ಪುಟ್ಟ ಕತೆಗಳು

Team Udayavani, May 12, 2019, 6:00 AM IST

ಸಾಂದರ್ಭಿಕ ಚಿತ್ರ

ಕಾಡು ಗುಲಾಬಿ
ಅದೊಂದು ದೊಡ್ಡ ಬಂಗಲೆ. ಅದರ ಸುತ್ತಲೂ ಹಾಕಲಾಗಿದ್ದ ಸಾಧಾರಣ ಎತ್ತರದ ಗಡಿ ಗೋಡೆಯ ಮೇಲೆ ವಿವಿಧ ಹೂವುಗಳ ಕುಂಡಗಳು. ಅದರಲ್ಲಿ ಒಂದು ಗುಲಾಬಿ ಗಿಡದಲ್ಲಿ ಮೂರ್ನಾಲ್ಕು ಬಣ್ಣಗಳ ಹೂವುಗಳು ಅರಳಿ, ನೋಡುಗರ ಮನ ಸೆಳೆಯುತ್ತಿದ್ದವು. ಗೋಡೆಯ ಪಕ್ಕಕ್ಕೆ ಬಂದವರು ಆ ಗುಲಾಬಿ ಗಿಡದ ಬಳಿ ಒಂದೆರಡು ಕ್ಷಣವಾದರೂ ನಿಂತು ಮುಂದಕ್ಕೆ ಸಾಗುತ್ತಾರೆ. ಆಕರ್ಷಕ ಗುಲಾಬಿ ಗಿಡ.

ಆ ಗಡಿ ಗೋಡೆಯ ಹೊರಭಾಗದಲ್ಲಿ ಅರಣ್ಯದ ರೀತಿಯಲ್ಲಿ ಅನೇಕ ಮರಗಿಡಗಳು ಬೆಳೆದುಕೊಂಡಿದ್ದವು. ಆ ಸ್ಥಳ ಹೊಸ ಮನೆಯನ್ನು ಕಟ್ಟುವವರ ಕಣ್ಣಿಗೆ ಬಿದ್ದಿರಲಿಲ್ಲವೋ ಅಥವಾ ಸ್ಥಳದ “ದರ’ ದುಬಾರಿಯೋ ಗೊತ್ತಿಲ್ಲ. ಅಂತೂ ಮರಗಿಡಗಳಿಗೆ ಅದು ಸ್ವರ್ಗವಾಗಿತ್ತು. ಅಲ್ಲೊಂದು ಗುಲಾಬಿ ಗಿಡ; ಒಂದೇ ಬಣ್ಣದ ಹೂವುಗಳನ್ನು ಬಿಡುವ ಗುಲಾಬಿ ಗಿಡ. ಸ್ವಲ್ಪ ಎತ್ತರಕ್ಕೆ ಬೆಳೆದು ನಿಂತಿತ್ತು. ಗಿಡದ ತುಂಬ ಬರೇ ಮುಳ್ಳು; ಯಾರೂ ಅದರ ಹತ್ತಿರಕ್ಕೆ ಹೋಗುವುದಿಲ್ಲ; ಹೂವನ್ನು ಕೀಳುವವರೂ ಇಲ್ಲ.

ಅದೊಂದು ದಿನ ಕಾಡು ಗುಲಾಬಿ ಗಿಡದ ದೃಷ್ಟಿ ಗಡಿ ಗೋಡೆಯ ಮೇಲಿದ್ದ ಕುಂಡದಲ್ಲಿ ಕಂಗೊಳಿಸುತ್ತಿದ್ದ ಗುಲಾಬಿ ಗಿಡದ ಮೇಲೆ ಬಿತ್ತು. “ಅರೆ! ನನ್ನದೇ ಜಾತಿಯ ಗಿಡ; ಗೆಳೆತನ ಮಾಡಬಹುದು’ ಅನ್ನಿಸಿದ್ದೇ ತಡ; ಆ ಗಿಡವನ್ನು ಮಾತಿಗೆಳೆಯಿತು.

“”ಹಲೋ…” ಕರೆಯಿತು. ಉತ್ತರ ಬರಲಿಲ್ಲ. ಮತ್ತೆರಡು ಬಾರಿ ಕರೆಯಿತು, ನ್ಯಾಯಾಲಯದಲ್ಲಿ ಕರೆಯುವಂತೆ. ಈಗ ಕುಂಡದಲ್ಲಿದ್ದ ಗುಲಾಬಿ ಗಿಡ ಮಾತನಾಡಿತು, “”ಏನು? ಏನಾಗಬೇಕು?”

ಅದು ಮಾತನಾಡಿದ ಶೈಲಿ ಕಾಡು ಗುಲಾಬಿ ಗಿಡಕ್ಕೆ ಇಷ್ಟವಾಗಲಿಲ್ಲ. ಆದರೂ ಉತ್ತರ ನೀಡಿತು, “”ಏನಿಲ್ಲ, ಹಾಗೇ ನಿನ್ನನ್ನು ನೋಡಿದೆ; ನಾವಿಬ್ಬರೂ ಒಂದೇ ಜಾತಿಯವರು ಎನ್ನಿಸಿತು. ಸ್ನೇಹ ಬೆಳೆಸೋಣ ಎನ್ನಿಸಿತು; ದಿನಾಲೂ ಮಾತನಾಡುತ್ತಿರಬಹುದಲ್ಲವೇ? ಪಕ್ಕದಲ್ಲಿಯೇ ಇದ್ದೇವೆ.”

ಅದರ ಮಾತನ್ನು ಕೇಳಿ ಕುಂಡದ ಗುಲಾಬಿಯ ಗಿಡ ಸೊಟ್ಟಗಾಯಿತು. ನೋಟ ಓರೆಯಾಯಿತು. ಧ್ವನಿ ಒರಟಾಯಿತು…

“”ಛೀ, ನಿನ್ನೊಂದಿಗೆ ಸ್ನೇಹ ಬೆಳೆಸೋದಾ! ನಾನು ಎಷ್ಟು ಎತ್ತರದಲ್ಲಿದ್ದೀನಿ ನೋಡು; ನನ್ನಲ್ಲಿ ಎಷ್ಟು ಬಣ್ಣದ ಹೂವು ಬಿಡುತ್ತವೆ ನೋಡು; ನನ್ನನ್ನು ಮಾನವರು ಎಷ್ಟು ಪ್ರೀತಿಯಿಂದ ನೋಡುತ್ತಾರೆ ನೋಡು; ನಾನೆಷ್ಟು ಸುಂದರವಾಗಿದ್ದೇನೆ ನೋಡು; ನಂತರ ಮಾತನಾಡು…”

ಕಾಡು ಗುಲಾಬಿ ಗಿಡ ಮತ್ತೆ ಮಾತನಾಡಲಿಲ್ಲ. ಕುಂಡದ ಗುಲಾಬಿ ಗಿಡ ಕಾಣಿಸದಂತೆ ತನ್ನ ದೇಹದ ನಿಲುವಿನ ದಿಕ್ಕನ್ನು ಬದಲಿಸಿಕೊಂಡಿತು. “ತಿರಸ್ಕರಿಸುವವರ ಜೊತೆ ಸ್ನೇಹವೇ! ಬೇಡ’ ಎಂದುಕೊಂಡು ಸುಮ್ಮನಾಯಿತು.

ಕೇವಲ ಕೆಲವು ದಿನಗಳು ಕಳೆದಿದ್ದವು. ಕಾಡು ಗುಲಾಬಿ ಗಿಡಕ್ಕೆ ಮನಸ್ಸು ತಡೆಯಲಿಲ್ಲ. ಕುಂಡದ ಗುಲಾಬಿಯನ್ನು ನೋಡಬೇಕು ಎನ್ನಿಸಿತು; ಜಾತ್ಯಾಭಿಮಾನ! ಅದರತ್ತ ತಿರುಗಿತು. ಆಶ್ಚರ್ಯ! ಆ ಸುಂದರ ಗುಲಾಬಿ ಗಿಡದ ಎಲೆಗಳು ಒಣಗಿಹೋಗಿದ್ದವು; ಹೂವುಗಳ ಎಸಳುಗಳು ಬಹುತೇಕ ಉದುರಿದ್ದವು; ಕಾಂಡವೂ ಒಣಗುತ್ತಿದ್ದವು. “ಏನಾಯಿತು’ ಕೇಳ್ಳೋಣವೇ? ಯಾಕೋ ಮಾತನಾಡಿಸಬೇಕು ಎನ್ನಿಸಲಿಲ್ಲ. ಕೆಲವೇ ಸಮಯದಲ್ಲಿ ಆ ಬಂಗಲೆಯ ಯಜಮಾನಿಯ ಜೋರಾದ ಧ್ವನಿ ಮೊಳಗಿತು. ಆಕೆಯ ಜೊತೆಯಲ್ಲಿ ಮನೆಯ ಕೆಲಸದವನಿದ್ದ. ಬಹುಶಃ ಆಕೆ ಕೂಗಾಡುತ್ತಿದ್ದುದೇ ಆತನ ಮೇಲೆಯೇ ಎಂದುಕೊಂಡಿತು ಕಾಡು ಗುಲಾಬಿ ಗಿಡ.

“”ನಿಮಗೆಲ್ಲಾ ಸಂಬಳ ಕೊಡೋದು ವೇಸ್ಟ್‌. ನಾಲಾಯಕ್‌. ಒಂದು ವಾರ ಊರಿಗೆ ಹೋಗಿ ಬರುವುದರೊಳಗೆ ಕಾಂಪೌಂಡ್‌ ಹೇಗಾಗಿ ಹೋಗಿದೆ ನೋಡು. ಜವಾಬ್ದಾರಿ ಇಲ್ವಾ? ಕುಂಡದಲ್ಲಿನ ಗಿಡಗಳಿಗೆ ನೀರನ್ನೇ ಹಾಕಿಲ್ವಾ? ಎಲ್ಲಾ ಒಣಗಿಹೋಗಿವೆ! ನನ್ನ ನೆಚ್ಚಿನ ಗುಲಾಬಿ ಗಿಡವೂ ಸತ್ತುಹೋಗಿದೆ. ಇನ್ನೇನು ಮಾಡ್ತೀಯಾ; ಕಿತ್ತು ಬಿಸಾಕು… ನಾಳೆಯಿಂದ ನೀನೂ ಕೆಲಸಕ್ಕೆ ಬರಬೇಡ… ಛೀ…”

ಮಗು ಅಳುತ್ತಿದೆ!
ವನಜಾ ತುಂಬಾ ಶ್ರೀಮಂತೆ. ಒಳ್ಳೆಯ ಉದ್ಯೋಗ, ಗಂಡನಿಗೂ ಒಳ್ಳೆಯ ನೌಕರಿ, ಕೈ ತುಂಬಾ ಸಂಬಳ, ಕೈಗೊಂದು ಕಾಲಿಗೊಂದು ಆಳು-ಕಾಳು, ದುಬಾರಿ ಕಾರು, ಐಶಾರಾಮಿ ಜೀವನ. ಅಂದು ಭಾನುವಾರ, ಕೆಲಸಕ್ಕೆ ಆ ದಿನ ರಜೆ. “ಜೀವನ ತುಂಬಾ ಬ್ಯುಸಿಯಾಗಿ ಹೋಗಿದೆ; ದಿನಕ್ಕೊಂದು ಜವಾಬ್ದಾರಿ; ಎಲ್ಲರಿಂದ ಹೊಗಳಿಕೆ; ಹಾರ, ತುರಾಯಿ, ಸನ್ಮಾನ; ಈ ದಿನ ಯಾರೇ ಆಮಂತ್ರಿಸಲಿ, ಮನೆಯಿಂದ ಹೊರಕ್ಕೆ ಹೋಗಬಾರದು, ಒಂದು ವರ್ಷದ ಮಗ ಅಭಿಗಾಗಿ ಈ ದಿನ ಮೀಸಲು. ಆತನನ್ನು ತುಂಬ ಮುದ್ದಾಡಬೇಕು; ಆತನಿಗೆ ಏನು ಬೇಕೋ ಎಲ್ಲಾ ಕೊಡಿಸಬೇಕು; ಅಮ್ಮನ ಪ್ರೀತಿಯ ಕಡಲಿನಲ್ಲಿ ಆತ ತೇಲಬೇಕು; ಆ ರೀತಿಯಲ್ಲಿ ಈ ದಿನವನ್ನು ಕಳೆಯಬೇಕು’

ಬೆಳಿಗ್ಗೆ ಏಳುತ್ತಲೇ ಆಕೆ ನಿರ್ಧರಿಸಿಕೊಂಡಿದ್ದಳು. ಪ್ರತಿ ಭಾನುವಾರ ಆಕೆ ಏಳುತ್ತಿದ್ದುದು “ವೆರಿ ಅರ್ಲಿ ಮಾರ್ನಿಂಗ್‌’ ಹತ್ತು ಗಂಟೆ ಕಳೆದ ಮೇಲೆಯೇ. ಅದೂ ಪತಿರಾಯ ಎಬ್ಬಿಸಿದರೆ. ಇಲ್ಲದಿದ್ದರೆ, ಹೊಟ್ಟೆ ತಾಳ ಹಾಕಿದರೆ! ಏಕೆಂದರೆ, ವನಜಾ ವಾರಪೂರ್ತಿ ಬಹಳ ಬ್ಯುಸಿ. ದಣಿದ ಶರೀರಕ್ಕೆ ವಿಶ್ರಾಂತಿ ಬೇಕಲ್ಲವೆ? ಆದರೆ, ಈ ದಿನ ಆಕೆಯ ಪತಿರಾಯ ಯಾವುದೋ ಜಮೀನನ್ನು ನೋಡಿಕೊಂಡು ಬರುವುದಕ್ಕೆ ಬೇರೆ ಊರಿಗೆ ಹೋಗಿದ್ದ. ಮನೆಯಲ್ಲಿ ಅಂದು ಆಕೆ, ಆಕೆಯ ಮುದ್ದಿನ ಮಗ ಅಭಿ ಹಾಗೂ ಮನೆ ಕೆಲಸದಾಕೆ ದೀಪಾ ಮಾತ್ರ.

ಬೆಳಗಿನಿಂದಲೂ ಆಕೆ ಮಗನನ್ನು ಎತ್ತಿಕೊಂಡೇ ಇದ್ದಳು; ಆದರೆ, ಅದೇಕೋ ಆತ ಬಾಯಿ ಮುಚ್ಚುತ್ತಿರಲಿಲ್ಲ; ತುಂಬಾ ರಗಳೆ ಮಾಡುತ್ತಿದ್ದ. ಹಾಲು ಕುಡಿಸಿದಳು, ದುಬಾರಿ ಮೊಬೈಲ್‌ನಲ್ಲಿ ವಿವಿಧ ರೀತಿಯ ಚಿತ್ರಗಳನ್ನು- ದೃಶ್ಯಗಳನ್ನು ತೋರಿಸಿದಳು, ಹಾಡು ಕೇಳಿಸಿದಳು, ವಿವಿಧ ಆಟಿಕೆಗಳನ್ನು ನೀಡಿದಳು, ಎತ್ತಿ ಮುದ್ದಾಡಿದಳು… ಊಹೂn… ಮಗು ಅಳು ನಿಲ್ಲಿಸಲಿಲ್ಲ. ಕೊನೆಗೆ ದಾರಿ ಕಾಣದಾದಳು; ಆದರೂ ಮಗನ ಮೇಲೆ ಕೋಪಿಸಿಕೊಳ್ಳಬಾರದೆಂದು ಮೊದಲೇ ತೀರ್ಮಾನಿಸಿದ್ದಳು. ದೀಪಾಳನ್ನು ಕರೆದು, “ನಾನು ಸ್ನಾನ ಮಾಡಿ ಬರುತ್ತೇನೆ; ಸ್ವಲ್ಪ ಇವನನ್ನು ನೋಡ್ಕೊ…’

ವನಜಾ ಎಂದಿಗಿಂತ ಸ್ವಲ್ಪ ನಿಧಾನವಾಗಿಯೇ ಸ್ನಾನ ಮಾಡಿದಳು. ನಡುನಡುವೆ ಆಲಿಸಿದಳು; ಮಗುವಿನ ರೋದನದ ಶಬ್ದವಿಲ್ಲ; ಸ್ವಲ್ಪ ಗಾಬರಿ ಆಯಿತು. ಸ್ನಾನ ಮುಗಿಸಿ ಬಂದು ಮನೆಯ ವಿವಿಧ ಕೋಣೆಗಳನ್ನು ನೋಡಿದಳು; ಮಗು ಹಾಗೂ ದೀಪಾ ಕಾಣಿಸಲಿಲ್ಲ. ಕೆಲಸಕ್ಕೆ ಬಂದು ಕೇವಲ ಆರು ತಿಂಗಳಾಗಿದೆ ಅಷ್ಟೇ; ಮಗುವಿನ ಜೊತೆಗೆ ಎಲ್ಲಿಗಾದರೂ… ಏನೋ ಅನುಮಾನ. ಸಹಜ; ಏಕೆಂದರೆ ವನಜ ಆಗರ್ಭ ಶ್ರೀಮಂತೆ. ಕೊನೆಗೆ ಮನೆಯ ವಿಶಾಲ ಹಾಲ್‌ನಲ್ಲಿ ನಿಂತು ಜೋರಾಗಿ ಒಂದು ಕೂಗು ಹಾಕಿದಳು,
“”ದೀಪಾ, ಮಗು ಎಲ್ಲಿ?”
ತಕ್ಷಣ ಅಡುಗೆ ಮನೆಯ ಮೂಲೆಯಿಂದ ಉತ್ತರ ಬಂತು, “”ಇಲ್ಲೇ ಇದೆ ಅಮ್ಮಾವ್ರೇ…”
ಗಾಬರಿ, ಆತಂಕ, ಸಂತೋಷ, ವಿವಿಧ ಭಾವನೆಗಳನ್ನು ಏಕಕಾಲದಲ್ಲಿ ಹೊತ್ತು ವನಜಾ ಅಡುಗೆ ಕೋಣೆಗೆ ಬಂದಳು. ಅಲ್ಲಿ ಆಕೆ ಕಂಡಿದ್ದು…

ಅಡುಗೆ ಕೋಣೆಯ ಒಂದು ಮೂಲೆ; ರೊಟ್ಟಿ ಮಾಡುವುದಕ್ಕಾಗಿ ಅಕ್ಕಿಹಿಟ್ಟನ್ನು ತನ್ನ ಬಲಗೈಯಿಂದ ಕಲೆಸುತ್ತ ಕುಳಿತಿದ್ದ ದೀಪಾ; ಆಕೆಯ ಬೆನ್ನಿನ ಮೇಲೆ ಮಲಗಿ, ತನ್ನೆರಡೂ ಕೈಗಳಿಂದ ದೀಪಾಳ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಲಘುವಾಗಿ “ಜೋಕಾಲಿ’ ಆಡುತ್ತ ನಗುತ್ತಿದ್ದ ಅಭಿ… ಆತ ಬೀರುತ್ತಿದ್ದ ಮಂದಹಾಸ, ವನಜಾ ಬಂದರೂ ತನ್ನ ಆಟವನ್ನು ನಿಲ್ಲಿಸದೇ “ಇನ್ನೂ ಜೋರಾಗಿ’ ಎಂದು ದೀಪಾಳ ಬೆನ್ನನ್ನು ತನ್ನ ಮೃದು ಕಾಲಿನಿಂದ ಒದೆಯುತ್ತಿದ್ದ ಮುದ್ದು ಕಂದ…
ನೋಡುತ್ತಿದ್ದಂತೆ ವನಜಾಳ ಯೋಚನಾ ಲಹರಿ “ಗಿರಕಿ’ ಹೊಡೆದಿತ್ತು; ಆಕೆಯ ಕಣ್ಣಂಚಿನಿಂದ ನೆಲದತ್ತ ಜಾರಿತ್ತು ಎರಡು ಹನಿ.

ಜೀವನ ಕಲಾಕೃತಿ!
ಸಾಧನಾ ಹೆಸರಿಗೆ ತಕ್ಕಂತೆ ಸಾಧಕಿಯೇ. ತುಂಬಾ ಕಿರುವಯಸ್ಸಿನಲ್ಲಿಯೇ ಕಲಾಪ್ರಪಂಚದಲ್ಲಿ ರಾಷ್ಟ್ರವ್ಯಾಪಿ ಹೆಸರು ಮಾಡಿದವಳು. ಆಕೆ ಹೆಸರಾಂತ ಚಿತ್ರ ಕಲಾವಿದೆ. ಆಕೆಯ ವಿವಿಧ ಕಲಾಕೃತಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದವು; ಹಾಟ್‌ ಕೇಕ್‌ ಹಾಗೆ.  ಆದರೆ, ಇತ್ತೀಚಿನ ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ! ತಲೆ ತಿನ್ನುವ ಯೋಚನೆಗಳು, ವೈಯಕ್ತಿಕ ಸಮಸ್ಯೆಗಳು, ನಿಂತಲ್ಲಿ ನಿಲ್ಲಲಾಗದ ಕುಳಿತಲ್ಲಿ ಕುಳಿತಿರಲಾಗದ ಪರಿಸ್ಥಿತಿ. ಒಮ್ಮೊಮ್ಮೆ ಆಕೆ ಒಂಟಿಯಾಗಿ ಕುಳಿತು ಯೋಚಿಸುತ್ತಾಳೆ, “ನನಗೇನಾಗಿದೆ! ಪ್ರೀತಿಸಿ ಮದುವೆಯಾದವನಿಗೆ ನಾನು ಕೆಲವೇ ವರ್ಷಗಳಲ್ಲಿ ಹಳಸಲಾಗಿ ಹೋಗಿದ್ದೆ; ಪ್ರೀತಿಯಿಂದ ಬೆಳೆಸಿದ ಮಗನಿಗೆ ನಾನು ಬೇಡವಾಗಿದ್ದೆ; ಯಾರೊಂದಿಗೋ ಲೀವಿಂಗ್‌ನಲ್ಲಿ ಇರುವುದಕ್ಕೆ ಹೊರಟುಹೋದ; ಮದುವೆಯಾಗು ಎಂದರೆ ಅದಕ್ಕೆ ಆತನ ಒಪ್ಪಿಗೆಯಿಲ್ಲ; ನನ್ನ ಮನೆಗೆ ಬರುವುದನ್ನೇ ಬಿಟ್ಟ; ಸೊಸೆಯ ಸ್ಥಾನದಲ್ಲಿರುವವಳು ಗಟ್ಟಿಗಿತ್ತಿಯೇ ಇರಬೇಕು!’

ಸಂಜೆಯಾಗಿತ್ತು. ಬೇಸರ ಕಳೆಯುವುದಕ್ಕೆ ಆಕೆ ನೋಡಿಕೊಂಡಿದ್ದ ಸ್ಥಳ ಸಮೀಪದಲ್ಲಿಯೇ ಇದ್ದ ಉದ್ಯಾನವನ. ಎಂದಿನಂತೆ ಇಂದೂ ಅಲ್ಲಿಗೆ ಹೊರಟಳು ಸಾಧನಾ. ಆ ಪ್ರದೇಶಕ್ಕೆ ಆಕೆ ಬಂದು ಒಂದೆರಡು ವರ್ಷಗಳಾಗಿದ್ದವು ಅಷ್ಟೇ. ಆಕೆ ಕಲಾವಿದೆ ಎನ್ನುವುದು ಅಲ್ಲಿನ ಬಹಳ ಜನರಿಗೆ ತಿಳಿದಿಲ್ಲ. ಮಾಮೂಲಿನಂತೆ ಅಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತಳು. ಕೆಲವೇ ಸಮಯದಲ್ಲಿ ಆಕೆಯ ನೋಟ ಉದ್ಯಾನವನದ ಗೇಟಿನ ಕಡೆಗೆ ಹರಿಯಿತು.

ಹದಿನೈದು-ಹದಿನಾರು ವಯಸ್ಸಿನ ಒಬ್ಬ ಬಾಲಕ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ. ಯಾರೇ ಆಗಮಿಸಲಿ, ಅವರತ್ತ ಸ್ವಲ್ಪ ದೈನ್ಯ ನೋಟ ಬೀರುತ್ತಿದ್ದ. ಆತನ ವರ್ತನೆಯನ್ನು ನೋಡಿ ಸಾಧನಾಳಿಗೆ ಅಸಹ್ಯವೆನ್ನಿಸಿತು. ಕೈಕಾಲು ಗಟ್ಟಿಯಾಗಿರುವ, ಆರೋಗ್ಯವಂತನಾಗಿರುವ ಆತ ಭಿಕ್ಷೆ ಬೇಡುವ ರೀತಿಯಲ್ಲಿ ಓಡಾಡುತ್ತಿರುವುದು ಆಕೆಗೆ ಸರಿಯೆನ್ನಿಸಲಿಲ್ಲ. ಆತನಿಗೆ ಬುದ್ಧಿ ಹೇಳುವ ಸಲುವಾಗಿ ತನ್ನ ಬಳಿಗೆ ಕರೆದಳು.

“”ಏ ಹುಡುಗ, ಕೈಕಾಲು ಗಟ್ಟಿಯಾಗಿರುವ ನೀನು ಭಿಕ್ಷೆ ಬೇಡುತ್ತಿರುವೆಯಲ್ಲ, ನಾಚಿಕೆಯಾಗಲ್ವ?”
ಆಕೆಯ ಪ್ರಶ್ನೆಗೆ ಆತ ಗಾಬರಿಯಾದಂತೆ ಕಂಡುಬಂದ. ಆದರೂ ಚೇತರಿಸಿಕೊಳ್ಳುತ್ತ ಉತ್ತರಿಸಿದ,
“”ನಾನು ಭಿಕ್ಷೆ ಬೇಡುತ್ತಿಲ್ಲ ಮೇಡಮ್‌, ನನಗೇನಾಗಿದೆ! ಯಾರು ಹೇಳಿದ್ದು, ನಾನು ಭಿಕ್ಷೆ ಬೇಡುತ್ತಿದ್ದೇನೆ ಎಂದು?”
“”ಗೇಟಿನ ಬಳಿ ಮತ್ತೇನು ಮಾಡುತ್ತಿದ್ದೀಯ?”
“”ನಾನು ಕೆಲಸ, ಅರೆಕಾಲಿಕ ಕೆಲಸ ಹುಡುಕುತ್ತಿದ್ದೇನೆ.”
“”ಯಾಕೆ, ಏನಾಯ್ತು?”
“”ಮೇಡಮ್‌, ನಾನು ಚೆನ್ನಾಗಿ ಓದಬೇಕು; ಒಳ್ಳೆಯ ಉದ್ಯೋಗಕ್ಕೆ ಸೇರಬೇಕು. ಆದರೆ, ನನ್ನ ತಂದೆ ಎರಡು ತಿಂಗಳ ಹಿಂದೆ ತೀರಿಕೊಂಡರು. ನನಗೆ ಇಬ್ಬರು ತಂಗಿಯರು. ಅಮ್ಮ ಓದಿದವಳಲ್ಲ. ಸಂಸಾರ ನಿಭಾಯಿಸಬೇಕು; ನಾನು ಓದಬೇಕು. ಅದಕ್ಕೆ ನನಗೊಂದು ಕೆಲಸ ಬೇಕು. ದಿನದಲ್ಲಿ 2-3 ತಾಸು, ಸಂಜೆಯ ಹೊತ್ತಿನಲ್ಲಿ ಕೆಲಸ ಮಾಡಬೇಕು ಅಂತಿದ್ದೀನಿ. ಪ್ಲೀಸ್‌ ಮೇಡಮ್‌, ಸಹಾಯ ಮಾಡಿ…”

ಆತನ ಉತ್ತರ ಕೇಳಿ ಸಾಧನಾಳಿಗೆ ಶಾಕ್‌! ತಾನೇಕೆ ಆತನ ಬಗ್ಗೆ ತಪ್ಪಾಗಿ ಯೋಚಿಸಿದೆ! ಅರ್ಥವಾಗಲಿಲ್ಲ. ಅಷ್ಟೇ ಅಲ್ಲ; ಆತ ತಾನು ಕಳೆದುಕೊಂಡ ತಂದೆಯ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ; ಬದಲಿಗೆ, ತನ್ನ ಮುಂದಿನ ಸುಂದರ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾನೆ!

ಆಕೆಗೆ ಇದ್ದಕ್ಕಿದ್ದಂತೆ ಏನೋ ಯೋಚನೆ ಹೊಳೆಯಿತು. “”ನಾಳೆ ಸಂಜೆಯ ವೇಳೆ ನನ್ನನ್ನು ಬಂದು ಕಾಣು…” ಹೇಳಿ ಆತನಿಗೆ ತನ್ನ ಮನೆಯ ವಿಳಾಸ ನೀಡಿದಳು. ಆತ ಆಕೆಗೆ ಧನ್ಯವಾದ ತಿಳಿಸಿ ಹೊರಟುಹೋದ. ಆಕೆಯ ಮನಸ್ಸಿನಲ್ಲಿ ಕವಿದಿದ್ದ ಮೋಡ ತಿಳಿಯಾದ ಅನುಭವ. ಮನೆಗೆ ಹೋಗಿ ಊಟ ಮಾಡಿ, ಆ ರಾತ್ರಿಯನ್ನು ಸುಖ ನಿದ್ರೆಯಲ್ಲಿ ಕಳೆದಳು.

ಮಾರನೆಯ ದಿನ ಬೆಳಿಗ್ಗೆ ಆಕೆಯ ಮನೆಯ ಮುಂದೆ “ಸಾಧನಾ ಕಲಾ ಶಾಲೆ’ ಫ‌ಲಕ ನೇತಾಡುತ್ತಿತ್ತು; ಆಕೆ ಅದರ ಕೆಳಗೆ ನಿಂತುಕೊಂಡು ಅರಳಿದ ಕಂಗಳಿಂದ ಆ ಫ‌ಲಕವನ್ನೇ ದಿಟ್ಟಿಸುತ್ತಿದ್ದಳು.

ನಾಗ ಎಚ್‌. ಹುಬ್ಳಿ


ಈ ವಿಭಾಗದಿಂದ ಇನ್ನಷ್ಟು

  • ಜಯಂತ್‌ ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆಯಲ್ಲಿನ ಲೇಖನಗಳನ್ನು ದಿನಕ್ಕೊಂದು ಓದುತ್ತಿದ್ದೆ. ಸಮಯವಿರಲಿಲ್ಲ ಅಂತಲ್ಲ, ಎರಡು-ಮೂರು ದಿನಕ್ಕೆ ಮುಗಿದು ಬಿಟ್ಟರೆ...

  • ಆತ ಬಿ.ಎಸ್‌ಸಿ ಮಾಡುತ್ತಿದ್ದರೂ ಹೆಚ್ಚಾಗಿ ಇರುತ್ತಿದ್ದುದು ಅಡಿಕೆ ವಕಾರಿಯಲ್ಲಿ. ಅದು ಕುಟುಂಬದ ದಂಧೆ. ಅಲ್ಲದೆ, ಆತನಿಗೆ ಪ್ರೀತಿಯ ಕೆಲಸ ಅದು. ಅಡಿಕೆ ಕತ್ತರಿಸಿ...

  • ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ....

  • ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ "ಲೆಜೆಂಡ್‌' ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು...

  • ಜಾಗತೀಕರಣ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಹಾಗೆ ಜನಮಾನಸವೂ ತನ್ನ ಅಸ್ಮಿತೆಗಳನ್ನು ಕಾಪಿಟ್ಟುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳತೊಡಗಿತು....

ಹೊಸ ಸೇರ್ಪಡೆ