ಪ್ರಬಂಧ; ಕೊಡೆಗಳ್ಳರು 

Team Udayavani, Jun 25, 2017, 3:45 AM IST

ಅರವತ್ತನಾಲ್ಕು ವಿದ್ಯೆಗಳಲ್ಲಿ ಒಂದಾದ ಕಳ್ಳತನ ವಿದ್ಯೆಗೆ ಇರುವ ಶಾಖೆಗಳ ಸಂಖ್ಯೆ ನೂರಾರು. ಮನೆಗಳ್ಳತನ, ಸರಗಳ್ಳತನ, ಬ್ಯಾಂಕ್‌ ಕಳ್ಳತನ, ಎಟಿಎಂ ಕಳ್ಳತನ, ವಾಹನ ಕಳ್ಳತನ, ಜಾನುವಾರು ಕಳ್ಳತನ… ಹೀಗೆ ಶಾಖೆಗಳ ಪಟ್ಟಿಯನ್ನು ಮುಂದುವರಿಸಬಹುದು. ಇದಕ್ಕೆ ಇತ್ತೀಚೆಗಿನ ಸೇರ್ಪಡೆ-ಕೊಡೆಗಳ್ಳತನ! ಸಾಮಾನ್ಯವಾಗಿ ಉಳಿದೆಲ್ಲಾ ಕಳ್ಳತನಗಳನ್ನು ಕಳ್ಳನಾದವನು ತನ್ನ ಆರ್ಥಿಕ ಪ್ರಗತಿಗೆ ಕಂಡುಕೊಂಡ ದಾರಿಗಳು ಎನ್ನಬಹುದು. ಆದರೆ ಕೊಡೆಗಳ್ಳತನವನ್ನು ಹಾಗೆನ್ನುವಂತಿಲ್ಲ. ಕೆಲವೊಮ್ಮೆ ಸಂದರ್ಭದ ಅನಿವಾರ್ಯತೆಗೆ ಸಿಕ್ಕಿ ಕೊಡೆ ಕದಿಯುವವರೂ ಇದ್ದಾರೆ. ಇದಕ್ಕೊಂದು ಉದಾಹರಣೆ ನೋಡಿ; ಸುದ್ದಿಯಿಲ್ಲದೆ ಬಂದಿಳಿಯುವ ಅಳಿಯಂದಿರ ಹಾಗೆ ಇದ್ದಕ್ಕಿದ್ದಂತೆ ಮಳೆ ಸುರಿಯಿತು ಎಂದಿಟ್ಟುಕೊಳ್ಳೋಣ. ಆಗ ನೀವು ಕೊಡೆ ತಂದಿರುವುದಿಲ್ಲ. ಬಸ್ಸಿನಲ್ಲಿ ನಿಮ್ಮ ಪಕ್ಕದ ಸೀಟಿನಲ್ಲಿ ಕುಳಿತ ಮಹಾಶಯ ಕೊಡೆಯನ್ನು ಅಲ್ಲಿಯೇ ಬಿಟ್ಟು ಎಲ್ಲಿಯೋ ಇಳಿದುಹೋಗಿದ್ದಾನೆ. ಮಳೆ ಸುರಿಯುತ್ತಿರುವುದರಿಂದ ನಿಮಗೊಂದು ಕೊಡೆಯ ಅಗತ್ಯವಿದೆ. ಈಗ ನೀವು ಅನಾಥ ಕೊಡೆಗೆ ಕೈಕೊಡುತ್ತೀರೋ, ಇಲ್ಲವೊ? ಇಲ್ಲಿ ಸಂದರ್ಭ ನಿಮ್ಮನ್ನು ಕಳ್ಳರನ್ನಾಗಿ ಮಾಡಿಸೀತು.

ನನ್ನ ತಲೆಗೆ ಈ ವಿಚಾರಗಳೆಲ್ಲ ಹೊಳೆದದ್ದು ನಾನು ಕೊಡೆಯನ್ನು ಕಳೆದುಕೊಂಡು ಕೋಡಂಗಿಯಾದ ಒಂದು ಸಂದರ್ಭದಲ್ಲಿ. ಅದೂ ಹಿಂದಿನ ದಿವಸ ಮುನ್ನೂರು ರೂಪಾಯಿ ಬೆಲೆಯ ಕೊಡೆಯ ಮುಂದೆ ಅರ್ಧ ಗಂಟೆ ನಿಂತು ಚೌಕಾಶಿ ಮಾಡಿ ಇನ್ನೂರ ಎಂಬತ್ತಕ್ಕೆ ಪಡೆದ ಸೊತ್ತಾಗಿತ್ತು. ಬೆಳಿಗ್ಗೆ ಹೊಸ ಕೊಡೆಯನ್ನು ಠೀವಿಯಿಂದ ಬಿಡಿಸಿ ಹಿಡಿದುಕೊಂಡು, “ಮಳೆ ಇಲ್ಲದಿದ್ರೂ ಕೊಡೆಯಾಕೆ ಬಿಡಿಸಿದ್ದೀರಿ ಮಹಾರಾಯೆÅ, ಇನ್ನೊಬ್ಬರ ಕಣ್ಣು ತೆಗೆಯಲಿಕ್ಕಾ?’ ಎಂದು ನಾಲ್ಕು ಮಂದಿಯಿಂದ ಹೇಳಿಸಿಕೊಂಡು ಬಸ್‌ ನಿಲ್ದಾಣ ಸೇರಿದ್ದೆ. ಮಂದಿ ಗೊಣಗಿದ್ದು ತಪ್ಪಲ್ಲ. ನನ್ನ ಕೊಡೆಯ ಕಡ್ಡಿ ಒಂದಿಬ್ಬರ ಮುಖ ಮೂತಿಯನ್ನು ಕುಕ್ಕಿತ್ತು. ಬಿಸಿಲಿಗೆ ನಾನು ಕೊಡೆ ಬಿಡಿಸಿದ್ದಂತೂ ತಪ್ಪು ಅಲ್ಲವೇ ಅಲ್ಲ. ಹತ್ತು ವರ್ಷಗಳ ಹಿಂದೆ ಇದೇ ಬೀದಿಯಲ್ಲಿ ಹತ್ತು ಮಂದಿ ಕೊಡೆ ಬಿಡಿಸಿಕೊಂಡು ಒಟ್ಟೊಟ್ಟಿಗೇ ಹೋಗುತ್ತಿದ್ದರು. ಅದೂ ಮರದ ಕಾಲಿನ ದೊಡ್ಡ ಕೊಡೆಯನ್ನು! ಈಗ ನಾನು ಹಿಡಿದದ್ದು ಮಡಚುವ ಚಿಕ್ಕ ಕೊಡೆಯನ್ನು. ಇದೂ ಕಣ್ಣಿಗೆ ತಾಗುತ್ತದೆ ಎಂದರೆ ತಪ್ಪು ಹೇರಿದ ಜನಸಂಖ್ಯೆ ಮತ್ತು ಕಿರಿದಾದ ಬೀದಿಯದ್ದು ತಾನೆ?

ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಕೊಡೆಯನ್ನು ಮಡಚಿ ಪಕ್ಕದಲ್ಲಿಟ್ಟು ಬಸ್‌ಸ್ಟಾಂಡಿನಲ್ಲಿ ಕುಳಿತು ಅಂದಿನ ಪೇಪರ್‌ ತೆರೆದು ನೋಡತೊಡಗಿದೆ. ಆಗ ನನ್ನ ಬಸ್‌ ಬಂತು. ಲಗುಬಗೆಯಿಂದ ಬಸ್ಸನ್ನೇರಿದೆ. ಬಸ್ಸು ಮುಂದಿನ ಸ್ಟಾಪ್‌ ತಲುಪಿದಾಗ ನನಗೆ ಫ‌ಕ್ಕನೇ ಕೊಡೆಯ ನೆನಪಾಯಿತು. ಅದು ಪೇಪರ್‌ ಓದಿದ ಸ್ಥಳದಲ್ಲಿಯೇ  ಉಳಿದಿತ್ತು. “ಅಯ್ಯೋ ದೇವರೇ’ ಎಂದು ಉದ್ಗರಿಸಿ ಅಲ್ಲೇ ಬಸ್ಸಿನಿಂದ ಇಳಿದು ಆಟೋ ಹಿಡಿದು ಸೀದಾ ಹಿಂದಿನ ಸ್ಟಾಪಿಗೆ ಬಂದೆ. ಕೊಡೆ ನಾನಿಟ್ಟ ಜಾಗದಿಂದ ಕಾಣೆಯಾಗಿತ್ತು. ಅಲ್ಲಿದ್ದವರಲ್ಲಿ ಕೇಳಿದೆ, “”ಇಲ್ಲೊಂದು ಕೊಡೆ ನೋಡಿದ್ರಾ? ಕಪ್ಪು ಬಣ್ಣ ಕಂದು ಹಿಡಿಯುಳ್ಳದ್ದು…”

“”ಇಲ್ಲ ಸಾರ್‌” ಎಂದರವರು. ಇಲ್ಲಿಗೆ ಹಿಂದಿನ ದಿನ ಖರೀದಿಸಿದ ಹೊಸ ಕೊಡೆಗೆ ಎಳ್ಳುನೀರು ಬಿಡಬೇಕಾಯಿತು.
ಕೊಡೆಯನ್ನಂತೂ ಯಾರೋ ಎಗರಿಸಿಬಿಟ್ಟರು. ಒಮ್ಮೆ ಯೋಚಿಸಿದೆ, ಈ ಬಗ್ಗೆ ಪೊಲೀಸರಿಗೆ ದೂರು ಕೊಡೋಣವೆ, ಎಂದು. ಆದರೆ, ಆ ಮೇಲೆ ಎಷ್ಟು ಸಾರಿ ಸ್ಟೇಷನ್ನಿಗೆ ಕುಣಿಯಬೇಕೋ! ಮುನ್ನೂರು ರೂಪಾಯಿ ಸೊತ್ತಿಗೆ ಮೂರು ಸಾವಿರದ ಪೆಟ್ಟು ಮಾಡಿಕೊಳ್ಳುವುದೇಕೆ? ಎಂದು ಸುಮ್ಮನಾದೆ. ಆದರೆ ಕೊಡೆಗಳ್ಳರನ್ನು ಸುಮ್ಮನೆ ಬಿಟ್ಟಿಲ್ಲ. ಈ ಬರಹದ ಮೂಲಕವಾದರೂ ಅವರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದುಕೊಂಡಿದ್ದೇನೆ.

ಕೊಡೆಗಳ್ಳರು ಅನಿವಾರ್ಯ ಪರಿಸ್ಥಿತಿಯಲ್ಲಿ ಈ ದಂಧೆಗಿಳಿಯುತ್ತಾರೆ ಎಂದೆನಷ್ಟೆ? ಇದು ಎಲ್ಲರಿಗೂ ಅನ್ವಯಿಸುವ ಮಾತಲ್ಲ. ಇತ್ತೀಚೆಗೆ ನಮ್ಮೂರಲ್ಲೊಬ್ಬ ಬೀದಿ ಬದಿಯಲ್ಲಿ ಕೊಡೆ ಮಾರುವವನನ್ನು ಪೊಲೀಸರು ಹಿಡಿದು ಇನ್ಯಾವುದೋ ಕೇಸಿನ ಬಗ್ಗೆ ವಿಚಾರಿಸಿದರು. ಆಗ ಅವನ ಬಾಯಿಯಿಂದ ಬಿದ್ದ ಸತ್ಯಾಂಶ ಕೊಡೆಗಳ್ಳತನದ ಕರಾಳ ಮುಖವನ್ನು ಅನಾವರಣಗೊಳಿಸಿತು. ಆ ವ್ಯಕ್ತಿ ಜನರು ಕೊಡೆಗಳನ್ನು ಹೊರಗಡೆ ಇರಿಸುವ ಶಾಲೆ, ದೇವಾಲಯ, ಮಂದಿರದಂತಹ ಜಾಗಗಳಿಗೆ ಹೋಗಿ ಕೊಡೆಗಳನ್ನು ಕದಿಯುತ್ತಿದ್ದ. ನಂತರ ಅವನ್ನು ಹೊಸದರಂತೆ ಮಾಡಿ ಮಾರುತ್ತಿದ್ದ. ಹೇಗಿದೆ ನೋಡಿ, ಇವನ ಐಡಿಯಾ!

ಮಳೆಗಾಲದಲ್ಲಿ ಕೊಡೆಗೆ ಪರ್ಯಾಯವಾಗಿ ಮಳೆ ಕೋಟು ಉಪಯೋಗಿಸಬಹುದಾದರೂ ಅದು ಕೊಡೆಯಷ್ಟು ಆರಾಮದಾಯಕವಲ್ಲ. ಆದುದರಿಂದ ಕೊಡೆಯನ್ನು ಬಿಟ್ಟಿರುವುದು ಕಷ್ಟ. ಮನೆಯ ಟಿವಿ, ಫ್ರಿಡ್ಜ್ಗಳಿಗೆ ನೀಡಿದಂತೆ ಇನ್ಶೂರೆನ್ಸ್‌  ಕೊಡುಗೆ ನೀಡಲು ಯಾವುದೇ ಕಂಪೆನಿ ಮುಂದೆ ಬಂದಿಲ್ಲವಾದುದರಿಂದ ಅದನ್ನು ಕಳೆದುಕೊಂಡರೆ ನಷ್ಟ ಅನುಭವಿಸಬೇಕಾಗುತ್ತದೆ. ಹಾಗೆಂದು ಚಿಂತೆ ಬೇಡ. ಖಂಡಿತ ಕೊಡೆಯನ್ನು ಯಾವುದೇ ಅಳುಕಿಲ್ಲದೆ ನೀವು ಉಪಯೋಗಿಸಿ. ಆದರೆ ಉಪಯೋಗಿಸುವಾಗ ಕೆಲವು ಕಿವಿಮಾತುಗಳನ್ನು ನೆನಪಿಡಿ:

.ಆದಷ್ಟು ದೊಡ್ಡ ಕೊಡೆಯನ್ನು ಉಪಯೋಗಿಸಿ. ಇದರಿಂದ ಪರರಿಗೆ ಸ್ವಲ್ಪ ತೊಂದರೆಯಾದರೂ ಅಡ್ಡಿಯಿಲ್ಲ. ಕಳ್ಳರಿಗೆ ಈ ಕೊಡೆಯ ಮೇಲೆ ತಮ್ಮ ಕೈಚಳಕ ತೋರಿಸುವುದು ಕಷ್ಟಸಾಧ್ಯ.

.ಕೊಡೆಯನ್ನು ಒಯ್ದು ಅಲ್ಲಿ-ಇಲ್ಲಿ ಬಿಡುವ ಬದಲು ನಿಮ್ಮ ಕೈಗೋ ತೋಳಿಗೋ ಅದನ್ನು ಸಿಕ್ಕಿಸಿಕೊಳ್ಳಿ ಅಥವಾ ತೊಡೆಯ ಮೇಲೆ ಮಲಗಿಸಿಕೊಳ್ಳಿ. ಇದರಿಂದ ನಿಮ್ಮ ಮರೆವಿನ ರೋಗ ನಿಯಂತ್ರಣಕ್ಕೆ ಬರುತ್ತದೆ ಮತ್ತು ಕೊಡೆಗಳ್ಳರು ನಿಮ್ಮ ಕೊಡೆಯ ಮೇಲೆ ಕಣ್ಣಿಟ್ಟಿದ್ದರೂ ಅವರಿಗೆ ಏನೂ ಮಾಡಲು ಸಾಧ್ಯವಿಲ್ಲದಂತಾಗುತ್ತದೆ.

.ಮರೆವು ನಿಮ್ಮನ್ನು ಅತಿಯಾಗಿ ಕಾಡುತ್ತಿದ್ದರೆ ಆದಷ್ಟು ಹಳೆಯ ಕೊಡೆಯನ್ನು ಬಳಸಿ. ಕೊಡೆಯ ಬಟ್ಟೆಯ ಬಣ್ಣ ಮಾಸಿದ್ದರೆ ಇನ್ನೂ ಉತ್ತಮ.

.ಕೊಡೆಗಳ್ಳರ ಬಗ್ಗೆ ಇತರರಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕ ಸ್ಥಳಗಳಲೆಲ್ಲ ಬೋರ್ಡ್‌ ಹಾಕಿ: “ಕೊಡೆಗಳ್ಳರಿದ್ದಾರೆ, ಎಚ್ಚರಿಕೆ!’.

– ಭಾಸ್ಕರ ಕೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚೀನಾದಲ್ಲಿನ ವೈರಸ್‌ ಅಧ್ವಾನ ಪ್ರಕೃತಿಯ ಕೊಡುಗೆಯೆ, ಮನುಷ್ಯ ಕೃತವೆ- ಎಂಬ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು...

  • ಕವಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಡನಾಡಿದ ಅಂದಿನ ದಿನಗಳನ್ನು ನೆನೆಯುವುದರಲ್ಲಿ ಎಂಥ ಆನಂದವಿದೆ! 1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ ಚಂಡೆಮದ್ದಳೆ...

  • ಗಾಂಧೀಜಿಯವರು 1934ರ ಫೆಬ್ರವರಿ 24-25ರಂದು ಕರ್ನಾಟಕದ ಕರಾವಳಿಯಲ್ಲಿ ಪ್ರವಾಸ ಮಾಡಿದರು. ಅಂದು ಅವರು ಸಾಮಾನ್ಯ ಬಾಲಕಿಗೆ ಬರೆದ ಪತ್ರ ಮತ್ತು ಪತ್ರಕ್ಕೆ ಸಂಬಂಧಿಸಿದ...

  • ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ...

  • ಇತ್ತೀಚೆಗೆ ಊರಿನಲ್ಲಿ ನನ್ನ ದೊಡ್ಡ ಮಾವನ ಮರಿಮೊಮ್ಮಗಳಿಗೆ ನಾಮಕರಣವಾಯಿತು. ಏನು ಹೆಸರಿಟ್ಟಿದ್ದಾರೆ? ಎಂದು ಫೋನಾಯಿಸಿದ್ದೆ. "ಅದ್ವಿಕಾ' ಎಂದು ಉತ್ತರ ಬಂತು....

ಹೊಸ ಸೇರ್ಪಡೆ