ಭೂಮಿಗೆ ಬಂದ ದೇವತೆ ಕಂದ…

ಮಗಳು ಹುಟ್ಟಿದ ಆ ಕ್ಷಣ

Team Udayavani, Oct 9, 2019, 4:12 AM IST

ಮಗಳು ಬಂದಮೇಲೆ ಬಾಳಿಗೊಂದು ಅರ್ಥ ಬಂತು. ಮಗಳು ಮನೆ ತುಂಬಿದ ಮೇಲೆ ನನ್ನಲ್ಲೂ ತುಂಬಾ ಬದಲಾವಣೆ ಆಯ್ತು ಎನ್ನುವ ಅಪ್ಪಂದಿರುಂಟು. ಮಗಳನ್ನು- ತಾಯಿ , ದೇವತೆ, ಮಹಾಲಕ್ಷ್ಮಿ ಎಂದೆಲ್ಲಾ ಕರೆಯುವ ತಂದೆಯರೂ ಉಂಟು. ಅಮ್ಮನೇನಾದರೂ ಮಗಳಿಗೆ ರೇಗಿದರೆ, ಮಗಳನ್ನು ವಹಿಸಿಕೊಂಡು ಹೋಗುವ ಅಪ್ಪಂದಿರಿಗೆ ಕೊರತೆಯೆ? ಇಂಥ ಅಪ್ಪಂದಿರ ಕಲರವ ಈ ಪುಟವನ್ನು ಆವರಿಸಿಕೊಂಡಿದೆ. ಹೆಣ್ಣುಮಗು ಎಂದು ತಿಳಿದ ನಂತರ ತಮಗಾದ ನವಿರು ಭಾವನೆಗಳನ್ನು, ತಮ್ಮೊಳಗೆ ಆದ ಬದಲಾವಣೆಗಳನ್ನು, ತಮ್ಮ ಅನಿಸಿಕೆಯನ್ನು ಅವರಿಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅ.11ರಂದು, ವಿಶ್ವ ಹೆಣ್ಣು ಮಕ್ಕಳ ದಿನ. ಆ ನೆಪದಲ್ಲಿ, ಸಕ್ಕರೆ ಕಡ್ಡಿಯಂಥ ಸಿಹಿ ಬರಹಗಳ ಗುಚ್ಛ…

ಆಕಾಶದಿಂದ ಪುಷ್ಪವೃಷ್ಟಿಯಾಯ್ತು…
ಮಗಳು ಹುಟ್ಟಿದ ಸುದ್ದಿ ಬಂದಾಗ ನಾನು ಬಸ್ಸಿನಲ್ಲಿದ್ದೆ. ತವರಿನಲ್ಲಿದ್ದ ಹೆಂಡತಿಗೆ ಹೆರಿಗೆ ನೋವು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆಂದು ನನಗೆ ಫೋನು ಬಂದಾಗ ಬೆಳಗ್ಗೆ ಏಳು ಗಂಟೆ. ದಡಬಡಿಸಿ ತಯಾರಾಗಿ, ಓಡೋಡಿ ಬಂದು ಬಸ್ಸು ಹಿಡಿದು, ಉಸ್ಸೆಂದು ನಿಟ್ಟುಸಿರು ಬಿಟ್ಟೆ. ನಾನೋ, ಮಗಳು ಹುಟ್ಟುವುದರೊಳಗೆ ಅಲ್ಲಿರುವ ಧಾವಂತದಲ್ಲಿದ್ದೆ. ಆದರೆ ಅದು ಆ ಬಸ್ಸಿಗೆ ಹೇಗೆ ತಿಳಿಯಬೇಕು? ಅದು ತನ್ನ ಎಂದಿನ ವೇಗದಲ್ಲಿ ಹೋಗುತ್ತಿತ್ತು. ಹನ್ನೊಂದು ಗಂಟೆಯ ಹೊತ್ತಿಗೆ ಅತ್ತೆ ಫೋನು ಮಾಡಿ, ಹೆರಿಗೆ ಆಗಿರುವುದಾಗಿಯೂ, ಹೆಣ್ಣು ಮಗು ಅಂತಲೂ, ತಾಯಿ-ಮಗು ಆರೋಗ್ಯವಾಗಿದ್ದಾರೆಂದೂ ತಿಳಿಸಿದಾಗ ನಮ್ಮ ಬಸ್ಸು ಅರ್ಧ ದಾರಿಯನ್ನೂ ಕ್ರಮಿಸಿರಲಿಲ್ಲ.

ಅದ್ಯಾಕೋ, ಹೆಣ್ಣುಮಗುವೇ ಬೇಕು ಅಂತ ಮನಸ್ಸಿನಲ್ಲಿತ್ತು, ಈಗ, ಅಂತೆಯೇ ಆಗಿರುವ ಸುದ್ದಿ ಬಂದಾಗ ಏನು ಮಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು ಒಂದೂ ತಿಳಿಯಲಿಲ್ಲ. ಬಸ್ಸಿನ ತುಂಬಾ ಅಪರಿಚಿತರು. ಯಾರಿಗೂ ಇಲ್ಲೇನಾಗುತ್ತಿದೆ ಅಂತ ತಿಳಿಯುತ್ತಿರಲಿಲ್ಲ. ನಾನು, ಕೂತ ಸೀಟಲ್ಲೇ ಚಡಪಡಿಸಿದೆ. ಸಂಭ್ರಮಕ್ಕೆ ಎದೆತಾನ ಬಸ್ಸಿನ ಸದ್ದಿಗಿಂತ ಹೆಚ್ಚಾಗಿತ್ತು. ಅವರಿವರಿಗೆ ಮೆಸೇಜು ಮಾಡಿದೆ. ಸ್ಟೇಟಸ್‌ ಹಾಕಿಕೊಂಡೆ. ಸ್ವಲ್ಪ ಸಮಯದ ಬಳಿಕ ಹೆಂಡತಿಗೆ ಫೋನಿಸಿ ಆರೋಗ್ಯ ವಿಚಾರಿಸಿದೆ.

ಮಜಾ ಎಂದರೆ, ಅಂದು ಬೆಳಗ್ಗೆ ಎಂಟರ ಹೊತ್ತಿಗೆ ನಾನು ಏರಿದ್ದ ಬಸ್ಸು ಅಲ್ಲಿಗೆ ತಲುಪಿದಾಗ ರಾತ್ರಿ ಹತ್ತು ಗಂಟೆ! ಮಗಳನ್ನು ನೋಡುವ ನನ್ನ ತರಾತುರಿ, ಅದರದೇ ವೇಗದಲ್ಲಿ ಓಡುವ ಬಸ್ಸು: ನಾನು ಮಾಡಿದ ಸುಧೀರ್ಘ‌ ಅಸಹನೆಯ ಪಯಣ ಎಂದರೆ ಅದೇ. ಅಂತೂ ಆಸ್ಪತ್ರೆ ತಲುಪಿ ಹೆಂಡತಿಯನ್ನೂ-ಮಗಳ ಗುಲಾಬಿ ಮುಖವನ್ನೂ ನೋಡಿದಾಗ, ಕವಿದಿದ್ದ ಮಂಕೆಲ್ಲ ಕಳೆದಂತಾಯ್ತು. ಬೆಡ್ಡಿನ ಮೌನದಲ್ಲಿ ಸುಖನಿದ್ರೆಯಲ್ಲಿದ್ದ ಮಗಳಿಗೆ “ಅಪ್ಪ ಬಂದೆ’ ಅಂತ ಘೋಷಿಸಿದೆ. ಅವಳ ಬೆರಳುಗಳನ್ನು ಸವರಿದೆ. ಆಕೆ ತನ್ನ ಪುಟ್ಟ ಮುಷ್ಟಿಯಲ್ಲಿ ನನ್ನ ಕಿರುಬೆರಳನ್ನು ಹಿಡಿದುಕೊಂಡಳು. ಆಕಾಶದಿಂದ ಪುಷ್ಪವೃಷ್ಟಿಯಾದದ್ದು ಆಗಲೇ…
-ಸುಶ್ರುತ ದೊಡ್ಡೇರಿ, ವೃತ್ತಿ: ಲೀಗಲ್‌ ಅಡ್ವೈಸರ್‌, ಮಗಳು: ಸವಿಮುಂಬನಿ

***

ಬದುಕು ಯು ಟರ್ನ್ ತಗೊಂಡ ಘಳಿಗೆ
ನಿಜ ಹೇಳಬೇಕು ಅಂದರೆ.. ಮೊದಲ ಮಗು ಹುಟ್ಟಿದಾಗ ನಾನು ಅಪ್ಪನ ಥರ ವರ್ತಿಸಲೇ ಇಲ್ಲ. ಆಡ್ಕೊಂಡಿದ್ದ ಹುಡುಗ ಅಪ್ಪನಾದ್ರೆ ಅದೆಂಥ ಅನುಭವ ದಕ್ಕೀತು ಹೇಳಿ? ಆದರೆ, ಅದೇ ಆಡ್ತಿದ್ದ ಹುಡುಗಿ ಒಂಬತ್ತು ತಿಂಗಳ ಹೊರುವಿಕೆ, ಹೆರುವಿಕೆ ಕಾರಣಕ್ಕೆ ಬಹಳ ಸಲೀಸಾಗಿ ಪ್ರಬುದ್ಧ ಅಮ್ಮನಾಗಿಬಿಡುತ್ತಾಳೆ. ಗಂಡಸಿಗೆ ಅಂಥ ಭಾಗ್ಯವಿಲ್ಲವಲ್ಲ! ಅಂದು ನಾನು ವರ್ತಿಸಿದ ರೀತಿ ಬಗ್ಗೆ ಶೋಭ ಇವತ್ತಿಗೂ ಛೇಡಿಸ್ತಾಳೆ. ಹೆರಿಗೆ ಆದ ತಕ್ಷಣ ಅಮ್ಮ-ಮಗಳನ್ನು ವಾರ್ಡ್‌ಗೆ ಶಿಫ್ಟ್ ಮಾಡಿ, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಆಫೀಸಿಗೆ ಬಂದುಬಿಟ್ಟಿದ್ದೆ. ಯಾವುದೇ ವ್ಯಕ್ತಿಗೆ, ಅಪ್ಪನಾದ ಘಳಿಗೆ ಜೀವನದ ಒಂದು ದೊಡ್ಡ ಘಟ್ಟ.

ಅದನ್ನು ಸ್ನೇಹಿತರಿಗೆ, ಬಂಧುಗಳಿಗೆ, ಪರಿಚಯದವರಿಗೆಲ್ಲಾ ಹೇಳಿ ಖುಷಿಪಡಬೇಕು. ಆ ಪುಟ್ಟ ಕಂದನ ಕಾಲುಗಳನ್ನು ಕೈಯಲ್ಲಿ ಹಿಡಿದು ಧನ್ಯತೆ ಅನುಭವಿಸಬೇಕು. ಗರ್ಭದಿಂದ ಮಡಿಲಿಗೆ ಬಂದ ಕಂದನನ್ನು ಸ್ವಾಗತಿಸಬೇಕು. ಆದರೆ ನಾನು ಇದ್ಯಾವುದನ್ನೂ ಮಾಡಲಿಲ್ಲ. ಅಸಲಿಗೆ ನಂಗೆ ಅಪ್ಪನಾದ ಆನಂದವೇ ಇರಲಿಲ್ಲ. ಅದೊಂದು ಜವಾಬ್ದಾರಿ ಅಷ್ಟೇ ಅನ್ನೋ ಭಾವನೆಯಲ್ಲಿದ್ದೆ. ಒಂದು ಲೆಕ್ಕದಲ್ಲಿ ಪ್ರಾಣಿಯಂಥ ಮನಸ್ಥಿತಿ ನನಗಾಗ. ಆದರೆ, ಅದೊಂದು ದಿನ ಮಗಳು ನನ್ನನ್ನು “ಅಪ್ಪಾ…’ ಅಂತ ಕರೆದಳು ನೋಡಿ; ಅವತ್ತು ನಾನು ಮೊದಲನೇ ಸಲ ಹೇಳಿಕೊಳ್ಳಲಾಗದ ಭಾವತೀವ್ರತೆಗೆ ಒಳಗಾಗಿಬಿಟ್ಟೆ.

ಮೊದಲನೇ ಸಲ ಅಪ್ಪನಾಗುವ ಸುಖವನ್ನು, ಧನ್ಯತೆಯನ್ನು, ಭಾವುಕತೆಯನ್ನು ಅರ್ಥಮಾಡಿಕೊಂಡೆ. ಅವತ್ತಿನಿಂದ ಅವಳನ್ನು ಕ್ಷಣಮಾತ್ರಕ್ಕೂ ಬಿಟ್ಟಿರಲಾರದ ಅಸಹಾಯಕತೆಗೆ ಒಳಗಾಗಿಬಿಟ್ಟೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ನಂಗೆ ನನ್ನ ಅಪ್ಪನೆಂದರೆ ವಿಪರೀತ ಗೌರವ, ಪ್ರೀತಿ. ಆದರೆ ಅವರು ನನಗೆ ಅರ್ಥವಾಗಲು ಶುರುವಾಗಿದ್ದು ಮಾತ್ರ, ನಾನು ನನ್ನ ಮಗಳನ್ನು ಹಚ್ಚಿಕೊಂಡ ಮೇಲೆ. ಅಪ್ಪನನ್ನು ನಾನೆಂದೂ ಅರ್ಥೈಸಿಕೊಳ್ಳುವ ಪ್ರಯತ್ನವನ್ನೇ ಮಾಡಿರಲಿಲ್ಲ.

ಆದ್ರೆ, ಮಗಳು ನನಗೆ ಹತ್ತಿರವಾದಂತೆಲ್ಲಾ ನಾನು ನಮ್ಮಪ್ಪನಿಗೆ ಹತ್ತಿರವಾಗುತ್ತಾ ಹೋದೆ. ನನ್ನ ಜೀವನದ ಬಹು ದೊಡ್ಡ ಬದಲಾವಣೆ ಇದು. ಮಗಳಿಗೆ “ಕನಸು’ ಅಂತ ಹೆಸರಿಟ್ಟೆ. ಅವಳು ಬಂದಮೇಲೆ ಹೆಚ್ಚು ಭಾವುಕನಾದೆ, ಸ್ವಲ್ಪ ಚ್ಯೂಸಿಯಾದೆ, ಅನಗತ್ಯ ಜವಾಬ್ದಾರಿಗಳಿಗೆ ಒಳಗಾದೆ, ಕುಟುಂಬಕ್ಕೆ ತುಂಬಾ ಸಮಯ ಕೊಡೋಕೆ ಶುರುಮಾಡಿದೆ! ಸಹೋದ್ಯೋಗಿ ಮಹಿಳೆಯರು ಹೆಚ್ಚು ಅರ್ಥವಾಗಲಾರಂಭಿಸಿದರು. ಹೊರಗಿನ ಎಲ್ಲಾ ಒತ್ತಡಗಳು ಮಗಳು ಎದೆಯೇರಿದ ಘಳಿಗೆಯಿಂದಲೇ ಮರೆಯಾಗುತ್ತಿದ್ದವು. ಒಟ್ಟಿನಲ್ಲಿ ನನ್ನ 30 ವರ್ಷದ ಬದುಕು ಒಮ್ಮೆಲೆ ಯೂಟರ್ನ್ ಪಡೆದುಕೊಂಡ ಘಳಿಗೆ ಅದು.
-ವೀರಕಪುತ್ರ ಶ್ರೀನಿವಾಸ್‌, ವೃತ್ತಿ: ಸ್ವಯಂ ಉದ್ಯೋಗಿ, ಮಗಳು: ಕನಸು

***

ನನ್‌ ಹೆಸ್ರು ಪುಣ್ಯಕೋಟಿ ಅಂತಾಳೆ!
ಮದುವೆಯಾಗಿ ಮೂರು ವರ್ಷಗಳ ನಂತರ ಹೆಂಡತಿ ಗರ್ಭಿಣಿಯಾದಳು. ಇನ್ನೇನು ಹೆರಿಗೆಯ ದಿನಕ್ಕೆ ಒಂದೂವರೆ ತಿಂಗಳಿದೆ ಅನ್ನುವಾಗ ಮಾವ (ಹೆಂಡತಿಯ ತಂದೆ)ನವರು ತೀರಿಕೊಂಡರು. ಆಗ ಡಾಕ್ಟರ್‌ ಹೇಳಿದರು- “ಪ್ರಿ ಮೆಚ್ಯೂರ್‌ ಹೆರಿಗೆಯಾಗೋ ಸಾಧ್ಯತೆ ಇದೆ. ತಯಾರಾಗಿರಿ…’ ಆದರೆ, ದೇವರ ದಯಕ್ಕೆ ವೈದ್ಯರು ಹೇಳಿದ ದಿನವೇ, ಅವಳಿಗೆ ನಾರ್ಮಲ್‌ ಡೆಲಿವರಿ ಆಯ್ತು. ಆ ದಿನ ಯಾವುದು ಗೊತ್ತಾ? ವಿಜಯ ದಶಮಿಯ ನಂದಿ ಪೂಜೆ ಮುಹೂರ್ತ. (ತಾಯಿ ಚಾಮುಂಡಿಯನ್ನು ಆನೆ ಮೇಲೆ ಕೂರಿಸುವ ಸಮಯ) ಆ ಸಂದರ್ಭದಲ್ಲಿ ಗಂಡು ಮಗ ಆಗಿಬಿಟ್ಟಿದ್ದರೆ ನನಗೆ ತುಂಬಾ ಬೇಜಾರಾಗಿರುತ್ತಿತ್ತು.

ಅವತ್ತು ಮಹಿಷಾಸುರನ ಬದಲು ದೇವಿ ಹುಟ್ಟಿಬಂದಳು. ನಾರ್ಮಲ್‌ ಡೆಲಿವರಿ, ಹೆಣ್ಣುಮಗು, ವಿಜಯದಶಮಿ ದಿನ – ಟ್ರಿಪಲ್‌ ಸೆಂಚುರಿ ಹೊಡೆದೆನೆಂದು ಬೀಗಿದ್ದೇ ಬೀಗಿದ್ದು! ಮಾವ ತೀರಿಕೊಂಡಿದ್ದರಿಂದ, ಒಂದು ವರ್ಷದವರೆಗೆ ನಾಮಕರಣ ಮಾಡುವಂತಿರಲಿಲ್ಲ. ಒಂದು ವರ್ಷದ ನಂತರ ಹೆಸರಿಡೋಣ ಅಂದ್ರೆ, ನನ್ನ ತಾತ ತೀರಿಕೊಂಡರು. ಅವಳಿಗಿನ್ನೂ ಹೆಸರೇ ಇಲ್ಲ! ಆದ್ರೆ, ಯಾರಾದರೂ- ನಿನ್ನ ಹೆಸರೇನು ಪುಟ್ಟಿ? ಅಂದ್ರೆ, ಪುಣ್ಯಕೋಟಿ ಅಂತಾಳೆ! ತ್ಯಾಗ, ಮುಗ್ಧತೆ, ಒಳ್ಳೆತನಕ್ಕೆ ಹೆಸರಾದ ಪುಣ್ಯಕೋಟಿ ನಾನು ಅನ್ನೋ ಅವಳು ನನ್ನ ಮಗಳಾ, ನಾನು ಅವಳ ಅಪ್ಪನಾ ಹೇಳಿ!

ಮಗಳು ಹುಟ್ಟುವ ಸ್ವಲ್ಪ ಸಮಯ ಮೊದಲು, ಡಾಕ್ಟರ್‌ ನನ್ನನ್ನು ಕೇಳಿದ್ದರು- ನಿಮ್ಮ ವೃತ್ತಿಯಲ್ಲಿ ಬರೀ ಸಾವು-ನೋವುಗಳನ್ನೇ ನೋಡ್ತಿರಿ¤àರಿ. ಯಾವತ್ತಾದ್ರೂ ಜೀವವೊಂದು ಹುಟ್ಟೋದನ್ನು ನೋಡಿದ್ದೀರಾ? ನೋಡಬೇಕು ಅಂತಿದ್ರೆ ಒಳಗೆ ಬನ್ನಿ…  ಮಗಳು ಹುಟ್ಟುವಾಗ, ನಾನು ನನ್ನಾಕೆಯ ಪಕ್ಕವೇ ನಿಂತಿದ್ದೆ. ಮಗಳನ್ನು ನಾನೇ ಮೊದಲು ನೋಡಿದ್ದು, ಎತ್ತಿಕೊಂಡಿದ್ದು. ನನ್ನ ಪ್ರಕಾರ, ಪ್ರತಿಯೊಬ್ಬ ಗಂಡಸೂ, ಜೀವ ಭೂಮಿಗೆ ಬರುವ ಆ ಪ್ರಕ್ರಿಯೆಯನ್ನು ನೋಡಬೇಕು. ಆಗ ನಮಗೆ ಅರ್ಥವಾಗುತ್ತೆ, ನಾವು ಹೆಣ್ಣಿನ ಕಾಲಿನ ಧೂಳಿಗೂ ಸಮ ಅಲ್ಲ ಅಂತ! ಅದೇ ಕಾರಣಕ್ಕೆ, ಹೆಣ್ಣು ಮಗುವಿನ ತಂದೆ ಎಂದು ಕರೆಸಿಕೊಳ್ಳಲು ನನಗೆ ಹೆಮ್ಮೆ ಇದೆ.
-ರವಿಶಂಕರ್‌ ಮೈಸೂರು, ವೃತ್ತಿ: ಪೊಲೀಸ್‌ ಇನ್‌ಸ್ಪೆಕ್ಟರ್‌, ಮಗಳು: ಹೆಸರಿಟ್ಟಿಲ್ಲ

***

ಎರಡು ನಕ್ಷತ್ರಗಳಿವೆ ಮನೆಯೊಳಗೆ…
ನಂಗೆ ಇಬ್ಬರು ಹೆಣ್ಮಕ್ಕಳು. ಉಜ್ವಲ, ಐಶ್ವರ್ಯ; ನಮ್ಮನೆಯ ಎರಡು ದೀಪಗಳಿದ್ದಂತೆ. “ಓ, ನಿಮ್ಗೆ ಇಬ್ರೂ ಹೆಣ್ಣುಮಕ್ಕಳೇನಾ?’…ಅಂತ ತುಂಬಾ ಜನ ಕೇಳಿದ್ದಾರೆ. ಆಗ ನಾನು, ಅದರಲ್ಲೇನಿದೆ; ಹೆಣ್ಣಾಗಲಿ, ಗಂಡಾಗಲಿ, ಮಕ್ಕಳು ಮಕ್ಕಳೇ ತಾನೇ? ಅನ್ನುತ್ತೇನೆ. ಗಂಡುಮಕ್ಕಳಿಲ್ಲವಲ್ಲ ಅನ್ನೋ ಕೊರಗು ಯಾವತ್ತೂ ನನ್ನನ್ನು ಕಾಡಿಲ್ಲ, ಕಾಡುವುದೂ ಇಲ್ಲ. ಯಾಕಂದ್ರೆ, ಮಗ ಇದ್ದಿದ್ದರೆ ಹೇಗೆ ಬೆಳೆಸುತ್ತಿದ್ದೆನೋ, ಹೆಣ್ಣುಮಕ್ಕಳನ್ನೂ ಹಾಗೆಯೇ ಬೆಳೆಸಿದ್ದೇನೆ. ಒಬ್ಬಳನ್ನೇ ಹಾಸ್ಟೆಲ್‌ಗೆ ಕಳಿಸಬೇಕಾ? ಅವಳೊಬ್ಬಳೇ ಬಸ್‌ನಲ್ಲಿ ಓಡಾಡ್ತಾಳಾ, ಮುಂದೆ ಮದುವೆಯಾಗಿ ಹೋಗುವವರನ್ನು ಓದಿಸಬೇಕಾ ಅಂತೆಲ್ಲಾ ಯೋಚಿಸಿ, ಅವರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿಲ್ಲ.

ನೋಡಿ, ಹೊರಪ್ರಪಂಚ ಹೀಗಿದೆ. ನೀವು ಹೀಗಿರಬೇಕು ಅಂತ ಬದುಕುವ ರೀತಿಯನ್ನು, ಒಳ್ಳೆಯ ಸಂಸ್ಕಾರವನ್ನು ಕಲಿಸಿ, ಸ್ವತಂತ್ರವಾಗಿ ಬಿಟ್ಟಿದ್ದೇನೆ. ಆ ಪಾಠಗಳು ಯಾವತ್ತೂ ಅವರ ಜೊತೆಗಿದ್ದು, ಕಾಪಾಡುತ್ತವೆ ಅನ್ನೋದು ನನ್ನ ನಂಬಿಕೆ. ಕೆಲವೊಮ್ಮೆ ಅನ್ನಿಸುತ್ತದೆ- ಗಂಡುಮಕ್ಕಳು ಇದ್ದಿದ್ರೂ ಇವರ ಹಾಗೆ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ವೇನೋ ಅಂತ. ಕೆಟ್ಟ ಅಭ್ಯಾಸ ಕಲಿತು ಹೆತ್ತವರಿಗೆ ನೋವು ಕೊಡುವ, ಆಸ್ತಿ ಆಸೆಗೆ ಅಪ್ಪ-ಅಮ್ಮನನ್ನೇ ಕೊಲೆ ಮಾಡುವ ಮಕ್ಕಳ ಕತೆಗಳನ್ನೆಲ್ಲಾ ಕೇಳಿದಾಗ, ಹೆಣ್ಣುಮಕ್ಕಳಾಗಿದ್ದರೆ ಖಂಡಿತಾ ಹೀಗೆ ಮಾಡ್ತಿರಲಿಲ್ಲ ಅನ್ನಿಸುತ್ತೆ. ನನ್ನಿಬ್ಬರು ಮಕ್ಕಳ ಬಗ್ಗೆ ಹೆಮ್ಮೆಯಾಗುತ್ತದೆ.
– ಶ್ರೀನಿವಾಸ್‌ ಎನ್‌. ಶೆಟ್ಟಿ ಶಿವಮೊಗ್ಗ, ವೃತ್ತಿ: ಟೈಲರ್‌, ಮಕ್ಕಳು: ಉಜ್ವಲ ಎಸ್‌ ಶೆಟ್ಟಿ, ಐಶ್ವರ್ಯ ಎಸ್‌.ಶೆಟ್ಟಿ.

***

ಧೈರ್ಯಲಕ್ಷ್ಮಿಯರು
ನನಗೆ ಗಂಡುಮಕ್ಕಳು ಬೇಡವೇ ಬೇಡ ಅಂತಿತ್ತು. ಯಾಕಂದ್ರೆ, ಗಂಡುಮಕ್ಕಳಿಂದ ಹಿಂಸೆ ಅನುಭವಿಸಿದ ಬಹಳಷ್ಟು ಹೆತ್ತವರನ್ನು ನೋಡಿದ್ದೆ ನಾನು. ದೇವರ ದಯೆಯಿಂದ ಮೂವರೂ ಹೆಣ್ಣುಮಕ್ಕಳೇ ಆದರು. ಗಂಡುಮಕ್ಕಳಿಗಿಂತ ಜಾಸ್ತಿ ಧೈರ್ಯವಂತೆಯರು. ಮೂವರಿಗೂ ಕೃಷಿಯಲ್ಲಿ ಆಸಕ್ತಿಯಿದೆ. ಮುಂದೆ, ನನ್ನ ವೃತ್ತಿಯನ್ನು ನಿಷ್ಠೆಯಿಂದ ಮುಂದುವರಿಸಬಲ್ಲರು ಅನ್ನೋ ನಂಬಿಕೆಯಿದೆ.

ಕೆಲವು ವರ್ಷಗಳ ಹಿಂದೆ, ಕ್ಯಾನ್ಸರ್‌ನಿಂದಾಗಿ ನಾನು ಆಸ್ಪತ್ರೆ ಸೇರಿದ್ದೆ. ಎರಡು ವರ್ಷ ನನ್ನಿಂದ ಏನೂ ಕೆಲಸ ಮಾಡಲಾಗಲಿಲ್ಲ. ಆ ಸಮಯದಲ್ಲಿ, ನನ್ನ ದೊಡ್ಡ ನರ್ಸರಿಯ ಪೂರ್ತಿ ಜವಾಬ್ದಾರಿ ಹೊತ್ತವಳು ಎರಡನೇ ಮಗಳು ರೋಹಿಣಿ. ಎಷ್ಟು ಚೆನ್ನಾಗಿ ಎಲ್ಲವನ್ನೂ ನಿಭಾಯಿಸಿದಳೆಂದರೆ, ನನ್ನ ಅನುಪಸ್ಥಿತಿ ಕಾಡಲೇ ಇಲ್ಲ. ಅವಳಿನ್ನೂ ಸೆಕೆಂಡ್‌ ಪಿಯು ಓದುತ್ತಿದ್ದಳಾಗ! ಆ ವಯಸ್ಸಿನ ಗಂಡು ಮಗನಿಂದ ಅದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಈಗ ಹೇಳಿ, ಗಂಡು ಮಗ ಬೇಕು ಅಂತ ಕೊರಗುವುದಕ್ಕೆ ಕಾರಣವಿದೆಯೇ?
-ಶಿವನಾಪುರ ರಮೇಶ್‌, ವೃತ್ತಿ: ಪ್ರಗತಿಪರ ಕೃಷಿಕ, ಮಕ್ಕಳು: ಸುಪ್ರಿಯಾ, ರೋಹಿಣಿ ಚನ್ನಪ್ಪ, ತೇಜಸ್ವಿನಿ

***

ನನ್ನ ಸಂಭ್ರಮಕ್ಕೆ ಅವರೇ ಕಾರಣ…
ಮಗುವಿನ ಆಗಮನದ ಸೂಚನೆ ಬಂದ ತಕ್ಷಣ, ಅದು ಗಂಡೊ? ಹೆಣ್ಣೋ ಎಂಬ ಕುತೂಹಲ ಬರುವುದು ಸಹಜ. ಆದರೆ ನಮಗೆ ಮಗು ಮುಖ್ಯವಾಗಿತ್ತೇ ಹೊರತೂ ಹೆಣ್ಣು ಅಥವಾ ಗಂಡು ಅಂತೇನಿರಲಿಲ್ಲ. ಒಂದು ಹೊಸ ಜೀವ ನಮ್ಮ ಜೀವನಕ್ಕೆ ಸೇರ್ಪಡೆ ಆಗುವಾಗ ಅದರ ಆಕಾರ, ಬಣ್ಣ, ಲಿಂಗದ ಬಗ್ಗೆ ಯೋಚಿಸುವುದು ಮನುಷ್ಯನ ಬುದ್ಧಿಮತ್ತೆಗೆ ಮಾಡಿಕೊಳ್ಳುವ ಅವಮಾನ ಎಂಬುದು ನನ್ನ ಅನಿಸಿಕೆ.

ಮದುವೆಯಾಗಿ ಒಂದು ವರ್ಷದಲ್ಲಿ ಮಗಳು ಅದಿತಿಯ ಜನನವಾಯಿತು. ಒಂದು ಹೊಸ ಅನುಭವ, ಖುಷಿ, ಹೊಸ ಜವಾಬ್ದಾರಿ ಎಲ್ಲವೂ ಬಂದಂತಾಯಿತು. ಅವಳ ಬಾಲ್ಯದ ದಿನಗಳನ್ನು ನಾವು ತುಂಬಾ ಸಂತೋಷದಾಯಕವಾಗಿ ಅನುಭವಿಸಿದೆವು. ಈಗ ಅವಳು ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ನನ್ನ ಅನುಭವದಲ್ಲಿ, ಹೆಣ್ಣುಮಕ್ಕಳು ಸಹಜವಾಗಿಯೇ ಬುದ್ಧಿವಂತರಾಗಿರುತ್ತಾರೆ. ಅವರು ಓದಿನಲ್ಲಿ ಸದಾ ಮುಂದೆ ಇರುತ್ತಾರೆ. ಸರಿಯಾದ ಅವಕಾಶವನ್ನು ಅವರಿಗೆ ಕೊಟ್ಟರೆ ಸಾಕಷ್ಟೇ!

ನಮಗೆ ಯಾವತ್ತೂ ಶಾಲೆಯಲ್ಲಿ ಅವಳ ಕಲಿಕೆಯ ಬಗ್ಗೆ ದೂರು ಬಂದಿದ್ದೇ ಇಲ್ಲ. ನಮಗೆ ಎರಡನೇ ಮಗು ಕೂಡ ಹೆಣ್ಣಾದಾಗ ಬೇಸರವೇನೂ ಆಗಲಿಲ್ಲ. ಮಕ್ಕಳು ಮಕ್ಕಳೇ. ಅವರಲ್ಲಿ ಗಂಡು- ಹೆಣ್ಣು ಎಂಬ ಭೇದ ಭಾವ ಸಲ್ಲದು ಎಂದೇ ನನ್ನ ಅಭಿಪ್ರಾಯ. ಹೆಣ್ಣು ಮಕ್ಕಳು ತುಂಬಾ ಸೂಕ್ಷ್ಮ ಮನಸ್ಸಿನವರೆಂಬುದು ನನ್ನ ಅನುಭವ. ದಿನದ ಜಂಜಾಟದಿಂದ ಮನೆಗೆ ಬಂದರೆ, ಅವರ ಜೊತೆ ಸಮಯ ಕಳೆಯುವುದು ಮನಸ್ಸಿಗೆ ಸಮಾಧಾನ ಹಾಗೂ ಸಂತೋಷ ಕೊಡುವ ಸಂಗತಿ.

ಪತ್ನಿ ಜ್ಯೋತಿ ಹಾಗೂ ಇಬ್ಬರು ಹೆಣ್ಣುಮಕ್ಕಳಾದ ಅದಿತಿ ಹಾಗೂ ಆದ್ಯ ಜತೆ ಸುಂದರ ಸಂಸಾರ ನಮ್ಮದು. ಹಿಂದಿನ ಕಾಲದಲ್ಲಿ ಹೆಣ್ಣು ಮಗು ಹುಟ್ಟಿದರೆ ಅದು ಭಾರ ಎಂದು ಭಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ನಮಗಂತೂ ಹೆಣ್ಣು ಮಗುವೆಂದರೆ ಖುಷಿ ಪಡುವ ಕ್ಷಣ. ಅವರಿಗೆ ಥರಹೇವಾರಿ ಬಟ್ಟೆ ಹಾಕಿ, ಅಲಂಕಾರ ಮಾಡಿ ಸಂಭ್ರಮಿಸುವ ಹೊತ್ತು. ಅವರಿಬ್ಬರ ಆಟ, ತುಂಟಾಟ, ಜಗಳ ನೋಡುತ್ತಿದ್ದರೆ “ಮನೆಗೊಂದು ಹೆಣ್ಣು ಮಗುವಿರಲಿ; ಅವಳ ನಗು ಮನೆ-ಮನ ತುಂಬಿರಲಿ’ ಎಂಬ ಸಾಲು ಮತ್ತೆ ಮತ್ತೆ ನೆನಪಾಗುತ್ತದೆ.
-ಶಿವಪುತ್ರ ಚೌಧರಿ, ವೃತ್ತಿ: ಸಾಫ್ಟ್ವೇರ್‌ ಎಂಜಿನಿಯರ್‌, ಮಕ್ಕಳು: ಅದಿತಿ, ಆದ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಒಂದು ದಿನ ಮಗಳು, ಯಾರನ್ನೋ ತಮ್ಮ ಮುಂದೆ ತಂದು ನಿಲ್ಲಿಸಿ "ನಿಮ್ಮ ಅಳಿಯ' ಎಂದುಬಿಟ್ಟರೆ.. ಬರಿಯ ವಿಚಾರವೇ ಸಹ್ಯವಾಗುತ್ತಿಲ್ಲ. ಒಬ್ಬಳೇ ಮಗಳ ಮದುವೆ ಯನ್ನು ವಿಜೃಂಭಣೆಯಿಂದ...

  • ಎಲ್ಲರೂ ಧಾವಂತದ ಜೀವನ ನಡೆಸುತ್ತಿರುವಾಗ ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಒಂದು ಕಾರ್ಯಕ್ರಮಕ್ಕಾದರೂ ಕಡ್ಡಾಯ ಹಾಜರಿ ಹಾಕುವುದನ್ನು ಹೆಚ್ಚಿನವರು...

  • ಗಡಿಬಿಡಿಯಿಂದ ಒಳಗೆ ಹೋಗಿ ಲಗುಬಗೆಯಿಂದ ನೀಲಿಸೀರೆ ಉಟ್ಟು, ಅಳ್ಳಕವಾಗಿ ಜಡೆ ಹೆಣೆದು, ಹೂ ಮುಡಿದು ಮುಖಕ್ಕೆ ರೆಮಿ ಸ್ನೋ, ಲ್ಯಾಕ್ಟೋ ಕ್ಯಾಲಮೈನ್‌ ಲೇಪಿಸಿಕೊಂಡು...

  • ಹಿಂದಿನ ತಲೆಮಾರಿನ ಜನ, ಈಗಿನವರ ಥರ, "ಅಯ್ಯೋ ಬಿಸಿಲ್ಗೆ ಹೋದ್ರೆ ಸನ್‌ ಬರ್ನ್ ಆಗುತ್ತೆ. ಅದಿಕ್ಕೆ ಅಂಬ್ರೆಲಾ ತಗೊಂಡೇ ಹೋಗೋದು ನಾನು' ಅಂತಿದ್ದಿಲ್ಲ.ಸನ್‌ ಸ್ಕ್ರೀನ್‌...

  • ಲೇಡಿಸ್‌ ಕ್ಲಬ್‌ ಅಂದಾಕ್ಷಣ, ಹರಟೆ ಹೊಡೆಯಲು, ಮೋಜು ಮಸ್ತಿ ಮಾಡಲು ಮಹಿಳೆಯರು ಒಂದೆಡೆ ಸೇರುವ ತಾಣ ಎಂಬ ಕಲ್ಪನೆ ಕೆಲವರಿಗೆ ಇದೆ. ಅಂಥ ಕ್ಲಬ್‌ಗಳಿಂದ ಏನೂ ಪ್ರಯೋಜನವಿಲ್ಲ...

ಹೊಸ ಸೇರ್ಪಡೆ