ಅಭಿಮಾನ ಬಿಟ್ಟುಕೊಡದ ಸ್ವಾಂತದ ಆರಾಧಕ ಕೆ.ವಿ. ತಿರುಮಲೇಶ್‌

ನುಡಿಯೋಣು ಬಾರಾ

Team Udayavani, May 5, 2019, 6:00 AM IST

ನನ್ನ ಮತ್ತು ತಿರುಮಲೇಶರ ಸಂಬಂಧ ಅತ್ಯಂತ ಹಳೆಯದು. ಹಾಗೆ ಹಳೆಯದೆಂಬ ಕಾರಣಕ್ಕೇ ಅತ್ಯಾಧುನಿಕ ಎನ್ನಬಹುದಾದದ್ದು. ಅವರನ್ನು ಅವರ ಕಾವ್ಯದ ಆರಂಭ ಕಾಲದಿಂದಲೂ ಹಚ್ಚಿಕೊಂಡು ಓದುತ್ತ ಬಂದಿರುವವನು ನಾನು. ಅವರು ಕುಮಾರವ್ಯಾಸ, ಅಡಿಗರ ಜೊತೆಗಿದ್ದರು ಎನ್ನುತ್ತಿರುವಾಗಲೇ ಅವರಿಂದ ದೂರವಾಗಿ ತಮ್ಮ ದಾರಿ ತಾವು ಹಿಡಿದು ನಡೆದವರು. ದಾರಿ ಮಧ್ಯದ ಜೊತೆಗಾರರಾಗಿ ಎ. ಕೆ. ರಾಮಾನುಜನ್‌, ಲಂಕೇಶ್‌ ಅವರಿಗೆ ಏಕಾಕಿತನದ ಪರಿಹಾರಕ್ಕೆ ಸಿಕ್ಕರು ಎನ್ನುವಾಗಲೇ ಯಾವಾಗಲೋ ಅವರ ಕಣ್ಣುತಪ್ಪಿಸಿ ಮತ್ತೂಂದು ಒಳಮಾರ್ಗ ಹಿಡಿದು ಮತ್ತೆ ತಮ್ಮ ಖಾಯಿಶ್‌ ಏಕಾಕಿತನ ರೂಢಿಸಿದವರು. ಗುಂಪಿನ ನಡುವೆಯೂ ಥಟ್ಟನೆ ಏಕಾಂಗಿಯಂತೆ ತೋರುವ ಈ ಜೀವ ಕವಿಯನ್ನು ಕಾತರ ಮತ್ತು ಕುತೂಹಲದಿಂದ ನಾನು ಯಾವಾಗಲೂ ಓದುವೆನು. ಒಂದೂ ಕವಿತೆ ಬಿಡದೆ ನಾನು ಓದಿದ ಕೆಲವೇ ಕವಿಗಳಲ್ಲಿ ತಿರುಮಲೇಶ ಒಬ್ಬರು. ನಿರ್ಜನವಾದ ಮನೆಯಲ್ಲಿ ಒಮ್ಮೆಗೇ ಎದುರಾಗುವ, ಅಭಿಮಾನ ಬಿಟ್ಟುಕೊಡದ ಸ್ವಾಂತದ ಆರಾಧಕ. ನಮಗೆ ಗೊತ್ತಿದೆ ಎಂಬಂಥದ್ದರಲ್ಲೂ ಗೊತ್ತಿಲ್ಲದ್ದು ಏನೋ ಇದೆ ಎಂಬ ವಿಶ್ವಾಸದಲ್ಲಿ ಹೊಸ ದಾರಿ ಮತ್ತು ಹೊಸ ಊರಿನ ಹುಡುಕಾಟದಲ್ಲಿರುವ ತಿರುಮಲೇಶ್‌ ಆ ಕಾರಣಕ್ಕಾಗಿಯೇ ಈವತ್ತಿಗೂ ನನಗೆ ಬಹು ಪ್ರಿಯನಾದ ಕವಿ.
ಅವರ ಕಾವ್ಯಾರಂಭದ ದಿನಗಳಲ್ಲಿ ನನ್ನ ಮನಸ್ಸಿಗೆ ಸೇರಿದ ಕೇರಳ ಎಂಬ ಕವಿತೆಯ ಕೆಲವು ಸಾಲುಗಳನ್ನು ಗಮನಿಸಿ.

ಏನೋ ಹೇಳಬೇಕು
ಏನೆಂಬುದು ಮಬ್ಬು
ಹೇಗೋ ಹೇಳಬೇಕು
ಹೇಗೆಂಬುದು ಅಸ್ಪಷ್ಟ
ಇದು ನಿಜವಾದ ಕವಿಯ ಆತ್ಮಲಕ್ಷಣ. ನನಗೆಲ್ಲವೂ ಗೊತ್ತಿದೆ. ಅದನ್ನು ನಿಮಗೆ ಹೇಗೆ ತಿಳಿಹೇಳಬೇಕೆಂಬುದೂ ಗೊತ್ತಿದೆ ಎಂಬ ಸರ್ವಜ್ಞತ್ವದಲ್ಲಿ ಪೀಠಪ್ರಣಾಳಿಗಳಾಗಿ ನಿಲ್ಲುವ ಕವಿಗಳೇ ನಮ್ಮಲ್ಲಿ ಹೆಚ್ಚು. ಅಂಥವರ ನಡುವೆ ಈ ತಿರುಮಲೇಶ ಬೆರೆತೂ ಬೆರೆಯದೆ ಪ್ರತ್ಯೇಕ ನಿಲ್ಲುವ, ಏಕಾಂಗಿಯೂ ಬಹುತ್ವದ ಆರಾಧಕನೂ ಒಮ್ಮೆಗೇ ಆಗಿರುವ ಬೆರಗು ತರಿಸುವ ಕವಿ.

ಪ್ರಾಚೀನದ ದಟ್ಟ ಅರಿವು ತಿರುಮಲೇಶರಿಗಿದೆ. ಹಳತಿನೊಂದಿಗೆ ಅವರ ಸಂಬಂಧ ಮುಖಾಮುಖೀ ಸ್ವರೂಪದ್ದು. ಅವರದ್ದು ಮುಖ್ಯ ವಾಗಿ ಪ್ರಶ್ನಿಸುವ ನೆಲೆ; ಒಪ್ಪುವ ನೆಲೆಯಲ್ಲ. ಅಹಲ್ಯೆಯಂಥ ಹಳೆಯ ಕಥಾಲೋಕವನ್ನು ಅವರು ಪ್ರವೇಶಿಸುವ ಭಾಷಾ ಮತ್ತು ಸಾಮಿತಿ ಸಾಮಗ್ರಿ ಅತ್ಯಂತ ಆಧುನಿಕವೆನ್ನಿಸುವಂಥವು. ಇಲ್ಲಿ ಅಹಲ್ಯೆ ಒಬ್ಟಾತನ ಸ್ನೇಹದಲ್ಲಿ ಇನ್ನೊಬ್ಬನ ಮೋಹ ಹಿಡಿಯಬಯಸಿದವಳು; ಎರಡನ್ನೊ ಮ್ಮೆಯೇ ಎಳಸಿದವಳು. ನೆನ್ನೆ ಬದುಕು ಮೈತುಂಬಿ ಉದ್ದಕ್ಕು ನಿಂತಿದ್ದ ಒಡಲು ಇಂದು ಕೇವಲ ಕಲ್ಲು! ಎಲೆ ಚೆಲುವೆ ನೀನು ಯಾರ ಕಾಯುತ್ತಿ ರುವೆ? ಯಾವ ಯುಗದ ದೈವ ಕೊಡುವುದು ಜೀವ- ಎಂದು ಬಿಸು ಸುಯ್ಯುತ್ತಾನೆ ಅಹಲ್ಯೆಯ ಶಾಪಗ್ರಸ್ತ ಬದುಕಿಗೆ ತಾನೂ ಒಂದು ಕಾರಣ ವಾಗಿರುವ, ಹಾಗೆ ಆದ ಕಾರಣಕ್ಕೇ ಪಶ್ಚಾತ್ತಾಪದ ದನಿಯಾಗಿರುವ ಇಂದ್ರ.

ಅಹಲ್ಯೆ, ಗೌತಮನ ಶಾಪದಿಂದ ಈಗ ಕಲ್ಲಾಗಿದ್ದಾಳೆ. ಕಲ್ಲೊಳಗಿರುವ ಆಕೆಯ ಚಲಿಸಲಾರದ ಕೈ, ಸ್ಪಂದಿಸಲಾರದ ಹೃದಯ, ತಡವಲಾರದ ಬೆರಳು, ಸರಿಸಲಾರದ ಕುರುಳಿನ ನಿಶ್ಚಲತೆಯ ದಾರುಣ, ವಿಷಾದ ಓದುಗರನ್ನು ತ್ರಸ್ತಗೊಳಿಸುತ್ತದೆ. ಇದು ಕಲ್ಲು ಕಟ್ಟಿದ ಅಹಲ್ಯೆಯ ಮನವಿಲ್ಲದ ಮನದ ತಳಮಳ. ಇನ್ನು ಗೌತಮನೋ ಕಲ್ಲಾದವನು ನೀನಲ್ಲ ನಾನು ಎಂದು ಮರಮರ ಮರುಗುವ ಪರಿತಾಪವೇ ತಪವಾದ ಸಂಕಟಪುರುಷ. ಪಡೆಯಲೆಂದೇ ಬಂದು ಪಡೆದುಕೊಂಡಂದು ನನ್ನ ಕನಸನು ನಾನೆ ಒಡೆದುಕೊಂಡೆನೆ ಹೇಳು ಮನವೆ, ಇದು ಇನ್ನೊಂದು ದಿನವೆ ಎಂದು ಕೊರಗುತ್ತಿರುವ ದಿನದ ಗಣಿತವಿಲ್ಲದ ಇಂದ್ರ. ಕವಿತೆಯ ಕೊನೆಯ ಭಾಗ -ದೈವವಿರಲಿಲ್ಲ ಯಾವ ದೇವರೂ ಬರಲಿಲ್ಲ. ಬಂದವನೊಬ್ಬ ಮಾನವ. ಶಿಲೆಯಿಂದ ಶಿಲ್ಪವ ತೆಗೆಯ ಬಯಸಿದವನು!

ಶಾಪದ ಸೆರೆಯಿಂದ ಅಹಲ್ಯೆಯನ್ನು ಮುಕ್ತಗೊಳಿಸಿದವನು ರಾಮನಲ್ಲ; ಒಬ್ಬ ಕವಿ! ಕಣ್ಣೀರಿಗೆ ಕರಗುವ ಕವಿ! ಕವಿತೆಯ ಆ ನವುರಾದ ಭಾಗವನ್ನು ಖುದ್ದಾಗಿ ಪರಾಂಬರಿಸಿ:
ದೈವವಿರಲಿಲ್ಲ ಯಾವ ದೇವರೂ ಬರಲಿಲ್ಲ
ಬಂದವನೊಬ್ಬ ಮಾನವ. ಶಿಲೆಯಿಂದ ಶಿಲ್ಪವ
ತೆಗೆಯ ಬಯಸಿದನು, ಬಿಡಿಸ ಬಯಸಿದನು.

ಶಾಪದ ಸೆರೆಯಿಂದ ಆ ಅಂಥ ಛಂದ
ಕಣ್ಣುಗಳೆಲ್ಲಿ ತುಟಿಗಳೆಲ್ಲಿ ತೋಳುಗಳೆಲ್ಲಿ
ಎಲ್ಲಿ ಮರ್ತ್ಯಕ್ಕೆ ಸ್ವರ್ಗವ ತಂದ ನಿಸರ್ಗ
ಎವೆ ಅದುರಿತೆ ಮುಟ್ಟಿದ ಕೈ ಕಂಪಿಸಿತೆ
ಉಳಿಯ ಹೊಡೆತವೊ ಅದು ನಾಡಿ ಮಿಡಿತವೊ
ಯಾರೂ ಇರದಲ್ಲಿ ಉತ್ತರಿಸುವವರಾರಿಲ್ಲ
ಅವರವರ ಭಾವಕ್ಕೆ ತಕ್ಕಂತೆ ರೆಕ್ಕೆ
ತೆರೆಯುವ ಮನಸ್ಸು ಹೂಡುವ ಪ್ರತ್ಯೇಕ ತಪಸ್ಸು
ಅದೋ ಅದೋ! ನೋಡಿ ಸಾವಿರ ಕಣ್ಣು ಒಮ್ಮೆಲೆ ಮೂಡಿ
ಆಹಾ ! ಪ್ರತಿಯೊಂದು ಕಲ್ಪಕ್ಕೂ ಪ್ರತ್ಯೇಕ ಶಿಲ್ಪ
ಇಂದ್ರ, ಗೌತಮರನ್ನು ಬದಿಗಿರಿಸಿ. ಇಲ್ಲಿ ಪುನಶ್ಚೇತನದ ತಪಸ್ಸು ಸಂಭವಿಸಿದ್ದು ಎರಡು ನೆಲೆಗಳಲ್ಲಿ. ಕಲ್ಲಲ್ಲಿ ಕಲ್ಲಾಗಿರುವ ಅಹಲ್ಯೆಯ ಚೈತನ್ಯಾಂಕಾಕ್ಷೆಯ ತೀವ್ರ ಬಯಕೆಯಲ್ಲಿ. ಆಕೆಯ ಬಯಕೆ ಪೂರೈಸುವ, ಆಕೆಗೆ ಮತ್ತೆ ಚೈತನ್ಯ ಕರುಣಿಸುವ ಕವಿಯ ಮಾನವ್ಯದ ತಪಸ್ಸಿನಲ್ಲಿ !
ಇಂಥ ಪುನರ್ಯೋಗದ ಹಲವು ಪ್ರಸಂಗಗಳು ತಿರುಮಲೇಶರ ಕಾವ್ಯದಲ್ಲಿ ಕಥಿತವಾಗಿವೆ. ದ್ವಾಸುಪರ್ಣಾದ ಪ್ರಾಚ್ಯಪ್ರತಿಮೆ ತಿರುಮಲೇಶರಲ್ಲಿ ನಾಯಿ ಹಾಗೂ ನಾಯಿಯಗೊಂಬೆ ಎಂಬ ಪದ್ಯದಲ್ಲಿ ಈವತ್ತಿಗೆ ಬೇಕಾದ ಅರ್ಥ ಆಕಾರ ಸಾಧಿಸುವ ಬೆಡಗು ಕಾಣಬಹುದು. ಅವರ ಸುಪ್ರಸಿದ್ಧ ಮಹಾಪ್ರಸ್ಥಾನ ಸ್ವಂತದ ಸ್ವರ್ಗದ ಅನ್ವೇಷಣೆಗೆ ಹೊರಡುವ ಸಾಧಕನೊಬ್ಬನ ಏಕಾಂಗಿ ಹೋರಾಟದ ಎದೆ ಝಲ್ಲೆನಿಸುವ ಅನುಭವಕ್ಕೆ ನಮ್ಮನ್ನು ಕರೆದೊಯ್ಯುವುದು. ಮುಖಾಮುಖೀಯಲ್ಲಿ ಆಕಸ್ಮಾತ್‌ ಭೆಟ್ಟಿಯಾಗುವ ಮನುಷ್ಯ ಮತ್ತು ಪ್ರಾಣಿ ಸ್ವಂತದ ಹಕ್ಕು ಮತ್ತು ಅಸ್ಮಿತೆಗಾಗಿ ಹೋರಾಡುವ ಯಾವತ್ತಿನ ಕರ್ಷಣೆಗೆ ಮೈ ತೆರೆಯಲಾಗುವುದು.

ಚಿಲಿ ಕವಿ ಪ್ಯಾಬ್ಲೊ ನೆರೂಡನ ಹಾಗೆ ತಿರುಮಲೇಶ ತ್ಯಾಜ್ಯದಿಂದ ಹೊಸ ಹೊಸ ಅರ್ಥಶಿಲ್ಪ ಕೆತ್ತುವ ಕರ್ಮಕುಶಲಿ. ಅವರ ಲಯಗಾರಿಕೆ ಮತ್ತು ಭಾಷಾಹೂರಣ ಬಹು ವಿಸ್ತಾರವಾದದ್ದು. ಎಷ್ಟು ವಿಸ್ತಾರ ಸಾಧ್ಯವೋ ಅಷ್ಟು ವಿಸ್ತಾರವನ್ನು ಆಪೋಹ ಮಾಡುವಂಥದ್ದು. ತಮಾಷೆಯನ್ನು ಲಘುತ್ವವನ್ನು ಬಿಡದೆ ಗಹನಕ್ಕೆ ಕೈಚಾಚುವಂಥದ್ದು. ಆತ್ಮ-ದೇಹಗಳ ಯಾವತ್ತಿನ ದ್ವಂದ್ವವನ್ನು ಹೊಸ ರೂಪಕಕ್ಕೆ ಆಹ್ವಾನಿಸುವ ಯಾಜ್ಞವಲ್ಕ್ಯನೂ ಮೈತ್ರೇಯಿಯೂ ಎಂಬ ಸೊಗಸಾದ ಕವಿತೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಯಾಜ್ಞವಲ್ಕ್ಯನೆಂಬ ಒಬ್ಬ ಋಷಿ ಆತ್ಮವಿದ್ಯೆಯನ್ನು ತನ್ನ ಇಬ್ಬರು ಪತ್ನಿಯರಲ್ಲಿ ಯಾರಿಗೆ ಬೋಧಿಸಬೇಕು ಎಂದು ನಿರ್ಣಯಿಸುವ ರೋಚಕ ಕ್ಷಣದಲ್ಲಿ ಕವಿತೆ ಪ್ರಾರಂಭವಾಗುತ್ತದೆ.
ಯಾಜ್ಞವಲ್ಕ್ಯ ಹೇಳಿದ ಮೈತ್ರೇಯಿಯ ಕರೆದು:

ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ
ತಲೆಯೆಂದರೆ ನಿನ್ನದೆ! ಆದ್ದರಿಂದ
ಆತ್ಮವಿದ್ಯೆ ನಿನಗೇ
ಕಲಿಸುವೆ ನಾನು ಪ್ರತ್ಯಕ್ಷ!
ಮುಂದೆ ಯಾಜ್ಞವಲ್ಕ್ಯ ಅನೇಕ ಸಾಮಿತಿಗಳ ಮೂಲಕ ಆತ್ಮವಿದ್ಯೆಯನ್ನು ಮೈತ್ರೇಯಿಗೆ ಬೋಧಿಸುತ್ತಾನೆ. ದೇಹದಿಂದ ಉತ್ಪಾದಿತವಾಗಿಯೂ ಅತೀಂದ್ರಿಯ ಎನ್ನಿಸುವ ಅರಿವಿನ ಸಂಗತಿಯನ್ನು ನಗಾರಿಯ ನಾದ ಸರ್ವವ್ಯಾಪಿಯಾಗುವ, ಕೈಯಿಂದ ಉದ್ಭವಿಸಿಯೂ ಕೈಮೀರುವ ಹೋಲಿಕೆಗಳ ಮೂಲಕ ಪ್ರತಿಪಾದಿಸುವನು. ಹಸಿ ಕಟ್ಟಿಗೆಯಿಂದ ಹುಟ್ಟಿದ ಹೊಗೆ ಹೇಗೋ ಹಾಗೇ ಆತ್ಮದಿಂದ ಎಲ್ಲವೂ ಹುಟ್ಟುವುದನ್ನು ವಿವರಿಸುವನು. ದೋಣಿ ತೂತಾದಾಗ ದೋಣಿಯಿಂದ ನೀರಿಗೆ ಹಾರಿ ದಡ ಸೇರುವುದಕ್ಕೆ ಅಗತ್ಯವಾದ ಈಜಿನಂತೆ ಆತ್ಮಜ್ಞಾನ ಎಂದು ವಿವರಿಸುವನು. ಆತ್ಮವಸ್ತುವನ್ನು ವಿವರಿಸಲು ಯಾಜ್ಞವಲ್ಕ್ಯ ಬಳಸಿದ್ದು ಇಂದ್ರಿಯ ಗ್ರಾಹ್ಯವಾದ ವಸ್ತುಪ್ರಪಂಚವನ್ನೇ.
ಈ ಬೋಧೆಯನ್ನು ಎಷ್ಟು ಚೆನ್ನಾಗಿ ಮೈತ್ರೇಯಿ ಗ್ರಹಿಸಿದಳು ಎಂಬುದು ಕಾವ್ಯದ ಅನುಭಾವಶೃಂಗ.

ಮುಗಿಯಿತೇ ಎಂದಳು ಮೈತ್ರೇಯಿ
ಹೂಂ ಎಂದ ಯಾಜ್ಞವಲ್ಕ್ಯ.
ಒಂದು ಮಾತ್ರ ಮರೆತಿರೆಂದು
ಸೀರೆ ರವಿಕೆ ಬಿಚ್ಚಿದಳು
ಲಂಗವೊದ್ದು ಜಾಡಿಸಿದಳು
ನೋಡಿದಿರಾ ಎಂದಳು ಮೈತ್ರೇಯಿ:
ಸೀರೆಯೆಂದರಹಂಕಾರ
ರವಿಕೆ ತಪ್ಪು ಗ್ರಹಿಕೆ…

ಬತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂಬ ಅಡಿಗರ ಮಹಾಕಾವ್ಯವಾಕ್ಕಿಗೆ ತಿರುಮಲೇಶ ಹುಟ್ಟಿಸುವ ಪರ್ಯಾಯದ ಲಾಘವ ಬೆಚ್ಚಿಬೀಳಿಸು ವಂಥದ್ದು ! ದೇಹ-ಆತ್ಮದ ಬಗ್ಗೆ ಚಿಂತಿಸುವ ಯೇಟ್ಸ್‌ನಿಂದ ಹಿಡಿದು, ಕಾಯಜೀವಿಯಾದ ಲಕ್ಷ್ಮಣರಾವ್‌ವರೆಗಿನ ಅನೇಕ ಕವಿತೆಗಳು ಈಗ ನನ್ನ ಕಣ್ಮುಂದೆ ಪೆರೇಡು ನಡಿಸುತ್ತಿವೆ. ಆ ಪೆರೇಡಿನಲ್ಲಿ ತಿರುಮಲೇಶರ ಪದ್ಯಕ್ಕೆ ಆಯಕಟ್ಟಿನ ಸ್ಥಾನಮಾನವಿದೆ. ಪರಾತ್ಪರ ವಸ್ತುವಿಗೆ ಅವರು ಹೂಡುವ ಭಾಷೆ ಮತ್ತು ಪ್ರತಿಮಾ ಸಾಮಗ್ರಿ ನಿಚ್ಚನವೀನ ಅಂತ ಅನ್ನಿಸುತ್ತದೆ. ಭಾಷೆಯ ಮತ್ತು ಕಾವ್ಯದ ಮರ್ಮ ಬಲ್ಲ ಕವಿ- ಭಾಷಾವಿಜ್ಞಾನಿ ತಿರುಮಲೇಶ- ರಾಮಾನುಜರಂತೆಯೇ! ಆದರೆ, ಆ ಹಳೆಯ ಸರೀಕನನ್ನು ಅಗಲಿ ತಿರುಮಲೇಶ ಬಹುದೂರ ನಡೆದುಬಿಟ್ಟಿದ್ದಾರೆ. ಪರಿಷೆಯ ಫ‌ಕೀರನಂತೆ ಲಾಘವದಲ್ಲಿ ಆತ್ಮವ ಹಗುರಾಗಿಸಿ ಏಕಾಂಗಿ ಯಾತ್ರೆಯಲ್ಲಿ ತೊಡಗಿರುವ ಈ ಅನೇಕದ ನಡುವಿನ ಏಕಾಕಿಯನ್ನು ನಾನು ಇನ್ನು ಮುಂದೆಯೂ ಬಹು ಎಚ್ಚರದಿಂದ ಓದುತ್ತ ಮನನ ಮಾಡುತ್ತೇನೆ.

ತಿರುಮಲೇಶರಿಗೆ ಅನೇಕ ಇರಿಸುಮುರಿಸುಗಳಿವೆ. ತಾಪ-ಪರಿತಾಪಗಳಿವೆ. ಶೀಘ್ರ ಉದ್ವಿಗ್ನತೆ, ಅಷ್ಟೇ ಕ್ಷಿಪ್ರ ತಣಿಯುವಿಕೆ, ಮುದುಡಿಕೊಳ್ಳುವುದು, ಮರುಗಳಿಗೆ ಪ್ರಫ‌ುಲ್ಲವಾಗಿ ಅರಳಿಕೊಳ್ಳುವುದು ಅವರ ಸ್ವಭಾವ. ಕರ್ನಾಟಕದ ಹೊರಗಿರುವ ನಾನು ಅಲಕ್ಷಿತ ಎಂಬ ತಪ್ಪು$ಕಲ್ಪನೆ ಕೆಲವೊಮ್ಮೆ ಅವರನ್ನು ಕೆಣಕುವುದುಂಟು. ಒಳಗಿನವರ ಪಡಿಪಾಟಲು ಹೊರಗಿರುವ ಅವರಿಗೆ ತಿಳಿಯದು. ಮರವನ್ನು ಕುರಿತ ಅವರ ಪದ್ಯವೊಂದು ನನಗೆ ಈಗ ನೆನಪಾಗುತ್ತಿದೆ. ಮರವೊಂದು ಇದ್ದಲ್ಲೇ ಇದ್ದೂ ಬಯಲಿನ ಎಲ್ಲ ಹಕ್ಕಿಗಳನ್ನು ತನ್ನ ಮಡಿಲಿಗೆ ಆಹ್ವಾನಿಸುತ್ತದೆ. ತಿರುಮಲೇಶರ ಕಾವ್ಯ ಆ ಮರದ ಹಾಗೆ.
(ಮುಂದಿನ ವಾರ ಅಂಕಣ ಮುಕ್ತಾಯ)

ಎಚ್ ಎಸ್ ವೆಂಕಟೇಶಮೂರ್ತಿ


ಈ ವಿಭಾಗದಿಂದ ಇನ್ನಷ್ಟು

  • ಏರ್‌ಪೋರ್ಟನಲ್ಲಿ ಸ್ಮೋಕಿಂಗ್‌ ಝೋನ್‌ ಅಂತ ರೂಮ್‌ ತರಹದ ಒಂದು ಗಾಜಿನ ಡಬ್ಬಿಯ ಮೇಲೆ ಬರೆದಿದ್ದರು. ಅದರಲ್ಲಿದ್ದವರು ಸಿಗರೇಟ್ ಹೊಗೆ ಬಿಡುತ್ತಿದ್ದರಿಂದ ಯಾರ...

  • ಉಪನಿಷತ್ತಿನ ಮನೋಧರ್ಮವನ್ನು ಅನುಭವದ ಶೋಧನೆಯ ಮನೋಧರ್ಮ ಎನ್ನಬಹುದು. ಅನುಭವದ ಶೋಧನೆಯೂ ಅನುಭವವೇ. ಆಳದ ಅನುಭವ ಎನ್ನಬಹುದು. ಮೇಲ್ನೋಟದ, ಮೇಲ್ ಪದರದ ಅನುಭವದಲ್ಲಿ...

  • ಮಧ್ಯಾಹ್ನವಾದರೆ ಸಾಕು, ನಮ್ಮ ಮನೆ ಅಂಗಳದ ತುಂಬೆಲ್ಲಾ ಸೂರಕ್ಕಿಗಳದ್ದೇ ಹಾಡು, ಕ್ರೋಟಾನು ಗಿಡದಲ್ಲಿ, ರತ್ನಗಂಧಿ ಹೂವಿನ ಗೊಂಚಲುಗಳಲ್ಲಿ ಈ ಹಕ್ಕಿಗಳು ಭಾರೀ ಕ್ರಿಯಾಶೀಲತೆಯಿಂದ...

  • ಖ್ಯಾತ ಗೀತರಚನಾಕಾರರಾದ ಪ್ರಸೂನ್‌ ಜೋಷಿಯವರ ಸಾಲುಗಳು ದಿಲ್ಲಿ ಶಹರದ ಮೋಡಿಗೆ ಇಲ್ಲಿ ತಲೆದೂಗುತ್ತಿದೆ. ಇದು ನಗರವಷ್ಟೇ ಅಲ್ಲ. ಒಂದು ಮೆಹಫಿಲ್ ಕೂಡ ಎನ್ನುತ್ತಿದ್ದಾರೆ...

  • ನೀವೇನಾದರೂ ಕಿರುತೆರೆ ವೀಕ್ಷಕರಾಗಿದ್ದಾರೆ, ಧಾರಾವಾಹಿ ಪ್ರಿಯರಾಗಿದ್ದರೆ, ನಿತ್ಯಾ ರಾಮ್‌ ಎನ್ನುವ ಈ ಚೆಲುವೆಯನ್ನ ಖಂಡಿತ ನೋಡಿರುತ್ತೀರಿ. ತನ್ನ ಧಾರಾವಾಹಿಗಳ...

ಹೊಸ ಸೇರ್ಪಡೆ