ವ್ಯಕ್ತಿ ಅಥವಾ ಸಂದರ್ಭ, ಕೆಲವೊಮ್ಮೆ ಎರಡೂ, ಇದ್ದಕ್ಕಿದ್ದಂತೆ ಈ ನಗರದೊಂದಿಗೆ ಕನೆಕ್ಟ್ ಆಗುವುದು, ವ್ಯಕ್ತಿ ಅಥವಾ ಸಂದರ್ಭದ ಆರ್ಡಿನರಿ ಎನ್ನುವ ಗುಣವೇ ಅದರ ಮಾಯಕ ಆಚಕರ್ಷಣೆಯಾಗಿ ಬದಲಾಗುವುದು ಇಲ್ಲಿನ ವಿಸ್ಮಯ.

ನಿರೂಪಣೆಯಲ್ಲಿ ಈ ಸೀದಾ ಸಾದಾ ಆರ್ಡಿನರಿ ಗುಣವನ್ನು ಕಾಪಾಡಿಕೊಂಡೇ, ಇನ್ನೂ ಅದೊಂದರಿಂದಲೇ ನಿಭಾಯಿಸುವುದು ಸಾಧ್ಯವೇ ಇಲ್ಲ ಎನ್ನುವವರೆಗೂ ಅದನ್ನು ಚಲಾವಣೆಯಲ್ಲಿಟ್ಟು, ತದನಂತರ ಅನುವಾದವೇ ಓದುಗನನ್ನು ಪೊರೆಯಬೇಕೆನ್ನುವಂತೆ ಕೊಂಡೊಯ್ಯುವುದು ನನಗೊಂದು ಸವಾಲೇ ಆಗಿತ್ತು. ಎಲ್ಲಿ ರೂಪಕಗಳ ಮಾಯಕಜಾಲ ಕಥಾನಕದ ಒಡಲೊಳಗೆ ತೂರಿಕೊಂಡು ತನ್ನದೇ ಆದ ಮಾಂತ್ರಿಕ ಲೋಕವೊಂದನ್ನು ಕಟ್ಟುವುದಕ್ಕೆ ಸುರುವಿಟ್ಟುಕೊಳ್ಳುತ್ತದೋ ಆಗ ಬೇರೆ ಬೇರೆ ಪಾತ್ರಗಳ ಸಾಮಾನ್ಯತನವೇ ಅಪೂರ್ವ ಹೊಳಪಿನಿಂದ ಬೆಳಗುವುದು ಕಾಣುತ್ತೇವೆ. ಇದನ್ನು ನೀವು ಅನುವಾದದಲ್ಲಿ ತರಬೇಕಾದರೆ ಸೂಕ್ತವಾದ ಪದಗಳಿಗಾಗಿ ತಡಕಾಡಬೇಕಾಗುತ್ತದೆ.

ನಾನು ವೃತ್ತಿಪರ ಅನುವಾದಕಿಯೇನಲ್ಲ ಮತ್ತು ನಾನು ಹಾಗೆ ಅನುವಾದವನ್ನು ಕೈಗೆತ್ತಿಕೊಳ್ಳುವ ಪೈಕಿಯಲ್ಲ. ಯಾವುದು ನನಗೆ ನನ್ನದೇ ಎಂಬಂತೆ ದಕ್ಕುವುದೋ ಮತ್ತು ಯಾವುದರಲ್ಲಿ ನನಗೆ ನನ್ನನ್ನೇ ಕಂಡುಕೊಳ್ಳಲು ಸಾಧ್ಯವಾಗುತ್ತೋ ಅಂಥದ್ದನ್ನಷ್ಟೇ ನಾನು ಅನುವಾದಿಸಿಯೇನು. ಜಯಂತರ ಕತೆಗಳೊಂದಿಗೆ ನನಗೆ ಸದಾ ಅಂಥ ಒಂದು ತಾದಾತ್ಮé ಸಾಧ್ಯವಾಗಿತ್ತು. ಆ ಕತೆಗಳ ತಾಂತ್ರಿಕ ನೈಪುಣ್ಯಕ್ಕಾಗಿಯೂ, ಮುಂಬೈಯೊಂದಿಗೆ ಆ ಕತೆಗಳಿಗಿರುವ ನಂಟಿನಿಂದಾಗಿಯೂ ಅವುಗಳಲ್ಲಿ ನಾನು ನನ್ನನ್ನೇ ಕಾಣುತ್ತಿ¨ªೆ. 1970ರಷ್ಟು ಹಿಂದೆಯೇ ಅವರ ಕವಿತೆಗಳ ಅನುವಾದಕ್ಕೆ ತೊಡಗಿದಾಗಿನಿಂದಲೂ ನನಗೆ ಈ ಬಗೆಯ ತಾದಾತ್ಮé, ಅಂದರೆ ಸ್ವತಃ ಕವಿತೆ ಬರೆಯುವಾಗ ಸಾಧ್ಯವಾಗುವಂಥ ಒಂದು ತನ್ಮಯತೆ, ನನ್ನ ಅನುವಾದಕ್ಕೂ ಸಿದ್ಧಿಸಿದ್ದು ಗಮನಕ್ಕೆ ಬಂದಿತ್ತು. ಜಯಂತ್‌ ಮೂಲತಃ ಕವಿ, ಗದ್ಯಕ್ಕೆ ಹೊರಳಿದ ಕವಿ. ನುಡಿಕಟ್ಟು ಮತ್ತು ಆಕೃತಿ ಎರಡರಲ್ಲೂ ಆಧುನಿಕ ಕನ್ನಡ ಕಾವ್ಯ ತನ್ನದಾಗಿಸಿಕೊಂಡ ಗುಣವೇ ಅವರ ಕಥನದಲ್ಲೂ ಉಳಿದು ಬಂದಿರುವುದನ್ನು ನಾವು ಕಾಣಬಹುದು. ನನ್ನ ಅನುವಾದ ಇದನ್ನು ಕಾಪಿಟ್ಟುಕೊಂಡು ಬಂದಿದೆ ಎಂದು ಭಾವಿಸುತ್ತೇನೆ.  ಈ ಗದ್ಯಾನುವಾದದ ಉದ್ದಕ್ಕೂ ಕವಿತೆಗಳ ಅನುವಾದದ ಕಾಲದ ಒಂದು ಅನುಸಂಧಾನವೇನಿತ್ತು, ಅದು ಹೊಸ ಅನುವಾದದೊಂದಿಗೆ ನಿತ್ಯಸಂವಾದದಲ್ಲಿದ್ದು ಅದನ್ನು ಪೊರೆದಿದೆ.

ನಾವಿಬ್ಬರೂ ಸೇರಿಯೇ ಕತೆಗಳನ್ನು ಆಯ್ದೆವು, ಆದರೆ ನಾನು ನನ್ನ ಇಷ್ಟದ ಕತೆಗಳನ್ನು ಈ ಪಟ್ಟಿಗೆ ತರಲು ಯತ್ನಿಸುತ್ತಲೇ ಇ¨ªೆ. ಕೆಲವು ಅನುವಾದಿತ ಪ್ರಕಟಿತ ಕತೆಗಳನ್ನು ಕೂಡ ಮರು-ಅನುವಾದ ಮಾಡುವುದರ ಬಗ್ಗೆ ನಮ್ಮಲ್ಲಿ ಒಂದು ಚರ್ಚೆಯೂ ನಡೆಯಿತು. ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ ಮತ್ತು ಮೋಗ್ರಿಯ ಸತ್ಸಂಗ ಆ ಕತೆಗಳು. ಈ ಮೂರು ಕತೆಗಳಿಲ್ಲದ ಜಯಂತರ ಯಾವುದೇ ಆಯ್ದ ಕಥಾಸಂಕಲನವೊಂದನ್ನು ಕಲ್ಪಿಸುವುದು ಕೂಡ ಸಾಧ್ಯವಿಲ್ಲ. ಹಾಗಾಗಿ ಈ ಸಂಕಲನದ ಭಾಷೆ ಮತ್ತು ಶೈಲಿಯೊಂದಿಗೆ ಹೊಂದುವಂತೆ ಈ ಮೂರು ಕತೆಗಳನ್ನು ಕೂಡ ಮತ್ತೂಮ್ಮೆ ಅನುವಾದಿಸುವ ಸ್ವಾತಂತ್ರ್ಯವನ್ನು ನಾನು ತೆಗೆದುಕೊಂಡಿದ್ದೇನೆ. ಈ ಅನುವಾದವನ್ನು ಬೇರೆ ಬೇರೆ ಕಡೆಗಳಲ್ಲಿ ಕೂತು ಮಾಡಿದ್ದೇನೆ, ಹಲವನ್ನು ಮುಂಬಯಿಯÇÉೇ ಇದ್ದು ಮಾಡಿದ್ದೇನೆ. ಆಗಾಗ ಮುಂಬಯಿಗೆ ಹೋಗಿ ಬರುತ್ತ ಅಲ್ಲಿದ್ದು ಅನುವಾದ ಮಾಡುವುದರಲ್ಲಿ ಏನೋ ಒಂದು ಥ್ರಿಲ್‌ ಇತ್ತು. ಅಲ್ಲಿ ಲೋಕಲ್‌ ಟ್ರೈನಿನಲ್ಲಿ ಪ್ರಯಾಣಿಸುತ್ತ ಇದ್ದಕ್ಕಿದ್ದಂತೆ ಏನೋ ಹೊಳೆದು ಜಯಂತರಿಗೊಂದು ಎಸ್ಸೆಮ್ಮೆಸ್‌ ಮಾಡಿದರೆ ತಕ್ಷಣವೇ ಅವರಿಂದ ಪ್ರತ್ಯುತ್ತರ ಬರುತ್ತಿತ್ತು. ಫ್ಲೋರಾ ಫೌಂಟೇನಿನ ಬಳಿಯೋ, ಗೇಟ್‌ವೇ ಬಳಿಯೋ, ಒಪೆರಾಹೌಸ್‌ ಹತ್ತಿರವೋ, ತೀರ ಒಳಗೊಳಗಿನ ಗಲ್ಲಿಯೊಳಗೋ ಸುತ್ತುತ್ತಿದ್ದಾಗ ಜಯಂತರ ಪಾತ್ರಗಳ ಕಣ್ಣಿನಿಂದ ಅವೆಲ್ಲವನ್ನು ನೋಡುವಂತಾಗುತ್ತಿತ್ತು. 

ಸ್ವತಃ ಮುಂಬಯಿಗೆ ಹೊರಗಿನವಳಾಗಿದ್ದು ಜಯಂತರು ಹೊಂದಿರುವ ಅದೇ ಪ್ರೀತಿ ಮತ್ತು ಕೌತುಕ ಬರೆದ ದೃಷ್ಟಿಯಿಂದಲೇ ಅದನ್ನು ಕಾಣುವುದು ನನಗೂ ಸಾಧ್ಯವಾಗಿರಬೇಕು. ನಿರಂತರವಾಗಿ ಬಂದು ಹೋಗಿ ಮಾಡುವ ಈ ಮಂದಿ ಕೂಡ ವಲಸೆ ಹಕ್ಕಿಗಳೇ. ಈ ಕತೆಗಳೊಂದಿಗೆ ನನಗಿರುವ ಒಂದು ನಂಟಿಗೆ ಈ ಎಳೆಯೂ ಇದೆ. ಇಲ್ಲಿ ಬರುವ ಪಾತ್ರಗಳು ಕೂಡ ಮುಂಬಯಿ ಎಂಬ ಮಾಯಾನಗರಿಯಲ್ಲಿ ಅದು ಹೇಗೋ ಬಂದು ಸೇರಿಕೊಂಡ ಬಹುತೇಕ ಔಟ್‌ವರ್ಡ್‌ ಪಾತ್ರಗಳೇ. ಮಹಾನಗರಕ್ಕೆ ಇದು ನನ್ನ ಹುಟ್ಟೂರು ಎನ್ನುವ ಮಕ್ಕಳಿಲ್ಲ. ಆದರೂ ಅದು ತನ್ನ ಮಡಿಲಿಗೆ ಬಂದವರನ್ನೆಲ್ಲ ತಾಯಿಯಂತೆ ಸಂತೈಸುತ್ತದೆ! ಮೂಲ ಕೃತಿಕಾರ ಮತ್ತು ಅನುವಾದಕಿಯ ನಡುವಿನ ಒಂದು ಹೊರಗಿನವರಾಗಿದ್ದೂ ಒಳಗಿನವರಾದ, ಒಳಗಿದ್ದೂ ಹೊರಗಿನವರಾಗಿ ಉಳಿದ ಸಂಬಂಧದ ಬಂಧ ಈ ಅನುವಾದದ ಅನುಸಂಧಾನಕ್ಕೂ ನೆರವಾಗಿದೆ.

ತೇಜಸ್ವಿನಿ ನಿರಂಜನ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕೆಲವೇ ದಿನಗಳು! ಮಳೆಯ ದೇವತೆ ಇಂದ್ರ  ಮುನಿಸಿಕೊಂಡಿದ್ದಾನೆ. ನದಿಗಳು ಉನ್ಮಾದದಿಂದ ದಡ ಮೀರಿ ಹರಿದು ಜನರನ್ನು ಕಂಗೆಡಿಸಿವೆ....

  • ಮಲಗಿದ ಮಂಚದ ಮೇಲಿನಿಂದ ಕೆಳಗೆ ಎಳೆದು ಹಾಕಿದಂತಾಗಿ ಕೂಸಜ್ಜಿ ಎದ್ದು ಕುಳಿತಳು. ಕವಿದ ಕತ್ತಲಲ್ಲಿ ಮಗ ಅಸ್ಪಷ್ಟವಾಗಿ ಕಂಡುಬಂದು ತನ್ನ ಕಿವಿಗೆ ಬಾಯಿ ಇಟ್ಟವನಂತೆ...

  • ಸರಕಾರದ ಅನುದಾನ ಪಡೆದು ಕಾರ್ಯಕ್ರಮ ನಡೆಸುವುದೇ ಒಂದು ಕೌಶಲ. ಇಂಥ ಕೌಶಲವಿಲ್ಲದೆಯೂ ಪ್ರಾಮಾಣಿಕವಾಗಿ ಕಾರ್ಯಕ್ರಮಗಳನ್ನು ನಡೆಸುವ ಎಷ್ಟೋ ಸಂಸ್ಥೆಗಳಿಲ್ಲವೆ?...

  • ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ ಮುಂತಾದ ಅಷ್ಟಲಕ್ಷ್ಮಿಯರ ಬಗ್ಗೆ ನೀವೆಲ್ಲ ತಿಳಿದಿರಬಹುದು. ಆದರೆ ಮೇಲೆ ಹೇಳಿರುವುದು ತುಂಬಾ ಮುಖ್ಯವಾದ ಎಲ್ಲೆಡೆಯೂ ಅವಗಣಿಸಲ್ಪಟ್ಟ...

  • ಸುಖಾಂತ್ಯ'ವೆಂಬುದು- ಎಲ್ಲವೂ ಸುಖಾಂತ್ಯಗೊಳ್ಳುವುದೆಂಬುದು- ಸಾಂಸಾರಿಕವಾದ ಒಂದು ಕಲ್ಪನೆ ಅಥವಾ ಎಣಿಕೆಯಾಗಿದೆ. ಮನೆಬಿಟ್ಟುಹೋದ ಮಗ, ಮರಳಿ ಮನೆಗೆ ಬಂದೇ ಬರುವನೆಂಬ...

ಹೊಸ ಸೇರ್ಪಡೆ