ವರ್ಕಿಂಗ್ ಲೇಡಿಯ ಸಮಾಚಾರ

ಅನುಕಂಪ, ಅವಕಾಶವಾದಿತನದ ಆಚೆ ನಿಂತು...

Team Udayavani, May 15, 2019, 6:00 AM IST

ಆರಂಭದಲ್ಲಿ, ಕೆಲಸ ಸಿಕ್ಕಿದ್ರೆ ಸಾಕು ಅನ್ನುವ ಕೆಲವು ಹೆಣ್ಣುಮಕ್ಕಳು, ಆನಂತರದಲ್ಲಿ ಒಂದೇ ಸ್ಥಳದಲ್ಲಿ ಕೆಲಸ ಮಾಡಬೇಕು ಎಂಬ ವಾದ ಹೂಡುತ್ತಾರೆ. ಕುಟುಂಬ ನಿರ್ವಹಣೆ, ಅತ್ತೆಯ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸದ ನೆಪ ಹೇಳಿ ವರ್ಗಾವಣೆಯಿಂದ ಬಚಾವ್‌ ಆಗಲು ಯೋಚಿಸುತ್ತಾರೆ. ಹಾಗಾದ್ರೆ, ಪುರುಷರಿಗೆ ಈ ಸಮಸ್ಯೆ ಕಾಡುವುದೇ ಇಲ್ವಾ?

ಗೆಳತಿ ರಮಾಳ ಪತಿ ಸರಕಾರಿ ಇಲಾಖೆಯೊಂದಲ್ಲಿ ಹಿರಿಯ ಉದ್ಯೋಗಿ. ಅವರ ಕೆಲಸದ ಅವಿಭಾಜ್ಯ ಅಂಗವಾಗಿ ಆಗಾಗ ವರ್ಗಾವಣೆಯಾಗುತ್ತದೆ. ಹಾಗಾಗಿ, ಬೆಂಗಳೂರು, ಮೈಸೂರು, ಮಡಿಕೇರಿ, ಚಿತ್ರದುರ್ಗ, ಭದ್ರಾವತಿ, ಚಿಕ್ಕಮಗಳೂರು… ಹೀಗೆ ಹಲವಾರು ಜಿಲ್ಲೆಗಳಲ್ಲಿ ಮನೆಮಾಡಿ ಪುನಃ ಮೈಸೂರಿಗೆ ಬಂದಿಳಿದಳು ರಮಾ. ಅವಳನ್ನು ನೋಡಿ ನಾನು, “ನಿಮ್ಮ ಜೀವನವೇ ಚೆನ್ನ ಬಿಡಿ, ಕರ್ನಾಟಕವಿಡೀ ಸುತ್ತಿ ಮರಳಿ ಗೂಡಿಗೆ ಬಂದ್ರಾ?’ ಅಂತ ಕೇಳಿದೆ.

“ಅಯ್ಯೋ, ನಮ್ಮ ಸುತ್ತಾಟದ ಸಂಭ್ರಮ ಏನೂ ಅಂತ ಕೇಳ್ತೀರಾ? ಒಂದು ಊರಿಗೆ ಹೋಗಿ ಅಲ್ಲಿಯ ಮನೆಗೆ ಸೆಟ್‌ ಆಗುವಷ್ಟರಲ್ಲಿ, ಇನ್ನೊಂದು ಕಡೆಗೆ ಪೋಸ್ಟಿಂಗ್‌ ಆರ್ಡರ್‌ ಬರುತ್ತೆ. ಇದಕ್ಕೆ ಮುಖ್ಯ ಕಾರಣ, ಯಜಮಾನರ ಬ್ರ್ಯಾಂಚ್‌ನಲ್ಲಿ ಕೆಲಸ ಮಾಡೋ ಲೇಡೀಸ್‌. ಅವರಿಗೆ ಸಂಬಳ ಬೇಕು, ಪ್ರಮೋಶನ್‌ ಬೇಕು, ಆದರೆ ಟ್ರಾನ್ಸ್ ಫ‌ರ್‌ ಆರ್ಡರ್‌ ಬರೋ ಸೂಚನೆ ಸಿಕ್ಕ ಕೂಡಲೇ, ತನ್ನ ಸಂಸಾರ ತಾಪತ್ರಯವನ್ನೆಲ್ಲ ಬಾಸ್‌ ಮುಂದೆ ಹೇಳಿ ಅಳ್ಳೋದು ಅಥವಾ ಯಾರೋ ದೊಡ್ಡ ಮನುಷ್ಯರ ಕೈಲಿ ಹೇಳ್ಸೋದು. ಒಟ್ಟಿನಲ್ಲಿ ಒಂದೇ ಕಡೆ ಇರಬೇಕು. ಅವ್ರ ಸಂಸಾರಕ್ಕೆ ಯಾವುದೇ ರೀತಿ ತೊಂದ್ರೆ ಆಗ್ಬಾರ್ದು ಅಷ್ಟೆ. ಆದರೆ ನಮ್ಮೆಜಮಾನ್ರಿಗೆ ಹೀಗೆಲ್ಲಾ ರಿಯಾಯಿತಿ ಕೇಳ್ಳೋಕಾಗಲ್ಲ ನೋಡಿ. ಬ್ಯಾಗ್‌ ಎತ್ಕೊಂಡು ಹೊರಡೋದೇ ಆಗುತ್ತೆ…

…ಕಷ್ಟ ಆಗೋದು ನಮ್ಗೆ ಕಣ್ರೀ. ಒಂದು ಮನೇಲಿ ಎಡಗಡೆಗೆ ಕಿಚನ್‌ ಇದ್ರೆ, ಇನ್ನೊಂದು ಮನೇಲಿ ಬಲಗಡೆಗೆ ಇರುತ್ತೆ. ನಿದ್ದೆಗಣ್ಣಲ್ಲಿ ಲೈಟ್‌ ಆನ್‌ ಮಾಡಲು ಹೋದರೆ ಒಂದು ಮನೇಲಿ ತಲೆ ಪಕ್ಕ ಸ್ವಿಚ್‌ ಇದ್ರೆ ಇನ್ನೊಂದು ಮನೇಲಿ ಕಾಲಡಿ ಸ್ವಿಚ್‌ ಇರುತ್ತೆ. ಒಂದೂರಿನಿಂದ ಗಂಟುಮೂಟೆ ಕಟ್ಟಿಕೊಂಡು ಇನ್ನೊಂದು ಕಡೆ ಹೋಗುವಾಗ ಎಷ್ಟೊಂದು ವಸ್ತುಗಳನ್ನು ಕೊಂಡೊಯ್ಯಲೂ ಆಗದೆ, ಬಿಸಾಕಲೂ ಆಗದೆ ಪೀಕಲಾಟಕ್ಕೆ ಬರುತ್ತೆ. ಮಕಿಗೂ ಸ್ಕೂಲ್‌ ಬದಲಾವಣೆ ಆಗುತ್ತಿರುತ್ತೆ. ಮಹಿಳೆಯರಿಗೆ ಕೆಲಸದಲ್ಲಿ ಸಮಾನತೆ ಬೇಕು ಅಂತಾದ್ರೆ, ಜವಾಬ್ದಾರಿ, ವರ್ಗಾವಣೆ ನೀತಿಯಲ್ಲೂ ಸಮಾನತೆ ಬೇಡ್ವಾ? ಪುರುಷರಿಗೂ ಸಂಸಾರ ತಾಪತ್ರಯ ಇರಲ್ವಾ, ಅವರ ಹೆಂಡ್ತೀರು ಮಹಿಳೆಯರೇ ಅಲ್ವಾ? ಅವ್ರ ಮಕಿÛಗೂ ಶಾಲೆ ಬದಲಾಯಿಸಲು, ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟ ಆಗಲ್ವಾ? ಈ ಸಡಗರಕ್ಕೆ ನಾನು ಇದ್ದ ಕೆಲ್ಸ ಬಿಡೋ ಹಾಗಾಯ್ತು. ಇನ್ನು ಮುಂದೆ ನಮ್ಮೆಜಮಾನ್ರಿಗೆ ಟ್ರಾನ್ಸ್ ಫ‌ರ್‌ ಆದರೆ ನಾನಂತೂ ಎಲ್ಲಿಗೂ ಬರಲ್ಲ ಅಂತ ಹೇಳಿದ್ದೀನಿ’… ಅಂತ ಸಿಡಿಮಿಡಿಯಿಂದ ಮಾತಾಡಿದರು ರಮಾ. ಅವರ ಮಾತು ಆಕ್ರೋಶಭರಿತವಾಗಿದ್ದರೂ, ಅದು ಚಿಂತನಾರ್ಹ ವಿಚಾರವೇ ಅನ್ನಿಸಿತು.

ಅವಕಾಶವಾದಿಗಳಾಗಬೇಡಿ…
ಉದ್ಯೋಗಸ್ಥ ಮಹಿಳೆಗೆ ಆಫೀಸ್‌ ಹಾಗೂ ಮನೆ, ಎರಡನ್ನೂ ಸಂಭಾಳಿಸಬೇಕಾದ ಅನಿವಾರ್ಯತೆ ಇದ್ದೇ ಇದೆ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ನನಗೆ, ಆಗಾಗ ವೃತ್ತಿ ಸಂಬಂಧಿ ಪ್ರಯಾಣವಿರುತ್ತಿತ್ತು. ಮಗು ನೋಡಿಕೊಳ್ಳಲು ಹಾಗೂ ಮನೆಯ ಕೆಲಸಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಮಾಡುತ್ತಿದ್ದೆ. ಪುರುಷರಾಗಿರಲಿ, ಸ್ತ್ರೀಯರಾಗಿರಲಿ, ವೃತ್ತಿಯನ್ನು ಒಪ್ಪಿಕೊಂಡ ಮೇಲೆ, ಅದರ ಕಾರ್ಯಬಾಹುಳ್ಯ, ಅವಶ್ಯಕತೆ ಹಾಗೂ ಜವಾಬ್ದಾರಿಗಳಿಗೆ ಗಮನ ಕೊಡಲೇಬೇಕು. ತೀರಾ ಅಸಾಧ್ಯ ಎನಿಸಿದರೆ, ಸಂಸ್ಥೆಯ ನಿಯಮಗಳಿಗೆ ಅನುಸಾರವಾಗಿ ಬೇರೆ ಅವಕಾಶಗಳನ್ನು ಪಡೆಯುವುದು, ದೀರ್ಘಾವಧಿ ರಜೆ ಪಡೆದು ಪರ್ಯಾಯ ವ್ಯವಸ್ಥೆಗೆ ಅನುವು ಮಾಡುವುದು ಅಥವಾ ಸ್ವಯಂ ನಿವೃತ್ತಿ ಪಡೆಯುವುದು… ಹೀಗೆ ತನಗೂ, ಉದ್ಯೋಗದಾತರಿಗೂ ತೊಂದರೆಯಾಗದ ರೀತಿಯಲ್ಲಿ ಬದಲಾವಣೆಗೆ ಸಿದ್ಧರಾಗುವುದು ಶ್ರೇಯಸ್ಕರ.

ಅದು ಪ್ರಕೃತಿದತ್ತ… ಅನುಕಂಪವೇಕೆ?
ಅವಶ್ಯಕತೆಗೆ ತಕ್ಕಂತೆ ಉದ್ಯೋಗದ ಸ್ಥಳದಲ್ಲಿ ಇರಬೇಕಾದುದು ಮತ್ತು ನಿರೀಕ್ಷಿತ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೇಲೆ ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತದೆ. ಪ್ರಕೃತಿದತ್ತವಾಗಿ ಸ್ತ್ರೀಯರಿಗೆ ಬಸಿರು, ಬಾಣಂತನ ಹಾಗೂ ಮಕ್ಕಳ ಲಾಲನೆ- ಪಾಲನೆಯ ಹೆಚ್ಚುವರಿ ಜವಾಬ್ದಾರಿಗಳು ಇರುವುದರಿಂದ ಎಳೆಯ ವಯಸ್ಸಿನ ಮಹಿಳಾ ಉದ್ಯೋಗಿಗಳಿಗೆ ರಜೆಯ ಅವಶ್ಯಕತೆ ಹೆಚ್ಚು. ಕನಿಷ್ಠ, ತಮ್ಮ ಮಕ್ಕಳು ಶಾಲೆಗೆ ಹೋಗುವ ಹಂತ ತಲುಪಿದ ಮೇಲೆ, ಉದ್ಯೋಗದ ಸ್ಥಳದಲ್ಲಿ “ಮಹಿಳೆ’ ಎಂಬ ಅಥವಾ ಕುಟುಂಬ ನಿರ್ವಹಣೆಯ ನೆಪವೊಡ್ಡಿ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುವುದು ಅಷ್ಟೊಂದು ಸಮಂಜಸವಲ್ಲ.

ಹೇಮಮಾಲಾ ಬಿ., ಮೈಸೂರು


ಈ ವಿಭಾಗದಿಂದ ಇನ್ನಷ್ಟು

  • ಮನೆಗೆ ಬೀಗ ಹಾಕ್ಕೊಂಡು ಎಲ್ಲರೂ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೂಂದಿಷ್ಟು ಹೆಚ್ಚಿನ ಜವಾಬ್ದಾರಿ. ಎಲ್ಲರ ಬಟ್ಟೆ, ಸಾಮಾನುಗಳನ್ನು ಸರಿಯಾಗಿ ಪ್ಯಾಕ್‌ ಮಾಡೋದು...

  • ಮಾವಿನ ಮರ ಹೂ ಬಿಟ್ಟಾಗಲೇ, ಈ ವರ್ಷ ಮಾವಿನ ಹಣ್ಣು ಮತ್ತು ಕಾಯಿಯಿಂದ ಯಾವೆಲ್ಲಾ ಅಡುಗೆ ಮಾಡಬಹುದು ಅಂತ ಗೃಹಿಣಿಯರು ಲೆಕ್ಕ ಹಾಕುತ್ತಾರೆ. ಮಾವಿನ ಹಣ್ಣನ್ನು ಹಾಗೇ...

  • ನಿರ್ಜಲೀಕರಣ, ಸನ್‌ಬರ್ನ್, ತುರಿಕೆ, ಬೆವರುಸಾಲೆ, ಕಜ್ಜಿ, ಬಾಯಿಹುಣ್ಣು, ಉರಿಮೂತ್ರ ಸಮಸ್ಯೆ, ನಿದ್ರಾಹೀನತೆ... ಬೇಸಿಗೆಯಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳು ಒಂದೇ,...

  • "ಕಾಡು ಕುದುರೆ ಓಡಿ ಬಂದಿತ್ತಾ...' ಗೀತೆಯ ಮೂಲಕ ರಾಷ್ಟ್ರಪ್ರಶಸ್ತಿಗೆ ಪಾತ್ರರಾದವರು ಶಿವಮೊಗ್ಗ ಸುಬ್ಬಣ್ಣ. ಅವರ ಸಿರಿಕಂಠವನ್ನು ಪ್ರಧಾನಿ ನೆಹರು ಅವರೂ ಮೆಚ್ಚಿಕೊಂಡಿದ್ದರು....

  • ಲಾಭ ಮಾಡುವುದೇ ವ್ಯಾಪಾರದ ಮೂಲ ಉದ್ದೇಶ ಎಂಬ ಮಾತಿದೆ. ಆದ್ರೆ, ಕೆಲವರಿಗೆ ವ್ಯಾಪಾರವೇ ಬದುಕಿನ ಮೂಲಾಧಾರ. ಸಂಸಾರದ ತಕ್ಕಡಿ ತೂಗಿಸಲು, ತಕ್ಕಡಿ ಹಿಡಿಯಲೇಬೇಕಾದ ಅನಿವಾರ್ಯಕ್ಕೆ...

ಹೊಸ ಸೇರ್ಪಡೆ