ಘರ್‌ ಮೆ ಟೀವಿ ಹೈ

ಮಾಯಾಂಗನೆಯ ಮೋಡಿಯಲ್ಲಿ ಮಾನಿನಿ...

Team Udayavani, Nov 20, 2019, 6:14 AM IST

ಟಿ.ವಿ ಬಂದ ಮೇಲೆ ನಮ್ಮ ಮನೆಯಲ್ಲಿ ಸ್ವಲ್ಪ ಶಾಂತಿ ನೆಲೆಸಿದೆ ಮಾರಾಯ. ಅತ್ತೆ ಸೊಸೆಯರ ಜಗಳಕ್ಕೆ ಬ್ರೇಕ್‌ ಬಿದ್ದಿದೆ ಎಂದು ಗುಟ್ಟಾಗಿ ಸಂತಸ ಪಡುವ ಗಂಡಸರೂ ಇದ್ದರು. ಪರಿಸ್ಥಿತಿಯ ಪೂರ್ಣ ದುರಂತ ಎರಗಿದ್ದು ಮಾತ್ರ ಮಕ್ಕಳ ವಿದ್ಯಾಭ್ಯಾಸದ ಮೇಲೆ. ಶಾಲೆಯಲ್ಲಿ ಏನು ಕಲಿಸಿದರು? ನೀವೇನು ಓದಿದಿರಿ? ಪರೀಕ್ಷೆ ಯಾವಾಗ? ಓದಿ ಆಯಿತಾ? ಮಗ್ಗಿ ಬಾಯಿಪಾಠ ಕೊಡುತ್ತೀಯಾ? ಎಂಬ ಪ್ರಶ್ನೆಗಳನ್ನು ಕೇಳುವ ಹಿರಿಯರೇ ಮನೆಗಳಿಂದ ನಾಪತ್ತೆಯಾಗಿ ಹೋದರು.

ಟಿ.ವಿ ಎಂಬ ಮಾಯಾಂಗನೆಯು ಮನುಷ್ಯನನ್ನು ಆವರಿಸಿಕೊಳ್ಳದ ಸುಂದರವಾದ ಕಾಲದಲ್ಲಿ ನನ್ನ ವಿದ್ಯಾಭ್ಯಾಸ ಮುಗಿದಿತ್ತು ಎಂಬುದು ನನ್ನ ಪೂರ್ವಜನ್ಮ ಪುಣ್ಯದ ಫ‌ಲ. ಆಗಿನ ಹಳ್ಳಿಗಳ ಕೃಷಿಕರ ಮನೆಯ ನಿಶ್ಶಬ್ದ ಬೆಳಗುಗಳಲ್ಲಿ ತೋಟ, ಬೆಟ್ಟಗಳಿಂದ ಕೇಳಿ ಬರುವ ವಿವಿಧ ಪಕ್ಷಿ ಸಂಕುಲಗಳ ಚಿಲಿಪಿಲಿ ನಾದ ಬಿಟ್ಟರೆ, ಮನೆಯ ಕೊಟ್ಟಿಗೆಯಲ್ಲಿ ಇರುವ ಎಮ್ಮೆ ದನಗಳು “ಬನ್ನಿ, ಹಾಲು ಹಿಂಡಿಕೊಂಡು ಹೋಗಿ’ ಎಂಬಂತೆ ಆಹ್ವಾನ ನೀಡುವ ಅಂಬಾ ಎಂಬ ಕರೆ, ಕರುವಿನ ಕೂಗು. ಜತೆಯಲ್ಲಿಯೇ ನನ್ನ ಪಾಲಿನ ಹಾಲನ್ನು ನನಗೆ ಕೊಟ್ಟು ಒಳಗೆ ಹೋಗಿ ಎಂದು ಹಠ ಹಿಡಿದ ಮಗುವಿನಂತೆ ಕಾಲು ಸುತ್ತುವ ಬೆಕ್ಕಿನ ಮಿಯಾಂವ್‌ ಸದ್ದು, ಬೆಕ್ಕಿನ ಸ್ವಾತಂತ್ರ್ಯವನ್ನು ಕಂಡು ಹೊಟ್ಟೆಕಿಚ್ಚಿಂದ ಎಂಬಂತೆ ವಿನಾಕಾರಣ ಬೌಬೌ ಎನ್ನುವ ನಾಯಿಯ ಆರ್ಭಟದ ಕೂಗುಗಳು ಮನೆಯನ್ನು ಆವರಿಸಿಕೊಂಡಿರುತ್ತಿದ್ದವು.

ಬಾವಿಯಿಂದ ನೀರನ್ನು ಎತ್ತುವ ಗಡಗಡೆಯ ಸದ್ದು, ಬಾಗಿಲು ಸಾರಿಸಿ ರಂಗವಲ್ಲಿ ಇಡುವವರ ಉದಯರಾಗದ ಗುನುಗು, ದೇವರಿಗೆ ಹೂ ಕೊಯ್ಯುವ ಸಂಭ್ರಮ…. ಸ್ವಲ್ಪ ಸಮಯದ ಬಳಿಕ, “ಚಾ ಮಾಡಿಯಾಗಿದೆ. ತೆಳ್ಳೇವು ಎರೆಯುತ್ತಿದ್ದೇನೆ. ತಿಂಡಿಗೆ ಬನ್ನಿ’ ಎಂದು ಅಡುಗೆ ಮನೆಯಿಂದಲೇ ಆಸರಿಗೆ ಆಹ್ವಾನಿಸುವ ಅಮ್ಮನ ಕರೆ. ಆಗ ಎಲ್ಲರೂ ಏಕಕಾಲಕ್ಕೆ ಅಡುಗೆ ಮನೆಗೆ ಧಾವಿಸುತ್ತಿದ್ದೆವಾದ್ದರಿಂದ, ಅಲ್ಲಿ ಬೆಳಗಿನ ತಿಂಡಿಯ ಗದ್ದಲ ಏರ್ಪಡುತ್ತಿತ್ತು. ಇದು ಟಿ.ವಿಯೆಂಬ ಮಾಯಾಂಗನೆ ನಮ್ಮ ಮನೆಯನ್ನು ಆಕ್ರಮಿಸುವ ತನಕವೂ ಮುಂದುವರಿದುಕೊಂಡು ಬಂದ ನಿರಾತಂಕ, ನಿಶ್ಶಬ್ದ ಬೆಳಗು.

ದೇಶವನ್ನು ಪ್ರವೇಶಿಸಿದ ಟಿ.ವಿ ಎಂಬ ಮೂರ್ಖರ ಪೆಟ್ಟಿಗೆ ನಮ್ಮ ಹಳ್ಳಿಯ ಮನೆಯನ್ನು ಆಕ್ರಮಿಸಲು ಹೆಚ್ಚು ದಿನ ಹಿಡಿಯಲಿಲ್ಲ ಊರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಟಿ.ವಿ ಇದ್ದುದರಿಂದ ರಾಮಾಯಣ, ಮಹಾಭಾರತ ಸೀರಿಯಲ್‌ಗ‌ಳು ಪ್ರಸಾರವಾಗುವಾಗ ಬೆಳಗ್ಗೆ ಏಳು ಗಂಟೆಗೆಲ್ಲ ಆಚೀಚೆ ಮನೆಯವರು ಬಂದು ಹಣಕುವುದು ಪ್ರಾರಂಭವಾಯಿತು. ಮಹಾಭಾರತ ಸೀರಿಯಲ್‌ ಪ್ರಾರಂಭವಾಗುವ ಹೊತ್ತಿಗೆ ಇಡೀ ಮನೆ ಜನರಿಂದ ಗಿಜಿಗಿಜಿಗೊಳ್ಳಲು ತೊಡಗಿ, ಮನೆಯ ಬೆಳಗಿನ ಸದ್ದು ಅಡಗಿ ಹೋಯಿತು. ಜನ ಬರುವುದರೊಳಗೆ ತಿಂಡಿ ಮುಗಿಯಬೇಕು ಬೇಗ ಏಳಿ ಬೇಗ ಬನ್ನಿ ಬೇಗ ಬೇಗ… ಎಂಬ ಮಂಗಳೂರಿನ ಸಿಟಿ ಬಸ್ಸಿನ ವೇಗ ನಮ್ಮ ಬೆಳಗಿಗೆ ಪ್ರಾಪ್ತವಾಗಿ, ಮುದ್ದು ಮಾಡಿಸಿಕೊಳ್ಳುತ್ತಿದ್ದ ಬೆಕ್ಕು, ನಾಯಿ, ಆಕಳುಗಳೆಲ್ಲ ಪಾಪ ದೀನ ವದನದಿಂದ ನಮ್ಮನ್ನು ನೋಡಿ ನಿಡುಸುಯ್ಯುವುದು ಕಾಣುತ್ತಿತ್ತಾದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಮ್ಮದು.

ನಿಮಿಗೇನು? ತೋಟದ ಕಡೆ ಬಾಲ ಮಡಚಿಕೊಂಡು ಓಡಿದರಾಯ್ತು. ನಮ್ಮ ಅವಸ್ಥೆ ಹೇಳಿ… ಎಂದು ಅಮ್ಮ ಪ್ರಾಣಿಗಳ ಬಳಿ ತಮ್ಮ ಫ‌ಜೀತಿ ಹೇಳಿಕೊಳ್ಳುವ ಪದ್ಧತಿಯನ್ನು ಮಾತ್ರ ಮುಂದುವರಿಸಿಕೊಂಡೇ ಇದ್ದರು. ಯಕ್ಷಗಾನಗಳಲ್ಲಿ ಮಾತ್ರ ನೋಡುತ್ತಿದ್ದ ಭೀಷ್ಮ, ಅಶ್ವತ್ಥಾಮ, ಕೃಷ್ಣನಂಥ ಪಾತ್ರಗಳು ಪೆಟ್ಟಿಗೆಯೊಳಗೆ ಪ್ರತ್ಯಕ್ಷವಾಗಿ ಜಗುಲಿಯಲ್ಲೇ ಕೂತು ಚಹಾ ಕುಡಿಯುತ್ತಾ ನೋಡಬಹುದಾದ ಆ ವ್ಯವಸ್ಥೆಯನ್ನು ಹಳ್ಳಿಗರು ತುಂಬಾ ಸಂಭ್ರಮದಿಂದ ಬರಮಾಡಿಕೊಂಡರು. ಮೊದಮೊದಲು ಅದರ ಗಂಭೀರತೆ ಅರ್ಥವಾಗಿರಲಿಲ್ಲ. ಸಂಜೆಯ ಸಮಯವನ್ನು ತಮ್ಮ ತಮ್ಮ ಮನೆಗಳಲ್ಲಿ ಮಹಾಭಾರತ-ರಾಮಾಯಣ ಕಥೆಗಳನ್ನು ಓದುತ್ತಾ ಕಾಲ ಕಳೆಯುತ್ತಿದ್ದ ಗ್ರಾಮಸ್ಥರು, ಈಗ ನಮ್ಮ ಮನೆಯ ಜಗುಲಿಯಲ್ಲಿ ಕೃಜ್ಞರ್ತೆಗಳನ್ನು, ಹವಾಮಾನ ವರದಿಯನ್ನು, ದೆಹಲಿ ಕೇಂದ್ರದಿಂದ ಬರುತ್ತಿದ್ದ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನು ನೋಡುತ್ತಾ, “ಎಂಥ ಸುಡುಗಾಡು ಹೇಳಿದ?’ ಎಂದು ತಮ್ಮ ತಮ್ಮಲ್ಲಿ ವಿಮರ್ಶಿಸುತ್ತಾ ಕಾಲಹರಣಕ್ಕೆ ತೊಡಗಿಬಿಟ್ಟರು.

ಟಿ.ವಿ ಹಾಕಲು ಸಮಯ ನಿಗದಿಪಡಿಸಿ ಎಂದು ನಾವು ಹೇಳಿದರೂ, ಇಂಥ ಸಮಯಕ್ಕೆ ಬರಬೇಡಿ. ಇಂಥ ಸಮಯಕ್ಕೇ ಬನ್ನಿ ಎಂದು ಹೇಳಿದರೆ ಊರವರು ಏನೆಂದುಕೊಳ್ಳುತ್ತಾರೋ ಎಂಬ ದಾಕ್ಷಿಣ್ಯಕ್ಕೆ ಬಿದ್ದ ತಂದೆ, ಜನ ಬಂದಾಗೆಲ್ಲಾ ಟಿವಿ ಹಚ್ಚತೊಡಗಿದರು. ಇದರಿಂದ ಉಪದ್ರವಕ್ಕೊಳಗಾಗಿದ್ದು ನಮ್ಮ ಮನೆಯ ಮಹಿಳಾ ವರ್ಗ. ಮನೆಯವರಿಗೆ ಮಾತ್ರ ಮಾಡಿಟ್ಟ ತಿಂಡಿ-ಚಹಾವನ್ನು ಪಕ್ಕದ ಮನೆಯವರಿಗೂ ಕೊಡಬೇಕಾಗಿ ಬರುತ್ತಿದ್ದರಿಂದ ಎಷ್ಟು, ಹೇಗೆ ಮಾಡಿಡಬೇಕೆಂದೇ ಗೊತ್ತಾಗದೆ, ಮುಜುಗರದ ಪ್ರಸಂಗಗಳು ಆಗೀಗ ಎದುರಾಗತೊಡಗಿದ್ದವು. ಕ್ರಮೇಣ ಎಲ್ಲರ ಮನೆಗಳಲ್ಲೂ ಟಿ.ವಿ ಅವತರಿಸಿದ್ದರಿಂದ ನಮ್ಮ ಮನೆಯಲ್ಲಿ ಅತಿಥಿ ಪ್ರೇಕ್ಷಕರು ಕಡಿಮೆಯಾದರೂ, ಹಳ್ಳಿಯ ಬದಲಾದ ದಿನಚರಿ ಮಾತ್ರ ಶೋಚನೀಯ ವಾಗತೊಡಗಿತು.

ಸಂಜೆ ಬೀದಿಯಿಡೀ ಸುಂಯ್‌ ಸುಂಯ್‌ ಎಂದು ಸೈಕಲ್‌ ಹೊಡೆಯುತ್ತಿದ್ದ ಸ್ಕೂಲ್‌ ಮಕ್ಕಳು, ಮನೆಯೊಳಗೆ ಟಿ.ವಿ ಮುಂದೆ ಪ್ರತಿಷ್ಠಾಪನೆಗೊಂಡವು. ಧಾರಾವಾಹಿಗಳ “ರೋದನ ಪರ್ವ’ ಪ್ರಾರಂಭವಾದ ಮೇಲೆ ಮಹಿಳೆಯರು ಬೇಗ ಬೇಗ ಕೊಟ್ಟಿಗೆಯ ಹಾಲು ಕರೆದಿಟ್ಟು, ಏನೋ ಒಂದು ಸಾರು ಕುದಿಸಿ, ಅಡುಗೆ ಮುಗಿಸಿ, ಎಂದೂ ಮುಗಿಯದ ಧಾರಾವಾಹಿಗಳ ಪಾತ್ರಗಳ ಗೋಳಿಗೆ ತಲೆ ಆಡಿಸತೊಡಗಿದರು. ಅವರು ಅತ್ತಾಗ ತಾವೂ ಅತ್ತು, ನಕ್ಕಾಗ ನಕ್ಕು, ಧಾರಾವಾಹಿಗಳ ಕತೆಗಳನ್ನು ಪರಸ್ಪರ ಭೇಟಿಯಾದಾಗ ಮಾತನಾಡಿಸುವ ಮಟ್ಟಿಗೆ ಅಳವಡಿಸಿಕೊಂಡರು.

“ಛೇ, ಚಂದ್ರಿಕಾಗೆ ಹಾಗೆ ಆಗಬಾರದಿತ್ತು ಅಲ್ದನೇ ಪಾರ್ವತಕ್ಕ? ಪಾಪ, ಭಗವಂತ ಎಂಥ ಕಷ್ಟ ಬರೆದಿದ್ದಾನೆ ಅವಳ ಹಣೆಯಲ್ಲಿ… ಕರುಳು ಚುರುಕ್‌ ಎನ್ನುತ್ತದೆ’ ಎನ್ನುವುದು, ಏನಾದರೂ ಕಾರ್ಯಕ್ಕೆ ಹೋಗಿ ಒಂದು ದಿನದ ಧಾರಾವಾಹಿ ವೀಕ್ಷಣೆ ತಪ್ಪಿ ಹೋಯಿತೆಂದರೆ, ಪಕ್ಕದ ಮನೆಯವರಲ್ಲಿ ಅವತ್ತಿನ ಕಥೆ ಕೇಳುವುದು… ಹೀಗೆ ಮಹಿಳೆಯರ, ಮಕ್ಕಳ ದಿನಚರಿಯೇ ಬದಲಾಗಿ ಹೋಯಿತು. ಸಂಜೆ ದೇವರಿಗೆ ದೀಪವಿಟ್ಟ ಬಳಿಕ ಮಕ್ಕಳು ಪಾಠಗಳನ್ನು, ಮಗ್ಗಿಯನ್ನು ಬಾಯಿಪಾಠ ಮಾಡುವ ಕ್ರಮ ಮೂಲೆಗುಂಪಾಯಿತು. ಭಜನೆಗಳು ಇಲ್ಲವಾದವು. ಅಪರೂಪಕ್ಕೆ ಟಿ.ವಿಯಿಂದಾದ ಲಾಭಗಳನ್ನೂ ಹೇಳದೆ ಬಿಡುವಂತಿಲ್ಲ. ಹೊತ್ತಲ್ಲದ ಹೊತ್ತಿನಲ್ಲಿ ಅತಿಥಿಗಳು ಬರುವುದು, ಅವರಿಗೆ ಊಟ ನೀಡುವುದು ಮೊದಲಾದ ಪೂರ್ವಪದ್ಧತಿಗಳು ಮಾಯವಾತೊಡಗಿದವು .

ಎಲ್ಲರೂ ತಮ್ಮ ತಮ್ಮ ಮನೆಯ ಟಿವಿ ಪೆಟ್ಟಿಗೆಗಳ ಮುಂದೆ ಪ್ರತಿಷ್ಠಾಪನೆಗೊಂಡು ಆಚೀಚೆ ಓಡಾಡುವುದನ್ನೇ ಬಿಟ್ಟರೆಂದರೆ ತಪ್ಪಿಲ್ಲ. ಕೆಲವು ಮನೆಗಳಲ್ಲಿ ಹಾವು- ಮುಂಗುಸಿಗಳಂತೆ ಕಿತ್ತಾಡುತ್ತಿದ್ದ ಅತ್ತೆ-ಸೊಸೆಯಂದಿರು ಧಾರಾವಾಹಿ ಪ್ರಾರಂಭವಾಗುತ್ತಿದ್ದಂತೆ ಹತ್ತಿರ ಹತ್ತಿರ ಕೂತು, ಜಾಹೀರಾತಿನ ಬಿಡುವಿನಲ್ಲಿ ತಮ್ಮ ಮಾಮೂಲು ವೈರವನ್ನು ಧುಮುಗುಡುವ ಮುಖ ಚಹರೆಯನ್ನು ಬದಲಿಸಿಕೊಂಡು “ನಾಳೆ ಬೆಳಿಗ್ಗೆ ತಿಂಡಿಗೆ ಏನು ಮಾಡುವುದು? ರಾತ್ರಿ ಊಟಕ್ಕೇನು’ ಎಂಬ ಉಭಯ ಕುಶಲೋಪರಿಯನ್ನೂ ಪ್ರಾರಂಭಿಸುತ್ತಿದ್ದರು. ಇನ್ನೇನು ಧಾರಾವಾಹಿ ಪ್ರಾರಂಭವಾಗಿ ಬಿಡುತ್ತದೆ, ಬೇಗ ಬೇಗ ಕೆಲಸ ಮುಗಿಸಿ ಬಿಡೋಣ ಎಂದು ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಟಿ.ವಿ ಬಂದ ಮೇಲೆ ನಮ್ಮ ಮನೆಯಲ್ಲಿ ಸ್ವಲ್ಪ ಶಾಂತಿ ನೆಲೆಸಿದೆ ಮಾರಾಯ.

ಅತ್ತೆ ಸೊಸೆಯರ ಜಗಳಕ್ಕೆ ಬ್ರೇಕ್‌ ಬಿದ್ದಿದೆ ಎಂದು ಗುಟ್ಟಾಗಿ ಸಂತಸ ಪಡುವ ಗಂಡಸರೂ ಇದ್ದರು. ಪರಿಸ್ಥಿತಿಯ ಪೂರ್ಣ ದುರಂತ ಎರಗಿದ್ದು ಮಾತ್ರ ಮಕ್ಕಳ ವಿದ್ಯಾಭ್ಯಾಸದ ಮೇಲೆ. ಶಾಲೆಯಲ್ಲಿ ಏನು ಕಲಿಸಿದರು? ನೀವೇನು ಓದಿದಿರಿ? ಪರೀಕ್ಷೆ ಯಾವಾಗ? ಓದಿ ಆಯಿತಾ? ಮಗ್ಗಿ ಬಾಯಿಪಾಠ ಕೊಡುತ್ತೀಯಾ? ಎಂಬ ಪ್ರಶ್ನೆಗಳನ್ನು ಕೇಳುವ ಹಿರಿಯರೇ ಮನೆಗಳಿಂದ ನಾಪತ್ತೆಯಾಗಿ ಹೋದರು. ಅವರವರ ಟಿ.ವಿ ಪ್ರಪಂಚದಲ್ಲಿ ಅವರವರು. ಧಾರಾವಾಹಿ ವೀಕ್ಷಣೆಯ ತುರ್ತಿನಲ್ಲಿ ಮನೆಗೆ ಯಾರಾದರೂ ಬಂದರೆ ಚೂರು ಮುಗುಳು ನಕ್ಕಂತೆ ಮಾಡಿ, ಕುಡಿಯಲಿಕ್ಕೆ ಬೇಕಾ ಎಂದು ಕೇಳಿ ಹೂಂ ಅಂದರಾ ಊಹೂಂ ಅಂದರಾ ಎಂದು ಕೇಳಿಸಿಕೊಳ್ಳದೆ ಟೀವಿಯಲ್ಲಿ ಕಣ್ಣು ಕೀಲಿಸಿಕೊಂಡು ಕೂಡುವ ಮನೆಯೊಡತಿಯರು. ಒಟ್ಟಾರೆ ಕೌಟುಂಬಿಕ ಚಿತ್ರಣವೇ ಬದಲಾಗಿ ಹೋಯಿತು. ಇದಾಗಿ ಈಗ ಎರಡು ಮೂರು ದಶಕಗಳೇ ಕಳೆದು ಹೋಗಿವೆ.

ಹಳ್ಳಿಗಳ ಮನೆಯಲ್ಲಿರುವ ಯುವ ಜನಾಂಗ ನೌಕರಿಯನ್ನರಸಿ ಪಟ್ಟಣಗಳಿಗೆ ಹೋಗಿ ಕುಳಿತಿವೆ. ವಿಶಾಲವಾದ ಮನೆಗಳಲ್ಲಿ ಅಜ್ಜ ಅಜ್ಜಿಯರು ಮಾತ್ರ. ಮಕ್ಕಳು- ಮೊಮ್ಮಕ್ಕಳ ಗದ್ದಲವಿಲ್ಲ. ಹಬ್ಬ ಹರಿದಿನಗಳಲ್ಲಿ ಬಂದು ಮುಖ ತೋರಿಸಿದರೆ ಅದೇ ಹೆಚ್ಚು. ನವರಾತ್ರಿಗೆ ಬಂದಿದ್ದೇವಲ್ಲಮ್ಮ, ಇನ್ನು ದೀಪಾವಳಿಗೆ ಬರುವುದಿಲ್ಲ ಎಂದು ಹೇಳುವ ಸುಪುತ್ರರೇ ಜಾಸ್ತಿ. ಗತಕಾಲದ ವೈಭವವನ್ನು ನೆನಪಿಸಿಕೊಳ್ಳುತ್ತಾ ಕೂತಿರುವ ಅಸಹಾಯಕ ಸ್ಥಿತಿ ವೃದ್ಧ ತಂದೆ ತಾಯಿಗಳದ್ದು. ಕೈಲಾಗದ ದೈಹಿಕ ಸ್ಥಿತಿಯಿಂದಾಗಿ ಕೊಟ್ಟಿಗೆ, ದನ-ಕರುಗಳು, ಆಳು ಕಾಳುಗಳು… ಎಲ್ಲರಿಗೂ ವಿದಾಯ ಹೇಳಿ ಆಗಿದೆ.

ನೀರವ ಮುಂಜಾನೆಗಳು ಹಗಲು ರಾತ್ರಿಗಳನ್ನು ಕಳೆಯುವುದು ಅವರಿಗೆ ಅಸಹನೀಯವಾಗದಂತೆ ನೋಡಿಕೊಳ್ಳುವ ಯಾಂತ್ರಿಕ ಕೆಲಸವನ್ನು ಈ ನಮ್ಮ ವಟವಟ ಪೆಟ್ಟಿಗೆ ವಹಿಸಿಕೊಂಡಿದೆ ಎಂಬುದು ವಿಚಿತ್ರವಾದರೂ ಸತ್ಯ. ದೇವರ ಪೂಜೆಗಳು, ಅಭಿಷೇಕಗಳು, ದೇವಸ್ಥಾನದ ದರ್ಶನದಂತ ಬೆಳಗಿನ ಕಾರ್ಯಕ್ರಮಗಳನ್ನು ಅಜ್ಜಿ ಕೂತು ನೋಡಿದರೆ, ಸಂಜೆಯ ಧಾರಾವಾಹಿಗಳನ್ನು , ತಮ್ಮ ಮೊಮ್ಮಕ್ಕ ಳಂತೆ ಕಾಣುವ ಚಿಕ್ಕ ಮಕ್ಕಳ ರಿಯಾಲಿಟಿ ಶೋಗಳನ್ನು ಇಬ್ಬರೂ ಕೂತು ನೋಡುತ್ತಾರೆ. ಆ ಮಟ್ಟಿಗೆ ಟಿ.ವಿ ಪೆಟ್ಟಿಗೆ ವೃದ್ಧ ದಂಪತಿಗಳನ್ನು ಅಷ್ಟಿಷ್ಟಾದರೂ ಲವಲವಿಕೆಯಿಂದ ಇಡಬಲ್ಲ ಪಾತ್ರವನ್ನು ವಹಿಸುತ್ತಿದೆ. ಇಷ್ಟೊಂದು ಬದಲಾವಣೆಗಳನ್ನು ತಿಳಿದ ಮೇಲೂ, ಅದಕ್ಕೆಲ್ಲ ಕಾರಣವಾದ ಟಿ.ವಿಯನ್ನು ಮೆಚ್ಚದೇ ಇರಲಾದೀತೇ? ದೂರದರ್ಶನವೇ ನಿನಗಿದೋ ನಮಸ್ಕಾರ ಎನ್ನಲಾಗದಿದ್ದೀತೆ?

* ಭುವನೇಶ್ವರಿ ಹೆಗಡೆ


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ