ಕೃಷ್ಣಂ ವಂದೇ ಜಗದ್ಗುರುಂ…

ಕೃಷ್ಣ ನಮಗೇಕೆ ಇಷ್ಟ?

Team Udayavani, Aug 21, 2019, 5:00 AM IST

10

ದೇವನೊಬ್ಬ ನಾಮ ಹಲವು ಎನ್ನುವಂತೆ, ವ್ಯಕ್ತಿಯೊಬ್ಬ ವ್ಯಕ್ತಿತ್ವ ಹಲವು ಅನ್ನುವುದಕ್ಕೆ ಶ್ರೀಕೃಷ್ಣನೇ ಉದಾಹರಣೆ. ಒಂದು ಜನ್ಮದಲ್ಲಿ ನೂರಾರು ಪಾತ್ರಗಳನ್ನು ನಿರ್ವಹಿಸಿದ ಶ್ರೀಕೃಷ್ಣ, ನಮ್ಮ ನಮ್ಮ ಭಾವಕ್ಕೆ ತಕ್ಕಂತೆ ಗೋಚರಿಸುತ್ತಾನೆ. ಭಕ್ತರಿಗೆ ದೇವನಾಗಿ, ರಾಧೆಗೆ ಪ್ರಿಯತಮನಾಗಿ, ರುಕ್ಮಿಣಿಗೆ ಪತಿಯಾಗಿ, ಅರ್ಜುನನಿಗೆ ಗೆಳೆಯನಾಗಿ, ಇಡೀ ಜಗತ್ತಿಗೆ ಗೀತೆಯನ್ನು ಸಾರಿದ ಗುರುವಾಗಿ… ಹೀಗೆ ಶ್ರೀಕೃಷ್ಣ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ವಿಶ್ವರೂಪ ದರ್ಶನ ನೀಡಿದ್ದಾನೆ. ಕಷ್ಟ ಬಂದಾಗ ಅವನಲ್ಲಿ ಮಾರ್ಗದರ್ಶಕನನ್ನು, ಖುಷಿಯಾದಾಗ ಅವನಲ್ಲಿ ಗೆಳೆಯನನ್ನು, ಕಾಣುವವರಿದ್ದಾರೆ. ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ, ಶ್ರೀಕೃಷ್ಣನನ್ನು ಹಲವರು ಹಲವು ಬಗೆಯಲ್ಲಿ ನೆನೆದಿದ್ದಾರಿಲ್ಲಿ…

1. ಜೀವಿಸುವ ಪರಿ ಎಂತು ನಿನ್ನ ನಾಮವ ಮರೆತು
ಕೃಷ್ಣನೆಂದರೆ ನನಗೆ ಬಾಲ್ಯದಿಂದಲೂ ಅಚ್ಚುಮೆಚ್ಚು. ಆತನೊಬ್ಬ ದೈವೀಸ್ವರೂಪಿ, ಅವತಾರ ಪುರುಷ ಎನ್ನುವುದಕ್ಕಿಂತಲೂ, ಅವನು ನನ್ನ ಆತ್ಮೀಯ ಗೆಳೆಯ, ಗುರು, ಸಹಪಯಣಿಗ ಎಂಬ ಭಾವವೇ ನನ್ನೊಳಗೆ ತುಂಬಿಕೊಂಡಿದೆ. ನನ್ನ ಪ್ರಕಾರ, ಶ್ರೀಕೃಷ್ಣ ಸದಾ ಮನುಜನ ಮನಸ್ಸಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟವನು. ಬದುಕಲ್ಲಿ ಅತೀವ ನೋವು ಉಂಟಾದಾಗೆಲ್ಲಾ ಗೀತೆಯ ಕೃಷ್ಣ ಧುತ್ತನೆ ಎದುರಾಗಿ ಬಂದು, ತೊಡರನ್ನು ಬಿಡಿಸುತ್ತಾನೆ. ಉಹೂಂ, ಇನ್ನು ನಾನು ಸೋತೆ ಎಂದಾಕ್ಷಣ ತಲೆ ಮೊಟಕಿ ಹೇಳುತ್ತಾನೆ – ನಾವು ನಮ್ಮ ಹೃದಯ ದೌರ್ಬಲ್ಯಗಳಿಂದ ಮೇಲೆದ್ದಾಗ ಮಾತ್ರ ಹೋರಾಟದಲ್ಲಿ ಗೆಲ್ಲುವೆವು (ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕೊತ್ತಿಷ್ಠ ಪರಂತಪ) ಎಂದು!

ಮನೋಬಲವೊಂದಿದ್ದರೆ ಯಾವುದೇ ರೀತಿಯ ದೈಹಿಕ ಬಲಹೀನತೆಯೂ ನಮ್ಮನ್ನು ಬಾಧಿಸದು ಎಂಬುದನ್ನು ಗೀತೆಯ ಸಂದೇಶ ಎತ್ತಿ ಹಿಡಿಯುತ್ತದೆ. ಬದುಕಿನ ಹಲವಾರು ತಿರುವುಗಳಲ್ಲಿ ಒಮ್ಮೊಮ್ಮೆ ನಾನು ಅಸಹಾಯಕಳು, ಏಕಾಂಗಿ ಎಂದು ಅನ್ನಿಸಿದಾಗೆಲ್ಲಾ, ನಿನ್ನ ಉದ್ಧಾರ ನಿನ್ನಿಂದಲೇ ಸಾಧ್ಯ, ನಿನಗೆ ನೀನೇ ಶತ್ರು, ನಿನಗೆ ನೀನೇ ಮಿತ್ರ, ನಿನ್ನ ಸಹಾಯಕ್ಕೆ ಅನ್ಯರ ಅಗತ್ಯವಿಲ್ಲ ಎಂದು ಚಾಟಿ ಬೀಸಿ ಎಚ್ಚರಿಸುತ್ತಾನೆ. ಆದ್ರìಳಾಗಿ ಕಣ್ಮುಚ್ಚಿದಾಗ ಆತ್ಮೀಯ ಬಂಧುವಾಗಿ ಬಂದು ಸಾಂತ್ವನ ನೀಡುತ್ತಾನೆ. ಕೃಷ್ಣನೆಂದರೆ ಗುಡಿಯೊಳಗೋ, ಮೂರ್ತಿಯಲ್ಲೋ ಇರುವವನು ಎಂಬ ಭಾವ ನನ್ನೊಳಗಿಲ್ಲ. ಆತ ಇಲ್ಲೇ ನನ್ನ ಸುತ್ತಮುತ್ತೆಲ್ಲಾ ಕೊಳಲೂದುತ್ತಿರುವವನು. ನನ್ನ ಆತ್ಮಶಕ್ತಿಯೊಳಗೆ ಸದಾ ನೆಲೆ ನಿಂತು ಕಾಪಾಡುವವನು ಎಂಬ ಭದ್ರ ಭಾವವೇ ನನಗೆ ಯಾವತ್ತೂ ನೆಮ್ಮದಿ, ಧೈರ್ಯ, ಮನೋಬಲ ನೀಡುತ್ತಿರುವುದು. ಆತ ನನ್ನೊಳಗೇ ಸದಾ ಇರುವವನಾದ್ದರಿಂದ, ಅವನನ್ನು ಕಳೆದುಕೊಳ್ಳುವ ಭೀತಿಯಂತೂ ಬಾಧಿಸದು.
– ತೇಜಸ್ವಿನಿ ಹೆಗಡೆ

2. ಎಲ್ಲ ಕಾಲಕ್ಕೂ, ಎಲ್ಲರಿಗೂ ಸಲ್ಲುವವನಾತ
ಕೃಷ್ಣನ ವ್ಯಕ್ತಿತ್ವದ ಯಾವ ಅಂಶ ವಿಶೇಷವೆನಿಸುತ್ತದೆ ಎಂಬ ಪ್ರಶ್ನೆಯೆದ್ದಾಗ ಡಿವಿಜಿ ಅವರ ಶ್ರೀಕೃಷ್ಣ ಪರೀಕ್ಷಣಂ ಕಾವ್ಯದ ಈ ಪದ್ಯ ನೆನಪಾಗುತ್ತದೆ -
ವೇಣುಸ್ವಾನಮೋ ಪಾಂಚಜನ್ಯರವಮೋ ಗೀತೋಕ್ತಗಾಂಭೀರ್ಯಮೋ
ಮೌನಿಸ್ನೇಹಮೋ ಗೋಪಿಕಾ ಪ್ರಣಯಮೋ ಚಕ್ರಾಸ್ತ್ರ ಸಂಧಾನಮೋ
ಸೇನಾನಿತ್ವಮೋ ರಾಜತಂತ್ರನಯಮೋ ಕೌಂತೇಯವಾತ್ಸಲ್ಯಮೋ
ನಾನಾ ಜೀವನಧರ್ಮರಂಗಗಳೊಳ್‌ಆದರ್ಶಂ ಯಶೋಧಾ ಸುತಂ
ಕೃಷ್ಣನ ವ್ಯಕ್ತಿತ್ವದ ಸ್ವಾರಸ್ಯವೇ ಇದು. ಅವನು ಎಲ್ಲ ಕಾಲಕ್ಕೂ ಎಲ್ಲರಿಗೂ ಸಲ್ಲುತ್ತಾನೆ. ಮುಗ್ಧ ಗೊಲ್ಲತಿಯರ ಸಂಗಡ ಹಾಡುತ್ತ, ಕೊಳಲನ್ನೂದುತ್ತ ಚಪ್ಪಾಳೆ ತಟ್ಟುತ್ತ ಕುಣಿಯುತ್ತ ಆಟವಾಡುತ್ತಾನೆ. ಅವರ ಸುಖದುಃಖಗಳಿಗೆ ಕಿವಿಗೊಟ್ಟು ಅಪಾಯದಿಂದ ರಕ್ಷಿಸುತ್ತಾನೆ. ಆದರೆ, ಮಧುರ ಮುರಳಿಯನ್ನೂದುವ ಅದೇ ಕರಗಳಲ್ಲಿ ಪಾಂಚಜನ್ಯ ಶಂಖ ಹಿಡಿದು ಊದಿದನೆಂದರೆ, ರಣರಂಗದಲ್ಲಿ ಶತ್ರುಗಳ ಎದೆಗಳು ಸೀಳುವಂತೆ ಘೋರ ಶಬ್ದವನ್ನು ಹೊಮ್ಮಿಸುತ್ತಾನೆ! ವೀರ-ರೌದ್ರ-ಭೀಭತ್ಸಾದ್ಭುತ ರಸಗಳ ಭಯಂಕರ ರಣರಂಗದಲ್ಲೂ ನಿರ್ಲಿಪ್ತನಾಗಿದ್ದು, ತತ್ವದೆತ್ತರದಲ್ಲಿ ನಿಂತು ಭಗವದ್ಗೀತೆಯಂಥ ಶಾಂತ, ಗಂಭೀರ ವಿಚಾರಧಾರೆಯನ್ನು ಹರಿಯಿಸುವ ಯೋಗೀಶ್ವರನೂ ಆಗುತ್ತಾನೆ! ಆಗಮ ನಿಗಮಗಳಲ್ಲಿ ನುರಿತವರೂ, ಪ್ರಾಜ್ಞರೂ ತಪೋನಿಷ್ಠರೂ ಆದ ಮುನಿಗಳಂಥ ಉದಾರ ಚರಿತರ ಆತ್ಮೀಯ ಮಿತ್ರನಾದ ಕೃಷ್ಣನು ಅತ್ತ ಅಮಾಯಕ ಗೋಪಿಯರೊಡನೆ ಸರಸವಾಡುತ್ತ ತುಂಟತನ ಮಾಡುತ್ತ ನಕ್ಕು ನಲಿಯುವ, ನಲಿಸುವ ತುಂಟಬಾಲನೂ ಆಗುತ್ತಾನೆ!
ಶಸ್ತ್ರಾಸ್ತ್ರಗಳನ್ನು ಮೆರೆಸಿ ರಣಶೌರ್ಯ ಮೆರೆಯುವ ನಿಸ್ಸೀಮನೂ, ಕೆರಳಿದರೆ ಚಕ್ರವನ್ನು ಬೀಸಿ ವೈರಿಗಳ ಮುಂಡಗಳನ್ನೇ ಚೆಂಡಾಡುವ ಶೌರಿಯೂ ಹೌದು. ಆದರೆ, ಸಂದರ್ಭ ಬಂದಾಗ ತನ್ನ ಆಪ್ತರಿಗಾಗಿ ಸಂಧಾನಕ್ಕಾಗಿ ಯತ್ನಿಸುವ ನಿಗರ್ವಿಯೂ ಹೌದು. ರಾಜತಂತ್ರದ ಒಳಹೊರಗನ್ನು ಅರಿತ ಕೃಷ್ಣ, ಅದರಿಂದ ಹಲವು ಸಮಸ್ಯೆಗಳನ್ನು ಪರಿಹರಿಸಿ ಧರ್ಮಕ್ಕೆ ಜಯ ತಂದ ಅಪ್ರತಿಮ ಮುತ್ಸದ್ದಿ.
ಹೀಗೆ, ಮನೆಮಂದಿಯಲ್ಲೂ, ನೆರೆಕೆರೆಯಲ್ಲೂ, ಧರ್ಮ-ರಾಜಧರ್ಮದಲ್ಲೂ, ಗೊಲ್ಲರಕೇರಿಯಲ್ಲೂ, ಬೃಂದಾವನದಲ್ಲೂ, ಅರಮನೆಯಲ್ಲೂ ಅವರವರಿಗೆ ಅಲ್ಲಿಗಲ್ಲಿಗೆ ಸಂದ ಬಹುಮುಖೀ, ಸರ್ವತೋಮುಖೀ ಸರಜನಪ್ರಿಯನು ನಮ್ಮ ಶ್ರೀಕೃಷ್ಣ.
-ಡಾ. ಆರತಿ

3. ಅವನ ಬದುಕೇ ಮಾದರಿ
ಕೃಷ್ಣನೆಂದರೆ ತುಂಟ – ತುಂಟತನವೆಂದರೆ ಇವನೇ ಅಲ್ಲವೇ? ಮನುಷ್ಯ ಎಷ್ಟೇ ಬೆಳೆದರೂ, ಮಾಗಿ ವಯಸ್ಸಾದರೂ ಅವನಲ್ಲಿರುವ ಮುಗ್ಧತೆ, ತುಂಟತನ ಉಳಿಸಿಕೊಂಡರೆ ಮಾತ್ರ ಜೀವನದ ಕಷ್ಟಗಳಲ್ಲೂ ನಗುವಿನ ಎಳೆ, ಸಂತಸದ ಕ್ಷಣಗಳನ್ನ ಅನುಭವಿಸಲು ಸಾಧ್ಯ. ಮಾಧವನ ಎಲ್ಲ ತುಂಟತನಗಳು ಅವನ ಮೇಲೆ ಪ್ರೀತಿ ಹುಟ್ಟಿಸುತ್ತವೆ. ಈ ರಾಧಾಲೋಲನು ಅವನ ಸುತ್ತಲಿದ್ದ ಅಷ್ಟೂ ಜೀವರಾಶಿಗಳನ್ನು ನಗಿಸಿ, ರಮಿಸಿ, ಪೀಡಿಸಿ, ಕಡೆಗೆ ಮುದ್ದು ಮಾಡಿಸಿಕೊಳ್ಳುತ್ತಾನೆ. ಅವನ ತುಂಟತನಕ್ಕೆ ಮನಸೋಲದವರುಂಟೆ?
ಶ್ರೀಕೃಷ್ಣನ ಈ ತುಂಟತನವೇ, ಅವನ ಆಳವಾದ ವ್ಯಕ್ತಿತ್ವದಲ್ಲಿನ ಆಕರ್ಷಣೆ ನನಗೆ. ಹುಟ್ಟಿನಿಂದ ಸಾವಿನವರೆಗೂ ಈ ಜಗದೋದ್ಧಾರನ ಜೀವನ ಸುಲಭವಾದ ಹಾದಿ ಆಗಲೇ ಇಲ್ಲ. ದೇವನಾದರೂ ನರಮಾನವರು ಅನುಭವಿಸುವ ನೋವು, ಅವಮಾನ, ಶಾಪ- ಸಂಕಟಗಳು ಅವನನ್ನೂ ಬಿಡಲಿಲ್ಲ. ಹೆಜ್ಜೆ ಹೆಜ್ಜೆಗೂ, ಕಾಲ ಕಾಲಕ್ಕೂ ನಡೆಯುತ್ತಿದ್ದ ಘಟನೆಗಳು ಅನುಭವಿಸುತ್ತಿದ್ದ ತೊಳಲಾಟಗಳು ಕಡಿಮೆಯೇ? ಪ್ರತಿ ಸಂದರ್ಭದಲ್ಲೂ ಬದುಕನ್ನು ಎದುರಿಸುವ ರೀತಿ, ನೀತಿ, ಮಾಸದ ಆ ನಗು, ಎಲ್ಲವೂ ಹುಲುಮಾನವರಾದ ನಮಗೆ ಪ್ರೇರಣೆ! ಪ್ರೀತಿ ಹಂಚಿ, ಬದಲಿಗೆ ಪ್ರೀತಿಯನ್ನೇ ಮರಳಿ ಪಡೆಯುವ ಕಲೆ ಇವನಿಂದಲೇ ಮೊದಲು! ಉಸಿರಿಗೆ ಉಸಿರಾದ ರಾಧಾ-ಮಾಧವರ ನಿಷ್ಕಲ್ಮಶ ಪ್ರೇಮಕ್ಕೆ ಸಾಟಿ ಎಲ್ಲಿ?
ಬದುಕಿನುದ್ದಕ್ಕೂ ಗೀತೆ ಸಾರುವ ಭಗವಂತನ ಸಂದೇಶಗಳಷ್ಟೇ ಅಲ್ಲ, ಮಗನಾಗಿ, ಮಗುವಾಗಿ, ಅಣ್ಣನಾಗಿ, ಪತಿಯಾಗಿ, ಪ್ರಿಯಕರನಾಗಿ, ತಮ್ಮನಾಗಿ, ಸಖನಾಗಿ, ಸೇವಕನಾಗಿ, ಸ್ನೇಹಿತನಾಗಿ, ರಕ್ಷಕನಾಗಿ, ಬಂಧುವಾಗಿ, ಗೊಲ್ಲನಾಗಿ, ಸಾರಥಿಯಾಗಿ, ಕರ್ತವ್ಯಗಳನ್ನ ಹೇಗೆ ನಿಭಾಯಿಸಬೇಕೆಂದು ಮಾದರಿಯಾದವನು ಶ್ರೀಕೃಷ್ಣ.
ಮತ್ತೆ ಹೇಳಿ: ಶ್ರೀಕೃಷ್ಣನು ನಿಮಗಿಷ್ಟವಾಗಲು ಯಾವ ಕಾರಣ ಕೊಡಲು ಸಾಧ್ಯವೆಂದರೆ, ಏನೆಂದು ಹೇಳಲು ಸಾಧ್ಯ? ಅವನೇ ಎಲ್ಲ – ಮುದ್ದು ತುಂಟ ಲೋಲ!
-ರೂಪಾ ಸತೀಶ್‌

ನನ್ನ ಕೌನ್ಸಿಲರ್‌ ಶ್ರೀಕೃಷ್ಣ
ಚಿಕ್ಕವಳಿದ್ದಾಗ ಕೃಷ್ಣನಂತೆ ನವಿಲುಗರಿ ಸಿಕ್ಕಿಸಿಕೊಳ್ಳಲು ಎಷ್ಟೆಲ್ಲ ಕಷ್ಟಪಟ್ಟಿದ್ದೀನಿ. ತಲೆಗೆ ರಬ್ಬರ್‌ ಬ್ಯಾಂಡ್‌ ಹಾಕಿ, ನವಿಲುಗರಿ ಸಿಕ್ಕಿಸಲು ಒದ್ದಾಡುತ್ತಿದ್ದರೆ, ಅದು ಕೆಳಗೆ ಜಗ್ಗುತ್ತಿತ್ತು. ಆಗೆಲ್ಲ ಕೃಷ್ಣನ ಬಗ್ಗೆ ಅಸೂಯೆ ಪಟ್ಟಿದ್ದುಂಟು. ತೋರುಬೆರಳಿನಲ್ಲಿ ತಿರುಗುವ ಸುದರ್ಶನ ಚಕ್ರ, ನೀಲಿಬಣ್ಣ, ಕಾಳಿಂಗನೊಡನೆ ಸೆಣಸಾಟ…ಎಲ್ಲವೂ ಕೃಷ್ಣನನ್ನು ನನ್ನ ಸೂಪರ್‌ ಹೀರೋ ಆಗಿಸಿತ್ತು.

ಬೆಳೆಯುತ್ತಿದ್ದಂತೆ ಕೃಷ್ಣನನ್ನು ಅಧ್ಯಯನ ಮಾಡಿದೆ, ಅವಲೋಕಿಸಿದೆ, ಅನುಭವಿಸಿದೆ, ವಿಚಾರ ಮಾಡಿದೆ. ಎಲ್ಲವೂ ಮುಗಿದಾಗ ನನಗೆ ಶ್ರೀಕೃಷ್ಣ ಕೇವಲ ಮಾಯಾವಿಯಾಗಿ ಆಗಲಿ, ಸ್ತ್ರೀಲೋಲನಂತಾಗಲಿ, ಚೋರನಂತಾಗಲಿ ಕಾಣಲಿಲ್ಲ. ಬದಲಿಗೆ, ಬಂದದ್ದನ್ನೆಲ್ಲ ಸಮಚಿತ್ತದಿಂದ ಎದುರಿಸಬೇಕೆಂದು ತಿಳಿ ಹೇಳಿದ ಮಾರ್ಗದರ್ಶಿಯಂತೆ ಕಂಡ. ವಿಶ್ವಗುರುವಿನಂತೆ ದಾರಿ ತೋರಿದ.

ಯಾರ್ಯಾರಿಗೆ ಕೃಷ್ಣ ಹೇಗೇಗೆ ಕಾಣುತ್ತಾನೋ, ನನಗೆ ಮಾತ್ರ ಶ್ರೀಕೃಷ್ಣ ಒಬ್ಬ ಕೌನ್ಸಿಲರ್‌ ಆಗಿ ಕಾಣುತ್ತಾನೆ. ನನಗೆ ಎದುರಾದ ಎಷ್ಟೋ ಕಷ್ಟ, ಸವಾಲು, ಮಾನಸಿಕ ತಾಕಲಾಟ, ಅವಮಾನ, ಮೋಸಗಳನ್ನು ಮೆಟ್ಟಿ ನಿಂತು ಆರೋಗ್ಯಕರ ಮನಸ್ಥಿತಿಯನ್ನು ನನ್ನದಾಗಿಸಿಕೊಂಡಿದ್ದರೆ ಅದರ ಪೂರ್ತಿ ಕ್ರೆಡಿಟ್‌, ಶ್ರೀಕೃಷ್ಣನ ವ್ಯಕ್ತಿತ್ವಕ್ಕೇ ಸಲ್ಲುತ್ತದೆ.
ನನ್ನ ಯೋಚನೆಗಳು, ವಿಚಾರಗಳು, ವಯಸ್ಸು ವಿಕಾಸವಾದಂತೆಲ್ಲಾ ಕೃಷ್ಣ ತನ್ನ ಆಯಾಮ, ವಿಸ್ತಾರ, ಆಳವನ್ನು ಬದಲಿಸುತ್ತಾ ಇದ್ದಾನೆ. ಬದುಕೇ ಹರಿವ ನೀರಿನಂತೆ ಇರುವಾಗ, ಕೃಷ್ಣನ ವ್ಯಕ್ತಿತ್ವ ನಿಂತ ನೀರಾಗುತ್ತದೆಯೇ?
– ಉಲ್ಲಾಸ್‌ ವಿಶ್ವನಾಥ್‌ ಕೆ.ಸಿ.

ಕೃಷ್ಣನಿಗಿಂತ ಬೇರೆ ಗುರು ಬೇಕೆ?
ಕೃಷ್ಣ…ಯಾರಪ್ಪ ನೀನು? ಹೇಗಪ್ಪಾ ದೊರಕುತ್ತಿಯಾ?
ತಾಯಿಗೆ ಮಗುವಾಗಿ, ಪ್ರೇಮಿಕೆಗೆ ಪ್ರಿಯತಮನಾಗಿ, ದೀನರಿಗೆ ಬಂಧುವಾಗಿ, ಆರ್ತರಿಗೆ ರಕ್ಷಕನಾಗಿ, ಧರ್ಮಿಗಳಿಗೆ ಮಿತ್ರನಾಗಿ, ಅಧರ್ಮಿಗಳಿಗೆ ಸಿಂಹಸ್ವಪ್ನವಾಗಿ… ಹೀಗೆ ಒಬ್ಬೊಬ್ಬರಿಗೆ ಹಾಗೆ ಹೀಗೆ ಹೇಗೇಗೋ ದೊರಕಿದ್ದಿಯ, ದೊರಕುತ್ತಿರುತ್ತೀಯ…
ಆದರೆ, ನನಗೆ ಮಾತ್ರ ನೀನು ದೊರಕಿದ್ದು ಒಬ್ಬ ಗುರುವಿನ ರೂಪದಲ್ಲಿ.
ಒಮ್ಮೆ ಎಲ್ಲೋ ಓದಿದ ನೆನಪು… ಈಜು ಕಲಿಯುವುದು ಹೇಗೆಂದು ಯಾರೋ ಕೇಳಿದಾಗ, ಜಗತ್ತಿನ ಎಲ್ಲ ಗುರುಗಳು ಕೈ ಹಾಗೆ ಹೊಡಿ, ಕಾಲು ಹೀಗೆ ಬಡಿ, ಉಸಿರು ಬಿಗಿ ಹಿಡಿ ಎಂದೆಲ್ಲ ಉಪದೇಶ ಕೊಟ್ಟರಂತೆ. ತಲೆ ಕೆಟ್ಟು ನಿನ್ನ ಬಳಿ ಬಂದಾಗ ನೀನು ಹೇಳಿದ್ದು ಒಂದೇ ಮಾತು – ಮೊದಲು ನೀರಿಗಿಳಿ! ಅವನು, ನೀರಿಗಿಳಿಯಲೋ ಬೇಡವೋ ಅಂತ ಯೋಚಿಸುತ್ತ ನಿಂತಿರುವಾಗ, ನೀನು “ಕರ್ಮಣ್ಯೇ ವಾಧಿಕಾರಸ್ತೆ ಮಾ ಫ‌ಲೇಷು ಕದಾಚನ’ ಅಂತ ಹೇಳಿದಾಗ, ಅವನು ನೀರಿಗೆ ಹಾರಿ, ಈಜು ಕಲಿತನಂತೆ.
ನನ್ನ ವಿಷಯದಲ್ಲಂತೂ ನೀನು “ನೀರಿಗೆ ಹಾರು’ ಎಂದು ಹೇಳಲೂ ಇಲ್ಲ, ಎತ್ತಿ ನೀರಿಗೆ ಹಾಕಿದ್ದಷ್ಟೇ ಗೊತ್ತು… ನಂತರ ಅದು ಹೇಗೆ ಈಜಿದೆನೋ, ಹೇಗೆ ಮೇಲೆದ್ದೆನೋ ಅದು ನಿನಗಷ್ಟೇ ತಿಳಿದಿರುವ ಅನಂತ ಸತ್ಯ.

ಏರಿಳಿತಗಳಲ್ಲಿ ಸಮತ್ವವನ್ನು, ಸಮದಲ್ಲಿ ಏರಿಳಿತಗಳನ್ನು, ಬಂಧಗಳ ಸುಳಿಗೆ ಸಿಕ್ಕದೆ, ತಾವರೆ ಹೂವಿನ ಹಾಗೆ ಇರುವುದನ್ನು ಕಲಿಸಿ, ಅದೇ ಯಾರೋ ಕಷ್ಟದಲ್ಲಿ¨ªಾರೆಂದಾಗ ಮೈಮೇಲೆ ಎಳೆದುಕೊಂಡು ಸಹಾಯ ಮಾಡುವ ಕಲೆಯನ್ನು ಕಲಿಸಿದೆ. ನನ್ನ ಇತಿಮಿತಿಗಳನ್ನು ಮೀರಿ ಕಲಿಸಿದೆ, ನಾನು ನಿನ್ನೊಂದಿಗೆ ಕಲಿತೆ, ಕಲಿಯುತ್ತ ಇದ್ದೇನೆ, ಕಲಿಯುತ್ತಿರುತ್ತೇನೆ!!!
ಅಂತೂ ನನ್ನನ್ನು ನಿನ್ನ ಕಕ್ಷೆಯಲ್ಲಿಟ್ಟುಕೊಂಡು ಅದೆಷ್ಟೋ ಕಷ್ಟ ಸಮುದ್ರಗಳನ್ನು ಈಜಿಸಿದ್ದೀಯ, ಈಜಿಸುತ್ತಿದ್ದೀಯ… ಮುಂದೆ ಈ ಭವಸಾಗರವನ್ನು ದಾಟಿಸಿ, ನಿನ್ನೊಂದಿಗೆ ಲೀನವಾಗಿಸಿಕೋ ಗುರುವೇ!
-ರೋಹಿಣಿ ರಾಮ್‌ ಶಶಿಧರ್‌

ಟಾಪ್ ನ್ಯೂಸ್

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.