ಕಾದಂಬರಿ ಕಟ್ಟುವ ಕತೆಗಳು


Team Udayavani, Dec 1, 2019, 6:09 AM IST

ww-12

ಕಾದಂಬರಿ ಎಂದರೆ ಒಂದು ಮಹಾ-ಕತೆ ; ಸೃಷ್ಟಿಯಲ್ಲಿ ಕ್ಷುಲ್ಲಕವಾದದ್ದು ಯಾವುದೂ ಇಲ್ಲ ಎಂಬ ನಂಬಿಕೆಯಲ್ಲಿ ಎಲ್ಲವನ್ನೂ ಒಳಗೊಳ್ಳುವಂಥ ಒಂದು ಜೀವನಗಾಥೆ. ದಿನವೆಂಬ ಪೂರ್ಣ ಅನುಭವವೊಂದು ಕ್ಷಣ ಕ್ಷಣಗಳಾಗಿ ಒಡೆದು, ಬಿಡಿ ಅನುಭವಗಳಾಗಿ ಚದುರಿಹೋಗುತ್ತಿರುವ ಕಾಲಘಟ್ಟವಿದು. ಮೊಬೈಲ್‌ನ ಸಣ್ಣ ಸ್ಕ್ರೀನ್‌ನಲ್ಲಿ ಸಣ್ಣ ಸಣ್ಣದನ್ನೇ ಬಯಸುವ ಮನಸ್ಸುಗಳ ನಡುವೆ ಮಹತ್ತಾದದ್ದು ಯಾರಿಗೆ ಬೇಕು ಎಂಬ ಪ್ರಶ್ನೆ ಎದುರಾಗುವುದು ಸಹಜ, ಆದರೆ, ದೀರ್ಘ‌ ಬರಹಗಳಿಗೂ ಓದುಗರಿದ್ದಾರೆ ಎಂಬುದಕ್ಕೆ ಸಮರ್ಥನೆಯಾಗಿ ಕನ್ನಡದ ಸೃಷ್ಟಿಶೀಲ ಲೇಖಕರು ಕಾದಂಬರಿಗಳನ್ನು ಬರೆಯುತ್ತಲೇ ಇದ್ದಾರೆ. ಅವರಲ್ಲಿ ಕೆಲವರು ಬರೆಯುವ ಕ್ರಿಯೆಗೆ ಕೊಂಚ ವಿರಾಮ ಕೊಟ್ಟು ಮಾತುಕತೆಗೆ ಸಿಕ್ಕಿದಾಗ.


ಜಯಂತ ಕಾಯ್ಕಿಣಿ

ನಿಮಗೆ ಕಾದಂಬರಿ ಬರೆಯಬೇಕೆಂದು ಅನ್ನಿಸುವುದಿಲ್ಲವೆ?
– ಕಾದಂಬರಿ ಬರೆಯುವವರ ಬಗ್ಗೆ ನನಗೆ ಎಳವೆಯಿಂದಲೂ ಬೆರಗು. ಏಕೆಂದರೆ, ವರುಷಗಟ್ಟಲೆ ಬರೆಯುತ್ತಿದ್ದರೂ ಯಾರೊಂದಿಗೂ ಅದನ್ನು ಹಂಚಿಕೊಳ್ಳದೆ ವಿಶಿಷ್ಟವಾದ ಮಾನವೀಯ ಪ್ರಪಂಚದಲ್ಲಿ ಅನಾಮಿಕರಾಗಿ ಕಳೆದುಹೋಗುವ ಅವಕಾಶ ಅದು. ಎಷ್ಟೊಂದು ಪಾತ್ರಗಳ ಜೊತೆ ಬದುಕುವ, ಬೆಳೆಯುವ, ಅಸ್ಥಿರಚಿತ್ತರಾಗುವ, ಚಕಿತಗೊಳ್ಳುವ ಅನುಭವ ಸಾಮೂಹಿಕ ವಿವಾಹವನ್ನು ನಡೆಸಿದಂತೆ. ಬಿಡಿಯ ಹಿಂದೆ ಚಲಿಸುತ್ತ, ಗೊತ್ತಿಲ್ಲದೆ ಇಡಿಯೊಂದು ರೂಪುಗೊಳ್ಳುವ ಪರಿಯನ್ನು ಮನಗಾಣುವ ಪರವಶತೆ.

ಹೆರಳನ್ನು ಮೂರು ಎಳೆಗಳಲ್ಲಿ ಹಿಡಿದು ಜಡೆ ಹೆಣೆದಂತೆ ಅದರ ಕೌಶಲ. ಜಡೆಯನ್ನಾದರೆ ಮೂರೂ ಎಳೆಯನ್ನು ಒಟ್ಟಿಗೇ ಹಿಡಿದು ಕಟ್ಟಬಹುದು. ಆದರೆ, ಕಾದಂಬರಿಯಲ್ಲಿ ಒಂದು ಸಲಕ್ಕೆ ಒಂದೇ ಎಳೆಯನ್ನು ಹಿಡಿದು ಮುಂದುವರಿಯಬೇಕು. ಮುಂದಿನ ಬಿಂದುವಿನಲ್ಲಿ ಉಳಿದ ಎಳೆಗಳೊಂದಿಗೆ ಸೇರುವಾಗ ಆ ಎಳೆಗಳೂ ಪರೋಕ್ಷವಾಗಿ ಬೆಳವಣಿಗೆ ಹೊಂದಿರಬೇಕು. ಕೆಲವು ಪಾತ್ರಗಳಿಗಷ್ಟೇ ವಯಸ್ಸಾಗಿ, ಲೇಖಕನ ಗಮನದಿಂದ ವಂಚಿತವಾಗಿ ಕೆಲವು ಪಾತ್ರಗಳು ಬೆಳೆಯದೇ ಹೋಗುವಂತಿಲ್ಲ! ಪ್ರತಿ ಕಥನಕ್ಕೂ ಅದರದ್ದೇ ಆದ ಕಾಲ, ಕಾಣ್ಕೆ ಮತ್ತು ಕೌಶಲ!

ಯಾಕೋ, ಕಳೆದ ಐದು ದಶಕಗಳ ನನ್ನ ಬರವಣಿಗೆಯಲ್ಲಿ ಕಾದಂಬರಿ ಬರೆಯಬೇಕೆಂದು ನನಗೆ ತೀವ್ರವಾಗಿ ಅನ್ನಿಸಿಯೇ ಇಲ್ಲ. ಆ ವ್ಯವಧಾನ ನನಗಿಲ್ಲವೋ ಅಥವಾ ನಾನು ಮೂಲತಃ ಕಾವ್ಯಪ್ರೇಮಿಯಾದ್ದರಿಂದ, ಧ್ವನಿಶಕ್ತಿಯಲ್ಲಿ ಕಾವ್ಯಕ್ಕೆ ಹೆಚ್ಚು ಸಮೀಪವಿರುವ ಸಣ್ಣಕಥೆಗಳಿಗೇ ನೆಚ್ಚಿಕೊಂಡೆನೋ ಗೊತ್ತಿಲ್ಲ. ನಾನು ತುಂಬಾ ಚಡಪಡಿಕೆಯ ವ್ಯಕ್ತಿ. ರಹಸ್ಯವನ್ನು ಹೆಚ್ಚು ಹೊತ್ತು ಹಂಚಿಕೊಳ್ಳದೇ ಉಳಿಯುವುದು ನನಗೆ ಕಷ್ಟ. ಇಸ್ಪೀಟ್‌ ಎಲೆಗಳನ್ನು ಎದೆಗೆ ಸಮೀಪ ಅವಿತಿಟ್ಟುಕೊಂಡು ಜಾಸ್ತಿ ಆಡಲಾರೆ. ಕಾದಂಬರಿ ಅಂತ ಶುರುಮಾಡಿ ಅದರ ಮೊದಲ ಅಧ್ಯಾಯವನ್ನು ಸಣ್ಣಕಥೆ ಅಂತ ಪತ್ರಿಕೆಗೆ ಕಳಿಸಿದ್ದೂ ಇದೆ. ನನ್ನ ಬಣ್ಣದ ಕಾಲು ಕಥೆ ನಾನು ಮುಂದುವರಿಸದೇ ಹೋದ ಕಾದಂಬರಿಯ ಮೊದಲ ಅಧ್ಯಾಯ. ಚಾರ್‌ಮಿನಾರ್‌ ಕಥೆ ಕೂಡ ಹಾಗೇ.

ಈಚೆಗೆ ನನ್ನ ವಿವಿಧ ಸಂಕಲನದಿಂದ ಆಯ್ದ ಹದಿನಾರು ಮುಂಬಯಿ ಕೇಂದ್ರಿತ ಕಥೆಗಳನ್ನು ತೇಜಸ್ವಿನಿ ನಿರಂಜನ ಆಯ್ದು ಇಂಗ್ಲಿಷಿಗೆ ಅನುವಾದಿಸಿದರು. ನೋ ಪ್ರಸೆಂಟ್ಸ್‌ ಪ್ಲೀಸ್‌- ಎಂಬ ಹೆಸರಿನಲ್ಲಿ ಆ ಸಂಗ್ರಹ ಬಂತು. ಆದರೆ ಅದಕ್ಕೆ ಬಂದ ಇಂಗ್ಲಿಷ್‌ ಸ್ಪಂದನಗಳಲ್ಲಿ, “ಇದು ಸಣ್ಣ ಕಥೆಗಳ ಸಂಗ್ರಹವಾಗಿದ್ದರೂ, ಒಟ್ಟಾರೆ ಓದುವಾಗ ಮುಂಬಯಿ ಕುರಿತಾದ ಕಾದಂಬರಿಯಂತೆಯೇ ಭಾಸವಾಗುತ್ತದೆ’- ಎಂಬ ಅಂಶವಿತ್ತು! ಹಾಗಾದರೆ ಸಣ್ಣಕಥೆ ಯಾವುದು? ಕಾದಂಬರಿ ಯಾವುದು? ಸಣ್ಣಕಥೆ ಸೀಮಿತ ಓವರಿನ ಕ್ರಿಕೆಟ್ಟು, ಕಾದಂಬರಿ ಟೆಸ್ಟ್‌ ಕ್ರಿಕೆಟ್ಟು – ಅನ್ನುವಷ್ಟು ಸರಳವಲ್ಲ ಇದು. ಬೇಂದ್ರೆ ಹೇಳುವಂತೆ ಕೊನೆಗೂ ನಾವು ಬರೆಯಬಹುದಾದದ್ದು “ಉಪಕಥೆ’ಗಳನ್ನು ಮಾತ್ರ. ಅವುಗಳ ಮೂಲಕ ಧ್ವನಿತವಾಗುವಂಥ ಬದುಕೇ ದೊಡ್ಡ ಕಥೆ. ಅದಕ್ಕೆ ಆಕಾರವಿಲ್ಲ.

ನಾನು ಕಾದಂಬರಿ ಬರೆಯುವುದೊಂದು ಬಾಕಿ ಇದೆ ಎಂಬ ಸಂಗತಿ ನನ್ನನ್ನು ನಾಳೆಯ ಕುರಿತು ಒಂದು ನಮೂನೆ ಸಣ್ಣ ಉತ್ಸುಕತೆಯಲ್ಲಿ ಇರಿಸುತ್ತದೆ. ಅದು ನನಗೆ ಇಷ್ಟ.


ವಸುಧೇಂದ್ರ

ನೀವು ಈಗ ಬರೆಯುತ್ತಿರುವುದು ಎಷ್ಟನೆಯ ಕಾದಂಬರಿ? ಇದು ಹಿಂದಿನ ಕಾದಂಬರಿಗಳ ಜಾಡಿನಲ್ಲಿದೆಯೋ ಭಿನ್ನವಾಗಿದೆಯೊ?
ಇದು ನನ್ನ ಎರಡನೆಯ ಕಾದಂಬರಿ. ಮೊದಲಿಗೆ ಹರಿಚಿತ್ತ ಸತ್ಯ ಎನ್ನುವ 160 ಪುಟಗಳ ಪುಟ್ಟ ಕಾದಂಬರಿ ಬರೆದಿದ್ದೆ. ಅದು ಈ ಹೊತ್ತಿನಲ್ಲಿ ನನಗೆ ನೀಳYತೆಯಾಗಿಯೇ ಕಾಣುತ್ತಿದೆ. ಆದ್ದರಿಂದ ಇದು ನನ್ನ ಮೊದಲ ಕಾದಂಬರಿ ಎಂದೇ ಭಾವಿಸುವೆ. ಕೇವಲ ವಸ್ತುವಿನ ಕಾರಣದಿಂದಲ್ಲ, ಗಾತ್ರದಲ್ಲಿಯೂ ಇದು ಹಿಂದಿನ ಪುಸ್ತಕಗಳಿಗಿಂತ ಬೇರೆ. ಒಟ್ಟು 464 ಪುಟಗಳ ಕಾದಂಬರಿಯಿದು. ಜನವರಿ ಮೊದಲ ವಾರದಲ್ಲಿ ಓದುಗರಿಗೆ ಕೊಡುವೆ. ಕಾದಂಬರಿಯ ಹೆಸರು ತೇಜೋ-ತುಂಗಭದ್ರಾ. ತೇಜೋ ನದಿ ಲಿಸºನ್ನಲ್ಲಿ ಹರಿಯುತ್ತದೆ. ತುಂಗಭದ್ರಾ ನಮ್ಮ ವಿಜಯನಗರದ ಇತಿಹಾಸವನ್ನು ಬೆಳೆಸಿದ ಹೆಮ್ಮೆಯ ನದಿ.

ಕಾದಂಬರಿಯ ವಸ್ತು ನನ್ನ ಹಿಂದಿನ ಯಾವ ಕತೆ/ಪ್ರಬಂಧಕ್ಕೂ ಸಂಬಂಧಿಸಿದ್ದಲ್ಲ. 1492-1518ರಲ್ಲಿ ಭಾರತದ ವಿಜಯನಗರ, ಗೋವಾ ಹಾಗೂ ಪೋರ್ಚುಗಲ್‌ ದೇಶದ ಲಿಸºನ್‌ ನಗರದ ಸಾಮಾಜಿಕ ಜೀವನವನ್ನು ಕುರಿತ ಕಾದಂಬರಿಯಿದು. ಇತಿಹಾಸವನ್ನೇ ಅಧ್ಯಯನ ಮಾಡಿ ಈ ಕಾದಂಬರಿಯನ್ನು ಬರೆದಿದ್ದರೂ, ಇದು ಜನಸಾಮಾನ್ಯರ ಕಥನ. ಯಾವುದೇ ರಾಜ-ರಾಣಿ, ಮಂತ್ರಿ-ಸೇನಾಧಿಪತಿಯನ್ನು ವೈಭವೀಕರಿಸಲು ಬರೆದ ಕಾದಂಬರಿ ಇದಲ್ಲ. ಇತಿಹಾಸದ ಕರಿನೆರಳಲ್ಲಿ ಶ್ರೀಸಾಮಾನ್ಯ ಬಳಲಿದ ಕಥನವಿದು. ಆದ್ದರಿಂದ ಇದೊಂದು ಐತಿಹಾಸಿಕ-ಸಾಮಾಜಿಕ ಕಾದಂಬರಿ.

ನಿಮಗೆ ಯಾವುದು ಇಷ್ಟ ; ಕತೆ ಬರೆಯುವುದೊ? ಕಾದಂಬರಿ ಬರೆಯುವುದೊ?
ಎರಡೂ ತನ್ನದೇ ಸವಾಲುಗಳನ್ನು ಲೇಖಕನಿಂದ ಆಪೇಕ್ಷಿಸುತ್ತವೆ. ಕಾದಂಬರಿಯು ನಮ್ಮ ಸಂಯಮ, ಜ್ಞಾನವಿಸ್ತಾರ, ಶಿಸ್ತನ್ನು ಬೇಡುತ್ತದೆ. ಈಗಾಗಲೇ ಆರು ಕಥಾಸಂಕಲನಗಳನ್ನು ಬರೆದಿರುವೆನಾದ ಕಾರಣ, ಅದರ ಮೇಲಿನ ಮೋಹ ಕಡಿಮೆಯಾಗಿದೆ. ಇನ್ನು ಮುಂದೆ ಕಾದಂಬರಿಯನ್ನೇ ನನ್ನ ಮುಖ್ಯ ಪ್ರಕಾರವಾಗಿ ಪರಿಗಣಿಸುತ್ತೇನೆ.

ಎಷ್ಟು ಸಮಯದಿಂದ ಈ ಕಾದಂಬರಿ ಬರೆಯುತ್ತಿರುವಿರಿ? ಈ ಪಯಣದಲ್ಲಾದ ಅನುಭವವೇನು?
ಈ ಪುಸ್ತಕ ರಚನೆಯಲ್ಲಿ ನಾನು ಮೂರು ವರ್ಷಗಳ ಕಾಲ ತೊಡಗಿಕೊಂಡಿದ್ದೆ. ಮೊದಲ ಎರಡು ವರ್ಷ ಕೇವಲ ಇತಿಹಾಸದ ಅಧ್ಯಯನವನ್ನು ಮಾಡಿದೆ. ಕೊನೆಯ ವರ್ಷ ಸಂಪೂರ್ಣವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ಪೂರ್ವಗ್ರಹವಿಲ್ಲದೆ ಇತಿಹಾಸವನ್ನು ನಿರೂಪಿಸುವ ಪುಸ್ತಕಗಳು ನಮಗೆ ಇಂಗ್ಲಿಷಿನಲ್ಲಿಯೇ ಹೆಚ್ಚಾಗಿ ಸಿಗುತ್ತವೆ; ಕನ್ನಡದಲ್ಲಿ ಅಪರೂಪ. ಸಮಸ್ಯೆಯೆಂದರೆ, ನಾನು ಇಂಗ್ಲಿಷ್‌ ಪುಸ್ತಕವನ್ನು ಕನ್ನಡದಷ್ಟು ಸರಾಗವಾಗಿ ಓದಲಾರೆ. ಆದ್ದರಿಂದ, ನನ್ನ ಅಧ್ಯಯನ ಹೆಚ್ಚಿನ ಪರಿಶ್ರಮವನ್ನು ಬೇಡಿತು. ಈ ಕಾದಂಬರಿ ಮುಗಿಸುವುದರಲ್ಲಿ ನನ್ನ ಇಂಗ್ಲಿಷ್‌ ಓದಿನ ವೇಗವೂ ಸುಧಾರಿಸಿಬಿಟ್ಟಿದೆ! ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಇದಕ್ಕಾಗಿ ಓದಬೇಕಾಯಿತು.

ಸಾಫ್ಟ್ವೇರ್‌ ಪ್ರಪಂಚದವನಾದ ನಾನು ಈ ರೀತಿ ಇತಿಹಾಸವನ್ನು ಓದುವುದು ಒಂಥರಾ ಪುಳಕ ನೀಡಿತು. ಶಾಲೆಯಲ್ಲಿ ಯಾವತ್ತೂ ಇತಿಹಾಸದ ಅಧ್ಯಯನಕ್ಕೆ ಮೂಗುಮುರಿಯುತ್ತಿದ್ದ ನಾನು, ಈವತ್ತು ಇತಿಹಾಸದ ಪುಸ್ತಕ ಕಂಡರೆ ಸಾಕು, ಸಂತೋಷಗೊಳ್ಳುತ್ತೇನೆ. ಇತಿಹಾಸದ ಅಧ್ಯಯನವು ನನ್ನನ್ನು ಹೆಚ್ಚು ವಿನಮ್ರನನ್ನಾಗಿ ಮಾಡಿದೆ. ನಮ್ಮ ಹಿರಿಯರ ಬಗ್ಗೆ ಗೌರವವನ್ನು ಮೂಡಿಸಿದೆ. ಅವರ ಶಕ್ತಿ-ದೌರ್ಬಲ್ಯಗಳೆರಡನ್ನೂ ಪರಿಚಯಿಸಿದೆ.

ಎಲ್ಲರೂ ಫೇಸ್‌ಬುಕ್‌ ಬರಹಗಳಂಥ ಪುಟ್ಟ ಪುಟ್ಟ ಬರಹಗಳಲ್ಲಿ ಮುಳುಗಿರುವಾಗ ಯಾಕೆ ಈ ದೊಡ್ಡ ಕ್ಯಾನ್ವಾಸ್‌?
ಫೇಸ್‌ಬುಕ್‌ ಅನ್ನು ನಾನು ಕೇವಲ ಸಾಹಿತ್ಯದ ಅರಳೆಕಟ್ಟೆಯಾಗಿ ನೋಡುತ್ತೇನೆ. ಅಲ್ಲಿ ನಮಗೆ ಹರಟೆ, ಮನೋರಂಜನೆ, ಮಾಹಿತಿಗಳು ಯಥೇತ್ಛವಾಗಿ ದಕ್ಕುತ್ತವೆ. ವೈಯಕ್ತಿಕ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹಂಚಿಕೊಳ್ಳಲು ಅದು ಅಪರೂಪದ ತಾಣ. ಆದರೆ ಅಲ್ಲಿ ಬರೆಯುವುದೆಲ್ಲವೂ ಸಾಹಿತ್ಯವಲ್ಲ ಎಂಬ ಎಚ್ಚರ ನನಗಿದೆ. ಕವಿತೆ, ಪ್ರಬಂಧ, ಅನುಭವಗಳನ್ನು ಅಲ್ಲಿ ಬರೆಯಬಹುದೇ ಹೊರತು, ಕಾದಂಬರಿ ಪ್ರಕಾರಕ್ಕೆ ಅದು ಸೂಕ್ತ ತಾಣವಲ್ಲ. ಕಾದಂಬರಿಯು ನಮ್ಮ ಖಾಸಗಿ ಧ್ಯಾನದಲ್ಲಿ ನಿಧಾನಕ್ಕೆ ಅರಳುವ ಸಂಗತಿಯಾಗಿರುತ್ತದೆ. ಹನ್ನೆರಡು ವರ್ಷಕ್ಕೊಮ್ಮೆ ಅರಳುವ ಕುರಂಜಿ ಹೂವಿನ ಸಂಯಮವನ್ನು ಈ ಪ್ರಕಾರ ಬೇಡುತ್ತದೆ.

ಒಳ್ಳೆಯ ಸಾಹಿತ್ಯ ಚಿಕ್ಕದಿರಲಿ, ದೊಡ್ಡದಿರಲಿ- ಅದನ್ನು ಓದುಗರು ಇಷ್ಟ ಪಡುತ್ತಾರೆ. ನಮಗೆ ಸರ್ವಜ್ಞನ ವಚನಗಳೂ ಬೇಕು, ಕುಮಾರವ್ಯಾಸನ ಗದುಗಿನ ಭಾರತವೂ ಬೇಕು. ದೇಸಿ ಮತ್ತು ಮಾರ್ಗ ಪ್ರಕಾರಗಳೆರಡನ್ನೂ ನಮ್ಮ ಕನ್ನಡಿಗರು ಒಪ್ಪಿಕೊಂಡಿದ್ದಾರೆ.­

ನಿಮ್ಮನ್ನು ತುಂಬ ಪ್ರಭಾವಿಸಿರುವ ಭಾರತೀಯ ಅಥವಾ ಜಾಗತಿಕ ಭಾಷೆಯ ಯಾವುದಾದರೊಂದು ಕಾದಂಬರಿಯ ಬಗ್ಗೆ ಹೇಳಿ?
ಒಂದೆರಡಲ್ಲ, ಹತ್ತಾರು. ಆದರೆ ಸದ್ಯಕ್ಕೆ ವಾಲ್ಮೀಕಿಯನ್ನು ಜ್ಞಾಪಿಸಿ ಕೊಳ್ಳಲು ಇಷ್ಟಪಡುತ್ತೇನೆ. ಆತ ರಾಮಾಯಣವನ್ನು ಅಚ್ಚುಕಟ್ಟಾಗಿ ನಿರೂಪಿಸಿದ ಕ್ರಮ ನನಗೆ ಕಾದಂಬರಿಯೊಂದು ಹೇಗಿರಬೇಕೆನ್ನುವುದಕ್ಕೆ ಆದರ್ಶವೆಂದು ತಿಳಿದಿದ್ದೇನೆ. ಅವನು ಮಾಡುವ ವ್ಯಕ್ತಿಚಿತ್ರಣ, ಬಳಸುವ ರೂಪಕಗಳು, ಸಂಯಮ ಮೀರದ ನಿರೂಪಣೆ, ಅವಾಸ್ತವ ಸಂಗತಿಯನ್ನು ಹೇಳಿಯೂ ವಾಸ್ತವದ ಬದುಕನ್ನು ಕಟ್ಟುವುದು- ನನಗೆ ಬಹುಮುಖ್ಯವಾಗಿ ಕಾಣುತ್ತವೆ. ರಾಮಾಯಣವನ್ನು ನಾವು ಧರ್ಮಗ್ರಂಥವಾಗಿ ಪರಿಗಣಿಸಿ ಪೂಜಿಸುತ್ತಿದ್ದರೂ, ನನಗೆ ಅದೊಂದು ಸೊಗಸಾದ ಕಾದಂಬರಿಯಾಗಿಯೂ ಕಾಣುತ್ತದೆ. ವಾಲ್ಮೀಕಿ ನನಗೆ ಮಹಾಗುರು.


ಶ್ರೀಧರ ಬಳಗಾರ

ಬಹಳ ಸಮಯದಿಂದ ಕಾದಂಬರಿ ಬರೆಯುತ್ತಿರುವಿರಲ್ಲ… ಯಾವಾಗ ಪ್ರಕಟಿಸುತ್ತೀರಿ?
-ಕಾದಂಬರಿಯನ್ನು ಬರೆದಾಗಿದೆ; ಮುದ್ರಣದ ಕೆಲಸವೂ ಮುಗಿದಿದೆ; ಸದ್ಯದಲ್ಲೆ ಬಿಡುಗಡೆಯ ಮುಹೂರ್ತವನ್ನು ಕಾಯುತ್ತಿರುವೆ.

ಉತ್ತರಕನ್ನಡದ ಜೀವನಕ್ರಮ ಅನೇಕ ಕಾದಂಬರಿಗಳಲ್ಲಿ ಪ್ರತಿಬಿಂಬಿತವಾಗಿದೆ. ನಿಮ್ಮ ಕಾದಂಬರಿ ಹೇಗೆ ಭಿನ್ನ?
-ಉತ್ತರಕನ್ನಡದ ದಟ್ಟ ಪ್ರಾದೇಶಿಕ ವಿವರಗಳಿಗೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇದೆ. ಇದು ಚರಿತ್ರೆಯಲ್ಲಿ ಸೋತವರ ಸ್ವಾಭಿಮಾನದ ಕತೆಯನ್ನು ನಿರೂಪಿಸುತ್ತದೆಯೇ ವಿನಾ ಗೆದ್ದವರ ವೈಭವೀಕರಣವನಲ್ಲ.

ಕಾದಂಬರಿ ಬರೆದು ಮುಗಿಸುವ ಹಂತದಲ್ಲಿರಬೇಕು? ಈ ದೀರ್ಘ‌ಯಾನ ಹೇಗನ್ನಿಸಿತು?
-ಕನಸಿನ ಪ್ರಯಾಣದಂತಿರುವ ಬರೆವಣಿಗೆಯಲ್ಲಿ ಕಥನ ಪ್ರಪಂಚವೇ ನಿಜವೆನಿಸಿತು. ಬರೆವಣಿಗೆಯ ಉತ್ಕಟ ಕ್ಷಣದಲ್ಲಿ ನನಗೆ ತೊಡಿಸಿದ ಜಾತಿ, ಧರ್ಮ, ಭಾಷೆಗಳ ಕವಚ ಕಳಚಿ, ನಿಜವಾದ ಬಿಡುಗಡೆಯ ಆನಂದ ಅನುಭವಿಸಿದೆ.

ಫೇಸ್‌ಬುಕ್‌, ವಾಟ್ಸಾಪ್‌ಗ್ಳ ಕಾಲದಲ್ಲಿ ನಿಮಗೇಕೆ ಕಾದಂಬರಿ ಬರೆಯಬೇಕೆಂಬ ಆಸೆ?
-ಮದುವೆ ಮನೆಯಲ್ಲಿ ಬರೀ ಪನಿವಾರ ತಿಂದರಾಯಿತೆ, ಊಟ ಮಾಡಬೇಡವೆ?

ಕಾದಂಬರಿ ಎನ್ನುವುದು ಹಲವು ಕತೆಗಳ ಗುತ್ಛವೆ? ಏನನ್ನುತ್ತೀರಿ?
-ಕಾದಂಬರಿ ಹಲವು ಕತೆಗಳ ಗುತ್ಛವಲ್ಲ; ಹಲವು ಕತೆಗಳ ನಡುವಿನ ಸಾವಯವ ಸಂಬಂಧಗಳ ನೆಯ್ಗೆ. ಮರಗಳು ಕತೆಯಾದರೆ, ಅವುಗಳ ನಡುವಿನ ಸಂಬಂಧದ ಕಾಡೇ ಕಾದಂಬರಿ.

ಕಾದಂಬರಿ ಬರೆದು ಮುಗಿಸುವಾಗಿನ ಮತ್ತು ಕತೆ ಬರೆದು ಮುಗಿಸುವಾಗಿನ ಬಳಲಿಕೆ, ನಿರುಮ್ಮಳತೆಯಲ್ಲಿ ಏನು ವ್ಯತ್ಯಾಸ?
-ಕತೆ ಬರೆದು ಮುಗಿಸಿದಾಗಿನ ಕ್ಷಣ ಸಫ‌ಲ ಪ್ರೇಮದ ಸಂತೋಷದ್ದಾದರೆ ಕಾದಂಬರಿ ಮುಗಿದಾಗ ಮದುವೆ ಮಾಡಿದಾಗ ಉಂಟಾಗುವ ತೃಪ್ತಿ.


ಸುನಂದಾ ಪ್ರಕಾಶ ಕಡಮೆ

ಇತ್ತೀಚೆಗೆ ವಿದೇಶಕ್ಕೆ ಹೋಗಿಬಂದಿರುವಿರಿ. ದೀರ್ಘ‌ಪಯಣದ ಬಳಿಕ ಮತ್ತೂಂದು ದೀರ್ಘ‌ಪಯಣ (ಕಾದಂಬರಿ) ಆರಂಭಿಸಿರುವಿರಲ್ಲ…
-ಪ್ರಸ್ತುತ ಈ ಕಾದಂಬರಿಯ ಪಯಣವನ್ನು ನನ್ನ ಬರೀ ಎರಡು ರೆಕ್ಕೆ ಎಂಬ ಮೊದಲ ಕಾದಂಬರಿ ಬರೆದ 2011ಕ್ಕಿಂತ ಮೊದಲೇ ಆರಂಭಿಸಿದ್ದೆª. ಅದನ್ನೇ ಹೊಸದಾಗಿ ಎಂಬಂತೆ ನೋಡುತ್ತ, ಹೊಸ ಸಂಗತಿಗಳನ್ನು ಒಟ್ಟಾಗಿಸುತ್ತ, ಅನುಭವಿಸುತ್ತ, ಈಗ ಪುನಃ ಅದರ ಬೆನ್ನು ಬಿದ್ದಿದ್ದೇನೆ.

ಕತೆ ಬರೆಯುವ ಅವಧಿ ಸೀಮಿತ. ಕಾದಂಬರಿಗೆ ದೀರ್ಘಾವಧಿ ಬೇಕು. ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ?
-ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಎರಡು ಗಂಟೆಯಾದರೂ ಅದರೊಟ್ಟಿಗೆ ಕಳೆಯಲು ಪ್ರಾಮಾಣಿಕವಾಗಿ ಯತ್ನಿಸುವುದು. ಅದೂ ನನ್ನಂತೆ ಅಪ್ಪಟ ಗೃಹಿಣಿಯೆಂದು ಕರೆಸಿಕೊಳ್ಳುವವರಿಗೆ ಬರವಣಿಗೆಯ ಏಕಾಂತ ದೊರೆಯುವುದು ಸ್ವಲ್ಪ ಕಷ್ಟವೇ.

ಹೊಸ ಕಾದಂಬರಿಯ ವಸ್ತುವಿನ ಬಗ್ಗೆ ಸೂಕ್ಷ್ಮವಾಗಿ ತಿಳಿಸಿ.
ಹಲವು ಸಂದರ್ಭಗಳಲ್ಲಿ ಹೇಳಿದ್ದೇನೆ ಅನ್ನಿಸಿ ಮುಜುಗರವಾಗುತ್ತಿದೆ, ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿರಂತರ ಅನುಭವಿಸುತ್ತಿರುವ ನೌಕಾನೆಲೆ ಸಂತ್ರಸ್ತರ ಸಮಸ್ಯೆ ಕುರಿತು. ಇಂಥ ಸಂಗತಿಗಳು ತನ್ನೊಳಗೇ ಬಿಟ್ಟುಕೊಳ್ಳುವ ವಿಭಿನ್ನ ಆಯಾಮಗಳು ನನ್ನನ್ನು ಅಚ್ಚರಿಗೊಳಿಸುತ್ತ ಕಾಡುತ್ತಿವೆ.

ಈ ಕಾಲದಲ್ಲಿ ಎಲ್ಲರೂ ಸಣ್ಣ ಸಣ್ಣ ಬರಹಗಳನ್ನು ಇಷ್ಟ ಪಡುತ್ತಿರುವಾಗ ನಿಮಗೇಕೆ ಕಾದಂಬರಿ ಬರೆಯಬೇಕೆಂಬ ಹಂಬಲ?
-ಎಲ್ಲರೂ ಸಣ್ಣ ಬರಹವನ್ನೇ ಇಷ್ಟಪಡುತ್ತಾರೆ ಅನ್ನುವುದು ತಪ್ಪು, ಕಾದಂಬರಿ ಇಷ್ಟಪಡುವವರ ವರ್ಗವೇ ಬೇರೆ ಇದೆ. ಇದೇ ಸಂಗತಿ ಕುರಿತಾಗಿ 2004ರಲ್ಲೇ ನಾನು ನೋ ಎಂಟ್ರಿ ಎಂಬ ಎಂಟು ಪುಟಗಳ ಕತೆಯೊಂದನ್ನು ಬರೆದಿದ್ದೆ. ಕಿರು ಬರಹ ಸಮಾಧಾನ ತರಲಿಲ್ಲ. ಆಗಲೇ ಆರಂಭವಾದದ್ದು ಈ ತಹತಹ. ಇದರ ನೋವಿನ ವ್ಯಾಪ್ತಿ ಬಹು ದೊಡ್ಡದಿದೆ ಅನ್ನಿಸಿದೆ. ಒಳಗಿನ ಸಂಕಟವನ್ನು ನನ್ನಂತಹ ಅಸಹಾಯಕಳು ಕೇವಲ ಬರವಣಿಗೆಯ ಮೂಲಕವೇ ತೋಡಿಕೊಳ್ಳಬೇಕಲ್ಲವೇ?

ಕನ್ನಡದಲ್ಲಿ ಕಾದಂಬರಿ ಜನಪ್ರಿಯ ಮಾಧ್ಯಮವಾಗಿತ್ತು. ಆಮೇಲೆ ಸಣ್ಣಕಥೆಗಳು ಎಲ್ಲರಿಗೂ ಇಷ್ಟವಾಗತೊಡಗಿದವು. ಈಗ ಮತೆೆ¤ ಕಾದಂಬರಿ ಜನಮಾನಸವನ್ನು ಸೆಳೆಯುತ್ತಿದೆ ಅಂತನ್ನಿಸುತ್ತಿದೆಯೆ?
ಯಾವ ಕಾಲದಲ್ಲಾದರೂ ಉತ್ತಮ ಅಂಶಗಳಿರುವ ಕಾದಂಬರಿಗಳ ನ್ನು ಸಮಯ ಮಾಡಿಕೊಂಡು ಸಹೃದಯರು ಓದಿಯಾರು ಅನಿಸುತ್ತದೆ. ಒಳ್ಳೆಯದು ಕಾಲಾಂತರದಲ್ಲಾದರೂ ಗುರುತಿಸಿಕೊಳ್ಳುತ್ತದೆ ಎಂಬ ನಂಬಿಕೆಯಿದೆ. ತಕ್ಷಣವೇ ಓದುಗರು ಓದಿ ಪ್ರತಿಕ್ರಿಯಿಸಬೇಕು ಎಂಬ ಅವಸರದ ಮನಃಸ್ಥಿತಿ ಬರಹಗಾರ ಇಟ್ಟುಕೊಳ್ಳದಿದ್ದರೇನೇ ಉತ್ತಮ.



ಗೋಪಾಲಕೃಷ್ಣ ಪೈ

ಇತ್ತೀಚೆಗೆ ಕತೆಗಳನ್ನು ಬರೆದ ಹಾಗಿಲ್ಲ. ಮತ್ತೆ ಕಾದಂಬರಿ ಬರೆಯುತ್ತಿರುವಿರಲ್ಲ?
-ಹಾಗೇನಿಲ್ಲ. ಒಂದು ಕಾದಂಬರಿಯನ್ನು ಬರೆದು ಸ್ವಲ್ಪ ಹೆಸರು ಪಡೆದೆನಾದರೂ ಸಣ್ಣ ಕತೆಗಳನ್ನು ನಾನು ಬರೆಯುತ್ತಲೇ ಇದ್ದೇನೆ. ಈಗ ಸುಮಾರು ಹದಿನೈದು ಕತೆಗಳ ಹೊಸ ಸಂಕಲನ ಒಂದು ಸಿದ್ಧವಾಗಿದೆ. ಅದರ ಪ್ರಕಟಣೆ ಸದ್ಯದಲ್ಲಿಯೇ ಆಗಬಹುದು.

ಸ್ವಪ್ನಸಾರಸ್ವತದ ಮುಂದುವರಿಕೆಯೆ ಈ ಹೊಸ ಕಾದಂಬರಿ?
-ಸ್ವಪ್ನ ಸಾರಸ್ವತ ಕಾದಂಬರಿ ಬಂದು ಹತ್ತು ವರ್ಷಗಳಾದುವು. ಈ ನಡುವೆ ನಾನು ಚಲನಚಿತ್ರ ಜಗತ್ತಿನಲ್ಲಿಯೂ ಚಟುವಟಿಕೆಯಿಂದ ಇದ್ದ ಕಾರಣ ಇನ್ನೊಂದು ಕಾದಂಬರಿ ಬರೆಯುವ ಸಾಹಸಕ್ಕೆ ಕೈ ಹಾಕಲಿಲ್ಲ. ಕಾದಂಬರಿಗೆ ಬೇರೆಯೇ ಒಂದು ಸಿದ್ಧತೆ ಬೇಕು. ಒಂದು ವಿಚಾರವೇನೋ ಮನಸ್ಸನ್ನು ಬಹಳ ಕಾಡುತ್ತಿತ್ತು. ಈಗೊಂದು ವರ್ಷದಿಂದ ಉಳಿದೆಲ್ಲ ಚಟುವಟಿಕೆಗಳನ್ನು ಬದಿಗಿಟ್ಟು ಇದರ ಮೇಲೆಯೇ ಕೇಂದ್ರೀಕೃತನಾದೆ. “ಸ್ವಪ್ನ ಸಾರಸ್ವತ’ಕ್ಕೆ ಒದಗಿದ ಜನಪ್ರಿಯತೆಯಿಂದಾಗಿ ಇನ್ನೊಂದು ಬರೆಯುವ ಬಗ್ಗೆ ಒಂದಷ್ಟು ಹೆದರಿಕೆಯೂ ಆಗಿರುವುದು ನಾನು ಬರೆಯದಿರುವುದಕ್ಕೆ ಕಾರಣವೆನ್ನ ಬಹುದು. ಈಗ ತಾನೇ ಇನ್ನೊಂದು ಬರೆದು ಮುಗಿಸಿದ್ದೇನೆ. ಖಂಡಿತವಾಗಿ ಇದು ಸ್ವಪ್ನ ಸಾರಸ್ವತದ ಮುಂದಿನ ಭಾಗ ಅಲ್ಲ.

ಕಾದಂಬರಿ ಎಂಬ ದೂರತೀರದ ಪಯಣ ಅನುಭವವೇನು?
-ನನ್ನದೊಂದು ನಿಲುವಿದೆ-ನಾನು ಬರೆದದ್ದನ್ನೆಲ್ಲ ಜನರು ಓದಬೇಕು ಎನ್ನುವುದಕ್ಕಿಂತ ಬುದ್ಧಿವಂತ ಓದುಗರು ಮೆಚ್ಚುವ ಹಾಗೆ ನಾನು ಬರೆಯಬೇಕು ಎನ್ನುವುದು. ಅದಕ್ಕೆ ತುಂಬ ಸಿದ್ಧತೆ ಮಾಡಿಕೊಳ್ಳುತ್ತೇನೆ. ಗ್ರಂಥಾಲಯಗಳಿಗೆ ಅಡ್ಡಾಡುತ್ತೇನೆ, ಪುಸ್ತಕಗಳನ್ನು ಖರೀದಿಸುತ್ತೇನೆ, ಓದುತ್ತೇನೆ, ಟಿಪ್ಪಣಿ ಮಾಡಿಕೊಳ್ಳುತ್ತೇನೆ, ಕೆಲವೊಮ್ಮೆ ಮೊದಲ ವಾಕ್ಯವನ್ನು ಹತ್ತಿಪ್ಪತ್ತು ಸಲ ಬರೆದು ಹರಿದದ್ದೂ ಇದೆ. ಐವತ್ತು ಪುಟಗಳಾಗುವಾಗ ಮತ್ತೆ ಬೇರೆಯೇ ಆಗಿ ಬರೆದದ್ದೂ ಇದೆ. ಈ ಎಲ್ಲ ಸಮಯದಲ್ಲಿ ನಾನು ಹೊರ ಜಗತ್ತಿನಿಂದ ದೂರವೇ ಇರುತ್ತೇನೆ. ಅಲ್ಲಿ ನೂರಾರು ಪಾತ್ರಗಳು ಬರಬಹುದು, ಅನೇಕ ಘಟನೆಗಳು ಇರಬಹುದು. ಅವುಗಳು ಎಲ್ಲಿ ಹಳಿ ತಪ್ಪಿ ಬಿಡುತ್ತಾವೋ ಎಂಬ ಆತಂಕವೂ ಎಲ್ಲಿ ನನ್ನ ಮನಸ್ಸು ಛಛಿvಜಿಚಠಿಛಿ ಆಗುತ್ತದೋ ಎಂಬ ಅಳುಕೂ ನನ್ನಲ್ಲಿದೆ. ಸಣ್ಣಕತೆಯಲ್ಲಿ ಕೆಲವೇ ಪಾತ್ರಗಳು ಇರುವುದರಿಂದ ಹಾಗೂ ಒಂದೇ ಘಟನೆಯ ಸುತ್ತ ಕತೆ ತಿರುಗುವುದರಿಂದ ಇಷ್ಟು ಸಿದ್ಧತೆ ಬೇಕಿಲ್ಲ.

ಎಲ್ಲರೂ ಫೇಸ್‌ಬುಕ್‌ ಬರಹಗಳನ್ನು ಬರೆಯುವುದರಲ್ಲಿ ಓದುವುದರಲ್ಲಿ ಮಗ್ನರಾಗಿರುವಾಗ ಕಾದಂಬರಿಯನ್ನು ಓದುವವರಿದ್ದಾರೆ ಅಂತನ್ನಿಸುತ್ತಿದೆಯೆ?
ಈಗ ಹೆಚ್ಚಿನವರು, ಅದರಲ್ಲೂ ಹೆಚ್ಚಿನ ಯುವ ಮನಸ್ಸುಗಳು, ಫೇಸ್‌ಬುಕ್‌ ಬರಹಗಳನ್ನು ಬರೆಯುವುದಕ್ಕೆ, ಓದುವುದಕ್ಕೆ ಸೀಮಿತರಾಗಿದ್ದಾರೆನ್ನುವುದು ನಿಜ. ಆದರೆ ಇದರರ್ಥ ಕಾದಂಬರಿಯನ್ನು ಓದುವವರಿಲ್ಲ ಎಂದಲ್ಲ. ಸ್ವಪ್ನ ಸಾರಸ್ವತ ಎಂಟನೆಯ ಮುದ್ರಣ ಕಾಣುತ್ತಿರುವುದು ಇದಕ್ಕೆ ಸಾಕ್ಷಿಯಲ್ಲವೆ? ಹಿಂದಿನಂತಲ್ಲ, ಈಗ ಓದುಗ ವರ್ಗ ಹೆಚ್ಚಿದೆ. ಅದರಲ್ಲೂ ದುಡ್ಡು ಕೊಟ್ಟು ಓದಲು ಸಾಧ್ಯವಾಗುವ ಅನುಕೂಲಸ್ಥರೂ ಹೆಚ್ಚಾಗಿದ್ದಾರೆ.

ಕಾದಂಬರಿಯನ್ನು ನಾಟಕ ಅಥವಾ ಸಿನೆಮಾ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರತಿಯೊಬ್ಬ ಲೇಖಕನಿಗೂ ತನ್ನ ಕತೆಯೊಂದು ಸಿನೆಮಾ ಆಗಬೇಕು ಅಂತ ಆಸೆ ಇರುತ್ತದೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ಕತೆ ಕಾದಂಬರಿಗಳನ್ನು ನಾಟಕ ಅಥವಾ ಸಿನೆಮಾ ಮಾಡಿದರೆ ಹೆಚ್ಚಿನ ಮಂದಿಗೆ ಅವು ತಲಪುತ್ತವೆ. ಆ ಆಕರ್ಷಣೆಯಿಂದ ಯಾರೂ ಹೊರಗಿಲ್ಲ.

ಅಕ್ಷರ ಮಾಧ್ಯಮದಲ್ಲಿರುವ ಕೃತಿಯನ್ನು ದೃಶ್ಯಮಾಧ್ಯಮಕ್ಕೆ ಹೊಂದಿಸುವ ಸವಾಲಿನ ಕುರಿತು…
ಮುದ್ರಣ ಮಾಧ್ಯಮಕ್ಕಿರುವ ಸ್ವಾತಂತ್ರ್ಯ ದೃಶ್ಯ ಮಾಧ್ಯಮಕ್ಕಿಲ್ಲ. ಉದಾಹರಣೆಗೆ, ನಾನೊಮ್ಮೆ ಕನ್ನಡದ ಓರ್ವ ಶ್ರೇಷ್ಠ ಛಾಯಾಗ್ರಾಹಕರನ್ನು ಕೇಳಿದೆ- ಒಂದು ಪಾತ್ರವನ್ನು ನಾವು ಬರೆಯುವಾಗ ಎದ್ದು ಹಿಂತಿರುಗಿ ನೋಡದೇ ಹೊರಟುಹೋದ ಎಂದು ಬರೆಯುತ್ತೇವೆ. ಹಿಂತಿರುಗಿ ನೋಡದೇ ಎಂಬುದನ್ನು ಹೇಗೆ ಚಿತ್ರಿಸುತ್ತೀರಿ ಅಂತ. ಅವರು ಒಂದು ಕ್ಷಣ ಚಿಂತಿಸಿ ಸಾಧ್ಯವಿಲ್ಲ ಎಂದು ನಕ್ಕು ಬಿಟ್ಟರು. ಆದುದರಿಂದ ಕತೆಯನ್ನು ನಾನು ಬರೆದ ಹಾಗೆಯೇ ಚಿತ್ರಿಸಬೇಕು, ಯಾವ ಬದಲಾವಣೆಯನ್ನೂ ಮಾಡಬಾರದು ಎಂದು ಹೇಳುವುದು ಸರಿಯಲ್ಲ. ಚಿತ್ರ ನಿರ್ದೇಶಕರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಬೇಕು ಅನ್ನುವುದು ನನ್ನ ಭಾವನೆ.

ಕಾದಂಬರಿಯನ್ನು ನಾಟಕ ಅಥವಾ ಸಿನೆಮಾ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರತಿಯೊಬ್ಬ ಲೇಖಕನಿಗೂ ತನ್ನ ಕತೆಯೊಂದು ಸಿನೆಮಾ ಆಗಬೇಕು ಅಂತ ಆಸೆ ಇರುತ್ತದೆ ಎನ್ನುವುದನ್ನು ನಾನು ಗಮನಿಸಿದ್ದೇನೆ. ಕತೆ ಕಾದಂಬರಿಗಳನ್ನು ನಾಟಕ ಅಥವಾ ಸಿನೆಮಾ ಮಾಡಿದರೆ ಹೆಚ್ಚಿನ ಮಂದಿಗೆ ಅವು ತಲಪುತ್ತವೆ. ಆ ಆಕರ್ಷಣೆಯಿಂದ ಯಾರೂ ಹೊರಗಿಲ್ಲ.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.