ರಂಗಭೂಮಿಯ ಹಿರಿಯಣ್ಣಯ್ಯ

Team Udayavani, May 5, 2019, 6:00 AM IST

ತಾಳಿ ಕಟ್ಟೋಕೆ ಮಂತ್ರ ಸುಲಗ್ನಾ ಸಾವಧಾನ…
ತಾಳಿ ಬಿಚ್ಚೋದಕ್ಕೆ ಮಂತ್ರ ಸುಡೈವರ್ಸೆ ಜೀವದಾನ
ಇದು ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕದಲ್ಲಿ ಬರುವ ಡೈಲಾಗ್‌…
ದತ್ತು (ಪಾತ್ರ)ವಿನ ಪಂಚು :
“”ಲಂಚ ಕೈಲಿ ತಗೊಳ್ಳೊಲ್ಲ ಹಣ ಜೇಬಲ್ಲಿ ಇಡಯ್ನಾ”
“”ಯಾಕೆ ಸ್ವಾಮಿ ? ಕೈಗೇನಾದ್ರೂ ರೋಗ ಬಂದಿದೆಯಾ ?”
“”ಇನ್ಮುಂದೆ ಲಂಚ ಕೈಯಿಂದ ಮುಟ್ಟೊಲ್ಲ ಅಂತ ನನ್ನ ಹೆಂಡ್ತೀನ ಮುಟ್ಟಿ ಪ್ರಮಾಣ ಮಾಡಿದ್ದೀನಯ್ನಾ”
“”ಬದುಕಿದೆ ಬಿಡು. ಲಂಚ ಮುಟ್ಟೋ ಕೈಯಲ್ಲಿ ಹೆಂಡ್ತೀನ ಮುಟ್ಟೋಲ್ಲ ಅಂತ ಪ್ರಮಾಣ ಮಾಡಿಲ್ವಲ್ಲ. ಜೇಬಲ್ಲೇ ಇಡ್ತೀನಿ”
ಇದು ದತ್ತುವಿನ ಕೌಂಟರ್‌ ಡೈಲಾಗ್‌ !
ಡೈಲಾಗಿನಲ್ಲಿ ನವಿರಾದ ಹಾಸ್ಯಕ್ಕೆ ಪ್ರಚಲಿತ ವಿಚಾರವನ್ನು ಮಿಕ್ಸ್‌ ಮಾಡುತ್ತಿದ್ದರು ಮಾಸ್ಟರ್‌ ಹಿರಣ್ಣಯ್ಯ.
“”ನನಗೆ ರೆಸ್ಪೆಕ್ಟ್ ಕೊಡು” ಎಂದು ಪೊಲೀಸ್‌ ಪಾತ್ರಧಾರಿ ಹೇಳಿದಾಗ, ಮಾಸ್ಟರ್‌ ಹೇಳ್ಳೋದು, “”ರೆಸ್ಪೆಕ್ಟ್ ಅಂಬೋದು ಡಿಮ್ಯಾಂಡ್‌ ಮಾಡಿ ತಗೊಳ್ಳೋದಲ್ಲ. ಕಮ್ಯಾಂಡ್‌ ಮಾಡಿ ಇಟ್ಕೊಳ್ಳೋದು.”

ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಓದುತ್ತಿದ್ದಾಗ ಎಂ. ಗೋಪಾಲಕೃಷ್ಣ ಅಡಿಗ ಅವರು ಮಾಸ್ಟರ್‌ಗೆ ಗುರುಗಳು. “”ನರಸಿಂಹಮೂರ್ತಿ ನನ್ನ ಶಿಷ್ಯ, ನನ್ನ ವಿದ್ಯಾರ್ಥಿ. ಕಾಲೇಜು ಬಿಟ್ಟ ಮೇಲೂ ನನ್ನಲ್ಲಿ ಗುರುಭಾವನೆ ಇದೆ ! ಆತ ನನ್ನ ನೋಡಿದಾಗ್ಲೆಲ್ಲ ಅತ್ಯಂತ ನಯ, ಪ್ರೀತೀನ ತೋರಿಸ್ತಾನೆ. ಆತ ಎಷ್ಟೇ ಬೆಳೆದರೂ ನನ್ನ ದೃಷ್ಟೀಲಿ ಅವನು ಇನ್ನೂ ಕಾಲೇಜು ತರುಣ. ಹಾಸ್ಯ ರಸ ತಾರುಣ್ಯವನ್ನು ಪೋಷಿಸುತ್ತದೆ.”

ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕವೆಂದರೆ ಅದು ಹಾಸ್ಯದ ಓಕುಳಿ. 5 ರಿಂದ 15 ರವರೆಗೆ ಪಾತ್ರಧಾರಿಗಳು ವಿವಿಧ ನಾಟಕಗಳಲ್ಲಿ ಇರುತ್ತಾರೆ. ಆದರೆ, ಸೂತ್ರಧಾರ ಒಬ್ಬರೇ, ಅದು ಮಾಸ್ಟರ್‌! ಅವರದು ಏಕಪಾತ್ರಾಭಿನಯ ಎನ್ನಬಹುದು. ಮಾಸ್ಟರ್‌ ಹಿರಣ್ಣಯ್ಯ ಅವರ ನಿರರ್ಗಳ ಮಾತುಗಳಿಗೆ ರಿಲೀಫ್ ಕೊಡಲು ಅಥವಾ ಹೊಸ ವಿಷಯ ಪ್ರವೇಶಕ್ಕೆ ಸೂಚನೆ ಕೊಡಲು ಇತರ ಪಾತ್ರಗಳು ನೆರವಾಗುತ್ತವೆ. ಇತರ ಪಾತ್ರಗಳಿಲ್ಲದೆ ಒಬ್ಬರೇ ಮಾತಾಡುತ್ತಿದ್ದರೆ ಅದು ಭಾಷಣವಾಗುತ್ತದೆ ಎಂದು ಮಾಸ್ಟರ್‌ ಹಿರಣ್ಣಯ್ಯ ಹೇಳುತ್ತಿದ್ದರು. ನಾಟಕಕಾರ ಟಿ. ಪಿ. ಕೈಲಾಸಂ ಅವರ ಅಭಿಪ್ರಾಯವಿದು.

ಸಹಸ್ರಾರು ಪ್ರದರ್ಶನಗಳು ಕಂಡ ಸೂಪರ್‌ ಹಾಸ್ಯ ನಾಟಕ ಲಂಚಾವತಾರ ನಾನು ಮೊದಲ ಬಾರಿ ನೋಡಿದ್ದು ಕಾಲೇಜು ದಿನಗಳಲ್ಲಿ. ಅನಂತರ ನಾನು ಅದೆಷ್ಟು ಸಲ ನೋಡಿದ್ದೀನೋ ನೆನಪಿಲ್ಲ. ಪ್ರತಿಸಲ ನೋಡಿದಾಗಲೂ ಹೊಸತು ಎಂದು ಅನ್ನಿಸುವಂತೆ ಅಪ್‌ಡೇಟ್‌ ನೀಡುತ್ತಿದ್ದರು.

ಬೆಂಗಳೂರಿನ ಸಿಟಿ ರೈಲ್ವೇ ಸ್ಟೇಷನ್‌ ಎದುರುಗಡೆ ಅಂದರೆ ಈಗ ಸಿಟಿ ಬಸ್‌ ಸ್ಟ್ಯಾಂಡ್‌ ಇರುವ ಜಾಗದಲ್ಲಿ ಅವರ ನಾಟಕದ ಷೆಡ್‌ ಇತ್ತು. ಅನೇಕ ಸಲ ನಾನು ಅಲ್ಲಿಗೆ ನಾಟಕ ನೋಡಲು ಹೋಗಿದ್ದೇನೆ. ಟಿಕೆಟ್‌ ಕೌಂಟರ್‌ನಲ್ಲಿ ಮಾಸ್ಟರ್‌ ಹಿರಣ್ಣಯ್ಯ ಅವರೇ ಕುಳಿತು ನಾಟಕ ಪ್ರಾರಂಭ ಆಗುವವರೆಗೆ ಟಿಕೆಟ್‌ ಕೊಡುತ್ತಿದ್ದುದು ಒಂದು ವಿಶೇಷ. ಅವರು ಹೊರಗೆ ಆಡುವ ಮಾತಿಗೂ ರಂಗಭೂಮಿಯ ಮೇಲೆ ಅವರು ಆಡುವ ಮಾತಿಗೂ ಸಾಕಷ್ಟು ವ್ಯತ್ಯಾಸ ಇರುತ್ತಿತ್ತು. ರಾಜಕಾರಣಿಗಳು ಮಾಡುವ ತಪ್ಪನ್ನು ಯಥಾವತ್ತಾಗಿ ಸ್ಟೇಜಿನ ಮೇಲೆ ಹಾಸ್ಯಮಿಶ್ರಿತವಾಗಿ ತಿಳಿಸಿ ಪ್ರಕರಣದ ಸತ್ಯ ದರ್ಶನ ಮಾಡಿಸುತ್ತಿದ್ದರು. ತಪ್ಪು ಅಡಿ ಇಡುವ ರಾಜಕಾರಣಿಗಳಿಗೆ ನಗೆ ಚಾಟಿ ಬೀಸುತ್ತಿದ್ದರು. ಇವರ ಮಾತುಗಳನ್ನು ಕೇಳಲು ನಿಜಲಿಂಗಪ್ಪ, ಬಂಗಾರಪ್ಪ ಮೊದಲಾದ ಪ್ರಸಿದ್ಧ ರಾಜಕಾರಣಿಗಳು ಮುಂದಿನ ಸಾಲಿನಲ್ಲಿ ಕುಳಿತು ನಾಟಕವನ್ನು ನೋಡಿ ಆನಂದಿಸುತ್ತಿದ್ದರು.

ದೊಡ್ಡವರು-ಚಿಕ್ಕವರು ಎಂಬ ಭೇದಭಾವವಿಲ್ಲದೆ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದ ರೀತಿ ಅನನ್ಯ. ಹದಿನೈದು ವರ್ಷಗಳ ಹಿಂದೆ ನಾನು ಪಾ.ಪ. ಪಾಂಡು ಬರೆಯುತ್ತಿದ್ದಾಗ ನಾಟಕಕ್ಕೆ ಇನ್ನಷ್ಟು ಹಾಸ್ಯವನ್ನು ತುಂಬಿಸಬೇಕೆಂದು ಸಿಹಿಕಹಿ ಚಂದ್ರು ಅವರು “ರಾಮು ತಾತ’ ಎಂಬ ಪಾತ್ರವನ್ನು ಸೃಷ್ಟಿಸಿದರು. ಕತ್ತಿಗೆ ಒಂದು ದೊಡ್ಡ ಮರದ ಬೀಗದ ಕೈ ಹಾಕಿಕೊಂಡು ಎಲ್ಲಾ ಸಮಸ್ಯೆಗಳಿಗೂ ತಾನೇ ಬೀಗದ ಕೈ ಎಂದು ಹೇಳುತ್ತ ಬರುವ ರಾಮುತಾತನ ಪಾತ್ರ ಮಾಸ್ಟರ್‌ ಹಿರಣ್ಣಯ್ಯ ಅವರದು. ಮಾಸ್ಟರ್‌ ಹಿರಣ್ಣಯ್ಯ ಅವರು ನಾಯಕನ ಪಾತ್ರ ವಹಿಸಿದ್ದ ಒಂದೇ ಸುಳ್ಳು ಎಂಬ ಧಾರಾವಾಹಿಗೆ ಸಂಭಾಷಣೆ ಬರೆಯುವ ಅವಕಾಶ ನನ್ನದಾಗಿತ್ತು. ಮಾಸ್ಟರ್‌ ಹಿರಣ್ಣಯ್ಯ ಅವರ ಧಾಟಿಗೆ ತಕ್ಕಂತೆ ನಾನು ಮಾತುಗಳನ್ನು ಬರೆದು ಕೊಡುತ್ತಿದ್ದೆ. ಮಂಡ್ಯ ರಮೇಶ್‌, ಸರಿಗಮ ವಿಜಿ ಆ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ನನ್ನ ಡೈಲಾಗುಗಳನ್ನು ಯಥಾವತ್ತಾಗಿ ಮಾಸ್ಟರ್‌ ಒಪ್ಪಿಸುತ್ತಿದ್ದರು. “ನಿಮ್ಮ ಶೈಲಿಗೆ ತಕ್ಕಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಿ’ ಎಂದು ನಿರ್ದೇಶಕ ಪಿ. ಆರ್‌. ರಾಮದಾಸ್‌ನಾಯ್ಡು ಅವರು ವಿನಂತಿಸಿಕೊಂಡಾಗ, “ಲೇಖಕ ಯೋಚಿಸಿ ಯಾವುದೋ ಒಂದು ಅರ್ಥದಲ್ಲಿ ಸಂಭಾಷಣೆ ಬರೆದಿರುತ್ತಾನೆ. ಅದಕ್ಕೆ ನಾವು ಗೌರವ ಕೊಡಬೇಕು. ಹೀಗಾಗಿ, ಅದನ್ನೇ ನಾನು ಮಾತಾಡ್ತೀನಿ’ ಎಂದು ಮಾಸ್ಟರ್‌ ಹೇಳಿದ್ದು ಅವರ ಸರಳತೆ ಮತ್ತು ಸೌಜನ್ಯವನ್ನು ತೋರಿಸುತ್ತದೆ.

ಸಾಮಾಜಿಕ ನಾಟಕಗಳು ಆಡಲು ಕಂಪೆನಿಯನ್ನು ಕಟ್ಟಿ ಕೈ ತುಂಬಾ ಹಣ ಮಾಡಿದವರು ಕನ್ನಡದಲ್ಲಿ ಬಹಳ ವಿರಳ. ಆ ದೃಷ್ಟಿಯಿಂದ ಮಾಸ್ಟರ್‌ ಹಿರಣ್ಣಯ್ಯ ಎಷ್ಟೋ ವಾಸಿ. ಗೌರವದಿಂದ ಬದುಕಿ ಬಾಳುವಷ್ಟು ಹಣವನ್ನ ರಂಗಭೂಮಿಯಲ್ಲಿ ಕಂಡವರು. ತಮಗೆ ಬಂದ ಹೆಚ್ಚುವರಿ ಹಣವನ್ನು ಹಾಗೇ ಸಮಾಜಕ್ಕೆ ವಾಪಸ್‌ ನೀಡುತ್ತಿದ್ದರು. 1962ರಲ್ಲಿ ಭಾರತ-ಚೀನಾ ಯುದ್ಧ ನಡೆದಾಗ ಪ್ರಧಾನಿಯವರ ಪರಿಹಾರ ನಿಧಿಗೆ ತಮ್ಮಷ್ಟೇ ತೂಕದ ಬೆಳ್ಳಿಯನ್ನು ಅರ್ಪಿಸಿದವರು ಮಾಸ್ಟರ್‌ ಹಿರಣ್ಣಯ್ಯ.

ತಂದೆ ಕೆ. ಹಿರಣ್ಣಯ್ಯನವರ ಮರಣದ (1953) ನಂತರ ಕೆಲವು ವರ್ಷ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿ ಸಂಸಾರ ನಿರ್ವಹಣೆಗೆ ಪರದಾಡಬೇಕಾಯಿತು. ಮದರಾಸಿನಲ್ಲಿ “ಚಲನಚಿತ್ರ ವಿಭಾಗ’ದಲ್ಲಿ ತರಬೇತಿ ಪಡೆದರು. ಹಿರಣ್ಣಯ್ಯ ಮಿತ್ರ ಮಂಡಲಿಯನ್ನು ಮತ್ತೆ ಸ್ಥಾಪಿಸಲು ಅನೇಕ ಸಲ ಪ್ರಯತ್ನ ಪಟ್ಟು ಕೈ ಸುಟ್ಟುಕೊಂಡರು. ಕಡೆಗೂ ಅದು ಕಾರ್ಯಗತವಾಗಿದ್ದು 1959 ರಲ್ಲಿ.

ಲಂಚಾವತಾರ ಮಾಸ್ಟರ್‌ ಹಿರಣ್ಣಯ್ಯನವರು ತಮ್ಮ ಹೊಸ ಸಂಸ್ಥೆಯಲ್ಲಿ ಆಡಿದ ಮೊದಲನೆಯ ನಾಟಕವಾಯಿತು. ರಚನೆ ಕಲ್ಚರ್ಡ್‌ ಕಾಮಿಡಿಯನ್‌ ಕೆ. ಹಿರಣ್ಣಯ್ಯ. ಶಿವಮೊಗ್ಗದಲ್ಲಿ ಇದರ ಮೊದಲ ಪ್ರಯೋಗ. ಈ ನಾಟಕ ಜನಪ್ರಿಯತೆ ಗಳಿಸಿ ಮಹಾರಾಜರಿಂದಲೂ ಮೆಚ್ಚುಗೆ ಗಳಿಸಿತು. ನಟರತ್ನಾಕರ ಎಂಬ ಬಿರುದು ಪ್ರದಾನವಾಯಿತು. 1963 ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರ ಸಮ್ಮುಖದಲ್ಲಿ ಜಗನ್‌ಮೋಹನ ಪ್ಯಾಲೆಸ್‌ನಲ್ಲಿ 14 ಪ್ರದರ್ಶನಗಳು ತುಂಬಿದ ಗೃಹಗಳಿಂದ ನಡೆದವು.
.
ಅವರ ಮನೆಗೆ ಕಾರ್ಯ ನಿಮಿತ್ತ ನಾನು ಆಗಾಗ ಹೋಗುತ್ತಿದ್ದುದುಂಟು. ಒಮ್ಮೆ ಯಾವುದೋ ಆಹ್ವಾನ ಪತ್ರಿಕೆ ಕೊಡಲು ಹೋದೆ. 5 ನಿಮಿಷದ ಕೆಲಸವೆಂದು ಹೋದರೆ 3 ಗಂಟೆಗಳ ಕಾಲ ಮಾಸ್ಟರ್‌ ಹಿರಣ್ಣಯ್ಯ ನನ್ನನ್ನು ಮಾತಿನಲ್ಲೇ ಕಟ್ಟಿ ಕೂರಿಸಿದರು. ಅವರ ಪ್ರತೀ ಮಾತಿಗೂ ನಕ್ಕು ನಕ್ಕು ಕಣ್ಣಲ್ಲಿ ನೀರು ತುಂಬಿತು. ನಾನು ಬಂದ ಮೂಲ ಕೆಲಸವೇ ಮರೆತಿದ್ದೆ. ಅನೇಕ ಬಾರಿ ಕಾಫಿ, ಟೀಗಳ ಸರಬರಾಜಾಯಿತು. ತಡವಾಯಿತೆಂದು ಬಲವಂತವಾಗಿ ನಾನು ಎದ್ದು ಹೊರಟು ನಿಂತೆ. “”ಇದು ಇಂಟರ್‌ವಲ್ಲು, ಈ ವಾರದಲ್ಲಿ ಮತ್ತೆ ಬಾ” ಎಂದು ಮಾಸ್ಟರು ನಕ್ಕಿದ್ದರು.

ಇದಕ್ಕೆ ವ್ಯತಿರಿಕ್ತವಾದ ಘಟನೆ ನೆನಪಾಗುತ್ತಿದೆ. 6 ತಿಂಗಳ ಹಿಂದೆ ಮಾಸ್ಟರ್‌ ಹಿರಣ್ಣಯ್ಯ ಅವರನ್ನು ನೋಡಲು ಹೋದಾಗ ಅವರಿಗೆ ನೆನಪಿನ ಶಕ್ತಿ ಕುಂದಿತ್ತು. ಮುಖಗಳನ್ನು ಗುರುತು ಹಿಡಿಯುತ್ತಿರಲಿಲ್ಲ. ಯಾರ ಜೊತೆಯೂ ಹೆಚ್ಚು ಮಾತಾಡುತ್ತಿರಲಿಲ್ಲ. ಮಗ ಬಾಬು ಹಿರಣ್ಣಯ್ಯ ನನ್ನನ್ನು ಪರಿಚಯಿಸಿದರು. “”ಹೌದಾ? ಹೂಂ” ಎಂದಷ್ಟೇ ಹೇಳಿ ಒಳಗಡೆ ಹೋದ ಮಾಸ್ಟರ್‌ ಮತ್ತೆ ಅಂದು ಹೊರಗೆ ಬರಲಿಲ್ಲ. ಚಿನಕುರುಳಿಯಂತೆ ಮಾತಾಡುತ್ತಿದ್ದ ವಾಚಾಳಿ ಮಾಸ್ಟರ್‌ ಹಿರಣ್ಣಯ್ಯ ಅವರನ್ನು ಆ ಸ್ಥಿತಿಯಲ್ಲಿ ಕಂಡಾಗ ಕರುಳು ಚುರುಕ್‌ ಎಂದಿತು.

ರಂಗಭೂಮಿಯಲ್ಲಿ ಟಿ.ಪಿ. ಕೈಲಾಸಂ ನಂತರ ಸಾಮಾಜಿಕ ನಾಟಕಗಳಿಗೆ ಬಹುದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾಸ್ಟರ್‌ ಹಿರಣ್ಣಯ್ಯ. ತಂದೆ ಹಾಗೂ ಮಗ ಬರೆದ ನಾಟಕಗಳು ಎಷ್ಟೋ ದಶಕಗಳಿಂದ ಪ್ರದರ್ಶನಗೊಳ್ಳುತ್ತಿದ್ದರೂ ಇಂದಿಗೂ ಅವು ತಾಜಾ ಆಗಿ ಜನಪ್ರಿಯತೆ ಉಳಿಸಿಕೊಂಡಿವೆ.

ತುರ್ತುಪರಿಸ್ಥಿತಿಯಲ್ಲಿ ನಾಟಕ
ಬೆಂಗಳೂರಿನಲ್ಲಿ ಲಂಚಾವತಾರ ನಾಟಕ ನಡೆಯುತ್ತಿದ್ದಾಗ ಅಂದಿನ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ನಾಟಕ ನೋಡಲು ಬಂದು ಮಾಸ್ಟರ್‌ ಅವರ ಡೈಲಾಗುಗಳನ್ನು ಕೇಳಿ ಕಂಗಾಲಾದರು. ಸಿಟ್ಟು ನೆತ್ತಿಗೇರಿತು. ಸರ್ಕಾರದಲ್ಲಿ ನಡೆಯುತ್ತಿದ್ದ ಅನೇಕ ಅವ್ಯವಹಾರಗಳನ್ನು ರಂಗದ ಮೇಲೆ ಮಾಸ್ಟರ್‌ ಪ್ರಸ್ತಾಪಿಸಿದ್ದರು. ನಾಟಕವನ್ನು ಸ್ವಲ್ಪ ಬದಲಿಸಲು ಮುಖ್ಯಮಂತ್ರಿಗಳು ಹೇಳಿದರು. ಮಾಸ್ಟರ್‌, “ಆಗುವುದಿಲ್ಲ’ ಎಂದಾಗ ಹೆದರಿಸಿದರು. ಮಾಸ್ಟರ್‌ ಹಿರಣ್ಣಯ್ಯ ಯಾವುದಕ್ಕೂ ಜಗ್ಗಲಿಲ್ಲ. ಸರ್ಕಾರದ ಬೆದರಿಕೆಯಿಂದ ಪ್ರೇರಿತರಾಗಿ ಮಾಸ್ಟರ್‌ ಹಿರಣ್ಣಯ್ಯ ಇನ್ನೂ ಹೆಚ್ಚು ಹೆಚ್ಚು ಅದೇ ವಿಷಯ ಮಾತಾಡಲು ಶುರು ಮಾಡಿದರು. ಪ್ರೇಕ್ಷಕರಿಂದ ನಿರಂತರ ನಗು ಮತ್ತು ಗಡಚಿಕ್ಕುವ ಚಪ್ಪಾಳೆ. ಲಂಚಾವತಾರ ರದ್ದು ಮಾಡಲು ಸರ್ಕಾರ ಮಾಸ್ಟರರನ್ನು ಕೋರ್ಟಿಗೆ ಎಳೆಯಿತು. ಅದರೆ ಉಚ್ಚ ನ್ಯಾಯಾಲಯದಲ್ಲಿ ಮಾಸ್ಟರ್‌ ಹಿರಣ್ಣಯ್ಯ ಅವರಿಗೆ ಪ್ರಚಂಡ ಜಯ ಸಿಕ್ಕಿತು. ನಾಟಕ ಗರಿಗೆದರಿಕೊಂಡು ಮತ್ತಷ್ಟು ಹುರುಪಿನಿಂದ ಮುನ್ನುಗ್ಗಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರ ಪಾತ್ರದೊಡನೆ ಹೋಲಿಕೆ ಇದ್ದ ಹೊಸ ಪಾತ್ರ ಸೃಷ್ಟಿಸಿ 70ರ ದಶಕದಲ್ಲಿ ಬರೆದ ಕಪಿಮುಷ್ಟಿ ನಾಟಕ ಅನೇಕರ ನಿದ್ದೆ ಕೆಡಿಸಿತ್ತು. ನಾಟಕ ನಿಷೇಧಿಸಲು ಸರ್ಕಾರ ಪ್ರಯತ್ನ ಪಟ್ಟಿದ್ದೂ ಒಂದು ಇತಿಹಾಸ. ಇವರ ಮತ್ತೂಂದು ಜನಪ್ರಿಯ ನಾಟಕ ನಡುಬೀದಿ ನಾರಾಯಣ ರಾಜ್ಯೋತ್ಸವ ಸಂದರ್ಭಗಳಲ್ಲಿ ನಾಡಿನ ಉದ್ದಗಲಕ್ಕೂ ಈ ನಾಟಕ ರಂಜಿಸಿದೆ. ಈ ಸೂಪರ್‌ ಕಾಮಿಡಿ ನಾಟಕವನ್ನು ಬೆಂಗಳೂರಿನಲ್ಲಿ ಸತತವಾಗಿ 488 ಹೌಸ್‌ಫ‌ುಲ್‌ ಪ್ರದರ್ಶನಗಳನ್ನು ಮಾಡಿದ್ದು ಒಂದು ದಾಖಲೆ. ಅಮೆರಿಕದಲ್ಲಿ 9 ವಾರ ಸಂಚರಿಸಿ ತಮ್ಮ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿ ಅಲ್ಲಿನ ಜನರ ಮೆಚ್ಚುಗೆಯನ್ನು ಮಾಸ್ಟರ್‌ ಪಡೆದಿದ್ದರು.

ಎಂ. ಎಸ್‌. ನರಸಿಂಹಮೂರ್ತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ