ಕುರ್ತಕೋಟಿ ಎನ್ನುವ ವಿದಗ್ಧ ರಸಿಕ…

ನುಡಿಯೋಣು ಬಾರಾ

Team Udayavani, Apr 21, 2019, 6:00 AM IST

5

ಕೀರ್ತಿನಾಥ ಕುರ್ತಕೋಟಿ ಫೊಟೊ : ಎ. ಎನ್‌. ಮುಕುಂದ್‌

ನನಗೆ ಕುಮಾರವ್ಯಾಸನ ಹುಚ್ಚು ಹಿಡಿಸಿದ ಮಹನೀಯರಲ್ಲಿ ಪ್ರೊ.ಕೀರ್ತಿನಾಥ ಕುರ್ತಕೋಟಿಯವರೂ ಒಬ್ಬರು. 1974-75ರ ಸುಮಾರು. ನ್ಯಾಷನಲ್‌ ಕಾಲೇಜಿನ ಸಭೆಯೊಂದರಲ್ಲಿ ಕೀರ್ತಿ, ಕುಮಾರವ್ಯಾಸನ ಬಗ್ಗೆ ಮಾತಾಡಿದರು. ಅವರ ಅಸ್ಖಲಿತ ವಾಗ್ಝರಿಗೆ ನಾನು ನಿಬ್ಬೆರಗಾಗಿ ಹೋದೆ. ಪುಂಖಾನುಪುಂಖವಾಗಿ ಅವರು ನೆನಪಿನಿಂದಲೇ ಕುಮಾರವ್ಯಾಸನ ಷಟ³ದಿಗಳನ್ನು ಉದ್ಧರಿಸುತ್ತಿದ್ದರು. ದೇವರನ್ನೇ ನಾಯಕನನ್ನಾಗಿ ಮಾಡಿಕೊಂಡು ಕಾವ್ಯವೊಂದನ್ನು ನಿರ್ವಹಿಸುವ ಕಷ್ಟಕರವಾದ ಕಾರ್ಯವನ್ನು ಕುಮಾರವ್ಯಾಸನು ಹೇಗೆ ಅದ್ಭುತವೆನ್ನುವಂತೆ ನಿಭಾಯಿಸಿರುವನು ಎಂಬುದು ಆವತ್ತು ಅವರ ಉಪನ್ಯಾಸದ ವಿಷಯವಾಗಿತ್ತು. ಕುಮಾರವ್ಯಾಸನ ಕೃಷ್ಣ ಮಾನವನೂ ಹೌದು; ದೇವರೂ ಹೌದು. ಗದುಗಿನ ಭಾರತ ಅವನ ಲೀಲಾರಂಗ. ಆದಾಗ್ಯೂ ಮನುಷ್ಯನ ಘನತೆಗೆ ಕುಮಾರವ್ಯಾಸನ ಕಾವ್ಯ ಎಲ್ಲೂ ಭಂಗ ತರದು. ಭೀಷ್ಮ, ಭೀಮ, ಕರ್ಣ, ದುರ್ಯೋಧನ ಮೊದಲಾದ ಮುಖ್ಯ ಪಾತ್ರಗಳು ಮತ್ತು ಕೃಷ್ಣನ ನಡುವೆ ನಡೆಯುವ ಸಂಘರ್ಷವನ್ನು ಕುಮಾರವ್ಯಾಸ ನಿರ್ವಹಿಸಿರುವ ಪರಿ ಕೃಷ್ಣನ ಅಸಾಮಾನ್ಯತೆಯನ್ನು ಕೀರ್ತಿಸುತ್ತಲೂ ಮನುಷ್ಯತ್ವದ ಘನತೆಯನ್ನು ಎಲ್ಲೂ ಬಿಟ್ಟುಕೊಡದು. ಇದೇ ಕುಮಾರವ್ಯಾಸನ ಕಾವ್ಯದ ವಿಶೇಷ- ಈ ಅಂಶ ಅವರ ಭಾಷಣದ ಮುಖ್ಯ ಪ್ರಮೇಯವಾಗಿತ್ತು.

ವಿರಳವಾದ ಉದ್ದ ಕೂದಲು. ಗೌರವರ್ಣ. ನೀಳ ಮೂಗು. ತಂಬುಲದ ರಾಗದಿಂದ ಕೆಂಪಾದ ತುಟಿಗಳು. ಕೀರ್ತಿಯವರೂ ಒಬ್ಬ ನಾಟಕದ ಪಾತ್ರಧಾರಿಯಂತೆಯೇ ನನಗೆ ಕಂಡರು. ಅವರ ಬಾಯಿಯಿಂದ ನಿರರ್ಗಳವಾಗಿ ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಕಾವ್ಯೋಕ್ತಿಗಳು ಹೊರಹೊಮ್ಮುತ್ತಿದ್ದವು. ಅವರ ನೆನಪಿನ ಶಕ್ತಿ ಅಗಾಧವಾದುದು. ನನಗಾದರೋ ನನ್ನ ಕವಿತೆಯ ಸಾಲುಗಳೇ ನೆನಪಿರುವುದಿಲ್ಲ. ಹಾಗಾಗಿ, ಕೀರ್ತಿಯವರು ನನಗೊಂದು ವಿಸ್ಮಯ ವ್ಯಕ್ತಿಯಾಗಿಯೇ ಕಂಡರು. ಕುಮಾರವ್ಯಾಸನನ್ನು ಪರಿಶೀಲಿಸುವಾಗ ಸಾಂಪ್ರದಾಯಿಕ ಕ್ರಮವನ್ನು ಅನುಸರಿಸದೆ, ಆಧುನಿಕ ನೆಲೆಯಲ್ಲಿ, ತತ್ಕಾಲದ ಅಗತ್ಯಗಳಿಗೆ ಅದ್ಭುತವೆನ್ನುವಂತೆ “ತಗುಳಿc ‘, ಅವರು ಆ ಮಧ್ಯಕಾಲೀನ ಕಾವ್ಯವನ್ನು ಮಂಡಿಸುತ್ತ ಇದ್ದರು. ಕಾವ್ಯ ದರ್ಶನ ಮತ್ತು ಕಾವ್ಯದ ಅಸಾಮಾನ್ಯವಾದ ಭಾಷಿಕ ಚೆಲುವು, ಧ್ವನಿರಮ್ಯತೆ, ಲಯವಿನ್ಯಾಸದ ಸಾರ್ಥಕ ಬಳಕೆಗಳನ್ನೂ ಅವರ ಉಪನ್ಯಾಸ ಪ್ರಚುರಪಡಿಸುತ್ತ ಇತ್ತು. ಗಮಕ ಪದ್ಧತಿಯ ಅರ್ಥವಿವರಣೆಗಿಂತ ಇದು ತೀರಾ ಭಿನ್ನವಾಗಿತ್ತು. ವಿಮರ್ಶೆ ಮತ್ತು ಕಾವ್ಯ ರಸಿಕತೆ ಅಲ್ಲಿ ಹೆಣೆದುಕೊಂಡಿದ್ದವು. ಇನ್ನು ಮುಂದೆ ಬೆಂಗಳೂರಿನಲ್ಲಿ ಕೀರ್ತಿ ಎಲ್ಲೇ ಮಾತಾಡಿದರೂ ನಾನದನ್ನು ತಪ್ಪಿಸಿಕೊಳ್ಳಬಾರದು ಎಂದು ನಿಶ್ಚಯಿಸಿದೆ. ಅರಾಸೆ, ಕೆ. ವೆಂಕಟರಾಮಪ್ಪ, ಜಿ.ಎಸ್‌.ಎಸ್‌., ಅ. ರಾ. ಮಿತ್ರ ಆ ಮೊದಲು ನನ್ನನ್ನು ಕುಮಾರವ್ಯಾಸನ ಕಾವ್ಯದ ಕಡೆ ಸೆಳೆದ ಪ್ರಮುಖರು. ಆ ಪಟ್ಟಿಗೆ ಈಗ ಕೀರ್ತಿಯವರ ಹೆಸರೂ ಸೇರಿಕೊಂಡಿತು.

ಆಮೇಲೆ ಅದೆಷ್ಟು ಬಾರಿ ಕೀರ್ತಿಯವರ ಉಪನ್ಯಾಸಗಳನ್ನು ಕೇಳಿದ್ದೇನೊ! ಜಿ. ಎಸ್‌.ಎಸ್‌. ನಡೆಸುತ್ತಿದ್ದ ಸೆಮಿನಾರುಗಳಲ್ಲಿ , ಕೆ. ವಿ. ಸುಬ್ಬಣ್ಣನವರ ಹೆಗ್ಗೊàಡಿನ ಸಾಂಸ್ಕೃತಿಕ ಶಿಬಿರದಲ್ಲಿ , ಕರ್ನಾಟಕದ ಬೇರೆ ಬೇರೆ ಸ್ಥಳಗಳಲ್ಲಿ , ನಾವು ವೇದಿಕೆ ಹಂಚಿಕೊಂಡ ಹತ್ತಾರು ಸಭೆಗಳಲ್ಲಿ. ಪ್ರತಿಯೊಂದು ಉಪನ್ಯಾಸವೂ ನವೋ ನವ. ಒಂದೊಂದರಲ್ಲೂ ಯಾವುದೋ ಹೊಸ ಬೆಳಕಿನ ಪ್ರತಿಭಾನ. ಕೀರ್ತಿ ನನಗೆ ಅಚ್ಚುಮೆಚ್ಚಿನ ಕಾವ್ಯದ ಕುರಿತ ವಿದಗ್ಧ ರಸಿಕ. ಕುಮಾರವ್ಯಾಸ ಜೊತೆಗೆ ಬೇಂದ್ರೆಯವರ ಕುರಿತ ಉಪನ್ಯಾಸಗಳು ನನ್ನನ್ನು ನಿಜಕ್ಕೂ ಮರುಳುಮಾಡಿದ್ದವು. ಕೆಲವು ಉಪನ್ಯಾಸಗಳಲ್ಲಿ ಕೆಲವು ಅಂಶ ಪುನರಾವರ್ತನೆಗೊಂಡರೂ ಒಳ್ಳೆಯ ರಾಗದ ಪ್ರಸ್ತುತಿಯಂತೆ ಅವು ಮನಸ್ಸಿಗೆ ಹಿತವಾಗುವಂತೆ ಇರುತ್ತಿದ್ದವು. ಒಂದು ಕೈಯಲ್ಲಿ ಕುಮಾರವ್ಯಾಸ ಅಥವಾ ಬೇಂದ್ರೆ, ಇನ್ನೊಂದು ಕೈಯಲ್ಲಿ ಕೇಳುಗ. ನಡುವೆ ಕೀರ್ತಿಯವರ ತಡೆಯಿಲ್ಲದ ವಾಗ್ಮಿತೆ! ಅದೊಂದು ಅಪೂರ್ವ ಅನುಭವ.

ಕೀರ್ತಿಯವರ ಯುಗಧರ್ಮ ಮತ್ತು ಸಾಹಿತ್ಯದರ್ಶನದಂಥ ಕೃತಿಗಳು ನನಗೆ ಎಂ. ಎ. ವ್ಯಾಸಂಗದ ಕಾಲದಿಂದಲೂ ನಿತ್ಯ ಓದಿನ ಕೃತಿಗಳಾಗಿದ್ದವು. ಈವತ್ತು ಅವರ ಸಾಹಿತ್ಯ ಸಂಗಾತಿ ನನ್ನ ನಿತ್ಯ ಬಳಕೆಯ ಸಂಗಾತಿ. ಕುಮಾರವ್ಯಾಸ, ಬೇಂದ್ರೆ, ಕಂಬಾರರ ಕಾವ್ಯದ ಬಗೆಗಿನ ಕೀರ್ತಿಯವರ ಅಪಾರ ಅಭಿಮಾನವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಕವಿಯಾಗಿ ನನಗೆ ಒಂದು ಕುತೂಹಲವಿತ್ತು! ಕೀರ್ತಿ ನನ್ನ ಕವಿತೆಗಳಿಗೆ ಹೇಗೆ ಸ್ಪಂದಿಸಬಹುದು? ಆ ಕುತೂಹಲ ತಣಿಯುವ ಸಂದರ್ಭವೂ ದೈವವಶಾತ್‌ ಒದಗಿಬಂತು. 1980ರ ಸುಮಾರಿಗೆ ನನ್ನ ಒಣಮರದ ಗಿಳಿಗಳು ಎಂಬ ಕಾವ್ಯ ಸಂಗ್ರಹದ ಹಸ್ತಪ್ರತಿ ಸಿದ್ಧವಾಗಿತ್ತು. ಅದಕ್ಕೆ ಕೀರ್ತಿಯವರನ್ನೇ ಏಕೆ ಮುನ್ನುಡಿ ಬರೆಯಲು ಕೇಳಬಾರದು ಎಂದು ಯೋಚಿಸಿದೆ. ಆಗ ನಮ್ಮ ಪರಿಚಯ ಅಷ್ಟು ನಿಕಟವಾದುದೇನೂ ಆಗಿರಲಿಲ್ಲ. ಧೈರ್ಯ ಮಾಡಿ ಹಸ್ತಪ್ರತಿಯನ್ನು ಕೀರ್ತಿಯವರಿಗೆ ಅಂಚೆಯ ಮೂಲಕ ಮುನ್ನುಡಿಯ ಕೋರಿಕೆಯೊಂದಿಗೆ ರವಾನಿಸಿ, ನೋಡೋಣ ಏನಾಗುತ್ತದೋ ಎಂದು ಕುತೂಹಲಮತಿಯಾಗಿ ನಿರೀಕ್ಷಿಸುತ್ತ ಕುಳಿತೆ.

ಒಂದು ಮಧ್ಯಾಹ್ನ ಊಟದ ಸಮಯ. ಆವತ್ತು ನಮ್ಮ ಮನೆಗೆ ಅತಿಥಿಗಳಾಗಿ ನನ್ನ ಪ್ರಿಯ ಶಿಷ್ಯ ಎಚ್‌. ಎಸ್‌. ವಿ. (ಸನಾಮಿ!) ಮತ್ತು ಗೆಳೆಯ ಮಾಧವರಾವ್‌ ಬಂದಿದ್ದಾರೆ. ಮೂವರೂ ಊಟಮಾಡುತ್ತ ಇದ್ದೇವೆ. ತೆರೆದ ಕಿಟಕಿಯಿಂದ ಒಂದು ದಪ್ಪನೆಯ ಲಕೋಟೆ ಧೊಪ್ಪನೆ ನಮ್ಮ ಕಣ್ಮುಂದೆ ಬಿತ್ತು. ಎಡಗೈಯಲ್ಲೇ ಎತ್ತಿಕೊಂಡು ನೋಡಿದೆ. ಕೀರ್ತಿಯವರ ಕಡೆಯಿಂದ ಬಂದಿರುವ ಪತ್ರ. ಲಗುಬಗೆಯಿಂದ ಊಟ ಮುಗಿಸಿ ನಾನು ಮತ್ತು ಮಾಧು ಒಟ್ಟಿಗೇ ಕೀರ್ತಿಯವರ ಮುನ್ನುಡಿ ಓದಿದೆವು. ನನ್ನ ಕವಿತೆಗಳನ್ನು ಮೆಚ್ಚಿಕೊಂಡು ಕೀರ್ತಿ ಬರೆದಿದ್ದರು.

ಪುಸ್ತಕ ಅಚ್ಚಾದ ಮೇಲೆ ಎಲ್ಲ ಕಡೆಯಿಂದಲೂ ಸದಭಿಪ್ರಾಯ ಬಂತು. ಈ ಕೃತಿಯನ್ನು ರಾಘವೇಂದ್ರ ರಾವ್‌ ಬಿಡುಗಡೆ ಮಾಡಿದರು. ಕೆಲವರು ಮಿತ್ರರಿಗೆ ಕೀರ್ತಿಯವರು ನನ್ನ ಕಾವ್ಯವನ್ನು ಮೆಚ್ಚಿ ಮಾತಾಡಿದ್ದು ಒಪ್ಪಿಗೆಯಾಗಲಿಲ್ಲ. ಕಾವ್ಯ ಜಗತ್ತಲ್ಲಿ ಇದೆಲ್ಲ ಸಹಜ ಎಂದುಕೊಂಡು ನನ್ನ ಪಾಡಿಗೆ ನಾನು ನಿತ್ಯ ವ್ಯವಸಾಯದಲ್ಲಿ ತೊಡಗಿದೆ. ಇದಾದ ಕೆಲವು ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದ ಕೀರ್ತಿಯವರು ಫೋನ್‌ ಮಾಡಿ ತಾವು ಇಳಿದುಕೊಂಡಿದ್ದ ನೆಂಟರ ಮನೆಗೆ ಬರಲು ನನಗೆ ತಿಳಿಸಿದರು. ಆಗ ಕನ್ನಡದ ಹಿರಿಯ ಕವಿಯೊಬ್ಬರ ಹೆಸರನ್ನು ಹೇಳಿ, “ನಿಮ್ಮ ಅವರ ಸಂಬಂಧ ಹೇಗಿದೆ?’ ಎಂದು ಕೇಳಿದರು. “ಅವರನ್ನು ನನ್ನ ಕಾವ್ಯಗುರುವೆಂದೇ ಭಾವಿಸಿದ್ದೇನೆ. ಏನು ಬರೆದರೂ ಅವರಿಗೆ ತೋರಿಸದೆ ಪ್ರಕಟಣೆಗೆ ಕೊಡುವುದಿಲ್ಲ. ಒಂದು ಕೃತಿಯನ್ನು ಅವರಿಗೆ ಅರ್ಪಿಸಿದ್ದೇನೆ ಕೂಡ’ ಎಂದು ತಿಳಿಸಿದೆ. ಕೀರ್ತಿ ನಕ್ಕರು. ಆ ನಗುವಿನಲ್ಲಿ ಏನಿತ್ತೋ!

ಮುಂದೆ ಕೀರ್ತಿಯವರೊಂದಿಗೆ ನನ್ನ ಸಂಬಂಧ ನಿಕಟವಾಗುತ್ತ ಹೋಯಿತು. ಒಮ್ಮೆ ಜಿ. ಬಿ. ಜೋಶಿಯವರೊಂದಿಗೆ ಅವರನ್ನು ಭೇಟಿಯಾದಾಗ ಕೀರ್ತಿ ನನ್ನಿಂದ ಅವರ ಇಷ್ಟದ ಕವಿತೆಗಳನ್ನು ಓದಿಸಿ ಆನಂದಪಟ್ಟಿದ್ದು ನನಗೆ ನೆನಪುಂಟು. ನಾನು ಪದ್ಯ ಓದುವಾಗ ಅವರ ಮುಖದಿಂದ ಹೊಮ್ಮುತ್ತಿದ್ದ ಹರ್ಷೋದ್ಗಾರಗಳನ್ನು ನಾನು ಯಾವತ್ತೂ ಮರೆಯಲಾರೆ. ಅನಂತಮೂರ್ತಿ, ಪುತಿನ, ಜಿಎಸ್‌ಎಸ್‌ ಕೂಡ ಕುರ್ತಕೋಟಿಯವರಂತೆಯೇ! ಪದ್ಯ ಓದುವಾಗ ನಡುನಡುವೆ ನಿಲ್ಲಿಸಿ ಮತ್ತೂಮ್ಮೆ ಆ ಸಾಲು ಓದು ಎಂದು ಕಾವ್ಯಭಾಗಗಳನ್ನು ಆಸ್ವಾದಿಸುತ್ತಿದ್ದ ಪರಿ ಮತ್ತೆ ಮತ್ತೆ ನನಗೆ ನೆನಪಾಗುತ್ತದೆ.

1985ರ ಸುಮಾರು. ಕೀರ್ತಿ ಯಾವುದೋ ಸಾಹಿತ್ಯಕ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ನನಗೆ ಫೋನ್‌ ಮಾಡಿ, “ನಾನು ಗಾಂಧಿಬಜಾರ ಸಮೀಪ ಇಂಥವರ ಮನೆಯಲ್ಲಿ ಉಳಿದಿದ್ದೇನೆ. ಬೆಳಿಗ್ಗೆ ಬಿಡುವು ಮಾಡಿಕೊಂಡು ಬನ್ನಿ. ಮಾತಾಡೋಣ’ ಎಂದರು. ಆಗ ನನ್ನ ಬಳಿ ಸ್ಕೂಟರ್‌ ಒಂದಿತ್ತು. ನಾನು ಕೀರ್ತಿಯವರನ್ನು ಅವರ ಬಂಧುಗಳ ಮನೆಯಲ್ಲಿ ಭೆಟ್ಟಿಯಾದೆ. ಸ್ವಲ್ಪ$ಹೊತ್ತು ಹಾಡುಹರಟೆ ಆದ ಮೇಲೆ ಮೂರ್ತಿ, “ನಾನು ನಿಮ್ಮ ಮನೆಯನ್ನು ಒಮ್ಮೆ ನೋಡಬೇಕಲ್ಲ’ ಎಂದರು. “ನನ್ನ ಬಳಿ ಕಾರ್‌ ಇಲ್ಲ. ಸ್ಕೂಟರ್‌ ಇದೆ. ಪರವಾಗಿಲ್ಲವಾ?’ ಎಂದೆ. ಕೀರ್ತಿ ತಂಬುಲ ಸೂಸುವಂತೆ ನಕ್ಕು ಸ್ಕೂಟರ್‌ ಹತ್ತಿ “ನನಗೆ ಅಭ್ಯಾಸವಿದೆ’ ಎಂದು ಗೋಣು ಆಡಿಸಿದರು. ನನ್ನ ಸ್ಕೂಟರಲ್ಲಿ ಕೀರ್ತಿಯವರನ್ನು ತ್ಯಾಗರಾಜ ನಗರದ ನನ್ನ ಬಾಡಿಗೆ ಮನೆಗೆ ಕರೆದುಕೊಂಡು ಬಂದೆ! ನನ್ನ ಹೆಂಡತಿಗೆ ಖುಷಿಯೋ ಖುಷಿ. ನನ್ನ ಪತ್ನಿಯೊಂದಿಗೆ, ಅಜ್ಜಿಯರೊಂದಿಗೆ, ಮಕ್ಕಳೊಂದಿಗೆ ಕೀರ್ತಿ ಸಲುಗೆಯಿಂದ ಮಾತಾಡಿದರು. ನನ್ನ ಪತ್ನಿ ಬೇಗ ಬೇಗ ಉಪ್ಪಿಟ್ಟು ತಯಾರಿಸಿದಳು. “ಆಹಾ! ಉಪ್ಪಿಟ್ಟು ಸೊಗಸಾಗಿದೆ ತಾಯೀ’ ಎನ್ನುತ್ತ ಕೀರ್ತಿ ಉಪಹಾರ ಮಾಡಿದರು! “ನನಗೆ ಕಾಫಿ ಬೇಡ! ಚಾ ಆದರೆ ನಡೆದೀತು’ ಎಂದರು ಕೀರ್ತಿ. ತನಗೆ ಚಾ ಮಾಡಲು ಚೆನ್ನಾಗಿ ಬಾರದು ಎಂಬ ಸಂಕೋಚ ನನ್ನ ಪತ್ನಿಗೆ. ಹೇಗೋ ಚಹಾ ಎಂಬುದನ್ನು ಸಿದ್ಧಪಡಿಸಿದಳು. ಚಹಾ ಕೀರ್ತಿಯವರಿಗೆ ರುಚಿಸಿರಬಹುದೆ? ಅವರ ವಿಮರ್ಶೆ ಏನು ಎಂದು ಕುತೂಹಲದಿಂದ ಅವರ ಮುಖ ನೋಡುತ್ತಿದ್ದೆ. ಅವರು ಯಾವುದೋ ಕಾವ್ಯವನ್ನು ನನಗೆ ವಿವರಿಸುವ ಉತ್ಸಾಹದಲ್ಲಿದ್ದರು. ಅವರಿಗೆ ಆಗ ಕಾಫಿ ಕೊಟ್ಟಿದ್ದರೂ ಅದನ್ನು ಟೀಯೆಂದೇ ಚಪ್ಪರಿಸಿ ಪ್ರಾಯಃ ಸವಿಯುತ್ತಿದ್ದರೇನೋ! ಹರಟೆ ಒಂದಿದ್ದರೆ ಸಾಕು. ಜೊತೆಗೆ ಅವರ ಮಾತು ಕೇಳುವ ಆಸಕ್ತರು! ಊಟ, ನಿದ್ರೆ ಯಾವುದೂ ಅವರಿಗೆ ಬೇಕಾಗುತ್ತಿರಲಿಲ್ಲ.

ಧಾರವಾಡಕ್ಕೆ ಹೋದಾಗ ಕಣವಿ ಯವರ ಮನೆಗೆ ಹೋಗುವಂತೆ ಕೀರ್ತಿ ಯವರ ಮನೆಗೂ ಹೋಗುತ್ತಿದ್ದೆ. ಆಗ ಸಾಮಾನ್ಯವಾಗಿ ಪಟ್ಟಣಶೆಟ್ಟರ ಮನೆಯಲ್ಲಿ ಉಳಿದು ಹೇಮಾ ಅವರ ರೊಟ್ಟಿ ಎಣ್ಣೆಗಾಯಿ ಸವಿಯುವುದು ನನ್ನ ರೂಢಿಯಾಗಿತ್ತು! ಆಮೇಲೆ ಆಮೂರರು ಧಾರವಾಡಕ್ಕೆ ಬಂದರು. ಗಿರಡ್ಡಿಯವರ ನಿಕಟ ಪರಿಚಯವಾಯಿತು. ಮಲ್ಲಾಡಿಹಳ್ಳಿ ಬಿಟ್ಟು ರಾಘವೆಂದ್ರ ಪಾಟೀಲ ಧಾರವಾಡದಲ್ಲಿ ನೆಲೆಸಿದರು. ಅವರಿಂದ ಮಲ್ಲಿಕಾರ್ಜುನ ಹಿರೇಮಠರ ಪರಿಚಯವಾಯಿತು. ವಾರಾನ್ನದ ವಿದ್ಯಾರ್ಥಿಯಾಗಿ ತಿಂಗಳುಗಟ್ಟಲೆ ನಾನು ಆರಾಮಾಗಿ ಈಗ ಧಾರವಾಡದಲ್ಲಿ ಇರಬಹುದು!

ನನ್ನ ಋತುವಿಲಾಸಕ್ಕೆ ಕೀರ್ತಿಯವರು ಮುನ್ನುಡಿ ಬರೆದ ಸಂಗತಿ ಈಗ ಹೇಳಲೇ ಬೇಕು. ಯವನಿಕಾದ ಯಾವುದೋ ಒಂದು ಸಭೆ. ಕಾರ್ಯಕ್ರಮ ಮುಗಿದು ಕೀರ್ತಿ ಮೆಟ್ಟಿಲು ಇಳಿದು ಕೆಳಗೆ ಬರುತ್ತಿದ್ದಾರೆ. ನಾನು ಅವರ ಪಕ್ಕದಲ್ಲಿ. ನನ್ನ ಹೆಗಲು ಬ್ಯಾಗಿಂದ ಋತುವಿಲಾಸದ ಹಸ್ತಪ್ರತಿ ತೆಗೆದು ಅಲ್ಲೇ ಕೀರ್ತಿಯವರಿಗೆ ಕೊಡುತ್ತೇನೆ. ಮೆಟ್ಟಿಲು ಇಳಿಯುತ್ತಿದ್ದ ಕೀರ್ತಿಯವರು ಮೆಟ್ಟಿಲ ಮೇಲೇ ಒಂದು ಕ್ಷಣ ನಿಂತು ನಾಕಾರು ವೃತ್ತಗಳನ್ನು ಓದುತ್ತಾರೆ. ತಕ್ಷಣ ನನ್ನ ಬೆನ್ನು ಚಪ್ಪರಿಸಿ, “ಮೂರ್ತಿ… ಈ ಅನುವಾದಕ್ಕೆ ನಾನೇ ಮುನ್ನುಡಿ ಬರೆಯುತ್ತೇನೆ!’ ಎನ್ನುತ್ತಾರೆ. ಇದು ನನ್ನ ಸಾಹಿತ್ಯಕ ಜೀವನದಲ್ಲಿ ನನಗೆ ದೊರೆತ ಅಯಾಚಿತ ಭಾಗ್ಯ.

ಕೀರ್ತಿಯವರು ಬರೆದ ಮುನ್ನುಡಿಗಳು ಪ್ರಕಟವಾಗಿವೆ. ಆದರೆ, ಅವರು ಬರೆದ ಪತ್ರಗಳನ್ನು ನಾನು ಪ್ರಕಟಮಾಡಿಲ್ಲ. ಅದು ನನ್ನ ಖಾಸಗಿ ಸಂಪತ್ತಾಗಿ ನನ್ನೊಂದಿಗೇ ಇರಲಿ ಎಂದು ನಾನು ಬಯಸುತ್ತೇನೆ. ಈಚೆಗೆ ಅಭಿನವದ ರವಿಕುಮಾರ್‌ ನಾನು ಕುಮಾರವ್ಯಾಸನ ಕಾವ್ಯದ ಬಗ್ಗೆ ಬರೆಯುತ್ತಿರುವ ಸಂಪುಟಗಳನ್ನು ಪ್ರಕಟಿಸುತ್ತಿದ್ದಾರೆ. ಅವುಗಳಲ್ಲಿ ಒಂದು ಸಂಪುಟವನ್ನು ನಾನು ಕೀರ್ತಿಯವರಿಗೇ ಅರ್ಪಿಸಿದ್ದೇನೆ. ಅದು ಕೀರ್ತಿಯೆಂಬ ಪರೋಕ್ಷ ಗುರುವಿಗೆ ಒಪ್ಪಿಸಲಾದ ನನ್ನ ಪ್ರೀತಿಯ ಕಾಣಿಕೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.