
ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?
Team Udayavani, Apr 21, 2021, 12:24 PM IST

ಮಗಳಿಗೆ ವರ್ಷ ತುಂಬಿರಲಿಕ್ಕಿಲ್ಲ, ಪ್ರತಿ ಸಲ ನಾನು ಸೀರೆ ಕಪಾಟು ತೆಗೆದಾಗಲೆಲ್ಲ ಆ ಸದ್ದಿಗೆ ಎಲ್ಲಿದ್ದರೂ ಓಡಿ ಬರುತ್ತಿದ್ದಳು. ಕಪಾಟಿನೊಳಗಿನ ಸೀರೆಗಳನ್ನು ನೋಡುತ್ತಿದ್ದಂತೆ ಅವುಗಳ ಬಣ್ಣಗಳಷ್ಟೇ ಅವಳ ಪುಟ್ಟ ಕಣ್ಣುಗಳು ಸಹ ಫಳ ಫಳಹೊಳೆಯುತ್ತವೆ. ಕಪಾಟಿನಲ್ಲಿ ತಲೆ ಹುದುಗಿಸಿನಿಲ್ಲುತ್ತಿದ್ದ ನನ್ನ ಬಟ್ಟೆ ಎಳೆದು ಎತ್ತಿಕೋ ಎಂದು ರಚ್ಚೆ ಹಿಡಿದು, ಎತ್ತಿಕೊಂಡಾಗ ನನ್ನ ಸೀರೆಗಳಬಣ್ಣ, ಅದರ ಜರಿ, ಅಂಟಿಸಿದ ಚಮಕಿಗಳನ್ನು ನೋಡುವುದಕ್ಕೆ ಅವಳಿಗೆ ಎಲ್ಲಿಲ್ಲದ ಸಂಭ್ರಮ.
ನಾಲ್ಕೈದು ವರ್ಷ ತುಂಬಿದಾಗ ನಾನು ಸೀರೆ ಉಡುವುದನ್ನು, ಅಲಂಕಾರ ಮಾಡಿ ಕೊಳ್ಳುವುದನ್ನು ತದೇಕ ಚಿತ್ತದಿಂದ ನೋಡುತ್ತಾ ತಾನೂ ಒಂದುದುಪ್ಪಟ್ಟ ಸುತ್ತಿಕೊಳ್ಳುವ ಅನುಕರಣೆಯಲ್ಲಿರುತ್ತಿದ್ದಳು. ಮುಂದುವರೆದು – ಈ ಸೀರೆ ಎಲ್ಲಾ ನಂಗೇ ಬೇಕು. ನೀನು ಹಾಕಿ ಹಪ್ಪು (ಹೊಲಸು) ಮಾಡಬೇಡ ಎಂದು ಮರೆಯದೇ ಹೇಳುತ್ತಿದ್ದಳು! ಆಗೆಲ್ಲ ನಾನು ನಸುನಕ್ಕು, ನೀನು ಸೀರೆ ಉಡುವಷ್ಟು ದೊಡ್ಡವಳಾದ ಮೇಲೆ ಮತ್ತೂ ಚಂದ ಚಂದದ ಸೀರೆ ಬರ್ತಾವೆ ಕಂದ.. ಎಂದರೆ ತಲೆ
ಕೊಡವಿ, ಊಹೂಂ ನಿಂದೇ ಬೇಕು ಎನ್ನುತ್ತಿದ್ದಳು. ಹಾಗೆ ನೋಡಿದರೆ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿಹೆಣ್ಣು ಮಕ್ಕಳಿಗೆ ಅಮ್ಮನ ಸರ್ವಸ್ವವೂ ಆದ ಸೀರೆ ಕಪಾಟುಎಂದರೆ ತೀರದ ಕುತೂಹಲ. ಅದರಲ್ಲಿ ಅಮ್ಮನ ಪುಟ್ಟಜಗತ್ತೇ ತೆರೆದಿರುತ್ತದೆ ಎನ್ನುವುದು ಅವರಿಗೆ ಹೇಳದೆಯೇ ಗೊತ್ತು. ವರ್ಷಗಳ ಹಿಂದೆ ತಿರುಗಿ ನೋಡಿದರೆ ನಾವು ಹೀಗೇ ಇದ್ದೆವು ಅಲ್ಲವೇ ಎನಿಸುತ್ತದೆ.
ಅಮ್ಮ ತನ್ನ ಸೀರೆಗಳನ್ನು ಮಡಚಿಡುತ್ತಿದ್ದ ನಾಜೂಕು, ಆಕೆ ಒಡವೆಗಳನ್ನುಕಾಪಿಡುವ ನಯ ಎಲ್ಲವೂ ನಮಗೆ ಬೆರಗಿನದ್ದಾಗಿರುತ್ತಿತ್ತು.ಇದು ತನ್ನಮ್ಮನ ಸೀರೆ, ಇದು ತನ್ನ ಧಾರೆಯ ಸೀರೆ,ಇದು ನನ್ನ ಗಂಡ ಕೊಡಿಸಿದ ಮೊದಲ ಸೀರೆ, ಇದುಗಂಡನ ಮನೆಯವರು ಕೊಟ್ಟ ಸೀರೆ …ಹೀಗೆ ಆಕೆ ಪ್ರತಿಯೊಂದು ಸೀರೆಯ ಹಿಂದೆ ಇರುವ ಕಥೆಗಳನ್ನು ಹೇಳುವಾಗ ಹರೆಯದ ಅಮ್ಮ ನೆನಪಾಗಿ ಕಚಗುಳಿಇಡುತ್ತಿದ್ದಳು. ಇದನ್ನು ನೀನೇ ಇಟ್ಕೋ…ನಾನು ಒಬ್ಬಳೇ ಮಗಳಾದ್ದರಿಂದ ಅಮ್ಮನ ಸೀರೆಯನ್ನು ಉಡುವುದಕ್ಕೆಸಹೋದರಿಯರ ಜೊತೆಗೆ ಜಟಾಪಟಿಯಾಗಲಿ, ಸ್ಪರ್ಧೆಯಾಗಲಿ ಇರಲಿಲ್ಲ.
ಅಷ್ಟೇ ಅಲ್ಲ, ಅಮ್ಮನಿಗಾಗಿ ಕೊಂಡ ಸೀರೆಗಳನ್ನು ಸಹ ಎಷ್ಟೋ ಸಲ ನಾನೇ ಮೊದಲು ಉಟ್ಟು ಕೊಟ್ಟಿದ್ದಿದೆ. ಈ ಅಮ್ಮನಿಗಾದರೂ ತಾನು ಬಹು ಮೆಚ್ಚಿ ಖರೀದಿಸಿದ ಸೀರೆಮೊದಲು ತಾನೇ ಉಡಬೇಕು ಎನ್ನುವ ಸ್ವಾರ್ಥ ಎಷ್ಟೂಇರುವುದಿಲ್ಲ. ತನಗಿಂತ ತನ್ನ ಮಗಳು ಉಡುತ್ತಾಳೆಂದರೆಆಕೆಗೆ ಮತ್ತೂ ತೃಪ್ತಿ. ಆಕೆ ಕೊಂಡ ಯಾವುದೇ ಸೀರೆಯಮೇಲೆ ಆಸೆಗಣ್ಣಿನಿಂದ ಬೆರಳಾಡಿಸಿದರೆ ಸಾಕು, ಎಲ್ಲವೂ ಅರಿತಂತೆ ನಿಂಗಿಷ್ಟ ಆದ್ರೆ ನೀನೇ ಇಟ್ಕೋ ಅಥವಾ ಮೊದಲುನೀನೇ ಉಟ್ಟು ಕೊಡು ಎಂದು ಬಿಡುತ್ತಾಳೆ!
ಹಳೆಯ ಫೋಟೋದಲ್ಲಿ ಉಟ್ಟಿದ್ದಳು! :
ನೇರಳೆ ಬಣ್ಣದ ಮೈಗೆ ಬೆಳ್ಳಿಯ ಅಂಚಿದ್ದ ಅಮ್ಮನಮದುವೆಯ ಸೀರೆ ನನಗೆ ತುಂಬಾ ಇಷ್ಟವಾಗುತ್ತಿತ್ತು. ಶಾಲಾ, ಕಾಲೇಜಿನ ವಾರ್ಷಿಕೋತ್ಸವಗಳಲ್ಲಿ, ಹಬ್ಬಗಳಲ್ಲಿಬಹುತೇಕ ಅದನ್ನೇ ಉಡುತ್ತಿದ್ದೆ. ಕೈಗೂಸಾದ ನನ್ನನ್ನು ಮಡಿಲಲ್ಲಿ ಕೂಡಿಸಿಕೊಂಡು ಅಪ್ಪನ ಜೊತೆಗೆ ತೆಗೆಸಿಕೊಂಡ ಅದೊಂದು ಹಳೆಯ ಫೋಟೋದಲ್ಲಿ ಅಮ್ಮ ಉಟ್ಟ ಸೀರೆ ಅದೇ. ಹೀಗಾಗಿಯೇ ಏನೋ ಆ ಸೀರೆಯೆಂದರೆಯಾವತ್ತೂ ಆಪ್ತ. ಅಮ್ಮನ ಬಹುತೇಕ ಸೀರೆಗಳನ್ನು ಉಟ್ಟಿದ್ದೆನಾದರೂ ಆಕೆಯ ನೆನಪಿಗಾಗಿ ಒಂದನ್ನೂ ನನ್ನ ಬಳಿ ಇಟ್ಟುಕೊಂಡಿರಲಿಲ್ಲ. ಅದೇ ನೇರಳೆ ಬಣ್ಣದ ಸೀರೆಇಟ್ಟುಕೊಳ್ಳಬೇಕು ಎನ್ನುವ ಕಾಲಕ್ಕೆ ಆ ಸೀರೆಯನ್ನು ಜಿರಳೆಗಳು ತಿಂದು ಹಾಳು ಮಾಡಿದ್ದವು. ಆಗ ಅಮ್ಮನಿಗಿಂತಹೆಚ್ಚು ಸಂಕಟ ಪಟ್ಟಿದ್ದು ನಾನೇ ಇರಬೇಕು.
ಅಮ್ಮನ ಉಸಿರಿರುತ್ತೆ… :
ನಾನೂ ಅಮ್ಮನಾದ ಈ ಸಮಯಕ್ಕೆ ಅಮ್ಮನದೊಂದು ಸೀರೆ ಉಳಿಸಿಕೊಳ್ಳಲೇಬೇಕು ಎನ್ನುವ ಹಪಾಹಪಿ ಅದೆಷ್ಟು ಹೆಚ್ಚಿತ್ತೆಂದರೆ ನನ್ನ ಬಳಿ ಇದ್ದ ಥೇಟ್ ಅದೇ ನೀಲಿ ಬಣ್ಣದ ಅಮ್ಮನ ಸೀರೆಯೊಂದು ತೀರಾ ಇಷ್ಟವಾಗಿ, ಅದೇ ಸೀರೆಯನ್ನು ಅವಳ ನೆನಪಿಗಾಗಿ ಅವಚಿಟ್ಟುಕೊಂಡೆ. ಈಗ ಅಮ್ಮನ ಪ್ರೀತಿ ಎಂದರೆ ಅದೇಕೋ ನೀಲಿ ಬಣ್ಣದ್ದೇ ಇರಬೇಕು ಅನ್ನಿಸುತ್ತದೆ. ಆಕಾಶದ ನೀಲಿಯಷ್ಟೇ ವಿಶಾಲವಾದದ್ದು, ಅನನ್ಯವಾದದ್ದು ಎನ್ನಿಸುತ್ತದೆ. ಆ ಸೀರೆ ಅಪ್ಪಿಕೊಂಡಾಗಲೆಲ್ಲ ಪುಟ್ಟ ಮಗುವಾಗಿ ಅಮ್ಮನ ಮಡಿಲು ಸೇರಿದ ಭಾವ ಉದ್ಭವಿಸುತ್ತದೆ. ಅಲ್ಲದೇ ಅಮ್ಮನ ಸಹವಾಸ ದಿಂದ ಆಕೆಯ ಸೀರೆಗಳೂ ಒಂದಷ್ಟು ವಾತ್ಸಲ್ಯ ಮೆತ್ತಿಕೊಂಡಿರುತ್ತವೇನೋ.
ಅವುಗಳನ್ನು ಅಪ್ಪಿ ಹಿಡಿದಾಗ ಎಂಥದೋ ಸಾಂತ್ವನ ಮನಸ್ಸಿಗಾಗುತ್ತದೆ. ಆಕೆಯ ಮೈಯಪರಿಮಳವನ್ನು ಹೊತ್ತ ಸೀರೆಯಲ್ಲಿ ಮೂಗು ತೀಡಿದರೆ ಸಾಕು, ಯಾವುದೋ ತಂತು ಮೀಟಿದಂತಾಗುತ್ತದೆ. ಬಟ್ಟೆಗಳನ್ನು ಬರಿಯ ವಸ್ತುಗಳನ್ನಾಗಿ ಯಾವಾಗಲೂ ನೋಡುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಅಮ್ಮನ ಸೀರೆಗಳಲ್ಲಿಆಕೆ ಪಟ್ಟ ಕಷ್ಟಗಳ ಬೆವರಿನ ವಾಸನೆ ಇರುತ್ತದೆ. ನಿಟ್ಟುಸಿರಿರುತ್ತದೆ. ಸೀರೆಯ ಚುಂಗಿನಲ್ಲಿ ಎಂದೋ ಒರೆಸಿಕೊಂಡ ಕಣ್ಣೀರ ಕಲೆಯಿರುತ್ತದೆ. ಸುಖದನವಿರಿರುತ್ತದೆ. ಪ್ರೀತಿಯ ಬಿಸುಪಿರುತ್ತದೆ. ಅಷ್ಟೇ ಅಲ್ಲ,ಒಂದಿಡೀ ಬದುಕಿನ ಅನುಭವಗಳ ಹರವಿರುತ್ತದೆ. ಅಂತಹ ಅಮ್ಮನ ಸೀರೆಗೆ ಬೆಲೆ ಕಟ್ಟಲಾದೀತೆ?
– ಕವಿತಾ ಭಟ್, ಕುಮಟಾ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Arrested; 2 ಹೆಂಡತಿಯರು, 9 ಮಕ್ಕಳು ಮತ್ತು 6 ಪ್ರೇಯಸಿಯರಿಗಾಗಿ ದುಷ್ಕೃತ್ಯ!

Sandalwood; ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾದ ‘ದಿ ಜಡ್ಜ್ ಮೆಂಟ್’

Video: ಹೊಸ ಅನುಭವ: ಸೋರುತ್ತಿರುವ ವಿಮಾನದಲ್ಲೇ ಪ್ರಯಾಣಿಕರ ಪಯಣ…

Brahma Kamala: ಆರೋಗ್ಯ ಸಂಜೀವಿನಿ… ಬ್ರಹ್ಮಕಮಲದ ಆಧ್ಯಾತ್ಮಿಕ ಹಿನ್ನಲೆ ಏನು?

ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ