ಧರ್ಮಾವರಂ, ಮಂಗಲಗಿರಿ, ವೆಂಕಟಗಿರಿ ಸೀರೆಗಳು

Team Udayavani, Aug 30, 2019, 5:00 AM IST

ದಕ್ಷಿಣ ಭಾರತದ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶ 1965ರಲ್ಲಿ ತೆಲಂಗಾಣದೊಂದಿಗೆ ಜೊತೆಗೂಡಿತು.

ದಕ್ಷಿಣಭಾರತದ ಉಡುಗೆಯೊಂದಿಗೆ ಬೆರೆತಿರುವ ಆಂಧ್ರದ ಮಹಿಳೆಯ ಸಾಂಪ್ರದಾಯಿಕ ಉಡುಗೆ, ಆ ಮಣ್ಣಿನ ಸೊಗಡು ಹಾಗೂ ಸಂಸ್ಕೃತಿಯ ಚಿತ್ತಾರವನ್ನು ಬಿಂಬಿಸುವ ವೈಶಿಷ್ಟ್ಯದೊಂದಿಗೆ ಮಹತ್ವಪೂರ್ಣವೆನಿಸುತ್ತದೆ.

14ನೇ ಶತಮಾನದ ಸಮಯದಲ್ಲಿ ಆಂಧ್ರಪ್ರದೇಶದ ಮಹಿಳೆಯರು ಪುರುಷರಂತೆ ಧೋತಿಯನ್ನು ಉಡುತ್ತಿದ್ದರು ಹಾಗೂ ಅದರ ಮೇಲೆ ಮೇಲ್‌ವಸ್ತ್ರವನ್ನು ಹೊದಿಕೆಯಂತೆ ಹೆಗಲಮೇಲೆ ತೊಡುತ್ತಿದ್ದರು.

ತದನಂತರದ ಕಾಲದಲ್ಲಿ ಇದೇ ರೀತಿಯ ಉಡುಗೆ ಹೊಲಿಗೆಯೊಂದಿಗೆ ಒಂದೇ ಭಾಗವಾಗಿ ದೊರೆಯಲು ಆರಂಭವಾಯಿತು. ಇಂದು ಈ ಉಡುಗೆ ಸೀರೆಯಂತೆಯೇ ರೂಪಾಂತರಗೊಂಡಿದೆ. ಈ ಉಡುಗೆಗೆ ಲಂಗ ವೋನಿ ಎಂದು ಕರೆಯಲಾಗುತ್ತದೆ.

ಆಂಧ್ರಪ್ರದೇಶದ ಸೀರೆಗಳು ಬಹುಮುಖೀ ವೈಶಿಷ್ಟ್ಯ ಹೊಂದಿವೆ. ಕೆಲವು ಆಂಧ್ರದ ವಿಶೇಷ ಸೀರೆಗಳತ್ತ ಪಕ್ಷಿನೋಟ ಇಲ್ಲಿದೆ.

ಧರ್ಮಾವರಂ ಸೀರೆ
ಧರ್ಮಾವರಂ ಅನಂತಪುರ ಜಿಲ್ಲೆಯಲ್ಲಿ ತಯಾರಾಗುವ, ಭೌಗೋಳಿಕ ಸೂಚ್ಯಂಕ ಪಡೆದಿರುವ ದಕ್ಷಿಣ ಭಾರತದ ಕೆಲವು ಸೀರೆಗಳಲ್ಲಿ ಒಂದಾಗಿದೆ.

ಧರ್ಮಾವರಂ ಸೀರೆಯು ಕೈಮಗ್ಗದ ನೇಯ್ಗೆಯ ಜರತಾರಿ ಸೀರೆ. ಇದಕ್ಕೆ ಪಟ್ಟು ಸೀರೆ ಹಾಗೂ ಪಾವಡಾ ಎಂದು ಕರೆಯುತ್ತಾರೆ.

ಧರ್ಮಾವರಂನ ವಿಶಿಷ್ಟ ರೇಶ್ಮೆ ಸೀರೆಗಳು ಲೇಪಾಕ್ಷಿ ದೇವಾಲಯದ ಚಿತ್ರಕಲೆಯ ಚಿತ್ತಾರಗಳನ್ನು ಹೊಂದಿವೆ. ಮುಖ್ಯವಾಗಿ ಲತಾಮಂಟಪದ, ದೇವಾಲಯದ ಮೇಲ್ಛಾವಣಿಯ ಮೇಲಿನ ಚಿತ್ತಾರಗಳು ಅಂದವಾಗಿ ಈ ಸೀರೆಗಳಲ್ಲಿ ಒಡಮೂಡುತ್ತವೆ.

ಈ ಸೀರೆಗಳು ಗಾಢ ರಂಗಿನ, ಅಧಿಕ ತೂಕದ ವೈಭವಯುತ ಸೀರೆಯಾಗಿದ್ದು ಮದುವೆ, ಸಭೆ, ಸಮಾರಂಭ ಹಾಗೂ ಚಳಿಗಾಲದ ಸಮಯದಲ್ಲಿ ಉಡಲು ಯೋಗ್ಯವಾಗಿದೆ. ಭರತನಾಟ್ಯ ಹಾಗೂ ಕೂಚೀಪುಡಿ ನೃತ್ಯದಲ್ಲಿ ಉಡುಗೆಯಾಗಿಯೂ ಈ ಸೀರೆ ಬಳಕೆಯಾಗುತ್ತದೆ.

ಮಂಗಲಗಿರಿ ಸೀರೆಗಳು
ಇದು ಆಂಧ್ರದ ಗುಂಟೂರು ಜಿಲ್ಲೆಯ ಮಂಗಲಗಿರಿ ಪ್ರದೇಶದಲ್ಲಿ ತಯಾರಾಗುವ ಹ್ಯಾಂಡ್‌ಲೂಮ್‌ ಸೀರೆಯಾಗಿದೆ. 500 ವರ್ಷಗಳ ಇತಿಹಾಸ ಹೊಂದಿರುವ ಈ ಸೀರೆಗಳು ಜರಿಯ ಅಂಚನ್ನು ಹೊಂದಿದ್ದು ಸೀರೆಯ ಮುಖ್ಯ ಭಾಗದಲ್ಲಿ ವಿನ್ಯಾಸಗಳು ಕಡಿಮೆ. ಈ ಭಾಗದಲ್ಲಿ ನರಸಿಂಹ ಸ್ವಾಮಿ ದೇವಾಲಯವಿದ್ದು, ಅಲ್ಲಿನ ಭಾಗದ ಭಕ್ತರ ಭಕ್ತಿಯ ಹಾಗೂ ಪೂಜೆಯ ಸಂಕೇತದ ಕೈಂಕರ್ಯದೊಂದಿಗೆ ಈ ಸೀರೆಗಳು ಪ್ರಸಿದ್ಧವಾಗಿವೆ.

ಉಡಲು ತೊಡಲು ಸುಲಭವಾಗಿರುವ ಅಧಿಕ ಭಾರವಿಲ್ಲದ ಈ ಸೀರೆಗಳಿಗೆ ಭಾರತದಾದ್ಯಂತ ಬೇಡಿಕೆ ಇದೆ.

ವೆಂಕಟಗಿರಿ ಸೀರೆಗಳು
ವೆಂಕಟಗಿರಿ ಪ್ರದೇಶ, ನೆಲ್ಲೂರು ಜಿಲ್ಲೆಯಲ್ಲಿ ಈ ಸೀರೆ ತಯಾರಾಗುತ್ತದೆ. ವೆಂಕಟಗಿರಿ ಪ್ರದೇಶದ ಆಳ್ವಿಕೆ ಮಾಡಿದ ವೇಲುಗೋಡಿ, ಬೊಬ್ಬಿಲಿ ಹಾಗೂ ಪೀತಪುರಂ ರಾಜರ ಕಾಲದಲ್ಲಿ ಇದು ವಿಖ್ಯಾತವಾಯಿತು. ಆರಂಭದಲ್ಲಿ ರಾಜಮನೆತನದ ಮಹಾರಾಣಿ ಹಾಗೂ ಇತರ ಮಹಿಳೆಯರಿಗಾಗಿಯೇ ಈ ಸೀರೆಯನ್ನು ನೇಯ್ದು ತಯಾರಿಸಲಾಗುತ್ತಿತ್ತು. ಈ ಸೀರೆಯಲ್ಲೂ ಇಂದು ಹಲವು ವೈವಿಧ್ಯಮಯ ಸೀರೆಗಳು ಲಭ್ಯವಿದ್ದು, ವೆಂಕಟಗಿರಿ 100 ಹತ್ತಿಯ ಸೀರೆಗಳು ಜರಿಯ ಅಂಚಿನೊಂದಿಗೆ ವಿಶೇಷ ಮೆರುಗಿನೊಂದಿಗೆ ಪ್ರಸಿದ್ಧವಾಗಿವೆ.

ಲಂಬಾಣಿ ಅಥವಾ ಬಂಜಾರಾ ಮಹಿಳೆಯರ ಸಾಂಪ್ರದಾಯಿಕ ಉಡುಗೆ‌

ಲಂಬಾಣಿ ಅಥವಾ ಬಂಜಾರಾ ಮಹಿಳೆಯರ ಒಂದು ವರ್ಗ ಆಂಧ್ರಪ್ರದೇಶದ ಒಂದು ಮುಖ್ಯ ಬುಡಕಟ್ಟು ಜನಾಂಗವಾಗಿದೆ. ಈ ಜನಾಂಗದ ಜನರ ಸಾಂಪ್ರದಾಯಿಕ ಉಡುಗೆಯಲ್ಲಿ ಕಸೂತಿಯ ಬಹುಮುಖ್ಯ ಆಕರ್ಷಣೆಯಾಗಿದೆ. ಇವರು ಘಾಗ್ರಾ ಚೋಲಿ ಹಾಗೂ ಓಢನಿಯನ್ನು ಧರಿಸುತ್ತಾರೆ.

ಈ ದಿರಿಸಿನ ಮೇಲೆ ಚೌಕಾಕಾರದ ವಜ್ರಾಕಾರದ ಹಾಗೂ ತ್ರಿಕೋಣಾಕೃತಿಯ ಬಣ್ಣ ಬಣ್ಣದ ಕಸೂತಿಯ ವಿನ್ಯಾಸಗಳು ರಚಿತವಾಗಿರುತ್ತವೆ. ಇವುಗಳೊಂದಿಗೆ ಕನ್ನಡಿ, ಮೋತಿ, ಹರಳು ಹಾಗೂ ಸಮುದ್ರ ಚಿಪ್ಪು ಇತ್ಯಾದಿಗಳೊಂದಿಗೆ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಸೂರ್ಯಕಿರಣಗಳು ಈ ಉಡುಗೆಯ ಕನ್ನಡಿಯ ಕಲಾಕೃತಿ ಅಥವಾ ಮಿರರ್‌ ವರ್ಕ್‌ ಮೇಲೆ ಪ್ರತಿಫ‌ಲಿತವಾಗುವಾಗ ಈ ತೊಡುಗೆ ವೈಭವದ ಹಾಗೂ ವಿಶಿಷ್ಟ ನೋಟ ಅಥವಾ ಲುಕ್‌ ನೀಡುತ್ತದೆ.

ಇಂದು ಲಂಬಾಣಿ ಉಡುಗೆ ಆ ಭಾಗದ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಬುಡಕಟ್ಟು ಜನಾಂಗದ ಈ ತೊಡುಗೆ ಆಧುನಿಕತೆಯ ಸ್ಪರ್ಶದೊಂದಿಗೆ ವೈವಿಧ್ಯಮಯ ದಿರಿಸಿನ (ಚೂಡಿದಾರ್‌ ಇತ್ಯಾದಿ) ರೂಪ ಪಡೆದಿದೆ.

ಕಲಂಕರಿ ವಿನ್ಯಾಸದ ಸೀರೆಗಳು ಹಾಗೂ ಬಟ್ಟೆಗಳು ಇಂದು ಆಂಧ್ರದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಪ್ರಸಿದ್ಧವಾಗಿವೆ.

ಅನುರಾಧಾ ಕಾಮತ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಅಜ್ಜಿ-ಅಮ್ಮ, ಮಕ್ಕಳ ಪಾಲನೆಯನ್ನು ಬೇರೆ ಬೇರೆಯಾಗಿ ನೋಡುವುದಾದರೂ ಏಕೆ? ಅಜ್ಜಿಯೂ "ಅಮ್ಮ'ನಾಗಿಯೇ ಮಕ್ಕಳನ್ನು ಬೆಳೆಸಿರುತ್ತಾಳಷ್ಟೆ. ಆದರೆ, ಅಜ್ಜಿಯಾಗಿ ಮಾಗುವ...

  • ಬಿಡುವಿನ ವೇಳೆಗಳಲ್ಲಿ ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುವ ಪರಿಪಾಠ ಹೆಚ್ಚಿನ ಎಲ್ಲಾ ಕಚೇರಿಗಳಲ್ಲೂ ಇರುತ್ತದೆ. ಈ ಚರ್ಚೆಗಳ ಸಂದರ್ಭದಲ್ಲಿ ಗಂಡಸರು, ಹೆಂಗಸರು...

  • ಬಾಲಿವುಡ್‌ ಚೆಲುವೆ ವಿದ್ಯಾ ಬಾಲನ್‌ ಯಾವಾಗಲೂ ವಿಭಿನ್ನ ಪಾತ್ರಗಳಿಗೆ ತೆರೆದುಕೊಳ್ಳುವ ನಟಿ. ಬಹುಶಃ ಹಾಗಾಗಿಯೇ ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳು ವಿದ್ಯಾ...

  • ""ರೀ, ನಾನು ದಪ್ಪಗಾಗಿದ್ದೀನ? ಅಂತ ಗಂಡನಲ್ಲಿ ಕೇಳಿದೆ. ನೀನ್ಯಾವಾಗ ಸಣ್ಣಗಿದ್ದೆ ಅನ್ನೋ ಥರ ನೋಡಿ, "ಹಾಗೆ ಕಾಣುತ್ತಪ್ಪಾ!' ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಸುಪುತ್ರನಲ್ಲಿ...

  • ಬದನೆ ಹೆಚ್ಚಾಗಿ ಉಪಯೋಗದಲ್ಲಿರುವ ಸಾಮಾನ್ಯ ತರಕಾರಿ. ಬದನೆ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಬದನೆಕಾಯಿ ಎಂದರೆ ಮುಖ ಸಿಂಡರಿಸುವವರೂ ಕೆಲವರು ಇದ್ದಾರೆ....

ಹೊಸ ಸೇರ್ಪಡೆ