• ಸಂದೇಹ

  ರಾಜ್ಯಪಾಲರು, ಸ್ಪೀಕರು ಸಾಕು ಮುಗಿಸಿ ಎಂದರೂ ಎಳೆದಾಡಿದ್ದು ಸರಿಯಾ? ವಿಶ್ವಾಸ ಮತ ಅಂದರೆ ಎಳೆದಷ್ಟೂ ಬೆಳೆಯುವ ಪಾಂಚಾಲಿಯ ಸೀರೆಯಾ? ಎಚ್.ದುಂಡಿರಾಜ್

 • ನಡೆ

  ಅಷ್ಟು ಕೊಟ್ಟರೆ ಆ ಕಡೆ ಇಷ್ಟು ಕೊಟ್ಟರೆ ಈ ಕಡೆ ತಕ್ಕಡಿಯ ತಟ್ಟೆಗಳಂತೆ ಪುಢಾರಿಗಳ ನಡೆ ಪ್ರಜಾಪ್ರಭುತ್ವಕ್ಕೆ ಹಿನ್ನಡೆ! ಎಚ್‌. ಡುಂಡಿರಾಜ್‌

 • ಆಟ

  ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳ ಪರದಾಟ, ಸ್ಪೀಕರ್‌ ನೀಡುತ್ತಿದ್ದಾರೆ ಕೃತಕ ಉಸಿರಾಟ, ರೇವಣ್ಣ ಹೇಳುತ್ತಿದ್ದಾರೆ ಎಲ್ಲಾ ಆ ದೇವರ ಆಟ! ಎಚ್‌.ಡುಂಡಿರಾಜ್‌

 • ಟ್ರಬಲ್‌

  ಮಂಬೈಗೆ ಹೋದರು ಟ್ರಬಲ್‌ ಶೂಟರು ಮಾಡಲು ಅತೃಪ್ತರ ಭೇಟಿ ಹೋಟೆಲ್‌ ಒಳಗೆ ಪ್ರವೇಶ ಸಿಗದೆ ಹೊರಗೇ ಕುಡಿದರು ಟಿ! ಎಚ್‌. ಡುಂಡಿರಾಜ್‌

 • ಅವಮಾನ

  ಎಷ್ಟು ಟೀಕಿಸಿದರೂ ಭ್ರಷ್ಟ ರಾಜಕಾರಣಿಗೆ ಆಗುವುದಿಲ್ಲ ಅವಮಾನ ರಾಜಕೀಯಕ್ಕೆ ಬರುವಾಗ ಬಿಟ್ಟಿರುತ್ತಾನೆ ಅವ ಮಾನ! ಎಚ್‌. ಡುಂಡಿರಾಜ್‌

 • ಪ್ರಾರ್ಥನೆ

  ಷೇರು ಲಕುಮಿಯೆ ಶಾಂತಳಾಗು ನಿಲ್ಲಲಿ ಈ ಕುಸಿತ, ಇನ್ನಾದರೂ ತುಸು ಮೇಲಕ್ಕೇರು ನಿನ್ನ ಭಕ್ತರಿಗೆ ಋಷಿ ತಾ! ಎಚ್‌. ಡುಂಡಿರಾಜ್‌

 • ಮನವೊಲಿಕೆ

  ಧಾರಾವಾಹಿ ನೋಡಲು ಬಿಡಲಿಲ್ಲವೆಂದು ನೊಂದು ಹೆಂಡತಿ ಹೋದಳು ತವರಿಗೆ ಮನವೊಲಿಸುತ್ತಿದ್ದಾನೆ ಗಂಡ ದಯವಿಟ್ಟು ಅಲ್ಲೇ ಇರು ವಿಶ್ವಕಪ್‌ ಮುಗಿವ ವರೆಗೆ! ಎಚ್‌. ಡುಂಡಿರಾಜ್‌

 • ಬಜೆಟ್‌

  ರಾಮಾಯಣದ ಕಾಲದಲ್ಲೂ ಇತ್ತು ಚಿನ್ನದ ಮೋಹ ಭಾರತೀಯ ಮಹಿಳೆಯರಿಗೆ, ವಿತ್ತ ಸಚಿವರು ಮಹಿಳೆ ಹೆಸರಲ್ಲಿ ಸೀತಾ ಇದೆ ಆದರೂ ಬಂಗಾರಕ್ಕೆ ತೆರಿಗೆ! ಎಚ್‌.ಡುಂಡಿರಾಜ್‌

 • ಸುಭದ್ರ

  ಓಲಾಡ್ತಿದ್ರೂ ಹೇಳುತ್ತಾರೆ ಬೀಳುವುದಿಲ್ಲ ಭದ್ರ ಬಂಡೆಯ ಹಾಗೆ ಸುಭದ್ರ ಇರಲಿ ಬಿಡಿ ಬಿದ್ದಾಗ ಹೇಳಿ ಅಯ್ಯೊ ಪಾಪ ! ಬಿದ್ರಾ? ಎಚ್‌. ಡುಂಡಿರಾಜ್‌

 • ಕೇಂದ್ರ ಬಜೆಟ್‌

  ನನ್ನ ಚಿಂತೆ-ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ತೆರಿಗೆಯಲ್ಲಿ ಎಷ್ಟು ರಿಯಾಯಿತಿ ಕೊಡುತ್ತಾರೆ? ನನ್ನಾಕೆಯ ಚಿಂತೆಯೇ ಬೇರೆ – ಬಜೆಟ್‌ ಮಂಡಿಸುವಾಗ ನಿರ್ಮಲಾ ಎಂಥಾ ಸೀರೆ ಉಡುತ್ತಾರೆ? ಎಚ್‌. ಡುಂಡಿರಾಜ್‌

 • ಬಿಡುವಿಲ್ಲ

  ಬಿಎಸ್‌ವೈಗೆ ಬಿಡುವಿಲ್ಲ ನೋಡುತ್ತಿಲ್ಲವಂತೆ ಅವರು ಈ ಬಾರಿ ವಿಶ್ವಕಪ್‌ ಕ್ರಿಕೆಟ್ಟು, ಚಿಂತಿಸುತ್ತಿದ್ದಾರೆ ಹೇಗೆ ಬೀಳಿಸುವುದು ಸರ್ಕಾರದ ಇನ್ನಷ್ಟು ವಿಕೆಟ್ಟು? ಎಚ್‌.ಡುಂಡಿರಾಜ್‌

 • ಶಾಕ್‌

  ಆನಂದ್‌ ಸಿಂಗ್‌, ಜಾರಕಿಹೊಳಿ ರಾಜೀನಾಮೆ ಸುದ್ಧಿ ಕೇಳಿ ಬಿಜೆಪಿಯ ನಾಯಕರು ಆನಂದಿಸಿದರು. ಮೈತ್ರಿ ಪಕ್ಷದ ಮುಖಂಡರು ಆಘಾತದಿಂದ ಟಿವಿಯನ್ನು ಆ ನಂದಿಸಿದರು! ಎಚ್‌. ಡುಂಡಿರಾಜ್‌

 • ಕೇಸರಿ

  ಇಂಗ್ಲೆಂಡ್‌ ವಿರುದ್ದ ಸೋತಾಗ ಭಾರತ‌ ಧರಿಸಿದ್ದ ಜೆರ್ಸಿ ಕೇಸರಿ, ಕೊಹ್ಲಿ ಪಡೆಗೆ ಆ ಬಣ್ಣ ಜಯ ತರಲಿಲ್ಲ ಅದು ರಾಜಕೀಯಕ್ಕೇ ಸರಿ! ಎಚ್‌. ಡುಂಡಿರಾಜ್‌

 • ಸಾಲ

  ಒಂದು ದಿನವೂ ರಜೆಹಾಕದೆ ಬೆಳಗಿನಿಂದ ಸಂಜೆಯವರೆಗೆ ದುಡಿಯುತ್ತಾನೆ ಈ ರವಿ ಆದರೂ ದುಡ್ಡು ಸಾಲದೆ ಇಡುತ್ತಾನೆ ರಾತ್ರಿ ತಾರೆಗಳ ಒಡವೆಗಳನ್ನು ಗಿರವಿ! ಎಚ್‌. ಡುಂಡಿರಾಜ್‌

 • ಅವಲೋಕನ

  ಕಾಂಗ್ರೆಸ್‌ ಸೋಲಿಗೆ ಕಾರಣವೇನು? ಕೇಳಿದರು ಪಕ್ಷದ ಉಸ್ತುವಾರಿ ವೇಣು ಬಂತು ಪ್ರತಿಧ್ವನಿ ನೀನು ನೀನು! ಎಚ್‌. ಡುಂಡಿರಾಜ್‌

 • ಬಹುಶಃ

  ಗಂಟೆ ಎಂಟಾದರೂ ರಾಜಧಾನಿಯಲ್ಲಿ ಇನ್ನೂ ಕಾಣಿಸುತ್ತಿಲ್ಲ, ಸೂರ್ಯ, ಬಹುಶಃ ಆತನೂ ಯಾವುದೋ ಹಳ್ಳಿಯಲ್ಲಿ ಮಾಡಿದ್ದಾನೆ ಗ್ರಾಮವಾಸ್ತವ್ಯ! ಎಚ್‌. ಡುಂಡಿರಾಜ್‌

 • ಹಕ್ಕಿಗಳು

  ಕಾಕಾ ಕಾಕಾ ಅನ್ನುವ ಕಾಗೆ ಕುಹೂ ಕುಹೂ ಕೋಗಿಲೆ ತರತರದ ಹಕ್ಕಿಗಳ ಚಿಲಿಪಿಲಿ ಅವುಗಳೇ ವಾಸಿ ಕಿತ್ತಾಡುವುದಿಲ್ಲ ಜಾತಿ, ಭಾಷೆಯ ಹೆಸರಲಿ! ಎಚ್‌. ಡುಂಡಿರಾಜ್‌

 • ಪ್ರತಿಕ್ರಿಯೆ

  ಹುಡುಗ ಭಾವುಕನಾಗಿ ನುಡಿದ “ಪ್ರಿಯೆ ನಿನಗಾಗಿ ನಾನು ಏಳು ಕಡಲುಗಳನ್ನು ದಾಟಿ ಬರುವೆ’ ಹುಡುಗಿ ಅಂದಳು- “ಅಷ್ಟೇಕೆ ಕಷ್ಟಪಡುವೆ? ಹುಡುಗರಿಗೆ ಇಲ್ಲಿ ಬರವೆ?

 • ಗ್ರಾಮ ವಾಸ್ತವ್ಯ

  ಚಾಪೆ, ತಲೆದಿಂಬು ಸಾಕಂತೆ ಸಿಎಂ ಸಾಹೇಬರಿಗೆ ಮಲಗಲು, ಕಾರಣ ಬೇಕಾದಷ್ಟು ಸಮಸ್ಯೆಗಳು ಉಂಟು ಹಾಸಲು, ಹೊದೆಯಲು! ಎಚ್‌. ಡುಂಡಿರಾಜ್‌

 • ಅಂಟು

  ಹೆಣ್ಣು ಮಕ್ಕಳೇ ಹಾಗೆ ಬಿಡುವುದಿಲ್ಲ ಒಮ್ಮೆ ಕಟ್ಟಿಕೊಂಡ ಮೇಲೆ ಬಿಡುತ್ತಿಲ್ಲ ಪಾಪ ವಿಶ್ವನಾಥರನ್ನು ತೆನೆ ಹೊತ್ತ ಮಹಿಳೆ! ಎಚ್‌. ಡುಂಡಿರಾಜ್‌

ಹೊಸ ಸೇರ್ಪಡೆ