ರೈತನಿಗೆ ಯಾರು ಹೆಣ್ಣು ಕೊಡುತ್ತಾರೆ !

Team Udayavani, Aug 24, 2018, 6:00 AM IST

ನಮ್ಮೂರಾದ ಕೊಡಗಿನಲ್ಲಿ ಮೊನ್ನೆ ಸುರಿದ ಹಿಂದೆಂದೂ ಕಾಣದ ಮಹಾಮಳೆಗೆ ಸರ್ವನಾಶವಾಗಿದೆ. ಎಲ್ಲ ಕೃಷಿಯೂ ತೊಳೆದು ಹೋಗಿದೆ. ಎಷ್ಟೋ ಕುರಿ, ಆಡು, ಕೋಳಿ, ನಾಯಿ, ಬೆಕ್ಕು, ಜಾನುವಾರು ಪ್ರವಾಹದಲ್ಲಿ, ಮಣ್ಣಿನ ಅಡಿಯಲ್ಲಿ ಕಣ್ಮರೆಯಾಗಿವೆ. ಜನರೂ ನೆಲೆ ಕಳೆದುಕೊಂಡಿದ್ದಾರೆ. ತೆಂಗು, ಅಡಿಕೆ, ಕಾಫಿ, ಕಾಳುಮೆಣಸು, ಬಾಳೆ, ಏಲಕ್ಕಿ, ಕಿತ್ತಳೆ ನಿರ್ನಾಮವಾಗಿದೆ. ಇಲ್ಲಿ ಇನ್ನು ಮರುಸೃಷ್ಟಿ ಆಗಬೇಕಷ್ಟೆ. ಅದು ಫ‌ಸಲು ಕೊಡುವಾಗ ಎಷ್ಟು ವರ್ಷವಾಗುತ್ತದೋ, ಆಗ ಮತ್ತೇನು ವಿಧಿ ಕಾದಿದೆಯೋ ಬಲ್ಲವರಾರು? ಇದನ್ನೆಲ್ಲ ನೋಡುವಾಗ ಕೃಷಿಯನ್ನೇ ಉಸಿರಾಡುತ್ತಿರುವ ನನಗೆ ಕೃಷಿ ಬೇಕಾ? ಅನಿಸುತ್ತದೆ. ದುಃಖ ಉಕ್ಕಿ ಬರುತ್ತದೆ. 

ಮನೆ-ಮಠ, ಜಮೀನು ಕಳೆದುಕೊಂಡವರಲ್ಲಿ ರೈತರು ಮಾತ್ರ ಅಲ್ಲ. ಇತರ ಉದ್ಯೋಗದವರೂ ಇದ್ದಾರೆ. ಅವರಿಗಾದರೆ ಪರಿಸ್ಥಿತಿ ಸುಸ್ಥಿತಿಗೆ ಬಂದ ಮೇಲೆ ಕೆಲಸಕ್ಕೆ ಹೋಗಬಹುದು. ಕೃಷಿಯೊಂದೇ ಅನ್ನದ ದಾರಿಯಾಗಿರುವ ರೈತ ಏನು ಮಾಡಬೇಕು? ಅವನ ಜೀವಮಾನ ಉತ್ತುವುದು, ಬಿತ್ತುವುದೇ ಆಯಿತು. ಫ‌ಲ ಅನುಭವಿಸುವುದು ಅಷ್ಟರಲ್ಲೇ ಇದೆ. “ಕೈಗೆ ಎಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ಕೈಗೆ ಇಲ್ಲ’ ಎಂಬ ಸ್ಥಿತಿ ಆತನದು. ರೈತರ ಬಳಿ ಸಂಪತ್ತು ಇದೆ. ಆದರೆ, ಹಣ ಇಲ್ಲ. 

ಹೌದು, ಕೃಷಿಕರ ಜೀವನ ಅಸ್ಥಿರತೆಯಿಂದ ಕೂಡಿದೆ. ರೈತರದು ನೆಮ್ಮದಿಯ ಬದುಕು ಎಂದು ಎಲ್ಲರೂ ಏಕೆ ಹೇಳುತ್ತಾರೋ! ಪ್ರತಿ ವರ್ಷವೂ ಮಲೆನಾಡು ಮತ್ತು ಕರಾವಳಿಯಲ್ಲಿ ಧಾರಾಕಾರ ಮಳೆ ಸುರಿದು ಕೃಷಿಕರ ಕಣ್ಣಲ್ಲಿ ನೀರು ತರಿಸುತ್ತದೆ. ಆದರೆ, ಈ ಬಾರಿ ರಕ್ತವನ್ನೇ ಹರಿಸಿದೆ.

ಕೃಷಿಕರ ಬದುಕು ಪ್ರಕೃತಿಯನ್ನು ಅವಲಂಬಿಸಿದೆ. ಪ್ರಕೃತಿ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಆದರೆ, ಹಾಗೆ ಇರುವುದಿಲ್ಲವಲ್ಲ. ಒಂದು ವರ್ಷ ಭೀಕರ ಮಳೆ ಬಂದರೆ ಇನ್ನೊಂದು ವರ್ಷ ಬೆಂಕಿ ಕಾರುವ ಬಿಸಿಲು. ಒಂದರಲ್ಲಿ ಬೆಳೆ ಕೊಳೆತುಹೋದರೆ ಇನ್ನೊಂದರಲ್ಲಿ ಒಣಗಿ ಹೋಗುತ್ತದೆ. ಪ್ರಕೃತಿ ಚೆನ್ನಾಗಿದ್ದು ಬೆಳೆ ಚೆನ್ನಾಗಿದ್ದರೂ ಕೈಗೆ ಸಿಗುತ್ತದೆಯೇ? ಅದು ಕೊçಲಿಗೆ ಬರುವಾಗ ಬೆಳೆದಾತನಿಗೆ ಸಿಗದೆ ಮಂಗ, ಆನೆ, ಹಂದಿ, ಹೆಗ್ಗಣ ಮುಂತಾದ ಕಾಡುಪ್ರಾಣಿಗಳ ಬಾಯಿಗೆ ಆಹಾರವಾಗುತ್ತದೆ. ಇತರ ಉದ್ಯೋಗಕ್ಕೆ ಇರುವ ಭದ್ರತೆ ಕೃಷಿಗೆ ಇಲ್ಲ. ವರಮಾನವೂ ಇಲ್ಲ. ಹಾಗಾಗಿ, ಇಂದು ಕೃಷಿಕನಿಗೆ ಯಾರೂ ಹೆಣ್ಣು ಕೊಡುವುದಿಲ್ಲ !

ಇಂದು ಎಲ್ಲ ಹೆಣ್ಣುಮಕ್ಕಳೂ ಕೋಮಲವಾಗಿ ಬೆಳೆದಿರುತ್ತಾರೆ. ಕೃಷಿಕನ ಕೈ ಹಿಡಿದ ಇಂಥ ಹೆಣ್ಣುಮಕ್ಕಳಿಗೂ ಎಷ್ಟು ಕಷ್ಟ! ನನ್ನನ್ನೇ ಉದಾಹರಣೆ ತೆಗೆದುಕೊಳ್ಳಿ. ನಾನು ನನ್ನ ಗಂಡ, ಮಕ್ಕಳಿಗಲ್ಲದೆ ತೋಟದ ಕೆಲಸಕ್ಕೆ ಬಂದ ಎಲ್ಲರಿಗೂ ಬೆಳಗ್ಗೆ ಚಾ-ತಿಂಡಿ, ಮಧ್ಯಾಹ್ನ ಊಟ, ಸಂಜೆ ಮತ್ತೆ ಚಾ-ತಿಂಡಿ ಕೊಡಬೇಕು. ಮನೆಗೆಲಸ ಮಾತ್ರ ಅಲ್ಲ ಹಸುಗಳಿಗೆ ಹುಲ್ಲು, ಹಿಂಡಿ ಕೊಡುವುದು, ಹಾಲು ಕರೆಯುವುದು, ಸೆಗಣಿ ತೆಗೆಯುವುದು, ಅಡಿಕೆ ಹೆಕ್ಕುವುದು, ಕೊಕ್ಕೋ ಹೆಕ್ಕುವುದು- ಒಡೆಯುವುದು, ಕಾಫಿ ಬೀಜ ಕೊಯ್ಯುವುದು ಇತ್ಯಾದಿ ಕೆಲಸಗಳನ್ನೂ ಮಾಡಬೇಕಾಗುತ್ತದೆ. ನನ್ನ ಇಷ್ಟದ ಹವ್ಯಾಸ ಬರೆಯುವುದು- ಓದುವುದು ಮಾಡುವುದು ಬಿಡಿ, ಕುಳಿತುಕೊಳ್ಳಲೂ ಸಮಯ ಸಿಗುವುದಿಲ್ಲ. 

ರೈತರು ಬೆಳೆದ ವಸ್ತುಗಳಿಗೆ ಸ್ಥಿರ ಧಾರಣೆಯಾದರೂ ಇದೆಯೆ? ಅದೂ ಇಲ್ಲ. ಉದಾಹರಣೆಗೆ, ಇಂದು ತೆಂಗಿನಕಾಯಿ ಬೆಲೆ ಗಗನಕ್ಕೆ ಏರಿದ್ದರೆ ನಾಳೆ ಅದರ ಬೆಲೆ ಪಾತಾಳಕ್ಕೆ ಕುಸಿದಿರುತ್ತದೆ. ಕಳೆದ ವರ್ಷ ಕಾಳುಮೆಣಸಿನ ಬೆಲೆ ಕೆಜಿಗೆ 700 ರೂ. ಇತ್ತು. ನಾವು ಅದನ್ನು ಆಗ ಮಾರಾಟ ಮಾಡದೆ ಮುಂದಿನ ವರ್ಷ ಇನ್ನೂ ಜಾಸ್ತಿ ಬೆಲೆ ಬರಬಹುದು; ಅಲ್ಲದೆ, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ಯಾವುದಾದರೂ ಆವಶ್ಯಕತೆಗಳಿಗೆ ಒದಗಬಹುದು ಎಂದು ಎಣಿಸಿ ಅಟ್ಟದಲ್ಲಿ ಕಟ್ಟಿ ಇಟ್ಟೆವು. ನಮ್ಮ ಗ್ರಹಚಾರಕ್ಕೆ ಈ ವರ್ಷ ಅದರ ಬೆಲೆ 300 ರೂಪಾಯಿಗೆ ಇಳಿದಿದೆ !

ಕೃಷಿಯ ಒಂದು ವೈಚಿತ್ರ್ಯ ಎಂದರೆ ಬೆಳೆಯ ಬೆಲೆ ಜಾಸ್ತಿಯಾಗುತ್ತಿರುವಂತೆ ಕಾರ್ಮಿಕರ ಸಂಬಳದಲ್ಲೂ ಏರಿಕೆಯಾಗುವುದು. ನಮ್ಮ ಮಾಲಿನ ಬೆಲೆ ಕಡಿಮೆಯಾದರೂ ಏರಿದ ಸಂಬಳದಲ್ಲಿ ಮಾತ್ರ ಇಳಿಕೆ ಆಗುವುದಿಲ್ಲ. ಏರುತ್ತಲೇ ಹೋಗುತ್ತದೆ. ಸರ್ಕಾರಿ ನೌಕರನಿಗಾಗಲಿ, ಇತರ ಯಾವುದೇ ನೌಕರನಿಗಾಗಲಿ ಸಂಬಳ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತ ಹೋಗುತ್ತದೆ. ಕೃಷಿ ಉತ್ಪನ್ನಗಳ ಬೆಲೆ ಮಾತ್ರ ನಿಂತ ನೀರಿನ ಹಾಗೆ ಇರುತ್ತದೆ. ಏರಿದರೂ ಲಾಭ ಸಿಗುವುದು ಮಧ್ಯವರ್ತಿಗಳಿಗೆ. ಅದನ್ನು ಕಷ್ಟಪಟ್ಟು ಬೆಳೆಸಿದ ರೈತನಿಗಲ್ಲ. ರೈತ ಬೆವರು ಹರಿಸಿ ಬೆಳೆಸಿದ ದವಸಧಾನ್ಯವನ್ನೋ, ಹಣ್ಣುತರಕಾರಿಗಳನ್ನೋ ಮಾರುಕಟ್ಟೆಗೆ ಕೊಂಡೊಯ್ದರೆ ಅವನಿಗೆ ಸಿಗುವುದು ಅತ್ಯಲ್ಪ. ಅದನ್ನೇ ಮಧ್ಯವರ್ತಿಗಳು ಮಾರಾಟ ಮಾಡುವಾಗ ಅದಕ್ಕೆ ದುಪ್ಪಟ್ಟು ದರ ವಿಧಿಸುತ್ತಾರೆ. ಉದಾಹರಣೆಗೆ ಬಾಳೆಹಣ್ಣಿಗೆ ರೈತರಿಗೆ ಸಿಗುವುದು ಕೆಜಿಗೆ 16 ರೂಪಾಯಿ ಎಂದಾದರೆ, ವ್ಯಾಪಾರಿಗಳು ಮಾರುವಾಗ ಅದಕ್ಕೆ 30 ರೂಪಾಯಿ. ಈ ತಾರತಮ್ಯ ಹೋಗಬೇಕು. ಮಧ್ಯವರ್ತಿಗೂ, ಬೆಳೆಗಾರನಿಗೂ ಬೆಳೆಯನ್ನು ಮಾರುವಾಗ ಬೆಲೆಯಲ್ಲಿ ಹೆಚ್ಚು ಅಂತರವಿರಬಾರದು.

ಸಾಲಮನ್ನಾ, ಬೆಂಬಲ ಬೆಲೆ ಇತ್ಯಾದಿಗಳು ರೈತನ ಮೂಗಿಗೆ ತುಪ್ಪ ಸವರುವ ಮತ್ತು ರಾಜಕಾರಣಿಗಳು ಓಟು ಗಳಿಸಲು ಹೂಡಿದ ತಂತ್ರ ವಿನಾ ರೈತರ ಏಳಿಗೆ ಯಾರಿಗೂ ಬೇಕಿಲ್ಲ. ಕೃಷಿಕನ ತೋಟದಲ್ಲಿ ದುಡಿಯುವ ಒಬ್ಬ ಕೂಲಿಯಾಳೂ ತಾನು ಮಾಡುವ ಕೆಲಸಕ್ಕೆ ಇಷ್ಟು ಸಂಬಳ ಸಿಗಬೇಕು ಎನ್ನುತ್ತಾನೆ. ಆದರೆ, ಅದೇ ಕೃಷಿಕ ತಾನು ಬೆಳೆದ ಉತ್ಪನ್ನಕ್ಕೆ ದರ ನಿರ್ಧರಿಸುವ ಶಕ್ತಿ ಹೊಂದಿರುವುದಿಲ್ಲ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾದಾಗ ಮಾತ್ರ ಅವನ ಕಷ್ಟ ನಿಂತೀತು. ಜೊತೆಗೆ ರೈತರಿಗೆ ಬೇಕಾದ ಬೀಜ, ಗೊಬ್ಬರ, ಉಪಕರಣ, ಮೌಲ್ಯವರ್ಧನೆ ಯಂತ್ರ ಮುಂತಾದುವನ್ನು ಕಡಿಮೆ ಬೆಲೆಗೆ ಒದಗಿಸುವ ವ್ಯವಸ್ಥೆ ಆಗಬೇಕು.

ಈಗ ಕೊಡಗಿನ ಸರ್ವಸ್ವವನ್ನೂ ಕಳೆದುಕೊಂಡ ಸಂತ್ರಸ್ತ ರೈತರು ಮುಂದೆ ರೈತರಾಗಿ ಉಳಿದಾರೆ? ಉಳಿದರೆ ಅವರು ಮತ್ತೆ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಲು ಎಷ್ಟು ವರ್ಷಗಳು ಬೇಕಾದೀತು! ಅದರ ಬದಲು ಪಟ್ಟಣಗಳಿಗೆ ಉದ್ಯೋಗ ಅರಸಿ ಹೋದರೆ ಅದಕ್ಕಿಂತ ಸುಲಭದಲ್ಲಿ ಹೊಟ್ಟೆ ತುಂಬಲಿಕ್ಕಿಲ್ಲವೆ? ಅತಂತ್ರ ಸ್ಥಿತಿಯಲ್ಲಿರುವ ಕೊಡಗಿನ ರೈತರಿಗೆ ಆತ್ಮವಿಶ್ವಾಸವನ್ನು ತುಂಬುವುದು ಹೇಗೆ? ಅವನಲ್ಲಿ ಕೃಷಿ ಮೇಲಿನ ಪ್ರೀತಿ ಮತ್ತು ಜೀವನ ಭರವಸೆಯನ್ನು ಮತ್ತೆ ಮರುಕಳಿಸುವಂತೆ ಮಾಡುವುದು ಹೇಗೆ? 

– ಸಹನಾ ಕಾಂತಬೈಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ